ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌; ಹಳೆಯ ಸುತ್ತೋಲೆ ಜಾರಿ, ಹೆಚ್ಚುವರಿ ಹಣವಿಲ್ಲ, ದಾನಿಗಳ ಬಳಿ ಕೈಯೊಡ್ಡಿಸಿದ ಸರ್ಕಾರ

ಬೆಂಗಳೂರು; ಐದು ಗ್ಯಾರಂಟಿಗಳ ಅನುಷ್ಠಾನ ಮತ್ತು ಇದರಿಂದಾಗುವ ಆರ್ಥಿಕ ಪರಿಣಾಮಗಳನ್ನು ಎದುರಿಸುವುದು ಹೇಗೆ ಎಂದು ಏದುಸಿರು ಬಿಡುತ್ತಿರುವ ಕಾಂಗ್ರೆಸ್‌ ಸರ್ಕಾರವು ಇದೀಗ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌  ಖರೀದಿಸಲು ಹೆಚ್ಚುವರಿ ಧನ ಸಹಾಯ ನೀಡಿಲ್ಲ.  ಬದಲಿಗೆ ಹೆಚ್ಚುವರಿ ಧನ ಸಹಾಯಕ್ಕಾಗಿ ಖಾಸಗಿ ಸಂಘ ಸಂಸ್ಥೆ ಮತ್ತು ದಾನಿಗಳ ಬಳಿ ಶಿಕ್ಷಕರು ಅನಿವಾರ್ಯವಾಗಿ ಕೈಯೊಡ್ಡಿ ನಿಲ್ಲಬೇಕಿದೆ.

 

 

ಹಿಂದಿನ ಬಿಜೆಪಿ ಸರ್ಕಾರವು ಸಹ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ ಖರೀದಿಸಲು 132 ಕೋಟಿ ರು. ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ ಸರ್ಕಾರವು 125.00 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ 01ರಿಂದ 8ನೇ ತರಗತಿ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ವಿತರಿಸಲು 99.70 ಕೋಟಿಯನ್ನಷ್ಟೇ ಬಿಡುಗಡೆ ಮಾಡಿದೆ.  ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗಿನ ಸರ್ಕಾರವು ಉಚಿತ ಶೂ ಮತ್ತು ಸಾಕ್ಸ್‌ ಖರೀದಿಸಲು 7 ಕೋಟಿ ರು. ಕಡಿಮೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರವೂ  ಉತ್ತಮ ಗುಣಮಟ್ಟ ಶೂ, ಸಾಕ್ಸ್‌ಗಳ ಖರೀದಿಗಾಗಿ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳ ಬಳಿ ಶಿಕ್ಷಕರನ್ನು ನಿಲ್ಲಿಸಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರವು ಹೊರಡಿಸಿರುವ ಸುತ್ತೋಲೆಯು  ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಸುತ್ತೋಲೆಯನ್ನೇ  ಮರು ಜಾರಿಗೊಳಿಸಿರುವುದರಿಂದ ಶಿಕ್ಷಕರು ದಾನಿಗಳು, ಖಾಸಗಿ ಸಂಘ ಸಂಸ್ಥೆಗಳ ಬಳಿ ಕೈಯೊಡ್ಡಬೇಕಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಸುತ್ತೋಲೆಗೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಪಕ್ಷವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆದರೀಗ ಕಾಂಗ್ರೆಸ್‌ ಪಕ್ಷವೇ ಈಗ ಅಧಿಕಾರದಲ್ಲಿದ್ದರೂ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನೇ ಮರು ಜಾರಿಗೊಳಿಸಿರುವುದು ಪ್ರತಿಪಕ್ಷಗಳ ಕೈಗೆ ಅಸ್ತ್ರವೊಂದನ್ನು ಕೊಟ್ಟಂತಾಗಿದೆ.

