Monday | June 8, 2026 |

ಈಗಲ್‌ಟನ್‌ ರೆಸಾರ್ಟ್‌ನಿಂದ ಸರ್ಕಾರಿ ಜಮೀನು ಒತ್ತುವರಿ; 29 ವರ್ಷಗಳಾದರೂ ಪ್ರಕರಣ ಇತ್ಯರ್ಥವಾಗಿಲ್ಲ, 982 ಕೋಟಿಯೂ ವಸೂಲಾಗಿಲ್ಲ

ಬೆಂಗಳೂರು; ರಾಮನಗರ ತಾಲೂಕು ಬಿಡದಿ ಹೋಬಳಿ ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ, ಬಾನಂದೂರು ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಈಗಲ್‌ ಟನ್‌ ರೆಸಾರ್ಟ್‌ನ   ಚಾಮುಂಡೇಶ್ವರಿ ಬಿಲ್ಡ್‌ ಟೆಕ್ ಪ್ರೈ ಲಿಮಿಟೆಡ್ ಹೊಂದಿರುವ ಜಮೀನಿನ ವಿವಾದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆಯು 2025ರ ಏಪ್ರಿಲ್‌ 17ರಿಂದ ಇದುವರೆಗೂ ವಿಚಾರಣೆ ದಿನಾಂಕವೇ ನಿಗದಿಯಾಗಿಲ್ಲ.

ಸರ್ಕಾರಿ ಭೂಮಿ ಒತ್ತುವರಿ, ಒತ್ತುವರಿ ತೆರವುಗೊಳಿಸುವುದು, ತೆರವುಗೊಳಿಸಲಾದ ಭೂಮಿಯ ಸಂರಕ್ಷಣೆ, ಸರ್ಕಾರಿ ಭೂಮಿ ಒತ್ತುವರಿಗಾಗಿ ದಂಡವನ್ನು ವಿಧಿಸದೇ ಇರುವುದು, ಸರ್ಕಾರಿ ಭೂಮಿಯ ವಿವಾದಿತ ಪ್ರಕರಣಗಳ ವಿಲೇವಾರಿ ಕುರಿತು ಸಿಎಜಿಯು 2018ರಲ್ಲಿ ನೀಡಿದ್ದ  ವರದಿ ಸಂಬಂಧ ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ.

ಬಿಡದಿ ಟೌನ್‌ಶಿಪ್‌ ನಿರ್ಮಾಣಕ್ಕೆ  ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಧ್ಯೆ ನಡೆದಿರುವ ಆರೋಪ ಪ್ರತ್ಯಾರೋಪಗಳ ನಡುವೆ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಪ್ರೈ ಲಿಮಿಟೆಡ್‌ನ ವಿವಾದಿತ ಜಮೀನು ಮತ್ತು ಈ ಜಮೀನಿಗೆ ನಿಗದಿಪಡಿಸಿದ್ದ ಮಾರುಕಟ್ಟೆ ಬೆಲೆ ಕುರಿತು ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆ ನಡುವೆಯೇ ಇದೇ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಪ್ರೈ ಲಿ ಪ್ರಕರಣದ ಕುರಿತಾಗಿ ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಸಮಗ್ರ ಟಿಪ್ಪಣಿಯು ಮುನ್ನೆಲೆಗೆ ಬಂದಿದೆ.

2026ರ ಮೇ 26ರಂದು ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚಾಮುಂಡೇಶ್ವರಿ ಬಿಲ್ಡ್‌ ಟೆಕ್ ಪ್ರೈ ಲಿ ಜಮೀನು ಕುರಿತಾದ ವಿವಾದದ ಸದ್ಯದ ಬೆಳವಣಿಗೆಯನ್ನು ಕಂದಾಯ ಇಲಾಖೆಯು ಸಮಿತಿಯೊಂದಿಗೆ ಹಂಚಿಕೊಂಡಿದೆ.

ಈ ಸಭೆಗೆ ಕಂದಾಯ ಇಲಾಖೆಯು ಮಂಡಿಸಿರುವ ಸಮಗ್ರ ವಿವರವಾದ ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಪ್ರೈ ಲಿಮಿಟೆಡ್‌  ಹೊಂದಿರುವ ಅಂದಾಜು 500  ಎಕರೆ  ಜಮೀನಿನಲ್ಲಿ 10 ಎಕರೆ 22 ಗುಂಟೆ ಸರ್ಕಾರಿ ಬಿ ಖರಾಬು ಜಮೀನು ಕೂಡ ಇದೆ. ಈ ಕುರಿತು ಉದ್ಭವವಾಗಿರುವ ವಿವಾದವು ಕಳೆದ 29 ವರ್ಷಗಳಿಂದಲೂ ಇತ್ಯರ್ಥವಾಗಿಲ್ಲ. 1997ರಿಂದಲೂ ಈ ಸಂಸ್ಥೆಗೆ ನೋಟೀಸ್‌ ನೀಡುತ್ತಲೇ ಬಂದಿದೆ. ಆದರೆ ಈ ಪ್ರಕರಣವಿನ್ನೂ ಇತ್ಯರ್ಥವಾಗಿಲ್ಲ.

ಈ ಪ್ರಕರಣದಲ್ಲಿ ಹಲವು ತೀರ್ಪುಗಳು ಪ್ರಕಟವಾಗಿದೆ. ಈ ತೀರ್ಪುಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿವೆ. 2025ರ ಏಪ್ರಿಲ್‌ 17ರಿಂದಲೂ ವಿಚಾರಣೆ ದಿನಾಂಕ ನಿಗದಿಯಾಗಿಲ್ಲ. ಹೀಗಾಗಿ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಮುಂದಿನ ವಿಚಾರಣೆ ದಿನಾಂಕವನ್ನು ಜರೂರಾಗಿ ನಿಗದಿಪಡಿಸಲು ಕಂದಾಯ ಇಲಾಖೆಯು ಮುಂದಾಗಿದೆ. ಈ ಸಂಬಂಧ 2026ರ ಫೆ.19ರಂದು ಸರ್ಕಾರಿ ವಕೀಲರು ರಾಜ್ಯದ ಅಡ್ವೋಕೇಟ್ ಜನರಲ್‌ ಅವರಿಗೆ ಪತ್ರ ಬರೆದಿರುವುದು ಸಭೆಗೆ ಮಂಡಿಸಿರುವ ಸಮಗ್ರ ಟಿಪ್ಪಣಿಯಿಂದ ಗೊತ್ತಾಗಿದೆ.

ಏನಿದು ಪ್ರಕರಣ?

ರಾಮನಗರ ತಾಲೂಕು ಬಿಡದಿ ಹೋಬಳಿ, ಶ್ಯಾನುಮಂಗಲ, ಬಿಲ್ಲ ಕೆಂಪನಹಳ್ಳಿ, ಬಾನಂದೂರು ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಪ್ರೈ ಲಿ., ಸುಮಾರು 500 ಎಕರೆ ಜಮೀನನ್ನು ಹೊಂದಿತ್ತು. ಈ ಜಮೀನುಗಳ ಮಧ್ಯೆ ಇದ್ದಂತಹ 10 ಎಕರೆ 22 ಗುಂಟೆ ಜಮೀನನ್ನು ಈ ಸಂಸ್ಥೆಯು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿತ್ತು. ಇದು ಬಿ ಖರಾಬು ಜಮೀನಾಗಿತ್ತು. ಹೀಗಾಗಿ ಇದನ್ನು ಒತ್ತುವರಿಯಿಂದ ತೆರವುಗೊಳಿಸಬೇಕು ಎಂದು 1997ರ ಫೆ.21ರಂದೇ ರಾಮನಗರ ತಾಲೂಕು ತಹಶೀಲ್ದಾರ್‍‌ ಅವರು ನೋಟೀಸ್‌ ಜಾರಿಗೊಳಿಸಿದ್ದರು.

 

 

ತಹಶೀಲ್ದಾರ್‍‌ ನೀಡಿದ್ದ ನೋಟೀಸ್‌ನ್ನು   ಈಗಲ್ ಟನ್‌ ಸಂಸ್ಥೆಯವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಮೇಲ್ಮನವಿ ಪ್ರಾಧಿಕಾರವು ಈ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇದಾದ ನಂತರ ಸಂಸ್ಥೆಯು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು (ರಿಟ್ ಪಿಟಿಷನ್‌ 29705/2000)  ದಾಖಲಿಸಿತ್ತು. ಈ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್‌, ಸಂಸ್ಥೆಯು ಸಲ್ಲಿಸಿದ್ದ  ಮನವಿಯನ್ನು ತಿರಸ್ಕರಿಸಿತ್ತು.

ಈ ಗ್ರಾಮಗಳ ವಿವಿಧ ಸರ್ವೆ  ನಂಬರ್‍‌ಗಳಲ್ಲಿ ಸಂಸ್ಥೆಯು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 79 ಎ ಮತ್ತು 79 ಬಿ ಯನ್ನು ಉಲ್ಲಂಘಿಸಿ ಜಮೀನು ಖರೀದಿಸಿತ್ತು. ಈ ಬಗ್ಗೆಯೂ ಪ್ರಕರಣವು ದಾಖಲಾಗಿತ್ತು. ಅಲ್ಲದೇ ಸಂಸ್ಥೆಗೆ ಮತ್ತೊಂದು ನೋಟೀಸ್‌ ಕೂಡ ಜಾರಿಗೊಳಿಸಿತ್ತು. ಈ ನೋಟೀಸ್‌ನ್ನೂ ಸಂಸ್ಥೆಯು ಹೈಕೋರ್ಟ್‌ನಲ್ಲಿ  (ರಿಟ್‌ ಅರ್ಜಿ ಸಂಖ್ಯೆ; 2493/2001) ಪ್ರಶ್ನಿಸಿತ್ತು. ಈ ಸಂಬಂಧ ಹೈಕೋರ್ಟ್‌ 2000ರ ಏಪ್ರಿಲ್‌ 2ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಈ ಸಂಸ್ಥೆಯನ್ನು ಭೂ ಕಬಳಿಕೆದಾರರು ಎಂದು ಪರಿಗಣಿಸಲಾಗಿತ್ತಲ್ಲದೇ ಸಂಸ್ಥೆಯ ಮನವಿಯನ್ನು ವಜಾಗೊಳಿಸಿತ್ತು.

ಉಚ್ಛ ನ್ಯಾಯಾಲಯವು ಹೊರಡಿಸಿದ್ದ ಈ ಆದೇಶವನ್ನೂ ಪ್ರಶ್ನಿಸಿದ್ದ  ಸಂಸ್ಥೆಯು ಹೈಕೋರ್ಟ್‌ನಲ್ಲಿ ಎರಡು ಮೇಲ್ಮನವಿ ಪ್ರಕರಣಗಳನ್ನು (ರಿಟ್ ಅಪೀಲು; 2887/2002, 2887/2002)  ದಾಖಲಿಸಿತ್ತು. ಈ ಎರಡೂ ಅರ್ಜಿಗಳನ್ನು ಆಲಿಸಿದ್ದ ಹೈಕೋರ್ಟ್‌, 2002ರ ಆಗಸ್ಟ್‌ 22ರಂದು ತಿರಸ್ಕರಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ್ದ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಶೇಷ  (ಎಸ್‌ಎಲ್‌ಪಿ- 18257/2002) ಅರ್ಜಿಗಳನ್ನು ಸಲ್ಲಿಸಿತ್ತು. ಈ ಅರ್ಜಿಗಳನ್ನು 022ರ ಸೆ.24ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.

 

 

ನಂತರ ಈ ಎಸ್‌ಎಲ್‌ಪಿಗಳನ್ನು ಸಿವಿಲ್‌ ಅಪೀಲ್‌ ಆಗಿ ಪರಿವರ್ತಿಸಿ ವಿಚಾರಣೆಗೆ ಅಂಗೀಕರಿಸಿತ್ತು. ಈ ಸಿವಿಲ್‌ ಅರ್ಜಿ (ಅಪೀಲು ನಂ 5181-5182/2003) ಪ್ರಕರಣದಲ್ಲಿ 2009ರ ಏಪ್ರಿಲ್‌ 16ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸಂಸ್ಥೆಯು ಅನಧಿಕೃತವಾಗಿ ಸ್ವಾಧೀನದಲ್ಲಿರುವ ಜಮೀನನ್ನು ಸರ್ವೇ ಮೂಲಕ ಗುರುತಿಸಬೇಕು. ನಂತರ ಸರ್ಕಾರಿ, ಕೆಐಎಡಿಬಿ ಜಮೀನುಗಳಿಗೆ ವಾಸ್ತವಿಕ ಮಾರುಕಟ್ಟೆ ಬೆಲೆ ನಿಗದಿಪಡಿಸಿ ಈ ಸಂಸ್ಥೆಯಿಂದ ವಸೂಲು ಮಾಡಲು ಪರಿಗಣಿಸಲು ಅರ್ಹ ಪ್ರಕರಣವೇ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

 

ಸರ್ವೊಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು 2010ರ ಜುಲೈ 3ರಂದು ಸರ್ವೇ ನಡೆಸಿತ್ತು. ಸರ್ವೇ ವರದಿ ಪ್ರಕಾರ ರಾಮನಗರ ತಾಲೂಕು, ಬಿಡದಿ ಹೋಬಳಿ, ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ, ಬಾನಂದೂರು ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಅವರು 116 ಎಕರೆ 23 ಗುಂಟೆ ಸರ್ಕಾರಿ ಜಮೀನು ಹಿಡುವಳಿಯಲ್ಲಿ 10 ಎಕರೆ 22 ಗುಂಟೆ ಬಿ ಖರಾಬು,  ಪರಿವರ್ತಿತ ಎ ಖರಾಬು ಜಮೀನನ್ನು 5 ಎಕರೆ 21 ಗುಂಟೆ ಸೇರಿದಂತೆ ಒಟ್ಟಾರೆ 132 ಎಕರೆ 26 ಗುಂಟೆ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿತ್ತು ಎಂದು ವರದಿಯಲ್ಲಿ ವಿವರಿಸಿತ್ತು.

ಈ ಬಗ್ಗೆ 2010ರ ಸೆ.4ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಈ ಪತ್ರ ಆಧರಿಸಿ ಅನಧಿಕೃತವಾಗಿ ಸ್ವಾಧೀನದಲ್ಲಿರುವ 71 ಎಕರೆ 16 ಗುಂಟೆ  ಜಮೀನಿಗೆ ವಾಸ್ತವಿಕ ಮಾರುಕಟ್ಟೆ ಬೆಲೆ ನಿಗದಿಪಡಿಸುವುದು ಸೇರಿದಂತೆ ಕೆಲವು ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್‌ 2011ರ ಮಾರ್ಚ್‌ 3ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಸರ್ವೋಚ್ಛ ನ್ಯಾಯಾಲಯವು ನೀಡಿದ್ದ ಮಧ್ಯಂತರ ಆದೇಶದಂತೆ ಕ್ರಮ ವಹಿಸುವ ಸಂಬಂಧ ಸರ್ಕಾರದ ಪ್ರಮಾಣ ಪತ್ರದಲ್ಲಿ ಒಟ್ಟು 132 ಎಕರೆ 26 ಗುಂಟೆ ಜಮೀನನ್ನು ಸಂಸ್ಥೆಯು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ತಿಳಿಸಿತ್ತು. ಆದರೂ ರಾಮನಗರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಯು 2011ರ ಜುಲೈ 7ರಂದು ಸಲ್ಲಿಸಿದ್ದ ವರದಿ ಪ್ರಕಾರ ಡಿಜಿಪಿಎಸ್ ಚೈನ್‌ ಸರ್ವೆ ವ್ಯತ್ಯಾಸ 6 ಎಕರೆ 3 ಗುಂಟೆ ಹೊರತುಪಡಿಸಿ 71 ಎಕರೆ 16 ಗುಂಟೆ ಸರ್ಕಾರಿ ಜಮೀನಿಗೆ ವಾಸ್ತವಿಕ ಮಾರುಕಟ್ಟೆ ದರ ವಿಧಿಸಿದ್ದರು.

 

 

ಉಳಿದ 28 ಎಕರೆ 33 ಗುಂಟೆ ಸರ್ಕಾರಿ  ಜಮೀನನ್ನು ಹಿಂಪಡೆಯಬಹುದು ಎಂದು ಅಭಿಪ್ರಾಯಿಸಿದ್ದರು. ಅಲ್ಲದೇ ಈ ಸಂಬಂಧ 2011ರ ಆಗಸ್ಟ್‌ 29ರಂದು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಈ ಮಧ್ಯೆ ಸಂಸ್ಥೆಯು 2011ರ ಜುಲೈ 4 ಮತ್ತು ಜುಲೈ 7ರಂದು ನಡೆಸಿದ್ದ ಸಭಾ ನಡವಳಿಯನ್ನು ಹಾಜರುಪಡಿಸಿತ್ತು. ಅದರ ಪ್ರಕಾರ 28 ಎಕರೆ 33 ಗುಂಟೆ ಜಮೀನನ್ನು ಸರ್ಕಾರಕ್ಕೆ  ಹಿಂದಿರುಗಿಸಲಾಗವುದು ಮತ್ತು ಉಳಿಕೆ ವಶದಲ್ಲಿರುವ ಜಮೀಣಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ಧರಿಸಿದ್ದ 3,74,87,500 ರು.ಗಳನ್ನು ಪಾವತಿಸಲು ಸಿದ್ಧವಿದೆ ಎಂದು ಸುಪ್ರೀಂ ಕೋರ್ಟ್‌ಗೆ 2011ರ ಜುಲೈ 12ರಂದು ಪ್ರಮಾಣ ಪತ್ರ ಸಲ್ಲಿಸಿತ್ತು.

ಈ ಸಂಸಥೆಯು 2011ರ ಜುಲೈ 12ರಂದು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್‌ ಕೂಡ ಪರಿಶೀಲಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರವು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು 2011 ಸೆ.6ರಂದು ಆದೇಶಿಸಿತ್ತು. 2012ರ ಫೆ.25ರಂದು ಹೊರಡಿಸಿದ್ದ ಆದೇಶದಂತೆ 71 ಎಕರೆ 16 ಗುಂಟೆ ಸರ್ಕಾರಿ ಜಮೀನಿಗೆ ಒಟ್ಟು 82,69,52,405 ರು ಶುಲ್ಕ ವಿಧಿಸಿತ್ತು. ಈ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು 2012ರ ಮಾರ್ಚ್‌ 14ರಂದು ಸಂಸ್ಥೆಗೆ ತಿಳಿವಳಿಕೆ ಪತ್ರವನ್ನೂ ಜಾರಿಗೊಳಿಸಿತ್ತು.

 

 

ಈ ಮಧ್ಯೆ ಸುಪ್ರೀಂ ಕೋರ್ಟ್‌ ಸಿವಿಲ್ ಅಪೀಲು (ಸಂಖ್ಯೆ 5181-5182/2003) ಪ್ರಕರಣದಲ್ಲಿ ಅಂತಿಮ ಆದೇಶ ನೀಡಿತ್ತು. ಈ ಆದೇಶದ ಪ್ರಕಾರ   28 ಎಕರೆ 33 ಗುಂಟೆ ವಿಸ್ತೀರ್ಣದ ಹೆಚ್ಚುವರಿ ಜಮೀನನ್ನು 2011ರ ಸೆ.6ರ ಆದೇಶದಂತೆ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಬೇಕು. ನಂತರ 77 ಎಕರೆ 19 ಗುಂಟೆ ಜಮೀನಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯು ಕಾನೂನು ರೀತಿ ಮಾರುಕಟ್ಟೆ ದರ ನಿಗದಿಪಡಿಸಬೇಕು. ಈ ರೀತಿ ದರ ನಿರ್ಧರಿಸುವಾಗ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ವರದಿ ಪಡೆಯಬೇಕು. ಅರ್ಜಿದಾರ ಸಂಸ್ಥೆಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿ ಹೇಳಿಕೆ ಪಡೆಯಬೇಕು. ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯು ನಿರ್ಧರಿಸುವ ಮೊತ್ತವನ್ನು ತಿಳಿಸಿದ ನಾಲ್ಕು ತಿಂಗಳೊಳಗಾಗಿ ಸಂಸ್ಥೆಯು ಹಣವನ್ನು ಪಾವತಿಸಬೇಕು ಎಂದು ಸೂಚಿಸಿತ್ತು.

 

ಒಂದೊಮ್ಮೆ ಈ ಮೊತ್ತವನ್ನು ಪಾವತಿಸಲು ಸಂಸ್ಥೆಯು ವಿಫಲವಾದಲ್ಲಿ ಈ ಜಮೀನನ್ನು ಸರ್ಕಾರಕ್ಕೆ ವಾಪಸ್‌ ಪಡೆಯಲು ರಾಜ್ಯ ಸರ್ಕಾರವು ಸ್ವತಂತ್ರ ಹೊಂದಿದೆ ಎಂದೂ ಹೇಳಿತ್ತು. ಇದರ ಪ್ರಕಾರ ಅಂದಿನ ಜಿಲ್ಲಾಧಿಕಾರಿಯು 77 ಎಕರೆ 19 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನಿಗೆ 980.04 ಕೋಟಿ ರುಪಾಯಿಗಳನ್ನು ನಿಗದಿಪಡಿಸಿ 2014ರ ಜೂನ್‌ 11ರಂದೇ ಸರ್ಕಾರಕ್ಕೆ  ವರದಿ ಸಲ್ಲಿಸಿದ್ದರು.

ನಂತರ ಸರ್ವೋಚ್ಛ ನ್ಯಾಯಾಲಯದ ಅಂತಿಮ ಆದೇಶದಂತೆ ಈ ಸಂಸ್ಥೆಯು ಹೆಚ್ಚುವರಿಯಾಗಿ ಹೊಂದಿದ್ದ  28 ಎಕರೆ 33 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಹಿಂಪಡೆದು ವರದಿ ಸಲ್ಲಿಸಲು 2015ರ ಸೆ.4ರಂದೇ ಸೂಚಿಸಿತ್ತು. ಇದರ ಪ್ರಕಾರ 28 ಎಕರೆ 33 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಒಂದೇ ಕಡೆ ಗುರುತಿಸಲಾಗಿತ್ತಲ್ಲದೇ 2015ರ ಅಕ್ಟೋಬರ್‍‌ 5ರಂದು ಸರ್ಕಾರದ ವಶಕ್ಕೆ ಪಡೆದಿತ್ತು.

 

 

ಬಾನಂದೂರು ಗ್ರಾಮದಲ್ಲಿ ಸರ್ವೆ ನಂಬರ್‍‌ 106ರಲ್ಲಿ 4 ಎಕರೆ, 109ರಲ್ಲಿ 9 ಎಕರೆ 4 ಗುಂಟೆ, 110ರಲ್ಲಿ 12 ಎಕರೆ 31 ಗುಂಟೆ, 111ರಲ್ಲಿ 2 ಎಕರೆ 15 ಗುಂಟೆ, 244ರಲ್ಲಿ 0-23 ಗುಂಟೆ ಜಮೀನು ಸೇರಿ ಒಟ್ಟಾರೆ 28 ಎಕರೆ 33 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿತ್ತು. ಈ ಮಧ್ಯೆ ಸರ್ವೋಚ್ಛ ನ್ಯಾಯಾಲಯದ ಅಂತಿಮ ಆದೇಶವನ್ನು ಪಾಲಿಸಿಲ್ಲ ಎಂದು ಸಂಸ್ಥೆಯು ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ( 371-372/2016) ದಾಖಲಿಸಿತ್ತು. ನಂತರ ಈ ಪ್ರಕರಣವು ಮುಕ್ತಾಯಗೊಂಡಿತ್ತು.

 

ಹಾಗೆಯೇ 2012ರ ಫೆ.25ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿದ್ದ ಪ್ರಕಾರ ರಾಮನಗರ ತಾಲೂಕು, ಬಿಲ್ಲ ಕೆಂಪನಹಳ್ಳಿ, ಬಾನಂದೂರು , ಶ್ಯಾನುಮಂಗಲ ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 19 ಗುಂಟೆ ಜಮೀನಿಗೆ ಒಟ್ಟು 982.07 ಕೋಟಿ ರು ಮೊತ್ತವನ್ನು ಪಾವತಿಸಿಕೊಂಡು ಕೆಲವೊಂದು ಷರತ್ತುಗೊಳಪಡಿಸಿ ಹಸ್ತಾಂತರಿಸಲು ಆದೇಶಿಸಿತ್ತು. ಈ ಸಂಬಂಧ 2016ರ ಸೆ.24ರಂದು ಹಿಂಬರಹವನ್ನೂ ನೀಡಲಾಗಿತ್ತು.

