ಕೃಷಿ ಕಾನೂನು, ರೈತರ ಆದಾಯ ದ್ವಿಗುಣ ನೀತಿ; ಬಿಜೆಪಿ ಸ್ನೇಹಿ ಎನ್‌ಆರ್‌ಐ ಉದ್ಯಮಿಯಿಂದ ಪ್ರಸ್ತಾವ ಬಹಿರಂಗ

photo credit;cii video
ಹೊಸ ದೆಹಲಿ; ನೀತಿ ಆಯೋಗವು ಕೃಷಿ  ಕಾರ್ಪೋರೇಟೀಕರಣ ವರದಿಯನ್ನು ಸಿದ್ಧಪಡಿಸಲು, ಅದಕ್ಕೂ ಮುನ್ನ ಬಿಜೆಪಿಗೆ ನಿಕಟವಾಗಿರುವ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ನೀತಿ ಆಯೋಗಕ್ಕೆ ಅಂತಹ ಪ್ರಸ್ತಾವ ಸಲ್ಲಿಸಿದ್ದುದು ಕಾರಣವಾಗಿತ್ತು ಎಂಬ ಸಂಗತಿಯನ್ನು  The  Reporters’ Collective ದಾಖಲೆ ಸಮೇತ ಬಹಿರಂಗಗೊಳಿಸಿದೆ.  ಇದರ ಭಾವಾನುವಾದವನ್ನು ‘ದಿ ಫೈಲ್‌’ ಪ್ರಕಟಿಸುತ್ತಿದೆ.
ನೀತಿ ಆಯೋಗವನ್ನು ತನ್ನ ಪ್ರಸ್ತಾವದೊಂದಿಗೆ ಸಂಪರ್ಕಿಸಿದ್ದ ಶರದ್ ಮರಾಠೆ, ಕೃಷಿ, ತೋಟಗಾರಿಕೆ ಅಥವಾ ಅವಕ್ಕೆ ಸಂಬಂಧಿಸಿದ ಯಾವ ವಿಷಯಗಳಲ್ಲೂ ತಜ್ಞರಲ್ಲ; ಬದಲಿಗೆ, ಅವರೊಬ್ಬ ಸಾಫ್ಟ್‌ವೇರ್‌   ಕಂಪನಿಯನ್ನು ನಡೆಸುತ್ತಿರುವ ಉದ್ಯಮಿ ಮಾತ್ರ ಆಗಿದ್ದಾರೆ.
ಭವಿಷ್ಯದಲ್ಲಿ ರೈತರು ತಮ್ಮ ಕೃಷಿ ಭೂಮಿಗಳನ್ನು ಕಾರ್ಪೊರೇಟ್ ಮಾದರಿಯ ಕೃಷಿ ವ್ಯಾಪಾರ ಕಂಪನಿಗಳಿಗೆ ಗುತ್ತಿಗೆ ನೀಡಿ, ಸಕ್ರಿಯವಾಗಿ ಅವುಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಪ್ರಶ್ನಾರ್ಹ ಪ್ರಸ್ತಾವಕ್ಕೆ ನೀತಿ ಆಯೋಗವು ಕೂಡಲೇ ಮತ್ತು ಅತ್ಯಾಸಕ್ತಿಯಿಂದ ಒಪ್ಪಿಗೆ ಸೂಚಿಸಿರುವುದು The Reporters’ Collective ಸಂಸ್ಥೆಗೆ ದೊರಕಿರುವ ದಾಖಲೆಗಳಿಂದ ಬಹಿರಂಗಗೊಂಡಿದೆ.
ತರುವಾಯ, ನೀತಿ ಆಯೋಗವು ಸದರಿ ಉದ್ಯಮಿಯನ್ನು ತನ್ನ ಕಾರ್ಯಪಡೆಗೆ ಸೇರ್ಪಡೆ ಮಾಡಿಕೊಂಡಿದ್ದು, ಈ ಕಾರ್ಯಪಡೆಯು ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅದಾನಿ ಸಮೂಹ, ಪತಂಜಲಿ, ಬಿಗ್ ಬ್ಯಾಸ್ಕೆಟ್, ಮಹೀಂದ್ರಾ ಸಮೂಹ ಹಾಗೂ ಐಟಿಸಿಯಂಥ ಬೃಹತ್ ಕಾರ್ಪೊರೇಟ್ ಕಂಪನಿಗಳೊಂದಿಗೇ ಬಹುತೇಕ ಸಮಾಲೋಚನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಕೃಷಿಯನ್ನೇ ಅವಲಂಬಿಸಿರುವ ಶೇ. 60ರಷ್ಟು ಭಾರತೀಯರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದ್ದ ವರದಿಯನ್ನು 2018ರಲ್ಲಿ ಸರ್ಕಾರಕ್ಕೆ ಸಲ್ಲಿಸುವ ಮುನ್ನ ಈ ಕಾರ್ಯಪಡೆಯು ಯಾವುದೇ ರೈತರು, ಆರ್ಥಶಾಸ್ತ್ರಜ್ಞರು ಅಥವಾ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿರಲಿಲ್ಲ. ಈ ವರದಿಯನ್ನು ಈವರೆಗೆ ಸಾರ್ವಜನಿಕಗೊಳಿಸಲಾಗಿಲ್ಲ.
ಈ ವರದಿ ಸಲ್ಲಿಕೆಯಾದ ಎರಡು ವರ್ಷಗಳ ನಂತರ, ಕೃಷಿ ವಲಯಕ್ಕೆ ಕಾರ್ಪೊರೇಟ್ ಸಂಸ್ಥೆಗಳಿಗೆ ಅವಕಾಶ ನೀಡುವ ಹಾಗೂ ಕೃಷಿ ಮಾರುಕಟ್ಟೆಗಳನ್ನು ನಿಯಂತ್ರಣ ಮುಕ್ತಗೊಳಿಸುವ ಮೂರು ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸುವ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ಸುದೀರ್ಘ ಕಾಲದ ರೈತರ ಪ್ರತಿಭಟನೆಗೆ ಭಾರತವು ಸಾಕ್ಷಿಯಾಯಿತು. ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು ಹಾಗೂ ಈ ಪೈಕಿ ಕನಿಷ್ಠ ಪಕ್ಷ 500 ಮಂದಿ ರೈತರು ಶಾಖ, ಶೀತ ಹಾಗೂ ಕೋವಿಡ್ ಸೋಂಕಿಗೆ ಬಲಿಯಾಗಿದ್ದರಿಂದ ಸರ್ಕಾರವು ಈ ಕಾಯ್ದೆಗಳನ್ನು ಬಲವಂತವಾಗಿ ಹಿಂಪಡೆಯಬೇಕಾಯಿತು.
ಪ್ರಧಾನ ಮಂತ್ರಿಯ ಮಹತ್ವಾಕಾಂಕ್ಷಿ ಭರವಸೆಯಾಗಿದ್ದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಈ ಯೋಜನೆಯನ್ನು ವಾಸ್ತವವಾಗಿ ಸರ್ಕಾರವು ಹೇಗೆ ರೂಪಿಸಿತ್ತು ಎಂಬುದನ್ನು ಈ ಸರಣಿ ವರದಿಯ ಮೊದಲ ಭಾಗವು ಬಹಿರಂಗಗೊಳಿಸಲಿದೆ.
ಕೃಷಿ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ ವ್ಯಕ್ತಿಯೊಬ್ಬರ ಪ್ರಸ್ತಾವವು ಹೇಗೆ ಪ್ರಧಾನಿ ಕಾರ್ಯಾಲಯವನ್ನು ತಲುಪಿತು, ದೇಶದ ಅತ್ಯಂತ ಪ್ರಮುಖ ವಲಯಗಳ ಪೈಕಿ ಒಂದಾದ ಕೃಷಿ ವಲಯದಲ್ಲಿ ಸರ್ಕಾರ ಹೇಗೆ ನಿರಂಕುಶಾಧಿಕಾರ ಚಲಾಯಿಸಿತು ಎಂಬುದನ್ನು ದಾಖಲೆಗಳು ಹೇಳುತ್ತಿವೆ.
ಇದೆಲ್ಲವೂ ಒಂದು ಪತ್ರದೊಂದಿಗೆ ಪ್ರಾರಂಭವಾಗುತ್ತದೆ. ಕೃಷಿ ವಲಯವನ್ನು ಪುನಶ್ಚೇತನಗೊಳಿಸಲು ಅಕ್ಟೋಬರ್ 2017ರಲ್ಲಿ ಶರದ್ ಮರಾಠೆ ಅವರು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಿಗೆ ಭವಿಷ್ಯದ ದೃಷ್ಟಿಕೋನ ಹಾಗೂ ಪರಿಕಲ್ಪನೆಯ ಟಿಪ್ಪಣಿ ಹೊಂದಿರುವ ಒಂದು ಪತ್ರ ಬರೆಯುತ್ತಾರೆ.
