ಬೆಂಗಳೂರು; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಭ್ರಷ್ಟಾಚಾರ ಮತ್ತು ಇತರೆ ಅಪರಾಧಗಳ ಆರೋಪ ಎದುರಿಸುತ್ತಿರುವ ಕೆಎಎಸ್ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳನ್ನು ಸಂಬಂಧಿತ ಪ್ರಾಧಿಕಾರಗಳು ರಕ್ಷಿಸುತ್ತಿವೆ. ಅಲ್ಲದೇ ಅವರಿಗೆ ಆಶ್ರಯವನ್ನೂ ನೀಡುತ್ತಿವೆ. ಸಂಬಂಧಿತ ಪ್ರಾಧಿಕಾರಗಳು ಪದೇ ಪದೇ ಕರ್ತವ್ಯ ಲೋಪ ಎಸಗುತ್ತಲೇ ಇದೆ. ಇಲಾಖೆಗಳ ಮುಖ್ಯಸ್ಥರು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡದ ಕಾರಣ ರಾಜ್ಯದಲ್ಲಿ ಆಡಳಿತ ದುರುಪಯೋಗಕ್ಕೂ ದಾರಿ ಮಾಡಿಕೊಡುತ್ತಿದೆ.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 17 ಎ ಅಡಿಯಲ್ಲಿ ವಿಚಾರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ನಿಗದಿತ ಅವಧಿಯಲ್ಲಿ ಪೂರ್ವಾನುಮತಿ ನೀಡುತ್ತಿಲ್ಲ. ಕಾಲಮಿತಿಯನ್ನೂ ಪಾಲಿಸುತ್ತಿಲ್ಲ. ಸರ್ಕಾರದ ಈ ಕಾರ್ಯವೈಖರಿ ಬಗ್ಗೆ ಲೋಕಾಯುಕ್ತ ಸಂಸ್ಥೆಯು ಮತ್ತೊಮ್ಮೆ ಖಾರವಾಗಿ ಪತ್ರವನ್ನು ಬರೆದಿದೆ. ಅಲ್ಲದೇ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೂ ಸಹ ಪತ್ರವನ್ನು ಬರೆದಿದೆ.
ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಬರೆದಿರುವ ಪತ್ರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬರೆದಿರುವ ಪತ್ರಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪೂರ್ವಾನುಮತಿ ನೀಡಲು ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತು ಗಮನಹರಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಳಿಸಿದ್ದ ಹಲವು ಪತ್ರ, ನೆನಪೋಲೆಗಳನ್ನು ಇಲಾಖೆಗಳ ಮುಖ್ಯಸ್ಥರು ಕಾಲಕಸವಾಗಿರಿಸಿಕೊಂಡಿದ್ದಾರೆ.
ನಗರಾಭಿವೃದ್ಧಿ, ಕಂದಾಯ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪೌರಾಡಳಿತ ಇಲಾಖೆಯಲ್ಲಿ ಅತೀ ಹೆಚ್ಚು ಪ್ರಕರಣಗಳಿವೆ. ಬಹುತೇಕ ಪ್ರಕರಣಗಳಲ್ಲಿ ಇಲಾಖೆಗಳ ಮುಖ್ಯಸ್ಥರು ಲೋಕಾಯುಕ್ತ ಪೊಲೀಸ್ ವಿಚಾರಣೆಗೆ ಪೂರ್ವಾನುಮತಿ ನೀಡುತ್ತಿಲ್ಲ ಎಂದು ಪತ್ರದಿಂದ ತಿಳಿದು ಬಂದಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಅವರು ರುಡೋಲ್ಫ್ ಪಿರೇರಾ ಅವರು 2026ರ ಮಾರ್ಚ್ 16ರಂದೇ ಪತ್ರ ಬರೆದಿದ್ದರು. ಈ ಪತ್ರವನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡತ ಮಂಡಿಸಲು ಸೂಚಿಸಿದ್ದರು. ಆದರೂ ಸಹ ಇಲಾಖೆಗಳ ಮುಖ್ಯಸ್ಥರು ಕಡತಗಳನ್ನು ಮಂಡಿಸಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಮೇ 19ರಂದು ಮತ್ತೊಂದು ಪತ್ರ ಬರೆದಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ದೇಶದಲ್ಲಿಯೇ ಕರ್ನಾಟಕವು 5ನೇ ಸ್ಥಾನದಲ್ಲಿದೆ ಎಂದು ಉಪ ಲೋಕಾಯುಕ್ತ ಬಿ ವೀರಪ್ಪ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯ ಪತ್ರವು ಮುನ್ನೆಲೆಗೆ ಬಂದಿದೆ.

