ಬೆಂಗಳೂರು; ಕೋವಿಡ್ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ, ಅನರ್ಹ ಮತ್ತು ಗೊತ್ತುಪಡಿಸದೇ ಇರುವ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳ ಸೇವೆಗಳನ್ನು ಪಡೆದುಕೊಂಡಿದ್ದನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ಆಯೋಗವು ಆಕ್ಷೇಪ ವ್ಯಕ್ತಪಡಿಸಿ ನೀಡಿದ್ದ ವರದಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಕಸದ ಬುಟ್ಟಿಗೆ ಎಸೆದಿದೆ.
ಅಲ್ಲದೇ ಇದೇ ಪ್ರಕರಣದಲ್ಲಿ ಮಾಡಿದ್ದ ವೆಚ್ಚಗಳ ಕುರಿತು ಆಕ್ಷೇಪಿಸಿದ್ದ ಕುನ್ಹಾ ಆಯೋಗವು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮತ್ತು ಮತ್ತೊಬ್ಬ ಐಎಎಸ್ ಅಧಿಕಾರಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪಿ ಚೋಳನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಡಿದ್ದ ಶಿಫಾರಸ್ಸನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಬದಲಿಗೆ ಈ ಇಬ್ಬರು ಐಎಎಸ್ ಅಧಿಕಾರಿಗಳು ನೀಡಿದ್ದ ಲಿಖಿತ ಸಮಜಾಯಿಷಿಯನ್ನು ಒಪ್ಪಿಕೊಂಡು ಈ ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿರುವುದು ಆರ್‍ಟಿಐ ದಾಖಲೆಯಿಂದ ಬಹಿರಂಗವಾಗಿದೆ.
ವಿಶೇಷವೆಂದರೇ ರಾಜೇಂದ್ರ ಪಿ ಚೋಳನ್ ಅವರು ಆರೋಪ ಮುಕ್ತರಾಗಿ ಆದೇಶ ಹೊರಬಿದ್ದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೋವಿಡ್ 19ರ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ, ಅವ್ಯವಹಾರ ಮತ್ತು ಅಕ್ರಮಗಳನ್ನು ಎಸಗಿದೆ ಎಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಬಲವಾಗಿ ಆರೋಪಿಸಿತ್ತು. ಅಲ್ಲದೇ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ದೊಡ್ಡಮಟ್ಟದ ಗದ್ದಲವನ್ನೂ ಎಬ್ಬಿಸಿತ್ತು. ಆದರೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉನ್ನತ ಅಧಿಕಾರಿಗಳನ್ನು ಇಂತಹ ಆರೋಪಗಳಿಂದಲೇ ಮುಕ್ತಗೊಳಿಸುತ್ತಿದೆ.
ಕೋವಿಡ್ ಕಾಲದ ಅಕ್ರಮಗಳನ್ನು ತನಿಖೆ, ವಿಚಾರಣೆ ನಡೆಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದ ಏಕ ವ್ಯಕ್ತಿ ವಿಚಾರಣೆ ಆಯೋಗವು ಐಎಎಸ್ ಅಧಿಕಾರಿಗಳ ಪಾತ್ರ, ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ಐಎಎಸ್ ಅಧಿಕಾರಿಗಳಿಗೆ ಯಾವುದೇ ಶಿಕ್ಷೆ ವಿಧಿಸದೇ ಅವರ ಲಿಖಿತ ಸಮಜಾಯಿಷಿಯನ್ನು ಮರುಮಾತಿಲ್ಲದೇ ಒಪ್ಪಿಕೊಂಡು ಅವರನ್ನು ಆರೋಪದಿಂದಲೇ ಕೈ ಬಿಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯೂ ಸೇರಿದಂತೆ ಇನ್ನಿತರೆ ಉನ್ನತ ಹುದ್ದೆಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಗೌರವ್ ಗುಪ್ತಾ ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಜೇಂದ್ರ ಚೋಳನ್ ಅವರ ಹೆಸರನ್ನು ಕುನ್ಹಾ ಆವರು ತಮ್ಮ ವರದಿಯಲ್ಲಿ ಹೆಸರಿಸಿದ್ದರು. ವಿಚಾರಣೆ ಆಯೋಗದ ವರದಿಯ ಕಂಡಿಕೆ 6.1ರಿಂದ 6.13, ಕಂಡಿಕೆ 6.16.2ರಿಂದ 6.16.9, ಕಂಡಿಕೆ 9.4, ಕಂಡಿಕೆ 35 ಹಾಗೂ ಕಂಡಿಕೆ 8.18.5ರಲ್ಲಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿತ್ತು. ಈ ಆಕ್ಷೇಪಣೆ ಅಂಶಗಳ ಕುರಿತು ವಿಚಾರಣೆ ನಡೆಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಗೌರವ್ ಗುಪ್ತಾ ಮತ್ತು ರಾಜೇಂದ್ರ ಚೋಳನ್ ಅವರಿಗೆ ಲಿಖಿತ ಸಮಜಾಯಿಷಿಯನ್ನು ನೀಡಲು ನೋಟೀಸ್ ಜಾರಿಗೊಳಿಸಿತ್ತು. ಕೋವಿಡ್-19ರ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೇ ಅನರ್ಹಗೊಂಡಿದ್ದ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳ ಸೇವೆ ಪಡೆದಿರುವುದು ಸೇರಿದಂತೆ ಇನ್ನಿತರೆ ಲೋಪ ದೋಷಗಳು ಮತ್ತು ಅಕ್ರಮಗಳ ಕುರಿತಂತೆ ರಾಜೇಂದ್ರ ಚೋಳನ್ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಈ ಕುರಿತು ದಿ ಫೈಲ್ 2025ರ ಜನವರಿ 18ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕೋವಿಡ್ ವೆಚ್ಚ; ಡಿಸಿಎಂ ಕಾರ್ಯದರ್ಶಿ ಸೇರಿ ಹಲವರಿಗೆ ನೋಟೀಸ್, ಹೇಳಿಕೆ ನೀಡಲು ನಿರ್ದೇಶನ
ರಾಜೇಂದ್ರ ಚೋಳನ್ ಅವರು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ, ಅನರ್ಹ ಮತ್ತು ಗೊತ್ತುಪಡಿಸದೇ ಇರುವ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳ ಸೇವೆಗಳನ್ನು ಪಡೆದುಕೊಂಡಿದ್ದರು. ಈ ಕುರಿತು ವಿಚಾರಣೆ ಆಯೋಗದ ವರದಿಯಲ್ಲಿ (ಪುಟ ಸಂಖ್ಯೆ 1326ರಿಂದ 1335- ಕಂಡಿಕೆ ಸಂಖ್ಯೆ 6.1ರಿಂದ 6.13) ಆಕ್ಷೇಪಣೆಗಳನ್ನು ಎತ್ತಿತ್ತು.

ಅಲ್ಲದೇ ಕಿದ್ವಾಯಿ ಸಂಸ್ಥೆಯಿಂದ ಕೋವಿಡ್ 19ರ ಗಂಟಲು ದ್ರವ ಮಾದರಿ ಪರೀಕ್ಷೆಗಳಲ್ಲಿನ ಲೋಪ ದೋಷಗಳನ್ನೂ ವಿಚಾರಣೆ ಆಯೋಗವು (ಪುಟ ಸಂಖ್ಯೆ 1338ರಿಂದ 1343, ಕಂಡಿಕೆ ಸಂಖ್ಯೆ 6.16.2ರಿಂದ 6.16.9) ಪತ್ತೆ ಹಚ್ಚಿತ್ತು.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ರಾಜೇಂದ್ರ ಪಿ ಚೋಳನ್ ಅವರು 2025ರ ಏಪ್ರಿಲ್ 17 ಮತ್ತು ಗೌರವ್ ಗುಪ್ತಾ ಅವರು 2025ರ ಏಪ್ರಿಲ್ 19ರಂದು ಸರ್ಕಾರಕ್ಕೆ ಲಿಖಿತ ಸಮಜಾಯಿಷಿ ನೀಡಿದ್ದರು. ಈ ಲಿಖಿತ ಸಮಜಾಯಿಷಿಯನ್ನು ಒಪ್ಪಿಕೊಂಡಿರುವ ನಗರಾಭಿವೃದ್ಧಿ ಇಲಾಖೆಯು ಇವರಿಬ್ಬರನ್ನೂ ಆರೋಪದಿಂದ ಮುಕ್ತಗೊಳಿಸಿರುವುದು ಆರ್‍ಟಿಐ ದಾಖಲೆಗಳಿಂದ ಗೊತ್ತಾಗಿದೆ.
