ಬೆಂಗಳೂರು; ಐಎಎಸ್, ಐಪಿಎಸ್ ಮತ್ತು ಇತರೆ ಹುದ್ದೆಗಳಿಗೆ 2018ರಲ್ಲಿ ನೀಡಿದ್ದ ಬಡ್ತಿ ಪಡೆದ ಅಧಿಕಾರಿಗಳ ವಿವರ, ಈ ಪೈಕಿ ನಿವೃತ್ತರಾಗಿರುವ ಅಧಿಕಾರಿಗಳ ವಿವರಗಳನ್ನು ಮುಂದಿನ ವಿಚಾರಣೆ ವೇಳೆಯೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿರುವುದು ಅಕ್ರಮ ಫಲಾನುಭವಿ ಅಧಿಕಾರಿಗಳ ವಲಯದಲ್ಲಿ ತಳಮಳ ಸೃಷ್ಟಿಸಿದೆ.
1998, 99 ಮತ್ತು 2004ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಫಲಾನುಭವಿಗಳು ಎಂದು ಸಿಐಡಿ ಮತ್ತು ಸತ್ಯಶೋಧನಾ ಸಮಿತಿಯು ಪಟ್ಟಿ ಮಾಡಿದ್ದ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಮತ್ತು ಇತರೆ ಉನ್ನತ ಹುದ್ದೆಗಳಿಗೆ ನೀಡಿರುವ ಮುಂಬಡ್ತಿ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಇದೇ 2023ರ ಡಿಸೆಂಬರ್ 12ಕ್ಕೆ ಮುಂದೂಡಿದೆ.
ಸೆ.11ರಂದು ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ಮುಂಬಡ್ತಿ ಪಡೆದು ಸೇವೆಯಲ್ಲಿ ಈಗಲೂ ಮುಂದುವರೆದಿರುವ ಅಧಿಕಾರಿಗಳ ವಿವರ, ಮತ್ತು ಮುಂಬಡ್ತಿ ಪಡೆದು ನಿವೃತ್ತರಾಗಿರುವ ಅಧಿಕಾರಿಗಳ ಸಮಗ್ರ ವಿವರ ಒದಗಿಸಬೇಕು ಎಂದು ಸೂಚಿಸಿರುವುದು ಮಹತ್ವ ಪಡೆದುಕೊಂಡಿದೆ.
1998ನೇ ಸಾಲಿನಲ್ಲಿ ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿ 2018ರಲ್ಲಿ ಐಎಎಸ್ ಬಡ್ತಿ ಪಡೆದಿದ್ದ ಹೆಚ್ ಎನ್ ಗೋಪಾಲಕೃಷ್ಣ (ಕಾರ್ಮಿಕ ಇಲಾಖೆಯ ಆಯುಕ್ತ) ಶಿವಾನಂದ ಕಾಪಸಿ (ಉಡುಪಿ ಜಿಲ್ಲಾ ಪಂಚಾಯ್ತಿ ಸಿಇಒ), ಪಿ ವಸಂತಕುಮಾರ್, ಹೆಚ್ ಬಸವರಾಜೇಂದ್ರ (ಆಯುಕ್ತರು, ಮುಜುರಾಯಿ ಇಲಾಖೆ) ಎನ್ ಶಿವಶಂಕರ (ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ), ಕವಿತಾ ಎಸ್ ಮನ್ನಿಕೇರಿ (ಆಯುಕ್ತರು, ಕರ್ನಾಟಕ ಗೃಹ ಮಂಡಳಿ), ಪೆದ್ದಪ್ಪಯ್ಯ (ಹಾಲಿ ನಿವೃತ್ತ) , ಕರೀಗೌಡ ಅವರು ಅಟಲ್ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ಮೌಖಿಕ ಸೂಚನೆಯಂತೆ ರಾಜ್ಯ ಸರ್ಕಾರವು ಇದೀಗ ಈ ಎಲ್ಲಾ ಅಧಿಕಾರಿಗಳೂ ಸೇರಿದಂತೆ ಐಎಎಸ್, ಐಪಿಎಸ್‌ಗೆ ಮುಂಬಡ್ತಿ ಪಡೆದಿರುವ ಅಧಿಕಾರಿಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ನೀಡಲಿದೆ ಎಂದು ಗೊತ್ತಾಗಿದೆ.
ಪ್ರಕರಣದ ವಿವರ
1998, 99 ಮತ್ತು 2004ನೇ ಸಾಲಿನ ನೇಮಕಾತಿ ಕುರಿತಂತೆ ನಡೆದಿದೆ ಎನ್ನಲಾಗಿದ್ದ ಅಕ್ರಮಗಳ ಕುರಿತು ಸಿಐಡಿ ಮತ್ತು ಸತ್ಯಶೋಧನಾ ಸಮಿತಿಯು ತನಿಖೆ ನಡೆಸಿತ್ತು. ಈ ಎರಡೂ ವರದಿಗಳಲ್ಲಿ ಅಕ್ರಮ ಫಲಾನುಭವಿಗಳು ಎಂದು ಗುರುತಿಸಲಾಗಿದ್ದ ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಕೊನೆಯ ದಿನಗಳಲ್ಲಿ (2018) ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿತ್ತು.
