ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ ಮಂಜೂರಾತಿ ರದ್ದು; ಇನ್ನೂ ಹೊರಬೀಳದ ಸರ್ಕಾರದ ಆದೇಶ

ಬೆಂಗಳೂರು; ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆ ಎಂದು ಹೇಳಲಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಆದೇಶಗಳನ್ನು ತಡೆಹಿಡಿದಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿ ಹಲವು ದಿನಗಳಾದರೂ ಇದುವರೆಗೂ ಯಾವುದೇ ಆದೇಶ ಹೊರಡಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

 

ಜನಸೇವಾ ಟ್ರಸ್ಟ್‌ಗೆ 35 ಎಕರೆ 33 ಗುಂಟೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿದ್ದ ಆದೇಶವನ್ನು ಹಿಂಪಡೆದುಕೊಳ್ಳಲಾಗುವುದು ಎಂದು ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ, ಶಾಸಕ ಆರ್‍‌ ಅಶೋಕ್‌ ಸೇರಿದಂತೆ ಬಿಜೆಪಿಯ ಹಲವು ಶಾಸಕರು ವಿರೋಧಿಸಿದ್ದರು. ಅಲ್ಲದೇ ವಿಧಾನಪರಿಷತ್‌ನಲ್ಲಿಯೂ ಚರ್ಚೆಗೆ ಕಾರಣವಾಗಿತ್ತು. ಜನಸೇವಾ ಟ್ರಸ್ಟ್‌ಗೆ ಗೋಮಾಳ ಮಂಜೂರಾತಿ ಸಂಬಂಧದ ಆದೇಶವನ್ನು ಹಿಂಪಡೆದಿಲ್ಲ ಎಂದು ಇದೀಗ ಕಂದಾಯ ಇಲಾಖೆಯೇ ಆರ್‍‌ಟಿಐ ಅಡಿಯಲ್ಲಿ ‘ದಿ ಫೈಲ್‌’ಗೆ 2023ರ ಜುಲೈ 27ರಂದು ಉತ್ತರ ಒದಗಿಸಿದೆ.

 

 

‘ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿಯ ಕುರುಬರಹಳ್ಳಿಲ್ಲಿ 35-33 ಎಕರೆ ಗೋಮಾಳ ಮಂಜೂರು ಮಾಡಿ ಹೊರಡಿಸಿರುವ ಆದೇಶ, ಕರ್ನಾಟಕ ಸರ್ಕಾರದ ನಡವಳಿಗಳನ್ನು ರದ್ದುಪಡಿಸಿ ಹೊರಡಿಸಿರುವ ಆದೇಶ, ನಡವಳಿಗಳ ಪತ್ರವನ್ನು ಒದಗಿಸುವಂತೆ ಕೋರಲಾಗಿರುತ್ತದೆ. ಆದರೆ ತಾವು ಕೋರಿರುವ ಅಂತಹ ಯಾವುದೇ ಆದೇಶ ಹೊರಡಿಸಿರುವುದಿಲ್ಲವೆಂದು ತಮಗೆ ತಿಳಿಸಲಾಗಿದೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಭೂ ಮಂಜೂರಾತಿ-1) ವಿಮಲಮ್ಮ ಸಿ ಅವರು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿದ ದಿನದಿಂದಲೂ ನಿರಂತರವಾಗಿ ದಾಖಲೆಗಳ ಸಹಿತ ‘ದಿ ಫೈಲ್‌’ ಇದುವರೆಗೂ 11 ವರದಿಗಳನ್ನು ಪ್ರಕಟಿಸಿತ್ತು.

 

ಗೋಮಾಳ ಜಮೀನನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶಗಳಿಲ್ಲದಿದ್ದರೂ 35 ಎಕರೆ 33 ಗುಂಟೆ ಜಮೀನನ್ನು ಹಿಂದಿನ ಬಿಜೆಪಿ ಸರ್ಕಾರವು ನಿಯಮಬಾಹಿರವಾಗಿ ಮಂಜೂರು ಮಾಡಿತ್ತು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಅಂದಾಜು 139 ಕೋಟಿಯಷ್ಟು ನಷ್ಟವನ್ನುಂಟು ಮಾಡಿತ್ತು. ಈ ಎಲ್ಲದರ ಕುರಿತು ‘ದಿ ಫೈಲ್‌’ ಇದುವರೆಗೂ ಪ್ರಕಟಿಸಿರುವ 11 ವರದಿಗಳನ್ನು ಇಲ್ಲಿ ಕ್ರೋಢೀಕರಿಸಿ ಕೊಡಲಾಗಿದೆ.

