ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಚ್ಚಲು ನಿರ್ಣಯ; ನೂರು ದಿನದ ಕೊಡುಗೆಯೇ?

ಬೆಂಗಳೂರು; ಸಾಮಾಜಿಕ ನ್ಯಾಯದ ಹರಿಕಾರ ಡಿ ದೇವರಾಜ ಅರಸು ಅವರ ಹೆಸರಿನಲ್ಲಿ 29 ವರ್ಷಗಳ ಹಿಂದೆಯೇ ಸ್ಥಾಪನೆಯಾಗಿರುವ ದೇವರಾಜ ಅರಸು ಸಂಶೋಧನಾ ಸಂಸ್ಥೆ ಮತ್ತು 2 ವರ್ಷದ ಹಿಂದೆ ಆರಂಭವಾಗಿದ್ದ ಆರ್ಯ ವೈಶ್ಯ ನಿಗಮ ಮಂಡಳಿಯನ್ನು ಮುಚ್ಚಲು ರಾಜ್ಯ ಬಿಜೆಪಿ ಸರ್ಕಾರವು ಮುಂದಾಗಿದೆ.

2021ರ ಸೆಪ್ಟಂಬರ್‌ 29ರಿಂದ ಅಕ್ಟೋಬರ್‌ 12ರವರೆಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸುತ್ತಿರುವ ಹೊಸ್ತಿಲಲ್ಲೇ ದೇವರಾಜ ಅರಸು ಸಂಶೋಧನೆ ಸಂಸ್ಥೆಯನ್ನು ಮುಕ್ತಾಯಗೊಳಿಸಲು ಸಭೆಯು ಕೈಗೊಂಡ ನಿರ್ಣಯವು ಮುನ್ನೆಲೆಗೆ ಬಂದಿದೆ. ಅಲ್ಲದೆ ಈ ನಿರ್ಣಯವು ಹಿಂದುಳಿದ ವರ್ಗಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳು ಮತ್ತು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಮಂಡಿಸಿರುವ ಪ್ರಸ್ತಾವನೆಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಕ್ತಾಯಗೊಳಿಸಲು ಕೈಗೊಂಡಿರುವ ನಿರ್ಣಯವು ಅತ್ಯಂತ ಹಿಂದುಳಿದ ಸಮುದಾಯಗಳ ಕುಲ ಶಾಸ್ತ್ರೀಯ ಅಧ್ಯಯನ, ಅತ್ಯಂತ ಹಿಂದುಳಿದ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಅಧ್ಯಯನದ ಮೇಲೂ ಪರಿಣಾಮ ಬೀರಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ದೇವರಾಜ ಅರಸು ಸಂಶೋಧನೆ ಸಂಸ್ಥೆ ಮತ್ತು ಆರ್ಯ ವೈಶ್ಯ ನಿಗಮ ಮಂಡಳಿಯನ್ನು ಮುಕ್ತಾಯಗೊಳಿಸುವ ಕುರಿತಾದ ವಿಷಯವು ಮೊದಲನೇ ಕಾರ್ಯಸೂಚಿಯಾಗಿರುವುದು ತಿಳಿದು ಬಂದಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಅವರ ಗಮನಕ್ಕೆ ತರಲಾಗಿದೆ ಎಂದು ಗೊತ್ತಾಗಿದೆ.

ಈ ಸಭೆಯಲ್ಲಿ ಒಟ್ಟು 4 ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇಲಾಖೆಯು 12 ನಿಗಮಗಳನ್ನು ಹೊಂದಿದ್ದು, ಎಲ್ಲಾ 12 ನಿಗಮಗಳನ್ನು ಉಳಿಸಿಕೊಳ್ಳುವುದು, ವಿಶ್ವ ಕರ್ಮ ಶಿಲ್ಪಕಲಾ ಸಂಸ್ಥೆಯನ್ನು ವಿಶ್ವ ಕರ್ಮ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸುವುದು, ನಿರ್ವಹಣೆಗೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳನ್ನು ನಿರ್ಮಾಣದ ಲೆಕ್ಕ ಶೀರ್ಷಿಕೆಯೊಂದಿಗೆ ವಿಲೀನಗೊಳಿಸಲು ನಿರ್ಣಯ ಕೈಗೊಂಡಿರುವುದು ಗೊತ್ತಾಗಿದೆ.

ದೇವರಾಜ ಅರಸು ಸಂಶೋಧನೆ ಸಂಸ್ಥೆ ಮತ್ತು ಆರ್ಯ ವೈಶ್ಯ ನಿಗಮ ಮಂಡಳಿಯನ್ನು ಯಾವ ಕಾರಣಗಳಿಗಾಗಿ ಮುಕ್ತಾಯಗೊಳಿಸಲಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಸೂಕ್ತ ಸಮರ್ಥನೆ ನೀಡಿಲ್ಲ ಎಂದು ತಿಳಿದು ಬಂದಿದೆ.

2021-22ನೇ ಸಾಲಿನಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಮಾನವಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳ ಕುಲ ಶಾಸ್ತ್ರೀಯ ಅಧ್ಯಯನ, ಅತ್ಯಂತ ಹಿಂದುಳಿದ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಸಾಕ್ಷ್ಯ ಚಿತ್ರ, ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಪ್ರಚಲಿತ ಸಮಸ್ಯೆ ಕುರಿತು ವಿಚಾರಗೋಷ್ಠಿ, ಅತೀ ಹಿಂದುಳಿದ ಸಮುದಾಯಗಳ ಕುಲಕಸುಬುಗಳ ಪುನಶ್ಚೇತನಕ್ಕಾಗಿ ತರಬೇತಿ ಕಾರ್ಯಾಗಾರವನ್ನು ದೇವರಾಜ ಅರಸು ಸಂಶೋಧನೆ ಸಂಸ್ತಗೆ ಹಮ್ಮಿಕೊಂಡಿದೆ.

ಹಿಂದುಳಿದ ವರ್ಗಗಳ ಅಧ್ಯಯನ ಮತ್ತು ಈ ವರ್ಗಗಳಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಕಾರ್ಯಾಗಾರ, ಸಮೀಕ್ಷೆ ಹಾಗೂ ಮೌಲ್ಯಮಾಪನ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳ ತುಲನಾತ್ಮಕ ಅಧ್ಯಯನ ನಡೆಸುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಈ ಸಂಸ್ಥೆಯು 1993ರ ಆಗಸ್ಟ್‌ 20ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲೆಕ್ಕ ಶೀರ್ಷಿಕೆ: 2225-03-277-2-08 ರಡಿಯ ಆಯವ್ಯಯದಲ್ಲಿ 2005-06 ರಿಂದ ಹಣಕಾಸಿನ ವ್ಯವಸ್ಥೆ ಒದಗಿಸಲಾಗುತ್ತಿದೆ.

ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ 2019-20 ಮತ್ತು 2020-21ನೇ ಸಾಲಿನಲ್ಲಿ ಯೋಜನಾ ಕಾರ್ಯಕ್ರಮಗಳಿಗೆ ತಲಾ 25.00 ಲಕ್ಷ ರು ಗಳನ್ನು ಬಿಡುಗಡೆ ಮಾಡಲಾಗಿತ್ತು. ಒಟ್ಟು 23.83 ಲಕ್ಷ ರು.ಗಳ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿದ್ದ ಯೋಜನಾ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗಿದೆ.

ಅತಿ ಹಿಂದುಳಿದ ಜನಾಂಗವಾದ ಕಮ್ಮಾರ ಜನಾಂಗದ ಸಮಗ್ರ ಸ್ಥಿತಿ-ಗಿತಗಳ ಕುರಿತು ವಿಚಾರ ಸಂಕಿರಣ, ಅತಿ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಪಿಚಗುಂಟಲ, ಕಿಲ್ಲಿ ಕ್ಯಾತ ಜನಾಂಗಗಳ ಸಮಗ್ರ ಸ್ಥಿತಿಗತಿ ಕುರಿತು ಸಾಕ್ಷ್ಯ ಚಿತ್ರ, ಅತೀ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಕಾರ್ಯಕ್ರಮ, ಅತಿ ಹಿಂದುಳಿದ ಅರೆ ಅಲೆಮಾರಿ, ಅಲೆಮಾರಿ ಜನಾಂಗಗಳಲ್ಲಿನ ಸಾಮಾಜಿಕ ದುಷ್ಟಪದ್ಧತಿ, ಮೂಢ ನಂಬಿಕೆಗಳ ವಿರುದ್ಧ ಜಾಗೃತಿ, ಎಲ್‌ ಜಿ ಹಾವನೂರು ಆಯೋಗದ ಶಿಫಾರಸ್ಸುಗಳ ಪರಿಣಾಮಗಳ ಕುರಿತು ವಿಚಾರ ಸಂಕಿರಣ ನಡೆಸಲಾಗಿತ್ತು.

ಹಾಗೆಯೇ ಅಲೆಮಾರಿ, ಅರೆ ಅಲೆಮಾರಿ ಕೋಶ, ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಾದ ಬುಡಬುಡಕಿ, ಜೋಷಿ, ಗೋಂದಲಿ, ಚಾರ, ಸಾನ್ಸಿಯ (ಕಂಜರಭಾಟ್‌) ಡವೇರಿ, ಫಿಸಾಡಿ, ಗೋಪಾಲ, ಗೊಲ್ಲ, ಸಿಕ್ಕಲಿಗಾರ, ದರ್ವೇಸ್‌, ದೊಂಬಿದಾಸ, ಬೈಲ ಪತ್ತಾರ್‌ ಸಮುದಾಯಗಳ ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿದೆ.

“ಗೌಳಿ” ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮತ್ತು “ಹಾಲಕ್ಕಿ ವಕ್ಕಲ್” ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಹಾಗೂ ಕಾರ್ಯಾಗಾರವನ್ನು ನಡೆಸಿದೆ. ಹಂಪಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬುಂಡೇ ಬೆಸ್ತರು, ಗೊಂದಲಿಗರು, ಹೆಳವರು ಹಾಗೂ ಸಿಕ್ಕಲಿಗರು ಈ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರ ಅಧ್ಯಯನ ನಡೆಸಿದೆ.

ಅಲೆಮಾರಿ ಮತ್ತು ಅರೆ ಅಲೆಮಾರಿ ಹಾಗೂ ಬುಡಕಟ್ಟು ಜನಾಂಗಗಳ ಸಮಸ್ಯೆಗಳ ಕುರಿತಂತೆ ವಿಶೇಷ ಅಧ್ಯಯನ, ಸಂಶೋಧನೆ ಕೈಗೊಳ್ಳುವುದು ಹಾಗೂ ಪರಿಹಾರವನ್ನು ಸೂಚಿಸುವುದು. ಅಲೆಮಾರಿ ಮತ್ತು ಅರೆಅಲೆಮಾರಿ ಹಾಗೂ ಬುಡಕಟ್ಟು ಜನಾಂಗಗಳ ವೃತ್ತಿ-ಪ್ರವೃತ್ತಿ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯದ ಕುರಿತಂತೆ ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ಹಾಗೂ ಸಮ್ಮೇಳನಗಳನ್ನು ಈ ಸಂಶೋಧನೆ ಸಂಸ್ಥೆ ಮೂಲಕ ಏರ್ಪಡಿಸುತ್ತಿದೆ.

ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನ ಮತ್ತು ಶೈಕ್ಷಣಿಕ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ಹಾಗೂ ಪರಿಹಾರಗಳನ್ನು ಸೂಚಿಸುವ ಶಿಫಾರಸ್ಸುಗಳನ್ನು ಮಾಡುತ್ತಿದೆ. ಹಾಗೆಯೇ ಅಧ್ಯಯನ/ಸಂಶೋಧನಾ ವರದಿಗಳನ್ನು ದಾಖಲಿಸುವುದು ಮತ್ತು ಪ್ರಕಟಣೆ ಮಾಡುವುದು, ಸಾಕ್ಷ್ಯ ಚಿತ್ರಗಳ ನಿರ್ಮಾಣ, ಹಿಂದುಳಿದ ವರ್ಗಗಳ ಅಧ್ಯಯನಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ ನಡೆಸುತ್ತಿದೆ.

ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭ, ಹಿಂದುಳಿದ ವರ್ಗಗಳ ಕುರಿತು ಕೈಗೊಳ್ಳುವಂತಹ ಸಂಶೋಧನಾ ಕಾರ್ಯ ನಡೆಸುವ ಉದ್ದೇಶ ಹೊಂದಿದೆ. ಸಂಸ್ಕೃತಿ ಮತ್ತು ನಾಗರೀಕತೆಗೆ ಸಂಬಂಧಿಸಿದಂತೆ ಲಭ್ಯವಾಗುವ ವಸ್ತುಗಳ ಪ್ರದರ್ಶನಕ್ಕೆ ಡಿ ದೇವರಾಜ ಅರಸುರವರ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸುವ ಉದ್ದೇಶವನ್ನೂ ಹೊಂದಿದೆ ಎಂಬ ವಿಚಾರ ಸಂಸ್ಥೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

ಅದೇ ರೀತಿ ಆರ್ಯ ವೈಶ್ಯ ಸಮುದಾಯದವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಹಾಗೂ ಈ ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ-ಸೌಲಭ್ಯವನ್ನು ಅರ್ಯ ವೈಶ್ಯ ನಿಗಮವು ಒದಗಿಸುತ್ತಿದೆ.

the fil favicon

SUPPORT THE FILE

Latest News

Related Posts