ವರ್ಗಾವಣೆ, ಶಾಸಕರ ಅಸಮಾಧಾನ ಮಧ್ಯೆಯೇ ಶತ ದಿನೋತ್ಸವಕ್ಕೆ ಸಜ್ಜು; ಕಿರು ಹೊತ್ತಿಗೆ ಪ್ರಕಟಣೆಗೆ ಸೂಚನೆ

ಬೆಂಗಳೂರು; ಅಧಿಕಾರಕ್ಕೆ ಬಂದ ದಿನದಿಂದಲೇ ಅಧಿಕಾರಿ, ನೌಕರರ ವರ್ಗಾವಣೆಗೆ ಕೈ ಹಾಕಿ ಶಾಸಕರಲ್ಲಿ ಅಸಮಾಧಾನದ ಬೆಂಕಿ ಹೊತ್ತಿಸಿದ್ದ ಕಾಂಗ್ರೆಸ್‌ ಸರ್ಕಾರ ಇದೇ 27ರಂದು 100 ದಿನಗಳನ್ನು ಪೂರ್ಣಗೊಳಿಸಲಿದೆ. ಶತ ದಿನೋತ್ಸವ ಆಚರಣೆಗೆ ಮುಂದಾಗಿರುವ ಸರ್ಕಾರವು ಈ ನೂರು ದಿನಗಳ ಸಾಧನೆ ಮಾಹಿತಿಯನ್ನೊಳಗೊಂಡ ಕಿರು ಹೊತ್ತಿಗೆ ಪ್ರಕಟಿಸಲು ಮುಂದಾಗಿದೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೊರಡಿಸಿರುವ ಆದೇಶಗಳನ್ನು ಹೊರತುಪಡಿಸಿದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ 40 ಪರ್ಸೆಂಟ್‌ ಕಮಿಷನ್‌, ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಾಗಿ ತನಿಖೆ ನಡೆಸಲು ಆಯೋಗಗಳನ್ನು ರಚಿಸಿರುವುದು, ಪಠ್ಯ ಪುಸ್ತಕ ಪರಿಷ್ಕರಣೆಯನ್ನು ರದ್ದುಗೊಳಿಸಿ ತಿದ್ದುಪಡಿ ಮಾಡಿ   ಹಿಂದಿನ ಸರ್ಕಾರವು ಜಾರಿಗೊಳಿಸಿದ್ದ  ಬಹುತೇಕ  ಯೋಜನೆ ಮತ್ತು ಕಾಮಗಾರಿಗಳನ್ನೇ ಮುಂದುವರೆಸಿದೆ.

 

ವಿಶೇಷವೆಂದರೆ ಅಧಿಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಲಂಚ  ಮತ್ತು ಕಾಮಗಾರಿಗಳಿಗೆ  ಹಣ ಬಿಡುಗಡೆ ಮಾಡಲು  ಗುತ್ತಿಗೆದಾರರಿಂದ ಕಮಿಷನ್‌ ಪಡೆಯಲಾಗಿದೆ ಎಂಬ ಗುರುತರ ಆರೋಪಗಳಿಗೆ ಈ ನೂರು ದಿನದಲ್ಲಿ ಕಾಂಗ್ರೆಸ್‌ ಸರ್ಕಾರವೂ ಗುರಿಯಾಗಿದೆ.

 

