Thursday | October 1, 2026 |

ಮಾಸಿಕ ಬಿಲ್‌ಗಳು ಸೃಷ್ಟಿಯಾಗಿಲ್ಲ, ಅನಧಿಕೃತ ಸಬ್ಸಿಡಿ ಪಾವತಿ, ಯೂನಿಟ್‌ಗಳ ಲೆಕ್ಕಾಚಾರ, ಭೌತಿಕ ಬಿಲ್‌ಗಳ ದತ್ತಾಂಶದಲ್ಲೂ ವ್ಯತ್ಯಾಸ; ಗೃಹಜ್ಯೋತಿ ಲೋಪಗಳ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ಅನರ್ಹ ಗ್ರಾಹಕರಿಗೂ ಗೃಹ ಜ್ಯೋತಿ ಸಬ್ಸಿಡಿ ವಿಸ್ತರಣೆ ಮಾಡಿರುವುದು, ಮಾಸಿಕ ಬಿಲ್‌ಗಳನ್ನು ತಯಾರಿಸದೇ ಇರುವುದು, ಒಟ್ಟು ವಿದ್ಯುತ್ ಬಳಕೆ ಯೂನಿಟ್‌ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳನ್ನು ಪ್ರಧಾನ ಮಹಾಲೇಖಪಾಲರು ಮತ್ತು ಮಹಾಲೆಕ್ಕ ಪರಿಶೋಧಕರು ಪ್ರಾಯೋಗಿಕ ಅಧ್ಯಯನ ಮೂಲಕ ಪತ್ತೆ ಹಚ್ಚಿದ್ದಾರೆ.

ಅಲ್ಲದೇ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಲೆಕ್ಕ ಪರಿಶೋಧನೆ ನಡೆಸಲು ಮುಂದಾಗಿದ್ದ ಸಿಎಜಿಗೂ ಇಂಧನ ಇಲಾಖೆಯು ಹಲವು ನಿರ್ಬಂಧಗಳನ್ನು ಒಡ್ಡಿತ್ತು. ಅಲ್ಲದೇ ಎಸ್ಕಾಂಗಳಿಂದ ದತ್ತಾಂಶಗಳನ್ನೂ ಸಹ ನಿಗದಿತ ಅವಧಿಯೊಳಗೆ ನೀಡಿರಲಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಗೃಹ ಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪಗಳು ಮತ್ತು ಫಲಾನುಭವಿಗಳ ಪೈಕಿ ಮೃತರಿಗೂ 220 ಕೋಟಿಗೂ ಹೆಚ್ಚು ಹಣ ಪಾವತಿಯಾಗಿರುವುದನ್ನು ಪತ್ತೆ ಹಚ್ಚಿದ್ದರ ನಡುವೆಯೇ ಇದೀಗ ಗೃಹ ಜ್ಯೋತಿಯ ಪ್ರಾಯೋಗಿಕ ಲೆಕ್ಕ ಪರಿಶೋಧನೆಯ ವರದಿಯೂ ಸಹ ಮುನ್ನೆಲೆಗೆ ಬಂದಿದೆ. ಅಲ್ಲದೇ ಗೃಹ ಜ್ಯೋತಿ ಯೋಜನೆಯಲ್ಲಿ ಯಾವುದೇ ಲೋಪಗಳು ನಡೆದಿಲ್ಲ ಎಂದು  ಸಚಿವ ಕೆ ಜೆ ಜಾರ್ಜ್‌ ಅವರು  ಈಚೆಗಷ್ಟೇ  ಹೇಳಿಕೆ ನೀಡಿದ್ದರ ಬೆನ್ನಲ್ಲೇ ಸಿಎಜಿಯ ವರದಿಯು ಚರ್ಚೆಗೆ ಗ್ರಾಸವಾಗಿದೆ.

ಸಿಎಜಿಯು ನೀಡಿರುವ ಈ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಪ್ರಾಯೋಗಿಕ ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದ ಪ್ರಾಥಮಿಕ ಅಂಶಗಳೇನು?

ಗೃಹ ಬಳಕೆ ವಿದ್ಯುತ್ ದರದಿಂದ ವಾಣಿಜ್ಯ ವಿದ್ಯುತ್ ದರಕ್ಕೆ ಬದಲಾದ ನಂತರವೂ ಅನರ್ಹ ಗ್ರಾಹಕರಿಗೆ ಗೃಹಜ್ಯೋತಿ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ. ಈ ಮೂಲಕ ಅನರ್ಹ ಗ್ರಾಹಕರಿಗೂ ಗೃಹಜ್ಯೋತಿ ಸಬ್ಸಿಡಿ ವಿಸ್ತರಣೆ ಮಾಡಲಾಗಿದೆ ಎಂದು ಸಿಎಜಿಯ  ಪ್ರಾಯೋಗಿಕ ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

ಮಾಸಿಕ ಬಿಲ್‌ಗಳ ಸೃಷ್ಟಿಯಾಗಿಲ್ಲ

ಗೃಹಜ್ಯೋತಿ ಯೋಜನೆಯ ಕಾರ್ಯಾಚರಣಾ ಮಾರ್ಗಸೂಚಿಗಳ ಪ್ರಕಾರ, ವಾಸ್ತವಿಕ ಮಾಸಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಸಬ್ಸಿಡಿಗೆ ಅರ್ಹತೆಯನ್ನು ನಿರ್ಧರಿಸಲು ಪ್ರತಿ ತಿಂಗಳು ಮೀಟರ್ ರೀಡಿಂಗ್ ಮತ್ತು ಬಿಲ್ಲಿಂಗ್ ಮಾಡುವುದು ಕಡ್ಡಾಯವಾಗಿದೆ. ಆದರೆ, ಲೆಕ್ಕಪರಿಶೋಧನೆಯ ಪರಿಶೀಲನೆಯಲ್ಲಿ ಗೃಹಜ್ಯೋತಿ ಗ್ರಾಹಕರಿಗೆ ನಿಗದಿಪಡಿಸಿರುವ 30 ದಿನಗಳ ಅವಧಿಯ ಬದಲಾಗಿ 45 ದಿನಗಳಿಂದ 518 ದಿನಗಳವರೆಗೆ ಬಿಲ್ಲಿಂಗ್ ಚಕ್ರಗಳು ಇರುವ ಪ್ರಕರಣಗಳು ಕಂಡುಬಂದಿವೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಬಳಕೆ ಆಧಾರದ ಮೇಲೆ ಸಬ್ಸಿಡಿ- ಅನಧಿಕೃತ ಸಬ್ಸಿಡಿ ಪಾವತಿ!

ಮಾಸಿಕ ಮೀಟರ್ ರೀಡಿಂಗ್‌ಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ವಾಸ್ತವಿಕ ಬಳಕೆಯ ಬದಲಾಗಿ “ಊಹಿಸಲಾದ” ಅಥವಾ “ಅಂದಾಜು ಮಾಡಲಾದ” ಬಳಕೆಯ ಆಧಾರದ ಮೇಲೆ ಸಬ್ಸಿಡಿ ನೀಡಲಾಗಿದೆ. ಅರ್ಹ ಬಳಕೆಯನ್ನು ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ. ಇದರಿಂದಾಗಿ ವಿಸ್ತರಿಸಲಾದ ಬಿಲ್ಲಿಂಗ್ ಚಕ್ರಗಳಿಂದ ಗ್ರಾಹಕರು ಮಾಸಿಕ ಮಿತಿಯನ್ನು ಮೀರಿದ್ದಾರೆಯೇ ಎಂಬುದನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅನಧಿಕೃತ ಸಬ್ಸಿಡಿ ಪಾವತಿಯಾಗುವ ಸಾಧ್ಯತೆ ಇದೆ.

ಒಟ್ಟು ವಿದ್ಯುತ್ ಬಳಕೆ ಯೂನಿಟ್‌ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ

ಲೆಕ್ಕಪರಿಶೋಧನೆಯು ಒಟ್ಟು ವಿದ್ಯುತ್ ಬಳಕೆ ಯೂನಿಟ್‌ಗಳ ಲೆಕ್ಕಾಚಾರದಲ್ಲಿ ಅಸಂಗತತೆಗಳನ್ನು ಗಮನಿಸಿರುವ ಸಿಎಜಿಯು ಸಾಮಾನ್ಯವಾಗಿ ಇದನ್ನು ಪ್ರಸ್ತುತ ಮೀಟರ್ ರೀಡಿಂಗ್ ಮತ್ತು ಹಿಂದಿನ ಮೀಟರ್ ರೀಡಿಂಗ್ ನಡುವಿನ ವ್ಯತ್ಯಾಸದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಆದರೆ, ಇಲ್ಲಿ 824 ಯೂನಿಟ್‌ಗಳವರೆಗೆ ಕಂಡು ಬಂದಿರುವ ವ್ಯತ್ಯಾಸವನ್ನು ಸಹ ತನ್ನ ವರದಿಯಲ್ಲಿ ವಿವರಿಸಿದೆ.

 

 

ಅರ್ಹತಾ ಯೂನಿಟ್‌ಗಳ (Entitlement Units) ಲೆಕ್ಕಾಚಾರದಲ್ಲಿ ವ್ಯತ್ಯಾಸ

ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಅರ್ಹತಾ ಯೂನಿಟ್‌ಗಳ ಲೆಕ್ಕಾಚಾರವನ್ನು ಲೆಕ್ಕಪರಿಶೋಧನೆಯು ವಿಶ್ಲೇಷಿಸಿದೆ. ಅರ್ಹತಾ ಯೂನಿಟ್‌ಗಳ ಲೆಕ್ಕಾಚಾರದಲ್ಲಿ 10 ಯೂನಿಟ್‌ಗಳವರೆಗೆ ವ್ಯತ್ಯಾಸ ಕಂಡುಬಂದಿದೆ.

ಬಿಲ್ಲಿಂಗ್ ದತ್ತಾಂಶ- ಭೌತಿಕ ಬಿಲ್‌ಗಳ ದತ್ತಾಂಶಗಳ ನಡುವೆ ವ್ಯತ್ಯಾಸ

ಲೆಕ್ಕಪರಿಶೋಧನೆಗೆ ಸಲ್ಲಿಸಲಾದ ಬಿಲ್ಲಿಂಗ್ ಡೇಟಾ (ಡೇಟಾಬೇಸ್) ಮತ್ತು ಗ್ರಾಹಕರಿಗೆ ನೀಡಲಾದ ವಾಸ್ತವಿಕ ಭೌತಿಕ ಬಿಲ್ ಪ್ರತಿಗಳ ನಡುವೆ ವ್ಯತ್ಯಾಸಗಳು ಕಂಡುಬಂದಿವೆ. ನಿರ್ದಿಷ್ಟವಾಗಿ, ಬಾಕಿ ಮೊತ್ತ (Arrears), ಪ್ರಸ್ತುತ ಬೇಡಿಕೆ (Current Demand), ಆದಾಯದ ಮೇಲಿನ ಬಡ್ಡಿ (Interest on Revenue) ಮತ್ತು ತೆರಿಗೆಯ ಮೇಲಿನ ಬಡ್ಡಿ (Interest on Tax) ಇವುಗಳಲ್ಲಿ ಅಸಂಗತತೆಗಳು ಕಂಡುಬಂದಿವೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.

ವ್ಯವಸ್ಥಿತ ದೋಷಗಳ ಸಾಧ್ಯತೆ

‘ಡೇಟಾಬೇಸ್ ಮತ್ತು ಭೌತಿಕ ಬಿಲ್ ನಡುವಿನ ಯಾವುದೇ ವ್ಯತ್ಯಾಸವು ಕೇಂದ್ರೀಕೃತ ವ್ಯವಸ್ಥೆಯ ಹೊರಗೆ ಕೆಲವು ತಿದ್ದುಪಡಿಗಳು ನಡೆಯುತ್ತಿದ್ದು, ಅವು ಲೆಕ್ಕಪರಿಶೋಧನಾ ದಾಖಲೆಯಲ್ಲಿ (Audit Trail) ದಾಖಲಾಗದಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಪ್ರಸ್ತುತ ಕಂಡುಬಂದಿರುವ ವ್ಯತ್ಯಾಸಗಳು ಹಸ್ತಚಾಲಿತ ತಿದ್ದುಪಡಿಗಳು ಅಥವಾ ಪ್ರಾಥಮಿಕ ಡೇಟಾಬೇಸ್‌ನಲ್ಲಿ ದಾಖಲಾಗದ ವ್ಯವಸ್ಥಿತ ದೋಷಗಳ ಸಾಧ್ಯತೆಯನ್ನೂ ಸೂಚಿಸುತ್ತವೆ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.

