ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಕ್ರೈಸ್‌ನ ಅಧೀಕ್ಷಕ ಇಂಜಿನಿಯರ್ ಹೆಚ್ ಎಂ ಜನಾರ್ದನ್ ಅವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಖ್ಯ ಇಂಜಿನಿಯರ್ ಹುದ್ದೆಯನ್ನು ಕರುಣಿಸಿದೆ.
ವಿಶೇಷವೆಂದರೇ ಜನಾರ್ದನ ಅವರ ಮನೆ ಮೇಲೆ ದಾಳಿ ನಡೆದ ಎರಡೂವರೆ ತಿಂಗಳ ಅಂತರದಲ್ಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿದ್ದ ಅಧೀಕ್ಷಕ ಇಂಜಿನಿಯರ್ ಹುದ್ದೆಯನ್ನೇ ಮುಖ್ಯ ಇಂಜಿನಿಯರ್ ಹುದ್ದೆಗೆ ಉನ್ನತೀಕರಿಸಲಾಗಿದೆ.
ಎಚ್ ಎಂ ಜನಾರ್ದನ ಅವರ ಆಪ್ತರ ಮನೆಯಲ್ಲಿ 1.70 ಕೋಟಿ ರು ನಗದು ಸೇರಿದಂತೆ ಒಟ್ಟು 19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಜನಾರ್ದನ ಅವರ ಆಪ್ತ ಎನ್ನಲಾದ ಸುಜಯ ಶೆಟ್ಟಿ ಎಂಬುವರ ಮನೆಯಲ್ಲಿ 1.70 ಕೋಟಿ ರು ನಗದು ಪತ್ತೆಯಾಗಿತ್ತು.
ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದ್ದಲ್ಲದೇ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಿರುವ ಕುರಿತು ವಿಚಾರಣೆ ಎದುರಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಉನ್ನತ ಹುದ್ದೆಗಳನ್ನು ಕರುಣಿಸುವುದು ಮತ್ತು ಅವರು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಉನ್ನತೀಕರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜನಾರ್ದನ ಹೆಚ್ ಎಂ ಸೇರಿದಂತೆ ಲೋಕೋಪಯೋಗಿ ಇಲಾಖೆಯ 15 ಇಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿದೆ. 2026ರ ಮೇ 26ರಂದು ಇಲಾಖೆಯು ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಲೋಕಾಯುಕ್ತ ದಾಳಿಗೊಳಗಾದ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಉನ್ನತ ಹುದ್ದೆಗಳನ್ನು ನೀಡುವುದಿಲ್ಲ. ಬದಲಿಗೆ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಅಥವಾ ಭ್ರಷ್ಟಾಚಾರ ಸಾಬೀತಾದರೆ ಅವರನ್ನು ಸೇವೆಯಿಂದ ಅಮಾನತು (Suspension) ಮಾಡಲಾಗುತ್ತದೆ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜನಾರ್ದನ ಅವರ ಪ್ರಕರಣದಲ್ಲಿ ಅವರು ದಾಳಿಗೆ ಒಳಗಾಗಿದ್ದ ಹುದ್ದೆಯನ್ನೇ ಉನ್ನತೀಕರಿಸಲಾಗಿದೆ. ಈ ರೀತಿ ಉನ್ನತೀಕರಿಸಿದ ಹುದ್ದೆಗೆ ಜನಾರ್ದನ ಅವರನ್ನೇ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘವು ಬರಲಿದೆ. ಈ ಸಂಘದ ಅಡಿಯಲ್ಲಿ ರಾಜ್ಯದಾದ್ಯಂತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘದಲ್ಲಿ ಅಧೀಕ್ಷಕ ಇಂಜಿನಿಯರ್ ಹುದ್ದೆಯಲ್ಲಿ ಜನಾರ್ದನ ಅವರು ಕಾರ್ಯನಿರ್ವಹಿಸುತ್ತಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಹಲವು ದೂರುಗಳು ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಸಲ್ಲಿಕೆಯಾಗಿದ್ದವು. ಈ ದೂರುಗಳ ಆಧರಿಸಿ ಲೋಕಾಯುಕ್ತ ಪೊಲೀಸರು 2026ರ ಫೆ.12ರಂದು ದಾಳಿ ನಡೆಸಿದ್ದರು.
ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಈ ದಾಳಿಯ ವೇಳೆ, ಅವರ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.70 ಕೋಟಿ ರೂಪಾಯಿ ನಗದು ಪತ್ತೆ ಹಚ್ಚಿದ್ದರು.
ಆರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ
ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡಗಳು ಬೆಂಗಳೂರು ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದವು.
ಸ್ನೇಹಿತನ ಪ್ಲಾಟ್‌ನಲ್ಲಿ ಹಣದ ರಾಶಿ
ಲೋಕಾಯುಕ್ತ ಅಧಿಕಾರಿಗಳು ಜನಾರ್ಧನ್ ಅವರಿಗೆ ಸೇರಿದ ಸ್ಥಳಗಳ ಜೊತೆಗೆ ಅವರ ಆಪ್ತ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರಿಗೆ ಸೇರಿದ ಪ್ಲಾಟ್ ಮೇಲೆಯೂ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಬಚ್ಚಿಡಲಾಗಿದ್ದ ಬರೋಬ್ಬರಿ 1 ಕೋಟಿ 70 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಈ ಹಣವು ಅಕ್ರಮವಾಗಿ ಗಳಿಸಿರುವುದಾಗಿದ್ದು, ಪತ್ತೆಯಾಗುವ ಭೀತಿಯಿಂದ ಸ್ನೇಹಿತನ ಮನೆಯಲ್ಲಿ ಇರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು.
ಪತ್ತೆಯಾಗಿದ್ದ ನಗದು ಹಣವನ್ನು ವಶಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ನೋಟು ಎಣಿಸುವ ಯಂತ್ರಗಳ ಮೂಲಕ ನಿಖರವಾದ ಮೊತ್ತದ ಲೆಕ್ಕಾಚಾರ ಮಾಡಿದ್ದರು. ಇದರೊಂದಿಗೆ ಜನಾರ್ಧನ್ ಅವರ ನಿವಾಸದಲ್ಲಿ ಪ್ರಮುಖ ಆಸ್ತಿ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಚಿನ್ನಾಭರಣ ಮತ್ತು ಐಷಾರಾಮಿ ಕಾರುಗಳ ಬಗ್ಗೆಯೂ ತನಿಖೆ ನಡೆಸಿದ್ದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಜನಾರ್ಧನ್, ಹಲವು ಯೋಜನೆಗಳ ನಿರ್ವಹಣೆಯ ವೇಳೆ ಅಕ್ರಮ ಎಸಗಿರುವ ಸಾಧ್ಯತೆ ಎಂದು ಲೋಕಾಯುಕ್ತ ಪೊಲೀಸರು ಕಡತಗಳನ್ನು ಪರಿಶೀಲಿಸಿದ್ದರು.
ಮೂರು ವರ್ಷಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದ ಒಬ್ಬೇ ಒಬ್ಬ ಅಧಿಕಾರಿಗೂ ಶಿಕ್ಷೆ ಆಗಿರಲಿಲ್ಲ. ಈ ಕುರಿತು ದಿ ಫೈಲ್ 2025ರ ಆಗಸ್ಟ್ 13ರಂದು ವರದಿ ಪ್ರಕಟಿಸಿತ್ತು.
ಮೂರು ವರ್ಷಗಳಲ್ಲಿ 222 ಲೋಕಾಯುಕ್ತ ದಾಳಿ; ಒಬ್ಬರೇ ಒಬ್ಬ ಅಧಿಕಾರಿಗೂ ಶಿಕ್ಷೆ ಇಲ್ಲ
15 ಮಂದಿ ಇಂಜಿನಿಯರ್‍ಗಳ ವರ್ಗಾವಣೆ
ಮಾಲತೇಶ್ ಆರ್ ಅವರನ್ನು ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ. ಬಿ ವೈ ಬಂಡಿವಡ್ಡರ್ ಅವರನ್ನು ವಾಲ್ಮಿಯ ಮುಖ್ಯ ಇಂಜಿನಿಯರ್, ಸುಭಾಷ್ ಎಲ್ ಲಾಲಪ್ಪ ಅವರನ್ನು ಪಿಡಬ್ಲ್ಯೂಡಿಯ ಸಂಪರ್ಕ ಕಟ್ಟಡಗಳು ಈಶಾನ್ಯ ವಿಭಾಗಕ್ಕೆ ಅಭಿಮನ್ಯು ಕೆ ಎಸ್ ಅವರನ್ನು ಕೃಷ್ಣಭಾಗ್ಯ ಜಲನಿಗಮದ ಮುಖ್ಯ ಇಂಜಿನಿಯರ್ ಹುದ್ದೆಗೆ, ಅನಿಲ್ ರಾಜ್ ಜಿ ಎನ್ ಅವರನ್ನು ಕೃಷ್ಣಾ ಕಾಡಾದ ಭೀಮರಾಯನಗುಡಿ ಆಡಳಿತಾಧಿಕಾರಿ, ಶರ್ಮಾ ಎಲ್ ಸುರೇಶ್ ಅವರನ್ನು ಕಾಡಾ ಕಲ್ಬುರ್ಗಿ ಆಡಳಿತಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಗಣೇಶ್ ಎಸ್ ಅವರನ್ನು ಪಿಡಬ್ಲ್ಯೂಡಿ ಸಂಪರ್ಕ ಕಟ್ಟಡಗಳು ಕೇಂದ್ರ ವಿಭಾಗದ ಮುಖ್ಯ ಇಂಜಿನಿಯರ್ ಹುದ್ದೆಗೆ, ಮನೋಜ್ ಕುಮಾರ್ ಗಡಬಳ್ಳಿ ಅವರನ್ನು ಮುನಿರಾಬಾದ್‌ನಲ್ಲಿನ ಮುಖ್ಯ ಇಂಜಿನಿಯರ್ ಹುದ್ದೆಗೆ, ಸತೀಶ್ ಕುಮಾರ್ ಎಸ್ ಮತ್ತು ಲಲಿತಾ ಬಿ ಅವರನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್, ಸುವರ್ಣ ಮೋಹನ್ ರಾವ್ ದೊಡ್ಡಮನಿ ಅವರನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಇಂಜಿನಿಯರ್ ಹುದ್ದೆಗೆ, ಮೋಹನ್ ಕುಮಾರ್ ಸಿ ಆರ್ ಅವರನ್ನು ರಾಜೀವ್ ಗಾಂಧಿ ವಸತಿ ನಿಗಮದ ಮುಖ್ಯ ಇಂಜಿನಿಯರ್ ಹುದ್ದೆಗೆ, ಕೇಶವ್ ಪ್ರಸಾದ್ ಬಿ ಎನ್ ಅವರನ್ನು ಸರ್ಕಾರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ.

ರಾಜೇಶ್ ಎಂಬ ಆರ್ ಅವರನ್ನು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ ಪಟ್ಟಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.