ನಗರಾಭಿವೃದ್ಧಿ ಇಲಾಖೆಯ ನಿಲುವೇನು?
ಕೋವಿಡ್ 19 ಜಾಗತಿಕ ಮಟ್ಟದಲ್ಲ ಸವಾಲಾಗಿ ರೂಪುಗೊಂಡು ಸಾಂಕ್ರಾಮಿಕ ರೋಗವಾಗಿತ್ತು. ಇದಕ್ಕೆ ಯಾವುದೇ ಖಚಿತ ಚಿಕಿತ್ಸಾ ವಿಧಾನ ಲಭ್ಯವಿರಲಿಲ್ಲ. ಇದನ್ನು ನಿರ್ವಹಿಸುವಲ್ಲಿ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳು ಅಥವಾ ವಿಧಾನಗಳು ಆ ಸಂದರ್ಭದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವನ್ನು ಒಳಗೊಂಡಂತೆ ಎಲ್ಲಾ ಸರ್ಕಾರಗಳೂ ಪರಿಣಾಮಕಾರಿ ಪರಿಣಾಮಗಳನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸಲಾಗಿತ್ತು. ಅಂತಹ ಅಪಾಯಕಾರಿ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ನಿರ್ವಹಿಸುವಲ್ಲಿ ಹೆಚ್ಚಿನ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಈ ರೋಗ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದು ಅಭಿನಂದನೀಯ ವಿಷಯವಾಗಿತ್ತು ಎಂದು ನಗರಾಭಿವೃದ್ಧಿ ಇಲಾಖೆಯು ಪರಿಶೀಲನೆ ಹಂತದಲ್ಲಿ ವಿವರಿಸಿರುವುದು ಆದೇಶದಿಂದ ತಿಳಿದು ಬಂದಿದೆ.
ಆ ವಿಶೇಷ ಹಾಗೂ ಅಸಾಧಾರಣ ಸಂದರ್ಭದಲ್ಲಿ ದಿ ಎಪಿಡಿಮಿಕ್ ಆಕ್ಟ್ 1987, ಕರ್ನಾಟಕ ಎಪಿಡಿಮಿಕ್ ಡಿಸೀಸ್ ಆಕ್ಟ್ 2020 ಮತ್ತು ವಿಪತ್ತು ನಿರ್ವಹಣೆ ಕಾಯ್ದೆಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು. ಅಲ್ಲದೇ ತಜ್ಞರುಗಳು, ಅಧಿಕಾರಿಗಳು ಮತ್ತು ಪರಿಣಿತರ ಸಲಹೆ, ಶಿಫಾರಸ್ಸುಗಳನ್ನು ಸರ್ಕಾರಗಳು ಪಡೆದಿದ್ದವು. ಅಲ್ಲದೇ ವಿವಿಧ ಹಂತದ ಜವಾಬ್ದಾರಿಗಳನ್ನು ನೀಡಿ ಟಾಸ್ಕ್ ಪೋರ್ಸ್ ರಚಿಸಿ ನಿರ್ವಹಣೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಲಭ್ಯವಿರುವ ವಿಶೇಷ ಅಧಿಕಾರ ನೀಡಲಾಗಿತ್ತು ಎಂದು ಕೆಟಿಪಿಪಿ ಅಧಿನಿಯಮದ ಕಲಂ 4(ಎ)ನ್ನು ಮುಂದಿರಿಸಿದ್ದರು.

ಕೋವಿಡ್ 19 ನಿರ್ವಹಣೆ ಸಂದರ್ಭದ ಅವಧಿಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಾಮಾನ್ಯ ಸಂದರ್ಭದ ಪರಿಸ್ಥಿತಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಗೌರವ್ ಗುಪ್ತಾ ಮತ್ತು ರಾಜೇಂದ್ರ ಪಿ ಚೋಳನ್ ಅವರು ನೀಡಿರುವ ವಿವರಣೆಯನ್ನು ಪರಿಗಣಿಸಬಹುದಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಜ್ಯ ಸರ್ಕಾರವು 2012ರಲ್ಲಿ ವಾಹನಗಳನ್ನು ಕಚೇರಿ ಉಪಯೋಗಕ್ಕಾಗಿ ಬಾಡಿಗೆ ಪಡೆದುಕೊಳ್ಳಲು ಮಾರ್ಗಸೂಚಿಗಳನ್ನು ಸರ್ಕಾರಿ ಆದೇಶದ ಮೂಲಕ ಹೊರಡಿಸಿತ್ತು. ಕೋವಿಡ್ 19 ಸಂದರ್ಭದಲ್ಲಿ ಬಿಬಿಎಂಪಿಯು ಸರ್ಕಾರಿ ಕಚೇರಿಗಳ ಬಳಕೆಗಾಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡಿರಲಿಲ್ಲ. ಬದಲಿಗೆ ಕ್ಷೇತ್ರ ಮಟ್ಟದಲ್ಲಿ ಅವುಗಳನ್ನು ಬಳಸಲಾಗಿದೆ. ಬಿಬಿಎಂಪಿಯು 2021ರಲ್ಲಿ ಟೆಂಡರ್ ಮೂಲಕ ವಾಹನ ದರಗಳನ್ನು ನಿಗದಿಪಡಿಸಿ ಈ ದರಗಳಲ್ಲಿ ಬಿಬಿಎಂಪಿಯು ವಾಹನಗಳನ್ನು ಬಳಸಿಕೊಂಡಿರುವುದನ್ನು ಗಮನಿಸಬಹುದು. ಕೋವಿಡ್ 19ರ ವಿಶೇಷ ಸಂದರ್ಭದಲ್ಲಿ 2012ರ ದರದಲ್ಲಿ ವಾಹನಗಳ ಲಭ್ಯತೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.