ಲೋಕಾಯುಕ್ತದ ಪತ್ರದಲ್ಲೇನಿತ್ತು?
ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 17A ಅಡಿಯಲ್ಲಿ ತನಿಖೆ / ವಿಚಾರಣೆ / ಪರಿಶೀಲನೆ ನಡೆಸಲು ಪೂರ್ವಾನುಮತಿ ನೀಡುವ ಪ್ರಕ್ರಿಯೆಯಲ್ಲಿ ಕಾಲಮಿತಿಯನ್ನು ಪಾಲಿಸುತ್ತಿಲ್ಲ. ಕರ್ನಾಟಕ ಲೋಕಾಯುಕ್ತ ಪೊಲೀಸ್ ವತಿಯಿಂದ, ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 17(A) ಅಡಿಯಲ್ಲಿ ಪೂರ್ವಾನುಮತಿ ಕೋರಿ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಿಗೂ ಸಲ್ಲಿಸಲಾದ ಮಹತ್ವದ 22 ಪ್ರಸ್ತಾವನೆಗಳು ಬಾಕಿ ಇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯ ಗಮನ ಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

ಸೆಕ್ಷನ್ 17(A) ಪ್ರಕಾರ, ಸಾರ್ವಜನಿಕ ಸೇವಕನು ತನ್ನ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಸಂದರ್ಭದಲ್ಲಿ ಮಾಡಿದ ಶಿಫಾರಸುಗಳು ಅಥವಾ ತೆಗೆದುಕೊಂಡ ನಿರ್ಧಾರಗಳಿಗೆ ಸಂಬಂಧಿಸಿದ ಅಪರಾಧದ ಆರೋಪಗಳ ಕುರಿತು ಯಾವುದೇ ಪೊಲೀಸ್ ಅಧಿಕಾರಿ ಪೂರ್ವಾನುಮತಿ ಇಲ್ಲದೆ ತನಿಖೆ, ವಿಚಾರಣೆ ಅಥವಾ ಪರಿಶೀಲನೆ ನಡೆಸಬಾರದು ಎಂದು ನಿಬಂಧಿಸಲಾಗಿದೆ.
ಅಪರಾಧ ನಡೆದಿದೆ ಎಂದು ಆರೋಪಿಸಲಾದ ಸಮಯದಲ್ಲಿ ಕೇಂದ್ರ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿ ಉದ್ಯೋಗದಲ್ಲಿದ್ದ ಅಥವಾ ಹಿಂದೆ ಉದ್ಯೋಗದಲ್ಲಿದ್ದ ವ್ಯಕ್ತಿಯ ಪ್ರಕರಣದಲ್ಲಿ, ಆ ಸರ್ಕಾರದ ಅನುಮತಿ ಅಗತ್ಯವಾಗುತ್ತದೆ. ಅಪರಾಧ ನಡೆದಿದೆ ಎಂದು ಆರೋಪಿಸಲಾದ ಸಮಯದಲ್ಲಿ ರಾಜ್ಯ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿ ಉದ್ಯೋಗದಲ್ಲಿದ್ದ ಅಥವಾ ಹಿಂದೆ ಉದ್ಯೋಗದಲ್ಲಿದ್ದ ವ್ಯಕ್ತಿಯ ಪ್ರಕರಣದಲ್ಲಿ ಸರ್ಕಾರದ ಅನುಮತಿ ಅಗತ್ಯ ಎಂದು ವಿವರಿಸಿದೆ.

ಇತರೆ ಯಾವುದೇ ವ್ಯಕ್ತಿಯ ಪ್ರಕರಣದಲ್ಲಿ, ಅಪರಾಧ ನಡೆದಿದೆ ಎಂದು ಆರೋಪಿಸಲಾದ ಸಮಯದಲ್ಲಿ ಆತನನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ಹೊಂದಿರುವ ಪ್ರಾಧಿಕಾರದ ಅನುಮತಿ ಬೇಕಿದೆ.
22 ಪ್ರಸ್ತಾವನೆಗಳಿಗೆ ಸಿಕ್ಕಿಲ್ಲ ಪೂರ್ವಾನುಮತಿ
ಲೋಕಾಯುಕ್ತ ಸಂಸ್ಥೆಯು ಕಳುಹಿಸಿದ್ದ 22 ಪ್ರಸ್ತಾವನೆಗಳು ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 17(A) ರ ಉಪವಿಧಿ (b) ಮತ್ತು (c) ಅಡಿಯಲ್ಲಿ ಬರುತ್ತವೆ. 2022ರ ಫೆ.9, 2021ರ ಏಪ್ರಿಲ್ 23, 2025ರ ಆಗಸ್ಟ್ 26, 2025ರ ನವೆಂಬರ್ 28ರಂದು ಹಲವು ಬಾರಿ ಜ್ಞಾಪನ ಪತ್ರಗಳನ್ನು ಕಳಿಸಲಾಗಿದೆ. ಆದರೂ ಸಹ, ಸಂಬಂಧಿತ ಪ್ರಾಧಿಕಾರಗಳು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ತಡೆ ಕಾಯ್ದೆಯಡಿನ ಆರೋಪಗಳ ಕುರಿತು ತನಿಖೆ, ವಿಚಾರಣೆ ಅಥವಾ ಪರಿಶೀಲನೆ ನಡೆಸಲು ಅಗತ್ಯ ಅನುಮತಿ ನೀಡಲು ವಿಫಲವಾಗಿವೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಎಲ್ಲಾ 22 ಪ್ರಕರಣಗಳು 2020 ರಿಂದ 2025ರವರೆಗೆ ಸಂಬಂಧಿತ ಪ್ರಾಧಿಕಾರಗಳ ಬಳಿ ಅನುಮತಿ ನೀಡದೆ ಬಾಕಿ ಉಳಿದಿವೆ. ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 17(A) ರ ಅವಕಾಶದ ಪ್ರಕಾರ ಸಂಬಂಧಿತ ಪ್ರಾಧಿಕಾರವು ಈ ವಿಭಾಗದ ಅಡಿಯಲ್ಲಿ ತನ್ನ ತೀರ್ಮಾನವನ್ನು ಮೂರು ತಿಂಗಳೊಳಗೆ ತಿಳಿಸಬೇಕು. ಬರವಣಿಗೆಯಲ್ಲಿ ದಾಖಲಿಸಬೇಕಾದ ಕಾರಣಗಳ ಆಧಾರದ ಮೇಲೆ ಆ ಅವಧಿಯನ್ನು ಇನ್ನೂ ಒಂದು ತಿಂಗಳವರೆಗೆ ವಿಸ್ತರಿಸಬಹುದು.
ಭ್ರಷ್ಟರಿಗೆ ಆಶ್ರಯ-ರಕ್ಷಣೆ
ಸೆಕ್ಷನ್ 17(A) ರ ಅವಕಾಶದಲ್ಲಿ ಬಳಸಿರುವ “shall” ಎಂಬ ಪದವು ಕಡ್ಡಾಯ ಅರ್ಥವನ್ನು ಹೊಂದಿದೆ. ಮಾರ್ಗದರ್ಶಕ ಸ್ವರೂಪದಲ್ಲಿಲ್ಲ. ಸೆಕ್ಷನ್ 17(A) ರ ಕಡ್ಡಾಯ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಇದು ಸಂಬಂಧಿತ ಪ್ರಾಧಿಕಾರಗಳ ಸಾರ್ವಜನಿಕ ಕರ್ತವ್ಯ ನಿರ್ಲಕ್ಷ್ಯಕ್ಕೆ ಸಮಾನವಾಗಿದೆ. ದೀರ್ಘಕಾಲದಿಂದ ಸಂಬಂಧಿತ ಪ್ರಾಧಿಕಾರಗಳ ಮುಂದೆ ಬಾಕಿ ಉಳಿದಿರುವ ಪ್ರಸ್ತಾವನೆಗಳ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ಭ್ರಷ್ಟಾಚಾರ ಮತ್ತು ಇತರೆ ಅಪರಾಧಗಳ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಸಂಬಂಧಿತ ಪ್ರಾಧಿಕಾರಗಳು ರಕ್ಷಿಸುತ್ತಿವೆ ಮತ್ತು ಅವರಿಗೆ ಆಶ್ರಯ ನೀಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಈ ಆಡಳಿತಾತ್ಮಕ ನಿಷ್ಕ್ರಿಯತೆಯು ತನಿಖೆ ಹಾಗೂ ನಂತರದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ನೇರವಾಗಿ ಅಡ್ಡಿಪಡಿಸುತ್ತಿದೆ. ಇದರಿಂದ ಕಾನೂನಿನ ಆಳ್ವಿಕೆ ದುರ್ಬಲಗೊಳ್ಳುತ್ತಿದೆ. ಇಂತಹ ನಿರ್ಧಾರಗಳಿಗೆ ಸಮಯ ಮಿತಿಯನ್ನು ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಒತ್ತಿಹೇಳಿದೆ.

ಸುಪ್ರೀಂ ಕೋರ್ಟ್ ಕೆಳಗಿನ ಮಹತ್ವದ ತೀರ್ಪುಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿಗೆ ಕಟ್ಟುನಿಟ್ಟಿನ ಕಾಲಮಿತಿಯನ್ನು ಕಡ್ಡಾಯಗೊಳಿಸಿದೆ ವಿನೀತ್ ನಾರಾಯಣ್ ವಿರುದ್ಧ ಭಾರತ ಸರ್ಕಾರ (1998) 1 SCC 226 ಪ್ರಕಾರ ಭ್ರಷ್ಟಾಚಾರ ವಿರೋಧಿ ಕ್ರಮಗಳು ವಿಫಲವಾಗದಂತೆ ಮಾಡಲು ಅನುಮತಿ ಸಂಬಂಧಿತ ತೀರ್ಮಾನಗಳನ್ನು ಸಮಂಜಸವಾದ ಅವಧಿಯೊಳಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

ಸುಬ್ರಮಣಿಯನ್ ಸ್ವಾಮಿ ವಿರುದ್ಧ ಮನಮೋಹನ್ ಸಿಂಗ್ (2012) 3 SCC 64 ಪ್ರಕರಣದಲ್ಲಿ ನಿರ್ಧಾರ ಕೈಗೊಳ್ಳಲು ಗರಿಷ್ಠ ನಾಲ್ಕು ತಿಂಗಳ ಅವಧಿಯನ್ನು ನಿಗದಿಪಡಿಸಿದೆ (ಆರಂಭಿಕ ನಿರ್ಧಾರಕ್ಕೆ ಮೂರು ತಿಂಗಳು ಹಾಗೂ ಅಗತ್ಯ ಸಲಹೆ-ಸಮಾಲೋಚನೆಗಳಿಗೆ ಹೆಚ್ಚುವರಿ ಒಂದು ತಿಂಗಳು ಎಂದು ಹೇಳಿದೆ.
ಡಾ. ಸುಬ್ರಮಣಿಯನ್ ಸ್ವಾಮಿ ವಿರುದ್ಧ ನಿರ್ದೇಶಕರು, ಸಿಬಿಐ (2005) 2 SCC 317 ಪ್ರಕಾರ ತ್ವರಿತ ನಿರ್ಧಾರ ಪ್ರಕ್ರಿಯೆ ಅತ್ಯಗತ್ಯವಾಗಿದೆ. ಅನಗತ್ಯ ವಿಳಂಬವು ಕಾಯ್ದೆಯ ಮೂಲ ಉದ್ದೇಶವನ್ನೇ ಹಾಳುಮಾಡುತ್ತದೆ ಎಂದು ಪುನರುಚ್ಚರಿಸಿದೆ. ಮನ್ಜೂರ್ ಅಲಿ ಖಾನ್ ವಿರುದ್ಧ ಭಾರತ ಸರ್ಕಾರ ಮತ್ತು ಇತರರು (2015) 2 SCC 33 ಪ್ರಕರಣದಲ್ಲಿಯೂ ವಿವರಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 19 ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್ ನೀಡಿದ್ದ ತೀರ್ಮಾನಗಳನ್ನು ಪತ್ರದಲ್ಲಿ ವಿವರಿಸಿದೆ.
“ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 19 ಅಡಿಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ನೀಡಬೇಕಾದ ಪ್ರಾಧಿಕಾರವು, ಪ್ರಸ್ತಾವನೆ ಸ್ವೀಕರಿಸಿದ ದಿನಾಂಕದಿಂದ ಮೂರು (3) ತಿಂಗಳೊಳಗೆ ಅದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಆದೇಶ ನೀಡಿರುವುದನ್ನು ಸರ್ಕಾರದ ಗಮನಸೆಳೆದಿದೆ.
ರಾಜ್ಯದ ಅಡ್ವೊಕೇಟ್ ಜನರಲ್, ಅಟಾರ್ನಿ ಜನರಲ್ ಅಥವಾ ಸೊಲಿಸಿಟರ್ ಜನರಲ್ ಅವರೊಂದಿಗೆ ಸಮಾಲೋಚನೆ ಅಗತ್ಯವಿದ್ದಲ್ಲಿ ಮತ್ತು ಆ ಸಮಾಲೋಚನೆಯನ್ನು ಆರಂಭಿಕ ಮೂರು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ ಒಂದು ತಿಂಗಳ ಅವಧಿ ವಿಸ್ತರಣೆ ನೀಡಬಹುದು. ಆದರೆ, ಇಂತಹ ಸಮಾಲೋಚನೆಗಾಗಿ ಕೋರಿಕೆಯನ್ನು ಮೂಲ ಮೂರು ತಿಂಗಳ ಅವಧಿಯೊಳಗೆ ಬರವಣಿಗೆಯ ಮೂಲಕ ಸಲ್ಲಿಸಬೇಕು. ಈ ವಿನಂತಿಯ ಪ್ರತಿಯನ್ನು ಪ್ರಾಸಿಕ್ಯೂಷನ್ ಸಂಸ್ಥೆ ಅಥವಾ ಖಾಸಗಿ ದೂರುದಾರರಿಗೆ ಕಳುಹಿಸಿ ಅವಧಿ ವಿಸ್ತರಣೆಯ ಕುರಿತು ತಿಳಿಸಬೇಕು ಎಂದು ಸೂಚಿಸಿದೆ.

ವಿಸ್ತರಿತ ಅವಧಿ ಅಂತ್ಯದೊಳಗೂ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಅನುಮತಿ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ನಂತರ ಪ್ರಾಸಿಕ್ಯೂಷನ್ ಸಂಸ್ಥೆ ಅಥವಾ ಖಾಸಗಿ ದೂರುದಾರರು ಕಾಲಮಿತಿ ಮುಗಿದ 15 ದಿನಗಳೊಳಗೆ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಅಥವಾ ದೂರು ಸಲ್ಲಿಸಬಹುದು ಎಂಬ ಅಂಶವನ್ನು ಪತ್ರದಲ್ಲಿ ಒತ್ತಿ ಹೇಳಿರುವುದು ತಿಳಿದು ಬಂದಿದೆ.
ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 17(A) ಹಾಗೂ ಕಾಯ್ದೆಯ ಸೆಕ್ಷನ್ 19 ರಲ್ಲಿ ಉಲ್ಲೇಖಿಸಲಾದ ಕಡ್ಡಾಯ ನಿಯಮಗಳು ಒಂದೇ ಸ್ವರೂಪದ್ದಾಗಿವೆ. ಸೆಕ್ಷನ್ 19 ಪ್ರಕಾರ, ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಅಗತ್ಯವಾಗಿದೆ.
ಸಾರ್ವಜನಿಕ ಸೇವಕರಿಂದ ನಡೆದಿರುವುದಾಗಿ ಆರೋಪಿಸಲಾದ (ಸೆಕ್ಷನ್ 7, 11, 13 ಮತ್ತು 15 ಅಡಿಯಲ್ಲಿ ಶಿಕ್ಷಾರ್ಹವಾದ) ಅಪರಾಧಗಳ ಕುರಿತು, ಅಗತ್ಯ ಪೂರ್ವಾನುಮತಿ ಇಲ್ಲದೆ ಯಾವುದೇ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಬಾರದು. ಹಿಂದಿನ ಅನುಮತಿ ಇಲ್ಲದೆ (ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013 ರಲ್ಲಿ ಬೇರೆ ರೀತಿಯಾಗಿ ಒದಗಿಸಿರುವುದನ್ನು ಹೊರತುಪಡಿಸಿ) ಎಂದು ಹೇಳಿದೆ.

ಆರೋಪಿತ ಅಪರಾಧ ನಡೆದಿದೆ ಎನ್ನಲಾದ ಸಮಯದಲ್ಲಿ ಕೇಂದ್ರ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿ ಉದ್ಯೋಗದಲ್ಲಿದ್ದ (ಅಥವಾ ಆ ಸಂದರ್ಭದಲ್ಲಿ ಉದ್ಯೋಗದಲ್ಲಿದ್ದ) ಮತ್ತು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ತನ್ನ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲದ ವ್ಯಕ್ತಿಯ ಪ್ರಕರಣದಲ್ಲಿ, ಆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದೆ.
ಆರೋಪಿತ ಅಪರಾಧ ನಡೆದಿದೆ ಎನ್ನಲಾದ ಸಮಯದಲ್ಲಿ ರಾಜ್ಯ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿ ಉದ್ಯೋಗದಲ್ಲಿದ್ದ (ಅಥವಾ ಆ ಸಂದರ್ಭದಲ್ಲಿ ಉದ್ಯೋಗದಲ್ಲಿದ್ದ) ಮತ್ತು ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ತನ್ನ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲದ ವ್ಯಕ್ತಿಯ ಪ್ರಕರಣದಲ್ಲಿ, ಆ ರಾಜ್ಯ ಸರ್ಕಾರದ ಅನುಮತಿ ಅಗತ್ಯ. ಇತರೆ ಯಾವುದೇ ವ್ಯಕ್ತಿಯ ಪ್ರಕರಣದಲ್ಲಿ, ಆತನನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ಹೊಂದಿರುವ ಸಂಬಂಧಿತ ಪ್ರಾಧಿಕಾರದ ಅನುಮತಿ ಅಗತ್ಯವಾಗಿದೆ.
ಪೊಲೀಸ್ ಅಧಿಕಾರಿ, ತನಿಖಾ ಸಂಸ್ಥೆಯ ಅಧಿಕಾರಿ ಅಥವಾ ಇತರೆ ಕಾನೂನು ಜಾರಿಗೊಳಿಸುವ ಪ್ರಾಧಿಕಾರದ ಅಧಿಕಾರಿಯನ್ನು ಹೊರತುಪಡಿಸಿ ಬೇರೆ ವ್ಯಕ್ತಿಯಿಂದ ಬಂದ ವಿನಂತಿಯ ಪ್ರಕರಣದಲ್ಲಿ, ಸಂಬಂಧಿತ ಸರ್ಕಾರ ಅಥವಾ ಪ್ರಾಧಿಕಾರವು ಸಂಬಂಧಿತ ಸಾರ್ವಜನಿಕ ಸೇವಕರಿಗೆ ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡದೆ ಅವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಬಾರದು.