 

 

ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರಾಷ್ಟ್ರೋತ್ಥಾನ ಪರಿಷತ್‌, ರಾಷ್ಟ್ರೋತ್ಥಾನ ಟ್ರಸ್ಟ್‌ಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್‌ 89ರಲ್ಲಿ ಮೀಸಲಿರಿಸಿರುವ ಒಟ್ಟು ಗೋಮಾಳ ಪೈಕಿ  ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ  ಸಚಿವ ಸಂಪುಟ ಸಭೆಯು  ಅನುಮೋದಿಸಿತ್ತು. ಈ ಕುರಿತು 2022ರ ಆಗಸ್ಟ್‌ 17ರಂದು ವರದಿ ಪ್ರಕಟಿಸಿತ್ತು.

 

ರಾಷ್ಟ್ರೋತ್ಥಾನದ ಬೆನ್ನಲ್ಲೇ ಜನಸೇವಾ ಟ್ರಸ್ಟ್‌ಗೂ 70 ಕೋಟಿ ರು.ಮೌಲ್ಯದ 35.33 ಎಕರೆ ಗೋಮಾಳ ಮಂಜೂರು

 

ಎಪ್ಪತ್ತು ಕೋಟಿ ರು. ಬೆಲೆಬಾಳುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೇ ತಿರಸ್ಕೃತಗೊಂಡಿತ್ತು. ಆದರೂ ಕಂದಾಯ ಸಚಿವ ಆರ್‌ ಅಶೋಕ್‌ ಅವರು  ಸಚಿವ ಸಂಪುಟದ ಮುಂದಿರಿಸುವ ಮೂಲಕ ಜನಸೇವಾ ಟ್ರಸ್ಟ್‌ ಗೋಮಾಳ ಜಮೀನನ್ನು ಮಂಜೂರು ಮಾಡಿಸಿದ್ದರು.

 

ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್‌ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಹಂಚಿಕೆ ಸಂಬಂಧದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್‌ ಅವರು ತಿರಸ್ಕರಿಸಿದ್ದರು. ಈ ಸಂಬಂಧ 2022ರ ಮೇ 4  ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದರು. ಈ ಕುರಿತು 2022ರ ಆಗಸ್ಟ್‌ 24ರಂದು ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 35 ಎಕರೆ ಗೋಮಾಳ; ಕ್ಯಾಬಿನೆಟ್‌ ಅನುಮೋದನೆಗೂ ಮುನ್ನ ತಿರಸ್ಕೃತಗೊಂಡಿದ್ದ ಪ್ರಸ್ತಾವನೆ

 

ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಕುರುಬರಹಳ್ಳಿಯಲ್ಲಿರುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಲು ಹೋಬಳಿಯ ಮೂರು ಗ್ರಾಮಗಳ ಗ್ರಾಮಸ್ಥರು ವಿರೋಧಿಸಿ ತಕರಾರು ಎತ್ತಿದ್ದರು. ಅಲ್ಲದೆ ಸುಮಾರು ಒಂದು ಸಾವಿರ ಜಾನುವಾರುಗಳನ್ನು ಮೇಯಿಸಲು ಈ ಜಮೀನು ಅತ್ಯವಶ್ಯಕವಾಗಿತ್ತು. ಹೀಗಾಗಿ ಯಾವುದೇ ಖಾಸಗಿ ಸಂಘ, ಸಂಸ್ಥೆ, ಟ್ರಸ್ಟ್‌ಗಳಿಗೆ ಜಮೀನು ಮಂಜೂರು ಮಾಡಬಾರದು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಇದನ್ನು ಲೆಕ್ಕಿಸದೆಯೇ ರಾಜ್ಯ ಬಿಜೆಪಿ ಸರ್ಕಾರವು 70 ಕೋಟಿ ರು. ಬೆಲೆಬಾಳುವ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಧಾರೆಯೆರೆದು ಕೊಟ್ಟಿರುವುದು ಇದೀಗ ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಕುರಿತು 2022ರ ಆಗಸ್ಟ್‌ 25ರಂದು ವರದಿ ಪ್ರಕಟಿಸಿತ್ತು.

 

ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೇ ಗೋವು ಮೇಯುವ ಜಾಗವನ್ನೇ ಜನಸೇವಾ ಟ್ರಸ್ಟ್‌ಗೆ ಧಾರೆಯೆರೆದ ಸರ್ಕಾರ

 

ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ಇದೇ ಗೋಮಾಳದಲ್ಲಿ ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದ ಖಾಸಗಿ ಸಂಘವೊಂದರಿಂದ ಕಂದಾಯ ಇಲಾಖೆಯ ತಹಶೀಲ್ದಾರ್‌ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇದು ರಾಜ್ಯದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಗಮನದಲ್ಲೂ ಇತ್ತು. ಈ ಕುರಿತು 2022ರ ಆಗಸ್ಟ್‌ 31ರಂದು ವರದಿ ಪ್ರಕಟಿಸಿತ್ತು.

 

ಗೋಮಾಳ ಮಂಜೂರಿಗೆ ತಹಶೀಲ್ದಾರ್‌ರಿಂದಲೇ ಲಂಚಕ್ಕೆ ಬೇಡಿಕೆ!; ಎ ಜಿ ಗಮನದಲ್ಲಿದ್ದರೂ ಕ್ರಮ ವಹಿಸದ ಸರ್ಕಾರ

 

ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿರುವ ಗೋಮಾಳ ಜಮೀನಿನಲ್ಲಿ ಗೋ ಶಾಲೆ ತೆರೆಯಲು ಹಲವು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದ ಸ್ಥಳೀಯ ತಹಶೀಲ್ದಾರ್‌, ರಾಜಸ್ವ ನಿರೀಕ್ಷಕರು ಸಂಘ ಪರಿವಾರ ಹಿನ್ನೆಲೆಯ ಜನಸೇವಾ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

 

ಕುರುಬರಹಳ್ಳಿಯಲ್ಲಿ ರೈತರು ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕಿ ಮೇವು ನೀಡುತ್ತಿದ್ದಾರೆ. ಹೀಗಾಗಿ ಮೇವಿಗಾಗಿ ಜಾಗದ ಅವಶ್ಯಕತೆ ಇರುವ ಕಾರಣ ಗೋಮಾಳ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿ ಸಂಘ ಸಂಸ್ಥೆಗಳ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದ ಅಧಿಕಾರಿಗಳೇ ಇದೀಗ ಜನಸೇವಾ ಟ್ರಸ್ಟ್‌ಗೆ ಮಾತ್ರ ಗೋಮಾಳ ಜಮೀನನ್ನು ಹಂಚಿಕೆ ಮಾಡಲು ಪರೋಕ್ಷವಾಗಿ ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ಕುರಿತು 2022ರ ಸೆಪ್ಟಂಬರ್‍‌ 2ರಂದು ವರದಿ ಪ್ರಕಟಿಸಿತ್ತು.

 

ಉಲ್ಲಂಘನೆ; ಗೋಶಾಲೆ ತೆರೆಯುವ ಪ್ರಸ್ತಾವನೆ ತಿರಸ್ಕರಿಸಿದ್ದ ಸರ್ಕಾರ, ಜನಸೇವಾ ಟ್ರಸ್ಟ್‌ಗೆ 35 ಎಕರೆ ಮಂಜೂರು