ಮರಾಠೆ ಹಾಗೂ ಕುಮಾರ್ ಇಬ್ಬರೂ ಪರಿಚಿತರಾಗಿರುವುದರಲ್ಲಿ,  ನೀತಿ ಆಯೋಗದಂಥ ಸರ್ಕಾರಿ ಸಂಸ್ಥೆಗಳಿಗೆ ಪ್ರತಿ ವರ್ಷ ಯೋಜನೆ ಹಾಗೂ ಪತ್ರಗಳು ಶೈತ್ಯಾಗಾರ ಸೇರಿದ್ದರೂ  ಯಾಕೆ ಮರಾಠೆಯ ಪತ್ರ ಮಾತ್ರ ಇಷ್ಟು ವೇಗ ಪಡೆಯಿತು ಎಂಬುದಕ್ಕೆ ಭಾಗಶಃ ವಿವರಣೆಯಿದೆ.
ಆದರೆ, ಇದಕ್ಕಿಂತ ಮುಖ್ಯವಾದದುದು ಮರಾಠೆ ಬಿಜೆಪಿಯೊಂದಿಗೆ ಹೊಂದಿರುವ ನಿಕಟ ಸಂಬಂಧ. ಮರಾಠೆ ಬಿಜೆಪಿಯ ಸಾಗರೋತ್ತರ ಗೆಳೆಯರ ಘಟಕದೊಂದಿಗೆ ಗೆಳತನ ಹೊಂದಿರುವ ಹೆಗ್ಗಳಿಕೆ ಹೊಂದಿದ್ದಾರೆ.
ಆಡಳಿತಾರೂಢ ಪಕ್ಷದೊಂದಿಗಿನ ಮರಾಠೆಯ ಆಳವಾದ ಸಂಬಂಧವು ಸೆಪ್ಟೆಂಬರ್, 2019ರಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಭಾರತೀಯ ಅಪೆಕ್ಸ್ ಗ್ರಾಮೀಣ ಬ್ಯಾಂಕ್ ನಿಯಂತ್ರಣ ಸಂಸ್ಥೆಯಲ್ಲಿ ಸ್ಪೇನ್ ನ ರಾಜಕುಮಾರಿಯನ್ನು ಭೇಟಿ ಮಾಡಿದ ಸರ್ಕಾರಿ ನಿಯೋಗದಲ್ಲಿ ಸ್ಥಾನ ಪಡೆಯುವಂತೆ ಮಾಡಲು ಸಾಕಷ್ಟಾಗಿದೆ.
ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂನಿಯರ್ ಆಗಿರುವ ಮರಾಠೆ, ಅಮೆರಿಕಾದಲ್ಲಿ ವ್ಯಾಪಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಅವರು ಅಮೆರಿಕಾದಲ್ಲಿ ಯೂನಿವರ್ಸಲ್ ಟೆಕ್ನಿಕಲ್ ಸಿಸ್ಟಮ್ಸ್ ಇಂಕ್ ಎಂಬ ಸಾಫ್ಟ್ ವೇರ್ ಕಂಪನಿ ಹಾಗೂ ಭಾರತದಲ್ಲಿ ಯೂನಿವರ್ಸಲ್ ಟೆಕ್ನಿಕಲ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಕಂಪನಿಯನ್ನು ನಡೆಸುತ್ತಿದ್ದಾರೆ.
“ನಾನು 1960ರ ದಶಕದಿಂದ ಅಮೆರಿಕಾದಲ್ಲಿ ನೆಲೆಸಿದ್ದೇನೆ. ನನ್ನ ಆಸಕ್ತಿಯು ಸಮಾಜದ ಮೇಲೆ ವ್ಯಾಪಕ ಪರಿಣಾಮವನ್ನುಂಟು ಮಾಡುವ ವಿಷಯಗಳಲ್ಲಿದೆ. ನನ್ನ ಸಮಯದ ಒಂದು ಭಾಗವನ್ನು ಸಾಫ್ಟ್ ವೇರ್ ಕಂಪನಿಯನ್ನು ನಡೆಸಲು ವಿನಿಯೋಗಿಸುತ್ತಿದ್ದೇನೆ… ಮತ್ತೊಂದು ಭಾಗದಲ್ಲಿ ನಾನು ಜೀವನದಲ್ಲಿ ಏನು ಕಲಿತೆ, ಅದರಿಂದ ಹೇಗೆ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುವಂತೆ ಮಾಡಬಹುದು ಎಂಬುದರ ಕುರಿತು ಮಾತನಾಡುತ್ತಿರುತ್ತೇನೆ” ಎಂದು ನಮ್ಮೊಂದಿಗೆ ಮರಾಠೆ ಹೇಳಿದ್ದಾರೆ.
ಆದರೆ, ಭಾರತೀಯ ನೀತಿ ನಿರೂಪಣೆ ವಲಯದಲ್ಲಿ ಅವರ ಖ್ಯಾತಿ ಬೇರೆಯದೇ ಆಗಿದೆ. ಅವರು ಭಾರತದ ಮಾಜಿ ಪ್ರಧಾನಿ ಹಾಗೂ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಆಡಳಿತಾವಧಿಯಲ್ಲಿ ಭಾರತದಲ್ಲಿ ಸಾಫ್ಟ್ ವೇರ್ ಪಾರ್ಕ್ ಗಳನ್ನು ಸ್ಥಾಪಿಸುವಂತೆ ನೀಡಿದ್ದ ಯೋಜನಾ ಸಲಹೆಯಲ್ಲಿ ಭಾಗಿಯಾಗಿದ್ದರು ಎಂದು ಸಾರ್ವಜನಿಕ ದಾಖಲೆಗಳು ಸೂಚಿಸುತ್ತಿವೆ.
2016ರಲ್ಲಿ ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ತಮ್ಮ ಕನಸನ್ನು ಹಂಚಿಕೊಂಡಿದ್ದರು. ಈ ಕನಸನ್ನು ಸಾಕಾರಗೊಳಿಸುವ ಯೋಜನೆಗಳ ಕುರಿತೂ ಮಾತನಾಡಿದ್ದರು.
“ಮಾರುಕಟ್ಟೆ ಚಾಲಿತ, ಭಾರತದಲ್ಲಿನ ಕೃಷಿ ಸಂಬಂಧಿತ ಉತ್ಪನ್ನಗಳ ಮೂಲಕ ರೈತರ ಆದಾಯ ದ್ವಿಗುಣ” ಎಂಬ ತಲೆಬರಹ ಹೊಂದಿದ್ದ ಮರಾಠೆಯ ನೀಲನಕ್ಷೆಯು ನೀತಿ ಆಯೋಗದಲ್ಲಿ ಅತ್ಯುತ್ಸಾಹಿ ಗ್ರಾಹಕನನ್ನು ಹುಡುಕಿ ಕೊಟ್ಟಿತು.
ರೈತರಿಂದ ಕೃಷಿ ಭೂಮಿಯ ಗುತ್ತಿಗೆಯನ್ನು ಒಟ್ಟಾಗಿ ಅಂತಿಮಗೊಳಿಸುವುದು, ಸರ್ಕಾರದ ನೆರವಿನೊಂದಿಗೆ ಬೃಹತ್ ಮಾರುಕಟ್ಟೆ ಕಂಪನಿಯನ್ನು ಸ್ಥಾಪಿಸುವುದು ಹಾಗೂ ಸಣ್ಣ ಕಂಪನಿಗಳಿಗೆ ಸಂಸ್ಕರಣೆ ಹಾಗೂ ಕೃಷಿಯಲ್ಲಿ ಸ್ಥಾನ ಸೃಷ್ಟಿಸುವುದನ್ನು ಸರ್ಕಾರ ಪರೀಕ್ಷಿಸಬೇಕು ಹಾಗೂ ಕ್ಷಿಪ್ರವಾಗಿ ಜಾರಿಗೆ ತರಬೇಕು ಎಂಬುದು ತಮ್ಮ ಆಮೂಲಾಗ್ರ ನೂತನ ಪ್ರಾಯೋಗಿಕ ಪರಿಹಾರವಾಗಿತ್ತು.
ಈ ಕಂಪನಿಗಳು ಒಟ್ಟಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟವನ್ನು ಮಾಡುತ್ತವೆ. ತಮ್ಮ ಕೃಷಿ ಭೂಮಿಗಳನ್ನು ಗುತ್ತಿಗೆಗೆ ನೀಡುವ ರೈತರೂ ಈ ಪ್ರಕ್ರಿಯೆಯ ಭಾಗವಾಗಿ, ಲಾಭದ ಒಂದು ಅಂಶವನ್ನು ಗಳಿಸಬಹುದು. ಇದರಿಂದ ಅವರು ಹೆಚ್ಚು ಹಣವನ್ನು ಗಳಿಸಬಹುದು ಹಾಗೂ ಕೃಷಿ ವಲಯವನ್ನು ಮತ್ತಷ್ಟು ಉತ್ತಮಗೊಳಿಸಬಹುದು ಎಂದು ಮರಾಠೆ ಪ್ರತಿಪಾದಿಸುತ್ತಾರೆ.
ಈ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಲು ವಿಶೇಷ ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಅವರು ಶಿಫಾರಸು ಮಾಡಿದ್ದರು. ಮತ್ತೂ ಮುಂದುವರಿದು, ಕಾರ್ಯಪಡೆಯಲ್ಲಿರಬೇಕಾದ 11 ಮಂದಿಯ ಹೆಸರನ್ನು ಅವರು ಪಟ್ಟಿ ಮಾಡಿದ್ದರು. ಅವರು ಆ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಂಡಿದ್ದರು ಮತ್ತು ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೆಸರನ್ನೂ ಸೇರ್ಪಡೆ ಮಾಡಿದ್ದರು.
ಮರಾಠೆ ಭಾಗವಾಗಿದ್ದ ಕಾರ್ಯಪಡೆ ಇದೊಂದೇ ಆಗಿರಲಿಲ್ಲ. ಸಾಫ್ಟ್ ವೇರ್ ಕಂಪನಿಯ ಮಾಲೀಕರಾದ ಮರಾಠೆಯನ್ನು ಆಯುಷ್ (ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ) ಅನ್ನು ವೃದ್ಧಿಸುವ ಆಯುಷ್ ಸಚಿವಾಲಯದ ಕಾರ್ಯಪಡೆಯ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಲಾಗಿತ್ತು. ಆದರೆ, ಅವರ ಕ್ಷೇತ್ರ ತಜ್ಞತೆಯು ರೈತರ ಆದಾಯ ಕಾರ್ಯಪಡೆಯಂತೆಯೇ ಆಯುಷ್ ಕಾರ್ಯಪಡೆಯಲ್ಲೂ ಯಾವುದೇ ಜಾದೂ ಮಾಡಿರಲಿಲ್ಲ.
ನಂತರ, ಬೆಳವಣಿಗೆ ಹೊಂದುತ್ತಿರುವ ಪೌಷ್ಟಿಕಾಹಾರ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಆಹಾರ ಮತ್ತು ಪೌಷ್ಟಿಕಾಹಾರ ಉದ್ಯಮದಲ್ಲಿ 18 ಕಂಪನಿಗಳ ಒಡೆತನ ಹೊಂದಿರುವ ಪ್ರಖ್ಯಾತ ಉದ್ಯಮಿ ಸಂಜಯ ಮಾರಿವಾಲಾರೊಂದಿಗೆ ಸೇರಿಕೊಳ್ಳುವ ಮರಾಠೆ, ಪ್ರತ್ಯೇಕ ಲಾಭರಹಿತ ಕಂಪನಿಯೊಂದನ್ನು ಸ್ಥಾಪಿಸಿದರು.
ನೀತಿ ಆಯೋಗಕ್ಕೆ ಮರಾಠೆ ಸಲ್ಲಿಸಿದ್ದ ಪರಿಕಲ್ಪನೆ ಟಿಪ್ಪಣಿಯು ರೈತರ ಆದಾಯವನ್ನು ದ್ವಿಗುಣಗೊಳಿಸಲು ಅನಿವಾಸಿ ಭಾರತೀಯರು ಹಾಗೂ ಉದ್ಯಮಿಗಳ ಸಲಹೆಗಾಗಿ ಸಂಪರ್ಕ ಅಭಿಯಾನ ಕೈಗೆತ್ತಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿತ್ತು. ಈ ಟಿಪ್ಪಣಿಯಲ್ಲಿ ಅವರು ತಮಗೆ ಪರಿಚಿತರಿದ್ದ ವಿಜಯ್ ಚೌತೈವಾಲೆಯವರ ಹೆಸರನ್ನು ನಿರ್ದಿಷ್ಟವಾಗಿ ಸೇರ್ಪಡೆ ಮಾಡಿದ್ದರು.
ಗಮನಾರ್ಹ ಸಂಗತಿಯೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಖ್ಯಾತಿ ವಿಜಯ್ ಚೌತೈವಾಲೆ ಅವರದಾಗಿದ್ದು, ಅವರು ಭಾರತೀಯ ಜನತಾ ಪಕ್ಷದ ವಿದೇಶಾಂಗ ನೀತಿ ವಿಭಾಗ ಹಾಗೂ ಸಾಗರೋತ್ತರ ಗೆಳೆತನ ಘಟಕದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಈ ಯೋಜನೆಯ ಕುರಿತು ನೀತಿ ಆಯೋಗವು ಆಸಕ್ತಿ ತೋರಿತಾದರೂ, ಚೌತೈವಾಲೆ ಅಂತಿಮವಾಗಿ ಈ ಕಾರ್ಯಪಡೆಯ ಭಾಗವಾಗಲಿಲ್ಲ. ಅದಕ್ಕೆ ಅವರು ಅಧಿಕೃತ ಸರ್ಕಾರಿ ಹುದ್ದೆಗೆ ಪಕ್ಷದ ಸದಸ್ಯರೊಬ್ಬರು ಆಯ್ಕೆಯಾಗಬಾರದು ಎಂಬ ಕಾರಣ ನೀಡಿದ್ದರೆ ಎಂಬುದು ಸ್ಪಷ್ಟವಾಗಿಲ್ಲ.
ನೀತಿ ಆಯೋಗವು ಮರಾಠೆಯ ಯೋಜನೆಗಳನ್ನು ಶ್ರದ್ಧೆಯಿಂದ ಅನುಸರಿಸಿತು. ಕೆಲವೇ ದಿನಗಳಲ್ಲಿ ಮರಾಠೆಯವರ ಪರಿಕಲ್ಪನೆ ಟಿಪ್ಪಣಿಯನ್ನು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಬೇಕು ಎಂಬ ನಿರ್ಧಾರಕ್ಕೆ ನೀತಿ ಆಯೋಗ ಬಂದಿತು. ಇದಕ್ಕೂ ಮುನ್ನವೆ ಮರಾಠೆಯವರ ಪರಿಕಲ್ಪನೆ ಟಿಪ್ಪಣಿಯ ಕುರಿತು ಹಿಂಬಾಗಿಲ ಮಾತುಕತೆ ನಡೆದಿದ್ದಂತೆ ಕಂಡು ಬರುತ್ತಿದ್ದು, ಅವರು ಈ ಸಭೆಗೆ ಸರ್ಕಾರದ ಇತರ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರದ ಚಿಂತಕರ ಚಾವಡಿಯೊಂದಿಗೆ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭಾಗವಹಿಸುವಂತೆ ಕೋರಿದ್ದರು. ಮತ್ತದರಲ್ಲಿ ಯಶಸ್ವಿಯೂ ಆಗಿದ್ದರು.
ನಂತರ, ನೀತಿ ಆಯೋಗವು 16 ಮಂದಿ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿತ್ತು ಮತ್ತು ಈ ಸಭೆಯಲ್ಲಿ ಮರಾಠೆ ಶಿಫಾರಸು ಮಾಡಿದ್ದ ಏಳು ಮಂದಿ ಭಾಗವಹಿಸಿದ್ದರು. ಅವರು ಉದ್ಯಮ ಯೋಜನೆಯ ವಿವರಗಳಿಗೆ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದ್ದರು.
ಡಿಸೆಂಬರ್ 8, 2017ರಲ್ಲಿ ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಅವರು ಕಡತದ ಟಿಪ್ಪಣಿಯೊಂದರಲ್ಲಿ, “ಕಾರ್ಯಪಡೆಯನ್ನು ರಚಿಸುವ ಪ್ರಸ್ತಾವವನ್ನು ನಾವು ಪ್ರಧಾನಿ ಕಾರ್ಯಾಲಯದೊಂದಿಗೆ ಚರ್ಚಿಸಿದ್ದು, ಈ ಸಂಬಂಧ ಮತ್ತಷ್ಟು ಮುಂದುವರಿಯಲು ಅವರ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತಿದ್ದೇವೆ” ಎಂದು ಬರೆದಿದ್ದಾರೆ.
ಆದರೆ, ನೀತಿ ಆಯೋಗವು ಪ್ರಧಾನಿ ಕಾರ್ಯಾಲಯದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿಲ್ಲ ಮತ್ತದನ್ನು ಯಾರಾದರೂ ಊಹಿಸಬಹುದು. ಜನವರಿ 2018ರ ಹೊತ್ತಿಗೆ ಮರಾಠೆ ಮೊದಲು ಕಾರ್ಯಪಡೆಯ ಯೋಜನಾ ಕರಡನ್ನು ರವಾನಿಸಿದರು ಹಾಗೂ ನೀತಿ ಆಯೋಗವು ಕಾರ್ಯಪಡೆಯನ್ನು ರಚಿಸಿತು.
ಕಾರ್ಯಪಡೆಯನ್ನು ರಚಿಸುವ ತನ್ನ ಜ್ಞಾಪನಾ ಪತ್ರದಲ್ಲಿ ನೀತಿ ಆಯೋಗವು, “ಈ ಕಾರ್ಯಪಡೆಯ ರಚನೆಗೆ ಸಾಮಾಜಿಕ ಉದ್ಯಮಿ ಹಾಗೂ ಭಾರತದಲ್ಲಿ ತಯಾರಿಕೆ ದೃಷ್ಟಿಕೋನ ಹೊಂದಿರುವ ಮಾರುಕಟ್ಟೆ ಚಾಲಿತ ಕೃಷಿ ಸಂಬಂಧಿ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ” ಎಂದು ಹೇಳಿತ್ತು.
ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರವು ಅದಾಗಲೇ ಬೃಹತ್ ಅಂತರ ಸಚಿವಾಲಯದ ಅಧಿಕಾರಿಗಳ ಸಮಿತಿಯನ್ನು ರಚಿಸಿದ್ದರೂ, ಮರಾಠೆಯ ಶಿಫಾರಸಿನ ಮೇರೆಗೆ ಯಾಕೆ ತರಾತುರಿಯಲ್ಲಿ ಕಾರ್ಯಪಡೆಯನ್ನು ರಚಿಸಲಾಯಿತು ಎಂಬುದನ್ನು ನೀತಿ ಆಯೋಗದ ದಾಖಲೆಗಳು ಹೇಳುವುದಿಲ್ಲ.
ಕಾರ್ಯಪಡೆಯ ಸದಸ್ಯರು ಅಥವಾ ಅದು ಯಾರೊಂದಿಗೆ ಸಮಾಲೋಚನೆ ನಡೆಸಿತು ಎಂಬ ವಿವರಗಳಿಲ್ಲದೆ ಕಾರ್ಯಪಡೆಯ ಕುರಿತು ನೀತಿ ಆಯೋಗದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಲ್ಲದೆ ಕಾರ್ಯಪಡೆಯ ವರದಿಯನ್ನು ಸಾರ್ವಜನಿಕಗೊಳಿಸಲೂ ಇಲ್ಲ.
ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ ಕೇವಲ ಎರಡು ತಿಂಗಳ ಅವಧಿಯಲ್ಲಿ ಅಂತರ ಸಚಿವಾಲಯದ ಸಮಿತಿಯನ್ನು ರಚಿಸಲಾಗಿತ್ತು. ಒಂದು ವರ್ಷ, ನಾಲ್ಕು ತಿಂಗಳ ನಂತರ ಈ ಸಮಿತಿಯು 14 ಸಂಪುಟಗಳುಳ್ಳ ವರದಿಯನ್ನು ಸಲ್ಲಿಸಲು ಪ್ರಾರಂಭಿಸಿತು.
ಈ ವರದಿಯು ಕೃಷಿ, ಕೃಷಿ ಉತ್ಪನ್ನಗಳು ಹಾಗೂ ಗ್ರಾಮೀಣ ಬದುಕಿನ ಸುಧಾರಣೆ ಕುರಿತ ಎಲ್ಲ ಆಯಾಮಗಳನ್ನೂ ಒಳಗೊಂಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯು ರೈತರ ಆದಾಯವನ್ನು ದ್ವಿಗುಣಗೊಳಿಸಲು ನೀಡಿದ್ದ ಗಡುವಿನತ್ತ ಈ ವರದಿ ಹೆಜ್ಜೆ ಹಾಕಿರಲಿಲ್ಲ. 30,000ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ವರದಿಯನ್ನು ಉನ್ನತ ಸ್ಥಾನಗಳಲ್ಲಿರುವ ಹಲವರೇ ಓದಿರಲಿಕ್ಕಿಲ್ಲ. ಆದರೂ, ಈ ವರದಿಯನ್ನು ಸಾರ್ವಜನಿಕಗೊಳಿಸಲಾಯಿತು.
