ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿಪ್ರಮಾಣ ಪತ್ರ; ವಿಚಾರಣೆಗೆ ಕೈಗೆತ್ತಿಕೊಂಡ ಎಸ್ಸಿಎಸ್ಟಿ ಸಮಿತಿ

photo credit;deccanhearald

ಬೆಂಗಳೂರು; ಮೀಸಲಾತಿ ದುರುಪಯೋಗಪಡಿಸಿಕೊಂಡು ಬೇಡ ಜಂಗಮ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳನ್ನು ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿರುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ವಿಚಾರಣೆಗೆ ಇದೀಗ ಕೈಗೆತ್ತಿಕೊಂಡಿದೆ.

 

ಇದೇ 20ರಂದು ನಡೆಯಲಿರುವ ಸಭೆಗೆ ಸಮಗ್ರ ವಿವರಗಳನ್ನು ನೀಡಬೇಕು ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಏಪ್ರಿಲ್‌ 12ರಂದು ನಿರ್ದೇಶನ ನೀಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ

 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಪುತ್ರಿ ಎಂ ಆರ್‌ ಚೇತನ ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದುಕೊಂಡಿರುವ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೇಡ ಜಂಗಮ ಮತ್ತು ಬುಡಗ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವ ಪ್ರಕರಣಗಳ ಕುರಿತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

 

ಬೇಡ ಜಂಗ, ಬುಡಗ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಿತಿಯು ಚರ್ಚಿಸಲಿದೆ. ಈ ಸಂಬಂಧ ಪ್ರಶ್ನಾವಳಿಗಳನ್ನೂ ಸಂಬಂಧಿಸಿದ ಇಲಾಖೆ ಮತ್ತು ಪ್ರಾಧಿಕಾರಗಳಿಗೆ ನೀಡಿದೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಪ್ರಶ್ನಾವಳಿಗಳು ಇಲ್ಲಿವೆ

 

ಬೇಡ ಜಂಗಮ ಹಾಗೂ ಬುಡಗ ಕುಲಶಾಸ್ತ್ರದ ಪ್ರಕಾರ ಈ ಸಮುದಾಯದ ಗುಣಲಕ್ಷಣಗಳೇನು ಹಾಗೂ ಈ ಸಮುದಾಯದ ಆಹಾರ ಪದ್ಧತಿ, ಕುಲಕಸುಬು, ಜೀವನ ಶೈಲಿ ಯಾವುದಾಗಿರುತ್ತದೆ

 

ಬೇಡ ಜಂಗಮ, ಬುಡಗ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಪ್ರಕರಣಗಳ ಸಂಖ್ಯೆ ಎಷ್ಟು?

 

ರಾಜ್ಯದಲ್ಲಿರುವ ಬೇಡ ಜಂಗಮ ಹಾಗೂ ಬುಡಗ ಜನಾಂಗದ ಜನ ಸಂಖ್ಯೆ ಎಷ್ಟು?

 

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಹಾಗೂ ನೀಡಲು ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳೇನು?

 

 

ಈವರೆಗೆ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗಿದೆ, ವಿವರ ನೀಡುವುದು

 

ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಸರ್ಕಾರಿ ಹುದ್ದೆಗಳನ್ನು ಪಡೆದಿರುವ ಅಧಿಕಾರಿ/ನೌಕರರನ್ನು ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆಯೇ ಹಾಗೂ ಪ್ರಮಾಣಪತ್ರಗಳನ್ನು ಹಿಂಪಡೆಯಲಾಗಿದೆಯೇ?

 

ಈ ಪ್ರಶ್ನಾವಳಿಗೆ 2022ರ ಏಪ್ರಿಲ್‌ 18ರೊಳಗೆ ಉತ್ತರ ಒದಗಿಸಬೇಕು ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.

 

ಮಾಜಿ ಸಚಿವ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುತ್ರಿ ಎಂ.ಆರ್‌. ಚೇತನ ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದುಕೊಂಡಿದ್ದನ್ನು ಸ್ವತಃ ರೇಣುಕಾಚಾರ್ಯರೇ ಒಪ್ಪಿಕೊಂಡಿದ್ದರು.

 

ಎಂ.ಪಿ.ರೇಣುಕಾಚಾರ್ಯ ಲಿಂಗಾಯಿತರು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ’ಲಿಂಗಾಯಿತ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ, ಅವರ ಪುತ್ರಿ ಎಂ.ಆರ್‌. ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರ ನ.17ರಂದು ಬೆಂಗಳೂರಿನ ಉತ್ತರ ತಾಲೂಕು ತಹಸೀಲ್ದಾರ್‌ ಅವರಿಂದ ಪಡೆದಿದ್ದಾರೆ. ಆ ಜಾತಿ ಪ್ರಮಾಣಪತ್ರವನ್ನು ಯಾರೂ ಪ್ರಶ್ನಿಸಿಲ್ಲ. ಅದನ್ನು ಜಿಲ್ಲಾಧಿಕಾರಿಗಳು ಸರಿ ಇದೆಯೇ ಇಲ್ಲವೇ ಎಂದು ಪರಿಶೀಲನೆಯನ್ನೂ ನಡೆಸಿಲ್ಲ ಎಂಬ ಆರೋಪದ ಕುರಿತು ವಿಧಾನಮಂಡಲದ ಅಧಿವೇಶದನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

 

ಹಿಂದೂ ಲಿಂಗಾಯತ, ಹಿಂದೂ ಜಂಗಮ, ಹಿಂದೂ ರಜಪೂತ್ ಸಮುದಾಯಕ್ಕೆ ಸೇರಿದ ಕೆಲವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬೇಡ ಜಂಗಮ, ಭೋವಿ ಹಾಗೂ ಮಾಲಾ ಜಂಗಮ ಪದಗಳನ್ನು ದುರುಪಯೋಗ ಪಡೆಸಿಕೊಂಡು, ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆಯುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಗಂಭೀರವಾಗಿ ಪರಿಗಣಿಸಿಲ್ಲ.

 

ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ಮೇಲ್ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಪಿ. ರಾಜೀವ್‍ ಅವರು ಸದನದಲ್ಲಿ ಆರೋಪಿಸಿದ್ದರು. ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳಿದ್ದು, ಅದರಲ್ಲಿ ಬೇಡ ಜಂಗಮ ಒಂದು ಸಮುದಾಯ. ಆದರೆ, ರಾಜ್ಯದಲ್ಲಿ ಮೇಲ್ಜಾತಿಯವರು ಬೇಡ ಜಂಗಮ ಜಾತಿಪ್ರಮಾಣ ಪತ್ರವನ್ನು ಪಡೆಯುವ ಮೂಲಕ ನಿಜವಾದ ಬೇಡ ಜಂಗಮರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts