ಬೆಂಗಳೂರು; ರಾಜ್ಯದಲ್ಲಿ 2026ರ ಬೇಸಿಗೆ ಅವಧಿಯಲ್ಲಿ 204 ತಾಲೂಕುಗಳ ಸುಮಾರು 2,280 ಗ್ರಾಮ ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಸರ್ಕಾರವು ಅಂದಾಜಿಸಿದೆ.
ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದ ಆರಂಭದ ದಿನಗಳಲ್ಲಿ 183 ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಆದರೀಗ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 2026ರ ಬೇಸಿಗೆ ಅವಧಿಯಲ್ಲಿ 204 ತಾಲೂಕುಗಳ ಸುಮಾರು 2,280 ಗ್ರಾಮ ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಮಾಹಿತಿ ನೀಡಿದೆ.
ಕುಡಿಯುವ ನೀರಿನ ಪೂರೈಕೆ ಕುರಿತಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರ ಅಧ್ಯಕ್ಷತೆಯಲ್ಲಿ 2026ರ ಏಪ್ರಿಲ್ 2ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು 2026ರ ಏಪ್ರಿಲ್ 1ರ ವರೆಗಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಪೂರೈಕೆ ವಿವರಗಳನ್ನು ಸಲ್ಲಿಸಿದ್ದಾರೆ.
ಏಪ್ರಿಲ್ 2ರಂದು ನಡೆದಿದ್ದ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದ 60 ತಾಲೂಕಗಳ 226 ಗ್ರಾಮ ಪಂಚಾಯ್ತಿ ಪಂಚಾಯ್ತಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇದೆ. ಸುಮಾರು 74 ಹಳ್ಳಿಗಳಿಗೆ 74 ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

247 ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಸಲು 279 ಬೋರ್‍ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ವಿವರಗಳನ್ನು ಸಭೆಗೆ ನೀಡಿರುವುದು ನಡವಳಿಯಿಂದ ಗೊತ್ತಾಗಿದೆ.

ಹಾಗೆಯೇ ಕೆರೆಗಳ ನೀರಿನ ಮಟ್ಟ ಮತ್ತು ಅಂತರ್ಜಲ ಸ್ಥಿತಿ, ಬಿತ್ತನೆ ಪ್ರಗತಿ ಮತ್ತು ಮೇವಿನ ಲಭ್ಯತೆ ಕುರಿತೂ ಈ ಸಭೆಯಲ್ಲಿ ಚರ್ಚೆಯಾಗಿದೆ. 2026ರ ಮಾರ್ಚ್ 31ರ ಹೊತ್ತಿಗೆ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಗೆ ಒಳಪಟ್ಟ ನೀರಿನ ಸಂಗ್ರಹದ ವಿವರಗಳು, 2026ರ ಫೆಬ್ರುವರಿಯಲ್ಲಿ ಅಂತರ್ಜಲ ಏರಿಳಿತಗಳು ಮತ್ತು ದಶಕದ ಅಂತರ್ಜಲ ಏರಿಳಿತಗಳ ಕುರಿತಾದ ಅಂಕಿ ಅಂಶಗಳನ್ನಾಧರಿಸಿ ಚರ್ಚೆ ನಡೆಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಅಲ್ಲದೇ 2026ರ ಮಾರ್ಚ್ 27ರ ಅವಧಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ ಸ್ಥಿತಿ, 2026ರ ಮಾರ್ಚ್ 29ರ ಅವಧಿಗೆ ಇರುವ ನರೇಗಾ ಯೋಜನೆಯ ಪ್ರಗತಿ, ಭೌತಿಕ ಸ್ಥಿತಿಗತಿ ಹಾಗೂ ರಾಜ್ಯದಲ್ಲಿನ ಮೇವಿನ ಲಭ್ಯತೆ ಕುರಿತು ಮಾಹಿತಿ ನೀಡಲಾಗಿದೆ.

ಆದರೆ ಸದ್ಯದ ಅಂತರ್ಜಲದ ಸ್ಥಿತಿ ಮತ್ತು ಮೇವಿನ ಲಭ್ಯತೆಯ ಅಂಕಿ ಅಂಶಗಳನ್ನು ನಡವಳಿಯಲ್ಲಿ ದಾಖಲಿಸಿಲ್ಲ.

2026ರ ಜೂನ್ ವರೆಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಕೊರತೆಯಿರುವುದಿಲ್ಲ. ಮತ್ತು ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ಮೇರೆಗೆ ನೀರಿನ ಸಂಗ್ರಹವನ್ನು ಕಾಯ್ದುಕೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದೆ. ಅಲ್ಲದೇ 2026ರ ಮೇ ತಿಂಗಳ ಅಂತ್ಯದ ವೇಳೆ ರಾಜ್ಯದ ಎಲ್ಲಾ ಅಣೆಕಟ್ಟುಗಳ ತಪಾಸಣೆ ಮಾಡಿ ಸುರಕ್ಷತಾ ಮೌಲ್ಯಮಾಪನವನ್ನು ಖಚಿತಪಡಿಸಬೇಕು. ಈ ಬಗ್ಗೆ ವರದಿಯನ್ನೂ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಜಲಸಂಪನ್ಮೂಲ ಇಲಾಖೆಯ ಅಂಕಿಅಂಶದ ಪ್ರಕಾರ ರಾಜ್ಯದ ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಪ್ರಸ್ತುತ ಸುಮಾರು 107 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಏಪ್ರಿಲ್ ಎರಡನೇ ವಾರದ ಅವಧಿಗೆ ಸುಮಾರು 124 ಟಿಎಂಸಿ ನೀರು ಲಭ್ಯವಿತ್ತು. ಈ ಮೂರು ಜಲಾಶಯಗಳ ಗರಿಷ್ಠ ಸಾಮರ್ಥ್ಯ 327.63 ಟಿಎಂಸಿ ಇದೆ. ಈ ಪೈಕಿ ಪ್ರಸ್ತುತ ಶೇಖರಣೆ ಇರುವುದು ಕೇವಲ ಶೇ.33ರಷ್ಟು ಮಾತ್ರ. ಲಿಂಗನಮಕ್ಕಿ ಜಲಾಶಯಕ್ಕೆ ಸುಮಾರು 50 ಕ್ಯುಸೆಕ್ ಒಳಹರಿವಿದೆ. ಉಳಿದ ಜಲಾಶಯಗಳಿಗೆ ಯಾವುದೇ ಒಳಹರಿವು ಇಲ್ಲ.
ಕಾವೇರಿ ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆ.ಆರ್.ಎಸ್, ಕಬಿನಿಯಲ್ಲಿ ಪ್ರಸ್ತುತ ಒಟ್ಟು ಸುಮಾರು 57 ಟಿಎಂಸಿ ನೀರಿ ಶೇಖರಣೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ಒಟ್ಟು ಸುಮಾರು 58 ಟಿಎಂಸಿ ನೀರು ಸಂಗ್ರಹ ಇತ್ತು. ಈ ನಾಲ್ಕು ಜಲಾಶಯಗಳ ಗರಿಷ್ಠ ಸಾಮರ್ಥ್ಯ 114.57 ಟಿಎಂಸಿ ಇದೆ. ಇದರ ಪೈಕಿ ಸುಮಾರು ಶೇ.46 ಮಾತ್ರ ನೀರಿನ ಸಂಗ್ರಹವಿದೆ ಎಂದು ಇಲಾಖೆಯು ಅಂಕಿಅಂಶ ನೀಡಿದೆ.

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಅಗತ್ಯ ವ್ಯವಸ್ಥೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದರು. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಮುಖಾಂತರ ಪಡೆಯಲಾಗುವುದಲ್ಲದೆ, ಅಗತ್ಯವಿರುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.
ನೀರು ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಫ್ಲಶಿಂಗ್ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಮೂಲಗಳನ್ನು ಹೆಚ್ಚಿಸಲಾಗುವುದು, ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆಬಾವಿಗಳನ್ನು ಕೊರೆಯುವುದು ಅತ್ಯಗತ್ಯವೆಂದು ಕಂಡು ಬಂದಲ್ಲಿ, ಸಂಬಂಧಪಟ್ಟ ಭೂವಿಜ್ಞಾನಿಗಳ ವರದಿಯನುಸಾರ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತ್ತು.
‘ರಾಜ್ಯವು ಮೂಲತಃ ಶುಷ್ಕ ಪ್ರದೇಶವಾಗಿರುವುದರಿಂದ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬತ್ತಿಹೋಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಸದರಿ ಸಮಸ್ಯೆಯನ್ನು ದೈನಂದಿನ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಕ್ರಮವಹಿಸಿದ್ದು, ಆದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಅಭಾವ ಎದುರಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಈಗಾಗಲೇ ಸುತ್ತೋಲೆಯಲ್ಲಿ ಹೊರಡಿಸಿದೆ.
ಶುದ್ಧ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಹಂತವಾಗಿ ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾದರಿಗಳನ್ನು, ಪ್ರತಿ ಗ್ರಾಮದಲ್ಲಿ ಕನಿಷ್ಠ 3 ನಳ ನೀರು ಸಂಪರ್ಕಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೂಡಲೇ ಕೈಗೊಂಡು ಮಾಹಿತಿಗಳನ್ನು ದಾಖಲಿಸಲು ಸೂಚಿಸಲಾಗಿದೆ. ಎಲ್ಲಾ ಕುಡಿಯುವ ನೀರಿನ ಮೇಲ್ಮಟ್ಟದ ಜಲಸಂಗ್ರಹಾರ (OHT)ಗಳನ್ನು ಮಾರ್ಗಸೂಚಿಗಳ ಅನ್ವಯ ಶುಚಿಗೊಳಿಸಲು ಸೂಕ್ತ ಕ್ರಮವಹಿಸುವಂತೆಯೂ ಸೂಚಿಸಲಾಗಿದೆ.
ಮಾರ್ಚ್ 2026ರಲ್ಲಿ ಫ್ಲಷಿಂಗ್ ಹಾಗೂ ಆಳಗೊಳಿಸುವ ಮೂಲಕ 1053 ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಬೇಕು. ಹಾಗೂ ತುರ್ತು ಸಂದರ್ಭಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು ಅವಶ್ಯಕವೆಂದು ನಿರೀಕ್ಷಿಸಲಾಗಿದ್ದು, ಆದ್ಯತೆಯ ಮೇರೆಗೆ ಕ್ರಮವಹಿಸಲು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕನ್ನಂಬಾಡಿ ಕಟ್ಟೆ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99 ಅಡಿಗೆ ಕುಸಿದಿದ್ದು, ಮಳೆಗಾಲ ವಿಳಂಬವಾದರೆ ಕುಡಿಯುವ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದುರಾಗುವ ಭೀತಿ ಆವರಿಸಿದೆ.
ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ ಕೇವಲ 22 ಟಿಎಂಸಿ ಮಾತ್ರ ನೀರು ಶೇಖರಣೆ ಇದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 15 ಟಿಎಂಸಿ ಮಾತ್ರ. ಪ್ರಸ್ತುತ ಜಲಾಶಯಕ್ಕೆ 66 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು 4,388 ಕ್ಯೂಸೆಕ್ ಇದೆ ಎಂದು ತಿಳಿದು ಬಂದಿದೆ.
ಕಾವೇರಿ ನೀರನ್ನೇ ನಂಬಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮತ್ತು ಇತರ ನಗರಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಲಭ್ಯವಿರುವ ನೀರನ್ನು ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀಡಬೇಕಿದೆ ಮತ್ತು ಕುಡಿಯಲು ಮೀಸಲಿಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ತಡವಾದರೆ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಕಾವೇರಿ ನೀರು ಅವಲಂಬಿತ ಜನರಿಗೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.





