Sunday | June 21, 2026 |

ಮುಕ್ತ ವಿವಿ ಕುಲಪತಿಗೆ ವಿಶೇಷ ವಿನಾಯಿತಿಯ ನಿರಂಕುಶ ಅಧಿಕಾರ?; ಸರ್ಕಾರದ ಕೆಂಗಣ್ಣಿಗೆ ಮತ್ತೆ ಗುರಿಯಾದ ರಾಜ್ಯಪಾಲ!

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ ಶರಣಪ್ಪ ವಿ ಹಲಸೆ ಅವರ ಅಧಿಕಾರ ಪೂರ್ಣಗೊಳ್ಳಲು ಒಂದು ತಿಂಗಳು ಬಾಕಿ ಇರುವಾಗಲೇ ಕುಲಾಧಿಪತಿಯೂ ಆಗಿರುವ  ರಾಜ್ಯಪಾಲರು ವಿಶೇಷ ವಿನಾಯಿತಿ ಕರುಣಿಸಿದ್ದಾರೆ. ಕುಲಪತಿಗಳ ಅಧಿಕಾರಾವಧಿ ಪೂರ್ಣಗೊಳ್ಳುವ 6 ತಿಂಗಳು ಮೊದಲು ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ರಾಜ್ಯಪಾಲರು ಈ ಹಿಂದೆ ಹೊರಡಿಸಿದ್ದ  ಆದೇಶವನ್ನೂ ಅವರೇ  ಸ್ವತಃ ಬದಿಗೊತ್ತಿರುವುದು ಸಹ ಉನ್ನತ ಶಿಕ್ಷಣ ವಲಯದಲ್ಲಿ  ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈಚೆಗಷ್ಟೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಆಯೋಜಿಸಿರುವ ವಿಚಾರವಾಗಿ ಶಿಷ್ಟಾಚಾರ ಪಾಲನೆ ಮಾಡದಿರುವುದಕ್ಕೆ ರಾಜ್ಯ ಸರ್ಕಾರವು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಇದು ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆ ನಡುವೆಯೇ ಕುಲಪತಿ ಡಾ ಶರಣಪ್ಪ ವಿ ಹಲಸೆ ಅವರ ಅಧಿಕಾರದ ಅವಧಿ ಪೂರ್ಣಗೊಳ್ಳಲು ಎರಡೂವರೆ  ತಿಂಗಳು ಬಾಕಿ ಇರುವಾಗಲೇ ವಿಶೇಷ ಸೌಲತ್ತು ಕರುಣಿಸಿರುವುದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಇಲ್ಲದ ವಿಶೇಷ ಸೌಲತ್ತನ್ನು ಕೇವಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ಹಲಸೆ ಅವರಿಗಷ್ಟೇ ಸೀಮಿತವಾಗಿ ಕರುಣಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಶ್ವವಿದ್ಯಾನಿಲಯಗಳ ಕುಲಪತಿಗಳು ತಮ್ಮ ಅಧಿಕಾರವದಿಯ ಕೊನೆ 6 ತಿಂಗಳು ನೇಮಕಾತಿಗಳನ್ನೂ ಒಳಗೊಂಡಂತೆ ಯಾವುದೇ ರೀತಿಯ ಪ್ರಮುಖ ಆರ್ಥಿಕ ಹಾಗೂ ಆಡಳಿತಾತ್ಮಕ ತೀರ್ಮಾನಗಳನ್ನು ತೀರ್ಮಾನಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ ಎಂದು ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಹೊರಡಿಸಿದ್ದ ಆದೇಶವು 1998ರಿಂದಲೂ  ಚಾಲ್ತಿಯಲ್ಲಿದೆ.

 

 

2012ರಲ್ಲಿಯೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ  ಉನ್ನತ ಶಿಕ್ಷಣ ಇಲಾಖೆಯು ಅಂದಿನ ಕುಲಸಚಿವರಿಗೆ ಪತ್ರ ಬರೆದಿತ್ತು.

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ಅಧಿಕಾರಾವಧಿಯು 2012ರ ಡಿಸೆಂಬರ್‍‌ 10ರಂದು ಮುಕ್ರಾಯವಾಗಲಿದೆ. ಕುಲಪತಿಗಳ ಅಧಿಕಾರಾವಧಿಯು ಮುಕ್ತಾಯವಾಗುವ ಸಮೀಪದ ಕಾಲಾವಧಿಯಲ್ಲಿ ನೇಮಕಾತಿಗಳೂ ಸೇರಿದಂತೆ ಇತರೆ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವಂತಿಲ್ಲ,’ ಎಂದು ಸ್ಪಷ್ಟವಾಗಿ ಸೂಚಿಸಿತ್ತು.

 

 

ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮುಖ್ಯಸ್ಥರಾದ ಕುಲಪತಿಗಳು ತಮ್ಮ ಅಧಿಕಾರವದಿಯ ಕೊನೆಯಲ್ಲಿ ನಿಯಮಬಾಹಿರತೆ ಆಸ್ಪದ ನೀಡದಿರಲಿ ದಾರಿ ತಪ್ಪದಿರಲಿ ಎಂಬ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಿತ್ತು.