ಇದೇ ಉಪವಿಧಾನದ ಅಡಿಯಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಸಲಾದ ಪ್ರಸ್ತಾವನೆ ಸ್ವೀಕರಿಸಿದ ನಂತರ, ಸಂಬಂಧಿತ ಸರ್ಕಾರ ಅಥವಾ ಪ್ರಾಧಿಕಾರವು ಆ ಪ್ರಸ್ತಾವನೆ ಕುರಿತು ತನ್ನ ತೀರ್ಮಾನವನ್ನು ಸ್ವೀಕೃತ ದಿನಾಂಕದಿಂದ ಮೂರು ತಿಂಗಳೊಳಗೆ ತಿಳಿಸಲು ಪ್ರಯತ್ನಿಸಬೇಕು. ಪ್ರಾಸಿಕ್ಯೂಷನ್ ಅನುಮತಿ ನೀಡುವ ಉದ್ದೇಶಕ್ಕಾಗಿ ಕಾನೂನು ಸಲಹೆ ಅಗತ್ಯವಿರುವ ಸಂದರ್ಭಗಳಲ್ಲಿ, ಬರವಣಿಗೆಯಲ್ಲಿ ಕಾರಣಗಳನ್ನು ದಾಖಲಿಸಿ, ಈ ಅವಧಿಯನ್ನು ಮತ್ತೊಂದು ಒಂದು ತಿಂಗಳವರೆಗೆ ವಿಸ್ತರಿಸಬಹುದು.
ಸಂಬಂಧಿತ ಪ್ರಾಧಿಕಾರವು ಪ್ರಸ್ತಾವನೆ ಸ್ವೀಕರಿಸಿದ ದಿನಾಂಕದಿಂದ ಮೂರು (3) ತಿಂಗಳೊಳಗೆ ತನಿಖೆ / ವಿಚಾರಣೆ / ಪರಿಶೀಲನೆ ನಡೆಸಲು ಪೂರ್ವಾನುಮತಿ ನೀಡುವುದು ಕಡ್ಡಾಯವಾಗಿದೆ. ಪ್ರಾಧಿಕಾರವು ಬರವಣಿಗೆಯಲ್ಲಿ ಕಾರಣಗಳನ್ನು ದಾಖಲಿಸಿ ಈ ಅವಧಿಯನ್ನು ಇನ್ನೊಂದು ಒಂದು (1) ತಿಂಗಳವರೆಗೆ ವಿಸ್ತರಿಸಬಹುದು. ಮೇಲ್ಕಂಡ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ “ಅನುಮಾನಿತ ಅನುಮತಿ” (“deemed approval”) ತತ್ವವು, ಆ ತೀರ್ಪುಗಳು ಕಾಯ್ದೆಯ ಸೆಕ್ಷನ್ 19 ಕುರಿತು ನೀಡಲ್ಪಟ್ಟಿದ್ದರೂ ಸಹ, ಈ ಕಾಯ್ದೆಯ ಸೆಕ್ಷನ್ 17A ಕ್ಕೂ ಅನ್ವಯವಾಗುತ್ತದೆ.
ಮಿತಿ ಮೀರಿದ ಕಾಲಮಿತಿ
‘ಆದ್ದರಿಂದ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ 22 ಪ್ರಸ್ತಾವನೆಗಳಿಗೆ ತನಿಖೆ / ವಿಚಾರಣೆ / ಪರಿಶೀಲನೆ ನಡೆಸಲು ಅಗತ್ಯ ಪೂರ್ವಾನುಮತಿ ನೀಡದೆ ತಡೆಹಿಡಿದಿರುವುದು ನಿಗದಿತ ಕಾಲಮಿತಿಯನ್ನು ಮೀರಿ ಹೋಗಿದೆ. ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ ಕಾನೂನು ತತ್ವಗಳಿಗೆ ವಿರುದ್ಧವಾಗಿದೆ. ದೀರ್ಘಕಾಲದ ಮತ್ತು ಯಾವುದೇ ಸಮರ್ಪಕ ವಿವರಣೆ ಇಲ್ಲದ ವಿಳಂಬವು ಕಾನೂನುಬದ್ಧ ಕರ್ತವ್ಯಗಳನ್ನು ತಪ್ಪಿಸಿಕೊಳ್ಳುವ ಪ್ರಯತ್ನವೆಂದು ಪರಿಗಣಿಸಲ್ಪಡುವ ಅಪಾಯವಿದೆ. ಇದಲ್ಲದೆ ಇದು ಸಂಬಂಧಿತ ಪ್ರಾಧಿಕಾರಗಳ ಕರ್ತವ್ಯ ಲೋಪವಾಗಿದೆ. ಹಾಗೂ ದುರುಪಯೋಗಿ ಆಡಳಿತಕ್ಕೂ ಕಾರಣವಾಗುತ್ತದೆ,’ ಎಂದು ಸರ್ಕಾರವನ್ನು ಎಚ್ಚರಿಸಿರುವುದು ಗೊತ್ತಾಗಿದೆ.

ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 17(A) ಅಡಿಯಲ್ಲಿ ಸಲ್ಲಿಸಲ್ಪಟ್ಟಿರುವ ಹಾಗೂ ಪ್ರಸ್ತುತ ಸರ್ಕಾರ / ವಿವಿಧ ಸಂಬಂಧಿತ ಪ್ರಾಧಿಕಾರಗಳ ಬಳಿ ಬಾಕಿ ಇರುವ ಎಲ್ಲಾ 22 ಪ್ರಸ್ತಾವನೆಗಳ ಬಗ್ಗೆ ಆದ್ಯತೆಯ ಪರಿಶೀಲನೆ ನಡೆಸುವಂತೆ ಅಥವಾ ನಡೆಸುವಂತೆ ಸೂಚಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದೆ.
ಈ ಪತ್ರದ ದಿನಾಂಕದಿಂದ 15 ದಿನಗಳೊಳಗೆ ವಿವರ ಪಟ್ಟಿಯಲ್ಲಿ ಉಲ್ಲೇಖಿಸಿರುವ ಎಲ್ಲಾ 22 ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು. ಸೆಕ್ಷನ್ 17(A) ಅನುಮತಿಗಾಗಿ ಸಂಬಂಧಿತ ಪ್ರಾಧಿಕಾರಗಳ ಬಳಿ ಇಂತಹ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಪಟ್ಟಿಯಲ್ಲಿ ಇಂತಹ ಎಲ್ಲಾ ಪ್ರಕರಣಗಳ ಉಲ್ಲೇಖಿಸಿದೆ. ಆ ಪ್ರಕರಣಗಳ ಮೇಲೆಯೂ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.
ದುರಾಡಳಿತದ ಬಗ್ಗೆಯೂ ಲೋಕಾಯುಕ್ತ ಸಂಸ್ಥೆಯು 2026ರ ಮೇ 13ರಂದು ಪತ್ರ ಬರೆದಿತ್ತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು 2026ರ ಮೇ 15ರಂದು ಈ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿದ್ದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಮೇ 19

ಮತ್ತು 20ರಂದು ಎರಡು ಪತ್ರಗಳನ್ನು ನಗರಾಭಿವೃದ್ಧಿ ಇಲಾಖೆಗೆ ಅನಧಿಕೃತ ಟಿಪ್ಪಣಿ ಹೊರಡಿಸಿದೆ.

ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್)ಗೆ ಸೇರಿದ ಅಧಿಕಾರಿಗಳಿದ್ದಾರೆ. ಆದರೆ ಇವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆಯನ್ನೂ ಸಹ ಸಲ್ಲಿಸಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.
ಈ ಪತ್ರವನ್ನಾಧರಿಸಿ ನಗರಾಭಿವೃದ್ಧಿ ಇಲಾಖೆಯು ತನ್ನ ಅಧೀನ ಶಾಖೆಗಳಿಗೆ ಕ್ರಮ ಕೈಗೊಳ್ಳುವ ಸಂಬಂಧ 2026ರ ಮೇ 20ರಂದು ಪತ್ರ ಬರೆದಿದೆ.

‘ಪ್ರಸ್ತಾವನೆಗಳಲ್ಲಿನ ಅಧಿಕಾರಿಗಳ ವಿರುದ್ಧ ವಿಚಾರಣೆ, ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ (ತಿದ್ದುಪಡಿ ಕಾಯದೆ 2018) ಕಲಂ 17 ಎ ಅಡಿ ಪೂರ್ವಾನುಮತಿ ನೀಡುವ ಕುರಿತು ಒಂದು ವಾರದೊಳಗೆ ಸ್ಪಷ್ಟವಾದ ಅಭಿಪ್ರಾಯ ನೀಡಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪತ್ರದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.