 

 

ವಿಶೇಷವೆಂದರೇ 2017-18ನೇ ಸಾಲಿನಲ್ಲಿಯೂ ಅಧಿಕಾರದಲ್ಲಿದ್ದ ಇದೇ ಕಾಂಗ್ರೆಸ್‌ ಸರ್ಕಾರವು ಆಗ ನಮೂದಿಸಿದ್ದ ದರವನ್ನೇ 2023-24ನೇ ಸಾಲಿನಲ್ಲಿಯೂ ನಮೂದಿಸಿದೆ.  ಪ್ರಸಕ್ತ ಸಾಲಿನಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನೂ ಪರಿಗಣಿಸದೇ ಆದೇಶ ಹೊರಡಿಸಿರುವುದು ನಗೆಪಾಟಲಿಗೀಡಾಗಿದೆ. ಹಾಗೆಯೇ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಕಾಂಗ್ರೆಸ್‌  ಸರ್ಕಾರವು ಇದಕ್ಕಾಗಿ ಹೆಚ್ಚುವರಿ ಧನ ಸಹಾಯ ನೀಡದೇ ಖಾಸಗಿ ಸಂಘ, ಸಂಸ್ಥೆ, ದಾನಿಗಳ ಬಳಿ ಕೈಯೊಡ್ಡಲು ನಿಲ್ಲಿಸಿರುವುದು ಶಿಕ್ಷಕರನ್ನು  ಪೇಚಿಗೆ ಸಿಲುಕಿಸಿದಂತಾಗಿದೆ.

 

 

ವಿದ್ಯಾವಿಕಾಸ ಯೋಜನೆಯಡಿ 2023-24ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್‌ ವಿತರಣೆಗೆ (ಲೆಕ್ಕ ಶೀರ್ಷಿಕೆ; 2202-01-109-0-03-221 ಮತ್ತು 2202-01-109-03-422) 125.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಆದೇಶಿಸಿತ್ತು. 01ರಿಂದ 8ನೇ ತರಗತಿ  ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮೂಲಕ ಒಟ್ಟರು 99.70 ಕೋಟಿ ರು.ಗಳನ್ನು ಅನುದಾನವನ್ನು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

 

 

ಹಾಗೆಯೇ 09 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ  ಶೂ ಮತ್ತು ಸಾಕ್ಸ್‌ ಖರೀದಿಗೆ 2023ರ ಜೂನ್‌ 19ರ ಅಂತ್ಯದವರೆಗೂ  ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಆದರೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕರುಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದೆ ಎಂದು ತಿಳಿದು ಬಂದಿದೆ.

 

‘2023-24ನೇ ಸಾಲಿನ ಈ ಯೋಜನೆ ಅನುಷ್ಠಾನಕ್ಕೆ ಆಯಾ ಶಾಲೆಗಳಲ್ಲಿನ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆ-2 ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ  ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮಕ್ಕಳ ಪಾದರಕ್ಷೆ  ಅಳತೆ ತೆಗೆದುಕೊಂಡು ಅಳತೆಗನುಗುಣವಾಗಿ ಜುಲೈ 30ರೊಳಗಾಗಿ ಖರೀದಿ  ಪ್ರಕ್ರಿಯೆ ಪೂರ್ಣಗೊಳಿಸಬೇಕು,’ ಎಂದು 2023ರ ಜೂನ್‌ 22ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜೂನ್‌ 22ರಂದು ಹೊರಡಿಸಿರುವ ಸುತ್ತೋಲೆಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಏರಿಕೆಯಾಗಿರುವ ಕಾರಣ ಎಲ್ಲಾ ರೀತಿಯ ಸರಕು, ಸಾಮಗ್ರಿ, ಉತ್ಪನ್ನಗಳ ದರವೂ ಸಹಜವಾಗಿ ಸ್ಥಳೀಯ ಮಟ್ಟದಲ್ಲಿಯೂ ಏರಿಕೆ ಕಂಡಿದೆ. ಹೀಗಿರುವಾಗ ಕಳೆದ 6 ವರ್ಷದ ಹಿಂದಿನ ದರವನ್ನೇ ಈಗಲೂ ನಮೂದಿಸಿ ಬಿಡುಗಡೆ ಮಾಡಿರುವುದಕ್ಕೆ ಶಿಕ್ಷಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

