Tuesday | August 4, 2026 |

ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ 86.19 ಕೋಟಿ ರು ವೆಚ್ಚ, ಆರ್‍‌ಟಿಐ ಮಾಹಿತಿ ಬಹಿರಂಗ

ಬೆಂಗಳೂರು;  ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹಂಚಿಕೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ ಅವರ ನೇತೃತ್ವದ ಏಕವ್ಯಕ್ತಿ ಆಯೋಗಕ್ಕೆ ಒಟ್ಟಾರೆ 86.19 ಕೋಟಿ ರು ಖರ್ಚಾಗಿದೆ.

ಈ ಕುರಿತು ವೆಂಕಟೇಶ್‌ ಬೋವಿ ಎಂಬುವರು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡಿರುವ ಮಾಹಿತಿಯಲ್ಲಿ ಈ ಅಂಕಿ ಅಂಶವಿದೆ.

ಒಳ ಮೀಸಲಾತಿ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಎಚ್‌ ಎಸ್‌ ನಾಗಮೋಹನ್ ದಾಸ್‌ ಅವರ ನೇತೃತ್ವದ ಏಕ ವ್ಯಕ್ತಿ ವಿಚಾರಣೆ ಆಯೋಗವು ತನ್ನ ಅಂತಿಮ ವರದಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಲ್ಲಿಸಿತ್ತು. ಈ ಆಯೋಗವು ಮಾಡಿರುವ ಶಿಫಾರಸ್ಸುಗಳು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಈ ನಡುವೆಯೇ ಸಮಾಜ ಕಲ್ಯಾಣ ಇಲಾಖೆಯು ಆಯೋಗದ ಕಾರ್ಯನಿರ್ವಹಣೆಗೆ ಮಾಡಿರುವ ವೆಚ್ಚದ ಕುರಿತು ನೀಡಿರುವ ಆರ್‍‌ಟಿಐ ಮಾಹಿತಿಯು ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೇ ನಿವೃತ್ತ ನ್ಯಾಯಮೂರ್ತಿ ಎಚ್‌ ಎಸ್‌ ನಾಗಮೋಹನ್ ದಾಸ್‌ ನೇತೃತ್ವದ ಆಯೋಗವು  ಮೀಸಲಾತಿಗಳ ಅಧ್ಯಯನ, ವರದಿ ತಯಾರಿಕೆಗೆ ಸಂಬಂಧಿಸಿದಂತೆ ಮತ್ತು ಆಯೋಗಕ್ಕೆ ನೀಡಿದ್ದ   ಸರ್ಕಾರಿ ವಾಹನದ ಲಾಗ್‌ ಪುಸ್ತಕದ ಪ್ರತಿಗಳನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸಿಲ್ಲ.

ಸರ್ಕಾರಿ ವಾಹನದ ಲಾಗ್ ಪುಸ್ತಕದ ಪ್ರತಿಗಳನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)(ಜೆ) ಪ್ರಕಾರ ಮಾಹಿತಿ ನೀಡಲು ಅವಕಾಶವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ನಿರಾಕರಿಸಿರುವುದು ಆರ್‍‌ಟಿಐ ಅರ್ಜಿಯಿಂದ ಗೊತ್ತಾಗಿದೆ.

ಆಯೋಗಕ್ಕೆ ಖರ್ಚಾಗಿದ್ದು 86.19 ಕೋಟಿ

ಒಳ ಮೀಸಲಾತಿ ಕುರಿತು ವಿಚಾರಣೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ಸಮಿತಿಗೆ 86,19,54,497 ರು ವೆಚ್ಚವಾಗಿರುವುದು ಆರ್‍‌ಟಿಐ ಅರ್ಜಿಯಿಂದ ತಿಳಿದು ಬಂದಿದೆ. 86.19 ಕೋಟಿ ರು ವೆಚ್ಚವಾಗಿರುವ ಕುರಿತು ಸಮಗ್ರ ವಿವರಣೆಯನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸಿಲ್ಲ. ಕೇವಲ ವೆಚ್ಚವಾಗಿರುವ ಅಂತಿಮ ಮೊತ್ತವನ್ನಷ್ಟೇ ನೀಡಿರುವುದು ಗೊತ್ತಾಗಿದೆ.

 

 

‘ಅರ್ಜಿದಾರರಿಗೆ ಇಲಾಖೆಯು ಪೂರ್ಣ ಮಾಹಿತಿ ಒದಗಿಸಿಲ್ಲ. ಈ ಸಂಬಂಧ ಮೇಲ್ಮನವಿ ಕೂಡ ಸಲ್ಲಿಸಲಾಗಿತ್ತು. ಆದರೂ ಇಲಾಖೆಯು  ಮೇಲ್ಮನವಿ ಅರ್ಜಿಯನ್ನು  ಇದುವರೆಗೂ ವಿಚಾರಣೆ ನಡೆಸಿಲ್ಲ. 45 ದಿನಗಳಾದರೂ ಒಟ್ಟು 3 ಅರ್ಜಿಗಳಿಗೆ ಮಾಹಿತಿ ಒದಗಿಸಿಲ್ಲ. ಹೀಗಾಗಿ ಎರಡನೇ ಮೇಲ್ಮನವಿ ಸಲ್ಲಿಸಲಾಗುವುದು,’ ಎಂದು ವೆಂಕಟೇಶ ಬೋವಿ ಅವರು ದಿ ಫೈಲ್‌ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಆಯೋಗವು ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಸೇರಿದಂತೆ ಸುಮಾರು 1,766 ಪುಟಗಳು ಮತ್ತು ಆರು ಶಿಫಾರಸುಗಳನ್ನೊಳಗೊಂಡ ವರದಿಯನ್ನು ನೀಡಿದೆ. 2025 ಮೇ 5 ರಿಂದ ಜುಲೈ 6 ರ ವರೆಗೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

ಈ ವಿಚಾರವಾಗಿ ಮಾತನಾಡಿದ್ದ ಸಚಿವ ಜಿ.ಪರಮೇಶ್ವರ, ಐತಿಹಾಸಿಕ ಒಳಮೀಸಲಾತಿ ವರದಿಯನ್ನು ನಾಗಮೋಹನ್ ದಾಸ್ ಸಿಎಂಗೆ ಒಪ್ಪಿಸಿದ್ದಾರೆ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಇಡಲಾಗುತ್ತದೆ. ಅದನ್ನು ಅನುಷ್ಠಾನ ಮಾಡುವುದಕ್ಕೆ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಆಯೋಗ ನೇಮಕವಾಗಿತ್ತು. ಇದುದವರೆಗೆ ಆಯೋಗಗಳು ಬದಲಾವಣೆ ಆಗಿವೆ. ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ತಿರಸ್ಕಾರ ಮಾಡಿತ್ತು.

ಜನವರಿ 2025 ರಂದು ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತ್ತು. ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸದಾದ ಸಮೀಕ್ಷೆ ನಡೆಸಬೇಕೆಂದು 27-3-2025 ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತ್ತು. ಅದೇ ದಿನವೇ ಸಚಿವ ಸಂಪುಟ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯಿಸಿತ್ತು.

ಉಪವರ್ಗೀಕರಣ ಮಾಡುವುದಕ್ಕೆ ಸಂವಿಧಾನದ ಅನುಚ್ಛೇದ 14 ರಲ್ಲಿ ಅವಕಾಶವಿದ್ದು, ಉಪವರ್ಗೀಕರಣ ಮಾಡಿದರೆ ಮೀಸಲಾತಿ ಅನುಭವಿಸುತ್ತಿರುವ ಯಾರನ್ನೂ ಹೊರಗಿಡುವುದಿಲ್ಲ. ಅಗತ್ಯ ದತ್ತಾಂಶ ಸಂಗ್ರಹಿಸಿ ಒಳಜಾತಿಗಳ ವರ್ಗೀಕರಣ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಅದರಂತೆ, ಒಳಜಾತಿಗಳ ವರ್ಗೀಕರಣಕ್ಕಾಗಿ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆ, ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿದೆ. ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಹಂಚಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಣೆಗೆ 2025ರ ಮೇ 5ರಿಂದ ಮನೆ-ಮನೆ ಭೇಟಿ ಮೂಲಕ ರಾಜ್ಯಾದ್ಯಂತ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಎಸ್​ಸಿ ಸಮುದಾಯದಲ್ಲಿನ ಅತ್ಯಂತ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆದಿತ್ತು. ಪರಿಶಿಷ್ಟ ಜಾತಿಗಳಿಗೆ ‘ಒಳ ಮೀಸಲಾತಿ’ ಹಂಚಿಕೆ ಮಾಡುವ ಕುರಿತು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ರಾಜ್ಯ ಸರಕಾರ ಅಂಗೀಕರಿಸಿತ್ತು.

ಒಳ ಮೀಸಲಾತಿಯ ಕುರಿತಂತೆ ಸರಕಾರಿ ಆದೇಶ ಹೊರಡಿಸಿದ ಕೂಡಲೆ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ. ಅಲ್ಲದೇ, ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡಿದಂತಹ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿತ್ತು.

ಸರಕಾರವು ಈಗ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು.

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಸರ್ವೋಚ್ಛ ನ್ಯಾಯಾಲಯವು 2024ರ ಆ.1ರಂದು ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಸಾಂವಿಧಾನಿಕವಾಗಿ ದತ್ತವಾಗಿದೆ ಎಂದು ಸ್ಪಷ್ಟವಾಗಿ ಹೇಳಿತ್ತು.

ಸಂವಿಧಾನದ ಅನುಚ್ಚೇದ 14, 15 ಮತ್ತು 16 ರಲ್ಲಿ ತಿಳಿಯಪಡಿಸಿರುವ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಅದರ ಮೂಲ ಆಶಯವನ್ನು ಸದೃಢಗೊಳಿಸುವ ದೃಷ್ಟಿಯಿಂದ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ನಮ್ಮ ಸರಕಾರವು 2024ರ ನ.12ರಂದು ನ್ಯಾ.ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿತ್ತು.

Hot this week

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ...

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ...
Please Scan to make Your Contribution

Topics

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ...

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

Related Articles

Popular Categories

error: Content is protected !!