ಬೆಂಗಳೂರು; ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ವಿವಿಧ ನೇಮಕಾತಿಗಳಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬೆಂಗಳೂರು ವಿಭಾಗದ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act – PMLA), 2002ರ ನಿಬಂಧನೆಗಳ ಅಡಿಯಲ್ಲಿ ಒಟ್ಟು 1.22 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಈ ಸಂಬಂಧ 2026ರ ನವೆಂಬರ್ 14ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಜಾರಿ ನಿರ್ದೇಶನಾಲಯದ (Enforcement Directorate – ED) ಬೆಂಗಳೂರು ವಲಯ ಕಚೇರಿಯು, ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act – PMLA), 2002ರ ನಿಬಂಧನೆಗಳ ಅಡಿಯಲ್ಲಿ ಒಟ್ಟು 1.22 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಸಂಬಂಧ 13/11/2026ರಂದು PMLA, 2002ರ ಸೆಕ್ಷನ್ 5(1)ರ ಅಡಿಯಲ್ಲಿ ತಾತ್ಕಾಲಿಕ ಜಪ್ತಿ ಆದೇಶ (PAO) ಸಂಖ್ಯೆ 43/2026) ಹೊರಡಿಸಿದೆ.
ತಾತ್ಕಾಲಿಕವಾಗಿ ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್, ಆಯೋಗದ ಅಂದಿನ ಸದಸ್ಯರಾದ ಗೀತಾ ಬಿ.ವಿ. ಶಿವಮೂರ್ತಿ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ (Controller of Examinations – CoE) ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ ಸ್ಥಿರ ಮತ್ತು ಚರ ಆಸ್ತಿಗಳು ಸೇರಿವೆ ಎಂದು ಜಾರಿ ನಿರ್ದೇಶನಾಲಯವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.

ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಕೆಪಿಎಸ್ಸಿ ನೇಮಕಾತಿಗಳಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹಲವು ಎಫ್ಐಆರ್ಗಳು ದಾಖಲಾಗಿದ್ದವು. ಈ ಎಫ್ಐಆರ್ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು. ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita), 2023ರ ಸೆಕ್ಷನ್ 318(3), 318(4), 336(2), 336(3) ಮತ್ತು 340(2)ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ತನಿಖೆಯಲ್ಲಿ ಬಹಿರಂಗಗೊಂಡಿರುವ ಅಂಶಗಳ ಪ್ರಕಾರ ಕೆಪಿಎಸ್ಸಿಯ ಅಂದಿನ ಅಧ್ಯಕ್ಷರು, ಓರ್ವ ಸದಸ್ಯರು ಹಾಗೂ ಅಂದಿನ ಪರೀಕ್ಷಾ ನಿಯಂತ್ರಕರು ಬಸವರಾಜ್ ಕನ್ನಾಳೆ ಮತ್ತಿತರರೊಂದಿಗೆ ಸೇರಿಕೊಂಡು, ತಮ್ಮ ಅಧಿಕೃತ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದರು. ಅಲ್ಲದೇ ನಿಗದಿತ ಆಯ್ಕೆಯ ಭರವಸೆಯ ಬದಲಾಗಿ ಅಭ್ಯರ್ಥಿಗಳಿಂದ ಅಕ್ರಮವಾಗಿ ಹಣ ಪಡೆಯಲು ಪ್ರೇರೇಪಿಸಿದ್ದರು.
ಅಕ್ರಮಗಳ ಸ್ವರೂಪದ ಬಗ್ಗೆ ಇ ಡಿ ನೀಡಿರುವ ವಿವರಣೆಯಲ್ಲೇನಿದೆ?
ಸರಿಯಾದ ಉತ್ತರಗಳನ್ನು ಗುರುತಿಸಲಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವುದು, ಅಭ್ಯರ್ಥಿಗಳಿಗೆ ನಿರ್ದಿಷ್ಟವಾಗಿ ಸಿದ್ಧಪಡಿಸಲಾದ ಸರಿಯಾದ ಉತ್ತರಗಳ ಕೀ (Candidate-specific Correct Answer Keys) ಗಳನ್ನು ಸೋರಿಕೆ ಮಾಡುವುದು, 1:3 ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವ ಹಂತದಲ್ಲಿ ಗೌಪ್ಯ ಅಂಕಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಅದೇ ರೀತಿ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು 2026ರ ಜನವರಿ 7ರಂದು ತಮ್ಮ ಆಪ್ತ ಸಹಚರ ಬಸವರಾಜ್ ಕನ್ನಾಳೆ ಅವರಿಗೆ ಸರಿಯಾದ ಉತ್ತರಗಳಿರುವ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಬಸವರಾಜ್ ಕನ್ನಾಳೆ ಅವರು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ, ಅಂದರೆ 2026ರ ಜನವರಿ 8ರಂದು ಬೆಂಗಳೂರಿನ ಹೊರವಲಯದಲ್ಲಿರುವ ವಿಲ್ಲಾಗಳಲ್ಲಿ 10 ಅಭ್ಯರ್ಥಿಗಳಿಗೆ ಈ ಪ್ರಶ್ನೆಪತ್ರಿಕೆಗಳನ್ನು ಹಂಚಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಅಭ್ಯರ್ಥಿಗಳಿಂದ ತಲಾ 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ವರೆಗೆ ಅಕ್ರಮ ಹಣವನ್ನು ಬೇಡಿಕೆ ಇಟ್ಟಿದ್ದರು. ಈ ಪೈಕಿ ಒಂದು ಭಾಗದ ಹಣವನ್ನು ಮುಂಗಡವಾಗಿ ಸ್ವೀಕರಿಸಲಾಗಿದ್ದು, ಉಳಿದ ಮೊತ್ತಕ್ಕೆ ಅಭ್ಯರ್ಥಿಗಳಿಂದ ಖಾಲಿ ಸಹಿ ಮಾಡಲಾದ ಚೆಕ್ಗಳು ಮತ್ತು ಪ್ರಾಮಿಸರಿ ನೋಟುಗಳನ್ನು ಪಡೆದು ಭದ್ರತೆಯಾಗಿ ಇಟ್ಟುಕೊಳ್ಳಲಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅಭ್ಯರ್ಥಿಗಳ ಓಎಂಆರ್ ಉತ್ತರ ಪತ್ರಿಕೆಗಳು, ಕೆಪಿಎಸ್ಸಿ ಪ್ರಕಟಿಸಿದ್ದ ಆರಂಭಿಕ ಉತ್ತರಗಳ ಕೀಗೆ ಹೊಂದಿಕೆಯಾಗಿದ್ದವು. ಆದರೆ, ಪರಿಷ್ಕೃತ ಉತ್ತರಗಳ ಕೀಲಿಯಲ್ಲಿ ಸೇರಿಸಲಾದ ನಂತರದ ಕೆಲವು ಉತ್ತರಗಳು ತಪ್ಪಾಗಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದಲ್ಲದೆ, ಶಿವಶಂಕರಪ್ಪ ಸಾಹುಕಾರ್ ಮತ್ತು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯ ಮೇರೆಗೆ, ಅಭ್ಯರ್ಥಿಗಳ ಆಸನ ವ್ಯವಸ್ಥೆ (Seating Arrangements) ಮತ್ತು ಜಂಬಲ್ ಚಾರ್ಟ್ಗಳನ್ನು (Jumbled Charts) ಬಳಸಿಕೊಂಡಿದ್ದರು.
80 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಸಿದ್ಧಪಡಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಗೀತಾ ಬಿ.ವಿ. ಅವರು ಒದಗಿಸಿದ್ದ ನೋಂದಣಿ ಸಂಖ್ಯೆಗಳನ್ನು ಹೊಂದಿದ್ದ ಅಭ್ಯರ್ಥಿಗಳನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು. ಈ ಚಾರ್ಟ್ಗಳ ಉಸ್ತುವಾರಿ ಹೊಂದಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು, 08/01/2026ರಂದು ಸಿದ್ಧಪಡಿಸಿದ ಉತ್ತರಗಳನ್ನು ಗೀತಾ ಬಿ.ವಿ. ಅವರಿಗೆ ಹಸ್ತಾಂತರಿಸಿದ್ದರು. ಇದಕ್ಕೆ ಪ್ರತಿಯಾಗಿ, ಕೆಎಎಸ್ ಪರೀಕ್ಷೆಯಲ್ಲಿ ಒಬ್ಬ ಅಭ್ಯರ್ಥಿಗೆ ಅನುಕೂಲಕರವಾದ ಸಂದರ್ಶನದ ಅಂಕಗಳನ್ನು ಕೊಡಿಸುವುದಾಗಿ ಅಂದಿನ ಅಧ್ಯಕ್ಷರು ಭರವಸೆ ನೀಡಿದ್ದರು. ಶಿವಶಂಕರಪ್ಪ ಸಾಹುಕಾರ್ ಅವರ ಸ್ವಂತ ಕೈಬರಹದಲ್ಲಿದ್ದ ಅಭ್ಯರ್ಥಿಗಳ ಕೇಂದ್ರವಾರು ನೋಂದಣಿ ಸಂಖ್ಯೆಗಳನ್ನು ಒಳಗೊಂಡ ಒಂದು ನೋಟ್ಬುಕ್ ಅನ್ನು ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
ಶಿವಶಂಕರಪ್ಪ ಸಾಹುಕಾರ್ ಅವರು ಒಬ್ಬ ಅಭ್ಯರ್ಥಿಯಿಂದ 10 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದರು. ಆ ಅಭ್ಯರ್ಥಿಗೆ 20 ಲಕ್ಷ ರೂ.ಗಳ ಡೀಲ್ ಮಾಡಲಾಗಿತ್ತು. ಅದೇ ರೀತಿ, ಗೀತಾ ಬಿ.ವಿ. ಅವರು ಮತ್ತೊಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದರು. ಆ ಅಭ್ಯರ್ಥಿಯೊಂದಿಗೆ 40 ಲಕ್ಷ ರೂ.ಗಳ ಡೀಲ್ ಮಾಡಲಾಗಿತ್ತು. ಈ ರೀತಿಯಲ್ಲಿ ಅಕ್ರಮವಾಗಿ ಪಡೆದ ಲಂಚದ ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಭಾಲ್ಕಿ (ಬೀದರ್) ಹಾಗೂ ಇತರ ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕವೂ ಸಂಗ್ರಹಿಸಲಾಗಿತ್ತು. ಅಪರಾಧದ ಆದಾಯವನ್ನು ಉಳಿತಾಯ ಖಾತೆಗಳ ಮೂಲಕ ವರ್ಗಾಯಿಸುವ ಮೂಲಕ ಅದರ ಮೂಲವನ್ನು ಮರೆಮಾಚಲಾಗಿತ್ತು.
ಅಪರಾಧದ ಆದಾಯದಿಂದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಅನುಕೂಲಕ್ಕಾಗಿ ಮೂರನೇ ವ್ಯಕ್ತಿಯ ಹೆಸರಿನಲ್ಲಿ 52.30 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿತ್ತು. ಈ ಪಾವತಿಗಳನ್ನು ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳು ಹಾಗೂ ನಗದು ರೂಪದಲ್ಲಿ ಮಾಡಲಾಗಿತ್ತು. ಇದಲ್ಲದೆ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಿಮಾನ ಪ್ರಯಾಣದ ವೆಚ್ಚವಾದ ಒಟ್ಟು 13.31 ಲಕ್ಷ ರೂ.ಗಳನ್ನು ಬಸವರಾಜ್ ಕನ್ನಾಳೆ ಅವರು ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕ ಪಾವತಿಸಿದ್ದರು ಎಂದು ಇ ಡಿ ವಿವರಿಸಿದೆ.

ಇದಕ್ಕೂ ಮೊದಲು, ಜಾರಿ ನಿರ್ದೇಶನಾಲಯವು ಪಿಎಂಎಲ್ಎ 2002ರ ಸೆಕ್ಷನ್ 17ರ ಅಡಿಯಲ್ಲಿ KPSC ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಪಿಎಂಎಲ್ಎ 2002ರ ಸೆಕ್ಷನ್ 19ರ ಅಡಿಯಲ್ಲಿ 2026ರ ಸೆ.17 ರಂದು ಬಸವರಾಜ್ ಕನ್ನಾಳೆ, 2026ರ ಸೆ.18ರಂದು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ 2026ರ ಅಕ್ಟೋಬರ್ 6ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಬಿ.ವಿ. ಅವರನ್ನು ಬಂಧಿಸಿತ್ತು.




