ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಬೆಂಗಳೂರು; ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಆರ್ಥಿಕ ಇಲಾಖೆಯು ನೀಡಿದ್ದ ಎಚ್ಚರಿಕೆಯನ್ನೂ ಗಂಭೀರವಾಗಿ ಪರಿಗಣಿಸದೇ ರಾಜ್ಯವನ್ನು ಬೃಹತ್‌ ಆದಾಯ ಕೊರತೆಗೆ ದೂಡಲಿದೆ ಎಂಬುದನ್ನು ‘ದಿ ಫೈಲ್‌’  ದಾಖಲೆ ಸಹಿತ ಇದೀಗ ಹೊರಗೆಡವುತ್ತಿದೆ.

 

ಅಲ್ಲದೇ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲು ಆರ್ಥಿಕ ಇಲಾಖೆಯು ಪ್ರಸ್ತುತ ಇರುವ ಹಣಕಾಸಿನ ನಿರ್ಬಂಧ ಮತ್ತು ಆರ್ಥಿಕ ಮುಗ್ಗಟ್ಟುಗಳಿರುವ ಕಾರಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಅವಕಾಶ ಕಲ್ಪಿಸುವುದು ಕಷ್ಟಕರ. ಪ್ರತಿ ಆರ್ಥಿಕ ವರ್ಷದಲ್ಲಿ ಅಗಾಧ ಪ್ರಮಾಣದ ಹಣವನ್ನು ಈ ಯೋಜನೆಗೆ ಒದಗಿಸಲು ಸಾಧ್ಯವಿಲ್ಲ. ಈ ಯೋಜನೆಗೆ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಫಲಾನುಭವಿಗಳ ಸಂಖ್ಯೆಯನ್ನೂ ಅತ್ಯಗತ್ಯವಾಗಿ ಕಡಿತಗೊಳಿಸಬೇಕು ಎಂದು ಆರ್ಥಿಕ ಇಲಾಖೆಯು ಕಠಿಣ ಅಭಿಪ್ರಾಯ ನೀಡಿತ್ತು.

 

ಅರ್ಥಿಕ ಇಲಾಖೆಯು ನೀಡಿದ್ದ ವಾಸ್ತವಿಕ ಅಭಿಪ್ರಾಯವನ್ನು ಬದಿಗೊತ್ತಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹಣಕಾಸು ಹೊಣೆಗಾರಿಕೆ ಕಾಯ್ದೆಯನ್ನೂ ನೇರಾ ನೇರ ಉಲ್ಲಂಘಿಸಿ ಈ ಯೋಜನೆಯನ್ನು ಜಾರಿಗೊಳಿಸಿರುವುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿದೆ.

 

ಗೃಹ ಲಕ್ಷ್ಮಿ ಯೋಜನೆ ಕುರಿತಂತೆ ‘ದಿ ಫೈಲ್‌’ ಆರ್‌ಟಿಐ ಮೂಲಕ ದಾಖಲೆಗಳನ್ನು ಪಡೆದುಕೊಂಡಿದೆ.

 

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿರುವ ಬೆನ್ನಲ್ಲೇ ಯೋಜನೆ ಜಾರಿಯಿಂದಾಗಿ ಉಂಟಾಗುವ ಆರ್ಥಿಕ ಪರಿಣಾಮಗಳ ಕುರಿತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ.

 

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?

 

ಪ್ರಸ್ತುತ ಹಣಕಾಸಿನ ನಿರ್ಬಂಧಗಳ ದೃಷ್ಟಿಯಿಂದ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಅವಕಾಶ ಕಲ್ಪಿಸುವುದು ಕಷ್ಟಕರವಾಗಿದೆ. ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ನಿರಂತರವಾಗಿ ಸಾಲದ ಸುಳಿಗೆ ಬೀಳುವ ಸಾಧ್ಯತೆ ಇದೆ. ಇತರೆ ಖಾತೆಗಳು ಮತ್ತು ಇಲಾಖೆಗಳಲ್ಲೂ ಆದಾಯ ಮತ್ತು ಹೂಡಿಕೆಗಳಲ್ಲಿನ ಪ್ರಸ್ತುತ ಅನುದಾನದಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಬೇಕಾಗುತ್ತದೆ. ಹಾಗೂ ಇದು ರಾಜ್ಯವನ್ನು ಆದಾಯ ಕೊರತೆಗೆ ದೂಡಲಿದೆ. ಈ ಮೂಲಕ ಕರ್ನಾಟಕದ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಗೆ ಕಾರಣವಾಗಲಿದೆ.

