ಬೆಂಗಳೂರು; ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು ʻಚಿಲುಮೆʼ ಸಂಸ್ಥೆಗೆ ಅವಕಾಶ ನೀಡಿ ಮತದಾರರ ದತ್ತಾಂಶವನ್ನು ಖಾಸಗಿಯವರ ಪಾಲಾಗಿಸಿತ್ತು ಎಂಬ ಪ್ರಕರಣವು 3 ವರ್ಷವಾದರೂ ಸಹ ತಾರ್ಕಿಕ ಅಂತ್ಯ ಕಂಡಿಲ್ಲ. ಅಲ್ಲದೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಟಿಐ ಅಡಿ ಕೋರಿರುವ ಮಾಹಿತಿಯೂ ‘ಮಾಹಿತಿ’ ಎಂಬ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂಬರಹ ನೀಡಿದೆ.
ಚಿಲುಮೆ ಸಂಸ್ಥೆಯು ಬಿಜೆಪಿಯೊಂದಿಗೆ ನಿಕಟ ಸಖ್ಯ ಹೊಂದಿದೆ ಎಂದು ಎಐಸಿಸಿಯ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬೆಂಗಳೂರು ಮತ್ತು ದೆಹಲಿಯಲ್ಲಿ ಗಂಭೀರವಾಗಿ ಆಪಾದಿಸಿದ್ದರು. ‘ಪ್ರಜಾಪ್ರಭುತ್ವದ ಘನತೆಯನ್ನು ನಾವು ಕಾಪಾಡುತ್ತೇವೆ,’ ಎಂದು ಡಿ ಕೆ ಶಿವಕುಮಾರ್ ಅವರು ಟ್ವೀಟ್ ಕೂಡ ಮಾಡಿದ್ದರು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಅಧಿಕಾರವನ್ನು ಪೂರ್ಣಗೊಳಿಸಿ 3 ವರ್ಷವಾಗಿದೆ. ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ 2 ತಿಂಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಆದರೂ ಈ ಪ್ರಕರಣದ ಬಗೆಗಿನ ತನಿಖೆ ಯಾವ ಗತಿಯಲ್ಲಿ ಸಾಗಿದೆ ಎಂಬ ಮಾಹಿತಿಯನ್ನು ಆರ್‍ಟಿಐ ಅಡಿಯಲ್ಲಿಯೂ ಒದಗಿಸುತ್ತಿಲ್ಲ. ಬದಲಿಗೆ ಈ ಮಾಹಿತಿಯು ಮಾಹಿತಿ ವ್ಯಾಖ್ಯಾನದಡಿಯಲ್ಲಿಯೇ ಬರುವುದಿಲ್ಲ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯು ಉತ್ತರ ನೀಡುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ವಿಶೇಷವೆಂದರೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025ರಲ್ಲಿ ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ಉತ್ತರಿಸಿದ್ದ ಸರ್ಕಾರವು ಇದು ಅಧಿಕಾರಿಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ಅಡಕವಾಗಿದೆ ಎಂದು ಮಾಹಿತಿಯನ್ನೇ ಒದಗಿಸಿರಲಿಲ್ಲ. ಇದೀಗ 2026ರಲ್ಲಿ ಇದೇ ಇಲಾಖೆಯು ಈ ವಿಷಯವು ಮಾಹಿತಿ ಎಂಬ ವ್ಯಾಖ್ಯಾನದಡಿಯಲ್ಲಿಯೇ ಬರುವುದಿಲ್ಲ ಎಂದು ಉತ್ತರಿಸಿದೆ.
ಮತ್ತೊಂದು ವಿಶೇಷವೆಂದರೇ 2025ರಲ್ಲಿ ಇದು ಅಧಿಕಾರಿಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ಅಡಕವಾಗಿದೆ ಎಂದು ಮಾಹಿತಿ ನೀಡಿದ್ದ ಮಾಹಿತಿ ಹಕ್ಕು ಅಧಿಕಾರಿಯೇ 2026ರಲ್ಲಿ ಇದು ಮಾಹಿತಿ ವ್ಯಾಖ್ಯಾದಡಿಯಲ್ಲಿ ಬರುವುದಿಲ್ಲ ಎಂದು ಉತ್ತರಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಒಬ್ಬನೇ ಸಾರ್ವಜನಿಕ ಮಾಹಿತಿ ಅಧಿಕಾರಿ 2 ವರ್ಷದಲ್ಲಿ ಭಿನ್ನ ಉತ್ತರ ನೀಡಿದ್ದಾರೆ. ಒಂದೇ ವರ್ಷದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ರಾಗ ಬದಲಾಯಿಸಿರುವುದು, ಈ ಪ್ರಕರಣದಲ್ಲಿ ವ್ಯಕ್ತವಾಗಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.
ನಿರ್ದಿಷ್ಟ, ಸ್ಪಷ್ಟವಾಗಿ ಮಾಹಿತಿ ಕೋರಿದ್ದರೂ ಅಸ್ಪಷ್ಟ ಎನ್ನುತ್ತಿರುವುದೇಕೆ?
ಚಿಲುಮೆ ಪ್ರಕರಣವೊಂದರಲ್ಲಿ ನಗರಾಭಿವೃದ್ಧಿ ಇಲಾಖೆಯು ಕಡತ ತೆರೆದಿತ್ತು. ಈ ಕಡತದ ಸಂಖ್ಯೆಯನ್ನು UDD/207/BBS/-BBMP-2 COMPUTER NUMBER 946213 ಉಲ್ಲೇಖಿಸಿದ್ದ ದಿ ಫೈಲ್, ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿ 2026ರ ಜುಲೈ 28ರಂದು ಅರ್ಜಿ ಸಲ್ಲಿಸಿತ್ತು. ಈ ಮಾಹಿತಿಯು 2022ರಿಂದ 2026ರವರೆಗೆ ಎಂದು ಅರ್ಜಿಯಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಿತ್ತು.

ಆದರೂ ನಗರಾಭಿವೃದ್ಧಿ ಇಲಾಖೆಯು ಕಡತ ಸಂಖ್ಯೆಯೇ ಅಸ್ಪಷ್ಟ ಎಂದು ಹೇಳಿದೆ.
‘ಈ ಅರ್ಜಿಯಲ್ಲಿ ಅಸ್ಪಷ್ಟವಾಗಿ ಕಡತ ಸಂಖ್ಯೆಯನ್ನು ನಮೂದಿಸಿ ಮಾಹಿತಿ ಕೋರಿರುವುದರಿಂದ ತಾವು ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 2(ಎಫ್) ರಡಿ ಮಾಹಿತಿ ಎಂಬ ವ್ಯಾಖ್ಯಾನದಡಿ ಬರುವುದಿಲ್ಲ. ನಿರ್ದಿಷ್ಟ ಮಾಹಿತಿ/ದಾಖಲೆ ಕೋರಿಕೆ ಇರುವುದಿಲ್ಲ ಆದ್ದರಿಂದ ನಿರ್ದಿಷ್ಟ ಮಾಹಿತಿ, ದಾಖಲೆ ಕೋರಿ (ಕಡತ ಸಂಖ್ಯೆಯ ವರ್ಷ ನಮೂದಿಸಿ) ಪ್ರತ್ಯೇಕ ಅರ್ಜಿ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು,’ ಎಂದು ನಗರಾಭಿವೃದ್ಧಿ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಅಧೀನ ಕಾರ್ಯದರ್ಶಿ ನಂದಕುಮಾರ್ ಬಿ ಅವರು 2026ರ ಆಗಸ್ಟ್ 4ರಂದು ಉತ್ತರ ಒದಗಿಸಿದ್ದಾರೆ.

ದಿ ಫೈಲ್, ಈ ಕಡತದ ಇ ಆಫೀಸ್ ಲಾಗಿನ್‌ನ್ನೂ ಸಹ ಪರಿಶೀಲಿಸಿತು. ಇದರ ಪ್ರಕಾರ ಈ ಕಡತವು 2025ರ ಸೆ.22ರಿಂದಲೂ ಬಸವರಾಜು ಎಂಬುವರ ಲಾಗಿನ್‌ನಲ್ಲೇ ಇರುವುದು ಗೊತ್ತಾಗಿದೆ.


ದಿ ಫೈಲ್, ಇದೇ ಕಡತಕ್ಕೆ ಸಂಬಂಧಿಸಿದಂತೆ 2025ರ ಜನವರಿ 16ರಂದು ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಕಡತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು 2025ರ ಜನವರಿ 22ರಂದು ಹಿಂಬರಹ ನೀಡಿತ್ತು.
2025ರಲ್ಲಿ ನೀಡಿದ್ದ ಹಿಂಬರಹದಲ್ಲೇನಿತ್ತು?
ಮಾಹಿತಿ ಕೋರಿರುವ ಕಡತ ಸಂಖ್ಯೆ ನಅಇ 207 ಬಿಬಿಎಸ್ 2022ರಲ್ಲಿ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಸಂಬಂಧಿಸಿದೆ. ಈ ಕಡತದಲ್ಲಿ ಅಧಿಕಾರಿ, ನೌಕರರ ವೈಯಕ್ತಿಕ ಮಾಹಿತಿ ಅಡಕವಾಗಿದೆ. ಹೀಗಾಗಿ ಈ ಮಾಹಿತಿಯು ವೈಯಕ್ತಿಕ ಮಾಹಿತಿ ವ್ಯಾಪ್ತಿಗೂ ಸಹ ಬರಲಿದೆ. ಹೀಗಾಗಿ 2013ರ ಆಗಸ್ಟ್ 14ರ ಪ್ರಕಾರ ಈ ಮಾಹಿತಿಯನ್ನು ನೀಡಲು ವಿನಾಯಿತಿ ಇದೆ ಎಂದು ಹಿಂಬರಹದಲ್ಲಿ ತಿಳಿಸಿತ್ತು. ಹಾಗೆಯೇ ಈ ಮಾಹಿತಿಯನ್ನು ನೀಡಲು ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 8(1)(ಹೆಚ್)ರಂತೆ ವಿನಾಯಿತಿ ಇದೆ ಎಂದು ಹೇಳಿತ್ತು.

2025ರಲ್ಲಿ ಮಾಹಿತಿ ಕೋರಿದ್ದ ಅರ್ಜಿಯಲ್ಲಿನ ಮಾಹಿತಿಯು ಅಧಿಕಾರಿ, ನೌಕರರ ವೈಯಕ್ತಿಕ ಮಾಹಿತಿ ಅಡಕವಾಗಿದೆ ಎಂದು ಹೇಳಿದ್ದ ನಂದಕುಮಾರ್ ಅವರು 2026ರಲ್ಲಿ ಇದೇ ಕಡತದ ಸಂಖ್ಯೆಯು ಅಸ್ಪಷ್ಟವಾಗಿದೆ ಮತ್ತು ಕೋರಿರುವ ಮಾಹಿತಿಯು ಮಾಹಿತಿ ವ್ಯಾಖ್ಯಾನದಡಿಯಲ್ಲಿಯೇ ಬರುವುದಿಲ್ಲ ಎಂದು ಹೇಳಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಕಡತ ತೆರೆದಿದ್ದರೂ ಮಾಹಿತಿ ಒದಗಿಸುತ್ತಿಲ್ಲವೇಕೆ?
ಚಿಲುಮೆ ಎಜುಕೇಷನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸಂಸ್ಥೆಯೊಂದಿಗೆ ಭಾಗಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಅರೋಪಕ್ಕೆ ಬಿಬಿಎಂಪಿ ಅಧಿಕಾರಿಗಳು ಗುರಿಯಾಗಿದ್ದರು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಗರಾಭಿವೃದ್ದಿ ಇಲಾಖೆಯಲ್ಲಿ ಕಡತ ತೆರೆದಿತ್ತು.
ಈ ಟ್ರಸ್ಟ್‌ನೊಂದಿಗೆ ಭಾಗಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಹೇಳಲಾಗಿದ್ದ ಅಧಿಕಾರಿಗಳ ಪಟ್ಟಿಯನ್ನು ನಗರಾಭಿವೃದ್ದಿ ಇಲಾಖೆಯು ಸಿದ್ಧಪಡಿಸಿತ್ತು. ಕಂದಾಯ ಅಧಿಕಾರಿ ಕೆ ಚಂದ್ರಶೇಖರ್, ವಿಶೇಷ ಕರ್ತವ್ಯಾಧಿಕಾರಿ ವಿ ಬಿ ಭೀಮಾಶಂಕರ್, ಸುಹೇಲ್ ಅಹ್ಮದ್, ಉಪ ಕಂದಾಯ ಅಧಿಕಾರಿಗಳಾದ ಗುಲ್ತಾಜ್ ಫಾತಿಮಾ ಅವರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಕಾರಣ ಕೇಳುವ ನೋಟೀಸ್ ಜಾರಿಗೊಳಿಸಿತ್ತು. ಅಲ್ಲದೇ ಅದರೊಂದಿಗೇ ಆರೋಪಿತ ಅಧಿಕಾರಿಗಳಿಗೆ ದೋಷಾರೋಪಣೆ ಪಟ್ಟಿಯನ್ನು ಜಾರಿ ಮಾಡಿತ್ತು.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2024ರ ಫೆಬ್ರುವರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರವನ್ನೂ ಬರೆದಿತ್ತು. ಈ ಪತ್ರವನ್ನಾಧರಿಸಿ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ ಎರಡು ವರ್ಷದಿಂದಲೂ ಒಂದೇ ಕಡೇ ಪಾರ್ಕ್ ಮಾಡಿರುವುದು ತಿಳಿದು ಬಂದಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಅಕ್ರಮವಾಗಿ ಸಂಗ್ರಹಿಸಿಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ಅಧಿಕಾರಿಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರವು ಉಳಿದೆಲ್ಲ ಅಧಿಕಾರಿಗಳಿಗಿಂತಲೂ ಆಯಕಟ್ಟಿನ ಸ್ಥಾನ ಕೊಟ್ಟಿದೆ. ಪ್ರಮುಖವಾಗಿ ತುಷಾರ್ ಗಿರಿನಾಥ್ ಅವರಿಗೆ ಗೃಹ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಕರುಣಿಸಿತ್ತು. ತುಷಾರ್ ಗಿರಿನಾಥ್ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಜೆಪಿಯೊಂದಿಗೆ ನಿಕಟ ಸಖ್ಯ ಹೊಂದಿರುವ ʻಚಿಲುಮೆʼ ಸಂಸ್ಥೆಗೆ ಚುನಾವಣಾ ಪ್ರಕ್ರಿಯೆಯ ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ ಮತದಾರರ ದತ್ತಾಂಶವನ್ನು ಖಾಸಗಿಯವರ ಪಾಲಾಗಿಸಿದ್ದರು ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆಗಿನ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಕೂಡ ನೀಡಿದ್ದರು.
‘ಬೆಂಗಳೂರು ಮತದಾರರ ಪಟ್ಟಿ ಸಿದ್ಧಗೊಳ್ಳುತ್ತಿದ್ದಾಗ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಮತದಾರರ ಪಟ್ಟಿ ತಿರುಚಿದ್ದಾರೆ ಮತ್ತು ಮತದಾರರ ದತ್ತಾಂಶ ವಂಚನೆ ಮಾಡಲು ಟೆಂಡರ್ ಇಲ್ಲದೆ “ಚಿಲುಮೆ” ಕಂಪನಿಗೆ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಅಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ,’ ಎಂದು ಕಾಂಗ್ರೆಸ್ ದೊಡ್ಡ ಗಂಟಲಲ್ಲಿ ಆರೋಪಿಸಿತ್ತು.
ಹಾಗೆಯೇ ಈ ಬಗ್ಗೆ ಆಗಿನ ಮುಖ್ಯ ಕಾರ್ಯದರ್ಶಿಯು ತುಷಾರ್ ಗಿರಿನಾಥ್ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಸಹ ಬರೆದಿದ್ದರು. ಆದರೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು 3 ವರ್ಷಗಳನ್ನು ಪೂರ್ಣಗೊಳಿಸಿದ್ದರೂ ಸಹ ತುಷಾರ್ ಗಿರಿನಾಥ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ದತ್ತಾಂಶ ವಂಚನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಚಿಲುಮೆ ಸಂಸ್ಥೆಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಜಾಗೃತಿ ಹೆಸರಿನಲ್ಲಿ ಚಿಲುಮೆ ಸಂಸ್ಥೆಯನ್ನು ತೊಡಗಿಸಿಕೊಂಡಿದ್ದ ಅವಧಿಯಲ್ಲಿಯೇ ಬಿಬಿಎಂಪಿ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರಿಗೆ ಎರಡೆರಡು ಇಲಾಖೆಗಳ ಜವಾಬ್ದಾರಿಯನ್ನು ನೀಡಿತ್ತು. ಈಗ ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಕೂರಿಸಿದೆ.
ಅಷ್ಟೇ ಅಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರ ಜಾಗೃತಿ ಮತ್ತು ಪರಿಷ್ಕರಣೆ ಹೆಸರಿನಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ʻಚಿಲುಮೆ ಎಜುಕೇಷನಲ್ ಕಲ್ಬರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ʼ ಅಕ್ರಮವಾಗಿ ಸಂಗ್ರಹಿಸಿತ್ತು ಎಂಬ ಪ್ರಕರಣದ ವಿರುದ್ಧ ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್ ಆದಿಯಾಗಿ ಇಡೀ ಕಾಂಗ್ರೆಸ್ ಮುಖಂಡರು ಅಬ್ಬರಿಸಿದ್ದರು.
ಹಿಂದಿನ ಬಿಜೆಪಿ ಸರ್ಕಾರದ ಕಡೇ ದಿನಗಳಲ್ಲಿ ಈ ಪ್ರಕರಣವು ಬಹಿರಂಗಗೊಂಡಿತ್ತು ಇದನ್ನು ಪ್ರಬಲ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಇದನ್ನು ವೋಟರ್ ಗೇಟ್ ಹಗರಣ ಎಂದು ಬೊಬ್ಬೆ ಹೊಡೆದಿತ್ತು. ಬಿಬಿಎಂಪಿಯಿಂದ ಬಿ. ಎಲ್ ಓ (ಬೂತ್ ಮಟ್ಟದ ಅಧಿಕಾರಿ) ಎಂದು ಗುರುತಿನ ಚೀಟಿ ಹಾಕಿಕೊಂಡು ಈ ಅಕ್ರಮ ಎಸೆಯಲಾಗಿದೆ. ಈ ಅಕ್ರಮದ ಹಿಂದೆ ಸಚಿವರು ಹಾಗೂ ಸಿ ಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಸಿದ್ಧರಾಮಯ್ಯ, ಡಿಕೆಶಿವಕುಮಾರ್ ಆದಿಯಾಗಿ ಎಲ್ಲ ಸಚಿವ, ಮುಖಂಡರು ಆರೋಪಿಸಿದ್ದರು.
ಅದೇ ರೀತಿ ರಾಜ್ಯ ಕಾಂಗ್ರೆಸ್ ನಾಯಕರು ಅಂದಿನ ಸಿ ಎಂ ಬೊಮ್ಮಾಯಿ ಸೇರಿದಂತೆ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಅವರ ಜತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮತದಾರರ ಪಟ್ಟಿ ಅಕ್ರಮ ಸಂಬಂಧ ದೂರು ನೀಡಿದ್ದರು.
ಮತಕಳ್ಳತನ; ಎರಡು ವರ್ಷವಾದರೂ ತಾರ್ಕಿಕ ಅಂತ್ಯವಿಲ್ಲ, ತುಷಾರ್‍ಗೆ ಆಯಕಟ್ಟಿನ ಹುದ್ದೆ, ರಾಹುಲ್‌ರನ್ನೇ ಅಣಕಿಸಿದರೇ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರ ಜಾಗೃತಿ ಮತ್ತು ಪರಿಷ್ಕರಣೆ ಹೆಸರಿನಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಚಿಲುಮೆ ಎಜುಕೇಷನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಕ್ರಮವಾಗಿ ಸಂಗ್ರಹಿಸಿತ್ತು ಎಂಬ ಪ್ರಕರಣದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದ್ದ ಕಾಂಗ್ರೆಸ್ ಪಕ್ಷವು ತನ್ನದೇ ಅಧಿಕಾರದಲ್ಲಿ ಎರಡೆರಡು ಬಾರಿ ಕಡತವನ್ನು ಒದಗಿಸಲು ನಿರಾಕರಿಸುತ್ತಿದೆ.
ಚಿಲುಮೆ ‘ವೋಟರ್ ಗೇಟ್ ‘ಹಗರಣದಲ್ಲಿ ಬೊಬ್ಬೆ ಹೊಡೆದು ಈಗ ಮಾಹಿತಿ ನೀಡಲು ನಿರಾಕರಿಸಿದ ಕಾಂಗ್ರೆಸ್
ಅದೇ ರೀತಿ ಅಂದು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್ ಅವರು ‘ ಡಿಎಪಿ ಹೊಂಬಾಳೆ ಒಡೆತನದ ಚಿಲುಮೆ ಸಂಸ್ಥೆಯಿಂದ ಮತಪಟ್ಟಿ ಅಕ್ರಮ ಎಸಗಿರುವ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಲು ಇಂದು ಭಾರತದ ಚುನಾವಣಾ ಆಯೋಗ ನವದೆಹಲಿ, ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅವರಿಗೆ ಪತ್ರದ ಮೂಲಕ ದೂರು ಸಲ್ಲಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು,’ ಎಂದು ಚುನಾವಣೆ ಆಯೋಗವನ್ನು ಕೋರಿದ್ದರು.

ಅಷ್ಟೇ ಅಲ್ಲ ‘ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ BJP ನಾಯಕರ ವಿರುದ್ಧ, ಚಿಲುಮೆ ಸಂಸ್ಥೆಯ ವಿರುದ್ಧ ದೂರು ದಾಖಲಾಗಿಲ್ಲ. ಆದರೆ ನಾವು ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಕೂರುವವರಲ್ಲ. ಬಿಜೆಪಿಯ ಹಿಟ್ಲರ್ ಆಡಳಿತಕ್ಕೆ ಪೂರ್ಣವಿರಾಮ ಇಡುವವರೆಗೂ ನಮ್ಮ ಹೋರಾಟ ಸಾಗುತ್ತಲೇ ಇರುತ್ತದೆ. ಪ್ರಜಾಪ್ರಭುತ್ವದ ಘನತೆಯನ್ನು ನಾವು ಕಾಪಾಡುತ್ತೇವೆ,’ ಎಂದು ಡಿ ಕೆ ಶಿವಕುಮಾರ್ ಅವರು ಟ್ವೀಟ್ ಕೂಡ ಮಾಡಿದ್ದರು.

ರಾಜ್ಯ ಕಾಂಗ್ರೆಸ್ ನಾಯಕರು ಅಂದಿನ ಸಿಎಂ ಬೊಮ್ಮಾಯಿ ಸೇರಿದಂತೆ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಅವರ ಜತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮತದಾರರ ಪಟ್ಟಿ ಅಕ್ರಮ ಸಂಬಂಧ ದೂರು ನೀಡಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ ಸರಿ, ಆದರೆ ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು/ ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ, ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ ಎಂದು ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಹಾಗೆಯೇ ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ, ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿfಲಲವೇ, ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಘ ಮತದಾರರ ಪಟ್ಟಿಯನ್ನು ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶ ಅರಿವು ಬಿಬಿಎಂಪಿಗೆ ಆಗಬೇಕಿತ್ತು ಎಂದೂ ಸಿದ್ದರಾಮಯ್ಯ ಅವರು ತಿವಿದಿದ್ದರು.
ಸಿದ್ದರಾಮಯ್ಯ ಅವರು ಇಷ್ಟಕ್ಕೇ ಸುಮ್ಮನಿರಲಿಲ್ಲ. ‘ಮತದಾರರ ಮಾಹಿತಿಯ ಕಳ್ಳತನ ಮತ್ತು ಒಂದು ನಿರ್ದಿಷ್ಟ ಸಮುದಾಯದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕುವ ದುರುದ್ದೇಶದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ವಂಚಕ ಕಂಪನಿಗೆ ಕೊಟ್ಟಿದೆ. ಅಮೇರಿಕಾದ ವಾಟರ್‍ಗೇಟ್ ಪ್ರಕರಣದಂತೆ ಇದು ವೋಟರ್ ಗೇಟ್ ಪ್ರಕರಣ. ಈ ಹಗರಣದಲ್ಲಿ ನೇರವಾಗಿ ಬಸವರಾಜ ಬೊಮ್ಮಾಯಿ ಶಾಮೀಲಾಗಿದ್ದಾರೆ. ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿ ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ,’ ಎಂದು ಹೂಂಕರಿಸಿದ್ದರು.

ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ‘ ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮದ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿ ನ್ಯಾಯಾಂಗ ತನಿಖೆಗೆ ನೀವೇ ಒಪ್ಪಿಸಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಆಯೋಗ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕೇಂದ್ರ ಚುನಾವಣೆ ಆಯೋಗ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ.,’ ಎಂದೂ ಹೇಳಿದ್ದರು.

ಹಾಗೆಯೇ ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿತ್ತು. ‘ ಚಿಲುಮೆ ಎಜುಕೇಷನ್ ಇನ್ಸಿಟಿಟ್ಯುಟ್ ಎಂಬ ಸಂಸ್ಥೆ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಮತದಾರರ ಮಾಹಿತಿ ಕಳ್ಳತನ ನಡೆದಿದೆ. ಈ ಅಕ್ರಮಕ್ಕೆ ಬೆಂಗಳೂರು ಉಸ್ತುವಾರಿ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಈಗ ಚುನಾವಣೆ ಪ್ರಕ್ರಿಯೆಗೂ ವಿಸ್ತರಿಸಿದೆ,’ ಎಂದು ಟ್ವೀಟ್ ಮೂಲಕ ಆರೋಪಿಸಿತ್ತು.

‘ಸರ್ಕಾರಿ ನೌಕರರೆಂದು ಐಡೆಂಟಿಟಿ ಕಾರ್ಡ್ ಕೊಟ್ಟಿದ್ದಾರೆ. ಎಲೆಕ್ಷನ್ ಕಮೀಷನ್ ಮಾಡೋ ಕೆಲಸವನ್ನು ಬೇರೆ ಖಾಸಗಿಯವರಿಗೆ ಕೊಟ್ಟಿದ್ದಾರೆ. ತುಷಾರ್ ಗಿರಿನಾಥ್ ಸೀನಿಯರ್ ಐಎಎಸ್ ಅಧಿಕಾರಿ ಆಗಿದ್ದಾರೆ. ಈ ಕೆಲಸದಿಂದ ಅವರು ಗೌರವ ಕಳೆದುಕೊಳ್ಳುತ್ತಿದ್ದಾರೆ,’ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು. ಆದರೇ ಅದೇ ತುಷಾರ್ ಗಿರಿನಾಥ್ ಅವರನ್ನು ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಕೂಡಲೇ ತಮ್ಮ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನಾಗಿ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿಯೂ ನೇಮಿಸಿದ್ದಾರೆ.
