ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಿ ಸ್ಥಾನಪಲ್ಲಟಗೊಳಿಸಿದ್ದರೂ ಸಹ ಆರೋಪಿತ ಅಧಿಕಾರಿಗಳಿಗೆ ನೀಡಿದ್ದ ಐಎಎಸ್ ಬಡ್ತಿಯನ್ನು ಇದುವರೆಗೂ ಹಿಂಪಡೆದಿಲ್ಲ. ಈ ಅಧಿಕಾರಿಗಳ ಪರವಾಗಿ ಕೆಎಟಿ ಮತ್ತು ಹೈಕೋರ್ಟ್ ನೀಡಿರುವ ಯಥಾಸ್ಥಿತಿ ಆದೇಶವನ್ನೂ ರಾಜ್ಯ ಸರ್ಕಾರವು ಇದುವರೆಗೂ ತೆರವುಗೊಳಿಸಿಲ್ಲ.
ಅಕ್ರಮ ಫಲಾನುಭವಿ ಎಂದು ಗುರುತಿಸಲಾಗಿರುವ ಅಧಿಕಾರಿಗಳು ಸ್ಥಾನಪಲ್ಲಟಗೊಂಡಿದ್ದ ಸ್ಥಾನಗಳಿಗೆ ತಳ್ಳಲು ಯಥಾಸ್ಥಿತಿ ಆದೇಶವನ್ನು ತೆರವುಗಳಿಸದ ಸರ್ಕಾರವು 1998ನೇ ಸಾಲಿನಲ್ಲಿ ನೇಮಕವಾಗಿ ಅರ್ಹತೆ ಹೊಂದಿದ್ದ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಬಡ್ತಿ ನೀಡುವಲ್ಲಿಯೂ ವಂಚಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
1998, 1999 ಮತ್ತು 2004ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಪಟ್ಟಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಷ್ಕರಿಸಿತ್ತು. ಆದರೂ ಕೆಎಎಸ್ ಅಧಿಕಾರಿಗಳಿಗೆ ಇದೇ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಐಎಎಸ್‌ಗೆ ಬಡ್ತಿ ನೀಡಿದ್ದರು. ಇದರಿಂದ ಆಗಲೂ ಐಎಎಸ್ ಗೆ ಬಡ್ತಿ ಹೊಂದಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ತಪ್ಪಿಸಲಾಗಿತ್ತು. 1998ನೇ ಸಾಲಿನಲ್ಲಿ ಆಯ್ಕೆಯಾಗಿ ಅರ್ಹತೆ ಹೊಂದಿದ್ದರೂ ಸಹ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿಯೂ ಹಲವರಿಗೆ ಐಎಎಸ್‌ಗೆ ಬಡ್ತಿ ದೊರೆಯುತ್ತಿಲ್ಲ.
ಅರ್ಹತೆ ಇದ್ದೂ ಐಎಎಸ್‌ಗೆ ಬಡ್ತಿ ಪಡೆಯದ ಅಧಿಕಾರಿಗಳ ಪೈಕಿ ಕೆಲವು ಅಧಿಕಾರಿಗಳು ಸಿಎಟಿಗೆ ಮೊರೆ ಹೊಕ್ಕಿದ್ದರು. ಸಿಎಟಿಯಲ್ಲಿ ಪ್ರಶ್ನಿಸಿರುವ ಅರ್ಜಿಯನ್ನು ಹಿಂಪಡೆದುಕೊಂಡಲ್ಲಿ ಐಎಎಸ್‌ಗೆ ಬಡ್ತಿ ನೀಡಲಾಗುವುದು ಎಂದು ಸರ್ಕಾರವು ಭರವಸೆ ನೀಡಿತ್ತು. ಸರ್ಕಾರದ ಮಾತನ್ನು ನಂಬಿ ಕೆಲವರು ಸಿಎಟಿಯಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಹಿಂಪಡೆದುಕೊಂಡಿದ್ದರು. ಆದರೂ ಈ ಅಧಿಕಾರಿಗಳಿಗೆ ಐಎಎಸ್ ಗೆ ಬಡ್ತಿಯನ್ನು ನೀಡಿಲ್ಲ. ಬದಲಿಗೆ ರಾಜಕೀಯ ಪ್ರಭಾವ ಹೊಂದಿರುವವರಿಗಷ್ಟೇ ಐಎಎಸ್‌ಗೆ ಬಡ್ತಿ ನೀಡಲಾಗುತ್ತಿದೆ.
ಈ ಬೆಳವಣಿಗೆ ನಡುವೆಯೇ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸುಶೀಲಮ್ಮ ಎನ್ , ಸೀಮಾನಾಯಕ್, ಚನ್ನಪ್ಪ ಎಂಬುವರಿಗೆ ಐಎಎಸ್ ಗೆ ಬಡ್ತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಸ್ತಾವ ಮಂಡಿಸಿದೆ.

ವಿಶೇಷವೆಂದರೇ 1998ನೇ ಸಾಲಿನಲ್ಲಿ ಆಯ್ಕೆಯಾಗಿ ಅರ್ಹತೆ ಹೊಂದಿದ್ದ ವೀರಭದ್ರ ಹಂಚಿನಾಳ, ರೂಪಶ್ರೀ, ಮಂಜುನಾಥ ಸ್ವಾಮಿ ಎನ್ ಅವರನ್ನು ಐಎಎಸ್ ಗೆ ಬಡ್ತಿ ನೀಡಲು ಪರಿಗಣಿಸಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವದ ರಹಸ್ಯ ಹಾಳೆಗಳು ‘ದಿ ಫೈಲ್’ ಗೆ ಲಭ್ಯವಾಗಿವೆ.
ಪ್ರಸ್ತುತ ಕೆಎಎಸ್ (ಸೂಪರ್ ಟೈಂ ಸ್ಕೇಲ್) ಶ್ರೇಣಿಯ ಜೇಷ್ಠತಾ ಪಟ್ಟಿಯಲ್ಲಿ ಡಾ ಶಿವಕುಮಾರ್ ಹೆಚ್ ಆರ್, ವೀರಭದ್ರ ಹಂಚಿನಾಳ್, ರೂಪಶ್ರಿ ಕೆ, ಮಂಜುನಾಥ ಸ್ವಾಮಿ ಜಿ ಎನ್, ಚನ್ನಪ್ಪ ಎ, ಸುಶೀಲಮ್ಮ ಎನ್, ಸೀಮಾ ನಾಯಕ್ ಅವರನ್ನು ನ್ಯಾಯಾಲಯದ ಆದೇಶದಂತೆ (2016ರ ಜೂನ್ 21) ಪರಿಷ್ಕೃತ ಬ್ಯಾಚ್ ಆಯ್ಕೆ ಪಟ್ಟಿಯಲ್ಲಿ ಕೆಎಎಸ್ ವೃಂದಕ್ಕೆ ನೇಮಿಸಿತ್ತು. ಹಾಗೂ ಪೂರ್ವಾನ್ವಯವಾಗಿ ಜೇಷ್ಠತೆ ನೀಡಲಾಗಿತ್ತು. ಈ ಪೈಕಿ ಮಂಜುನಾಥ ಸ್ವಾಮಿ ಜಿ ಎನ್ ಅವರು ಈಗಾಗಲೇ ನಿವೃತ್ತರಾಗಿದ್ದಾರೆ.
ಪಟ್ಟಿಯಲ್ಲಿ ಉಳಿದಿರುವ ವೀರಭದ್ರ ಹಂಚಿನಾಳ್, ರೂಪಶ್ರಿ ಕೆ ಅವರನ್ನು ಐಎಎಸ್ ಹುದ್ದೆಗೆ ಬಡ್ತಿ ನೀಡಲು ಪರಿಗಣಿಸಿಲ್ಲ. ಬದಲಿಗೆ ಸುಶೀಲಮ್ಮ, ಎನ್, ಚನ್ನಪ್ಪ ಎ, ಸೀಮಾ ನಾಯಕ್ ಬಿ, ಡಾ ಶಿವಕುಮಾರ್ ಹೆಚ್ ಆರ್ ಅವರನ್ನು ಮಾತ್ರ ಪರಿಗಣಿಸಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಅತ್ಯುನ್ನತ ಅಧಿಕಾರಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷವೆಂದರೇ ಸುಶೀಲಮ್ಮ ಅವರು ಸಿದ್ದರಾಮಯ್ಯ ಅವರ ಸ್ವಜಾತಿ ಕುರುಬ ಜಾತಿಗೆ ಸೇರಿದವರು ಎಂದು ತಿಳಿದು ಬಂದಿದೆ. ಹೀಗಾಗಿ ಸುಶೀಲಮ್ಮ ಅವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ಮಾತುಗಳು ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿವೆ.
ಈ ಪೈಕಿ ವೀರಭದ್ರ ಹಂಚಿನಾಳ್ ಅವರು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
1998, 199ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ಹಲವು ಮೊಕದ್ದಮೆಗಳ ಮೂಲಕ ಪ್ರಶ್ನಿಸಲಾಗಿದೆ. ಮೊದಲ ಸುತ್ತಿನ ಕಾನೂನು ಹೋರಾಟದ ನಂತರ ಸರ್ಕಾರವು ಆಯ್ಕೆಯಾದ ಅಭ್ಯರ್ಥಿಗಳಿಗೆ 2006ನೇ ಸಾಲಿನಲ್ಲಿ ನೇಮಕಾತಿ ಆದೇಶಗಳನ್ನು ಹೊರಡಿಸಿತ್ತು. ಆದರೂ ನೇಮಕಾತಿ ಪ್ರಕ್ರಿಯೆ ಕುರಿತಂತೆ ಕಾನೂನು ಹೋರಾಟಗಳು ಮುಂದುವರೆದಿವೆ. ಅದೇ ರೀತಿ ಖಲೀಲ್ ಅಹ್ಮದ್ ಕೆ ಆರ್ ಮತ್ತು ಇತರರು ಪ್ರಕರಣದಲ್ಲಿ 2016ರ ಜೂನ್ 21ರಂದು ಉಚ್ಛ ನ್ಯಾಯಾಲಯ ನೀಡಿದ್ದ ನಿರ್ದೇಶನದ ಪ್ರಕಾರ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟಕ್ಕೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ವಿವರಿಸಿರುವುದು ಗೊತ್ತಾಗಿದೆ.

ಇದರಿಂದ ಬಾಧಿತರಾದ ಕೆಲವು ಅಭ್ಯರ್ಥಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ (ಸಿವಿಲ್- 29245/2016) ದಾಖಲಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯ 2018ರ ಏಪ್ರಿಲ್ 11ರಂದು ಅಂತಿಮ ಆದೇಶದಲ್ಲಿ ಮಧ್ಯ ಪ್ರವೇಶಿಸಲು ಯಾವುದೇ ಆಧಾರಗಳಿಲ್ಲ ಎಂದು ತಿಳಿಸಿತ್ತಲ್ಲದೇ ಎಲ್ಲಾ ಎಸ್‌ಎಲ್‌ಪಿಗಳನ್ನು ವಜಾಗೊಳಿಸಿತ್ತು. ಈ ಎಸ್‌ಎಲ್‌ಪಿಗಳು ವಜಾಗೊಂಡ ನಂತರ ಕರ್ನಾಟಕ ಲೋಕಸೇವಾ ಆಯೋಗವು 2019ರ ಜನವರಿ 25ರಂದು 2ನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ನಂತರ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ 2019ರ ಆಗಸ್ಟ್ 22ರಂದು ಮೂರನೇ ಆಯ್ಕೆಪಟ್ಟಿ, 2021ರ ಜನವರಿ 30ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.
ಈ ಪರಿಷ್ಕೃತ ಆಯ್ಕೆಪಟ್ಟಿಯಂತೆ ಎಸ್‌ಸಿಎಸ್‌ಯೇತರ ವೃಂದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಶೀಲಮ್ಮ, ಎನ್ ಚನ್ನಪ್ಪ, ಸೀಮಾನಾಯಕ್ ಬಿ, ಡಾ ಶಿವಕುಮಾರ್ ಹೆಚ್ ಆರ್ ಅವರನ್ನು 2006ರ ಏಪ್ರಿಲ್ 6ರಿಂದಲೇ ಪೂರ್ವಾನ್ವಯ ಆಗುವಂತೆ 2019ರ ಜೂನ್ 15ರಂದು ಕೆಎಎಸ್ ಕಿರಿಯ ಶ್ರೇಣಿಗೆ ನೇಮಿಸಿ ಆದೇಶಿಸಿತ್ತು. ಇದಲ್ಲದೇ ರಾಜ್ಯ ಸರ್ಕಾರವು 1998ನೇ ಬ್ಯಾಚ್ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳು ಪರಿಷ್ಕರಣೆ ನಂತರ ಹೊಸ ಸೇವೆಗೆ ಸೇರಿದರೆ ಅವರ ಪ್ರೊಬೇಷನರಿ ಘೋಷಣೆ ಮತ್ತು ವೇತನ ನಿಗದಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರಿಕ ಸೇವೆಗಳ (1998ನೇ ಬ್ಯಾಚ್ ಗೆಜೆಟೆಡ್ ಪ್ರೊಬೇಷನರ್ಸ್) (ಪ್ರೊಬೇಷನರಿ ಘೋಷಣೆ ಮತ್ತು ವೇತನ ನಿಗದಿ- ವಿಶೇಷ ನಿಯಮಗಳು 2021ನ್ನು ರೂಪಿಸಿತ್ತು. ಇದರ ಪ್ರಕಾರವೇ ಅಧಿಕಾರಿಗಳ ಜೇಷ್ಠತೆಯನ್ನು ನಿಗದಿಪಡಿಸಲು 2021ರ ಜೂನ್ 1ರಂದು ಸುತ್ತೋಲೆ ಹೊರಡಿಸಿತ್ತು.

ಈ ನಿಯಮದ ಅಡಿಯಲ್ಲಿಯೇ ಸುಶೀಲಮ್ಮ, ಎನ್ ಚನ್ನಪ್ಪ, ಸೀಮಾನಾಯಕ್ ಬಿ , ಡಾ ಶಿವಕುಮಾರ್ ಹೆಚ್ ಆರ್ ಹಾಗೂ ಇತರರಿಗೆ ಕೆಎಎಸ್ ವೃಂದದ ಉನ್ನತ ಶ್ರೇಣಿಗೆ ಬಡ್ತಿ ನೀಡಲಾಗಿತ್ತಲ್ಲದೇ ಜೇಷ್ಠತೆಯನ್ನು ನಿಗದಿಪಡಿಸಿತ್ತು. ಪರಿಷ್ಕರಣೆಗಿಂತ ಮೊದಲು ಅಖಿಲ ಭಾರತ ಸೇವೆಗೆ (ಐಎಎಸ್) ಮುಂಬಡ್ತಿ ಪಡೆದಿದ್ದ ಕೆಲವು ಸ್ಥಾನಪಲ್ಲಟಗೊಂಡ ಅಧಿಕಾರಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಉಚ್ಛ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಈ ಸಂಬಂಧ ನ್ಯಾಯಾಲಯಗಳು ಯಥಾಸ್ಥಿತಿ ಆದೇಶದ ಮೇರೆಗೆ ಐಎಎಸ್ ವೃಂದದಲ್ಲಿಯೇ ಮುಂದುವರೆದಿದ್ದಾರೆ. ಈ ಆದೇಶವನ್ನು ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರವು ತೆರವುಗೊಳಿಸಿಲ್ಲ. ಹೀಗಾಗಿ ಅಕ್ರಮ ಫಲಾನುಭವಿಗಳು ಎಂದು ಗುರುತಿಸಿದ್ದ ಅಧಿಕಾರಿಗಳು ಐಎಎಸ್ ಹುದ್ದೆಯನ್ನು ಅನುಭವಿಸುತ್ತಿದ್ದಾರೆ.
