ಬೆಂಗಳೂರು; ಹಾಲಿ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಖಾರದಪುಡಿ ಮಹೇಶ್ ಎಂಬಾತನಿಂದ ಅಕ್ರಮವಾಗಿ ಸಂಭಾವನೆ ಪಡೆದ ಆರೋಪಕ್ಕೆ ಗುರಿಯಾಗಿರುವ ಕೆಎಎಸ್ ಅಧಿಕಾರಿ ಮಂಜುನಾಥ ಆರ್ ಬಳ್ಳಾರಿ ಅವರು ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳದಿದ್ದರೂ ಅವರನ್ನು ಗಣಿ, ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಸರ್ಕಾರವು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಅರೋಪದಡಿಯಲ್ಲಿ ಎಸಿಬಿ ದಾಳಿಗೆ ಒಳಗಾಗಿರುವ ಅಧಿಕಾರಿಗಳನ್ನೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ತಾಂತ್ರಿಕ ಸಲಹೆಗಾರ ಮತ್ತು ಬಿ ಎಸ್ ಪ್ರಹ್ಲಾದ್ ಎಂಬುವರನ್ನು ಬಿಬಿಎಂಪಿಯ ಮಹತ್ತರ ಹುದ್ದೆಗೆ ನೇಮಿಸಿರುವ ಬೆನ್ನಲ್ಲೇ ಇದೀಗ ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಉಪ ಕಾರ್ಯದರ್ಶಿ ಹುದ್ದೆಯಲ್ಲಿರುವ ಮಂಜುನಾಥ ಆರ್ ಬಳ್ಳಾರಿ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಮುನ್ನೆಲೆಗೆ ಬಂದಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಲೋಕಾಯುಕ್ತ ವರದಿಯನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕವಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು.
ಆದರೀಗ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಖಾರದಪುಡಿ ಮಹೇಶ್ ಎಂಬಾತನಿಂದ ಅಕ್ರಮ ಸಂಭಾವನೆ ಪಡೆದ ಗುರುತರ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸುತ್ತಿರುವ ಮಂಜುನಾಥ್ ಆರ್ ಬಳ್ಳಾರಿ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪದಡಿಯಲ್ಲಿ ನ್ಯಾಯಾಲಯದ ವಿಚಾರಣೆಗೆ ಗುರಿಯಾಗಿರುವ ಯಲ್ಲಾಪುರದ ಹಿಂದಿನ ತಹಶೀಲ್ದಾರ್ ಮಂಜುನಾಥ ಆರ್ ಬಳ್ಳಾರಿ ಅವರನ್ನೇ ಗಣಿ ಮತ್ತು ಭೂ ವಿಜ್ಞಾನ ಸಚಿವರ ಅಪ್ತ ಕಾರ್ಯದರ್ಶಿಯಾಗಿಸಿರುವುದು ಪ್ರಕರಣದ ಕುರಿತು ನಡೆಯುತ್ತಿರುವ ವಿಚಾರಣೆಯಲ್ಲಿ ಹಸ್ತಕ್ಷೇಪ ನಡೆಸಲು ದಾರಿಮಾಡಿಕೊಟ್ಟಂತಾಗಿದೆ. ಅವರ ವಿರುದ್ಧದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅಲ್ಲದೇ ಇಲಾಖೆಯ ಸಚಿವರ ಅಪ್ತ ಕಾರ್ಯದರ್ಶಿಯಾಗಿದ್ದುಕೊಂಡು ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಸಾಕ್ಷ್ಯಾಧಾರ ನಾಶಕ್ಕೂ ಕಾರಣವಾಗಬಹುದು ಎಂಬ ಅಭಿಪ್ರಾಯವು ಇಲಾಖೆಯೊಳಗಿನಿಂದಲೇ ವ್ಯಕ್ತವಾಗಿದೆ.
ಖಾರದಪುಡಿ ಮಹೇಶ್ ಎಂಬಾತನಿಂದ ಅಕ್ರಮ ಸಂಭಾವನೆ ಪಡೆದ ಆರೋಪವು ಮಂಜುನಾಥ ಆರ್ ಬಳ್ಳಾರಿ ಅವರ ಮೇಲಿದೆ. ಈ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ವರದಿಯಲ್ಲಿ ಸುದೀರ್ಘವಾಗಿ ಚರ್ಚಿಸಿತ್ತು.
ಅಲ್ಲದೇ ಇವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದೂ ಶಿಫಾರಸ್ಸು ಮಾಡಿತ್ತು. ಅದೇ ರೀತಿ ಇದೇ ವರದಿ ಆಧರಿಸಿ ಹಿರಿಯ ಐಎಎಸ್ ಅಧಿಕಾರಿ ಕೆ ಜೈರಾಜ್ ಅವರು ನೀಡಿದ್ದ ವರದಿಯಲ್ಲಿಯೂ ಮಂಜುನಾಥ್ ಆರ್ ಬಳ್ಳಾರಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಂದಾಯ ಇಲಾಖೆಗೆ ಶಿಫಾರಸ್ಸು ಮಾಡಿದ್ದರು.
ಇದೇ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ಇವರ ವಿರುದ್ಧ 12(3) ವರದಿಯನ್ನೂ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಂಜುನಾಥ ಆರ್ ಬಳ್ಳಾರಿ ಅವರು ಕೆಎಟಿ ಮೊರೆ ಹೋಗಿದ್ದರು. ಕೆಎಟಿಯಲ್ಲಿ ಮಂಜುನಾಥ ಆರ್ ಬಳ್ಳಾರಿ ಸೇರಿ ಹಲವರಿಗೆ ತಡೆಯಾಜ್ಞೆ ದೊರೆತಿತ್ತು. ಕೆಎಟಿ ಆದೇಶವನ್ನು ಪ್ರಶ್ನಿಸಿದ್ದ ಲೋಕಾಯುಕ್ತ ಸಂಸ್ಥೆಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪ ಸಂಬಂಧ ಸರ್ಕಾರದ ವಿವಿಧ ಶ್ರೇಣಿಯ ಒಟ್ಟು 617 ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.
ಕೆಎಟಿ ತೀರ್ಪು ರದ್ದುಪಡಿಸುವಂತೆ ಕೋರಿ ಕರ್ನಾಟಕ ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೆಚ್ ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಶ್ರೀನಿವಾಸ್ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿ ತಡೆ ನೀಡಿತ್ತು
ಪ್ರಕರಣವೇನು?
ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಿಸಿದ ಪ್ಕರರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಖಾರದಪುಡಿ ಮಹೇಶ್ ಪ್ರಮುಖ ಆರೋಪೊಇಯಾಗಿದ್ದರು. ಮಹೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಒಂದು ಪೆನ್ ಡ್ರೈವ್ ದೊರೆತಿತ್ತು. ಅದರಲ್ಲಿ ಇಲಾಖಾ ವೆಚ್ಚ ಎಂಬ ಹಸರಿನ ಪೋಲ್ಡರ್‌ನಲ್ಲಿ ಸರ್ಕಾರದ ವಿವಿಧ ಶ್ರೇಣಿಗಳ 617 ಅಧಿಕಾರಿಗಳೀಗೆ ನೀಡಲಾಗಿದೆ ಎನ್ನಲಾಧ ಒಟ್ಟು 2.46 ಕೋಟಿ ಲಂಚದ ಬಗಗೆ ಮಾಹಿತಿ ಲಭ್ಯವಾಗಿತ್ತು.
ತನಿಖೆ ಪೂರ್ಣಗೊಳಿಸಿದ ನಂತರ ಈ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ವರದಿ ಪರಿಶೀಲಿಸಿದ್ದ ರಾಜ್ಯ ಸರ್ಕಾರವು ಪೆನ್ ಡ್ರೈವ್‌ನಲ್ಲಿ ಹೆಸರಿಸಿದ್ದ ಎಲ್ಲ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಸೂಚಿಸಿ 2013ರ ಸೆ.6ರಂದು ಆದೇಶಿಸಿತ್ತು. ಇದರ ಅನುಸಾರ ತನಿಖೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿಗಳು ಹಲವು ಅರ್ಧಿಕಾಕರಿಗಳ ಮೇಲೆ ಆರೋಪಗಳನ್ನು ಹೊರಿಸಿದ್ದರು.
ಇದನ್ನು ಪ್ರಶ್ನಿಸಿ ಅಂದಿನ ಯಲ್ಲಾಪುರ ತಾಲೂಈಕಿನ ತಹಶೀಲ್ದಾರ್ ಮಂಜುನಾಥ ಆರ್ ಬಳ್ಳಾರಿ ಮತ್ತಿತರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಕೆಎಟಿಯು ರಾಜ್ಯ ಸರ್ಕಾರವು ಪ್ರಕರಣದ ಕುರಿತು ಪ್ರಾಥಮಿಕ ದಾಖಲೆಗಳ ಸಂಗ್ರಹ ಮಾಡಲು ಮೊದಲು ಇಲಾಖಾ ತನಿಖೆ ನಡೆಸಬೇಕಿತ್ತು. ಆರೋಪಿತ ಅಧಿಕಾರಿಗೀಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿ ಅವರ ಹೇಳಿಕೆಗಳನ್ನು ಪಡೆಯಬೇಕಿತ್ತು. ಆದರೆ ಈ ಪ್ರಕರಣಖದಲ್ಲಿ ಏಕಾಏಕಿ ಲೋಕಾಯುಕ್ತರ ತನಿಖೆಗೆ ಆದೇಶಿಸಿಲಾಗಿದೆ. ಇದುಇ ಸಹಜ ನ್ಯಾಯದ ಉಲ್ಲಂಘನೆ ಎಂಬ ಅಭಿಪ್ರಾಯದೊಂದಿಗೆ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಸ್ತುತ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿರುವ ಮಂಜುನಾಥ ಆರ್ ಬಳ್ಳಾರಿ ಮತ್ತಿತರರ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಹೀಗಿದ್ದರೂ ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಮಂಜುನಾಥ ಆರ್ ಬಳ್ಳಾರಿ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.
ಅದೇ ರೀತಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇರೆಗೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಕೆ ಟಿ ನಾಗರಾಜ ಅವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು.
ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ
ಇದನ್ನು ಬಿಜೆಪಿ ಪಕ್ಷವು ತರಾಟೆಗೆ ತೆಗೆದುಕೊಂಡಿತ್ತು. ಭ್ರಷ್ಟರು ಬೇಕಾಗಿದ್ದಾರೆ..! #ATMSarkara ದ ಖಜಾನೆ ತುಂಬಿಸಲು ಕಾಂಗ್ರೆಸ್ ಪಕ್ಷಕ್ಕೆ ಬೇಕು ಭ್ರಷ್ಟರು. ಆದಾಯಕ್ಕಿಂತ 200 ಪಟ್ಟು ಆಸ್ತಿ ಗಳಿಕೆ ಮಾಡಿ ಎಸಿಬಿ ದಾಳಿಗೆ ಒಳಗಾದ ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್ @DKShivakumar ಅವರಿಗೆ ತಾಂತ್ರಿಕ ಸಲಹೆಗಾರ. ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟರ ಕೂಟ ಎಂದು ಟ್ವೀಟ್ ಮಾಡಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.