Sunday | September 27, 2026 |

ಧರ್ಮಸ್ಥಳ, ಬೆಳ್ತಂಗಡಿ ಠಾಣೆ ವ್ಯಾಪ್ತಿಯಲ್ಲಿ ಅಸಹಜ, ಅಸ್ವಾಭಾವಿಕ ಸಾವು ಪ್ರಕರಣ; 4 ಪ್ರಕರಣಗಳ ತನಿಖೆ ಮಾಹಿತಿಯನ್ನಷ್ಟೇ ಹಂಚಿಕೊಂಡ ಎಸ್‌ಐಟಿ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಇನ್ನೂ ಹೊರಬೀಳದ ಆದೇಶ

ಬೆಂಗಳೂರು;  ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಸ್ವಾಭಾವಿಕ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು  ಒಟ್ಟಾರೆ 73 ದೂರು ಅರ್ಜಿಗಳನ್ನು ಸ್ವೀಕರಿಸಿದೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಸಮಗ್ರವಾಗಿ ವಿಚಾರಣೆ ಮಾಡಲಾಗುತ್ತಿದೆ ಎಂದಿರುವ ವಿಶೇಷ ತನಿಖಾ ತಂಡವು 2002, 2003, 2009 ಮತ್ತು 2010ರಂದು ದಾಖಲಾಗಿರುವ ಪ್ರಕರಣಗಳ ಕುರಿತಾದ ತನಿಖೆಯ ಮಾಹಿತಿಯನ್ನಷ್ಟೇ ರಾಜ್ಯ ಮಹಿಳಾ ಆಯೋಗದೊಂದಿಗೆ  ಹಂಚಿಕೊಂಡಿದೆ.

ಆಯೋಗದೊಂದಿಗೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ನಾಲ್ಕು ಪ್ರಕರಣಗಳು ಕಾನೂನು ಪ್ರಕ್ರಿಯೆಗೆ ಒಳಪಟ್ಟಿದೆ. ಪ್ರಕರಣವೊಂದರಲ್ಲಿ ಮೃತರ ವಾರಸುದಾರರು ಪತ್ತೆಯಾಗಿಲ್ಲ. ಇನ್ನೊಂದು ಪ್ರಕರಣದಲ್ಲಿ ಶವ ಪರೀಕ್ಷೆಯ ವರದಿಯು ದಾಖಲೆಗಳಲ್ಲಿ ಲಭ್ಯವಿಲ್ಲ. ಯುಡಿಆರ್ ನೋಂದಣಿಯಲ್ಲಿರುವ ಶವ ಸಂಸ್ಕಾರದ ವಿವರಗಳ ದಾಖಲೆಯಲ್ಲಿನ ಅಂಕಿ ಅಂಶಕ್ಕೂ ಪಂಚಾಯ್ತಿಯು ನಿರ್ವಹಿಸುವ ಶವ ಸಂಸ್ಕಾರ ದಾಖಲೆಗಳ ಅಂಕಿ ಅಂಶದ ಮಧ್ಯೆ ವ್ಯತ್ಯಾಸ ಕಂಡುಬಂದಿದೆ ಎಂದು ಆಯೋಗಕ್ಕೆ ಮಾಹಿತಿ ಒದಗಿಸಿದೆ.

ಅಲ್ಲದೇ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಕೋರಿರುವಂತೆ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡವು ತನಿಖೆ ನಡೆಸುವ ಸಂಬಂಧ ಸರ್ಕಾರವು ಆದೇಶ ಹೊರಡಿಸಬೇಕಿದೆ. ಅಲ್ಲದೇ ಈ ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿ ಅವರು ಈ ವಿಶೇಷ ತನಿಖಾ ತಂಡಕ್ಕೆ ಪ್ರಕರಣಗಳನ್ನು ವರ್ಗಾಯಿಸಬೇಕಿದೆ. ಆ ನಂತರ ತನಿಖೆ ನಡೆಸುವ ಸಂಬಂಧ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಮಾತ್ರ ವಿಶೇಷ ತನಿಖಾ ತಂಡವು ತನಿಖೆ ನಡೆಸಲಿದೆ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ತಿಳಿಸಿದ್ದಾರೆ.

