Friday | August 28, 2026 |

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  ‘ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿರುವ ಅದಾನಿ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಬಾಕಿ ಉಳಿಸಿಕೊಂಡಿರುವ 850.20 ಕೋಟಿ ರು ಬೃಹತ್‌ ಮೊತ್ತದ ರಾಜಧನ ಪಾವತಿಗೆ ಕ್ರಮ ವಹಿಸದೇ ವಿವಾದ ಮಾಡುತ್ತಿದೆ. ಅಲ್ಲದೇ ಬಾಕಿ ಪಾವತಿಸುವ ಲಕ್ಷಣಗಳು ಸಹ ಗೋಚರಿಸುತ್ತಿಲ್ಲ,’

ಹೀಗೆಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ಆರ್ಥಿಕ ಇಲಾಖೆಗೆ ತಿಳಿಸಿದೆ. ಅಲ್ಲದೇ ಈ ಸಂಬಂಧ ಆರ್ಥಿಕ ಇಲಾಖೆಯು ಕೋರಿದ್ದ ಹಲವು ಸ್ಪಷ್ಟನೆ, ವಿವರವಾದ ಮಾಹಿತಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು 3 ತಿಂಗಳಾದರೂ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ!

ಈಚೆಗಷ್ಟೇ ಹೆಸರಾಂತ ಮತ್ತು ವಿವಾದಿತ ಉದ್ಯಮಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅದಾನಿ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಬಾಕಿ ಇರುವ ರಾಜಧನ ಪಾವತಿಸುವ ಬದಲು ಅದನ್ನು ವಿವಾದ ಮಾಡುತ್ತಿದೆ ಎಂದು ಕಡತದಲ್ಲಿ ಪ್ರಸ್ತಾವಿಸಿರುವುದು ಮುನ್ನೆಲೆಗೆ ಬಂದಿದೆ.

ಈ ಸಂಬಂಧ ದಿ ಫೈಲ್‌ ಆರ್‍‌ಟಿಐ ಮೂಲಕ 184ಕ್ಕೂ ಅಧಿಕ ಪುಟಗಳನ್ನು ಪಡೆದಿದೆ.

 

 

ಅದಾನಿ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೆ 2021ರಂದು ನೀಡಿದ್ದ ಗಣಿ ಅಭಿವೃದ್ಧಿ ಮತ್ತು ಉತ್ಪಾದನೆ ಒಪ್ಪಂದ (ಎಂಡಿಪಿಎ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕುಗಳು ಉದ್ಭವಿಸಿವೆ.ಈ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಆರ್ಥಿಕ ಇಲಾಖೆ ಕದ ತಟ್ಟಿದೆ. ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಕಡತದಲ್ಲಿ ಅದಾನಿ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಬಾಕಿ ಪಾವತಿಗೆ ಸಂಬಂಧಿಸಿದಂತೆ ವಿವಾದ ಮಾಡುತ್ತಿರುವ ಸಂಗತಿಯನ್ನು ಕೈಗಾರಿಕೆ ವಾಣಿಜ್ಯ ಇಲಾಖೆ (ಗಣಿ) ಪ್ರಸ್ತಾವಿಸಿದೆ.

 

 

ಅಲ್ಲದೇ ಈ ಪ್ರಕರಣವನ್ನು ತಾರ್ಕಿಕವಾಗಿ ಇತ್ಯರ್ಥಪಡಿಸಲು ಇದುವರೆಗೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಬಗ್ಗೆ ಹಲವು ಬಾರಿ ಪ್ರಯತ್ನ ಮಾಡಿದೆ ಎಂದು ಇಲಾಖೆಯು ಕಡತದಲ್ಲಿ ಹೇಳಿದೆಯಾದರೂ ಯಾವುದೇ ತೀರ್ಮಾನ, ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವುದು ಕಡತದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

‘ಎಸಿಸಿ ಲಿಮಿಟೆಡ್‌ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶವನ್ನು ಹರಾಜು ಮೂಲಕ ಪಡೆದಿದೆ. ಈ ಕಂಪನಿಯನ್ನು ಯಶಸ್ವಿ ಬಿಡ್‌ದಾರರು ಎಂದು ಪರಿಗಣಿಸುವ ಸಮಯದಲ್ಲಿ ಈ ಕಂಪನಿಯು ಈಗಾಗಲೇ ಹೊಂದಿರುವ ಗಣಿ ಗುತ್ತಿಗೆಯಲ್ಲಿ (2641) ರ ರಾಜಧನ ಪಾವತಿಗೆ ಸಂಬಂಧಿಸಿದಂತೆ 2021ರ ಜನವರಿ 11 ಮತ್ತು ಸೆ.8ರಂದು ಅಫಡವಿಟ್‌ ಕಂ ಅಂಡರ್‍‌ ಟೇಕಿಂಗ್‌ನಲ್ಲಿ ಸರ್ಕಾರಕ್ಕೆ ಇರುವ ಬಾಕಿಯನ್ನು ಪಾವತಿಸುವುದಾಗಿ ತಿಳಿಸಿರುತ್ತಾರೆ. ಆದರೆ ಅದರಂತೆ ಬಾಕಿ ಪಾವತಿಗೆ ಕ್ರಮ ವಹಿಸದೇ ವಿವಾದ ಮಾಡುತ್ತಿರುವುದನ್ನು ಗಮನಿಸಿದಾಗ ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿಯನ್ನು ಪಾವತಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ತಿಳಿಸಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಅಧಿಕಾರಿಗಳ ಕೈ ಕಟ್ಟಿ ಹಾಕಲಾಗಿದೆಯೇ?

ಈ ಕುರಿತು ಗಣಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಬಾಕಿ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಕ್ಷೇತ್ರಮಟ್ಟದ ಅಧಿಕಾರಿಗಳ ಕೈಗಳು ಕಟ್ಟಿಹಾಕಿದಂತಾಗಿದೆ ಎಂದು ಅರ್ಥಿಕ ಇಲಾಖೆಯ ಗಮನ ಸೆಳೆದಿರುವುದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಬಾಕಿ ಇರುವ ಮೊತ್ತವನ್ನು ಪಾವತಿಸುವ ಕುರಿತು ವಿವಾದವು  ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಎಸಿಸಿ ಲಿಮಿಟೆಡ್‌  ಅವರ ಪರವಾಗಿ ಗಣಿಗಾರಿಕೆ ಗುತ್ತಿಗೆಯನ್ನು (Mining Lease) ಜಾರಿಗೊಳಿಸಲಾಗಿಲ್ಲ. ಪುನಃಪುನಃ ಪ್ರಯತ್ನಗಳನ್ನು ನಡೆಸಿದರೂ ಪ್ರಕರಣವು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರು ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ.  ಹಾಗೂ ಪದೇಪದೇ ಮುಂದೂಡಿಕೆಗಳನ್ನು ಕೋರುತ್ತಿದ್ದಾರೆ.  ಬಾಕಿ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಕ್ಷೇತ್ರಮಟ್ಟದ ಅಧಿಕಾರಿಗಳ ಕೈಗಳು ಕಟ್ಟಿಹಾಕಿದಂತಾಗಿದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಕನ್ನೂರು ವಾಡಿಯ ಗಣಿಗಾರಿಕೆ ಗುತ್ತಿಗೆ ಮತ್ತು ಚಾಮನೂರು ಗ್ರಾಮದ LOI (Letter of Intent) ಎರಡೂ ₹850.20 ಕೋಟಿಯಷ್ಟು ಬಾಕಿ ಮೊತ್ತವನ್ನು ಪಾವತಿಸುವುದಕ್ಕಾಗಿ ಬಾಕಿ ಉಳಿದಿವೆ. ಕಾನೂನು ಸಚಿವರ ಟಿಪ್ಪಣಿಯಂತೆ ಕಡತವನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಎಂದೂ ಟಿಪ್ಪಣಿಯಲ್ಲಿ ಹೇಳಿರುವುದು ಗೊತ್ತಾಗಿದೆ.

ಅಲ್ಲದೇ ಈ ಕಂಪನಿಯು (ಗಣಿ ಗುತ್ತಿಗೆ ಸಂಖ್ಯೆ 2641) ಸರ್ಕಾರಕ್ಕೆ ಒಟ್ಟು 367.51 ಕೋಟಿ ರು ರಾಜಧನ ಪಾವತಿಸಲು ಬಾಕಿ ಇದೆ. ಇದೇ ಗಣಿ ಗುತ್ತಿಗೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರವೂ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಇದಕ್ಕೆ ಸರ್ಕಾರವು ದಂಡ ವಿಧಿಸಿತ್ತು. ಈ ದಂಡದ ಮೊತ್ತವು 482.69 ಕೋಟಿ ರು ಇದೆ. ಒಟ್ಟಾರೆ ಎಸಿಸಿ ಲಿಮಿಟೆಡ್‌ ಕಂಪನಿಯು ರಾಜ್ಯ ಸರ್ಕಾರಕ್ಕೆ 850.20 ಕೋಟಿ ಬೃಹತ್‌ ಮೊತ್ತ ಪಾವತಿಸಲು ಬಾಕಿ ಇದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು ಆರ್ಥಿಕ ಇಲಾಖೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಈ ಮಧ್ಯೆ ಈ ಕಂಪನಿಯು ಕಣ್ಣೂರು ವಾಡಿಯಲ್ಲಿಯೇ ಮತ್ತೊಂದು ಗಣಿ ಗುತ್ತಿಗೆಯನ್ನು ಇ ಹರಾಜಿನಲ್ಲಿ ಪಡೆದಿದೆ. ಈ ಕಂಪನಿಗೆ ಗಣಿಗಾರಿಕೆ ಕೈಗೊಳ್ಳಲು ಪ್ರಸ್ತುತ ಎಂಡಿಪಿಎ ನ್ನು ಕೈಗೊಳ್ಳಬೇಕಿದೆ. ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಇಲಾಖೆಯು ಟೆಂಡರ್‍‌ ಡಾಕ್ಯುಮೆಂಟ್‌ ಕ್ಲಾಸ್‌ 10.2 (ಎಫ್‌) ನ್ನು ಉಲ್ಲೇಖಿಸಿದೆ.

 

 

 

 

‘ಈ ಹಿಂದೆ ಕರ್ನಾಟಕದಲ್ಲಿ ಆದ್ಯತೆಯ ಬಿಡ್‌ದಾರರು ಕೈಗೊಂಡ ಗಣಿಗಾರಿಕೆ ಚಟುವಟಿಕೆಯಿಂದ ಉದ್ಭವಿಸಿದ ಮತ್ತು ಎಂಎಂಡಿಆರ್ ಕಾಯ್ದೆ, 1957 ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಜಾರಿಯಲ್ಲಿರುವ ನಿಬಂಧನೆಗಳ ಪ್ರಕಾರ ಪಾವತಿಸಬೇಕೆಂದು ನಿರ್ಧರಿಸಲಾಗಿರುವ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲಾ ಬಾಕಿಗಳನ್ನು ಪಾವತಿಸಿರಬೇಕು. ಅಂತಹ ಬಾಕಿಗಳನ್ನು ನಿರ್ಧರಿಸಲಾಗಿಲ್ಲವಾದಲ್ಲಿ, ಹಿಂದೆ ಕರ್ನಾಟಕದಲ್ಲಿ ಅವರು ಕೈಗೊಂಡ ಗಣಿಗಾರಿಕೆ ಚಟುವಟಿಕೆಯಿಂದ ಉದ್ಭವಿಸುವ ಮತ್ತು ಎಂಎಂಡಿಆರ್‍‌, 1957 ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಜಾರಿಯಲ್ಲಿರುವ ನಿಬಂಧನೆಗಳ ಪ್ರಕಾರ ಮುಂದಿನ ದಿನಗಳಲ್ಲಿ ಪಾವತಿಸಬೇಕೆಂದು ನಿರ್ಧರಿಸುವ ಎಲ್ಲಾ ಬಾಕಿಗಳನ್ನು ಸಹ ಪಾವತಿಸುವುದಾಗಿ ಅವರು ಬದ್ಧರಾಗಿರಬೇಕು.” ಎಂದು ವಿವರಿಸಿದೆ.

ಆದರೆ ಈ ಕಂಪನಿಯು ರಾಜ್ಯ ಸರ್ಕಾರಕ್ಕೆ 850.20 ಕೋಟಿಗಳ ಬೃಹತ್‌ ಮೊತ್ತ ಪಾವತಿಸಲು ಬಾಕಿ ಇದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತೀವ ನಷ್ಟ ಉಂಟಾಗಿದೆ ಎಂದು ಇಲಾಖೆಯು ಆರ್ಥಿಕ ಇಲಾಖೆಯ ಗಮನ ಸೆಳೆದಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

‘ಈ ಪ್ರಸ್ತಾವನೆಯನ್ನು ಪರಿಶೀಲಿಸಿದಾಗ ಎಸಿಸಿ ಲಿಮಿಟೆಡ್‌ ರಾಜ್ಯ ಸರ್ಕಾರಕ್ಕೆ ₹850.20 ಕೋಟಿ ಬಾಕಿ ಪಾವತಿಸಬೇಕಿರುವುದು ಗಮನಕ್ಕೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಈವರೆಗೆ ಯಾವುದೇ ಅಂತಿಮ ತೀರ್ಪು ಹೊರಬಂದಿಲ್ಲ. ಆದಾಗ್ಯೂ, ಎಸಿಸಿ ಲಿಮಿಟೆಡ್‌ ಇ-ಹರಾಜಿನ ಮೂಲಕ ಕನ್ನೂರು ವಾಡಿ ಸುಣ್ಣದ ಕಲ್ಲಿನ ಬ್ಲಾಕ್ ಅನ್ನು ಪಡೆದುಕೊಂಡಿದೆ. ಇದೀಗ ಎಂಡಿಪಿಎ ಜಾರಿಗೊಳಿಸುವಂತೆ ಕೋರುತ್ತಿದೆ. ಮೇಲಿನ ಟಿಪ್ಪಣಿಯಲ್ಲಿ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಈ ವಿಷಯದ ಕುರಿತು ಮತ್ತಷ್ಟು ಅಭಿಪ್ರಾಯ ನೀಡಲು ಆರ್ಥಿಕ ಇಲಾಖೆಗೆ ಸ್ಪಷ್ಟೀಕರಣದ ಅಗತ್ಯವಿದೆ,’ ಎಂದು ಅಧೀನ ಕಾರ್ಯದರ್ಶಿ ಎಲ್ ಕವಿತಾ ಅವರು ಟಿಪ್ಪಣಿಯಲ್ಲಿ ಕೋರಿದ್ದರು.

ಈ ಸಂಬಂಧ ಆರ್ಥಿಕ ಇಲಾಖೆಯು ಹಲವು ಸ್ಪಷ್ಟನೆ, ವಿವರಗಳನ್ನು ಕೋರಿ ಕೈಗಾರಿಕೆ ಮತ್ತು ವಾಣಿಜ್ಯ (ಗಣಿ) ಇಲಾಖೆಗೆ 2026ರ ಜೂನ್‌ 23ರಂದೇ ಪತ್ರ ಬರೆದಿತ್ತು.

ಆರ್ಥಿಕ ಇಲಾಖೆ ಕೋರಿರುವ ಮಾಹಿತಿಯೇನು?

  1. ಈ ಪ್ರಕರಣವು ವಸೂಲಾತಿ ಆಯುಕ್ತರ ಪರಿಶೀಲನಾ ವ್ಯಾಪ್ತಿಯಡಿ ಬರುತ್ತದೆಯೇ, ಇದ್ದಲ್ಲಿ ವಸೂಲಾತಿ ಆಯುಕ್ತರ ಅಭಿಪ್ರಾಯ ಪಡೆಯಲಾಗಿದೆಯೇ?
  2. ಎಸಿಸಿ ಲಿಮಿಟೆಡ್‌ ಕಂಪನಿ ಮಾದರಿ ರೀತಿಯಲ್ಲಿ ಯಾವುದಾದರೂ ಇತರೆ ಪ್ರಕರಣಗಳಲ್ಲಿ ಇಲಾಖೆಯು ಪ್ರಕರಣವನ್ನು ಇತ್ಯರ್ಥಪಡಿಸಲು ಕೈಗೊಂಡಿರುವ ಕ್ರಮಗಳೇನು?
  3. ಅಕ್ರಮ ಗಣಿಗಾರಿಕೆ ನಡೆಸುವ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿ ಮಾಡದಿರುವ ಕಂಪನಿಗಳ ವಿರುದ್ಧ ಇಲಾಖೆಯು ಕೈಗೊಂಡಿರುವ ಕ್ರಮಗಳೇನು?
  4. ಇನ್ನೂ ಯಾವ ಯಾವ ಗಣಿ ಗುತ್ತಿಗೆಗಳನ್ನು ಎಸಿಸಿ ಕಂಪನಿಗೆ ನೀಡಲಾಗಿದೆ, ಹಾಗೂ ಸದ್ಯ ಗಣಿ ಗುತ್ತಿಗೆಗಳಿಗೆ ಈ ಕಂಪನಿಯಿಂದ ಕಾಲಾನುಕಾಲಕ್ಕೆ ರಾಜಧನ ಪಾವತಿಯಾಗಿದೆಯೇ ಅಥವಾ ಬಾಕಿ ಉಳಿಸಿಕೊಂಡಿದೆಯೇ?
  5. ಲೀಸ್‌ ಅವಧಿ ಮುಗಿದಿದ್ದರೂ ಸಹ ಎಸಿಸಿ ಲಿಮಿಟೆಡ್‌ ಕಂಪನಿಯು ಅಕ್ರಮ ಗಣಿಗಾರಿಕೆ ಮಾಡಿರುವುದು ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ, ಈ ಅಕ್ರಮ ಗಣಿಗಾರಿಕೆ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿತ್ತು?
  6.  ನ್ಯಾಯಾಲಯಗಳಲ್ಲಿ ದಾಖಲಾಗಿರುವ 3 ಪ್ರಕರಣಗಳಿಗೆ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆಯೇ?
  7. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ನಿಯಮಾನುಸಾರ ಎಸಿಸಿ ಲಿಮಿಟೆಡ್ ಕಂಪನಿಗೆ ಎಂಡಿಐಪಿ ನೀಡದಿದ್ದಲ್ಲಿ ಉಂಟಾಗಬಹುದಾದ ಕಾನೂನು ತೊಡಕುಗಳೇನು?
  8. ಕೇಂದ್ರ ಸರ್ಕಾರದ ಗಣಿ ಮಂತ್ರಾಲಯವು ( 26-02-206) ಆಡಳಿತ ಇಲಾಖೆಗೆ ಮಾಹಿತಿ ಒದಗಿಸಿದೆಯೇ, ಒದಗಿಸಿದ್ದಲ್ಲಿ ಕೇಂದ್ರ ಸರ್ಕಾರದಿಂದ ಮುಂದಿನ ನಿರ್ದೇಶನ ಸ್ವೀಕೃತವಾಗಿದೆಯೇ?
  9. ಭೂ ಕಂದಾಯ ರೂಪದಲ್ಲಿ ಗಣಿ ಗುತ್ತಿಗೆ ಬಾಕಿಯನ್ನು ವಸೂಲು ಮಾಡಲು 2023ರ ಮಾರ್ಚ್ 23ರಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ವಸೂಲಾತಿಯು ಯಾವ ಹಂತದಲ್ಲಿದೆ? ಎಂದು  ಮಾಹಿತಿ ಕೋರಿತ್ತು.

 

 

ಆದರೆ ಕೈಗಾರಿಕೆ ವಾಣಿಜ್ಯ ಇಲಾಖೆ (ಗಣಿ)ಯು ಇದುವರೆಗೂ ಆರ್ಥಿಕ ಇಲಾಖೆಗೆ ಯಾವುದೇ ಮಾಹಿತಿ, ವಿವರಗಳನ್ನು ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

 

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

 

ಈ ಮಾಹಿತಿ ಒದಗಿಸುವ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಚರ್ಚೆಯಾಗಿತ್ತು. ಆದರೆ ಇದುವರೆಗೂ ಆರ್ಥಿಕ ಇಲಾಖೆಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಆರ್ಥಿಕ ಇಲಾಖೆಯು ಕೋರಿರುವ ಮಾಹಿತಿಯ ಒದಗಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

 

 

ರಾಜ್ಯದ ಹಿತಾಸಕ್ತಿ ಬದಿಗೊತ್ತಿ ರಾಜ್ಯ ಸರ್ಕಾರವು ಅದಾನಿ ಸಮೂಹದ ಪರವಾಗಿ ಲೆಟರ್ ಆಫ್‌ ಇಂಟೆಂಟ್‌ನ್ನು ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರದ ಮಾರ್ಗದರ್ಶನ ಕೋರಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

 

ಈ ಪ್ರಕರಣದಲ್ಲಿ ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಕಾನೂನು ಇಲಾಖೆಯು ಮಾಹಿತಿಯನ್ನೇ ನೀಡಿರಲಿಲ್ಲ. ಬದಲಿಗೆ ಸಚಿವ ಎಚ್‌ ಕೆ ಪಾಟೀಲ್ ಅವರು ಯಾವುದೇ ಅಭಿಪ್ರಾಯವನ್ನೂ ನೀಡಿಲ್ಲ ಸುಳ್ಳು ಮಾಹಿತಿ ನೀಡಿತ್ತು.

 

ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

 

 

ಈ ಬೆಳವಣಿಗೆಗಳ ನಡುವೆಯೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಗಣಿ) ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿತ್ತು.

 

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

 

ಈ ಮಧ್ಯೆ ಅದಾನಿ ಎಸಿಸಿ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಿತ್ತು.

 

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

 

ಈ ಕುರಿತು ದಿ ಫೈಲ್ ಪ್ರಕಟಿಸಿದ್ದ ಎಲ್ಲಾ ವರದಿಗಳನ್ನಾಧರಿಸಿ   ಜೆಪಿ ಶಾಸಕ ಸುರೇಶ್‌ ಕುಮಾರ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ವಿಧಾನಪರಿಷತ್‌ನಲ್ಲಿ ಸಿ ಟಿ ರವಿ ಮತ್ತು ಆರತಿ ಕೃಷ್ಣ ಅವರು ಅಧಿವೇಶನದಲ್ಲಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

Hot this week

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...
Please Scan to make Your Contribution

Topics

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

Related Articles

Popular Categories

error: Content is protected !!