 

2023ರ ಜೂನ್‌ 22ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ  ವಿದ್ಯಾರ್ಥಿಗಳಿಗೆ ತಲಾ 295 ರು., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳೀಗೆ ತಲಾ 325 ರು. ಎಂದು ದರ ನಿಗದಿಪಡಿಸಿರುವುದು ಆದೇಶದಿಂದ ಗೊತ್ತಾಗಿದೆ.

 

‘ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿಂತೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ಹೆಚ್ಚುವರಿ ಧನ ಸಹಾಯ ಮಾಡಿದಲ್ಲಿ ಅದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ‍ಷೂ ಮತ್ತು ಸಾಕ್ಸ್‌ಗಳನ್ನು ಖರೀದಿಸಬಹುದು. ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು,’ ಎಂದು ಆದೇಶದಲ್ಲಿ ಹೇಳಿದೆ.  ಆದರೆ 2023ರ ಜೂನ್‌ 22ರಂದು ಹೊರಡಿಸಿರುವ ಅದೇಶದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳ ಮೊದಲ ಗುಣಮಟ್ಟದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನು ಖರೀದಿ ಮಾಡಬೇಕು ಎಂದು ಹೇಳಿರುವುದು ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದೆ.

 

2019ರ ಮೇ 6ರಲ್ಲಿಯೂ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌,ಕರೋನ, ಆಕ್ಷನ್‌, ಲಕಾನಿ ಕಂಪನಿಗಳ ಅಧಿಕೃತ ಮಾರಾಟಗಾರರಿಂದ ಶೂ- ಸಾಕ್ಸ್‌ಗಳನ್ನು ಖರೀದಿಸಬೇಕು ಎಂದು ಸೂಚಿಸಿತ್ತು.

 

2019ರಲ್ಲಿ ಹೊರಡಿಸಿದ್ದ ಆದೇಶದ ಪ್ರತಿ

 

 

2022ರ ಜುಲೈ 8ರಂದು ಹೊರಡಿಸಿರುವ ಆದೇಶದಲ್ಲಿ ಬ್ರ್ಯಾಂಡೆಡ್‌ ಉತ್ಪನ್ನಗಳ ಕುರಿತು ಉಲ್ಲೇಖಿಸಿರಲಿಲ್ಲ. ಅಲ್ಲದೆ ಹಿಂದಿನ  ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಹಲವು ಶಿಕ್ಷಕರು ಹೇಳಿದ್ದರು.

ಶಾಲಾ ಮಕ್ಕಳಿಗೆ ಶೂ ಖರೀದಿ; 5 ವರ್ಷದ ಹಿಂದಿನ ದರ ನಮೂದು, ದಾನಿಗಳ ಬಳಿ ಕೈಯೊಡ್ಡಬೇಕಿರುವ ಶಿಕ್ಷಕರು

ಮುಕ್ತ ಮಾರುಕಟ್ಟೆಯಲ್ಲಿಯೇ ತಲಾ ಒಂದು ಜತೆ ಶೂಗೆ ಕನಿಷ್ಠ 425 ರು.ಗಳಿವೆ. ಹೀಗಾಗಿ ಸರ್ಕಾರ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿರುವ ಮೊತ್ತಕ್ಕೆ ಹೋಲಿಸಿದರೆ 160 ರು. ಕಡಿಮೆ ಇತ್ತು.