ಸುಶೀಲಮ್ಮ ಎನ್, ಚನ್ನಪ್ಪ, ಸೀಮಾನಾಯ್ಕ ಬಿ , ಡಾ ಶಿವಕುಮಾರ್ ಹೆಚ್ ಆರ್ ಅವರು ತಮಗೆ ದೊರಕಬೇಕಿದ್ದ ಐಎಎಸ್ ಹುದ್ದೆಗಾಗಿ ಕೇಂದ್ರ ಆಡಳಿತ ನ್ಯಾಯ ಮಂಡಳಿ ( ಒ ಎ ಸಂಖ್ಯೆ; 339/2023, 98/20023, 103/2025) ಮೊರೆ ಹೊಕ್ಕಿದ್ದರು. ಕೇಂದ್ರ ಆಡಳಿತ ನ್ಯಾಯ ಮಂಡಳಿಯು 2006ರ ಮಾರ್ಚ್ 16ರಂದು ಇವರ ಪರವಾಗಿ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಕೀಲರು ಮತ್ತು ಕಾನೂನು ಕೋಶದ ಮುಖ್ಯಸ್ಥರ ಅಭಿಪ್ರಾಯ ಪಡೆದಿರುವ ಸರ್ಕಾರವು 2026ರ ಏಪ್ರಿಲ್ 7 ಮತ್ತು 21ರಂದು ವಿವಾದ ಪರಿಹಾರ ಮಂಡಳಿ ಮುಂದೆ ಮಂಡಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲು ನಿರ್ಣಯಿಸಿತ್ತು.

ಈ ಬೆಳವಣಿಗೆ ನಡುವೆಯೇ ರಾಜ್ಯದಲ್ಲಿ ಖಾಲಿ ಇದ್ದ 5 ಭಾರತೀಯ ಆಡಳಿತ ಸೇವೆಯ ರಿಕ್ತ ಸ್ಥಾನಗಳ ಎದುರಾಗಿ ಸುಶೀಲಮ್ಮ ಎನ್, ಚನ್ನಪ್ಪ ಎ , ಸೀಮಾ ನಾಯಕ್, ಡಾ ಶಿವಕುಮಾರ್ ಹೆಚ್ ಆರ್ ಅವರ ಮುಂಬಡ್ತಿಯನ್ನು ಅನುಮೋದಿಸಲು ಕೇಂದ್ರ ಸರ್ಕಾರದ ಡಿಒಪಿಟಿಗೆ ಪತ್ರ ಬರೆದಿದೆ.

ಈ ಸಂಬಂಧ ಕೇಂದ್ರ ಸರ್ಕಾರವು ಈ ಪಟ್ಟಿಗೆ ಸಹಮತಿ ನೀಡಿಲ್ಲ. ಈ ಸಹಮತಿಯನ್ನು ನಿರೀಕ್ಷಿಸಿ ಸುಶೀಲಮ್ಮ, ಮತ್ತಿತರರಿಗೆ ಐಎಎಸ್‌ಗೆ ಮುಂಬಡ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿದೆ.

ಅಲ್ಲದೇ ಕೇಂದ್ರ ಆಡಳಿತ ನ್ಯಾಯ ಮಂಡಳಿಯ ಆದೇಶವನ್ನು ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೂ ಸಹ ಪಡೆದಿಲ್ಲ. ಆರ್ಥಿಕ ಇಲಾಖೆಯ ಅಭಿಪ್ರಾಯವಿಲ್ಲದೆಯೇ ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಿರುವುದು ತಿಳಿದು ಬಂದಿದೆ.