ಹಾಗೆಯೇ ‘ಒಂದು ಜಡ್ಜ್ಗೆ ಇರುವ ಅಥಾರಿಟಿ ಕಮಿಷನರ್ಗೆ ಇರುತ್ತೆ. ಚಿಲುಮೆ ಅಂತ ಹಿಂದೆ ಒಂದು ಹೆಸರು ಇತ್ತು. ಈಗ ಬದಲಾವಣೆ ಮಾಡಿದ್ದಾರೆ. ನಾವು ಮಾಡಿದ್ದು ಗಂಭೀರ ಆರೋಪ ಅಲ್ಲ. ಆದರೆ, ಸತ್ಯ. ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ ಹೊಂಬಾಳೆಯಿಂದ ಮತದಾರರ ಡೇಟಾ ಸಂಗ್ರಹ ಹಿನ್ನೆಲೆ ದೂರು ಸಲ್ಲಿಸಿದ್ದೇವೆ. ಮತದಾನದ ಹಕ್ಕನ್ನೇ ಕಿತ್ತುಕೊಳ್ಳುವ ದೊಡ್ಡ ಪ್ರಯತ್ನ ನಡೆದಿದೆ. 7-8 ಸಾವಿರ ಕಾರ್ಯಕರ್ತರು ಬಿಎಲ್ಓ ಐಡಿ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಸಚಿವ ಅಶ್ವತ್ಥನಾರಾಯಣ ಬಾಳ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಹರಿಹಾಯ್ದಿದ್ದನ್ನು ಸ್ಮರಿಸಬಹುದು.
ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮಾಹಿತಿ ಕದ್ದ ಆರೋಪ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಚುನಾವಣೆ ಆಯೋಗ ತನಿಖಾಧಿಕಾರಿಯನ್ನು ನೇಮಿಸಿತ್ತು. ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲನ್ ಬಿಸ್ವಾಸ್ ಅವರನ್ನು ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನೀಡಿ ಚುನಾವಣೆ ಆಯೋಗ ಆದೇಶ ಹೊರಡಿಸಿತ್ತು. ಆದರೆ ಈ ತನಿಖೆ ಏನಾಯಿತು, ತನಿಖಾ ವರದಿಯಲ್ಲೇನಿದೆ ಎಂಬ ಸಂಗತಿಗಳು ಇದುವರೆಗೂ ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ.
ಅಷ್ಟೇ ಅಲ್ಲದೇ ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುವ ಸಂಬಂಧ ತೆರೆದಿದ್ದ ಕಡತವು ಕಳೆದ ಒಂದು ವರ್ಷದಿಂದ ಒಬ್ಬನೇ ಒಬ್ಬ ಅಧಿಕಾರಿಯ ಲಾಗಿನ್‌ನಲ್ಲೇ ಇತ್ತು.
‘ಚಿಲುಮೆ’ ಹಗರಣ; ಕಡತಕ್ಕೆ ಸಿಗದ ಮುಕ್ತಿ, ಒಂದು ವರ್ಷದಿಂದ ಒಬ್ಬೇ ಒಬ್ಬ ಅಧಿಕಾರಿ ಲಾಗಿನ್‌ನಲ್ಲೇಕಿದೆ?
ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆ ಸಂಸ್ಥೆಯ ಕೆ.ಎಂ.ಲೋಕೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ಸ್ಮರಿಸಬಹುದು.