ಈ ಬೆಳವಣಿಗೆಗಳ ಮಧ್ಯೆಯೇ 100 ದಿನಗಳ ಅವಧಿಯಲ್ಲಿ ಸರ್ಕಾರದ ಸಾಧನೆ ಕುರಿತಾಗಿ ಕಿರು ಹೊತ್ತಿಗೆ ಪ್ರಕಟಿಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಿರು ಹೊತ್ತಿಗೆ ಪ್ರಕಟಿಸಲಿರುವ ಯೋಜನೆ, ಕಾರ್ಯಕ್ರಮ, ಸಾಂಖ್ಯಿಕ ಇಲಾಖೆಯು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ಕೋರಿ ಪತ್ರ ಬರೆದಿದೆ. ಯೋಜನೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು 2023ರ ಆಗಸ್ಟ್‌  11ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರಸಕ್ತ ಸರ್ಕಾರವು 2023ರ ಆಗಸ್ಟ್ 27ರಂದು 100 ದಿನಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ 100 ದಿನಗಳ ಸಾಧನೆಗಳ ಮಾಹಿತಿಯನ್ನೊಳಗೊಂಡ ಕಿರು ಹೊತ್ತಿಗೆ ಪ್ರಕಟಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.  2023ರ ಮೇ 20ರಿಂದ ಈ ತನಕ ವಿಶೇಷ ಸಾಧನೆ, ಹೊಸ ಕಾರ್ಯಕ್ರಮ ಅನುಷ್ಠಾನ, ವಿವಿಧ ಕಾಯ್ದೆಗಳ ತಿದ್ದುಪಡಿ/ ಜಾರಿ ಹಾಗೂ ಸಚಿವ ಸಂಪುಟ ಸಭೆಗಳ ಮಹತ್ವದ ನಿರ್ಣಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಸಂಕ್ಷಿಪ್ತ ಟಿಪ್ಪಣಿಯನ್ನು ನೀಡಬೇಕು,’ ಎಂದು ಡಾ ಶಾಲಿನಿ ರಜನೀಶ್‌ ಅವರು ಸರ್ಕಾರದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

 

ವಿಶೇಷವೆಂದರೆ ಅಧಿಕಾರಕ್ಕೆ ಬಂದ ದಿನದಿಂದಲೇ ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ಕಮಿಷನ್‌ ಕೆಸರನ್ನು ಮೆತ್ತಿಕೊಂಡಿತ್ತು. ಕೆಎಎಸ್‌ ಸೇರಿದಂತೆ ವಿವಿಧ ಹಂತಗಳ ಅಧಿಕಾರಿ, ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದಲೇ ಹೊರಬಿದ್ದಿದ್ದ ಟಿಪ್ಪಣಿಗಳು ವಿವಾದಕ್ಕೆ ಕಾರಣವಾಗಿದ್ದವು. ಅಲ್ಲದೇ ಈ ಟಿಪ್ಪಣಿಗಳನ್ನಾಧರಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ತೀವ್ರ ಟೀಕೆಗೆ ಗುರಿ ಮಾಡಿದ್ದವು.

 

ಅದರಲ್ಲೂ ತುಂಬಾ ಮುಖ್ಯವಾಗಿ ಬಜೆಟ್‌ ಅಧಿವೇಶನದಲ್ಲಿಯೇ ಜೆಡಿಎಸ್‌ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ವರ್ಗಾವಣೆ ವ್ಯಾಪಾರ, ದಂಧೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರ ಮಧ್ಯೆ ವಾಕ್ಸಮರವೇ ನಡೆದಿತ್ತು.

 

ಇದಾದ ನಂತರವೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಅವರ ಹೆಸರಿನಲ್ಲಿ ಅಧಿಕಾರಿಯೊಬ್ಬರ ವರ್ಗಾವಣೆಗಾಗಿ 1.50 ಕೋಟಿ ಲಂಚ ಪಡೆದ ಆರೋಪದ ಮೇರೆಗೆ ಎಫ್‌ಐಆರ್‍‌ ದಾಖಲಾಗಿತ್ತು. ವರ್ಗಾವಣೆ ಮಾಡಿಸಿಕೊಡುವ ಎಂಬ ಪದವನ್ನು ತೆಗೆದುಹಾಕಿ ಗುತ್ತಿಗೆ ಕಾಮಗಾರಿಗಳ ಬಾಕಿ ಹಣ ಬಿಡುಗಡೆಗೆ ಎಂಬ ಪದವನ್ನು ಸೇರಿಸಿ ಮತ್ತೊಂದು ಎಫ್‌ಐಆರ್‍‌ನ್ನು ದಾಖಲಿಸಿ ವರ್ಗಾವಣೆ ಕಮಿಷನ್‌ ಎಂಬ ಆರೋಪದಿಂದ ಹೊರಬರಲು ಯತ್ನಿಸಿರುವುದು ಕೂಡ ಬಹಿರಂಗವಾಗಿತ್ತು.

