Friday | June 12, 2026 |

‘ದಿ ಫೈಲ್‌’ ವರದಿ ಪರಿಣಾಮ; ಅರಸು ಸಂಶೋಧನೆ ಸಂಸ್ಥೆ ಮುಚ್ಚುವ ನಿರ್ಣಯಕ್ಕೆ ವಿರೋಧ

ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರವು ಡಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ನಿರ್ಣಯ ಕೈಗೊಂಡಿದ್ದನ್ನು ‘ದಿ ಫೈಲ್‌’ ಬಹಿರಂಗಗೊಳಿಸುತ್ತಿದ್ದಂತೆ ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿರುವ ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರು ಬಿಜೆಪಿ ಮುಖಂಡರನ್ನು ಕುಟುಕಿದ್ದಾರೆ. ಮತ್ತೋರ್ವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಅವರಿಗೆ ಪತ್ರ ಬರೆದಿದ್ದಾರೆ.

‘ಸಾಮಾಜಿಕ ನ್ಯಾಯಕ್ಕೆ ಪೂರಕವಾದ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಿದರೆ ಆರ್‌ಎಸ್‌ಎಸ್‌ನಲ್ಲಿ ನಿಮಗೆ ಯಾವ ಬಹುಮಾನ ಕೊಡುತ್ತಾರೆ,’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಎಚ್‌ ಸಿ ಮಹದೇವಪ್ಪ ಅವರು ‘ ನಿಮ್ಮ ಕೆಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ನೋಡುತ್ತಿದ್ದರೆ ನಿಮಗೆ ಆಡಳಿತ ನಡೆಸಲು ಬರುವುದಿಲ್ಲ. ನಿಮ್ಮ ಹುಚ್ಚು ನಿರ್ಧಾರದಿಂದ ಹಿಂದುಳಿದ ವರ್ಗದ ಜನರ ಹಿತವನ್ನು ಬಲಿ ಕೊಡುವ ಬದಲು ರಾಜೀನಾಮೆ ನೀಡಿ ಹೊರಟುಬಿಡಿ,’ ಎಂದು ಟ್ವೀಟ್‌ ಮಾಡಿದ್ದಾರೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿಶಾ ಶರ್ಮ ಅವರ ಅಧ್ಯಕ್ಷತೆಯಲ್ಲಿ 2021ರ ಅಕ್ಟೋಬರ್‌ 8ರಂದು ನಡೆದಿದ್ದ ಸಭೆಯಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಕುರಿತು ‘ದಿ ಫೈಲ್‌’ 2021ರ ಅಕ್ಟೋಬರ್‌ 29ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಚ್ಚಲು ನಿರ್ಣಯ; ನೂರು ದಿನದ ಕೊಡುಗೆಯೇ?

ಅದೇ ರೀತಿ ‘ಹಿಂದುಳಿದ ವರ್ಗಗಳಲ್ಲಿರುವ ಅಲೆಮಾರಿಗಳು, ಅರೆ ಅಲೆಮಾರಿಗಳು ಹಾಗೂ ಅತೀ ಹಿಂದುಳಿದ ಸಮುದಾಯಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತಹ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಖಂಡನೀಯ,’ ಎಂದೂ ಟ್ವೀಟ್‌ ಮಾಡಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು 2021ರ ನವೆಂಬರ್‌ 5ರಂದು ಪತ್ರ ಬರೆದಿದ್ದಾರೆ. ‘ಹಿಂದುಳಿದ ಜನಾಂಗಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಇಂತಹ ಸಂಸ್ಥೆಯನ್ನು ಮುಚ್ಚುವುದರಿಂದ ಅತ್ಯಂತ ಹಿಂದುಳಿದ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಮತ್ತು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಅಧ್ಯಯನದ ಮೇಲೆ ಪರಿಣಾಮ ಬೀರಲಿದೆ. ಸಮುದಾಯಗಳು ಸಬಲೀಕರಣಗೊಳ್ಳದೆ ಹಿಂದುಳಿಯಲು ಸರ್ಕಾರವೇ ನೇರ ಕಾರಣವಾಗಲಿದೆ,’ ಎಂದು ಎಚ್ಚರಿಸಿದ್ದಾರೆ.

ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸುವ ನಿರ್ಧಾರವನ್ನು ಕೈಬಿಟ್ಟು ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಸ್ಥೆಯನ್ನು ಬಳಸಿಕೊಂಡು ಹಿಂದುಳಿದ ವರ್ಗದ ಮಹಿಳೆಯರ ಅರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನ, ಶೈಕ್ಷಣಿಕ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದರ ಮೂಲಕ ನೂತನ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅದೇ ರೀತಿ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಕೂಡ ಸರ್ಕಾರದ ನಿರ್ಣಯವನ್ನು ಖಂಡಿಸಿದ್ದಾರೆ. ಈ ಕುರಿತು 2021ರ ನವೆಂಬರ್‌ 6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

‘ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡುವ ಮೂಲಕ ತಮ್ಮ ಸರ್ಕಾರ ರಾಜ್ಯದ ಹಿಂದುಳಿದ ವರ್ಗಗಳ ವಿರುದ್ಧವೆಂಬ ಸಂದೇಶವನ್ನು ಕೊಡಲು ಹೊರಟಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವ ಈ ಸಂಸ್ಥೆಯನ್ನು ಮುಚ್ಚುವ ಹುನ್ನಾರದಲ್ಲಿ ಶೋಷಿತ ವರ್ಗಗಳನ್ನು ಮತ್ತಷ್ಟು ಅವನತಿಗೆ ತಳ್ಳುವ ದುರುದ್ಧೇಶವಿದೆ,’ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡಿರುವ ಅಭಿವೃದ್ಧಿ ಆಯುಕ್ತರ ತೀರ್ಮಾನವನ್ನು ಹಿಂದಕ್ಕೆ ಪಡೆದು ಇಂತಹ ತಪ್ಪು ತೀರ್ಮಾನಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಸಂಸ್ಥೆಯನ್ನು ಮುಚ್ಚುವ ಯಾವುದೇ ಕ್ರಮ ರಾಜ್ಯದ ಹಿಂದುಳಿದ ವರ್ಗಗಳ ವಿರೋಧಿ ನೀತಿಯಾಗಿದೆ. ರಾಜಕೀಯ ಕಾರಣಗಳಿಗಾಗಿ ಅಥವಾ ಅಧಿಕಾರಿಗಳ ತಪ್ಪಿಗಾಗಿ ದೇವರಾಜ ಅರಸರ ಹೆಸರಿಗೆ ಕಳಂಕ ತರದೇ ಸಂಶೋಧನಾ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು,’ ಎಂದು ಪತ್ರದಲ್ಲಿ ರಮೇಶ್‌ಬಾಬು ಅವರು ಕೋರಿದ್ದಾರೆ.

ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ 2019-20 ಮತ್ತು 2020-21ನೇ ಸಾಲಿನಲ್ಲಿ ಯೋಜನಾ ಕಾರ್ಯಕ್ರಮಗಳಿಗೆ ತಲಾ 25.00 ಲಕ್ಷ ರು ಗಳನ್ನು ಬಿಡುಗಡೆ ಮಾಡಲಾಗಿತ್ತು. ಒಟ್ಟು 23.83 ಲಕ್ಷ ರು.ಗಳ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿದ್ದ ಯೋಜನಾ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸುತ್ತಿರುವ ಹೊಸ್ತಿಲಲ್ಲೇ ದೇವರಾಜ ಅರಸು ಸಂಶೋಧನೆ ಸಂಸ್ಥೆಯನ್ನು ಮುಕ್ತಾಯಗೊಳಿಸಲು ಸಭೆಯು ಕೈಗೊಂಡ ನಿರ್ಣಯವು ಮುನ್ನೆಲೆಗೆ ಬಂದಿದೆ. ಅಲ್ಲದೆ ಈ ನಿರ್ಣಯವು ಹಿಂದುಳಿದ ವರ್ಗಗಳಿಂದ ಟೀಕೆಗೆ ಗುರಿಯಾಗಿದೆ.

Hot this week

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...
Please Scan to make Your Contribution

Topics

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

Related Articles

Popular Categories

error: Content is protected !!