 

 

2017-18ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿ ಸಂಬಂಧ ಶಾಲಾ ಎಸ್.ಡಿ.ಎಂ.ಸಿ ಖಾತೆಗಳಿಗೆ ರೂ.129.84 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಹೊರಡಿಸಿದ್ದ ಆದೇಶದಲ್ಲಿದ್ದ ದರವನ್ನೇ 2022-23ನೇ ಸಾಲಿನಲ್ಲಿಯೂ ನಮೂದಿಸಿ ಪ್ರಸಕ್ತ ಸ್ಥಳೀಯ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ  ಪರಿಗಣಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕಳೆದ 5  ವರ್ಷದ ಹಿಂದೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ಹೋಲಿಸಿದರೆ 2022-23ನೇ   ಶೈಕ್ಷಣಿಕ ಸಾಲಿನಲ್ಲಿ ಬಿಡುಗಡೆ ಮಾಡಿದ್ದ   ಅನುದಾನದಲ್ಲಿ 2.16 ಕೋಟಿ ರು. ಮಾತ್ರ ಹೆಚ್ಚಳವಾಗಿತ್ತು.   ಅಲ್ಲದೆ 2017-18ನೇ ಸಾಲಿನಲ್ಲಿ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರು., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರು.ಗಳಂತೆ ಬಿಡುಗಡೆ ಮಾಡಿತ್ತು. ಇದೇ ದರವು 2019-20ರಲ್ಲಿಯೂ ಮುಂದುವರೆದಿತ್ತು. ಇದೀಗ 2022-23ನೇ ಶೈಕ್ಷಣಿಕ ಸಾಲಿನಲ್ಲಿಯೂ ಅದೇ ಮೊತ್ತವನ್ನು ಎಸ್‌ಡಿಎಂಸಿಗಳಿಗೆ ಬಿಡುಗಡೆ ಮಾಡಲು ಸೂಚಿಸಿತ್ತು.

 

ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌, ಕರೋನ, ಆಕ್ಷನ್‌, ಲಕಾನಿ ಸೇರಿದಂತೆ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳ ದರವು ಕಳೆದ 6  ವರ್ಷಕ್ಕೆ ಹೋಲಿಸಿದರೆ ಸ್ಥಳೀಯ ಮಟ್ಟದಲ್ಲಿಯೂ ಈ ಬಾರಿ ಹೆಚ್ಚಳವಾಗಿದೆ. ಆದರೆ ಸರ್ಕಾರವು ಚಾಲ್ತಿ ದರಗಳನ್ನು ನಮೂದಿಸದಿರುವುದು ಹೆಚ್ಚುವರಿ ಹಣಕ್ಕಾಗಿ ಶಿಕ್ಷಕರು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಬೇಕಾಗಿದೆ.

ಡೆಸ್ಕ್‌, ವಿದ್ಯುತ್‌ ಬಿಲ್‌ ಖರ್ಚುಗಳಿಗೆ ಪೋಷಕರಿಂದಲೇ 100 ರು ವಸೂಲಿ; ಸರ್ಕಾರ ದಿವಾಳಿಯಾಗಿದೆಯೇ?

 

‘6 ವರ್ಷದ ಹಿಂದಿನ ದರವನ್ನೇ ಆದೇಶದಲ್ಲಿ ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಈಗಲೂ ಅದೇ ದರ ಇರುವುದಿಲ್ಲ. ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಸುಮಾರು 35  ರಿಂದ 40 ರು. ಹೆಚ್ಚಳವಾಗಿದೆ. ಎಲ್ಲಾ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿರುತ್ತದೆ. ಹೀಗಿರುವಾಗ 6 ವರ್ಷದ ಹಿಂದಿನ ದರವನ್ನು ಪರಿಷ್ಕರಿಸಿ ಚಾಲ್ತಿ ದರವನ್ನು ನಮೂದಿಸಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈಗಿನ ಸರ್ಕಾರವು 6  ವರ್ಷದ ಹಿಂದಿನ ದರವನ್ನೇ ನಮೂದಿಸಿ ಶಿಕ್ಷಕರನ್ನು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಂದೊಮ್ಮೆ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡದಿದ್ದರೇ ಕೆಳದರ್ಜೆಯ ಶೂ ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.

the fil favicon

SUPPORT THE FILE

Latest News

Related Posts