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಹೆಸರು ಬಳಕೆ; ಗುತ್ತಿಗೆ, ಬಾಕಿ ಬಿಲ್‌ ಬಿಡುಗಡೆಗೆ 1 ಕೋಟಿ ವಸೂಲು

ಗುತ್ತಿಗೆದಾರರು ಮಾಡಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪವನ್ನೇ ಮುಂದಿಟ್ಟುಕೊಂಡು ಹಿಂದಿನ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಅಭಿಯಾನವನ್ನು ಕಾಂಗ್ರೆಸ್‌ ಕೈಗೊಂಡಿತ್ತು. ಆ ನಂತರ ಅಧಿಕಾರಕ್ಕೆ ಬಂದು ಎರಡೇ ಎರಡೇ ತಿಂಗಳಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧವೂ 15 ಪರ್ಸೆಂಟ್‌ ಆರೋಪವನ್ನು ಬಿಜೆಪಿ ಮಾಡಿತ್ತು. ಈ ಮಧ್ಯೆ 40 ಪರ್ಸೆಂಟ್‌ ಆರೋಪಗಳ ಕುರಿತಾಗಿ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ತನಿಖೆ ನಿರ್ಧರಿಸಿದೆಯಾದರೂ ಇನ್ನೂ ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿಲ್ಲ.

 

 

40 ಪರ್ಸೆಂಟ್‌ ಕಮಿಷನ್‌; ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನಿರ್ಧಾರ?

 

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದ ಪೈಕಿ ಹಲವು ಯೋಜನೆಗಳು ಹೇಳಿಕೆಗಳಾಗಿದ್ದವೆಯೇ ವಿನಃ ಬಿಡಿಗಾಸಿನ ಅನುದಾನವನ್ನೂ ನೀಡಿರಲಿಲ್ಲ.

 

ಟೆಕ್ನಾಲಜಿ ಇನ್ನೋವೇಷನ್‌ ಪಾರ್ಕ್‌ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನವಿಲ್ಲ; ಹೇಳಿಕೆಗಷ್ಟೇ ಸೀಮಿತ

ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ 5 ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನ ವಿರೋಧಿ ಎಂದೇ ಟೀಕೆಗೆ ಗುರಿಯಾಗಿದ್ದ ವಿಧೇಯಕಗಳನ್ನು ಈಗಾಗಲೇ ಹಿಂಪಡೆದುಕೊಂಡಿದೆ.

 

ಸಂಘ ಪರಿವಾರದ ಹಿನ್ನೆಲೆಯ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಹಲವು ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಜಮೀನು ಮಂಜೂರು ಮಾಡಿದ್ದ ಆದೇಶಗಳನ್ನು ಹಿಂಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿಕೆ ನೀಡಿದ್ದಾರಾದರೂ 100 ದಿನಗಳಾದರೂ ಆದೇಶವನ್ನು ಹಿಂಪಡೆದುಕೊಂಡಿಲ್ಲ ಎಂಬುದು ಗೊತ್ತಾಗಿದೆ.

 

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ ಮಂಜೂರಾತಿ ರದ್ದು; ಇನ್ನೂ ಹೊರಬೀಳದ ಸರ್ಕಾರದ ಆದೇಶ

 

ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಅನುಷ್ಠಾನಗೊಳಿಸಿರುವ ಸರ್ಕಾರವು ಸಾರಿಗೆ ನಿಗಮಗಳಿಗೆ ಆಗಿರುವ ಆರ್ಥಿಕ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಭರಿಸಿಲ್ಲ.

ಶಕ್ತಿ ಯೋಜನೆ ಸಹಾಯಧನ ಪಾವತಿ; ಕೇಳಿದ್ದು 250 ಕೋಟಿ, ಕೊಟ್ಟಿದ್ದು 125 ಕೋಟಿ, ನೌಕರರ ವೇತನದಲ್ಲಿ ಅಡಚಣೆ?

ಅಲ್ಲದೇ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಿಂದ ನಿರಂತರವಾಗಿ ಸಾಲದ ಸುಳಿಗೆ ಸಿಲುಕಲಿದೆ ಮತ್ತು ಇಷ್ಟೊಂದು ಅಗಾಧ ಪ್ರಮಾಣದ ಮೊತ್ತವನ್ನು ಪ್ರತಿ ವರ್ಷವೂ ನೀಡುವುದು ಕಷ್ಟಸಾಧ್ಯವೆಂದು ಆರ್ಥಿಕ ಇಲಾಖೆ ಹೇಳಿದ್ದರೂ ಅದನ್ನು ಬದಿಗಿರಿಸಿ ಅನುಷ್ಠಾನಗೊಳಿಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿತ್ತು.

 

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

 

ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡಿರುವ ಸರ್ಕಾರವು, ಸಮವಸ್ತ್ರದ ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಹೇಳಿರುವುದು

ಶಾಲಾ ಮಕ್ಕಳ ಸಮವಸ್ತ್ರ ಹೊಲಿಗೆ ವೆಚ್ಚಕ್ಕೂ ಪೋಷಕರ ಜೇಬಿಗೆ ಕೈ ಹಾಕಿದೆ ಸರ್ಕಾರ; ಬೊಕ್ಕಸದಲ್ಲಿ ಹಣವಿಲ್ಲವೇ?

ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ ಗಳಿಗಾಗಿ ಸಂಘ ಸಂಸ್ಥೆಗಳು, ದಾನಿಗಳ ಮುಂದೆ ನೆರವು ಪಡೆದುಕೊಳ್ಳಲು ಸೂಚಿಸುವ ಮೂಲಕ ಪೋಷಕರ ಕೆಂಗಣ್ಣಿಗೂ ಗುರಿಯಾಗಿರುವುದನ್ನು ಸ್ಮರಿಸಬಹುದು.

ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌; ಹಳೆಯ ಸುತ್ತೋಲೆ ಜಾರಿ, ಹೆಚ್ಚುವರಿ ಹಣವಿಲ್ಲ, ದಾನಿಗಳ ಬಳಿ ಕೈಯೊಡ್ಡಿಸಿದ ಸರ್ಕಾರ

ಎಸ್‌ ಟಿ ಇಲಾಖೆ ನಿರ್ದೇಶಕರ ಹುದ್ದೆಗೆ ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

 

ಎಸ್‌ ಟಿ ಕಲ್ಯಾಣ ಇಲಾಖೆ ನಿರ್ದೇಶಕರ ಹುದ್ದೆ; ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ

 

40 ತಹಸೀಲ್ದಾರ್‍‌ಗಳ ವರ್ಗಾವಣೆ ಮಾಡಲು ಸಿಎಂ ಆದಿಯಾಗಿ ಸಚಿವರು ಶಾಸಕರು ಶಿಫಾರಸ್ಸು ಮಾಡಿದ್ದರು.

 

40 ತಹಶೀಲ್ದಾರ್‍‌ಗಳ ವರ್ಗಾವಣೆಗೆ ಸಿಎಂ, ಸಚಿವರು, ಶಾಸಕರ ಶಿಫಾರಸ್ಸು;ಶುರುವಾದ ವರ್ಗಾವರ್ಗೀ ದಂಧೆ

ಒಂದು ಎ ಸಿ ಹುದ್ದೆಗೆ ಮೂವರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಾದಕ್ಕೀಡಾಗಿತ್ತು.

 

ಒಂದು ಎ.ಸಿ. ಹುದ್ದೆಗೆ ಮೂವರು ಕೆಎಎಸ್‌ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು; ಬಿಕರಿಯಾದವೇ ಸಿಎಂ ಟಿಪ್ಪಣಿ?

 

ವರ್ಗಾವಣೆ, ಸ್ಥಳ ನಿಯುಕ್ತಿಗಾಗಿ ಸಿಎಂ ವಿವೇಚನೆ ಬದಲಾಗುತ್ತಲೇ ಇದ್ದದ್ದರಿಂದ ಕೆಎಎಸ್‌ ಅಧಿಕಾರಿಗಳು ಪುಟ್ಬಾಲ್‌ನಂತಾಗಿದ್ದರು.

ವರ್ಗಾವಣೆ, ಸ್ಥಳನಿಯುಕ್ತಿ; ಸಿಎಂ ‘ವಿವೇಚನೆ’ ಅದಲು-ಬದಲು, ಫುಟ್ಬಾಲ್‌ನಂತಾದ ಕೆಎಎಸ್‌ ಅಧಿಕಾರಿಗಳು

 

ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳನ್ನು 100 ದಿನದಲ್ಲಿಯೇ ಹಿಂಪಡೆದುಕೊಂಡಿದೆ.

ಗುಪ್ತಚರ ಇಲಾಖೆ ಮಾಹಿತಿಯಂತೆ ಕೋವಿಡ್‌ ನಿಯಮ ಉಲ್ಲಂಘಿಸಿರುವ ಪ್ರಕರಣಗಳ ಹಿಂತೆಗೆತ; ನಿರ್ದೇಶನ

 

ಅಲ್ಲದೇ ಸಕಾರಣಗಳು ಇಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಧಿಕಾರಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿತ್ತು.

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಒಂದೇ ಪಂಚಾಯ್ತಿಗೆ ಇಬ್ಬಿಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿ ನಗೆಪಾಟಲಿಗೀಡಾಗಿತ್ತು.

ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ, ಒಂದೇ ಪಂಚಾಯ್ತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

ಅರಣ್ಯ ಇಲಾಖೆಯಲ್ಲಿ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಂಡು ಹುದ್ದೆಗಳನ್ನೇ ಬ್ಲಾಕ್‌ ಮಾಡಿಕೊಂಡಿದ್ದ ಆರೋಪವೂ ಕೇಳಿ ಬಂದಿತ್ತು. ಆ ನಂತರ ಒಂದೇ ದಿನದಲ್ಲಿ ಸಮಿತಿ ರಚನೆ ಮಾಡಿ ಅದೇ ದಿನದಂದು ವರದಿಯನ್ನೂ ಪಡೆದು ಪ್ರಕರಣವನ್ನು ಮುಚ್ಚಿ ಹಾಕಿತ್ತು ಎಂಬ ಆಪಾದನೆಗೂ ಗುರಿಯಾಗಿತ್ತು.

ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗ ಆರೋಪ; ಅಧಿಕಾರಿಗಳ ಸಮಿತಿ ರಚನೆ, ವರದಿಗೆ ಸೂಚನೆ

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪ ಮತ್ತು ಈ ಸಂಬಂಧ ವಿಚಾರಣೆಗೆ ಗುರಿಯಾಗಿರುವ ಅಧಿಕಾರಿಯನ್ನು ಗಣಿ ಸಚಿವರ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು ಸಹ ಚರ್ಚೆಗೆ ಗ್ರಾಸವಾಗಿತ್ತು.

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ

 

100 ದಿನಗಳನ್ನು ಪೂರೈಸಲಿರುವ ಕಾಂಗ್ರೆಸ್‌ ಸರ್ಕಾರವು ಸಾಧಿಸಿದ್ದಕ್ಕಿಂತಲೂ ವಿವಾದಕ್ಕೀಡಾಗಿದ್ದೇ ಹೆಚ್ಚು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts