Saturday | July 18, 2026 |

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಘೋಷಿಸಿದ್ದರೂ 2023 ರಿಂದ 2025 ರವರೆಗೆ ಒಂದೇ ಒಂದು ಉತ್ಪಾದನಾ ಘಟಕ, ವಶಪಡಿಸಿಕೊಂಡ ದಾಸ್ತಾನು, ತಡೆಹಿಡಿಯಲಾದ  ಲೈಸನ್ಸ್‌   ಕುರಿತಾದ ಯಾವುದೆ ಮಾಹಿತಿಯೂ ಮೈಸೂರು ಮಹಾನಗರ ಪಾಲಿಕೆಯಲ್ಲಿ  ಲಭ್ಯವಿಲ್ಲ.

ಮೈಸೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪಾದನೆ, ಸಂಗ್ರಹಣೆ, ವಿತರಣೆ, ಬಳಕೆ,  ಮಾರಾಟ, ದಾಸ್ತಾನು, ಉತ್ಪಾದನೆ ಮಾಡುವವರ ವಿರುದ್ಧ ಬೈಲಾದಂತೆ ಕ್ರಮಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬ ಕುರಿತುದ ದಿ ಫೈಲ್‌  ಆರ್‍‌ಟಿಐ ಅಡಿಯಲ್ಲಿ  ಮಾಹಿತಿ ಕೋರಿತ್ತು. ಇದಕ್ಕೆ ಉತ್ತರ ನೀಡಿರುವ ಮೈಸೂರು ಮಹಾನಗರಪಾಲಿಕೆಯು ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಉತ್ತರಿಸಿದೆ.

ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಈಚೆಗಷ್ಟೇ ಮೈಸೂರು ಮಹಾನಗರಪಾಲಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಸ್ಥಿತಿಗತಿ ಕುರಿತು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತೂ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಮೈಸೂರು ಮಹಾನಗರಪಾಲಿಕೆಯು ನೀಡಿರುವ ಈ ಮಾಹಿತಿಯು ಮುನ್ನೆಲೆಗೆ ಬಂದಿದೆ.

ಮೈಸೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿನ ವಾಸ್ತವ ಸ್ಥಿತಿ ಮಾತ್ರ ತೀರಾ ಭಿನ್ನವಾಗಿದೆ. ಪಾಲಿಕೆಯ ವ್ಯವಸ್ಥಿತ ನಿಷ್ಕ್ರಿಯತೆ, ಆಡಳಿತಾತ್ಮಕ ವೈಫಲ್ಯ ಮತ್ತು ಶಾಸನಬದ್ಧ ಹೊಣೆಗಾರಿಕೆಯ ಸಮರ್ಥ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂಬುದು ಮಾಹಿತಿ ಹಕ್ಕಿನ ಅಡಿಯಲ್ಲಿ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

2023ರಿಂದ 2025 ರವರೆಗೆ ಒಂದೇ ಒಂದು ಉತ್ಪಾದನಾ ಘಟಕ, ವಶಪಡಿಸಿಕೊಂಡ ದಾಸ್ತಾನು ಗೋಡೌನ್‌, ಮಾರಾಟಗಾರರ ರದ್ದುಗೊಳಿಸಿದ ಲೈಸನ್ಸ್‌, ತಡೆಹಿಡಿಯಲಾದ ಪರವಾನಗಿ ಪ್ರಕರಣಗಳ ಮಾಹಿತಿಯೇ ಇಲ್ಲ ಎಂದು ಉತ್ತರಿಸಿದೆ. ಮೈಸೂರು ಮಹಾನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ರಾಜಾರೋಷವಾಗಿ ಜನರ ಬಳಕೆಯಲ್ಲಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ, ಪರಿಸರಕ್ಕೆ ಆಗುತ್ತಿರುವ ಹಾನಿ ತಡೆಗಟ್ಟುವ ಸಂಬಂಧ ಶಾಸನಬದ್ಧ ಹೊಣೆಗಾರಿಕೆಯನ್ನೂ ನಿಭಾಯಿಸಿಲ್ಲ.

ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ವಾರ್ಡುಗಳ 11 ವಲಯಗಳ ಪೈಕಿ ಕೇವಲ 04 ವಲಯಗಳು ಮಾತ್ರ ಉತ್ತರಿಸಿವೆ. ಈ 04 ವಲಯಗಳ ಪ್ರತಿಕ್ರಿಯೆಯಲ್ಲೂ 02 ವಲಯಗಳು ಸಂಬಂಧಪಡದ ವಿಷಯಗಳ ಕುರಿತು ಮಾಹಿತಿ ನೀಡಿ ನುಣುಚಿಕೊಂಡಿವೆ. 2023ರಿಂದ 2025 ರವರೆಗೆ ವಲಯ 02 ಮತ್ತು 03 ರಲ್ಲಿ ಒಟ್ಟಾರೆ ಕೇವಲ 4,99,400/- ರೂ ದಂಡ ಮಾತ್ರ ಸಂಗ್ರಹಿಸಿದೆ ಎಂದು ಮಾಹಿತಿಯಲ್ಲಿ ಒದಗಿಸಿದೆ.

 

 

 

 

 

 

 

 

 

ವಲಯ -02 ಏಕಬಳಕೆ ಪ್ಲಾಸ್ಟಿಕ್‌ ದಂಡದ ಸಂಬಂಧ ಕೇವಲ ದಿನಾಂಕ ಮತ್ತು 4,03,200 ರು ದಂಡ ಸಂಗ್ರಹಿಸಿದೆ ಎಂದು ಮಾಹಿತಿ ಒದಗಿಸಿದೆ. ವಲಯ ಕಛೇರಿ 03 ರಲ್ಲಿ ಕೇವಲ 96,200/- ಮಾತ್ರವೇ ವಸೂಲಾಗಿದೆ ಎಂದು ಮಾಹಿತಿ ನೀಡಿದೆ. ಈ ವಲಯದಲ್ಲಿಯೂ ಸಹ ಯಾವುದೇ ಗೋಡೌನ್‌ ಸೀಜ್‌ ಅಥವಾ ಅಂಗಡಿ ವ್ಯಾಪಾರಿಗಳ ಲೈಸನ್ಸ್‌ ರದ್ದು ಪಡಿಸಿಲ್ಲ ಎಂಬ ಮಾಹಿತಿ ನೀಡಿದೆ.

 

 

 

ಆದರೆ ಈ ನಿಯಮ ಉಲ್ಲಂಘಿಸಿದವರ ಹೆಸರು, ಅಂಗಡಿ, ದಾಸ್ತಾನು, ಗೋಡೌನ್‌ಗಳ ಮಾಹಿತಿಯಾಗಲಿ, ಉದ್ದಿಮೆ ರಹದಾರಿಯ ತಾತ್ಕಾಲಿಕ ರದ್ದು\ಅಮಾನತುಗೊಳಿಸಿ ಹೊರಡಿಸಿರುವ ಆದೇಶದ ಪ್ರತಿಯನ್ನು ಒದಗಿಸಿಲ್ಲ.

 

 

 

ವಲಯ ಕಛೇರಿ (4) ವ್ಯಾಪ್ತಿಯಲ್ಲಿ ಒಟ್ಟು 06 ವಾರ್ಡುಗಳಿವೆ. 2023-2025 ರ ಅವಧಿಗೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಪ್ಲಾಸಿಕ್‌ ಗೋಡೌನ್‌ ಕಂಡುಬಂದಿಲ್ಲ. ಕಸ ಬಿಸಾಡಿದ, ಕಟ್ಟಡ ತ್ಯಾಜ್ಯ ಇತರೆ ಸಂಬಂಧವೇ ಇಲ್ಲದ ವಿಷಯಕ್ಕೆ ದಂಡ ವಿಧಿಸಲಾಗಿದೆ ಎಂದು ಮಾಹಿತಿ ಒದಗಿಸಿದೆ.

 

 

ವಲಯ ಕಛೇರಿ (05) ರ ಬಸವನಗುಡಿ ವೃತ್ತ, ಹೆಬ್ಬಾಳ ಕಾರ್ಯಾಲಯವು ಪ್ಲಾಸ್ಟಿಕ್‌ ಬ್ಯಾನ್‌ ವಿಷಯದ ಬದಲಾಗಿ 60-40 ಕನ್ನಡ ಇಂಗ್ಲೀಷ್‌ ನಾಮಫಲಕ ನಿಯಮದ ತಪಾಸಣೆಯ ವಿವರಗಳನ್ನು ನೀಡಿ ದಾರಿ ತಪ್ಪಿಸಿರುವುದು ಕಂಡು ಬಂದಿದೆ. ಇನ್ನುಳಿದ 07 ವಲಯಗಳು ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿದ ಯಾವ ಮಾಹಿತಿಯನ್ನೂ ನೀಡಿಲ್ಲ.

 

 

ಕಾಗದದ ಹುಲಿಯಾದ ಕಠಿಣ ಉಪಕಾನೂನುಗಳು- ನಿಯಮಗಳಿದ್ದರೂ ಶೂನ್ಯ ಜಾರಿ

ಮಾಹಿತಿ ಹಕ್ಕು ಕಾಯ್ದೆ (RTI), 2005 ರ ಅಡಿಯಲ್ಲಿ ಲಭ್ಯವಾಗಿರುವ ದಾಖಲೆಗಳು ಹಾಗೂ ಪಾಲಿಕೆಯ ಉಪಕಾನೂನುಗಳ (Bylaws) ಅಧಿಕೃತ ಪ್ರತಿಗಳನ್ನು ಪರಿಶೀಲಿಸಿದಾಗ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಆರ್ಥಿಕ ದಂಡ ವಿಧಿಸುವ ಎಲ್ಲಾ ಅಧಿಕಾರವಿದ್ದರೂ ಸಹ, ಮೈಸೂರು ಮಹಾನಗರ ಪಾಲಿಕೆಯು ಈ ನಿಷೇಧವನ್ನು ಜಾರಿಗೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

2022ರ ಡಿಸೆಂಬರ್‍‌ 2ರಂದು ಕೌನ್ಸಿನಲ್‌ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ (ದಿನಾಂಕ 08.12.2022 ನಡವಳಿ ಸಂಖ್ಯೆ 4/29) ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸುವವರ ವಿರುದ್ಧ ಮೈಸೂರು ಮಹಾನಗರ ಪಾಲಿಕೆಯು ಅತ್ಯಂತ ಕಠಿಣವಾದ ನಿಯಮಗಳನ್ನು ರೂಪಿಸಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ರ ಸೆಕ್ಷನ್ 431 ಮತ್ತು 431-A ರ ಅಡಿಯಲ್ಲಿ (ಅಧಿಸೂಚನೆ ಸಂಖ್ಯೆ: ಆಪಜಿ 17 ಐಪಿಸಿ 2012, ಬೆಂಗಳೂರು ದಿನಾಂಕ: 11-03-2016 ಮತ್ತು ತಿದ್ದುಪಡಿ ಕಾಯ್ದೆ ಸಂಖ್ಯೆ: 55/2013 ರ ಪ್ರಕಾರ), ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಮತ್ತು ಕ್ಲಿಂಗ್ ಫಿಲ್ಮ್‌ಗಳ ಬಳಕೆಗೆ ಭಾರಿ ಪ್ರಮಾಣದ ದಂಡವನ್ನು ನಿಗದಿಪಡಿಸಲಾಗಿತ್ತು.

 

 

ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೌನ್ಸಿಲ್ ದಂಡವನ್ನು ವಿಧಿಸಿತ್ತು.

 

 

ಪ್ಲಾಸ್ಟಿಕ್ ದಂಧೆಯನ್ನು ಹತ್ತಿಕ್ಕಲು ಕಾನೂನುಬದ್ಧವಾಗಿ ಇಷ್ಟೊಂದು ಭಾರಿ ಮೊತ್ತದ ದಂಡ ವಿಧಿಸಲು ಕಾನೂನು ರೂಪಿಸಿದ್ದರೂ ಸಹ ಜನವರಿ 2023 ರಿಂದ ನವೆಂಬರ್ 2025 ರವರೆಗಿನ ಜಾರಿ ದತ್ತಾಂಶವನ್ನು ಕೋರಿ ಸಲ್ಲಿಕೆಯಾಗಿದ್ದ ಆರ್‌ಟಿಐ ಅರ್ಜಿಯು ಪಾಲಿಕೆಯ ಒಳಗಿನ ಆಡಳಿತಾತ್ಮಕ ನಿಷ್ಕ್ರಿಯತೆ ಮತ್ತು ಬೇಜವಾಬ್ದಾರಿತನವನ್ನು ಅನಾವರಣಗೊಳಿಸಿದೆ.

ಮಾಹಿತಿ ಮುಚ್ಚಿಡಲಾಗುತ್ತಿದೆಯೇ?

ಮೈಸೂರಿನ ಬೀದಿಗಳಲ್ಲಿ ಈ ಕಾನೂನುಗಳು ಎಷ್ಟು ಕಟ್ಟುನಿಟ್ಟಾಗಿ ಜಾರಿಯಾಗುತ್ತಿವೆ ಎಂಬುದನ್ನು ಪರಿಶೀಲಿಸಲು 2025ರ ನವೆಂಬರ್‍‌ ಮೈಸೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವಿವರವಾದ ಆರ್‌ಟಿಐ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ—ನಡೆಸಲಾದ ದಾಳಿಗಳ ಪಟ್ಟಿ (ದಿನಾಂಕ, ವಾರ್ಡ್ ಮತ್ತು ತಂಡಗಳು), ಸೀಜ್ ಮಾಡಲಾದ ಪ್ಲಾಸ್ಟಿಕ್ ಗೋಡೌನ್‌ಗಳ ವಿವರ ಹಾಗೂ ದಂಡನೆಗೆ ಒಳಗಾದ ಅಥವಾ ಪರವಾನಗಿ ರದ್ದಾದ ವರ್ತಕರ ನಿಖರ ಮಾಹಿತಿ ಕೇಳಲಾಗಿತ್ತು.

 

 

ಉನ್ನತ ಮಟ್ಟದಲ್ಲಿ ಜವಾಬ್ದಾರಿಯ ಕೊರತೆ

ಇದಕ್ಕೆ 2026ರ ಮೇ 4ರಂದು ನಡೆದ ಮಾಹಿತಿ ಹಕ್ಕಿನ ಅರ್ಜಿಯ ಪ್ರಥಮ ಮೇಲ್ಮನವಿ ವಿಚಾರಣೆಯ ವೇಳೆ ಪಾಲಿಕೆಯ ಸಾಂಸ್ಥಿಕ ನಿರ್ಲಕ್ಷ್ಯ ಪರಮಾವಧಿ ಕಂಡುಬಂದಿದೆ. ಅಧಿಕೃತ ಆದೇಶ ಪತ್ರದ ಪ್ರಕಾರ ವಿಚಾರಣೆಗೆ ಮೇಲ್ಮನವಿದಾರರು ಗೈರುಹಾಜರಾಗಿದ್ದರು.

 

 

ಆದರೆ ನೋಟಿಸ್ ನೀಡಲಾಗಿದ್ದ ಹಿನ್ನೆಲೆಯಲ್ಲಿ ವಲಯ ಕಚೇರಿ 1 ರಿಂದ 9 ರವರೆಗಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು/ಪರಿಸರ ಅಭಿಯಂತರರು ಹಾಜರಾಗಿ ಆದೇಶ ಶೀಟ್‌ಗೆ ಸಹಿ ಹಾಕಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತಹ ಮಾಹಿತಿಯನ್ನು ಅರ್ಜಿದಾರರಿಗೆ ಈ ಕೂಡಲೇ ನೀಡುವಂತೆ ತಿಳಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ ಇದುವರೆಗೂ ಉಳಿದ 07 ವಲಯಗಳಿಂದ ಅರ್ಜಿ ಸಲ್ಲಿಸಿ ಅರ್ಧ ವರ್ಷ ಕಳೆದರೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಮುಳುಗುತ್ತಿರುವ ಸಾಂಸ್ಕೃತಿಕ ನಗರಿ

ವಿವಿಧ ವಲಯಗಳು ನೀಡಿದ ಅಪೂರ್ಣ ದಾಖಲೆಗಳು ಮೈಸೂರಿನ ದುಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ರಾಚುತ್ತಿವೆ. ಮೈಸೂರಿನ ಪರಿಸರ ಮಾತ್ರ ನಿಷೇಧಿತ ಪ್ಲಾಸ್ಟಿಕ್‌ನಿಂದಾಗಿ ಉಸಿರುಗಟ್ಟುತ್ತಿದೆ ಎನ್ನುತ್ತಾರೆ ನಾಗರೀಕರೊಬ್ಬರು.

ಮಾಹಿತಿ ಕೋರಿದ್ದ ಅವಧಿಯಲ್ಲಿ ನಗರದ ಪ್ರಮುಖ ವಲಯಗಳಲ್ಲಿ ಒಂದೇ ಒಂದು ದೊಡ್ಡ ಪ್ಲಾಸ್ಟಿಕ್ ಗೋಡೌನ್ ಅನ್ನು ವಶಪಡಿಸಿಕೊಳ್ಳದಿರುವುದು ಅಥವಾ ಉತ್ಪಾದಕರ ವಾಣಿಜ್ಯ ಪರವಾನಗಿಯನ್ನು ರದ್ದುಗೊಳಿಸಿಲ್ಲ ಎಂಬ ಮಾಹಿತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಸಗಟು ಮಾರುಕಟ್ಟೆಗಳಿಂದ ಏಕಬಳಕೆ ಪ್ಲಾಸ್ಟಿಕ್ ಪವಾಡಸದೃಶವಾಗಿ ಮಾಯವಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

Hot this week

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...
Please Scan to make Your Contribution

Topics

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

Related Articles

Popular Categories

error: Content is protected !!