 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್‌ 89ರಲ್ಲಿನ ಒಟ್ಟು ಗೋಮಾಳ ಜಮೀನಿನಲ್ಲಿ 24 ಎಕರೆ ಮಂಜೂರಿಗೆ ಅರ್ಜಿ ಸಲ್ಲಿಸಿದ್ದ ಜನಸೇವಾ ಟ್ರಸ್ಟ್‌ನ ನಿರ್ಮಲ್‌ಕುಮಾರ್‌ ಅವರು ಇದೇ ಟ್ರಸ್ಟ್‌ನ ಮತ್ತೊಂದು ಅಂಗ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯ ಪರವಾಗಿಯೂ 35.33 ಎಕರೆ ಜಮೀನು ಮಂಜೂರಾತಿಗಾಗಿ ಮರು ಮನವಿ ಸಲ್ಲಿಸಿದ್ದರು.
ಆರಂಭದಲ್ಲಿ ಅಂದರೆ 2021ರ ಜುಲೈ 15ರಂದು 24.00 ಎಕರೆ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿ ಆ ನಂತರ 11.33 ಎಕರೆ ಹೆಚ್ಚುವರಿಯಾಗಿ ಸೇರಿಸಿ 2021ರ ಡಿಸೆಂಬರ್‌ 3ರಂದು ಸಲ್ಲಿಸಿದ್ದ ಮನವಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಪುರಸ್ಕರಿಸಿದ್ದನ್ನು ಲಭ್ಯವಿರುವ ದಾಖಲೆಗಳ ಸಮೇತ 2022ರ ಸೆಪ್ಟಂಬರ್‍‌ 3ರಂದು ವರದಿ ಪ್ರಕಟಿಸಿತ್ತು.

 

ಗೋಮಾಳ;24 ಎಕರೆ ಮಂಜೂರಿಗೆ ಕೋರಿ, ಐದೇ ತಿಂಗಳಲ್ಲಿ 11.33 ಎಕರೆ ಹೆಚ್ಚಳಗೊಳಿಸಿದ್ದ ಜನಸೇವಾ ಟ್ರಸ್ಟ್‌

 

ಜನಸೇವಾ ಟ್ರಸ್ಟ್‌ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರು. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ  ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಇದೇ ಟ್ರಸ್ಟ್‌ಗೆ ರಾಜ್ಯ ಬಿಜೆಪಿ ಸರ್ಕಾರವು ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

 

ಸರ್ಕಾರಿ ಜಮೀನುಗಳ ಭೂ ಮಂಜೂರಾತಿಗಾಗಿ ಸಲ್ಲಿಸುವ ಪ್ರಸ್ತಾವನೆಗಳ ಸಂಬಂಧ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್‌ ಸಿ ರಾಮಲಕ್ಷ್ಮ್ಯಯ್ಯ ಎಂಬುವರು ಸರ್ಕಾರಕ್ಕೆ ಸಲ್ಲಿಸಿರುವ ಚೆಕ್‌ಲಿಸ್ಟ್‌ ಆಧರಿಸಿ 2022ರ ಸೆಪ್ಟಂಬರ್‍‌ 5ರಂದು ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ ಗೋಮಾಳ;80 ಕೋಟಿ ಬೆಲೆಯ 40 ಎಕರೆ ಇದ್ದರೂ 70 ಕೋಟಿ ಮೌಲ್ಯದ 35 ಎಕರೆ ಮಂಜೂರು

 

ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿಗೆ ಸರ್ಕಾರದ ಮಾರ್ಗಸೂಚಿ ದರ ಪ್ರಕಾರ 27 ಕೋಟಿ ರು. ದರ ಪ್ರಕಾರ ಮಂಜೂರು ಮಾಡದೇ ಕೇವಲ 7.68 ಕೋಟಿ ರು. ಮಂಜೂರು ಮಾಡಿ ಆದೇಶ ಹೊರಡಿಸಿರುವ ಸರ್ಕಾರವು ಬೊಕ್ಕಸಕ್ಕೆ ಅಂದಾಜು 20 ಕೋಟಿ ನಷ್ಟವನ್ನು ಹೊರಿಸಿತ್ತು. ಈ ಕುರಿತು 2022ರ ಸೆಪ್ಟಂಬರ್‍‌ 16ರಂದು ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 25 ಎಕರೆ; 27 ಕೋಟಿ ರು. ಜಮೀನಿಗೆ ಕೇವಲ 7.68 ಕೋಟಿ ದರ ನಿಗದಿಪಡಿಸಿ 20 ಕೋಟಿ ನಷ್ಟ

 

ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ ಈಗಾಗಲೇ ರಾಜ್ಯ ಸರ್ಕಾರದಿಂದ 25 ಎಕರೆ ವಿಸ್ತೀರ್ಣ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿದ್ದರೂ ಪುನಃ 15 ಎಕರೆ ಹೆಚ್ಚುವರಿ ಜಮೀನಿಗೆ ಬೇಡಿಕೆ ಇಟ್ಟಿತ್ತು. ಜನಸೇವಾ ಟ್ರಸ್ಟ್‌ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರು. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿರುವ ಬೆನ್ನಲ್ಲೇ ಹೆಚ್ಚುವರಿಯಾಗಿ 15 ಎಕರೆ ಜಮೀನು ಮಂಜೂರಾತಿಗಾಗಿ ನಿರ್ದೇಶನ ನೀಡಿತ್ತು. ಈ ಕುರಿತು 2023ರ ಫೆಬ್ರುವರಿ 3ರಂದು ವರದಿ ಪ್ರಕಟಿಸಿತ್ತು.

 

ಜನಸೇವಾಟ್ರಸ್ಟ್‌ಗೆ 25 ಎಕರೆ ಗೋಮಾಳ ಮಂಜೂರಾಗಿದ್ದರೂ ಹೆಚ್ಚುವರಿ 15 ಎಕರೆ ಕೋರಿಕೆ ಮನ್ನಣೆಗೆ ನಿರ್ದೇಶನ

 

ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಈಗಾಗಲೇ ರಾಜ್ಯ ಸರ್ಕಾರದಿಂದ 25 ಎಕರೆ ವಿಸ್ತೀರ್ಣ ಗೋಮಾಳ ಮಂಜೂರಾಗಿದ್ದರೂ 2023ರ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡುವ ಮುನ್ನವೇ 10.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿ 2023ರ ಮಾರ್ಚ್‌ 16ರಂದು ಆದೇಶ ಹೊರಡಿಸಿತ್ತು. ಈ ಕುರಿತು 2023ರ ಮಾರ್ಚ್‌ 21ರಂದು ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 25 ಎಕರೆ ನೀಡಿದ್ದರೂ ಹೆಚ್ಚುವರಿ 10.33 ಎಕರೆ ಮಂಜೂರು; ಸಂಘದ ಮೋಹ ಬಿಡಲೊಲ್ಲದ ಸರ್ಕಾರ

 

ಕರ್ನಾಟಕ ವಿಧಾನಸಭೆಗೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರು. ನಷ್ಟವನ್ನು ಹೊರಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 2022ರ ಸೆ.13 ಮತ್ತು 2023ರ ಮಾರ್ಚ್‌ 16ರಂದು ಕ್ರಮವಾಗಿ 25 ಎಕರೆ ಗೋಮಾಳವನ್ನು ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ. 25ರಷ್ಟು ಮತ್ತು 10.33 ಎಕರೆ ಗೋಮಾಳವನ್ನು ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ದರವನ್ನು ಭರಿಸಲು ಕಷ್ಟಸಾಧ್ಯ ಎಂದು ಜನಸೇವಾ ಟ್ರಸ್ಟ್‌ ಕೋರಿಕೆ ಸಲ್ಲಿಸಿದ್ದ ಕೆಲವೇ ಕೆಲವು ದಿನಗಳಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಚಿಕ್ಕಾಸು ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಈ ಕುರಿತು 2023ರ ಮಾರ್ಚ್‌ 30ರಂದು ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

 

ಅಲ್ಲದೇ ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿ ಕಟ್ಟಡ ಕಟ್ಟಲು ಸಹ ನಿವೇಶನ, ಗೋಮಾಳ ಜಮೀನನ್ನು ಹಿಂದಿನ ಬಿಜೆಪಿ ಸರ್ಕಾರವು ಮಂಜೂರು ಮಾಡಿತ್ತು. ಈ ಕುರಿತೂ ‘ದಿ ಫೈಲ್‌’ ದಾಖಲೆ ಸಹಿತ 13 ವರದಿಗಳನ್ನು ಪ್ರಕಟಿಸಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಗೋಮಾಳ ಜಮೀನು ಹಂಚಿಕೆಗೆ ಮಹಾಲೇಖಪಾಲರು 2018ರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಅದನ್ನು ಬದಿಗಿರಿಸಿದ್ದ ಹಿಂದಿನ ಬಿಜೆಪಿ ಸರ್ಕಾರವು ಗೋಮಾಳವನ್ನು ಮಂಜೂರು ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts