ಬೆಂಗಳೂರು; ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಗಂಭೀರ ಸ್ವರೂಪದ ಅಕ್ರಮಗಳಿಗೆ ಸಂಬಂಧಿಸಿದಂತೆ ಎಸ್ಐಟಿಯ ತೀವ್ರ ವಿಚಾರಣೆಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ಬರೆದಿರುವುದು ತಮ್ಮದೇ ಕೈಬರಹ ಎಂದು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಯಾವುದೇ ವಿವರಣೆ ನೀಡಿಲ್ಲ.
ಅಷ್ಟೇ ಅಲ್ಲ, ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ನಿಗದಿಪಡಿಸಿದ್ದ ಆಸನ ವ್ಯವಸ್ಥೆಯ ಮಾಹಿತಿ ಇಟ್ಟುಕೊಂಡಿದ್ದರು. ಹಾಗೆಯೇ ಅಭ್ಯರ್ಥಿವಾರು ನೋಂದಣಿ ಸಂಖ್ಯೆಗಳನ್ನೂ ಬರೆದಿಟ್ಟುಕೊಂಡಿದ್ದರು. ಇದನ್ನು ತನಿಖೆ ವೇಳೆಯಲ್ಲಿ ಸಾಹುಕಾರ್ ಶಿವಶಂಕರಪ್ಪ ಒಪ್ಪಿಕೊಂಡಿದ್ದಾರಾದರೂ ಅದಕ್ಕೆ ಸರಿಯಾದ ವಿವರಣೆ ನೀಡಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ಶಿವಶಂಕರಪ್ಪ ಸಾಹುಕಾರ್ ಅವರು ನಡೆಸಿರುವ ಹಣಕಾಸಿನ ವಹಿವಾಟುಗಳನ್ನು ಬಯಲು ಮಾಡಿದೆ. ಅದೇ ರೀತಿ ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಬಂದ ಅಪರಾಧದ ಆದಾಯವನ್ನು ಗಳಿಸಿರುವುದು, ಸ್ವಾಧೀನದಲ್ಲಿಟ್ಟುಕೊಳ್ಳುವುದು, ಮರೆಮಾಚುವುದು, ಬಳಸುವುದು ಹಾಗೂ ಅದೇ ಹಣವನ್ನು ಕಳಂಕರಹಿತ ಆಸ್ತಿ ಮತ್ತು ಹಲವು ಪಾವತಿಗಳನ್ನು ಬಾಡಿಗೆ ಆದಾಯವೆಂದು ಬಿಂಬಿಸಲು ಯತ್ನಿಸಿರುವುದನ್ನೂ ಸಹ ತನಿಖೆಯಲ್ಲಿ ದೃಢಪಡಿಸಿದೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ 485ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ದೋಷಾರೋಪಣೆ ಪಟ್ಟಿಯು ದಿ ಫೈಲ್ ಗೆ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜಾರಿ ನಿರ್ದೇಶನಾಲಯವು ಪಿಎಂಎಲ್ಎ 2002 ಸೆಕ್ಷನ್ 50ರ ಅಡಿಯಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಈ ಹೇಳಿಕೆಗಳನ್ನು ಪರಿಶೀಲಿಸಿದ್ದ ಜಾರಿ ನಿರ್ದೇಶನಾಲಯವು, ಈ ಪ್ರಕರಣದ ಉಳಿದ ಆರೋಪಿಗಳು ನೀಡಿದ್ದ ಹೇಳಿಕೆಗಳೊಂದಿಗೆ ತಾಳೆ ಮಾಡಿದೆ. ಅಲ್ಲದೇ ಉಳಿದ ಆರೋಪಿಗಳು ನೀಡಿರುವ ಹೇಳಿಕೆಗಳನ್ನಾಧರಿಸಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ವಿಚಾರಣೆ ನಡೆಸಿತ್ತು. ಹಲವು ಪ್ರಶ್ನೆಗಳಿಗೆ ಶಿವಶಂಕರಪ್ಪ ಸಾಹುಕಾರ್ ಅವರು ತೃಪ್ತಿಕರವಾದ ವಿವರಣೆಯನ್ನು ನೀಡಿಲ್ಲ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳೀದು ಬಂದಿದೆ.
ಶಿವಶಂಕರಪ್ಪ ಸಾಹುಕಾರ್ ಹೇಳಿಕೆಯಲ್ಲೇನಿದೆ?
ಶಿವಶಂಕರಪ್ಪ ಸಾಹುಕಾರ್ ಅವರು ಕೃಷಿ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಸಾರ್ವಜನಿಕ ಸೇವೆಗೆ ಸೇರುವ ಮೊದಲು ಸುಮಾರು 12 ವರ್ಷಗಳ ಕಾಲ ಕೃಷಿ ಮತ್ತು ಕೃಷಿ ಸಲಹಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. 2019ರರ ಸೆ.3ರಂದು ಕೆಪಿಎಸ್ಸಿ ಸದಸ್ಯರಾಗಿ ನೇಮಕವಾಗಿದ್ದರು. 2021ರ ಏಪ್ರಿಲ್ 5ರಿಂದ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಮ್ಮ ಕುಟುಂಬಕ್ಕೆ ಸುಮಾರು 120 ಎಕರೆ ಕೃಷಿ ಭೂಮಿ ಇದೆ ಎಂದು ಅವರು ತಿಳಿಸಿದ್ದಾರೆ.

ಅದರಲ್ಲಿ ಸುಮಾರು 10 ಎಕರೆ ಭೂಮಿಯನ್ನು ತಾವೇ ಕೃಷಿ ಮಾಡುತ್ತಿದ್ದು, ಉಳಿದ ಭೂಮಿಯನ್ನು ಗುತ್ತಿಗೆಗೆ ನೀಡಿದ್ದಾರೆ. ಕೆಪಿಎಸ್ಸಿಯಿಂದ ವೇತನ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಿ ತಮ್ಮ ಕುಟುಂಬಕ್ಕೆ ಬೇರೆ ಯಾವುದೇ ಆದಾಯದ ಮೂಲವಿಲ್ಲ ಎಂದು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ನಿವಾಸದಲ್ಲಿ 16 ಪ್ರಶ್ನೆ ಪತ್ರಿಕೆಗಳ ಉತ್ತರಗಳು ಪತ್ತೆ
ಅವರ ನಿವಾಸದಲ್ಲಿ ಪತ್ತೆಯಾದ ವಿವಿಧ ಕೆಪಿಎಸ್ಸಿಯ ನೇಮಕಾತಿ ಪರೀಕ್ಷೆಗಳ 16 ಪ್ರಶ್ನೆಪತ್ರಿಕೆಗಳ ಉತ್ತರದ ಕೀಗಳನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ತೋರಿಸಿದ್ದರು. ಅವುಗಳಲ್ಲಿ ಸಹಾಯಕ ಎಂಜಿನಿಯರ್ (ಮೆಕ್ಯಾನಿಕಲ್) ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆಗಳ ಉತ್ತರದ ಕೀಗಳೂ ಸೇರಿದ್ದವು. ಈ ಪರೀಕ್ಷೆಗಳು ತಾವು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿದ್ದವು ಎಂದು ಅವರು ತಿಳಿಸಿದ್ದಾರೆ. ಆದರೆ ಪರೀಕ್ಷಾ ನಿಯಂತ್ರಕರು (Controller of Examinations) ಉತ್ತರದ ಕೀಗಳನ್ನು ಪ್ರಕಟಿಸಿದ ನಂತರವಷ್ಟೇ ತಾವು ಅವುಗಳನ್ನು ಪಡೆದಿದ್ದಾಗಿ ಹೇಳಿರುವುದನ್ನು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ನಗದು ಹಣ ಜಮೆ ಮಾಡಿಲ್ಲ
ದೇವರಗುಂಡಗುರ್ಥಿಯ ಎಸ್ಎಂಜಿ ಸಿಬಿಎಸ್ಸಿ ಶಾಲೆಯ ಸ್ವೀಕೃತಿ ಮತ್ತು ಪಾವತಿ ಖಾತೆಯನ್ನು (Receipt & Payment Account) ಸಹ ಅವರಿಗೆ ತನಿಖಾಧಿಕಾರಿಗಳು ತೋರಿಸಿದ್ದರು. ಅದರಲ್ಲಿ ‘2’ ಎಂದು ಗುರುತಿಸಿ ತಮ್ಮ ಹೆಸರಿನ ಎದುರು ನಮೂದಿಸಲಾಗಿದ್ದ ರೂ.39 ಲಕ್ಷವು ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡಕ್ಕೆ ತಾವು ನೀಡಿದ ಪಾಲು ಅಥವಾ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ. ತಮ್ಮ ಪುತ್ರ ಸುದರ್ಶನ್ ಎಸ್. ಸಾಹುಕಾರ್ ಅವರು ಎಸ್ಬಿಐನಲ್ಲಿ ಹೊಂದಿದ್ದ ಖಾತೆ (ಸಂಖ್ಯೆ 42679412319ಕ್ಕೆ 29/01/2025ರಂದು) ಜಮೆಯಾದ ರೂ. 17,93,000 ನಗದು ಹಣದ ಬಗ್ಗೆ ಕೇಳಿದಾಗ, ತಮ್ಮ ಕುಟುಂಬದ ಯಾವುದೇ ಸದಸ್ಯರು ನಗದು ಹಣವನ್ನು ಜಮೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಪುತ್ರನ ಕೃಷಿ ಆದಾಯವೆಂದಿರುವ ಸಾಹುಕಾರ್, ಸಾಕ್ಷ್ಯವನ್ನೇ ಒದಗಿಸಿಲ್ಲ
ಸಾಲದ ಖಾತೆಯನ್ನು ನವೀಕರಿಸುವ ಉದ್ದೇಶದಿಂದ ಯಾವುದೇ ನೈಜ ನಗದು ಜಮೆ ಮಾಡದಿದ್ದರೂ ಬ್ಯಾಂಕ್ ಸಿಬ್ಬಂದಿ ಆ ವ್ಯವಹಾರದ ದಾಖಲೆಯನ್ನು ನಮೂದಿಸಿದ್ದಾರೆ ಎಂದು ಶಿವಶಂಕರಪ್ಪ ಸಾಹುಕಾರ್ ಹೇಳಿದ್ದಾರೆ. ತಮ್ಮ ಪುತ್ರ ಎಸ್ಬಿಐನಲ್ಲಿ ಹೊಂದಿರುವ ಖಾತೆ (ಸಂಖ್ಯೆ 41671853631) ಗೆ ಜಮೆಯಾದ ರೂ.7,50,000 ಕುರಿತು ಕೇಳಿದಾಗ, ಅದು ತಮ್ಮ ಪುತ್ರನ ಕೃಷಿ ಆದಾಯ ಎಂದು ತಿಳಿಸಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯವನ್ನು ಅವರು ಒದಗಿಸಲು ಸಾಧ್ಯವಾಗಿಲ್ಲ. ಶಹಾಪುರದ ಲಕ್ಷ್ಮಿ ನಗರದಲ್ಲಿರುವ ಆಸ್ತಿಯನ್ನು 2025ರಲ್ಲಿ ಸುಮಾರು ರೂ.10 ಲಕ್ಷಕ್ಕೆ ತಮ್ಮ ಪುತ್ರಿ ಅನುರಾಧ ಅವರ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಭೂಮಿ ಖರೀದಿಸುವ ಸಲುವಾಗಿ ನಾಗಣ್ಣ ಕಾಂತಿ ಅವರಿಗೆ ರೂ.35 ಲಕ್ಷ ಮುಂಗಡ ಹಣ ನೀಡಿರುವುದಾಗಿಯೂ, ಈ ವಿಷಯವು ಹೈಕೋರ್ಟ್ನಲ್ಲಿ ಬಾಕಿ ಇರುವುದಾಗಿಯೂ ತಿಳಿಸಿದ್ದಾರೆ. ಶಹಾಪುರದಲ್ಲಿ ಪ್ರಸ್ತಾಪಿತ ಶಾಲೆ, ಅಂಗಡಿ ಸಂಕೀರ್ಣ, ಮದುವೆ ಮಂಟಪ, ಹಾಸ್ಟೆಲ್ಗಳು, ವಿಐಪಿ ಸೂಟ್ ಕೊಠಡಿಗಳು ಮತ್ತು ರೆಸ್ಟೋರೆಂಟ್ ನಿರ್ಮಾಣಕ್ಕೆ ಸಂಬಂಧಿಸಿದ ವಿನ್ಯಾಸಗಳು ಹಾಗೂ ನಕ್ಷೆಗಳನ್ನು ಅವರ ನಿವಾಸದಲ್ಲಿ ಪತ್ತೆಹಚ್ಚಲಾಗಿತ್ತು. ಅವುಗಳನ್ನು ತನಿಖಾಧಿಕಾರಿ ತೋರಿಸಿದಾಗ, ಧಾರವಾಡದ ಸೃಷ್ಟಿ ಪಿಯು ಕಾಲೇಜಿನ ಮಾಲೀಕರಾದ ಶಿವು ಸಾಹುಕಾರ್ ಅವರು ಚರ್ಚೆಗಾಗಿ ಅವುಗಳನ್ನು ತಂದು ತಮ್ಮ ಬಳಿ ಬಿಟ್ಟುಹೋಗಿದ್ದರು ಎಂದು ತಿಳಿಸಿದ್ದಾರೆ. ಪ್ರಸ್ತಾಪಿತ ಯೋಜನೆಯಲ್ಲಿ ತಮಗೆ ಯಾವುದೇ ಆಸಕ್ತಿ ಅಥವಾ ಹೂಡಿಕೆ ಇಲ್ಲ ಎಂದು ಹೇಳಿದ್ದಾರೆ.

ಕೆಪಿಎಸ್ಸಿ ಕಚೇರಿ ಕೊಠಡಿಯಲ್ಲಿ ಸಿಕ್ಕ ಬ್ಯಾಂಕ್ ಠೇವಣಿ ಚೀಟಿ ಯಾರಿಗೆ ಸೇರಿವೆ?
ಕೆಪಿಎಸ್ಸಿ ಕಚೇರಿಯಲ್ಲಿರುವ ತಮ್ಮ ಕೊಠಡಿಯ ಡ್ರಾಯರ್ನಲ್ಲಿ ಪತ್ತೆಯಾಗಿದ್ದ ಬ್ಯಾಂಕ್ ಠೇವಣಿ ಚೀಟಿಗಳನ್ನು ತನಿಖಾಧಿಕಾರಿಯು ಶಿವಶಂಕರಪ್ಪ ಸಾಹುಕಾರ್ ಅವರಿಗೆ ತೋರಿಸಿ ವಿಚಾರಿಸಿದ್ದರು. ಈ ಚೀಟಿಗಳಲ್ಲಿ ಕೆಪಿಎಸ್ಸಿ ಸದಸ್ಯರಾದ ಬಿ ವಿ ಗೀತಾ ಅವರ ಪುತ್ರಿ ಕುಮಾರಿ ಶೀತಲ್ ಪಾಟೀಲ್ ಮತ್ತು ಅವರ ಮನೆ ಮಾಲೀಕರಾದ ಚಂದ್ರಹಾಸ್ ಕೆ. ಅವರ ಬ್ಯಾಂಕ್ ಖಾತೆಗಳಿಗೆ ನಗದು ಹಣ ಜಮೆ ಮಾಡಿರುವ ವಿವರಗಳಿದ್ದವು. ಆ ಚೀಟಿಗಳನ್ನು ತಮ್ಮ ಆಪ್ತ ಸಹಾಯಕ ಮೋಹನ್ ಅವರು ಇಟ್ಟಿದ್ದರು. ಮತ್ತು ಆ ಠೇವಣಿಗಳ ಬಗ್ಗೆ ತಮಗೆ ಏನೂ ತಿಳಿದಿರಲಿಲ್ಲ ಎಂದು ಅವರು ಶಿವಶಂಕರಪ್ಪ ಸಾಹುಕಾರ್ ತಿಳಿಸಿದ್ದರು.
ಹಣ ವರ್ಗಾವಣೆ ಒಪ್ಪಿಕೊಂಡಿದ್ದ ಸಾಹುಕಾರ್
ಆದರೆ ಬಿ.ವಿ. ಗೀತಾ ಅವರಿಗೆ ರೂ.6,75,000 ಮತ್ತು ಕುಮಾರಿ ಶೀತಲ್ ಪಾಟೀಲ್ ಅವರಿಗೆ ರೂ.10,83,000 ವರ್ಗಾಯಿಸಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಗೀತಾ ಅವರ ಕೋರಿಕೆಯ ಮೇರೆಗೆ ಅವರ ಪುತ್ರಿಯ ವೈದ್ಯಕೀಯ ಶಿಕ್ಷಣಕ್ಕಾಗಿ ಕೈ ಸಾಲವಾಗಿ ಈ ಹಣವನ್ನು ನೀಡಿದ್ದಾಗಿ ಮತ್ತು ಅದನ್ನು ಇನ್ನೂ ಹಿಂದಿರುಗಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ತಮ್ಮ ಆಪ್ತ ಕಾರ್ಯದರ್ಶಿಗಳಾದ ಮೋಹನ್ ಮತ್ತು ಕೃಷ್ಣ ಅವರು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ವಿಮಾನ ಮತ್ತು ರೈಲು ಟಿಕೆಟ್ಗಳನ್ನು ಕಾಯ್ದಿರಿಸುತ್ತಿದ್ದರು. ಆ ಟಿಕೆಟ್ಗಳ ವೆಚ್ಚವನ್ನು ತಾವು ತಮ್ಮ ಬ್ಯಾಂಕ್ ಖಾತೆಯ ಮೂಲಕ ಮರುಪಾವತಿಸುತ್ತಿದ್ದುದಾಗಿ ತಿಳಿಸಿದ್ದಾರೆ.

ಎರಡನೇ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿದ್ದೇನು?
ಹಾಗೆಯೇ ಅವರ ನಿವಾಸದಲ್ಲಿ ನಡೆಸಿದ ಎರಡನೇ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, PMLA, 2002ರ ಸೆಕ್ಷನ್ 17ರ ಅಡಿಯಲ್ಲಿ ಅವರ ಹೇಳಿಕೆಯನ್ನು ತನಿಖಾಧಿಕಾರಿಯು ದಾಖಲಿಸಿದ್ದಾರೆ. 2025ರಿಂದ ಗೋಕಾಕ್ನ ನಿವೃತ್ತ ಎಲ್ಐಸಿ ಅಧಿಕಾರಿ ಮಲ್ಲಿಕಾರ್ಜುನ ಅವರ ಮೂಲಕ ಮಲ್ಲಪ್ಪ ಹಿತ್ತಲಮನಿ ಅವರ ಪರಿಚಯವಾಗಿದೆ ಎಂದು ಅವರು ತಿಳಿಸಿದ್ದಾರೆ. 2025ರಲ್ಲಿ ವಿವಾಹ ಸಂಬಂಧಗಳ ಕುರಿತು ಚರ್ಚಿಸಲು ಮಲ್ಲಪ್ಪ ಹಿತ್ತಲಮನಿ ಅವರನ್ನು ತಮ್ಮ ನಿವಾಸದಲ್ಲಿ ಎರಡು ಬಾರಿ ಭೇಟಿಯಾಗಿದ್ದಾಗಿ ಹೇಳಿದ್ದಾರೆ. ಅವರೊಂದಿಗೆ ಯಾವುದೇ ಆರ್ಥಿಕ ಸಂಬಂಧವಿಲ್ಲ ಮತ್ತು ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ಪರಿಚಯವೂ ತಮಗಿಲ್ಲ ಎಂದು ತನಿಖಾಧಿಕಾರಿಗೆ ತಿಳಿಸಿದ್ದಾರೆ.
ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಮತ್ತು ಮಲ್ಲಪ್ಪ ಹಿತ್ತಲಮನಿ ಅವರು 2026ರ ಸೆ.28ರಂದು ನೀಡಿದ ಹೇಳಿಕೆಗಳನ್ನು ಶಿವಶಂಕರಪ್ಪ ಸಾಹುಕಾರ್ ಗೆ ತೋರಿಸಿದ್ದರು. ಮಲ್ಲಪ್ಪ ಹಿತ್ತಲಮನಿ ಅವರಿಂದ ತಾವು ಯಾವುದೇ ನಗದು ಹಣ ಸ್ವೀಕರಿಸಿಲ್ಲ ಎಂದು ಸಾಹುಕಾರ್ ನಿರಾಕರಿಸಿದ್ದಾರೆ. ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೀಡಿದ ಹೇಳಿಕೆಯನ್ನು ತೋರಿಸಿದಾಗ, ಆರು ಅಭ್ಯರ್ಥಿಗಳ ಉತ್ತರದ ಕೀಗಳನ್ನು ತಾವು ನೇರವಾಗಿ ಅಥವಾ ಬಿ.ವಿ. ಗೀತಾ ಅವರ ಮೂಲಕ ಸ್ವೀಕರಿಸಿಲ್ಲ ಎಂದು ನಿರಾಕರಿಸಿದ್ದಾರೆ.
ಹಳದಿ ಬಣ್ಣದ ‘Solo Notes’
ಸಾಹುಕಾರ್ ಮಲಗುವ ಕೋಣೆಯಲ್ಲಿ ಪತ್ತೆಯಾದ ಹಳದಿ ಬಣ್ಣದ ‘Solo Notes’ ನೋಟ್ಬುಕ್ ಅನ್ನು ಅವರಿಗೆ ತೋರಿಸಲಾಗಿತ್ತು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳ ಕೆಪಿಎಸ್ಸಿ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ವಿಂಗಡಿಸಿ ಬರೆದಿರುವುದು ತಮ್ಮದೇ ಕೈಬರಹ ಎಂದು ಅವರು ದೃಢಪಡಿಸಿದ್ದಾರೆ. 2026ರ ಜನವರಿ 9ರಂದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಈ ವಿವರಗಳನ್ನು ಬರೆದಿದ್ದಾಗಿ ಅವರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಕೇವಲ ಭೇಟಿ ನೀಡುವುದಕ್ಕಾಗಿ ಇಷ್ಟು ವಿವರವಾದ ಆಸನ ವ್ಯವಸ್ಥೆಯ ಮಾಹಿತಿಯ ಅಗತ್ಯ ಏಕೆ ಇತ್ತು ಎಂದು ತನಿಖಾಧಿಕಾರಿಯು ಕೇಳಿದಾಗ, ಅಭ್ಯರ್ಥಿವಾರು ನೋಂದಣಿ ಸಂಖ್ಯೆಗಳನ್ನು ಬರೆದಿರುವುದನ್ನು ಒಪ್ಪಿಕೊಂಡರೂ, ಅದಕ್ಕೆ ಯಾವುದೇ ವಿವರಣೆ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಅವರ ನಿವಾಸದಲ್ಲಿ ಪತ್ತೆಯಾದ ಏಕೈಕ ಕಚೇರಿ ನೋಟ್ಬುಕ್ ಅದೊಂದೇ ಆಗಿರುವುದಕ್ಕೆ ಕಾರಣವನ್ನೂ ವಿವರಿಸಲು ಸಾಧ್ಯವಾಗಲಿಲ್ಲ.
ಒಪ್ಪಿಕೊಂಡಿರುವ ಇತರೆ ವಿಷಯಗಳೇನು?
ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ಬರೆದಿರುವುದು ತಮ್ಮದೇ ಕೈಬರಹ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಫಲಾನುಭವಿ ಅಭ್ಯರ್ಥಿಯ ತಂದೆಯಾದ ಮಲ್ಲಪ್ಪ ಹಿತ್ತಲಮನಿ ಅವರನ್ನು ತಮ್ಮ ನಿವಾಸದಲ್ಲಿ ಎರಡು ಬಾರಿ ಭೇಟಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬಿ.ವಿ. ಗೀತಾ ಅವರಿಗೆ ರೂ.6,75,000 ಮತ್ತು ಅವರ ಪುತ್ರಿಗೆ ರೂ.10,83,000 ಅನ್ನು ಕೈ ಸಾಲವೆಂದು ವರ್ಗಾಯಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆ ಹಣವನ್ನು ಹಿಂದಿರುಗಿಸಲಾಗಿಲ್ಲ.
ಬಿ.ವಿ. ಗೀತಾ, ಅವರ ಪುತ್ರಿ ಮತ್ತು ಅವರ ಮನೆ ಮಾಲೀಕರ ಬ್ಯಾಂಕ್ ಖಾತೆಗಳಿಗೆ ನಗದು ಹಣ ಜಮೆ ಮಾಡಿರುವ ಠೇವಣಿ ಚೀಟಿಗಳು ಅವರ ಕೊಠಡಿಯಲ್ಲಿ ಪತ್ತೆಯಾಗಿವೆ. ಕೆಪಿಎಸ್ಸಿಯ 16 ಪರೀಕ್ಷೆಗಳ ಉತ್ತರದ ಕೀಗಳು, ಶಾಲೆಗೆ ನೀಡಿದ ರೂ.39 ಲಕ್ಷ ಕೊಡುಗೆ, ಅವರ ಪುತ್ರನ ಖಾತೆಯಲ್ಲಿ ರೂ.17,93,000 ನಗದು ಠೇವಣಿ, ಭೂಮಿಗಾಗಿ ನೀಡಿದ ರೂ.35 ಲಕ್ಷ ಮುಂಗಡ ಹಣ ಹಾಗೂ ದೊಡ್ಡ ಶಾಲೆ ಮತ್ತು ವಾಣಿಜ್ಯ ಯೋಜನೆಗೆ ಸಂಬಂಧಿಸಿದ ನಕ್ಷೆಗಳು ಅವರ ನಿವಾಸದಲ್ಲಿ ಪತ್ತೆಯಾಗಿವೆ. ಇವುಗಳಿಗೆ ಅವರು ತೃಪ್ತಿಕರವಾದ ವಿವರಣೆ ನೀಡಿಲ್ಲ.
ವಿರೋಧಾಭಾಸಕ್ಕೆ ಒಳಗಾದ ನಿರಾಕರಣೆ
ಪಿಎಂಎಲ್ಎ 2002ರ ಸೆಕ್ಷನ್ 17ರ ಅಡಿಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ದಾಖಲಿಸಲಾದ ಶಿವಶಂಕರಪ್ಪ ಸಾಹುಕಾರ್ ಅವರ ಮೇಲಿನ ಹೇಳಿಕೆಗಳಿಂದ, ಉತ್ತರದ ಕೀಗಳ ಸೋರಿಕೆಯಲ್ಲಿ ತಮ್ಮ ಪಾತ್ರವಿಲ್ಲ ಎಂಬ ಅವರ ನಿರಾಕರಣೆಯು ಕೆಳಗಿನ ಅಂಶಗಳಿಂದ ವಿರೋಧಾಭಾಸಕ್ಕೆ ಒಳಗಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

ಹೂಡಿಕೆಗಳಿಗೆ ಸಿಗದ ಸಮರ್ಪಕ ವಿವರಣೆ
ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ತಮ್ಮದೇ ಕೈಬರಹದಲ್ಲಿ ಬರೆದಿರುವುದು., ಫಲಾನುಭವಿ ಅಭ್ಯರ್ಥಿಯ ತಂದೆಯನ್ನು ಭೇಟಿಯಾಗಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ. ಬಿ.ವಿ. ಗೀತಾ ಮತ್ತು ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ಹಣ ವರ್ಗಾವಣೆ ಮಾಡಿರುವುದು ಹಾಗೂ ನಗದು ಠೇವಣಿಗಳನ್ನು ಮಾಡಿಸಿರುವುದನ್ನೂ ಒಪ್ಪಿಕೊಂಡಿದ್ದಾರೆ. ಹಾಗೆಯೇ ಅವರ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಪತ್ತೆಯಾದ ನಗದು ಜಮೆಗಳು ಹಾಗೂ ಹೂಡಿಕೆಗಳಿಗೆ ಇನ್ನೂ ಸಮರ್ಪಕ ವಿವರಣೆ ನೀಡಲಾಗಿಲ್ಲ.
ಹಣಕ್ಕೆ ಬೇಡಿಕೆ ಇಟ್ಟಿಲ್ಲ, ಹಣ ಸಂಗ್ರಹಿಸಿಲ್ಲ
ಡಾ. ಸೂಗುರೇಶ್ ಅವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಮ್ಮ ಸ್ವಗ್ರಾಮವಾದ ಶಾವಂತಗೇರಿಯವರು., ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ತಂದೆಯ ಪರಿಚಯ ತಮಗಿದೆ. ಅವರನ್ನು ತಮ್ಮ ನಿವಾಸದಲ್ಲಿ ಎರಡು ಬಾರಿ ಭೇಟಿಯಾಗಿದ್ದೇನೆ. ಉತ್ತರದ ಕೀಗಳನ್ನು ಒದಗಿಸುವುದಕ್ಕಾಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿಲ್ಲ ಅಥವಾ ಹಣ ಸಂಗ್ರಹಿಸಿಲ್ಲ ಎಂದು ನಿರಾಕರಿಸಿದ್ದಾರೆ. ತಾವು ಶಿಫಾರಸು ಮಾಡಿದ ಅಭ್ಯರ್ಥಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವುದಾಗಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಭರವಸೆ ನೀಡಿಲ್ಲ ಎಂದು ತನಿಖಾಧಿಕಾರಿ ಮುಂದೆ ಶಿವಶಂಕರಪ್ಪ ಸಾಹುಕಾರ್ ಅವರು ನಿರಾಕರಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಎಸ್ಎಂಜಿ ಸಿಬಿಎಸ್ಇ ಶಾಲೆಯ ಕುರಿತು ಸಾಹುಕಾರ್ ಶಿವಶಂಕರಪ್ಪ ವಿವರಣೆ ನೀಡಿದ್ದಾರೆ. ತಾವು ಮತ್ತು ಇತರ 13 ಮಂದಿ ಸೇರಿ ಹೊಸ ಸಿಬಿಎಸ್ಇ ಶಾಲೆಯನ್ನು ತೆರೆಯಲು ‘ಶ್ರೀ ಮೈಲಾರಲಿಂಗೇಶ್ವರ ಗುಂಡುಗುರ್ತಿ ಟ್ರಸ್ಟ್’ ಸ್ಥಾಪಿಸಿದ್ದಾಗಿ ತಿಳಿಸಿದ್ದಾರೆ. ಶಾಲಾ ಕಟ್ಟಡದ ನಿರ್ಮಾಣವು ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾಗಿತ್ತು ಎಂದು ಹೇಳಿದ್ದಾರೆ. ಸಡಿಲ ಹಾಳೆ ಸಂಖ್ಯೆ 194ರ ಕುರಿತು, ಅದು ತಮ್ಮ ಪತ್ನಿ ವಿಜಯಲಕ್ಷ್ಮಿ ಸಾಹುಕಾರ್ ಅವರ ಹೆಸರಿನಲ್ಲಿರುವ ಶಹಾಪುರ ತಾಲ್ಲೂಕಿನ ಮದ್ರಕಿಯ ಭೂಮಿಯಲ್ಲಿ ಪ್ರಸ್ತಾಪಿಸಲಾಗಿದ್ದ ವಸತಿ ಶಾಲೆಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.

ಶಿವು ಸಹುಕಾರ್ ಅವರು ಆ ಜಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಶಾಲೆ, ಮದುವೆ ಮಂಟಪ, ವಾಣಿಜ್ಯ ಸಂಕೀರ್ಣ ಮತ್ತು ರೆಸ್ಟೋರೆಂಟ್ ನಿರ್ಮಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಆ ಪ್ರಸ್ತಾಪ ಕಾರ್ಯರೂಪಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯರು ಹಾಗೂ ತಮ್ಮ ಹೆಸರಿನಲ್ಲಿ, ತಮ್ಮ ಪತ್ನಿ ಮತ್ತು ಪುತ್ರರ ಹೆಸರಿನಲ್ಲಿ ಹೊಂದಿರುವ ಸ್ಥಿರಾಸ್ತಿಗಳ ವಿವರಗಳನ್ನು (12/10/2026 ಮತ್ತು 13/10/2026ರಂದು ) ನೀಡಿದ ಹೇಳಿಕೆಗಳಲ್ಲಿ ಮಾಹಿತಿ ಒದಗಿಸಿದ್ದಾರೆ.
ಇವುಗಳಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸುಮಾರು 121 ಎಕರೆ ಕೃಷಿ ಭೂಮಿ, ನಿವೇಶನಗಳು, ಕಲಬುರಗಿಯಲ್ಲಿರುವ ಸೈಟ್ ಮತ್ತು ಮನೆ ಹಾಗೂ ಅಂಗಡಿಗಳು ಸೇರಿವೆ. ಈ ಆಸ್ತಿಗಳ ಖರೀದಿಗೆ ಯಾವಯಾವ ಮೂಲಗಳಿಂದ ಹಣ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಿತ್ರಾರ್ಜಿತವಾಗಿ ಬಂದ 35.05 ಎಕರೆ ಭೂಮಿಗೆ ಸಂಬಂಧಿಸಿದಂತೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2017–18ರಲ್ಲಿ ಪಡೆದ ರೂ.3,17,28,625 ಪರಿಹಾರ ಮೊತ್ತ., 2022ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (NHAI) ಪಡೆದ ರೂ.1,76,65,702 ಪರಿಹಾರ ಮೊತ್ತ., ಕೃಷಿ ಆದಾಯ ಹಾಗೂ ಅಂಗಡಿಗಳು ಮತ್ತು ಮನೆಗಳಿಂದ ಬಂದ ಬಾಡಿಗೆ ಆದಾಯ. ಕೆಲವು ಭೂಮಿಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಗದು ಹಣ ನೀಡಿ ಖರೀದಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಗಂಗ್ವಾರ್ ಹೇಳಿಕೆ ನಿರಾಕರಿಸಿರುವ ಸಾಹುಕಾರ್
ಕೆಎಎಸ್ ಸಂದರ್ಶನ ಮಂಡಳಿಗಳಿಗೆ ಸಂಬಂಧಿಸಿದಂತೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು 2026ರ ಸೆ.24ರಂದು ನೀಡಿದ ಹೇಳಿಕೆಯನ್ನು ತೋರಿಸಿದಾಗ, ಶಿವಶಂಕರಪ್ಪ ಸಹುಕಾರ್ ಅವರು ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ಅಭ್ಯರ್ಥಿಗಳ ಮುಖ್ಯ ಪರೀಕ್ಷೆಯ (Mains) ಅಂಕಗಳಿಗಾಗಿ ತಾವು ಮತ್ತು ಶ್ರೀ ಮುಸ್ತಫಾ ಅವರು ಗಂಗ್ವಾರ್ ಅವರನ್ನು ಸಂಪರ್ಕಿಸಿರಲಿಲ್ಲ ಎಂದು ತಿಳಿಸಿದ್ದಾರೆ. 2026ರ ಸೆ .29ರಂದು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೀಡಿದ ಹೇಳಿಕೆಯನ್ನು ತೋರಿಸಿ 2026ರ ಅಕ್ಟೋಬರ್ 15ರಂದು ಪ್ರಶ್ನಿಸಿದಾಗ, ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವುದಾಗಿ ಗಂಗ್ವಾರ್ ಅವರಿಗೆ ಭರವಸೆ ನೀಡಿದ್ದನ್ನು, ಉತ್ತರದ ಕೀಗಳನ್ನು ಸಂಗ್ರಹಿಸಲು ಬಿ.ವಿ. ಗೀತಾ ಅವರನ್ನು ಕಳುಹಿಸಿದ್ದನ್ನು ಮತ್ತು ಅಭ್ಯರ್ಥಿಗಳಿಂದ ಯಾವುದೇ ಹಣ ಸ್ವೀಕರಿಸಿದ್ದನ್ನು ಅವರು ನಿರಾಕರಿಸಿದ್ದಾರೆ.
ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ಹಣ ಸಂಗ್ರಹಿಸಿದ್ದರೇ?
ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ಹಣ ಸಂಗ್ರಹಿಸಲಾಗಿದೆ ಎಂಬ ಕುರಿತು ಕೆಪಿಎಸ್ಸಿಯ ನಿವೃತ್ತ ಸಹಾಯಕ ಕಾರ್ಯದರ್ಶಿ ಪ್ರಕಾಶ್ ಟಿ. ಅವರ ಹೇಳಿಕೆಗಳನ್ನು ತನಿಖಾಧಿಕಾರಿಯು ತೋರಿಸಿದಾಗ, ಅವುಗಳನ್ನು ನಿರಾಕರಿಸಿದ್ದಾರೆ. 2016ರ ನೇಮಕಾತಿ ತಮ್ಮ ಅಧಿಕಾರಾವಧಿಯಲ್ಲಿ ನಡೆದಿರಲಿಲ್ಲ ಎಂದು ತಿಳಿಸಿದ್ದಾರೆ. ಆರು ಅಭ್ಯರ್ಥಿಗಳಲ್ಲಿ ಯಾರೊಬ್ಬರ ಪರಿಚಯವೂ ತಮಗಿಲ್ಲ ಎಂದು ಅವರು ಹೇಳಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ಡಾ. ಸೂಗುರೇಶ್ ಅವರು ಹತ್ತಿರದ ಗ್ರಾಮದವರು ಎಂಬುದಾಗಿ ಮಾಧ್ಯಮಗಳ ಮೂಲಕವಷ್ಟೇ ತಿಳಿದುಕೊಂಡಿದ್ದಾಗಿ ತಿಳಿಸಿದ್ದಾರೆ. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಉತ್ತರದ ಕೀಗಳಿಗಾಗಿ ತಾವು ಬಿ.ವಿ. ಗೀತಾ ಅಥವಾ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸಂಪರ್ಕಿಸಿಲ್ಲ ಎಂದೂ ನಿರಾಕರಿಸಿದ್ದಾರೆ. ಮಲ್ಲಿನಾಥ್ ಸಹುಕಾರ್ ಅವರು ತಮ್ಮ ಸಹೋದರ ಮಹಾಂತಪ್ಪ ಸಹುಕಾರ್ ಅವರ ಪುತ್ರರಾಗಿದ್ದು, ಕಲಬುರಗಿಯಲ್ಲಿರುವ ತಮ್ಮ ಮನೆ ಮತ್ತು ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರ ತಂದೆಯಾದ ಬಸವರಾಜಪ್ಪ ಮತ್ತು ಡಾ. ಸೂಗುರೇಶ್ ಅವರ ತಂದೆಯಾದ ಸತೀಶ್ ಬಾಬು ಅವರು 2026ರ ಆಗಸ್ಟ್ 18ರಂದು ನೀಡಿದ ಹೇಳಿಕೆಗಳನ್ನು ಅವರಿಗೆ ತನಿಖಾಧಿಕಾರಿ ತೋರಿಸಿದ್ದರು. ಬಸವರಾಜಪ್ಪ ಅವರ ಮೊಬೈಲ್ ಫೋನ್ನಲ್ಲಿ ಮಲ್ಲಿನಾಥ್ ಸಹುಕಾರ್ ಅವರ ಮೊಬೈಲ್ ಸಂಖ್ಯೆ 9902396459 ಅನ್ನು ‘KPSC ಅಧ್ಯಕ್ಷರ ಆಪ್ತ ಸಹಚರ ಮಲ್ಲಿನಾಥ್ ಸಾಹುಕಾರ್’ ಎಂದು ಉಳಿಸಲಾಗಿತ್ತು. ಸತೀಶ್ ಬಾಬು ಅವರ ಮೊಬೈಲ್ ಫೋನ್ನಲ್ಲಿ ಅದೇ ಸಂಖ್ಯೆಯನ್ನು ‘Mallinath S G’ ಎಂದು ಉಳಿಸಲಾಗಿತ್ತು. ಅವರಿಬ್ಬರು ಮತ್ತು ಮಲ್ಲಿನಾಥ್ ಸಹುಕಾರ್ ಅವರ ನಡುವಿನ ಯಾವುದೇ ದೂರವಾಣಿ ಸಂಪರ್ಕದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಅವರಿಗೆ ಉತ್ತರದ ಕೀಗಳನ್ನು ಒದಗಿಸಿರುವುದನ್ನೂ ನಿರಾಕರಿಸಿದ್ದಾರೆ.
2025–26ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಕುಮಾರಿ ಶೀತಲ್ ಎಸ್ ಪಾಟೀಲ್ ಅವರ ಆದಾಯದ ವಿವರವನ್ನು ಅವರಿಗೆ ತೋರಿಸಿದ್ದರು. ಅದರಲ್ಲಿ ಅವರ HIG ಮನೆ ಆಸ್ತಿಯಿಂದ ಬಾಡಿಗೆ ಆದಾಯ ಬಂದಿದೆ ಎಂದು ಘೋಷಿಸಲಾಗಿತ್ತು ಮತ್ತು ಶಿವಶಂಕರಪ್ಪ ಸಾಹುಕಾರ್ ಅವರನ್ನು ಬಾಡಿಗೆದಾರರೆಂದು ನಮೂದಿಸಲಾಗಿತ್ತು. ತಾವು ಆ ಕಟ್ಟಡದಲ್ಲಿ ಎಂದಿಗೂ ವಾಸಿಸಿರಲಿಲ್ಲ; ಅಲ್ಲಿ ಸ್ವತಃ ಬಿ ವಿ ಗೀತಾ ಅವರೇ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ತಾವು ಪ್ರತಿ ತಿಂಗಳು ಹಣ ಪಾವತಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಬಹುತೇಕ ಹಣವನ್ನು ಕುಮಾರಿ ಶೀತಲ್ ಎಸ್. ಪಾಟೀಲ್ ಅವರಿಗೆ ಮತ್ತು ಕೆಲವೊಮ್ಮೆ ಬಿ.ವಿ. ಗೀತಾ ಅವರಿಗೆ ಪಾವತಿಸುತ್ತಿದ್ದುದಾಗಿ ತಿಳಿಸಿದ್ದಾರೆ.
2025ರ ಮಾರ್ಚ್ 31ರ ವೇಳೆಗೆ ಕುಮಾರಿ ಶೀತಲ್ ಎಸ್. ಪಾಟೀಲ್ ಅವರಿಗೆ ಒಟ್ಟು ರೂ.49.36 ಲಕ್ಷ ಮತ್ತು ಬಿ.ವಿ. ಗೀತಾ ಅವರಿಗೆ ರೂ.7.55 ಲಕ್ಷ ಪಾವತಿಸಿರುವುದಾಗಿ ತಿಳಿಸಿದ್ದಾರೆ. ಕುಟುಂಬದ ಸ್ನೇಹಿತೆ ಮತ್ತು ಸಹೋದ್ಯೋಗಿಯಾಗಿರುವ ಗೀತಾ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಪಾವತಿಗಳನ್ನು ಮಾಡಿದ್ದಾಗಿ, ಇದಕ್ಕಾಗಿ ಯಾವುದೇ ಒಪ್ಪಂದ ಇರಲಿಲ್ಲವೆಂದು ಹಾಗೂ ಅವುಗಳನ್ನು ಬಾಡಿಗೆ ಆದಾಯವೆಂದು ಏಕೆ ಘೋಷಿಸಲಾಗಿದೆ ಎಂಬುದು ತಮಗೆ ತಿಳಿದಿಲ್ಲವೆಂದು ಹೇಳಿದ್ದಾರೆ.
ತಮ್ಮ ಆದಾಯವು ವೇತನ, ಕೃಷಿ ಆದಾಯ, ವಿಮಾ ಪಾಲಿಸಿಗಳ ಮೆಚ್ಯೂರಿಟಿ ಮೊತ್ತ ಮತ್ತು ಬ್ಯಾಂಕ್ ಬಡ್ಡಿಯಿಂದ ಬರುತ್ತದೆ ಎಂದು ತಿಳಿಸಿದ್ದಾರೆ. ತಮ್ಮ ಮತ್ತು ತಮ್ಮ ಪತ್ನಿಯ ಹೆಸರಿನಲ್ಲಿ ರೂ.50 ಲಕ್ಷ ಕೃಷಿ ಸಾಲವಿದೆ. ತಮ್ಮ ಕುಟುಂಬವು ಒಟ್ಟು 121 ಎಕರೆ ಕೃಷಿ ಭೂಮಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
2023–24ನೇ ಹಣಕಾಸು ವರ್ಷದಿಂದ ಇಲ್ಲಿಯವರೆಗೆ ಎರಡು ಅಥವಾ ಮೂರು ಸಂದರ್ಭಗಳಲ್ಲಿ ಮಾತ್ರ ರೂ.5 ಲಕ್ಷದಿಂದ ರೂ.8 ಲಕ್ಷದವರೆಗೆ ನಗದು ಹಣವನ್ನು ಹಿಂಪಡೆದಿದ್ದಾಗಿ ತಿಳಿಸಿದ್ದಾರೆ. ತಮ್ಮ ಬಳಿ ಗರಿಷ್ಠ ರೂ.1 ಲಕ್ಷದಿಂದ ರೂ.5 ಲಕ್ಷದವರೆಗೆ ಮಾತ್ರ ನಗದು ಇಟ್ಟುಕೊಳ್ಳುತ್ತಿದ್ದುದಾಗಿ ಹೇಳಿದ್ದಾರೆ. ಯಾರೂ ತಮಗೆ ನಗದು ಹಣ ನೀಡಿಲ್ಲ ಮತ್ತು ತಾವು ಕುಟುಂಬದ ಸದಸ್ಯರಿಗೆ ಮಾತ್ರ ನಗದು ಹಣ ನೀಡಿದ್ದಾಗಿ ತಿಳಿಸಿದ್ದಾರೆ.

ಸಂಗಪ್ಪ ಪಟ್ಟಣಶೆಟ್ಟಿ ದಯಾನಂದ್ ಅವರು ತಮ್ಮ ಸಮುದಾಯ ಮತ್ತು ಪ್ರದೇಶಕ್ಕೆ ಸೇರಿದವರಾಗಿದ್ದು, ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಅವರೊಂದಿಗೆ ಯಾವುದೇ ಹಣಕಾಸಿನ ಅಥವಾ ನಗದು ವ್ಯವಹಾರಗಳನ್ನು ನಡೆಸಿರುವುದನ್ನು ನಿರಾಕರಿಸಿದ್ದಾರೆ. ಅವರಿಗೆ ಸಹಾಯ ಮಾಡಿರುವುದನ್ನೂ ನಿರಾಕರಿಸಿದ್ದಾರೆ. ಅವರು ತಮ್ಮ ಮತ್ತು ತಮ್ಮ ಪತ್ನಿಯ 2017–18ರಿಂದ 2025–26ರವರೆಗಿನ ಹಣಕಾಸು ವರ್ಷಗಳ ಆದಾಯದ ವಿವರಗಳನ್ನು ಸಲ್ಲಿಸಿದ್ದಾರೆ. ಎಲ್ಲಾ ಆದಾಯವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್.ಪಿ. ದಯಾನಂದ್ ನೀಡಿದ ಹೇಳಿಕೆಗಳು ಹಾಗೂ ಅವರ ಕಾರು (KA 50 MA 4888)ಯಿಂದ ವಶಪಡಿಸಿಕೊಳ್ಳಲಾದ ಸಡಿಲ ಹಾಳೆಗಳನ್ನು ತೋರಿಸಿ ತನಿಖಾಧಿಕಾರಿಯು ಪ್ರಶ್ನಿಸಿದ್ದರು. ರೂ. 1.25 ಕೋಟಿ ಮೊತ್ತದ ಒಪ್ಪಂದಕ್ಕೆ ಸಂಬಂಧಿಸಿದ ಕೆಎಎಸ್ ಅಭ್ಯರ್ಥಿ ಮತ್ತು ರೂ.30 ಲಕ್ಷದ ಒಪ್ಪಂದಕ್ಕೆ ಸಂಬಂಧಿಸಿದ ಎಇಇ ಅಭ್ಯರ್ಥಿ ಸೇರಿದಂತೆ ಅಭ್ಯರ್ಥಿಗಳನ್ನು ದಯಾನಂದ್ ತಮ್ಮ ಬಳಿ ಕಳುಹಿಸಿದ್ದರು ಎಂಬುದನ್ನು ನಿರಾಕರಿಸಿದ್ದಾರೆ. 2025ರ ಆಗಸ್ಟ್ 23ರಿಂದ ಡಿಸೆಂಬರ್ 31ರ ಅವಧಿಯಲ್ಲಿ ದಯಾನಂದ್ ಅವರಿಗೆ ರೂ.3,99,64,500 ನಗದು ಹಣ ನೀಡಿದ್ದು, ಮತ್ತು 2025ರ ನವೆಂಬರ್ 28 ಮತ್ತು 2025ರ ಡಿಸೆಂಬರ್ 2 ರಂದು ಅವರಿಂದ ರೂ.99,70,000 ಮರಳಿ ಪಡೆದಿದ್ದರು ಎಂಬುದನ್ನು ಶಿವಶಂಕರಪ್ಪ ಸಾಹುಕಾರ್ ನಿರಾಕರಿಸಿದ್ದಾರೆ.
2025ರ ಮಾರ್ಚ್ 29ರಂದು 30 ಲಕ್ಷ ಸಾಲ ಪಡೆದು ನಂತರ ಒಂದೇ ತಿಂಗಳಲ್ಲಿ ಅಂದರೇ 2025ರ ಏಪ್ರಿಲ್ 26ರಂದು ಅದನ್ನು ಮರುಪಾವತಿಸಿದ್ದರು ಎಂಬ ಆರೋಪವನ್ನು ಸಾಹುಕಾರ್ ನಿರಾಕರಿಸಿದ್ದಾರೆ. 2018ರಿಂದ ದಯಾನಂದ್ ಅವರ ಮೂಲಕ ರೂ.8 ಕೋಟಿಯಿಂದ ರೂ.10 ಕೋಟಿವರೆಗೆ ನಗದು ಹಣವನ್ನು ನೀಡಿರುವುದು ಮತ್ತು ಸ್ವೀಕರಿಸಿರುವುದನ್ನು ನಿರಾಕರಿಸಿದ್ದಾರೆ. ಮಲ್ಲಿನಾಥ್ ಸಾಹುಕಾರ್ ಅವರು ತಮ್ಮ ಪರವಾಗಿ ನಗದು ಹಣವನ್ನು ಹಸ್ತಾಂತರಿಸಿದ್ದಾರೆ ಮತ್ತು ಸ್ವೀಕರಿಸಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.
2026ರ ಅಕ್ಟೋಬರ್ 18ರಂದು ಶಿವಶಂಕರಪ್ಪ ಸಾಹುಕಾರ್ ಅವರ ಹೇಳಿಕೆಯನ್ನು ತನಿಖಾಧಿಕಾರಿ ದಾಖಲಿಸಿಕೊಂಡಿದ್ದರು. ಈ ಹೇಳಿಕೆಯಲ್ಲಿ ‘SHIV SHANKAR SAHUKAR’ ಎಂಬ ಶೀರ್ಷಿಕೆಯುಳ್ಳ ಸಡಿಲ ಹಾಳೆಯನ್ನು ಮತ್ತೊಮ್ಮೆ ಅವರಿಗೆ ತೋರಿಸಿದ್ದರು.
ಎಸ್.ಪಿ. ದಯಾನಂದ್ ಅವರೊಂದಿಗೆ ತಮಗೆ ಯಾವುದೇ ನಗದು ವ್ಯವಹಾರಗಳಿಲ್ಲ ಎಂಬ ತಮ್ಮ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ. ಆದರೆ, ನಗದು ಸ್ವೀಕೃತಿ ಮತ್ತು ಪಾವತಿಗಳ ಎದುರು ನಮೂದಿಸಲಾದ ಹೆಸರು ಮತ್ತು ಮೊಬೈಲ್ ಸಂಖ್ಯೆ (9741688756) ತಮ್ಮದೇ ಆಗಿವೆ ಎಂದು ಒಪ್ಪಿಕೊಂಡಿದ್ದಾರೆ. ಆ ನಮೂದುಗಳನ್ನು ದಯಾನಂದ್ ಏಕೆ ಮಾಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಹಿಂದಿನ ದಿನ ನೀಡಿದ ಹೇಳಿಕೆಗೆ ವಿರುದ್ಧವಾಗಿ, ‘Refund Amount Detail’ ಎಂಬ ಹಾಳೆಯಲ್ಲಿ 2025ರ ಮಾರ್ಚ್ 29ರಂದು ತಾವು ಪಡೆದಿದ್ದ ರೂ.30 ಲಕ್ಷ ಕೈ ಸಾಲ ಮತ್ತು 2025ರ ಏಪ್ರಿಲ್ 26 ರಂದು ಅದನ್ನು ಮರುಪಾವತಿಸಿದ ವಿವರಗಳಿವೆ ಎಂದು ಒಪ್ಪಿಕೊಂಡಿದ್ದಾರೆ.
ತಮ್ಮ ಆಪ್ತ ಸಹಚರರು ಇಂತಹ ನಮೂದುಗಳನ್ನು ಏಕೆ ಮಾಡಿದ್ದಾರೆ ಎಂದು ಕೇಳಿದಾಗ, ಎಸ್.ಪಿ. ದಯಾನಂದ್ ಅವರೊಂದಿಗೆ ತಮಗೆ ನಿಕಟ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಾವು ಅವರಿಗೆ ನಗದು ಹಣ ನೀಡಿಲ್ಲ ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ಯಾವುದೇ ದಾಖಲೆ ಆಧಾರವಿಲ್ಲ ಎಂದೂ ತಿಳಿಸಿದ್ದಾರೆ.
ಶಹಾಪುರದ ಮದ್ರಕಿಯಲ್ಲಿ ಪ್ರಸ್ತಾಪಿತ ಯೋಜನೆಯ ಕುರಿತು ಅವರು, ತಮ್ಮ ಪತ್ನಿಯ ಹೆಸರಿನಲ್ಲಿರುವ ಸರ್ವೆ ಸಂಖ್ಯೆ 270/6, 270/9 ಮತ್ತು 270/11ರ ಸುಮಾರು 8 ಎಕರೆ ಭೂಮಿಯಲ್ಲಿ ಶಾಲೆ, ಹಾಸ್ಟೆಲ್, ಆಟದ ಮೈದಾನ, ವಾಣಿಜ್ಯ ಅಂಗಡಿಗಳು, ರೆಸ್ಟೋರೆಂಟ್ ಮತ್ತು ಮದುವೆ ಮಂಟಪವನ್ನು ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ನಿರ್ಮಿಸುವಂತೆ ಶಿವಪುತ್ರಪ್ಪ @ ಶಿವ ಸಹುಕಾರ್ ಅವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ.
ಶಿವ ಸಾಹುಕಾರ್ ಅವರು 2026ರ ಅಕ್ಟೋಬರ್ 17ರಂದು ನೀಡಿದ್ದ ಹೇಳಿಕೆಯನ್ನು ಅವರಿಗೆ ತೋರಿಸಲಾಗಿತ್ತು. ಅದರಲ್ಲಿ ಶಾಲೆಯನ್ನು ಮಾತ್ರ ತಮಗೆ ಗುತ್ತಿಗೆಗೆ ನೀಡಬೇಕಾಗಿತ್ತು ಮತ್ತು ಕನ್ವೆನ್ಷನ್ ಹಾಲ್, ರೆಸ್ಟೋರೆಂಟ್ ಹಾಗೂ ವಾಣಿಜ್ಯ ಅಂಗಡಿಗಳ ಮಾಲೀಕತ್ವ ಅಧ್ಯಕ್ಷರಾದ ತಮ್ಮ ಬಳಿ ಇರಬೇಕಾಗಿತ್ತು ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರವಾಗಿ, ತಾವು ಶಾಲೆಯ ಭಾಗದ ಬಗ್ಗೆ ಮಾತ್ರ ಚರ್ಚಿಸಿದ್ದಾಗಿ ಅವರು ಹೇಳಿದ್ದಾರೆ.
ಆದರೆ, ಅದೇ ಉತ್ತರದಲ್ಲಿ ಸಂಪೂರ್ಣ ಭೂಮಿಯನ್ನು ಬಳಸುವಂತೆ ತಾವೇ ಸಲಹೆ ನೀಡಿದ್ದಾಗಿ ಮತ್ತು ಅಂತಿಮ ಯೋಜನೆಗೆ ತಾವೇ ಅನುಮೋದನೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಯೋಜನೆಯ ಅಂದಾಜು ವೆಚ್ಚ ರೂ.35 ಕೋಟಿಯಿಂದ ರೂ.40 ಕೋಟಿವರೆಗೆ ಇರಲಿದೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಸಂಗ್ರಹಿಸಲು ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ.
ತಮ್ಮ ವೇತನದ ಆದಾಯ ಮತ್ತು ಎಸ್.ಪಿ. ದಯಾನಂದ್ ಅವರಿಗೆ ಮಾಡಿರುವ ನಗದು ಪಾವತಿಗಳನ್ನು ಪರಿಗಣಿಸಿದಾಗ, ಈ ಯೋಜನೆಯನ್ನು ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಿಂದ ಬಂದ ನಗದು ಹಣವನ್ನು ಬಳಸುವ ಉದ್ದೇಶಿತ ಯೋಜನೆ ಎಂದು ಏಕೆ ಪರಿಗಣಿಸಬಾರದು ಎಂದು ಅವರನ್ನು ತನಿಖಾಧಿಕಾರಿ ಪ್ರಶ್ನಿಸಿದ್ದರು. ಯೋಜನೆಯ ವೆಚ್ಚ ಹೆಚ್ಚಿರುವುದರಿಂದ ಅದು ಆರಂಭವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ದಯಾನಂದ್ ಅವರ ಬಳಿ ಇರುವ ನಗದು ಹಣವನ್ನು ಈ ಯೋಜನೆಯೊಂದಿಗೆ ಸಂಬಂಧಿಸಬಾರದು ಎಂದು ಕೋರಿದ್ದಾರೆ.
ಕಾಲ್ಪನಿಕ ಬಾಡಿಗೆದಾರರು
ಫಲಾನುಭವಿ ಅಭ್ಯರ್ಥಿಗಳಲ್ಲಿ ಒಬ್ಬರಾದ ಡಾ. ಸೂಗುರೇಶ್ ಅವರು ತಮ್ಮ ಸ್ವಗ್ರಾಮದವರು. ಮತ್ತೊಬ್ಬ ಫಲಾನುಭವಿ ಅಭ್ಯರ್ಥಿಯ ತಂದೆಯನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ. 2025ರ ಮಾರ್ಚ್ 31ರ ವೇಳೆಗೆ ಬಿ.ವಿ. ಗೀತಾ ಅವರಿಗೆ ರೂ.7.55 ಲಕ್ಷ ಮತ್ತು ಅವರ ಪುತ್ರಿಗೆ ರೂ.49.36 ಲಕ್ಷ ಪಾವತಿಸಿದ್ದಾರೆ. ಈ ಪಾವತಿಗಳಿಗೆ ಯಾವುದೇ ಒಪ್ಪಂದ ಅಥವಾ ಮರುಪಾವತಿ ಇರಲಿಲ್ಲ. ಆದರೆ, ಅವರ ಪುತ್ರಿಯು ಈ ಮೊತ್ತವನ್ನು ಬಾಡಿಗೆ ಆದಾಯವೆಂದು ತೋರಿಸಿ, ತಮ್ಮನ್ನು ಕಾಲ್ಪನಿಕ ಬಾಡಿಗೆದಾರರೆಂದು ನಮೂದಿಸಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.
ಎಸ್.ಪಿ. ದಯಾನಂದ್ ಅವರೊಂದಿಗೆ ತಮಗೆ ನಿಕಟ ಸಂಪರ್ಕವಿದೆ. ಅವರಿಂದ ಸ್ವೀಕರಿಸಲಾದ ರೂ.3,99,64,500 ನಗದು ಹಣಕ್ಕೆ ಸಂಬಂಧಿಸಿದ ಸಡಿಲ ಹಾಳೆಗಳಲ್ಲಿ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಾಗಿದೆ. ಹಿಂದಿನ ದಿನ ಇದನ್ನು ನಿರಾಕರಿಸಿದ್ದರೂ, ದಯಾನಂದ್ ಅವರಿಂದ ರೂ.30 ಲಕ್ಷ ಕೈ ಸಾಲ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ನಗದು ವ್ಯವಹಾರಗಳನ್ನು ಅಲ್ಲಗಳೆಯಲು ತಮ್ಮ ಬಳಿ ಯಾವುದೇ ದಾಖಲೆ ಆಧಾರವಿಲ್ಲ. ತಮ್ಮ ಪತ್ನಿಯ ಹೆಸರಿನಲ್ಲಿರುವ ಭೂಮಿಯಲ್ಲಿ ರೂ.35 ಕೋಟಿಯಿಂದ ರೂ.40 ಕೋಟಿ ವೆಚ್ಚದ ಶಾಲೆ, ಕನ್ವೆನ್ಷನ್ ಹಾಲ್, ರೆಸ್ಟೋರೆಂಟ್ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆಯ ನಕ್ಷೆಗಳಿಗೆ ತಾವೇ ಅನುಮೋದನೆ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಬಾಡಿಗೆ ಆದಾಯವೆಂದು ಬಿಂಬಿಸಿದ್ದ ಸಾಹುಕಾರ್!
ಪಿಎಂಎಲ್ಎ 2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಶಿವಶಂಕರಪ್ಪ ಸಾಹುಕಾರ್ ಅವರ ಮೇಲಿನ ಹೇಳಿಕೆಗಳಿಂದ, ಅವರು ಯಾವುದೇ ದಾಖಲೆಗಳಿಲ್ಲದೆ ಬಿ.ವಿ. ಗೀತಾ ಮತ್ತು ಅವರ ಪುತ್ರಿಗೆ ರೂ.56.91 ಲಕ್ಷ ಪಾವತಿಸಿರುವುದು ಸ್ಪಷ್ಟವಾಗುತ್ತದೆ. ಈ ಪಾವತಿಗಳನ್ನು ಬಾಡಿಗೆ ಆದಾಯವೆಂದು ಬಿಂಬಿಸಲಾಗಿದೆ. ಇದಲ್ಲದೆ, ಅವರು ರೂ.3,99,64,500 ನಗದು ಹಣವನ್ನು (ಹಿಂದೆ ರೂ.8 ಕೋಟಿಯಿಂದ ರೂ.10 ಕೋಟಿ ಹಣವನ್ನೂ) ಎಸ್.ಪಿ. ದಯಾನಂದ್ ಅವರ ಬಳಿ ಇರಿಸಿದ್ದರು. ಯಾವುದೇ ದಾಖಲೆ ಆಧಾರವಿಲ್ಲದೆ ಇದನ್ನು ನಿರಾಕರಿಸಿದ್ದರೂ, ವಶಪಡಿಸಿಕೊಂಡ ದಾಖಲೆಗಳಲ್ಲಿ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ಇರುವುದನ್ನು ಹಾಗೂ ಅದೇ ದಾಖಲೆಗಳಲ್ಲಿ ನಮೂದಾಗಿರುವ ಕೈ ಸಾಲವನ್ನು ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

ಕಳಂಕ ರಹಿತ ಆಸ್ತಿಯೆಂದು ಬಿಂಬಿಸುವ ಯತ್ನ
ಅಲ್ಲದೆ, ಆರಂಭದಲ್ಲಿ ಯಾವುದೇ ಆಸಕ್ತಿ ಇಲ್ಲವೆಂದು ನಿರಾಕರಿಸಿದ್ದರೂ, ತಮ್ಮ ಪತ್ನಿಯ ಭೂಮಿಯಲ್ಲಿ ರೂ.35 ಕೋಟಿಯಿಂದ ರೂ.40 ಕೋಟಿ ವೆಚ್ಚದ ಯೋಜನೆಯ ನಕ್ಷೆಗಳಿಗೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ‘ಈ ಸಂಗತಿಗಳು ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಬಂದ ಅಪರಾಧದ ಆದಾಯವನ್ನು ಗಳಿಸುವುದು, ಸ್ವಾಧೀನದಲ್ಲಿಟ್ಟುಕೊಳ್ಳುವುದು, ಮರೆಮಾಚುವುದು ಮತ್ತು ಬಳಸುವುದನ್ನು ಹಾಗೂ ಅದೇ ಹಣವನ್ನು ಕಳಂಕರಹಿತ ಆಸ್ತಿಯೆಂದು ಬಿಂಬಿಸುವ ಪ್ರಯತ್ನವನ್ನು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.