ಈ ಮುಂಬಡ್ತಿ ನೀಡಿರುವುದನ್ನು ಪ್ರಶ್ನಿಸಿ ಖಲೀಲ್ ಅಹ್ಮದ್ ಮತ್ತಿತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ 2 ವರ್ಷಗಳ ಕಾಲ ವಿಚಾರಣೆ ನಡೆಸಿ 2020ರ ಮಾರ್ಚ್‌ನಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಅದರಂತೆ ಅರ್ಜಿದಾರರಾದ ಖಲೀಲ್ ಅಹ್ಮದ್ ಮತ್ತಿತರರು ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಅರ್ಜಿದಾರ ಅಭ್ಯರ್ಥಿಗಳಿಗೆ ಪರಿಹಾರ ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಪುನಃ ಖಲೀಲ್ ಅಹ್ಮದ್ ಮತ್ತಿತರರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಈ ಅರ್ಜಿಯ ಕುರಿತಾಗಿ 2021ರಿಂದ 2023ರ ಸೆ.11ರವರೆಗೆ ಒಟ್ಟಾರೆಯಾಗಿ 14 ಬಾರಿ ವಿಚಾರಣೆ ನಡೆದಿದೆ.
ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಖಲೀಲ್ ಅಹ್ಮದ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 5 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು 2016ರ ಜೂನ್ 21ರಂದು ಅಂತಿಮ ತೀರ್ಪು ನೀಡಿತ್ತು. ಈ ಮೂರೂ ಸಾಲಿನ ನೇಮಕಾತಿಗಳು ಅಕ್ರಮ ಮತ್ತು ಸಂವಿಧಾನಬಾಹಿರವಾಗಿದೆಯೆಂದು ಅಭಿಪ್ರಾಯಿಸಿದ್ದ ವಿಭಾಗೀಯ ಪೀಠವು ಈ ಮೂರೂ ಸಾಲಿನ ನೇಮಕಾತಿ ಪಟ್ಟಿಗಳನ್ನು ಮರು ಪರಿಶೀಲಿಸಿ (ರೀ ಡೂ) ಮಾಡಲು ಅಂತಿಮ ತೀರ್ಪು ನೀಡಿತ್ತು.
ಈ ತೀರ್ಪಿನಿಂದಾಗಿ ಬಾಧಿತರಾಗಿದ್ದ ಅಧಿಕಾರಿ ಹೆಚ್ ಎನ್ ಗೋಪಾಲಕೃಷ್ಣ ಮತ್ತು ಇತರರು ಸುಪ್ರೀಂ ಕೋರ್ಟ್‌ನಲ್ಲಿ 2016ರಲ್ಲೇ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ‘ಯಾವುದೇ ಬಡ್ತಿ, ಮುಂಬಡ್ತಿಯು ವಿಶೇಷ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಹಾಗೂ ಈ ಮಾಹಿತಿಯನ್ನು ಬಡ್ತಿ, ಮುಂಬಡ್ತಿ ಪಡೆಯುವ ಎಲ್ಲಾ ಅಧಿಕಾರಿಗಳಿಗೆ ನೀಡಬೇಕು. ಇದರಿಂದ ಅವರು ಯಾವುದೇ ತರಹದ ಸಮಾನತೆ ಅಥವಾ ಯಾವುದೇ ಹಕ್ಕನ್ನು ಕ್ಲೈಮ್ ಮಾಡಬಾರದು ಎಂದು ಸ್ಪಷ್ಟವಾಗಿ ಮಧ್ಯಂತರ ಆದೇಶದಲ್ಲಿ ತೀರ್ಪು ನೀಡಿತ್ತು.
ಈ ತೀರ್ಪನ್ನು ಖಲೀಲ್ ಅಹ್ಮದ್ ಮತ್ತಿತರರು ಸುಪ್ರೀಂ ಕೋರ್ಟ್‌ನಲ್ಲಿ 2018ರಲ್ಲೇ ಮತ್ತೊಂದು ವಿಶೇಷ ಮೇಲ್ಮನವಿ (ಎಂ ಎ) ಸಲ್ಲಿಸಿದ್ದರು. ಇದರಲ್ಲಿ ರಾಜ್ಯ ಸರ್ಕಾರವೂ ಸೇರಿದಂತೆ ಮುಂಬಡ್ತಿ ಪಡೆದಿದ್ದ ಅಧಿಕಾರಿಗಳನ್ನೂ ಪ್ರತಿವಾದಿಯನ್ನಾಗಿಸಲಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದ ವಿಚಾರಣೆ ವೇಳೆಯಲ್ಲಿ ರಾಜ್ಯ ಸರ್ಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿಯೂ ವಿಚಾರಣೆ ಬಾಕಿ ಇರುವುದರಿಂದ ಇದನ್ನೂ ಹೈಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೋರಿಕೆ ಸಲ್ಲಿಸಿತ್ತು.
ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್ , ಪ್ರಕರಣವನ್ನು ಹೈಕೋರ್ಟ್‌ಗೆ 2020ರ ಮಾರ್ಚ್ 20ರಂದು ವರ್ಗಾಯಿಸಿತ್ತು. ಇದೇ ವೇಳೆ ಅರ್ಜಿದಾರರಿಗೆ ಸ್ವಾತಂತ್ಯ್ರವನ್ನು ನೀಡಿತ್ತು. ಹೀಗಾಗಿ ಖಲೀಲ್ ಅಹ್ಮದ್ ಮತ್ತಿತರರು ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಅದೇಶದಲ್ಲಿ ನೀಡಿದ್ದ ಮಾಹಿತಿಯನ್ನು ಮುಂಬಡ್ತಿ ಪಡೆದಿದ್ದ ಅಧಿಕಾರಿಗಳಿಗೆ ಒದಗಿಸಬೇಕಿತ್ತು. ಆದರೆ ಖಲೀಲ್ ಅಹ್ಮದ್ ಮತ್ತಿತರರ ಮನವಿಗೆ ಪರಿಹಾರ ದೊರೆತಿರಲಿಲ್ಲ.