 

ತೀವ್ರ ಹಣಕಾಸಿನ ನಿರ್ಬಂಧ ಮತ್ತು ಮುಗ್ಗುಟ್ಟಿನಲ್ಲಿರುವುದರಿಂದಾಗಿ ಯೋಜನೆಯನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ವಿಸ್ತರಿಸಬಹುದು. ಅದರ ಹೊರತಾಗಿಯೂ ವಾರ್ಷಿಕ ಆರ್ಥಿಕ ಪರಿಣಾಮಗಳು ಕನಿಷ್ಠ 31,423 ಕೋಟಿಗಳಾಗುತ್ತವೆ. ಪ್ರತಿ ಆರ್ಥಿಕ ವರ್ಷದಲ್ಲಿ ಅಂತಹ ಅಗಾಧ ಪ್ರಮಾಣದ ಹಣವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಕಠಿಣ ಅಭಿಪ್ರಾಯ ನೀಡಿತ್ತು ಎಂಬುದು ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

 

ಪ್ರತಿ ಕುಟುಂಬದಲ್ಲಿರುವ ಮನೆ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯಡಿ 2,000 ರು. ಸಹಾಯಧನ ನೀಡುವುದಾಗಿ ಚುನಾವಣೆಗೂ ಮುನ್ನ ಘೋಷಿಸಿದ್ದ ಕಾಂಗ್ರೆಸ್‌ ಪಕ್ಷವು ಯಾವುದೇ ಷರತ್ತುಗಳನ್ನು ವಿಧಿಸಿರಲಿಲ್ಲ. ಪಕ್ಷವು ಅತ್ಯಂತ ಬಹುಮತದಿಂದ ಅಧಿಕಾರಕ್ಕೆ ಬಂದ ಕೂಡಲೇ ಯೋಜನೆಯನ್ನು ಯಾವುದೇ ಷರತ್ತುಗಳಿಲ್ಲದೇ ಜಾರಿಗೊಳಿಸಲು ಹೊರಟಾಗ ಆರ್ಥಿಕ ಇಲಾಖೆಯು ವಾಸ್ತವಿಕ ನೆಲೆಗಟ್ಟಿನಲ್ಲಿ ನೀಡಿದ್ದ ಅಭಿಪ್ರಾಯಕ್ಕೆ ಮಣಿದು ಮಾನದಂಡಗಳನ್ನು ಮುಂದಿರಿಸಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿರುವುದೂ ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

 

ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯದ ಪ್ರತಿ

 

ಹೀಗಾಗಿಯೇ ಸರ್ಕಾರವು ಈ ಯೋಜನೆಗೆ 2 ವಿಭಾಗಗಳಲ್ಲಿ 18 ಷರತ್ತುಗಳನ್ನು ವಿಧಿಸಿತ್ತು. ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಪಾವತಿಸುವ ಮಹಿಳೆಯರು, ವೃತ್ತಿಪರ ಆದಾಯ ಪಾವತಿದಾರರು, 5 ಎಕರೆಗೂ ಹೆಚ್ಚು ಭೂಮಿ ಹೊಂದಿದವರು, ವರ್ಷಕ್ಕೆ 1.2 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು, ನಾಲ್ಕು ಚಕ್ರ ವಾಹನ ಹೊಂದಿರುವವರು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ, ಗುತ್ತಿಗೆ ಕೆಲಸಗಾರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರನ್ನು ಈ ಯೋಜನೆಯಿಂದ ಹೊರಗಿಡಬೇಕು ಎಂದು ಆರ್ಥಿಕ ಇಲಾಖೆಯು ಫಲಾನುಭವಿಗಳನ್ನು ವಿಂಗಡಿಸಿತ್ತು.

 

ಅಲ್ಲದೇ ಮಹಿಳೆಯ ಪತಿ ಆದಾಯ ಪಾವತಿದಾರರಾಗಿದ್ದರೇ, ಆ ಕುಟುಂಬ 10 ಎಕರೆಗೂ ಹೆಚ್ಚು ಭೂಮಿ ಹೊಂದಿದ್ದರೇ, ಮಹಿಳೆಯ ಪತಿ ಸರ್ಕಾರಿ ನೌಕರನಾಗಿದ್ದರೇ, ಅಥವಾ ಪಿಂಚಣಿದಾರನಾಗಿದ್ದರೇ, ಪತಿಯು 40 ಲಕ್ಷಕ್ಕೂ ಹೆಚ್ಚು ಮೊತ್ತದ ಜಿಎಸ್‌ಟಿ ಪಾವತಿಸಿದ್ದರೇ, ಗಂಡನು ಸ್ವಯಂ ಉದ್ಯೋಗ ಕೈಗೊಂಡು 6 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿದ್ದರೇ, ಹೊರಗುತ್ತಿಗೆ, ಗುತ್ತಿಗೆ, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರ ಪತ್ನಿಯಾಗಿದ್ದರೇ ಅವರನ್ನೂ ಈ ಯೋಜನೆಯಿಂದ ಹೊರಗಿಡಬೇಕು ಎಂದ ಸಲಹೆ ನೀಡಿತ್ತು.

 

ಈ ಮಾನದಂಡಗಳನ್ನು ಪಾಲಿಸುವ ಜತೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳನ್ನು ಗೃಹ ಲಕ್ಷ್ಮಿಯಿಂದ ಹೊರಗಿಟ್ಟು ಗುರುತಿಸಿದರೇ ಮಾತ್ರ ವಾರ್ಷಿಕ 4,800 ಕೋಟಿ ರು.ಗಳನ್ನು ಉಳಿಸಬಹುದು ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು ಎಂಬುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿದೆ.