ಯಾವುದೇ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ತನಿಖೆ, ವಿಚಾರಣೆ ಮಾಡಲು ವಿಶೇಷ ತನಿಖಾ ತಂಡಕ್ಕೆ ಅಧಿಕಾರ ಇಲ್ಲ. ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡವು ತನಿಖೆ ಮಾಡಬೇಕಾದಲ್ಲಿ ಡಿಜಿ ಮತ್ತು ಐಜಿಪಿ ಅವರು ವರ್ಗಾಯಿಸಬೇಕು. ತನಿಖೆಗೆ ಆದೇಶಿಸಿದರೆ ಆ ಪ್ರಕರಣಗಳ ತನಿಖೆಯನ್ನೂ ಕೈಗೊಳ್ಳಬಹುದು ಎಂದು ಆಯೋಗದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ತನಿಖಾ ತಂಡವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ವರದಿಯನ್ನೇ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ವರದಿಯನ್ನು 2026ರ ಆಗಸ್ಟ್‌ 31ರಂದು  ಸಲ್ಲಿಸಿದೆ.

 

 

ಈ ವರದಿಯನ್ನು ಅಶ್ವಿನ್‌ ಕುಮಾರ್ ಎಂಬುವರು ಮಾಹಿತಿ ಹಕ್ಕಿನ ಅಡಿಯಲ್ಲಿ  ಪಡೆದುಕೊಂಡಿದ್ದಾರೆ.

 

 

 

ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ವಿಶೇಷ ತನಿಖಾ ತಂಡವು ನೀಡಿದ್ದ ಈ ಮಾಹಿತಿ ಮತ್ತು ವರದಿ ಆಧರಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಯಾವುದೇ ಸಭೆಯನ್ನೂ ನಡೆಸಿಲ್ಲ.

 

 

ಧರ್ಮಸ್ಥಳದಲ್ಲಿ ವರದಿಯಾಗಿದ್ದ 30 ಅಸಹಜ ಸಾವು (ಯುಡಿಆರ್) ಪ್ರಕರಣಗಳ ವ್ಯತ್ಯಾಸ ಹಾಗೂ ಬೆಳ್ತಂಗಡಿ ಯುಡಿಆರ್ ಸಂ.69/2003ರ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ನಿಖರ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು  ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡವು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

ವಿಶೇಷ ತನಿಖಾ ತಂಡವು ಈವರೆಗೆ ನಡೆದಿರುವ ತನಿಖೆ ಮತ್ತು ತನಿಖೆಯಲ್ಲಿ ಕಂಡುಬಂದಿರುವ ಅಂಶಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದೆ.  ಸಲ್ಲಿಸಿದ್ದ ತನಿಖಾ ವರದಿಯಲ್ಲಿನ ಪ್ರಮುಖ ಅಂಶಗಳು ಚರ್ಚೆಗೆ ಗ್ರಾಸವಾಗಿವೆ.

ಧರ್ಮಸ್ಥಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ (ಮೊ.ಸಂ. 39/2025) ವಿಶೇಷ ತನಿಖಾ ತಂಡವು ಇದುವರೆಗೆ ಕೈಗೊಂಡಿರುವ ವಿಚಾರಣೆ ಹಾಗೂ ತನಿಖಾ ಪ್ರಗತಿಯ ಸಮಗ್ರ ವರದಿಯನ್ನು ಪೊಲೀಸ್‌ ಮಹಾನಿರ್ದೇಶಕರು ಮತ್ತು ಪೊಲೀಸ್‌ ಮಹಾನಿರೀಕ್ಷಕರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಚ್ಚಿದ ಲಕೋಟೆಯಲ್ಲಿ  ಸಲ್ಲಿಸಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಎಸ್‌ಐಟಿಯ ಮುಖ್ಯಸ್ಥ ಪ್ರಣವ ಮಹಾಂತಿ ಅವರು ತಿಳಿಸಿರುವುದು ಗೊತ್ತಾಗಿದೆ.

 

 

ಧರ್ಮಸ್ಥಳ ಪೊಲೀಸ್‌ ಠಾನೆ ವ್ಯಾಪ್ತಿಯ ಪರಿಸರದಲ್ಲಿ ಶೋಧನೆ  ಮಾಡಲಾಗಿದೆ. ಆ ಸಮಯದಲ್ಲಿ ಪರಿಸರದಲ್ಲಿ 07 ತಲೆ ಬುರುಡೆ ಮತ್ತು ಮಾನವನ ಶರೀರದ ಅಸ್ಥಿಪಂಜರ ಸಿಕ್ಕಿದೆ. ಇವುಗಳನ್ನು ತಜ್ಞರ ಅಭಿಪ್ರಾಯಕ್ಕಾಗಿ ಕಳಿಸಲಾಗಿದೆ. ಮಾನವನ ದೇಹಕ್ಕೆ ಸಂಬಂಧಿಸಿದ ಅಸ್ಥಿ ಪಂಜರಗಳು ಹಾಗೂ ತಲೆಬುರುಡೆಗಳು ಪುರುಷನದೇ ಅಥವಾ ಮಹಿಳೆಯದೇ ಹಾಗೂ ಅವುಗಳ ಮರಣದ ಕಾರಣ, ಇತ್ಯಾದಿಗಳ ಸ್ಪಷ್ಟ ಅಭಿಪ್ರಾಯ ಕೋರಲಾಗಿದೆ. ಈ ಮೃತ ದೇಹಗಳ ಅಸ್ಥಿ ಪಂಜರ ಮತ್ತು ತಲೆಬುರುಡೆಗಳ ಗುರುತು ಪತ್ತೆ ಹಚ್ಚುವ ಸಲುವಾಗಿ ಸ್ಥಳದಲ್ಲಿ ಸಿಕ್ಕ ಲಭ್ಯ ಸಾಕ್ಷ್ಯಾಧಾರಗಳ ಮೇಲೆ ಅವರ ರಕ್ತ ಸಂಬಂಧಿಕರನ್ನು ಪತ್ತೆ ಹಚ್ಚಿ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಮೊಹಂತಿ ಅವರು ಆಯೋಗಕ್ಕೆ ವಿವರಿಸಿರುವುದು ಗೊತ್ತಾಗಿದೆ.

 

 

ಮೊಹಂತಿ ಅವರು ನೀಡಿದ್ದ ಈ ಮಾಹಿತಿಯನ್ನಾಧರಿಸಿ ನಾಗಲಕ್ಷ್ಮಿ ಚೌಧುರಿ ಅವರು  ಈಗಾಗಲೇ ಡಾ.ಶಾಲಿನಿ ರಜನೀಶ್‍ಗೆ ಪತ್ರ ಬರೆದಿದ್ದಾರೆ.  ಪತ್ತೆಯಾಗಿರುವ 7 ಮಾನವ ಅಸ್ತಿ ಪಂಜರಗಳ ಡಿಎನ್‍ಎ ಹಾಗೂ ವಿಧಿವಿಜ್ಞಾನ ವರದಿಗಳನ್ನು ಶೀಘ್ರವಾಗಿ ಪಡೆದು ಮೃತರ ಗುರುತು ಪತ್ತೆ ಹಚ್ಚಬೇಕು. ಎಲ್ಲ ಪ್ರಕರಣಗಳು/ವಿಷಯಗಳನ್ನು ಪೊಲೀಸ್ ಮಹಾನಿರ್ದೇಶಕರ ಮುಖಾಂತರ ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸಿ, ಅಗತ್ಯವಿದ್ದಲ್ಲಿ ಎಸ್‍ಐಟಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿ ಸರಕಾರಿ ಆದೇಶ ಹೊರಡಿಸಿ ಎಂದು ಕೋರಿದ್ದಾರೆ.

ಎಸ್‌ಐಟಿ ತನಿಖೆಯಲ್ಲಿ ಕಂಡುಬಂದ ಅಂಶಗಳೇನು?

ಬೆಳ್ತಂಗಡಿ ಪೊಲೀಸ್‌ ಠಾಣೆಯ (ಯುಡಿಆರ್ ನಂಬರ್ 37/2002) ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಸ್ವಾಭಾವಿಕ ಸಾವಿನ ಪ್ರಕರಣ ಕುರಿತು ಎಸ್‌ಐಟಿಯು ತನಿಖೆ ಕೈಗೊಂಡಿತ್ತು. ಅಸ್ವಾಭಾವಿಕ ಮರಣ ನಡೆದ ಘಟನಾ ಸ್ಥಳವು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ ಬೋಳಿಯಾರು ಕುದ್ರಯಾ ಎಂಬ ಅರಣ್ಯ ಪ್ರದೇಶವಾಗಿದೆ. ದೂರಿನ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿದೆ. ಅರ್ಜಿದಾರರ ಮತ್ತು ಅವರ ಹೇಳಿಕೆಗೆ ಅನುಗುಣವಾಗಿ ಇರುವ ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಅರ್ಜಿಯಲ್ಲಿ ನಮೂದು ಮಾಡಿದ ಸ್ಥಳದಲ್ಲಿ ಸಿಕ್ಕಂತಹ ಅಪರಿಚಿತ ಹುಡುಗಿಯ ಶವದ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಯುಡಿಆರ್ ನಂಬರ್ 37/2002ರ ರಂತೆ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ. ಇದು ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುವುದು ಕಂಡುಬಂದಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಧರ್ಮಸ್ಥಳ ಪೊಲೀಸ್‌ ಠಾಣೆ (ಅಪರಾಧ ಸಂಖ್ಯೆ; 39/2025) ವ್ಯಾಪ್ತಿಯಲ್ಲಿ  ದಾಖಲಾಗಿರುವ ಪ್ರಕರಣದಲ್ಲಿ ದೂರುದಾರ ಈಗಿನ ಧರ್ಮಸ್ಥಳ ಪೊಲೀಸ್‌ ಠಾಣೆಯ ಹತ್ತಿರ ರಸ್ತೆ ಬದಿಯಲ್ಲಿ ಮುಖಕ್ಕೆ ಆಸಿಡ್‌ ಹಾಕಿ ಕೊಲೆಯಾದ ಓರ್ವ ಹೆಂಗಸಿನ ಮೃತ ದೇಹವನ್ನು ತಾನು ಹೂತು ಹಾಕಿದ್ದೇನೆ ಎಂದು ತಿಳಿಸಿದ್ದಾನೆ. ಈ ಸಂಬಂಧ ತನಿಖೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಿರುವ ವಿಶೇಷ ತನಿಖಾ ತಂಡವು, ಈ ಪ್ರಕರಣದ ಬಗ್ಗೆ 2009ರ ಸೆ.18ರಂದೆ ಕೆ ಬಿ ವೀರಪ್ಪ ಮಲೆಕುಡಿಯ ಎಂಬುವರು ದೂರು ನೀಡಿದ್ದರು.

 

 

ಈ ದೂರಿನಂತೆ ಅಪರಿಚಿತ ಮಹಿಳೆಯ ಸಾವಿನ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾನೆ ಅಪರಾಧ (ಕ್ರಮಾಂಕ 206/2009) ಕಲಂ 302 ರ 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ಇದು ಕೂಡ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಈ ಪ್ರಕರಣದಲ್ಲಿ ಮೃತ ವಾರಸುದಾರರು ಪತ್ತೆಯಾಗದ ಕಾರಣ, ವೆನ್ಲಾಕ್‌ ಆಸ್ಪತ್ರೆಯ ಕೋರಿಕೆಯಂತೆ ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಯವರು ಅಪರಿಚಿತ ಶವಗಳನ್ನು ದಫನ ಮಾಡಲು ಗುತ್ತಿಗೆದಾರರಾದ ಮಾಕ್ಸಿಂ ಡಿಸಿಲ್ವಾ ಅವರಿಗೆ ಆದೇಶಿಸಿದ್ದರು. ಅದರಂತೆ 2009ರ ಸೆ.30ರಂದು ವೆನ್ಲಾಕ್‌ ಆಸ್ಪತ್ರೆಯ ಶೀಥಲೀಕರಣದಿಂದ ಅಪರಿಚಿತ ಮಹಿಳೆಯ ಶವವನ್ನು ಗುತ್ತಿಗೆದಾರರಾದ ಮಾಕ್ಸಿಂ ಡಿಸಿಲ್ವಾ ಮತ್ತು ಅವರ ಕೆಲಸಗಾರರು ಸೇರಿ ಮಂಗಳೂರು ನಂದಿಗುಡ್ಡದ ಸ್ಮಶಾನಕ್ಕೆ ತಂದು ದಫನ ಮಾಡಿರುವುದು ತಿಳಿದು ಬಂದಿದೆ. ಮತ್ತು ಈ ಪ್ರಕರಣವೂ ಸಹ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದೆ  ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅದೇ ರೀತಿ ಧರ್ಮಸ್ಥಳದ ಶರಾವತಿ ವಸತಿ ಗೃಹದಲ್ಲಿ ನಡೆದಿದೆ ಎನ್ನಲಾದ ಅಪರಿಚಿತ ಮಹಿಳೆಯ ಸಾವಿನ ಕುರಿತು ದಾಖಲಾಗಿದ್ದ ಪ್ರಕರಣ (ಅಪರಾಧ ಸಂಖ್ಯೆ ; 83/2010)  ವಿಶೇಷ ತನಿಖಾ ತಂಡವು ತನಿಖೆ ನಡೆಸಿದೆ. 2010ರ ಏಪ್ರಿಲ್‌ 10ರಂದು ಬೆಳಗ್ಗೆ 06-50ರಿಂದ 2010ರ ಏಪ್ರಿಲ್‌ 6ರ ಬೆಳಗ್ಗೆ 06-30 ಗಂಟೆ ಮಧ್ಯೆ ಈ ಪ್ರಕರಣ ನಡೆದಿದೆ. ಧರ್ಮಸ್ಥಳದ ಶರಾವತಿ ವಸತಿಗೃಹ ಕೊಠಡಿ (ಸಂಖ್ಯೆ; 246) ಯಲ್ಲಿ  ತಂಗಿದ್ದ ಅಪರಿಚಿತ ಮಹಿಳೆಯನ್ನು ಅಪರಿಚಿತ ವ್ಯಕ್ತಿಯೊಬ್ಬನು ಕೊಲೆ ಮಾಡಿದ್ದಾನೆ. ವಸತಿಗೃಹ ದಾಖಲೆಗಳಲ್ಲಿ ನರಸಿಂಹರಾಜು ಎಂದು ದಾಖಲಾಗಿದೆ. ಅಪರಿಚಿತ ವ್ಯಕ್ತಿಯು ಅಪರಿಚಿತ ಮಹಿಳೆಯೊಬ್ಬರನ್ನು ಆಕೆಯ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಯನ್ನು ಒತ್ತಿ ಕೊಲೆ ಮಾಡಿದ್ದಾನೆ ಎಂದು ರಜತಗಿರಿ ವಸತಿಗೃಹ ವ್ಯವಸ್ಥಾಪಕ  ಸುರೇಂದ್ರ ಬಳ್ಳಾಲ್ ಎಂಬುವರು ದೂರು ನೀಡಿದ್ದರು.

