Monday | August 3, 2026 |

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಕುರಿತು ಪರಿಶೀಲನೆ ನಡೆಸಿದ್ದ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು ಎಂದು  ಸದನದಲ್ಲಿ ಭರವಸೆ ನೀಡಿ  9 ವರ್ಷಗಳಾಗಿದ್ದರೂ ಸಹ ಈ ವರದಿಯನ್ನು ಇದುವರೆಗೂ ಸದನಕ್ಕೆ ಮಂಡಿಸಿಲ್ಲ.

ಅಲ್ಲದೇ ಈ ವರದಿಯನ್ನು ಸದನಕ್ಕೆ ಮಂಡಿಸಲು ಯಾವುದೇ ಕಾಲಮಿತಿಯಿಲ್ಲ ಎಂಬುದನ್ನೇ  ನೆಪವಾಗಿರಿಸಿಕೊಂಡಿರುವ ನಗರಾಭಿವೃದ್ಧಿ ಇಲಾಖೆಯು ‘ಇಲ್ಲಿ ಏನು ಮಾಡುವುದಕ್ಕಾಗುವುದಿಲ್ಲ’ ಎಂದು ‘ಕೈ’ ಎತ್ತಿದೆ. ಅಲ್ಲದೇ  ಕೆಂಪಣ್ಣ ಆಯೋಗವು ತನ್ನ  ವರದಿಯನ್ನು  ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಈ ಭರವಸೆಯನ್ನೂ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅಧ್ಯಕ್ಷತೆಯ  ಸರ್ಕಾರಿ ಭರವಸೆಗಳ ಸಮಿತಿಯು ಮುಕ್ತಾಯಗೊಳಿಸಿದೆ.

ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಕೈ ಬಿಟ್ಟಿರುವ ಬಗ್ಗೆ ನೀಡಿದ್ದ ಭರವಸೆ ಕುರಿತು ಸರ್ಕಾರಿ ಭರವಸೆಗಳ ಸಮಿತಿಯು 2026ರ ಜನವರಿ 16ರಂದು ನಡೆಸಿದ್ದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ‘ಇಲ್ಲಿ ಏನು ಮಾಡುವುದಕ್ಕಾಗುವುದಿಲ್ಲ’ ಎಂದು ತಮ್ಮ ನಿಲುವು ತಿಳಿಸಿದ್ದಾರೆ. ಇವರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ   ಸರ್ಕಾರಿ ಭರವಸೆಗಳ ಸಮಿತಿಯು ಈ ಭರವಸೆಯನ್ನು  ಮುಕ್ತಾಯಗೊಳಿಸಿರುವುದು ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಲಿದೆ.

ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು 2026ರ ಜನವರಿ 16ರಂದು ನಡೆಸಿದ್ದ ಸಭೆಯ (ಭರವಸೆ ಸಂಖ್ಯೆ 663/2017) ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ರಾಜ್ಯಪಾಲರು ನೀಡಿರುವ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೆಚ್‌ ಎಸ್‌ ಕೆಂಪಣ್ಣ ವಿಚಾರಣೆ ಆಯೋಗದ ವರದಿ ಮತ್ತು ದಾಖಲೆಗಳನ್ನು ಡಿ ಕೆ ಶಿವಕುಮಾರ್‍‌ ಅವರು  ಉಪ ಮುಖ್ಯಮಂತ್ರಿ ಆಗಿದ್ದಾಗಲೇ  ಸಲ್ಲಿಸಿದ್ದರು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2024ರ ಸೆ.20ರಂದು ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.

‘ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್‌ ಎಸ್‌ ಕೆಂಪಣ್ಣ ವಿಚಾರಣೆ ಆಯೋಗದ ವರದಿ ಹಾಗೂ ಸಂಬಂಧಪಟ್ಟ ಕಡತ (ಸಂಖ್ಯೆ ನಾಇ 480 ಬೆಂಭೂಸ್ವಾ 2017) ವನ್ನು ಉಪ ಮುಖ್ಯಮಂತ್ರಿ ಅವರಿಗೆ 2024ರ ಸೆ.11ರಂದು ಸಲ್ಲಿಸಲಾಗಿದೆ. ಈ ವರದಿಯ ಸಂಪುಟಗಳನ್ನೊಳಗೊಂಡ ಮೂಲ ವರದಿಯನ್ನೂ ಸಹ ಕಳಿಸಲಾಗಿದೆ,’ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್‌ ಎಸ್‌ ಸೂಳಿಕೇರಿ ಅವರು 2024ರ ಸೆ. 20ರಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿದ್ದರು. ಇದೀಗ 2 ವರ್ಷಗಳ ಬಳಿಕ ಈ ವರದಿಯನ್ನು ಸದನಕ್ಕೆ ಮಂಡಿಸುವ ಭರವಸೆಯನ್ನೇ ಸರ್ಕಾರಿ ಭರವಸೆಗಳ ಸಮಿತಿಯು ಮುಕ್ತಾಯಗೊಳಿಸಿರುವುದು ಮುನ್ನೆಲೆಗೆ ಬಂದಿದೆ.

ಸರ್ಕಾರಿ ಭರವಸೆಗಳ ಸಮಿತಿಯಲ್ಲಿ ನಡೆದಿದ್ದೇನು?

ಅಧ್ಯಕ್ಷರು; ಈ ವಿಷಯಕ್ಕೆ ಸಂಬಂಧಿಸಿದಂತೆ 2016ರಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗವನ್ನು ರಚನೆ ಮಾಡಲಾಗಿದ್ದು  2017ರ ಆಘಸ್ಟ್‌ 23ರಂದು ವರದಿಯನ್ನು ಸಹ ಸಲ್ಲಿಸಿರುತ್ತದೆ. ಅದು ಇವತ್ತಿನವರೆಗೂ ಪರಿಶೀಲನೆ ಹಂತದಲ್ಲಿದೆ ಎಂದು ಹೇಳುತ್ತಾರೆ.

ಎಂ ನಾಗರಾಜು; ಅದನ್ನು ತಾವು ಇಲ್ಲಿ ಹೇಳಬೇಡಿ. ಅದರ ಬಗ್ಗೆ ವಿರೋಧ ಪಕ್ಷದವರಾಗಲೀ ಅಥವಾ ಪಕ್ಷಾತೀತವಾಗಿ ಆಗಲಿ ಚರ್ಚೆ ಮಾಡಬೇಕು.

ಅಧ್ಯಕ್ಷರು; ಸಮಿತಿಯಿಂದ ಸರ್ಕಾರಕ್ಕೆ ಸಲಹೆ ರೂಪದಲ್ಲಿ ಒಂದು ಸೂಚನೆಯನ್ನು ಕೊಡೋಣ.

 

 

ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ;

ಕಾರ್ಯವಿಧಾನ ಹೀಗಿದೆ. ಮೊದಲಿಗೆ ವರದಿ ಬರುತ್ತದೆ. ಒಂದು ವೇಳೆ ಆ ವರದಿ ಸರ್ಕಾರದ ಆದೇಶದ ಆಧಾರದ ಮೇಲೆ ಆರಂಭಿಸಲಾದ ಕ್ರಮಕ್ಕೆ ಸಂಬಂಧಿಸಿದ್ದಾದರೆ, ಅದನ್ನು ವಿಧಾನಸಭೆಗೆ ಮಂಡಿಸುವ ಅಗತ್ಯವಿಲ್ಲ. ಆದರೆ ಈ ಪ್ರಕರಣದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಮೊದಲು ಅರ್ಕಾವತಿ ಲೇ ಔಟ್‌ನಲ್ಲಿ ಏನೇನು ಅವ್ಯವಹಾರವಾಗಿದೆಯನ್ನುವುದನ್ನು ಪರಿಶೀಲಿಸುವುದಕ್ಕೆ ಆಯೋಗವನ್ನು ರಚಿಸಲಾಗುವುದು ಎಂದು ನೀಡಿದ್ದ ಭರವಸೆಯಂತೆ ಆಯೋಗ ರಚನೆಯಾಯಿತು. ಈಗ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆ ವರದಿಯನ್ನು ಮೊದಲು ಸಚಿವ ಸಂಪುಟವು ಅಂಗೀಕರಿಸಬೇಕು. ಅದರ ನಂತರವೇ ಅದನ್ನು ವಿಧಾನಸಭೆಯ ಮುಂದೆ ಮಂಡಿಸಬೇಕು. ಹೀಗಾಗಿ, ಆ ವರದಿಯನ್ನು ಯಾವಾಗ ವಿಧಾನಸಭೆಗೆ ತರಬೇಕು ಹಾಗೂ ಅದರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಚಿವ ಸಂಪುಟವೇ ನಿರ್ಧರಿಸಬೇಕು. ಈ ಪ್ರಕ್ರಿಯೆಗೆ ಸರ್ಕಾರಕ್ಕೆ ಯಾವುದೇ ಕಡ್ಡಾಯ ಕಾಲಮಿತಿಯನ್ನು ಕಾನೂನಿನಲ್ಲಿ ನಿಗದಿಪಡಿಸಲಾಗಿಲ್ಲ. ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲ.