ವಾಸ್ತವವಾಗಿ, ಮರಾಠೆಯವರ ಕಾರ್ಯಪಡೆ ರಚನೆಯಾದ ತಿಂಗಳು ಈ ಅಧಿಕೃತ ಸಮಿತಿಯು ತನ್ನ ವರದಿಯ 13ನೇ ಹಾಗೂ ಮಧ್ಯಂತರ ಸಂಪುಟವನ್ನು ಸಲ್ಲಿಸಿತ್ತು. ಅಲ್ಲದೆ, ಮರಾಠೆ ಪ್ರಸ್ತಾವದ ಹಾದಿಯಲ್ಲೇ ಈ ಸಮಿತಿ ಕೂಡಾ ರೈತರ ಆದಾಯವನ್ನು ದ್ವಿಗುಣಗೊಳಿಸಲು ಉದ್ಯಮ ಮಾದರಿ ಯೋಜನೆಗಳಿಗೆ ಮೀಸಲಿರುವ ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಸಲಹೆ ನೀಡಿತ್ತು.
ಆದರೆ, ನೀತಿ ಆಯೋಗದ ಕಾರ್ಯಪಡೆಯು ಪೂರ್ಣಪ್ರಮಾಣದಲ್ಲಿರಲಿಲ್ಲ. ಪ್ರಾಪಂಚಿಕವಾದರೂ, ಅತ್ಯಗತ್ಯಗಳನ್ನು ಕ್ಷಿಪ್ರವಾಗಿ ಮುಂದಿಡಲಾಯಿತು. ಮರಾಠೆಯು ಕೆಲಸದ ಸ್ಥಳ, ಕಂಪ್ಯೂಟರ್ ನಿಂದ ಪ್ರಯಾಣ ಭತ್ಯೆಯವರೆಗೂ ಹಲವಾರು ಬಗೆಯ ಸೌಲಭ್ಯಗಳಿಗೆ ಬೇಡಿಕೆ ಇರಿಸಿದರು. ಈ ಬೇಡಿಕೆಗಳನ್ನು ನೀತಿ ಆಯೋಗವು ಪ್ರಾಮಾಣಿಕವಾಗಿ ಈಡೇರಿಸಿತು.
ರೈತ ಹೋರಾಟಗಾರರು ಸೇರಿದಂತೆ ವ್ಯಾಪಕ ಕೃಷಿ ವಲಯದ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ್ದ ಅಂತರ ಸಚಿವಾಲಯ ಸಮಿತಿಯಂತೆ ಕಾರ್ಯನಿರ್ವಹಿಸುವ ಬದಲು, ಮರಾಠೆ ಪರಿಕಲ್ಪನೆಯ ಕಾರ್ಯಪಡೆಯು ಕೇವಲ ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಾಥಮಿಕ ವೇದಿಕೆ ಒದಗಿಸುವ ಕೆಲಸವನ್ನಷ್ಟೇ ಮಾಡಿತು.
ಈ ಕಾರ್ಯಪಡೆಯು ತನ್ನ ಮೊದಲ ಸಭೆಯಲ್ಲಿ ತನ್ನ ಕಾರ್ಯಸೂಚಿಯನ್ನು ನಿರೂಪಿಸಿತ್ತು. “ಕೃಷಿಯಿಂದ ಕೃಷಿ ಉದ್ಯಮವಾಗಿ ಪರಿವರ್ತನೆಯಾಗಲು ಇದು ಸಕಾಲ” ಎಂದು ಮರಾಠೆ ಹೇಳಿದ್ದರು.
The Collective ನೀತಿ ಆಯೋಗ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಹಾಗೂ ಕಾರ್ಯಪಡೆಯು ಸಮಾಲೋಚನೆ ನಡೆಸಿದ್ದ ಸಂಸ್ಥೆಗಳಿಗೆ ವಿವರವಾದ ಪ್ರಶ್ನೆಗಳನ್ನು ರವಾನಿಸಿತ್ತು. ನೆನಪೋಲೆಗಳ ಹೊರತಾಗಿಯೂ ಯಾರೂ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.
(ಮುಂದುವರಿಯುವುದು) (ಈ ಸರಣಿಯ ಅಂತಿಮ ಭಾಗವು ಹೇಗೆ ಕಾರ್ಯಪಡೆಯು ರೈತರ ಆದಾಯವನ್ನು ದ್ವಿಗುಣಗೊಳಿಸುವ ಬದಲು ರೈತರಿಗೆ ಸಮಸ್ಯೆಯನ್ನುಂಟು ಮಾಡುವ ನೆಲೆಯಾಗಿ ಹೇಗೆ ಬದಲಾಯಿತು ಎಂಬುದನ್ನು ಬಯಲು ಮಾಡಲಿದೆ)
                                                                                            ಅನುವಾದ; ಸದಾನಂದ ಸಿ ಗಂಗನಬೀಡು
the fil favicon

SUPPORT THE FILE

Latest News

Related Posts