ಯೋಜನೆ ಜಾರಿಯಾಗುವ ಮೊದಲೇ ಗೃಹಜ್ಯೋತಿ ಪ್ರಯೋಜನ ವಿಸ್ತರಣೆ

ಲೆಕ್ಕಪರಿಶೋಧನೆಯು ಗಮನಿಸಿರುವ ಪ್ರಕಾರ ಜೂನ್ 2023ರ ವಿದ್ಯುತ್ ಬಳಕೆಗೆ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ವಿಸ್ತರಿಸಲಾಗಿತ್ತು. (Exception Report 9). ಆದರೆ, ಸರ್ಕಾರದ ಆದೇಶಗಳಲ್ಲಿ ಈ ಪ್ರಯೋಜನವನ್ನು ಜುಲೈ 2023ರ ವಿದ್ಯುತ್ ಬಳಕೆಗೆ ಮಾತ್ರ ವಿಸ್ತರಿಸಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹರಪನಹಳ್ಳಿ ಉಪವಿಭಾಗಕ್ಕೆ (ದಾವಣಗೆರೆ ವಿಭಾಗ) ಸೇರಿದ 14,773 ಫಲಾನುಭವಿಗಳ 83,417 ಬಿಲ್‌ಗಳಲ್ಲಿ ಪ್ರಾಥಮಿಕವಾಗಿ ರೆಡ್ ಫ್ಲ್ಯಾಗ್‌ಗಳು (Red Flags) ಕಂಡುಬಂದಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಲೆಕ್ಕಪರಿಶೋಧನೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಲ್ಲಿಯೂ ಸಿಎಜಿಗೆ ಹಲವು ನಿರ್ಬಂಧಗಳು ಮತ್ತು ಸವಾಲುಗಳು ಎದುರಾಗಿದ್ದವು. ಈ ಬಗ್ಗೆ ಸಿಎಜಿಯು ಹಲವು ಬಾರಿ ಮೇಲಾಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದ ನಂತರ ಮಾಸ್ಟರ್‍‌ ಡೇಟಾ ಬೇಸ್‌ ಕೋಷ್ಠಕಗಳಿಗೆ ಪ್ರವೇಶ ನೀಡಲಾಯಿತು ಎಂದು ಸರ್ಕಾರದ ಗಮನ ಸೆಳೆದಿದೆ.

‘ಜನವರಿ 2026ರಿಂದ ಪದೇಪದೇ ಮನವಿ ಮತ್ತು ಮೇಲಧಿಕಾರಿಗಳ ಗಮನಕ್ಕೆ ತಂದ ನಂತರ, 19 ಮಾಸ್ಟರ್ ಡೇಟಾಬೇಸ್ ಟೇಬಲ್‌ಗಳನ್ನಾಧರಿಸಿ ಲೆಕ್ಕ ಪರಿಶೋಧನೆ ನಡೆಸಲು 2026ರ ಜೂನ್‌ 6ರಂದು ಪ್ರವೇಶ ನೀಡಿತ್ತು. ಆದಾಗ್ಯೂ, ಕ್ವೆರಿಗಳ ಸಂಖ್ಯೆಗೆ / CPU ಬಳಕೆಗೆ ವಿಧಿಸಿರುವ ನಿರ್ಬಂಧ ವಿಧಿಸಿತ್ತು. ಹೀಗಾಗಿ ಸಂಕೀರ್ಣ SQL ಕ್ವೆರಿಗಳನ್ನು ನಿರ್ವಹಿಸಲು ಲೆಕ್ಕಪರಿಶೋಧನೆಗೆ ಸಾಧ್ಯವಾಗುತ್ತಿಲ್ಲ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.

ಐಟಿ ವ್ಯವಸ್ಥೆಯ ಪೂರೈಕೆದಾರರಿಂದ ವಿಧಿಸಲಾದ ನಿರ್ಬಂಧಗಳ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗಿದೆ. ಗ್ರಾಹಕರ ಡೇಟಾಬೇಸ್ ವ್ಯವಸ್ಥೆಯು ವಿಶ್ಲೇಷಣಾ ಕಾರ್ಯಗಳಿಗಾಗಿ ಹೆಚ್ಚುವರಿ ಸಂಗ್ರಹಣೆ (Storage) / ಗಣಕ ಸಾಮರ್ಥ್ಯವನ್ನು (Computing Capacity) ಮೀಸಲಿಡಬೇಕು. ಇಂತಹ ಸೌಲಭ್ಯಗಳನ್ನು ಒದಗಿಸಲು ಬೆಸ್ಕಾಂ ತನ್ನ ಐಟಿ ವ್ಯವಸ್ಥೆಯ ಪೂರೈಕೆದಾರರೊಂದಿಗೆ ಇರುವ ಪ್ರಸ್ತುತ ಒಪ್ಪಂದವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು; ವ್ಯವಸ್ಥೆಯ ನಿರ್ಬಂಧಗಳನ್ನು ಉಲ್ಲೇಖಿಸುವುದು ಸೂಕ್ತವಲ್ಲ ಎಂದು ವರದಿಯಲ್ಲಿ ಸರ್ಕಾರದ ಗಮನ ಸೆಳೆದಿದೆ.

ಕೆಲವು ಪ್ರಮುಖ ಕ್ಷೇತ್ರಗಳು (Important Fields) ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ದತ್ತಾಂಶ ನೀಡಬೇಕು ಎಂದು 2026ರ ಜೂನ್‌ 16ರಂದು ಸಿಎಜಿಯು ಕೋರಿತ್ತು. ಇದಲ್ಲದೆ, ಬೆಸ್ಕಾಂನ ಗ್ರಾಹಕರ ಡೇಟಾಬೇಸ್‌ಗೆ ಸಂಬಂಧಿಸಿದ ಸ್ಕೀಮಾ ಮತ್ತು ಡೇಟಾ ಡಿಕ್ಷನರಿಯನ್ನೂ ಲೆಕ್ಕಪರಿಶೋಧನೆಯು ಕೋರಿತ್ತು.

‘ಏಕೆಂದರೆ ಆಂತರಿಕ ಟೇಬಲ್‌ಗಳು (Underlying Tables), ಇಂಡೆಕ್ಸ್‌ಗಳು (Indices), ವಹಿವಾಟು ದಾಖಲೆಗಳು (Transaction Logs) ಹಾಗೂ ವ್ಯವಹಾರ ನಿಯಮಗಳಿಗೆ (Business Rules) ಬಳಸಲಾಗುವ ಸೂತ್ರಗಳು/ಷರತ್ತುಗಳಿಗೆ (Formula/Conditions) ಸಂಬಂಧಿಸಿದ ದಾಖಲಾತಿ ಮಾಹಿತಿಯನ್ನು ಒದಗಿಸಲಾಗಿಲ್ಲ,’ ಎಂದು ಹೇಳಿತ್ತು.

ಸೇವಾ ಸಿಂಧು ಪೋರ್ಟಲ್‌ನ ನೋಂದಣಿ ವಿವರಗಳಿಗೆ ಪ್ರವೇಶ ಮಾಡಲು ಸಿಎಜಿಗಿ ಇನ್ನೂ ಲಭ್ಯವಾಗಿಲ್ಲ. ಫಲಾನುಭವಿಗಳ ನೋಂದಣಿ (Beneficiary Onboarding) ಸೇವಾ ಸಿಂಧು ಪೋರ್ಟಲ್ ಮೂಲಕ ನಡೆಯುವುದರಿಂದ, ಫಲಾನುಭವಿಯ ಅರ್ಹತೆಯನ್ನು ಪರಿಶೀಲಿಸಲು ಈ ಡೇಟಾಬೇಸ್ ಅತ್ಯಗತ್ಯವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ಜುಲೈ 2023ರಿಂದ ಏಪ್ರಿಲ್ 2026ರವರೆಗೆ ಗೃಹಜ್ಯೋತಿ ಯೋಜೆಯ ಅನುಷ್ಠಾನದ ಕುರಿತು ದತ್ತಾಂಶ ಆಧಾರಿತ (Data-led) ಲೆಕ್ಕಪರಿಶೋಧನೆ ನಡೆಸಲು ಉದ್ದೇಶಿಸಿತ್ತು. ಈ ಪರಿಶೋಧನೆಯು 2026-27ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ಯೋಜನೆಯ ಭಾಗವಾಗಿದೆ. ಒಟ್ಟು ಫಲಾನುಭವಿಗಳ ಪೈಕಿ ಶೇ. 43ರಷ್ಟಿರುವ ಬೆಸ್ಕಾಂ ಗ್ರಾಹಕರನ್ನು ಒಳಗೊಂಡಿದೆ. ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಹಾಗೂ ಯೋಜನೆಯ ಅನುಷ್ಠಾನದಲ್ಲಿರುವ ವ್ಯವಸ್ಥಿತ ಲೋಪಗಳನ್ನು ಗುರುತಿಸುವುದು ಈ ಲೆಕ್ಕಪರಿಶೋಧನೆಯ ಉದ್ದೇಶವಾಗಿದ್ದು, ಇದಕ್ಕಾಗಿ 39 ಲೆಕ್ಕಪರಿಶೋಧನಾ ಪರಿಶೀಲನೆಗಳನ್ನು (Audit Checks) ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಪೂರ್ವಭಾವಿಯಾಗಿ, ಒಂದು ಉಪವಿಭಾಗದ ಪ್ರಾಯೋಗಿಕ ಅಧ್ಯಯನವನ್ನು ಏಪ್ರಿಲ್ 2026ರಲ್ಲಿ ನಡೆಸಲಾಗಿತ್ತು ಮತ್ತು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಲೆಕ್ಕಪರಿಶೋಧನಾ ವಿಚಾರಣೆ (Audit Enquiry) ಹೊರಡಿಸಲಾಗಿತ್ತು. ಈ ಲೆಕ್ಕಪರಿಶೋಧನಾ ವಿಚಾರಣೆಯಲ್ಲಿ, ಭೌತಿಕ ಬಿಲ್ ಪ್ರತಿಗಳ ವಿವರವಾದ ಅಧ್ಯಯನಕ್ಕೆ ಸಂಬಂಧಿಸಿದ ಪ್ರಾಥಮಿಕ ವಿಚಾರಗಳು, ಮಾದರಿ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಈಗಾಗಲೇ ಸಿದ್ಧಪಡಿಸಲಾದ Exception Reports‌ಗಳ ಪರಿಶೀಲನೆಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿತ್ತು.

 

 

ಈ ವರ್ಷ, ಈ ಪರಿಶೀಲನೆಯನ್ನು ಬೆಸ್ಕಾಂನ ಎಲ್ಲಾ 147 ವಿಭಾಗಗಳು/ಉಪವಿಭಾಗಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಮುಂದಿನ ವರ್ಷದಲ್ಲಿ, ಇದೇ ಅಧ್ಯಯನವನ್ನು ರಾಜ್ಯದ ಉಳಿದ 4 ಡಿಸ್ಕಾಂಗಳಿಗೂ (DISCOMs) ವಿಸ್ತರಿಸಲು ಸಿಎಜಿಯು ಉದ್ದೇಶಿಸಿದೆ.
ಪ್ರಸ್ತುತ, ಉತ್ಪಾದನಾ ಪರಿಸರದ (Production Environment) ಡೇಟಾಬೇಸ್‌ಗೆ ಸೀಮಿತ ಪ್ರವೇಶವನ್ನು ನೀಡಲಾಗಿದೆ. ಯಾವುದೇ ನಿರ್ಬಂಧಗಳಿಲ್ಲದೆ ಡೇಟಾಬೇಸ್‌ಗೆ ಸಂಪೂರ್ಣ ಪ್ರವೇಶವನ್ನು ನೀಡುವಂತೆ ಹಾಗೂ ಸ್ಕೀಮಾ ಮತ್ತು ಡೇಟಾ ಡಿಕ್ಷನರಿ (Schema and Data Dictionary) ಒದಗಿಸುವಂತೆ ಲೆಕ್ಕಪರಿಶೋಧನೆಯು ಕೋರಿರುವುದು ಗೊತ್ತಾಗಿದೆ.

ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು 2023ರ ಜೂನ್‌ 5ರಂದು ಅನುಷ್ಠಾನಗೊಳಿಸಿತ್ತು. ಜೂನ್‌ 15ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. 2023ರ ಆಗಸ್ಟ್‌ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ, ನಿಗದಿತ ಷರತ್ತುಗಳಿಗೆ ಒಳಪಟ್ಟು ಕರ್ನಾಟಕದ ಪ್ರತಿಯೊಂದು ವಸತಿ ಗೃಹಬಳಕೆದಾರರಿಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. 31 ಮಾರ್ಚ್ 2025ರ ವೇಳೆಗೆ ರಾಜ್ಯಾದ್ಯಂತ 1.75 ಕೋಟಿ ಗ್ರಾಹಕರು ಈ ಯೋಜನೆಯ ಫಲಾನುಭವಿಗಳಾಗಿದ್ದರು.

 

ರೋಗಗ್ರಸ್ಥ ವಿದ್ಯುತ್ ವಲಯದ ಸ್ಥಿತಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಲಿದೆಯೇ ಗೃಹ ಜ್ಯೋತಿ?

 

ಗೃಹ ಜ್ಯೋತಿ ಯೋಜನೆಯು  ವಿದ್ಯುತ್‌ ವಲಯದ ಇತರೆ ಯೋಜನೆಗಳನ್ನು  ಸಹ ರೋಗಗ್ರಸ್ತಕ್ಕೀಡು ಮಾಡಲಿದೆ ಎಂದು ಹೇಳಲಾಗಿತ್ತು.

 

ಬೊಕ್ಕಸಕ್ಕೆ ಹೊರೆಯಾದ ‘ಗೃಹಜ್ಯೋತಿ’; ಗೃಹ ಬಳಕೆದಾರ, ಸರ್ಕಾರಿ ಇಲಾಖೆಗಳಿಂದಲೇ 11,757.07 ಕೋಟಿ ರು ಬಾಕಿ

 

ಗೃಹಜ್ಯೋತಿ ಯೋಜನೆಯು ಬೊಕ್ಕಸಕ್ಕೆ ಹೊರೆಯಾಗಿತ್ತು.

 

ಗೃಹಜ್ಯೋತಿ ನೋಂದಣಿಗೂ ಲಂಚ, ನೋಂದಾಯಿಸಿದ್ದರೂ ಬಿಲ್‌ ತೆತ್ತಿದ್ದ ಫಲಾನುಭವಿಗಳು; ಸಮೀಕ್ಷೆ ವರದಿ

 

ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಲಂಚ ನೀಡಬೇಕಾಗಿತ್ತು.

 

ಗೃಹಜ್ಯೋತಿ; ರಾಜಸ್ವ ಕೊರತೆಗೆ ದೊಡ್ಡ ಕಾಣಿಕೆ, ಬಜೆಟ್‌ ಮೇಲೆ ಹಣಕಾಸು ಒತ್ತಡ, ಎಸ್ಕಾಂಗಳಲ್ಲೂ ಮುಗ್ಗಟ್ಟು

 

ಗೃಹ ಜ್ಯೋತಿ ಅನುಷ್ಠಾನಗೊಳಿಸಿದ್ದ ಎಸ್ಕಾಂಗಳಿಗೆ ಸರ್ಕಾರವು 631.75 ಕೋಟಿ ಮೊತ್ತ ಬಾಕಿ ಉಳಿಸಿಕೊಂಡಿತ್ತು.

 

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

……….

ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ

 

ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ  ಅಂಕಿ ಅಂಶಗಳೇ ಸರ್ಕಾರದಲ್ಲಿ ಇರಲಿಲ್ಲ.

 

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

 

ಗೃಹ ಜ್ಯೋತಿ ಯೋಜನೆ ಜಾರಿಯಾದ ದಿನದಿಂದ ಎಸ್ಕಾಂಗಳ ಆರ್ಥಿಕ ಸ್ಥಿತಿಯೂ ಸಾಕಷ್ಟು ಹದಗೆಟ್ಟಿತ್ತು. ಈ ಎಲ್ಲವುಗಳ ಕುರಿತು ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...
Please Scan to make Your Contribution

Topics

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...

Related Articles

Popular Categories

error: Content is protected !!