 

ಅರ್ಜಿ ಮುದ್ರಣ,ವಿತರಣೆಗೆ 9 ಕೋಟಿ

 

ಇನ್ನು, ಈ ಯೋಜನೆಗೆ ಅನ್‌ಲೈನ್‌ ಮತ್ತು ಭೌತಿಕವಾಗಿ ಸ್ವೀಕರಿಸಿದ ಅರ್ಜಿಗಳನ್ನು ಸಾಫ್ಟ್‌ವೇರ್‌ ವರ್ಕ್ ಫ್ಲೋ ಅನ್ವಯ ಸಂಬಂಧಪಟ್ಟ ಉಪ ತಹಶೀಲ್ದಾರ್‌ ಅವರು ಅನುಮೋದಿಸಬೇಕು. ಆ ನಂತರ ಹಣ ಪಾವತಿಸಲು ಅರ್ಜಿಗಳನ್ನು ನೇರ ನಗದು ವರ್ಗಾವಣೆ ಸಲುವಾಗಿ ವರ್ಗಾಯಿಸುವ ಪ್ರಕ್ರಿಯೆಗೆ ಪ್ರತಿ ಜಿಲ್ಲೆಗೆ 2 ಲಕ್ಷ ರು.ನಂತೆ ಒಟ್ಟಾರೆ 9 ಕೋಟಿ ರು. ವೆಚ್ಚವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಮಂಜುಳ ಎನ್‌ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರಿಗೆ 2023ರ ಜೂನ್‌ 8ರಂದು ಪತ್ರ ಬರೆದಿದ್ದರು.

 

ರಾಜ್ಯದ ಆಹಾರ ಇಲಾಖೆಯ ತಂತ್ರಾಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 153.09 ಲಕ್ಷ ಕುಟುಂಬಗಳಿವೆ. ಈ ಪೈಕಿ ಬಿಪಿಎಲ್‌ ಹಾಗೂ ಅಂತ್ಯೋದಯ ಚೀಟಿಗಳನ್ನು 128.25 ಲಕ್ಷ ಕುಟುಂಬಗಳು ಹೊಂದಿವೆ. 24.88 ಲಕ್ಷ ಸಂಖ್ಯೆಯಲ್ಲಿ ಎಪಿಎಲ್‌ ಕುಟುಂಬಗಳಿವೆ.

 

ಅದೇ ರೀತಿ ಇಂಡಿಯಾ ಫೈಲಿಂಗ್ಸ್‌. ಕಾಮ್‌ ಪ್ರಕಾರ 2018-19ರಲ್ಲಿ ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿಸಿರುವವರ ಸಂಖ್ಯೆ 39,19,473 ಇದೆ. ಪ್ರತಿ ಕುಟುಂಬದಲ್ಲಿ ನಾಲ್ಕು ಸದಸ್ಯರು ಸರಾಸರಿಯಾಗಿ ಆದಾಯ ತೆರಿಗೆ ಪಾವತಿದಾರರು ಇದ್ದರೆ ಇಂತಹ ಕುಟುಂಬಗಳ ಸಂಖ್ಯೆ 10 ಲಕ್ಷ ಆಗಬಹುದು. ಇತ್ತೀಚಿನ ಕುಟುಂಬ ತಂತ್ರಾಂಶದ ಪ್ರಕಾರ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ಮಹಿಳೆಯರ ಸಂಖ್ಯೆ 57.48 ಲಕ್ಷದಷ್ಟಿದೆ.

 

ಕರ್ನಾಟಕ ಅಂಕಿ ಅಂಶಗಳ ನೋಟದ ಪ್ರಕಾರ 5.8 ಲಕ್ಷ ಕುಟುಂಬಗಳು ಟ್ರಾಕ್ಟರ್‌ ಹೊಂದಿದ್ದರೇ 35.37 ಲಕ್ಷ ಕುಟುಂಬಗಳು ನಾಲ್ಕು ಚಕ್ರ ವಾಹನ ಹೊಂದಿವೆ. ನಾಲ್ಕು ಚಕ್ರ ವಾಹನ ಮೇಲ್ಪಟ್ಟ ವಾಹನಗಳನ್ನು 9.2 ಲಕ್ಷ ಕುಟುಂಬಗಳು ಹೊಂದಿವೆ. ಗ್ರಾಮೀಣ ಪ್ರದೇಶದಲ್ಲಿ 5 ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿರುವ ಕುಟುಂಬಗಳ ಸಂಖ್ಯೆ 14.09 ಲಕ್ಷದಷ್ಟಿವೆ ಎಂದು ಯೋಜನಾ ಇಲಾಖೆಯು ಅಂಕಿ ಅಂಶಗಳನ್ನು ಒದಗಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಗೃಹಲಕ್ಷ್ಮೀ ಯೋಜನೆಗೆ 32 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ಖರ್ಚಾಗುತ್ತದೆ. ಒಂದೇ ಯೋಜನೆಗೆ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಇದಕ್ಕಾಗಿ 17,500 ಕೋಟಿ ಈ ವರ್ಷ ಮೀಸಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts