Thursday | November 12, 2026 |

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್‌ ಆಪರೇಷನ್‌) ಮತ್ತು ಹರಿಬಿಡಲಾಗಿದ್ದ ವಿಡಿಯೋ ಸಂಪೂರ್ಣವಾಗಿ ಕಟ್ಟು ಕಥೆ ಮತ್ತು ಬ್ಲ್ಯಾಕ್‌ಮೇಲ್‌ ಮಾಡುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿರುವ ಬೆನ್ನಲ್ಲೇ ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮನವಿಯನ್ನು  ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯು ಗೃಹ ಇಲಾಖೆಗೆ ರವಾನಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪಗಳ ಕೆಸರೆರಚಾಟ ನಡೆದಿತ್ತು. ದೆಹಲಿ ಮೂಲದ ರಿತೇಶ್ ಪಾಂಡೆ ಎಂಬುವವರನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದರು.   ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಕೆಲ ಕಾರ್ಯಕರ್ತರು ಕೂಡ ತನಿಖೆಗೆ ಹಾಜರಾಗಿದ್ದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ  ಕೃಪಾ ಆಳ್ವಾ, ಅವರನ್ನು ಸೈಬರ್‍‌ ಅಪರಾಧ ಪೊಲೀಸರು ಸಹ ವಿಚಾರಣೆ  ನಡೆಸಿದ್ಸದರು.  ಪವರ್ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರ ಮನೆ ಕಚೇರಿ ಮೇಲೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದರು.

ಈ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‍‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು   ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.  ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯು ತನ್ನ ಮುಂದಿದ್ದ ಮನವಿಯನ್ನು ಕರ್ನಾಟಕ ಸರ್ಕಾರದ ಗೃಹ ಇಲಾಖೆಗೆ ರವಾನಿಸಿರುವುದು ಮಹತ್ವ ಪಡೆದುಕೊಂಡಿದೆ. ಈ ಸಂಬಂಧ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ರಾಜಕೀಯದಲ್ಲಿ ಈ ವಿಡಿಯೋವು  ಸಂಚಲನ ಸೃಷ್ಟಿಸಿತ್ತು. ಯೂಟ್ಯೂಬ್‌ವೊಂದರಲ್ಲಿ ಪ್ರಸಾರವಾಗಿದ್ದ  ಈ ವಿಡಿಯೋವನ್ನಾಧರಿಸಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಹಲವು ಬಾರಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವಿಡಿಯೋ ಪ್ರಸಾರವನ್ನು ತಡೆಗಟ್ಟಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಮನವಿ ಸಲ್ಲಿಸಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ  ನಡೆಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಯನ್ನು  ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯ ಅಧ್ಯಕ್ಷರ  (Juvenile Justice Committee) ಪರಿಗಣನೆಗಾಗಿ ಅವರ ಮುಂದೆ ಮಂಡಿಸಿತ್ತು. ಅಲ್ಲದೇ ಬಾಲ ನ್ಯಾಯಸಮಿತಿ ಅಧ್ಯಕ್ಷರ ನಿರ್ದೇಶನದಂತೆ ಹೆಚ್‌ ಎಂ ವೆಂಕಟೇಶ್‌ ಅವರು ಸಲ್ಲಿಸಿದ್ದ ಮನವಿ ಪತ್ರ ಮತ್ತು ಅದರೊಂದಿಗೆ ಲಗತ್ತಿಸಿದ್ದ ದಾಖಲೆಗಳ ಮೇಲೆ ಅಗತ್ಯಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರದ ಗೃಹ ಇಲಾಖೆಗೆ ರವಾನಿಸಿದೆ ಎಂದು ಖುದ್ದು ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯ ಉಪ ಕಾರ್ಯದರ್ಶಿಗಳು ಹೆಚ್‌ ಎಂ ವೆಂಕಟೇಶ್‌ ಅವರಿಗೆ ಮಾಹಿತಿ ಒದಗಿಸಿದ್ದಾರೆ.

ಮಾಹಿತಿಯಲ್ಲೇನಿದೆ?

2026ರ ಅಕ್ಟೋಬರ್‍‌ 9ರಂದು  ತಾವು ಸಲ್ಲಿಸಿದ್ದ ಪತ್ರವನ್ನು  ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯ ಮಾನ್ಯ ಅಧ್ಯಕ್ಷರ (Juvenile Justice Committee) ಪರಿಗಣನೆಗಾಗಿ ಅವರ ಮುಂದೆ ಮಂಡಿಸಲಾಗಿತ್ತು.

 

 

ಬಾಲ ನ್ಯಾಯಸಮಿತಿಗೆ  ಸಲ್ಲಿಸಿರುವ ಮನವಿ ಪತ್ರ ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಕರ್ನಾಟಕ ಸರ್ಕಾರದ ಗೃಹ ಇಲಾಖೆಗೆ ರವಾನಿಸಲಾಗಿದೆ ಎಂದು ತಿಳಿಸಲು ನನಗೆ ನಿರ್ದೇಶನ ನೀಡಲಾಗಿದೆ ಎಂದು ಸಮಿತಿಯ ಉಪ ಕಾರ್ಯದರ್ಶಿಯು ಇ-ಮೈಲ್‌ ಮೂಲಕ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

ನೈಜ ಹೋರಾಟಗಾರರ ವೇದಿಕೆ ಮನವಿಯಲ್ಲೇನಿತ್ತು?

ಕರ್ನಾಟಕ ಉಚ್ಚ ನ್ಯಾಯಾಲಯದ / ಮಾನ್ಯ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ / ತನಿಖೆ ನಡೆಸುವಂತೆ ಕೋರಿ ಮನವಿ – ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಲೈಂಗಿಕ ಶೋಷಣೆ ಹಾಗೂ ‘ಹನಿಟ್ರ್ಯಾಪ್’ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಅಪ್ರಾಪ್ತ ಬಾಲಕಿ ಮತ್ತು ಉನ್ನತ ಮಟ್ಟದ ವ್ಯಕ್ತಿಗಳನ್ನು ಒಳಗೊಂಡಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು  ಮನವಿ ಸಲ್ಲಿಸಿದ್ದರು.

 

 

ಸಾರ್ವಜನಿಕ ನೈತಿಕತೆ, ಕಾನೂನಿನ ಆಳ್ವಿಕೆ ಮತ್ತು ಮುಖ್ಯವಾಗಿ ಅಪ್ರಾಪ್ತ ವಯಸ್ಸಿನ ಶೋಷಣೆಗೆ ಒಳಗಾದ ಸಂತ್ರಸ್ತೆಗೆ ದೊರೆಯಬೇಕಾದ ರಕ್ಷಣೆ ಮತ್ತು ನ್ಯಾಯಕ್ಕೆ ಸಂಬಂಧಿಸಿದಂತೆ ತೀವ್ರ ಕಳವಳ ಉಂಟುಮಾಡುವ ವಿಷಯವನ್ನು ಬಾಲ ನ್ಯಾಯಸಮಿತಿಯ ಗಮನ ಸೆಳೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಯೂ ಟ್ಯೂಬ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ ವಿಡಿಯೋವೊಂದನ್ನು ಸಹ ಸಾಕ್ಷ್ಯದ ರೂಪದಲ್ಲಿ ಒದಗಿಸಿದ್ದರು.

‘ಕರ್ನಾಟಕ ಹನಿಟ್ರ್ಯಾಪ್’ (Karnataka Honey Trap) ಎಂಬ ವಿಷಯದ ಸುತ್ತಮುತ್ತಲಿನ ಶೀರ್ಷಿಕೆ / ವಿವರಣೆಯನ್ನು ಹೊಂದಿರುವ ವಿಡಿಯೋವೊಂದು ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಕರ್ನಾಟಕ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು ಮತ್ತು ವಕೀಲರು ಭಾಗವಹಿಸಿರುವ ಚರ್ಚೆಗಳು ಇವೆ ಎಂದು ಹೇಳಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದರು.

ಈ ಆಕ್ಷೇಪಿತ ವಿಡಿಯೋದಲ್ಲಿನ ಚರ್ಚೆಗಳು, ಘಟನೆಯ ಸಂದರ್ಭದಲ್ಲಿ 14 ವರ್ಷ ವಯಸ್ಸಿನವಳಾಗಿದ್ದ ಬಾಲಕಿಯೊಬ್ಬಳ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಗಂಭೀರ ಶೋಷಣೆ / ದೌರ್ಜನ್ಯದ ಘಟನೆಯ ಸುತ್ತ ಕೇಂದ್ರೀಕೃತವಾಗಿವೆ. ಈ ಘಟನೆ ಸುಮಾರು 2011ನೇ ಇಸವಿಯಲ್ಲಿ ನಡೆದಿರುವುದಾಗಿ ಚರ್ಚೆಯಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಗಳು ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ / ಇತ್ಯರ್ಥಕ್ಕೆ ಮಾತುಕತೆ ನಡೆಸುತ್ತಿರುವುದು ಅಥವಾ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚರ್ಚಿಸುತ್ತಿರುವುದು ಹಾಗೂ ಪ್ರಕರಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಮತ್ತು ಅದರ ಕಾನೂನು ನಿರ್ವಹಣೆಯ ಕುರಿತು ಚರ್ಚೆ ಅಥವಾ ವಾದ ನಡೆಸುತ್ತಿರುವುದು ಕಂಡುಬರುತ್ತದೆ ಎಂದು ಆರೋಪಿಸಲಾಗಿದೆ.

ಸಂಭಾಷಣೆಯ ಸಂದರ್ಭದಲ್ಲಿ ಸಂತ್ರಸ್ತ ಬಾಲಕಿಗೆ ಈಗ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಈ ವಿಡಿಯೋದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾನೂನು ವೃತ್ತಿಪರರ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಕ್ಕಳ ರಕ್ಷಣಾ ಆಯೋಗಕ್ಕೆ ಸಂಬಂಧಿಸಿದ ಮಾಜಿ ಸದಸ್ಯೆ ಅಥವಾ ಅಧಿಕಾರಿಯಾಗಿರಬಹುದೆಂದು ಶಂಕಿಸಲಾದ ಮಹಿಳೆಯೊಬ್ಬರು ವಿಡಿಯೋದಲ್ಲಿ ದೃಶ್ಯಾತ್ಮಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಮನವಿಯಲ್ಲಿ ವಿವರಿಸಿದ್ದರು.

ಈ ಪ್ರಕರಣದಲ್ಲಿ ಕಾನೂನು ಸಂಬಂಧಿತ ಹಲವು ಕಳವಳಗಳು ವ್ಯಕ್ತವಾಗಿವೆ. ಅಲ್ಲದೇ ಅಪ್ರಾಪ್ತ ವಯಸ್ಸಿನವರ ಹಕ್ಕುಗಳ ರಕ್ಷಣೆಗಾಗಿ  ನ್ಯಾಯಾಂಗ ಮಧ್ಯ ಪ್ರವೇಶವು ಅಗತ್ಯವಾಗಿದೆ.   ಈ ಘಟನೆ ವರದಿಗಳ ಪ್ರಕಾರ 2011ನೇ ಇಸವಿಗೆ ಸಂಬಂಧಿಸಿದ್ದಾಗಿದ್ದರೂ, ಅಪ್ರಾಪ್ತ ವಯಸ್ಸಿನವರ ವಿರುದ್ಧ ನಡೆಯುವ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ಗಂಭೀರ ಅಪರಾಧವಾಗಿದೆ. ಇಂತಹ ಘಟನೆಯನ್ನು ಮುಚ್ಚಿಹಾಕಲು, ರಾಜಿ ಮಾಡಿಕೊಳ್ಳಲು ಅಥವಾ ‘ಹನಿಟ್ರ್ಯಾಪ್’ ಹಾಗೂ ಸುಲಿಗೆಗಾಗಿ ಬಳಸಿಕೊಳ್ಳಲು ಪ್ರಯತ್ನಿಸುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ / ಭಾರತೀಯ ನ್ಯಾಯ ಸಂಹಿತೆ ಸೇರಿದಂತೆ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದರು.

ವ್ಯವಸ್ಥಿತ ಭ್ರಷ್ಟಾಚಾರ ಮತ್ತು ಹನಿಟ್ರ್ಯಾಪ್ ಜಾಲ (Systemic Corruption & Honey-Trap Nexus)

ಕಾನೂನನ್ನು ರಕ್ಷಿಸಬೇಕಾದವರು (ವಕೀಲರು) ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಕರ್ತರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು, ಕರ್ನಾಟಕದ ನೈತಿಕ ಮತ್ತು ಕಾನೂನು ವ್ಯವಸ್ಥೆಗೆ ಬೆದರಿಕೆಯೊಡ್ಡುವ ಅಪಾಯಕಾರಿ ಜಾಲ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಹನಿಟ್ರ್ಯಾಪ್’ ದಂಧೆಯತ್ತ ಬೊಟ್ಟು ಮಾಡುತ್ತವೆ. ಹೀಗಾಗಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ.  ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಲಭ್ಯವಿದ್ದು  ನಾಗರಿಕರಲ್ಲಿ ತೀವ್ರ ಆತಂಕ ಮತ್ತು ಕಳವಳವನ್ನು ಉಂಟುಮಾಡಿರುವುದರಿಂದ, ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಉನ್ನತ ಮಟ್ಟದ ತನಿಖೆಯ ಮೂಲಕ ಅದರ ಸತ್ಯಾಸತ್ಯತೆಯನ್ನು ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ಒತ್ತಿ ಹೇಳಿದ್ದರು.

ಆರೋಪಿತವಾಗಿ ಭಾಗಿಯಾಗಿರುವ ವ್ಯಕ್ತಿಗಳ ಉನ್ನತ ಮಟ್ಟದ ಪ್ರಭಾವವನ್ನು ಗಮನಿಸಿದಾಗ, ಸಾಮಾನ್ಯ ಸ್ಥಳೀಯ ಪೊಲೀಸ್ ತನಿಖೆಯು ವ್ಯವಸ್ಥಿತ ಒತ್ತಡಗಳಿಗೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಸಂಪೂರ್ಣ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಲು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಎತ್ತಿಹಿಡಿಯಲು, ತಮ್ಮ ಘನವೆತ್ತ ಕಚೇರಿಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ವಿಡಿಯೋ ಮತ್ತು ಅದರ ಹಿಂದಿರುವ ಗಂಭೀರ ಆರೋಪಗಳನ್ನು ಸ್ವಯಂಪ್ರೇರಿತವಾಗಿ (Suo Motu) ಪರಿಗಣಿಸಿ ವಿಚಾರಣೆಗೆ ತೆಗೆದುಕೊಳ್ಳಬೇಕು. ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಹೊರತರಲು, ಮಾನ್ಯ ಭಾರತದ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಅಥವಾ ಸ್ವತಂತ್ರ ನ್ಯಾಯಾಂಗ ಆಯೋಗದ ಮೂಲಕ ಸಮಗ್ರ ಹಾಗೂ ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಬೇಕು ಅಥವಾ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದರು.

ಮೂಲ ವಿಡಿಯೋದ ಸತ್ಯಾಸತ್ಯತೆಯನ್ನು ಸುರಕ್ಷಿತವಾಗಿ ಪಡೆದು ಪರಿಶೀಲಿಸಲು ಸೂಕ್ತ ಸೈಬರ್ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು. ಕಾನೂನಿನ ಪ್ರಕಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ, ಗೌಪ್ಯತೆ ಹಾಗೂ ಕಾನೂನು ನೆರವನ್ನು ಖಚಿತಪಡಿಸಬೇಕು ನಾವು ಯೂಟ್ಯೂಬ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ವಿಡಿಯೋಗಳನ್ನು ಗಮನಿಸಿ, ನಂತರ ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದೇವೆ. ಆದರೆ, ಆಶ್ಚರ್ಯಕರ ಸಂಗತಿಯೆಂದರೆ, ಈ ವಿಡಿಯೋಗಳು ಈಗ ಯೂಟ್ಯೂಬ್‌ನಲ್ಲಿ ಲಭ್ಯವಿಲ್ಲ ಎಂದು ಬಾಲನ್ಯಾಯಸಮಿತಿ ಗಮನಸೆಳೆದಿದ್ದರು.

 

 

ಈ ವಿಡಿಯೋ ಸಂಪೂರ್ಣವಾಗಿ ಕಟ್ಟುಕಥೆ (fabricated) ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಮತ್ತು ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರ ಹೆಸರುಗಳು ಕೇಳಿಬಂದಿದ್ದು, ಇದರ ವಿರುದ್ಧ ಸಿದ್ದರಾಮಯ್ಯ ಅವರು ಅಕ್ಟೋಬರ್ 6 ರಂದು ದೂರು ದಾಖಲಿಸಿದ್ದರು.

ಇದನ್ನಾಧರಿಸಿ ನವೆಂಬರ್‍‌ 9ರಂದು ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರನ್ನು ಸೈಬರ್‍‌ ಅಪರಾಧ ಪೊಲೀಸರು ಸುದೀರ್ಘವಾಗಿ 3 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಸ್ಟಿಂಗ್‌ ಆಪರೇಷನ್‌ ಹಿಂದಿನ ಉದ್ದೇಶ, ಸಂಚು ಹಾಗೂ ಇತರೆ ವ್ಯಕ್ತಿಗಳ ಪಾತ್ರದ ಕುರಿತು ಸೈಬರ್‍‌ ಅಪರಾಧ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು.

Hot this week

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ...

ಹಾಸನ ಡಿ ಸಿ ಲತಾಕುಮಾರಿ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿದ ಸಹಾಯಕ ಪ್ರಾಧ್ಯಾಪಕ; ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

ಬೆಂಗಳೂರು;  ಪ್ರಸ್ತುತ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕೆ ಎಸ್ ಲತಾಕುಮಾರಿ ಅವರ...
Please Scan to make Your Contribution

Topics

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ...

Related Articles

Popular Categories

error: Content is protected !!