ರೋಗಗ್ರಸ್ಥ ವಿದ್ಯುತ್ ವಲಯದ ಸ್ಥಿತಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಲಿದೆಯೇ ಗೃಹ ಜ್ಯೋತಿ?

ಬೆಂಗಳೂರು;  ಸದ್ಯ ರಾಜ್ಯದ ವಿದ್ಯುತ್ ವಲಯವು ಆಮ್ಲಜನಕ ಟೆಂಟಿನಲ್ಲಿದೆ. ವಿದ್ಯುತ್ ಉದ್ದಿಮೆಗಳ ಉಸಿರು ನಿಲ್ಲುವ ಸ್ಥಿತಿಯಿದೆ. ರಾಜ್ಯದಲ್ಲಿ ಒಟ್ಟು 11 ವಿದ್ಯುತ್ ಕಂಪನಿಗಳಿವೆ. ಇವುಗಳಲ್ಲಿ ವಿದ್ಯುತ್ ಉತ್ಪಾದನಾ ಕಂಪನಿಗಳು 4. ವಿದ್ಯುತ್ ವಿತರಣಾ ಕಂಪನಿಗಳು 5. ಇತರೆ 2. ಈ ಕಂಪನಿಗಳ ಈಕ್ವಿಟಿ ಬಂಡವಾಳ ರೂ. 18082 ಕೋಟಿಯಾಗಿದ್ದರೆ ಸಾಲಗಳು ರೂ. 65, 577 ಕೋಟಿ. ಈ ವಲಯದಲ್ಲಿ ಎರಡು ಸಮಸ್ಯೆಗಳಿವೆ.

 

ಒಂದು: ವಿದ್ಯುತ್ ಖರೀದಿಯು ದುಬಾರಿಯಾಗುತ್ತಿರುವುದು. ಎರಡು: ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಪಾವತಿಸ ಬೇಕಾದ ಮೊತ್ತವನ್ನು ಪಾವತಿಸುತ್ತಿಲ್ಲ. ವಿದ್ಯುತ್ ದರವನ್ನು ಏರಿಸುವುದು ಸಾಧ್ಯವಿಲ್ಲ. ಈ ಸಮಸ್ಯೆಯು ಉಲ್ಬಣಗೊಂಡರೆ ಒಕ್ಕೂಟ ಸರ್ಕಾರವು ನಡೆಸುತ್ತಿರುವ ವಿದ್ಯುತ್ ವಲಯದ ಖಾಸಗೀಕರಣಕ್ಕೆ ಇಂಬು ದೊರೆಯುತ್ತದೆ. ಇದಕ್ಕೆ ಅವಕಾಶ ನೀಡಬಾರದು.

 

ಈಗಾಗಲೆ ರೋಗಗ್ರಸ್ಥವಾಗಿರುವ ವಿದ್ಯುತ್ ವಲಯದ ಸ್ಥಿತಿಯು ಗೃಹಜ್ಯೋತಿಯಿಂದಾಗಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಬಡವರಿಗೆ, ಕೂಲಿಕಾರರಿಗೆ, ರೈತರಿಗೆ ಗೃಹಜ್ಯೋತಿಯ ಅಗತ್ಯವಿದೆ. ಆದರೆ ಇದನ್ನು ಎಲ್ಲರಿಗೂ ವಿಸ್ತರಿಸುವುದರಲ್ಲಿ ಸಮಸ್ಯೆಯಿದೆ. ಬಿಪಿಎಲ್ ಕುಟುಂಬಗಳಿಗೆ ಮಾತ್ರ ಭಾಗ್ಯಜ್ಯೋತಿಯನ್ನು ಮಿತಿಗೊಳಿಸಬಹುದಾಗಿತ್ತು.

 

ಇಡೀ ಜಗತ್ತಿನಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಅಣು ಶಕ್ತಿ, ಶಾಖೋತ್ಪನ್ನ ಶಕ್ತಿ ಮತ್ತು ಪೆಟ್ರೋಲ್ ಅತಿಬಳಕೆಯಿಂದ ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಸಮಸ್ಯೆಯು ಮನುಕುಲಕ್ಕೆ ಮರಣ ಸದೃಶವಾಗುತ್ತಿದೆ. ಇದಾವುದನ್ನೂ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ರೂಪಿಸುವಾಗ ಪರಿಗಣಿಸಿದಂತೆ ಕಾಣುತ್ತಿಲ್ಲ. ಗೃಹಜ್ಯೋತಿ ಬೇಕು: ಆದರೆ ಇಲ್ಲಿ ‘ಸಕಾರಾತ್ಮಕ ತಾರತಮ್ಯ’ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬಹುದಾಗಿತ್ತು. ಎಲ್ಲರಿಗೂ ಉಚಿತ ವಿದ್ಯುತ್ ನೀಡಿವುದರಿಂದ ಕಾಂಗ್ರೆಸ್‌ ನಂಬಿರುವ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.

 

(v). ರಾಜ್ಯ ಸರ್ಕಾರದ ತೆರಿಗೆಗಳೇನಿವೆ – ರಾಜ್ಯ ಅಬಕಾರಿ ತೆರಿಗೆ, ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಸುಂಕ, ಮೋಟಾರು ವಾಹನ ತೆರಿಗೆ ಮತ್ತು ಇತರೆ ತೆರಿಗೆಗಳು – ಅವುಗಳ ಸಾಮರ್ಥ್ಯವು ಗರಿಷ್ಟ ಮಟ್ಟ ತಲುಪಿ ಬಿಟ್ಟ್ಟಿದೆ. ಅವುಗಳ ದರಗಳನ್ನು ಮತ್ತಷ್ಟು ಹೆಚ್ಚಿಸುವುದು ಸಾಧ್ಯವಿಲ್ಲ.

 

ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದ ಮಾತ್ರ ಈ ತೆರಿಗೆ ರಾಶಿ ಹೆಚ್ಚಾಗಬೇಕು. ಸದ್ಯ ಸರ್ಕಾರ ಇವುಗಳ 2023-24 ರ ಬೆಳವಣಿಗೆ ದರವನ್ನು ತೀವ್ರ ತರನಾಗಿ ಏರಿಸಿದೆ. ಉದಾ: ಮೋಟಾರು ವಾಹನ ಸುಂಕದ ಬೆಳವಣಿಗೆ ಸರಾಸರಿ ವಾರ್ಷಿಕ ಶೇ. 15 ರಷ್ಟಿತ್ತು. ಇದನ್ನು 2023-24 ರಲ್ಲಿ ಶೇ. 31 ಎಂದು ನಿಗದಿ ಪಡಿಸಲಾಗಿದೆ. ಇದು ವ್ಯವಹಾರಿಕವಲ್ಲ.

 

ಇದೇ ರೀತಿಯಲ್ಲಿ ಅಬಕಾರಿ ಸುಂಕದ ಸರಾಸರಿ ಬೆಳವಣಿಗೆ ಶೇ. 10 ರಷ್ಟಿದೆ. ಇದನ್ನು 2023-24 ರಲ್ಲಿ ಶೇ. 20 ಕ್ಕೆ ನಿಗದಿ ಪಡಿಸಲಾಗಿದೆ. ಇವೆಲ್ಲ ಅವಾಸ್ತವಿಕ ಗುರಿಗಳು. ಈ ಮಟ್ಟದಲ್ಲಿ ತೆರಿಗೆಗಳ ಮೊಬಲಗು ಏರಿಕೆಯಾಗುವುದು ಸಾಧ್ಯವಿಲ್ಲ. ರಾಜ್ಯದ ಸ್ವಂತ ತೆರಿಗೆ ಸಾಮರ್ಥ್ಯವು ಸೀಮಿತವಾದುದಾಗಿದೆ. ಇವುಗಳನ್ನು ಅವಲಂಬಿಸಿ ಗ್ಯಾರಂಟಿಗಳಿಗೆ ಸಂಪನ್ಮೂಲ ಕೂಡಿ ಹಾಕುವುದು ಸಾಧ್ಯವಿಲ್ಲ.

 

ಈ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದ ಬಡತನ, ಹಸಿವು, ನಿರುದ್ಯೋಗ ಮುಂತಾದವುಗಳು ನಿರೀಕ್ಷಿಸಿದಂತೆ ಪರಿಹಾರವಾಗಬೇಕಾದರೆ ಮೇಲೆ ಚರ್ಚಿಸಿರುವ ಸಂಗತಿಗಳ ಬಗ್ಗೆ ತೀವ್ರ ಗಮನ ನೀಡಬೇಕು. ಇಲ್ಲದಿದ್ದರೆ ಅದು ತಿರುಗು ಬಾಣವಾಗಿ ಬಿಡಬಹುದು.

 

ಕರ್ನಾಟಕ ಸರ್ಕಾರವು ತನ್ನ ಹಣಕಾಸು ನಿರ್ವಹಣೆ ಮತ್ತು ಸಾರ್ವಜನಿಕ ಆಡಳಿತವದ ಗುಣಮಟ್ಟವನ್ನು ತೀವ್ರ ಸುಧಾರಿಸಬೇಕು. ಈ ಕ್ರಮಗಳಿಂದ ಇಂದಿನ ಹಣಕಾಸು ದುಸ್ಥಿತಿಯನ್ನು ಸರಿಪಡಿಸಿಕೊಳ್ಳಬಹುದು ಮತ್ತು ಗ್ಯಾರಂಟಿಗಳಿಗೆ ಹಣಕಾಸನ್ನು ಕೂಡಿಸಿಕೊಳ್ಳಬಹುದು.

 

 

(೨). ಒಕ್ಕೂಟ ಸರ್ಕಾರದ ಅಸಹಕಾರಿ ಒಕ್ಕೂಟ ನೀತಿ

 

ಈಗಿರುವ ಹಣಕಾಸು ಒತ್ತಡವನ್ನು ಪರಿಹರಿಸಿಕೊಳ್ಳಲು ಇರುವ ಎರಡನೆಯ ಮಾರ್ಗವೆಂದರೆ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಣಕಾಸು ವರ್ಗಾವಣೆ ಸಂಬಂಧದಲ್ಲಿ ಸುಧಾರಣೆ.
ನಮ್ಮದು ಒಕ್ಕೂಟ ರಾಜಕೀಯ ವ್ಯವಸ್ಥೆ. ನಮ್ಮ ಸಂವಿಧಾನವು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಾನವಾದ ಹಕ್ಕು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಅನೇಕ ಇತಿಮಿತಿಗಳ ನಡುವೆ ಒಕ್ಕೂಟ ತತ್ವನ್ನು ೧೯೫೦ರಿಂದ ದೇಶವು ಅನುಸರಿಸಿಕೊಂಡು ಬರುತ್ತಿತ್ತು.

 

ಆದರೆ ೨೦೧೪ರ ನಂತರ ಇದಕ್ಕೆ ಅಪಾಯ ಉಂಟಾಗಿದೆ. ಇಂದಿನ ಒಕ್ಕೂಟ ಸರ್ಕಾರವು ‘ಸಹಕಾರಿವಾದಿ ಒಕ್ಕೂಟ ನೀತಿ’ಯ ಬಗ್ಗೆ ಮಾತನಾಡುತ್ತದೆ. ವಾಸ್ತವದಲ್ಲಿ ಅದು ಅಸಹಕಾರಿ ಒಕ್ಕೂಟ ನೀತಿಯನ್ನು ಪಾಲಿಸುತ್ತಿದೆ. ಇಂದು ಕರ್ನಾಟಕ(ದಕ್ಷಿಣ ಭಾರತದ ಎಲ್ಲ ರಾಜ್ಯಗಳು) ಗಂಭಿರವಾದ ಹಣಕಾಸು ಸ್ಥಿತಿಯನ್ನು ಎದುರಿಸುತ್ತಿದ್ದರೆ ಬಹುಮುಖ್ಯವಾದ ಒಂದು ಕಾರಣ ಒಕ್ಕೂಟ ಸರ್ಕಾರ ಪಾಲಿಸುತ್ತಿರುವ ಕೇಂದ್ರೀಕರಣ ನೀತಿ. ಇಂದಿನ ಸರ್ಕಾರಕ್ಕೆ ಸೈದ್ಧಾಂತಿಕವಾಗಿ ಒಕ್ಕ್ಕೂಟ ತತ್ವದ ಬಗ್ಗೆ ವಿಶ್ವಾಸವಿಲ್ಲ.

 

ಅನೇಕ ರೀತಿಯಲ್ಲಿ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಮತ್ತು ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತಿದೆ. ಇಲ್ಲಿ ಒಕ್ಕೂಟ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಹಣಕಾಸು ಸಂಬಂಧದ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದೆ.

 

(i). ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲು

 

ಎರಡು ರೀತಿಯಲ್ಲಿ ಒಕ್ಕೂಟವು ಕರ್ನಾಟಕಕ್ಕೆ ಹಣಕಾಸನ್ನು ವರ್ಗಾವಣೆ ಮಾಡುತ್ತದೆ. ಒಂದು: ಒಕ್ಕ್ಕೂಟ ತೆರಿಗೆ ರಾಶಿಯಲ್ಲಿ ರಾಜ್ಯದ ಪಾಲು. ಎರಡು: ಸಹಾಯಾನುದಾನ(ಗ್ರಾಂಟ್ಸ್ ಇನ್ ಏಡ್). ಈ ಎರಡು ಮೂಲಗಳಿಂದ 2017-18 ರಲ್ಲಿ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದು ರೂ. 47,145 ಕೋಟಿ. ಇದು ರಾಜ್ಯದ ಸದರಿ ವರ್ಷದ ಒಟ್ಟು ತೆರಿಗೆ ರಾಜಸ್ವದಲ್ಲಿ(ರೂ. 146999 ಕೋಟಿ) ಶೇ. 32.02 ರಷ್ಟಿತ್ತು. ಒಕ್ಕೂಟವು 2023-24 ರಲ್ಲಿ ವರ್ಗಾಯಿಸಲಿರುವ ಮೊತ್ತ ರೂ. 50, 257 ಕೋಟಿ. ಇದು ಸದರಿ ವರ್ಷದ ಒಟ್ಟು ರಾಜಸ್ವ ಸ್ವೀಕೃತಿಯ(ರೂ. 225909 ಕೋಟಿ) ಶೇ. 22.225 ರಷ್ಟಾಗುತ್ತದೆ. ಒಟ್ಟು ಮೊತ್ತದಲ್ಲಿ ಏರಿಕೆಯಾಗಿದೆ. ಆದರೆ ಸಾಪೇಕ್ಷವಾಗಿ ಅದು ಇಳಿಕೆಯಾಗಿದೆ.

 

ಒಕ್ಕೂಟ ತೆರಿಗೆ ರಾಶಿಯು ಇದೇ ಅವಧಿಯಲ್ಲಿ ಶೇ. 53.61 ರಷ್ಟು ಬೆಳವಣಿಗೆ ಕಂಡಿದೆ. ಆದರೆ ಅದು ರಾಜ್ಯಕ್ಕೆ ವರ್ಗಾಯಿಸುತ್ತಿರುವ ಹಣದ ಬೆಳವಣಿಗೆಯು ಶೇ. 6.61 ರಷ್ಟಾಗಿದೆ. ಇಲ್ಲಿದೆ ಒಕ್ಕೂಟವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ.

 

(ii). ಹಣಕಾಸು ಆಯೋಗದ ರಾಜ್ಯಗಳಿಗೆ ವರ್ಗಾವಣೆ ಶಿಫಾರಸ್ಸು

 

ಸಂವಿಧಾನಾತ್ಮಕ ಹಣಕಾಸು ಆಯೋಗದ ಶಿಫಾರಸ್ಸನ ಪ್ರಕಾರ ರಾಜ್ಯಗಳಿಗೆ ಒಕ್ಕೂಟವು ತನ್ನ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಶೇ. 41 ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು. ಆದರೆ ಅದು ವರ್ಗಾಯಿಸುತ್ತಿರುವ ಪ್ರಮಾಣ ಶೇ. 30ರ ಆಸುಪಾಸಿನಲ್ಲಿದೆ. ಒಕ್ಕೂಟ ಸರ್ಕಾರದ 2023-24 ರಲ್ಲಿ ಒಟ್ಟು ರಾಜಸ್ವ ಸ್ವೀಕೃತಿಯು ರೂ. 33.61 ಲಕ್ಷ ಕೋಟಿ. ಇದರಲ್ಲಿ ಅದು ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿರುವುದು ರೂ. 10.21 ಲಕ್ಷ ಕೋಟಿ(ಶೇ.೩೦.೩೭). ವಾಸ್ತವವಾಗಿ ವರ್ಗಾಯಿಸಬೇಕಾಗಿದ್ದುದು ರೂ. 13.78 ಲಕ್ಷ ಕೋಟಿ. ಇಲ್ಲಿ ರಾಜ್ಯಗಳಿಗಾದ ನಷ್ಟ ರೂ. 3.57 ಲಕ್ಷ ಕೋಟಿ. ಇದನ್ನು ಒಕ್ಕೂಟ ಹಣಕಾಸು ಆಯೋಗದ ಶಿಫಾರಸ್ಸುನ್ನು ಒಟ್ಟು ಪಾಲಿಸಿದರೆ ರಾಜ್ಯಗಳಿಗೆ, ಕರ್ನಾಟಕಕ್ಕೆ ಹೆಚ್ಚಿನ ಹಣಕಾಸು ಲಭ್ಯವಾಗುತ್ತದೆ.

 

(iii). ಉಪ ತೆರಿಗೆ ಮತ್ತು ಮೇಲು ತೆರಿಗೆಗಳ ಮೇಲಿನ ಏಕಸ್ವಾಮ್ಯ

 

ಒಕ್ಕೂಟ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳ  ಮೂಲಕ ರಾಜಸ್ವವನ್ನು ಸಂಗ್ರಹಿಸಿಕೊಳ್ಳುತ್ತಿದೆ. ಇದರ ರಾಶಿಯು 2011-12 ರಲ್ಲಿ ಒಕ್ಕೂಟದ ಒಟ್ಟು ತೆರಿಗೆ ರಾಶಿಯ ಶೇ. 10 ರಷ್ಟಿದ್ದುದು ಇಂದು 2023-24 ರಲ್ಲಿ ಇದು ಶೇ. 20 ಕ್ಕಿಂತ ಅಧಿಕಾಗಿದೆ. ಈ ತೆರಿಗೆಗಳ ರಾಶಿಯನ್ನು ಒಕ್ಕೂಟವು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿಲ್ಲ. ಈ ತೆರಿಗೆಗಳನ್ನು ‘ಹಂಚಿಕೆ ರಾಶಿ’ಗೆ ಸೇರಿಸಿದರೆ ರಾಜ್ಯಗಳಿಗೆ ಅಪಾರ ಹಣಕಾಸು ದೊರೆಯುತ್ತದೆ. ನಮ್ಮ ಸಂವಿಧಾನದ ನಿಜ ಆಶಯಗಳನ್ನು ಇಂದಿನ ಒಕ್ಕೂಟ ಸರ್ಕಾರ ಪಾಲಿಸುತ್ತಿಲ್ಲ.

 

ಕೇಂದ್ರ ಪ್ರಾಯೋಜಿತ ಮತ್ತು ಕೇಂದ್ರ ವಲಯ ಯೋಜನೆಗಳಿಗೆ ಒಕ್ಕೂಟ ನೀಡುತ್ತಿರುವ ಅನುದಾನವು ಕಳೆದ ನಾಲ್ಕಾರು ವರ್ಷಗಳಿಂದ ಸದರಿ ವರ್ಷಗಳ ಜಿಡಿಪಿಯ ಶೇ. 10 ದಾಟಿಲ್ಲ. ಎಲ್ಲವನ್ನು ಒಕ್ಕೂಟ ತನ್ನ ವಶ ಮಾಡಿಕೊಳ್ಳುತ್ತಿದೆ. ಸಂವಿಧಾನಾತ್ಮಕ ಕ್ರಮಗಳನ್ನು ಶಿಸ್ತಾಗಿ ಒಕ್ಕೂಟ ಪಾಲಿಸುತ್ತಿಲ್ಲ. ಇದರಿಂದ ರಾಜ್ಯಗಳ ಹಣಕಾಸು ಸ್ಥಿತಿಯು ಕುಸಿಯುತ್ತಿದೆ.

 

ದಕ್ಷಿಣ ಭಾರತದ ರಾಜ್ಯಗಳಿಗೆ ಒಕ್ಕೂಟವು ಅನ್ಯಾಯ ಮಾಡುತ್ತಿದೆ. ಉದಾ: 2023-24ರಲ್ಲಿ ಒಕ್ಕೂಟವು ಉತ್ತರ ಭಾರತದ ಐದು ಹಿಂದಿ ರಾಜ್ಯಗಳಿಗೆ ತನ್ನ ತೆರಿಗೆ ರಾಶಿಯಿಂದ ವರ್ಗಾವಣೆ ಮಡುತ್ತಿರುವುದು ರೂ. 4.39 ಲಕ್ಷ ಕೋಟಿ. ಆದರೆ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿರುವುದು ರೂ. 1.37 ಲಕ್ಷ ಕೋಟಿ. ಒಟ್ಟು ವರ್ಗಾವಣೆಯಲ್ಲಿ ಉತ್ತರ ಭಾರತದ ಹಿಂದಿ ರಾಜ್ಯಗಳ ಪಾಲು ಶೇ. 36.15 ರಷ್ಟಿದ್ದರೆ ದಕ್ಷಿಣ ಭಾರತದ ಪಾಲು ಶೇ. 13.51 .

 

(iv). ಜಿಎಸ್‌ಟಿ ಮತ್ತು ರಾಜ್ಯಗಳ ತೆರಿಗೆ ಅಧಿಕಾರ ಹರಣ

 

ರಾಜ್ಯಗಳ ಬಳಿಯಿದ್ದ ಹೆಚ್ಚು ರಾಜಸ್ವ ನೀಡುತ್ತಿದ್ದ ತೆರಿಗೆ ಅಂದರೆ ಸರಕು ಮತ್ತು ಸೇವಾ ತೆರಿಗೆ. ಇದನ್ನು ೨೦೧೬ರಲ್ಲಿ ಒಕ್ಕೂಟವು ತನ್ನ ವಶಕ್ಕೆ ಪಡೆದುಕೊಂಡು ಬಿಟ್ಟಿತು. ಈ ಕ್ರಮವನ್ನು ರಾಜ್ಯಗಳು ತೀವ್ರವಾಗಿ ಅಂದು ವಿರೋಧಿಸಲಿಲ್ಲ. ಈಗ ಅದರ ಬಾಬ್ತು ಒಕ್ಕೂಟ ನೀಡುತ್ತಿದ್ದ ಪರಿಹಾರವನ್ನೂ ೨೦೨೨ರಲ್ಲಿ ನಿಲ್ಲಿಸಲಾಗಿದೆ. ಭಾರತದಂತಹ ಉಪಖಂಡದೋಪಾದಿಯ ಬೃಹತ್ ದೇಶದಲ್ಲಿ “ಒಂದು ದೇಶ: ಒಂದು ತೆರಿಗೆ” ಎನ್ನುವುದಕ್ಕೆ ಅರ್ಥವಿಲ್ಲ. ಈಗಲೂ ರಾಜ್ಯಗಳು ಜಿಎಸ್‌ಟಿ ಅಧಿಕಾರವನ್ನು ವಾಪಸ್ಸು ಪಡೆಯುವುದಕ್ಕೆ ಪ್ರಯತ್ನಿಸಬೇಕು.

 

ಹೀಗೆ ಒಕ್ಕೂಟ ಸರ್ಕಾರ ರಾಜಕೀಯವಾಗಿ, ಬಹುಮುಖ್ಯವಾಗಿ ಹಣಕಾಸು ನಿರ್ವಹಣೆಯಲ್ಲಿ ಸಂವಿಧಾನಾತ್ಮಕ ಒಕ್ಕೂಟ ತತ್ವವನ್ನು ಪಾಲಿಸುತ್ತಿಲ್ಲ. ರಾಜ್ಯಗಳ ಸ್ವಾಯತ್ತತೆಯ ಮೇಲೆ ಅದು ಆಕ್ರಮಣ ಮಾಡುತ್ತಿದೆ. ರಾಜ್ಯಗಳು ಬತನಗೆ ಅಗತ್ಯವಸದ ರೀತಿಯಲ್ಲಿ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಇದು ಅಡ್ಡಿಯಾಗುತ್ತಿದೆ.

 

ಒಟ್ಟಾರೆ ಗ್ಯಾರಂಟಿಗಳಿಂದ ಉಂಟಾಗಿರುವ ಹೆಚ್ಚಿನ ಹಣಕಾಸು ಒತ್ತಡವನ್ನು ಕರ್ನಾಟಕ ಎರಡು ರೀತಿಯಲ್ಲಿ ಪರಿಹರಿಸಿಕೊಳ್ಳಬಹುದು. ಮೊದಲನೆಯದಾಗಿ ಅದು ತನ್ನ ಸಾರ್ವಜನಿಕ ಆಡಳಿತವನ್ನು ಭ್ರಷ್ಠಾಚಾರದಿಂದ ಮುಕ್ತಗೊಳಿಸಬೇಕು ಮತ್ತು ತನ್ನ ಹಣಕಾಸು ನಿರ್ವಹಣೆಯನ್ನು ಬಿಗಿಗೊಳಿಸಬೇಕು. ಎರಡನೆಯದಾಗಿ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹಾಕಿ ಅದು ಸಂವಿಧಾನಾತ್ಮಕವಾಗಿ ಒಕ್ಕೂಟ ತತ್ವ್ವಕ್ಕೆ ಅನುಗುಣವಾಗಿ ಹಣಕಾಸು ವರ್ಗಾವಣೆ ಹಾಗೂ ಇತರೆ ವಿಷಯಗಳಲ್ಲಿ ನಡೆದುಕೊಳ್ಳುವಂತೆ ಪ್ರಭಾವ ಬೀರಬೇಕು.

 

(ಟಿಪ್ಪಣಿ: ಇಲ್ಲಿ ಬಳಸಿರುವ ಸಾಂಖ್ಯಿಕ ಮೂಲಗಳು: ಕರ್ನಾಟಕ ಬಜೆಟ್ ೨೦೨೩-೨೪ ಸಂಪುಟಗಳು, ಮಧ್ಯಮಾವಧಿ ವಿತ್ತೀಯ ನೀತಿ ೨೦೨೩-೨೦೨೭, ಸಿ ಎ ಜಿ ವರದಿ ೨೦೨೨, ಒಕ್ಕೂಟ ಬಜೆಟ್ ಸಂಪುಟಗಳು.)

the fil favicon

SUPPORT THE FILE

Latest News

Related Posts