(The Procedure is like this, first the report will come. suppose the report is initiation on the Government Order then it need not go to the assmebly. But in this case,  Now the commission has to give a report and it has to be accepted by the Cabinet and then, it has to com to the Assembly. So, the cabinet has to take a decision that when they want to bring and what they want to do on that report. There is no time-bound for the Government on this)

ಎಂ ನಾಗರಾಜು; ನಾವು ಸರ್ಕಾರಕ್ಕೆ ಆ ರೀತಿ ಹೇಳುವುದಕ್ಕೆ ಆಗುತ್ತದೆಯೇ? ಅದು ಸಚಿವ ಸಂಪುಟದಲ್ಲಿಯೇ ಚರ್ಚೆಯಾಗಿದೆ.

ಅ.ಮು.ಕಾ. ನಗರಾಭಿವೃದ್ಧಿ ಇಲಾಖೆ; ಮೊದಲು ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು.

 

 

ಅಧ್ಯಕ್ಷರು; ‘ಅರ್ಕಾವತಿ ಬಡಾವಣೆಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗವು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುವುದರಿಂದ ಈ ಭರವಸೆಯನ್ನು ಮುಕ್ತಾಯಗೊಳಿಸಲಾಗಿದೆ,’ ಎಂಧು ಹೇಳಿರುವುದು ನಡವಳಿಯಲ್ಲಿ ದಾಖಲಾಗಿರುವುದು ಗೊತ್ತಾಗಿದೆ.

ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ  ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ನೀಡಿದ್ದ ರಾಜ್ಯಪಾಲರು ಅರ್ಕಾವತಿ ಬಡಾವಣೆಯ ವಿಚಾರಣೆ ಆಯೋಗದ ವರದಿಗೆ ಕೈ ಹಾಕಿದ್ದರು.  ಗಂಗೇನಹಳ್ಳಿ ಡಿ ನೋಟೀಫಿಕೇಷನ್‌ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ, ಸಂತೋಷ್‌ ಲಾಡ್‌ ಸೇರಿದಂತೆ ಮತ್ತಿತರರು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ದಾಖಲೆಗಳನ್ನು ಬಹಿರಂಗಗೊಳಿಸಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರೂ ಸಹ ವಿಚಾರಣೆ ಆಯೋಗದ ವರದಿಯನ್ನು ಸಲ್ಲಿಸಲು ನೀಡಿದ್ದ ನಿರ್ದೇಶನವು ಕುತೂಹಲ ಮೂಡಿಸಿತ್ತು.

ರಾಜ್ಯಪಾಲರಿಗೆ ವರದಿ ಸಲ್ಲಿಸಬೇಕೇ ಬೇಡವೇ ಎಂಬ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ವರದಿಯ ಎಲ್ಲಾ ಸಂಪುಟಗಳನ್ನೂ ಉಪ ಮುಖ್ಯಮಂತ್ರಿಯೂ ಆಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲಿಸಿತ್ತು.

 

 

ಅರ್ಕಾವತಿ ಬಡಾವಣೆಗಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದ ಒಟ್ಟು ಜಮೀನಿನ ಪೈಕಿ 541 ಎಕರೆಯನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿ ನೋಟಿಫಿಕೇಷನ್‌ ಮಾಡಿದ್ದರು. ಈ ಕುರಿತು ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯು ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಒತ್ತಾಯಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಹೆಚ್‌ ಎಸ್‌ ಕೆಂಪಣ್ಣ ಅವರ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದರು.

ಅರ್ಕಾವತಿ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ನ್ಯಾ.ಹೆಚ್ಎಸ್ ಕೆಂಪಣ್ಣ ಆಯೋಗವು ಸಿಎಂ ಸಿದ್ದರಾಮಯ್ಯಗೆ ಈ ಹಿಂದೆಯೇ ಕ್ಲೀನ್ ಚಿಟ್ ನೀಡಿತ್ತು. ಆಯೋಗದ ಈ ವರದಿಯನ್ನು ವಿಧಾನಮಂಡಲಕ್ಕೆ ಮಂಡಿಸಿರಲಿಲ್ಲ. ಹೀಗಾಗಿ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಕೆಂಪಣ್ಣ ಆಯೋಗದ ವರದಿಯನ್ನು ಮಂಡಿಸಬೇಕು ಎಂದು ಪತ್ರ ಬರೆದಿದ್ದರು.

ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು ಸಲ್ಲಿಸಿದ್ದ ವರದಿಯಲ್ಲಿ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಲೋಪವನ್ನು ವರದಿಯಲ್ಲಿ ಉಲ್ಲೇಖಿಸಿದೆ. ವರದಿಯನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಸುಮಾರು 1,861 ಪುಟಗಳ ವರದಿಯಲ್ಲಿ ಆಯೋಗ ಹೇಳಿತ್ತು.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ಮಾತಿನ ಚಕಮಕಿ ನಡೆದಿತ್ತು. 8,000 ಕೋಟಿ ರೂ.ಗಳ ಹಗರಣದ ಕುರಿತು ರಾಜ್ಯ ಸರ್ಕಾರ ತನಿಖೆಯನ್ನು ಪ್ರಾರಂಭಿಸಲಿದೆ ಎಂದು ಸುಳಿವು ಕೂಡ ನೀಡಿದ್ದರು. ಆದರೆ ಯಾವುದೇ ತನಿಖೆಯನ್ನು ನಡೆಸಿರಲಿಲ್ಲ.

ಅಲ್ಲದೇ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯ ಅಂತಿಮ ಭಾಗವನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗಪಡಿಸಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಸದನದಲ್ಲೇ ಸಿಟ್ಟಿಗೆದ್ದಿದ್ದರು.

‘ಸಿದ್ದರಾಮಯ್ಯ ಅವರು ಡಿನೋಟಿಫಿಕೇಶನ್‌ನಲ್ಲಿ ಭಾಗಿಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ, ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದನ್ನು ಮಾತ್ರ ಅನುಮೋದಿಸಿದ್ದಾರೆ ಎಂದು ಹೇಳಿದರೆ, ಇದರ ಅರ್ಥವೇನು? ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಇದಕ್ಕಿಂತ ದೊಡ್ಡ ಸಾಕ್ಷ್ಯದ ಅಗತ್ಯವಿಲ್ಲ,’ ಎಂದು ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದರು. ಅಲ್ಲದೇ ಸಾವಿರಾರು ಪುಟಗಳ ದಾಖಲೆಗಳನ್ನು ಒಟ್ಟುಗೂಡಿಸಿ ಇಡೀ ಹಗರಣದಲ್ಲಿ ಅಡಗಿರುವ ಆಯೋಗದ ಸಂಶೋಧನೆಗಳನ್ನು ಓದಿದ್ದೇನೆ. ಹಾಗಾಗಿ ನನ್ನ ಪ್ರಶ್ನೆಯೇ ಇಲ್ಲ. ಸುಳ್ಳು ಹೇಳುತ್ತಿದ್ದು, ಅವರೇ (ಸಿದ್ದರಾಮಯ್ಯ) ಸುಳ್ಳು ಹೇಳುತ್ತಿದ್ದಾರೆ,” ಎಂದು ಆರೋಪಿಸಿದ್ದರು.

“ಕಾಂಗ್ರೆಸ್ ಸರ್ಕಾರವು ಯಾವ ಕ್ರಮ ಕೈಗೊಂಡಿದೆ ಎಂದು ನಾವು ಈಗಾಗಲೇ ನೋಡಿದ್ದೇವೆ. ಈಗ ನಾವು ಸೂಕ್ತ ಕ್ರಮವನ್ನು ಪ್ರಾರಂಭಿಸುತ್ತೇವೆ. ಸೂಕ್ತ ಕ್ರಮ ಎಂದರೆ ಏನು, ಅದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ಅವರು ಹೇಳಿದರು. ಅರ್ಕಾವತಿ ಲೇಔಟ್ ಹಗರಣದ ತನಿಖಾ ವರದಿಯು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಮಹಾದ್ವಾರವನ್ನು ತೆರೆದಿದೆ ಎಂದೂ ಹೇಳಿದ್ದರು.

40 ಪರ್ಸೆಂಟ್‌ ಕಮಿಷನ್‌ ಕುರಿತಂತೆ ಆಡಳಿತ ಪಕ್ಷವಾಗಿದ್ದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟಿದ್ದ ಕಾಂಗ್ರೆಸ್‌ನ್ನು ಎದುರಿಸಲು ಅರ್ಕಾವತಿ ಡಿ ನೋಟಿಫಿಕೇಷನ್‌ ಹಗರಣವನ್ನು ಮುಂದಿರಿಸಿ ಬೆದರಿಸಲು ನೋಡಿತ್ತು. ಆದರೆ ಆ ನಂತರ ಈ ಆಯೋಗವು ನೀಡಿರುವ ವರದಿಯನ್ನು ಬಹಿರಂಗಪಡಿಸಿರಲಿಲ್ಲ.

ಅರ್ಕಾವತಿ ಡಿನೋಟಿಫಿಕೇಷನ್​ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿರುವ ವರದಿಯನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪತ್ರದ ಮೂಲಕ ಒತ್ತಾಯಿಸಿದ್ದರು.

 

ಅರ್ಕಾವತಿ ಡಿ ನೋಟಿಫಿಕೇಷನ್‌; ಕೆಂಪಣ್ಣ ವರದಿಗೆ ಕೈ ಹಾಕಿದ ರಾಜ್ಯಪಾಲ, ಡಿಸಿಎಂಗೆ ದಾಖಲೆ ಸಲ್ಲಿಸಿದ ಇಲಾಖೆ

 

‘ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನ ಸೆಳೆಯಬಯಸುವುದೇನೆಂದರೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು, ಇದು ಸುಮಾರು 8,000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ,’ ಎಂದು ಹೇಳಿದ್ದರು.

2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದ ವಿಚಾರಣಾ ಆಯೋಗವನ್ನು ಕಮಿಷನ್ ಆಫ್ ಎನ್​ಕ್ವೆರಿ ಆಕ್ಟ್ 1952 ರಂತೆ ರಚಿಸಿದ್ದರು. ಅದರಂತೆ ಈ ಆಯೋಗವು ವಿಚಾರಣಾ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳು. ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಿ ಟಿ ರವಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

‘ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ,’ ಎಂದು ಪತ್ರದಲ್ಲಿ ಹೇಳಿರುವುದನ್ನು ಸ್ಮರಿಸಬಹುದು.

 

ಕೆಂಪಣ್ಣ ಆಯೋಗ; ಸಲ್ಲಿಕೆಯಾಗದ ವರದಿ, ವರ್ಷದಿಂದಲೂ ಕಡತ ತೆವಳಿಕೆ, ರಾಜ್ಯಪಾಲರ ಕಡುಮೌನ

 

ಈ ವರದಿ ಪಡೆಯಲು ದಿ ಫೈಲ್‌ ಕೂಡ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಈ ವರದಿಯು ಇನ್ನೂ ಪರಿಶೀಲನೆಯಲ್ಲಿದೆ ಎಂದು ಹಿಂಬರಹ ನೀಡಿತ್ತು.

 

ಅರ್ಕಾವತಿ ಬಡಾವಣೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ರೀ ಡೂ ಫಲಾನುಭವಿಗಳಿಂದಲೇ ಅಡ್ಡಿ; ಅಗತ್ಯ ಜಮೀನು ಭೂ ಸ್ವಾಧೀನ ಪ್ರಸ್ತಾವನೆ ಪರಿಗಣಿಸಲು ಸ್ಪಷ್ಟ ಶಿಫಾರಸ್ಸುಗಳೇ ಇಲ್ಲ

 

ಅರ್ಕಾವತಿ ಬಡಾವಣೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಸಹ ರೀ ಡೂ ಫಲಾನುಭವಿಗಳಿಂದಲೇ ಅಡ್ಡಿಯಾಗಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

Related Articles

Popular Categories

error: Content is protected !!