 

 

ಈ ಬಗ್ಗೆ ಶವ ಪರೀಕ್ಷೆ ನಡೆಸಲಾಗಿದೆ ಎಂದು ಠಾಣೆ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ ಶವ ಪರೀಕ್ಷೆಯ ವರದಿಯು ದಾಖಲೆಗಳಲ್ಲಿ ಲಭ್ಯವಾಗಿಲ್ಲ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶೇಷ ತನಿಖಾ ತಂಡವು ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಆಣೆಕಟ್ಟುವಿನಲ್ಲಿ 2003ರ ಸೆ. 2ರಂದು  ಸುಮಾರು 35ರಿಂದ 45 ವರ್ಷದ  ಅಪರಿಚಿತ ವ್ಯಕ್ತಿಯ ಶವದೊಂದಿಗೆ ಸುಮಾರು 10ರಿಂದ 12 ವರ್ಷದ ಅಪ್ರಾಪ್ತೆಯ ಹುಡುಗಿಯ ಶವ ಪತ್ತೆಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (ಯುಡಿಆರ್ ನಂಬರ್ 69/2003)  ದಾಖಲಾಗಿತ್ತು. ಕಲಂ 174ರ ರಂತೆ ಸಿಆರ್‍‌ಪಿಸಿ ಪ್ರಕಾರ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಎಂದು ದಾಖಲಿಸಲಾಗಿತ್ತು. ಈ ಬಗ್ಗೆ ಕಾನೂನು ಕ್ರಮ ಜರುಗಿಸಿರುವುದು ಮತ್ತು ಮೃತ ಶರೀರಗಳನ್ನು ದಫನ ಮಾಡಿರುವ ಬಗ್ಗೆ ಠಾಣೆ ದಾಖಲೆಗಳಲ್ಲಿ ನಮೂದಿಸಲಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಿಂದ ಸಂಗ್ರಹಿಸಿರುವ ಯುಡಿಆರ್‍‌, ನೋಂದಣಿಯಲ್ಲಿರುವ ದಫನ ವಿವರಗಳು ಮತ್ತು ಗ್ರಾಮ ಪಂಚಾಯ್ತಿ ನಿರ್ವಹಿಸುವ ದಫನ ದಾಖಲೆಗಳಲ್ಲಿ ಅಂಕಿ ಅಂಶಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶೇಷ ತನಿಖಾ ತಂಡವು ತನ್ನ ವರದಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ.

ಈ ನಿಟ್ಟಿನಲ್ಲಿ ಕೇವಲ ಪ್ರಕರಣದ ಫಿರ್ಯಾದಿ (ಪ್ರಸ್ತುತ ಆರೋಪಿ) ಯ ಹೇಳಿಕೆಗೆ ಸೀಮಿತಗೊಂಡು ತನಿಖೆಯನ್ನು ನಡೆಸದೇ, ಹಲವು ಆಯಾಮಗಳಲ್ಲಿ ಅಂದರೇ ಎಸ್‌ಐಟಿಯನ್ನು ರಚಿಸಿದ ಉದ್ದೇಶವಾದ ಧರ್ಮಸ್ಥಳ ಮತ್ತು ಉಜಿರೆ ಗ್ರಾಮದಲ್ಲಿ 1998ರಿಂದ 2014ರವರೆಗೆ ಆದಂತಹ ಅಸ್ವಾಭಾವಿಕ ಮರಣ ಪ್ರಕರಣಗಳು, ಮಹಿಳೆಯರ ಕಾಣೆಯ ಪ್ರಕರಣಗಲು ಇತ್ಯಾದಿ ಕುರಿತು ಲಭ್ಯವಿರುವ ದಾಖಲೆಯಿಂದ ಮಾಹಿತಿ ಪಡೆದು ವಿಚಾರಣೆ  ನಡೆಸಲಾಗುತ್ತಿದೆ. ವಿಶೇಷ ತನಿಖಾ ತಂಡವು ಈವರೆಗೆ ಅಂದರೇ 2026ರ ಮಾರ್ಚ್‌ 24ರವರೆಗೆ 73  ದೂರು ಅರ್ಜಿಗಳನ್ನು ಸ್ವೀಕರಿಸಿದೆ. ಈ ಬಗ್ಗೆ ಸಹ ಎಲ್ಲಾ ಆಯಾಮಗಳಲ್ಲೂ ಸಮಗ್ರವಾಗಿ ವಿಚಾರಣೆ ಮಾಡಲಾಗುತ್ತಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ (ಅಪರಾಧ ಪ್ರಕರಣ ಸಂಖ್ಯೆ; 39/2025) ಕಲಂ 211 (ಎ)  ಬಿಎನ್‌ಎಸ್‌ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಮಹಿಳೆಯರು, ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳು ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರರ ಪ್ರಕರಣಗಳ ಹೆಚ್ಚಿನ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ನಿಷ್ಪಕ್ಷಪಾತವಾಗಿ ನಡೆಸಲಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

1998ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 1,480 ಯುಡಿಆರ್ ಪ್ರಕರಣಗಳು ದಾಖಲಾಗಿದ್ದರೆ, ಎಸ್‍ಸಿಆರ್‌ ಬಿ ಹಾಗೂ ಪಂಚಾಯತ್ ದಾಖಲೆಗಳಲ್ಲಿ 1,510 ಪ್ರಕರಣಗಳು ದಾಖಲಾಗಿವೆ ಎಂದು ಪ್ರಣವ್ ಮೊಹಂತಿ ಅವರು ಆಯೋಗಕ್ಕೆ ತಿಳಿಸಿದ್ದಾರೆ.

 

 

ಈ ಪಟ್ಟಿಯ ಪ್ರಕಾರ ಜೆ ಹೆಚ್‌ ಪಟೇಲ್ ಮತ್ತು ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 608 ಯುಡಿಆರ್ ಪ್ರಕರಣಗಳು ದಾಖಲಾಗಿವೆ. ಪಂಚಾಯ್ತಿಗಳ ದಾಖಲಾತಿ, ಬೆಳ್ತಂಗಡಿ ಪೊಲೀಸ್‌ ಠಾಣೆ, ಎಸ್‌ಸಿಆರ್‍‌ಬಿ ದತ್ತಾಂಶದ ಪ್ರಕಾರ ಇದೇ ಅವಧಿಯಲ್ಲಿ 626 ಪ್ರಕರಣಗಳು ದಾಖಲಾಗಿವೆ.

ಧರ್ಮಸಿಂಗ್‌, ಎಚ್‌ ಡಿ ಕುಮಾರಸ್ವಾಮಿ, ಬಿ ಎಸ್‌ ಯಡಿಯೂರಪ್ಪ ಮತ್ತು ಆ ನಂತರ ರಾಷ್ಟ್ರಪತಿಗಳ ಆಳ್ವಿಕೆಯಲ್ಲಿ  590 ಯುಡಿಆರ್ ಪ್ರಕರಣಗಳು ದಾಖಲಾಗಿವೆ. ಆದರೆ ಪಂಚಾಯ್ತಿಗಳ ದಾಖಲಾತಿ, ಬೆಳ್ತಂಗಡಿ ಪೊಲೀಸ್‌ ಠಾಣೆ, ಎಸ್‌ಸಿಆರ್‍‌ಬಿ ದತ್ತಾಂಶದ ಪ್ರಕಾರ ಇದೇ ಅವಧಿಯಲ್ಲಿ 598  ಪ್ರಕರಣಗಳು ದಾಖಲಾಗಿವೆ.

ಡಿ ವಿ ಸದಾನಂದಗೌಡ,  ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರ ಅವಧಿಯಲ್ಲಿ  282 ಯುಡಿಆರ್ ಪ್ರಕರಣಗಳು ದಾಖಲಾಗಿದ್ದರೇ ಪಂಚಾಯ್ತಿಗಳ ದಾಖಲಾತಿ, ಬೆಳ್ತಂಗಡಿ ಪೊಲೀಸ್‌ ಠಾಣೆ, ಎಸ್‌ಸಿಆರ್‍‌ಬಿ ದತ್ತಾಂಶದ ಪ್ರಕಾರ ಇದೇ ಅವಧಿಯಲ್ಲಿ 286 ಪ್ರಕರಣಗಳು ದಾಖಲಾಗಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

‘ಸ್ಥಳೀಯ ಠಾಣೆಗಳು, ಔಟ್‌ ಪೋಸ್ಟ್‌ ದಾಖಲೆಗಳು, ಎಸಿ ಕಚೇರಿ, ಗ್ರಾಮ ಪಂಚಾಯ್ತಿ, ಡಿಸಿಆರ್‍‌ಬಿ, ಎಸ್‌ಸಿಆರ್‍‌ಬಿ ಹಾಗೂ ದೇವಸ್ಥಾನ ಟ್ರಸ್ಟ್‌ನ ಮಾಹಿತಿ ಕಚೇರಿ ಇತ್ಯಾದಿ ವಿವಿದ ಮೂಲಗಳಿಂದ ಲಭ್ಯವಾದ ಯುಡಿಆರ್,  ಕಾಣೆಯಾದ ಪ್ರಕರಣಗಳು, ಕೊಲೆಯಾದ ಪ್ರಕರಣಗಳು ಮುಂತಾದದವರ ಮಾಹಿತಿಯನ್ನು ನಾವು ಇನ್ನೂ ವಿಚಾರಣೆ ಮಾಡುತ್ತಿರುವುದು, ಸಂಗ್ರಹಿಸುವುದು, ಸಮಗ್ರಗೊಳಿಸುವುದು ಮತ್ತು ವಿಶ್ಲೇಷಿಸುವ ಪ್ರಕ್ರಿಯೆಯಲ್ಲಿರುತ್ತದೆ,’ ಎಂದು ಆಯೋಗಕ್ಕೆ ತಿಳಿಸಿರುವುದು ಗೊತ್ತಾಗಿದೆ.

 

 

ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಈ ವಿಶೇಷ ತನಿಖಾ ತಂಡವು ನಡೆಸುವಂತೆ ಸರ್ಕಾರದಿಂದ ಆದೇಶವಾಗಿದೆ. ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿಯವರು ಈ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ, ತನಿಖೆ ನಡೆಸುವಂತೆ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಈ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡದಿಂದ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಂಡು ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗುವುದು ಎಂದು ಆಯೋಗಕ್ಕೆ ಮೊಹಂತಿ ವಿವರಿಸಿರುವುದು ತಿಳಿದು ಬಂದಿದೆ.

ಧರ್ಮಸ್ಥಳದಲ್ಲಿ ಅಸಹಜ ಸಾವು; ನೇತ್ರಾವತಿ ನದಿ ಸ್ನಾನಘಟ್ಟ, ಬೆಟ್ಟ, ಗುಡ್ಡದ ಸುತ್ತಮುತ್ತ 452 ಪ್ರಕರಣ ದಾಖಲು

 

ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟ, ಬೆಟ್ಟ ಗುಡ್ಡ ಸಮೀಪ ಅಸಹಜ ಸಾವಿನ ಕುರಿತು  452 ಪ್ರಕರಣಗಳು ದಾಖಲಾಗಿದ್ದವು.

 

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

 

ಈ ಕುರಿತು ವಿಶೇಷ ತನಿಖಾ ತಂಡ ನೀಡಿದ್ದ ವರದಿ ಪ್ರತಿಯನ್ನು ಗೃಹ ಇಲಾಖೆಯು ಆರ್‍‌ಟಿಐ ಅಡಿಯೂ ಒದಗಿಸಿರಲಿಲ್ಲ.

Hot this week

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...
Please Scan to make Your Contribution

Topics

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

Related Articles

Popular Categories

error: Content is protected !!