ಕೆಎಎಸ್ ಅಧಿಕಾರಿಗಳಿಗೆ ಹಿಂದಿನ ಸರ್ಕಾರ ನೀಡಿರುವ ಐಎಎಸ್, ಐಪಿಎಸ್ ಮತ್ತು ಇತರೆ ಬಡ್ತಿ ಮತ್ತು ಇದುವರೆಗೆ ಈ ಅಧಿಕಾರಿಗಳಿಗೆ ನೀಡಿರುವ ಎಲ್ಲಾ ಬಗೆಯ ಆರ್ಥಿಕ ಸೌಲಭ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.
ಕೆ ಆರ್ ಖಲೀಲ್ ಅಹ್ಮದ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಂದರೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಗೆ ತುರ್ತು ನೋಟೀಸ್ ಜಾರಿಗೊಳಿಸಿತ್ತು.

ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ಬಡ್ತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಾರದ ಗಡುವಿನೊಳಗೆ ತುರ್ತು ನೋಟಿಸ್‌ಗೆ ಉತ್ತರಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು ಬಿಡುಗಡೆಗೊಳಿಸಿದ್ದ ಪರಿಷ್ಕೃತ ಪಟ್ಟಿಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆ ಕಳೆದುಕೊಂಡವರೂ ಸೇರಿದಂತೆ ಷರತ್ತಿನ ಮೇರೆಗೆ ಬಡ್ತಿ ಪಡೆದಿರುವ ಎಲ್ಲಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತುರ್ತು ನೋಟೀಸ್ ಇದೀಗ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಕರಿಗೌಡ, ಶಿವಶಂಕರ್, ಗೋಪಾಲಕೃಷ್ಣ, ವಸಂತಕುಮಾರ್, ಎಚ್ ಬಸವರಾಜೇಂದ್ರ, ಕವಿತಾ ಮನ್ನಿಕೇರಿ ಸೇರಿದಂತೆ ಹಾಲಿ 12 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಪಡೆಯುವ ಭೀತಿ ಎದುರಾಗಿತ್ತು. ಆದರೂ ಅವರನ್ನು ಸರ್ಕಾರವು ಐಎಎಸ್ ಸೇವೆಯಲ್ಲಿಯೇ ಮುಂದುವರೆಸಿದೆ.
ಐಎಎಸ್, ಐಪಿಎಸ್ ಬಡ್ತಿ ಪ್ರಕರಣ; ಸುಪ್ರೀಂಕೋರ್ಟ್‌ನಿಂದ ತುರ್ತು ನೋಟೀಸ್
ಈ ಕುರಿತು ದಿ ಫೈಲ್, 2021ರ ಅಕ್ಟೋಬರ್ 2ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಐಎಎಸ್, ಐಪಿಎಸ್ ಮುಂಬಡ್ತಿ ಪ್ರಕರಣ; ವಿವರವಾದ ಮಾಹಿತಿ ಒದಗಿಸಲು ಸುಪ್ರೀಂ ಸೂಚನೆ
ಅಲ್ಲದೇ ಐಎಎಸ್, ಐಪಿಎಸ್ ಮತ್ತು ಇತರೆ ಹುದ್ದೆಗಳಿಗೆ 2018ರಲ್ಲಿ ನೀಡಿದ್ದ ಬಡ್ತಿ ಪಡೆದ ಅಧಿಕಾರಿಗಳ ವಿವರ, ಈ ಪೈಕಿ ನಿವೃತ್ತವಾಗಿರುವ ಅಧಿಕಾರಿಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿತ್ತು. ಇದು 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದ ಅಧಿಕಾರಿಗಳ ವಲಯದಲ್ಲಿ ತಳಮಳಕ್ಕೆ ಕಾರಣವಾಗಿತ್ತು. ಈ ಬಗ್ಗೆ ದಿ ಫೈಲ್ 2023ರ ಸೆಪ್ಟಂಬರ್ 19ರಂದು ವರದಿ ಪ್ರಕಟಿಸಿತ್ತು.