ಕೋವಿಡ್ 19ರ ಪರೀಕ್ಷೆಗಾಗಿ ಐಸಿಎಂಆರ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ನಿಗದಿಪಡಿಸಿದ್ದ ಲ್ಯಾಬ್‌ಗಳನ್ನೇ ಬಿಬಿಎಂಪಿಯು ಬಳಸಿಕೊಂಡಿತ್ತು. ರಾಜ್ಯ ಸರ್ಕಾರದ ಟಾಸ್ಕ್ ಪೋರ್ಸ್ ನೋಡಲ್ ಏಜೆನ್ಸಿಯಾಗಿ ನಿಗದಿಪಡಿಸಿದಂತೆ ಕಿದ್ವಾಯಿ ಸಂಸ್ಥೆಯ ಮೂಲಕವೇ ಈ ಸೇವೆಯನ್ನು ಪಡೆದುಕೊಂಡಿದೆ. ಆ ಸಂದರ್ಭದಲ್ಲಿ ಸ್ವಾಬ್ ಪರೀಕ್ಷೆಗೆ ಹೆಚ್ಚಿನ ಒತ್ತಡವಿದ್ದ ಕಾರಣ ಬಿಬಿಎಂಪಿಯು ಲಭ್ಯವಿರುವ ಲ್ಯಾಬ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅವುಗಳನ್ನು ವಲಯವಾರು ಹಂಚಿಕೆ ಮಾಡಿತ್ತು. ಹೆಚ್ಚುವರಿ ಬಿಲ್ ಮೊತ್ತ ಸುಮಾರು 57.23 ಲಕ್ಷ ರು ಪಾವತಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಎಲ್ಲಾ ಹಂತದ ಕಡತ ವ್ಯವಹಾರವನ್ನು ತಾವೇ ವೈಯಕ್ತಿಕವಾಗಿ ಪರಿಶೀಲಿಸಿ ಬಿಡುಗಡೆಗೊಳಿಸುವುದು ಸಾಧ್ಯವಿಲ್ಲ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕೋವಿಡ್ 19ರ ಸಂದರ್ಭದಲ್ಲಿನ ಒತ್ತಡದಲ್ಲಿ ಪ್ರತಿನಿತ್ಯ ಎದುರಾಗುತ್ತಿದ್ದ ಸವಾಲುಗಳನ್ನು ಎದುರಿಸುವುದು ಸುಲಭ ಸಾಧ್ಯವಿರಲಿಲ್ಲ. ಅಲ್ಲದೇ ಈಗಲೂ ಸಹ ಪಾವತಿ ಬಾಕಿ ಇರುವುದರಿಂದ ಹೆಚ್ಚುವರಿ ಪಾವತಿಯನ್ನು ಅದರಲ್ಲಿ ಸರಿದೂಗಿಸಿಕೊಳ್ಳಲು ಅವಕಾಶವಿದೆ. ಅದರಂತೆ ಕ್ರಮ ವಹಿಸಲು ಅವಕಾಶವಿದೆ. ಕೊರೋನಾ ಕಿಲ್ಲರ್ ಡಿವೈಸ್‌ನ್ನು ರಾಷ್ಟ್ರಮಟ್ಟದ ಪರಿಣಿತರ ಸಲಹೆ ಮೇರೆಗೆ ಪ್ರಯೋಗಾತ್ಮಕ ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಖರೀದಿಸಿದೆ. ನಂತರ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಪರಿಣಿತರೇ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ನಂತರ ಅವುಗಳನ್ನು ಖರೀದಿಸಿಲ್ಲ. ಇಂತಹ ವಿಶೇಷ ಸಂದರ್ಭದಲ್ಲಿ ಅಧಿಕಾರಿಗಳು ಕೆಲವು ಪ್ರಯೋಗಾತ್ಮಕ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಅದನ್ನು ದುರುದ್ದೇಶಪೂರಿತ ಎಂದು ನಿರ್ಣಯಿಸಲು ಸಾಧ್ಯವಾಗುವುದಿಲ್ಲ ಎಂದು ಆದೇಶದಲ್ಲಿ ಷರಾ ಬರೆದಿದೆ.
‘ಈ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಮೈಕೆಲ್ ಕುನ್ಹಾ ನೇತೃತ್ವದ ವಿಚಾರಣೆ ಆಯೋಗದ ವರದಿಯಲ್ಲಿನ ಆಕ್ಷೇಪಣೆ ಕಂಡಿಕೆಗಳಿಗೆ ಸಂಬಂಧಿಸಿದಂತೆ ಗೌರವ್ ಗುಪ್ತಾ ಮತ್ತು ರಾಜೇಂದ್ರ ಪಿ ಚೋಳನ್ ಅವರಿಗೆ ಸಂಬಂಧಿಸಿದಂತೆ ವರದಿಯಲ್ಲಿನ ಆಕ್ಷೇಪಣೆ ಕಂಡಿಕೆಗಳಿಗೆ ಸಲ್ಲಿಸಿದ್ದ ವಿವರಣೆಯನ್ನು ಪರಿಗಣಿಸಿ ಒಪ್ಪಿ ಕೈ ಬಿಡಲಾಗಿದೆ,’ ಎಂದು 2026ರ ಮೇ 27ರಂದೇ ಆದೇಶ ಹೊರಡಿಸಿದೆ.

ಅದೇ ರೀತಿ ವೈದ್ಯಕೀಯ ಉಪಕರಣಗಳು ಮತ್ತು ಸಲಕರಣೆಗಳಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ ಲೋಪಗಳು ಮತ್ತು ಅನುದಾನ ದುರ್ಬಳಕೆ ಆಗಿರುವುದು (ಪುಟ ಸಂಖ್ಯೆ 1410- ಕಂಡಿಕೆ ಸಂಖ್ಯೆ 9.4, ಪುಟ ಸಂಖ್ಯೆ 1441, ಕ್ರಮ ಸಂಖ್ಯೆ 35, ಕಡತ ಸಂಖ್ಯೆ 35),

ಕಮರ್ಷಿಯಲ್ ವಾಹನಗಳು, ಅಂಬ್ಯುಲೆನ್ಸ್ ವಾಹನಗಳು, ಶವ ಸಾಗಿಸುವ ವಾಹನಗಳ ನಿಯೋಜನೆ ಮತ್ತು ಸೇವೆಗಳ ಮೇಲ್ವಿಚಾರಣೆಯಲ್ಲಿ ಲೋಪ ದೋಷಗಳ (ಪುಟ ಸಂಖ್ಯೆ 1394 ಕಂಡಿಕೆ ಸಂಖ್ಯೆ 8.18.5) ಕುರಿತು ವಿಚಾರಣೆ ಆಯೋಗವು ಪತ್ತೆ ಹಚ್ಚಿತ್ತು.

ಅದೇ ರೀತಿ ಕಿದ್ವಾಯಿ ಪ್ರಕರಣ ಹೊರತುಪಡಿಸಿ ಇನ್ನೆರಡು ಅಂಶಗಳ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಅವರಿಗೂ ಸಹ ಹೇಳಿಕೆ ನೀಡಲು ನಿರ್ದೇಶಿಸಿತ್ತು.
ಹಾಗೆಯೇ ಕೋವಿಡ್ ಕೇರ್ ಸೆಂಟರ್‍ನಲ್ಲಿ ಎಷ್ಟು ಜನ ರೋಗಿಗಳನ್ನು ದಾಖಲು ಮಾಡಲಾಗಿದೆ ಎಂಬ ಮಾಹಿತಿ ಕಡತದಲ್ಲಿ ಲಭ್ಯವಾಗಿಸದ ಕುರಿತು, ವೈಟ್ ಪೆಟಲ್ಸ್ ಅವರು ಊಟವನ್ನು ಸರಬರಾಜು ಮಾಡಿರುವ ಕುರಿತು ಬಿಲ್ ಆಗಲೀ ಪ್ರಮಾಣ ಪತ್ರವಾಗಲೀ ಕಡತದಲ್ಲಿ ಲಭ್ಯವಾಗಿಸದೇ ಇರುವುದು,

ಬ್ಲೀಚಿಂಗ್ ಪೌಡರ್ ಮತ್ತು ಪೆನಾಯಿಲ್‌ಗಳನ್ನು ಖರೀದಿಸಲು ಪಾಲಿಕೆ ಆಯುಕ್ತರಿಂದ ಅಥವಾ ಸರ್ಕಾರದಿಂದಾಗಲೀ ಅನುಮೋದನೆ ಪಡೆಯದ ಕುರಿತು, ಈ ಕಡತಗಳಲ್ಲಿ ಬಿಲ್, ಇನ್ ವಾಯ್ಸ್, ಸ್ಟಾಕ್ ಪ್ರಮಾಣ ಪತ್ರ ಅಥವಾ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಕಡತದಲ್ಲಿ ನೀಡದೇ ಇರುವ (ಪುಟ ಸಂಖ್ಯೆ 1660, ಕಂಡಿಕೆ ಸಂಖ್ಯೆ 13, ಪುಟ ಸಂಖ್ಯೆ 1661-1663, ಕಂಡಿಕೆ ಸಂಖ್ಯೆ (1ರಿಂದ 09) ಕುರಿತು ನಗರ, ಗ್ರಾಮಾಂತರ ಯೋಜನೆ ನಿರ್ದೇಶಕ ಆರ್ ವೆಂಕಟಾಚಲಪತಿ ಅವರಿಗೂ ನೋಟೀಸ್ ಜಾರಿಗೊಳಿಸಿತ್ತು.

ಆದರೆ ವೆಂಕಟಾಚಲಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆಯು ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿಲ್ಲ.
ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿ ಮೂಲಕ ಖರೀದಿಸಿದ್ದ ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್’ ತನಿಖಾ ತಂಡ ಕೋವಿಡ್ ಭ್ರಷ್ಟಾಚಾರದ 50 ಮುಖಗಳನ್ನು ಅನಾವರಣಗೊಳಿಸಿತ್ತು.
ಸರಣಿ ರೂಪದಲ್ಲಿ ದಾಖಲೆಗಳನ್ನಾಧರಿಸಿ ಏಪ್ರಿಲ್ 21ರಿಂದ ಆಗಸ್ಟ್ 25ರವರೆಗೆ ಒಟ್ಟು 50 ತನಿಖಾ ವರದಿಗಳನ್ನು ಪ್ರಕಟಿಸಿದೆ. ‘ದಿ ಫೈಲ್’ ಪ್ರಕಟಿಸಿದ ಹಲವು ವರದಿಗಳನ್ನಾಧರಿಸಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದರು. ಅಲ್ಲದೆ ‘ದಿ ಫೈಲ್’ ವರದಿಯಲ್ಲಿದ್ದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದರಲ್ಲದೆ ಇಡೀ ಖರೀದಿ ಪ್ರಕ್ರಿಯೆಗಳನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.
ಕೋವಿಡ್ ಅಕ್ರಮಗಳು; ‘ದಿ ಫೈಲ್’ ಹೊರಗೆಳೆದಿದ್ದ ಪ್ರಕರಣಗಳು ಕುನ್ಹಾ ವರದಿಯಲ್ಲಿ ಉಲ್ಲೇಖ
ಈ ಬೆಳವಣಿಗೆ ನಡುವೆಯೇ ಆಡಳಿತ ಪಕ್ಷವೂ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿತ್ತಲ್ಲದೇ ಮತ್ತಿತರೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ದಾಖಲೆಗಳ ನೈಜತೆ ಕುರಿತು ಅನುಮಾನಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್’ ತನಿಖಾ ತಂಡ ಮತ್ತಷ್ಟು ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.
ತಜ್ಞರಲ್ಲದವರಿಂದ ಸಿಟಿ ಸ್ಕ್ಯಾನ್ ನಿರ್ವಹಣೆ; ವರದಿಗಳ ವಿಶ್ವಾಸರ್ಹತೆ ಪ್ರಶ್ನಾರ್ಹ, ಆಘಾತಕಾರಿ ಸಂಗತಿ ಬಹಿರಂಗ
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಅಂದಾಜು ಸಮಿತಿಯೂ ತನಿಖೆಗೆ ಕೈಗೆತ್ತಿಕೊಂಡಿದೆ. ನಮ್ಮ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರಸಮಿತಿಯೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರನ್ನೂ ದಾಖಲಿಸಿದೆ. ದೂರನ್ನು ಸ್ವೀಕರಿಸಿದೆಯಲ್ಲದೆ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಿರುವ ಎಸಿಬಿ, ಅಧಿಕಾರಿಗಳ ವಿಚಾರಣೆಗೆ ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದನ್ನು ಸ್ಮರಿಸಬಹುದು.