 

 

ಪುನಃ ಈ ಕಂಪನಿಯು ಸರ್ಕಾರದ ಹಿಂಬರವನ್ನು ಉಚ್ಚ ನ್ಯಾಯಾಲಯದಲ್ಲಿ  (ರಿಟ್‌ ಅರ್ಜಿ; 65494/2017) ಪ್ರಶ್ನಿಸಿತ್ತು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಉಚ್ಛ ನ್ಯಾಯಾಲಯವು 2017ರ ಫೆ.6ರಂದು ಆದೇಶಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಈ ಸಂಸ್ಥೆಯು 12,35,80,000 ರು.ಗಳನ್ನು 2017ರ ಫೆ.20ರಂದು ಸರ್ಕಾರಕ್ಕೆ ಪಾವತಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದೆ ಹಾಜರಾಗಿತ್ತು.  ಈ ಮಧ್ಯೆ ನ್ಯಾಯಾಲಯವು 2017ರ ಸೆ.4ರಂದು ವಿಚಾರಣೆ ನಡೆಸಿತ್ತಲ್ಲದೇ ರಾಜ್ಯ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿತ್ತು. ಮತ್ತು ಆಕ್ಷೇಪಣೆ ಸಲ್ಲಿಸುವವರೆಗೆ ಯಾವುದೇ ಕ್ರಮ ಜರುಗಿಸಬಾರದು ಎಂದು ಆದೇಶಿಸಿತ್ತು.

 

 

ಈ ಪ್ರಕರಣವು 2025ರ ಜನವರಿ 7, ಫೆ.4, 25, ಏಪ್ರಿಲ್‌ 17 ರಂದು ವಿಚಾರಣೆಗೆ ನಿಗದಿಯಾಗಿತ್ತು. ಈ ದಿನಾಂಕದ ನಂತರ ಇದುವರೆಗೂ ಈ ಪ್ರಕರಣದ ವಿಚಾರಣೆಗೆ ದಿನಾಂಕವೇ ನಿಗದಿಯಾಗಿಲ್ಲ. ಹೀಗಾಗಿ ಸರ್ಕಾರಿ ವಕೀಲರು ವಿಚಾರಣೆ ದಿನಾಂಕ ನಿಗದಿಪಡಿಸಬೇಕು ಎಂದು  2026ರ ಫೆ.19ರಂದು ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಗೆ ಪತ್ರ ಬರೆದಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸುದೀರ್ಘವಾಗಿ ವಿವರಿಸಿರುವುದು ತಿಳಿದು ಬಂದಿದೆ.

Hot this week

ಘನತ್ಯಾಜ್ಯ ವಿಲೇವಾರಿ; 39,437 ಕೋಟಿ ರು ಮೌಲ್ಯದ ಟೆಂಡರ್ ಪರಿಶೀಲನೆಗೆ ಕೇವಲ 7 ದಿನ ಗಡುವು, ಸಿದ್ದು ಅವಧಿಯಲ್ಲಿ ರಚಿಸಿದ್ದ ತಂಡಕ್ಕೆ ಕೊಕ್‌ ಕೊಟ್ಟು ಹೊಸ ತಂಡ ರಚಿಸಿದ್ದೇಕೆ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...

ಎಂಎಸ್‌ಐಎಲ್‌ನಲ್ಲಿ ಅಕ್ರಮ; ನಿವೃತ್ತ ಐಎಎಸ್‌ ಜಿ ಸಿ ಪ್ರಕಾಶ್‌ ಸೇರಿ 7 ಮಂದಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಮೈಸೂರು ಸೇಲ್ಸ್‌ ಇಂಟರ್ ನ್ಯಾ‍ಷನಲ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ವಿವಿಧ...
Please Scan to make Your Contribution

Topics

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...

ಎಂಎಸ್‌ಐಎಲ್‌ನಲ್ಲಿ ಅಕ್ರಮ; ನಿವೃತ್ತ ಐಎಎಸ್‌ ಜಿ ಸಿ ಪ್ರಕಾಶ್‌ ಸೇರಿ 7 ಮಂದಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಮೈಸೂರು ಸೇಲ್ಸ್‌ ಇಂಟರ್ ನ್ಯಾ‍ಷನಲ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ವಿವಿಧ...

ಮತದಾರರ ಪಟ್ಟಿ ಪರಿಷ್ಕರಣೆ; ಹಲವು ಜಿಲ್ಲೆಗಳಲ್ಲಿ ವರ್ಷವಾದರೂ ನೇಮಕವಾಗದ ಬಿಎಲ್‌ಒ, ಕಾಲಕಸವಾಯಿತೇ ಆಯೋಗದ ಪತ್ರ?

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ...

Related Articles

Popular Categories

error: Content is protected !!