ಈ ಪತ್ರದಲ್ಲಿನ ಅಂಶಗಳು ಈಗಲೂ ಚಾಲ್ತಿಯಲ್ಲಿದ್ದವು. ಆದರೆ ಇದ್ದಕ್ಕಿದ್ದಂತೆ ಶರಣಪ್ಪ ವಿ ಹಲಸೆ ಅವರ ವಿಚಾರದಲ್ಲಿ ರಾಜ್ಯಪಾಲರು ವಿಶೇಷ ವಿನಾಯಿತಿ ನೀಡಿದ್ದಾರೆ.  ಕುಲಾಧಿಪತಿಯೂ ಆಗಿರುವ ಥಾವರ್ ಚಂದ್ ಗೆಹ್ಲೋಟ್‌ ಅವರು ಸಹ 2021ರ ಸೆ.28ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಕಡೆಯ 6 ತಿಂಗಳ ನಿರ್ಬಂಧವು 2 ತಿಂಗಳಿಗೆ ಕಡಿತಗೊಳಿಸಿದ್ದಾರೆ.

 

 

ವಿಶೇಷವೆಂದರೆ ಕರಾಮುವಿಯ ಹಾಲಿ ಕುಲಪತಿ ‌ ಡಾ.ಶರಣಪ್ಪ ವಿ ಹಲಸೆರವರ ಮೂಲ ಅಧಿಕಾರವಧಿಯು 2025ರ ನವೆಂಬರ್‍‌ 11ಕ್ಕೇ ಪೂರ್ಣಗೊಂಡಿತ್ತು. ಆದರೆ ರಾಜ್ಯಪಾಲರು ತಮ್ಮ 2025ರ ಅಕ್ಟೋಬರ್ 8ರಂದು ಹೊರಡಿಸಿದ್ದ ಆದೇಶದ ಪ್ರಕಾರ ಹಲಸೆ ಅವರ ಅಧಿಕಾರ ಅವಧಿಯು ಇದೇ 2026ರ ಜೂನ್‌ 30ರವರೆಗೆ ವಿಸ್ತರಣೆಯಾಗಿದೆ.

ಮತ್ತೊಂದು ವಿಶೇಷವೆಂದರೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕಾತಿಗೆ ರಾಜ್ಯಪಾಲರ ಸಚಿವಾಲಯವು 2026ರ ಏಪ್ರಿಲ್‌ 2ರಂದೇ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು 2026ರ ಮೇ 10ರಂದು ಕಡೆ ದಿನಾಂಕವಾಗಿದೆ.

 

ಆದರೂ ಶರಣಪ್ಪ ಹಲಸೆ ಅವರಿಗೆ 2021ರ ಸೆ.28ರ  ಆದೇಶದಿಂದ ವಿನಾಯಿತಿ ನೀಡಿ ಆದೇಶಿಸಿದೆ.

 

 

ರಾಜ್ಯಪಾಲರ ಸಚಿವಾಲಯದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

ಡಾ.ಶರಣಪ್ಪ ಹಲಸೆ ರವರ ಅವಧಿಯಲ್ಲಿ ಕಾರ್ಯಭಾರ ಇಲ್ಲದಿದ್ದರೂ ಮತ್ತು ಮಂಜೂರಾದ ಖಾಲಿ ಹುದ್ದೆಗಳಿಲ್ಲದಿದ್ದರೂ 1300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಬಾಹಿರವಾಗಿ ತಾತ್ಕಾಲಿಕ ಶಿಕ್ಷಕೇತರ ಮತ್ತು ಶಿಕ್ಷಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.  ಪದನಾಮ ಬದಲಾವಣೆ, ನಿಯಮಬಾಹಿರವೆಂದು ಹಿಂದಿನ ಕುಲಾಧಿಪತಿಗಳಿಂದ ಮುಚ್ಚಲು ಆದೇಶಿಸಲ್ಪಟ್ಟಿದ್ದ ಕರಾಮುವಿಯ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ, ಅವುಗಳಿಗೆ ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕರ ಮತ್ತು ಸಿಬ್ಬಂದಿ ನೇಮಕಾತಿ ಮುಂತಾದ ಹಗರಣಗಳ ಬಗ್ಗೆ ಇದೇ ಕುಲಾಧಿಪತಿಗಳು 2026ರ ಜನವರಿ 30ರಂದು ನ್ಯಾಯಮೂರ್ತಿ ಬಿ ಎ ಪಾಟೀಲ್ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿದ್ದರು.ಹೀಗಿದ್ದರೂ ಸಹ ಡಾ.ಶರಣಪ್ಪ ಹಲಸೆ ರವರಿಗೆ ವಿಶೇಷ ಸೌಲತ್ತು ನೀಡಿರುವುದು ಸಂಶಯಗಳನ್ನು ಬಲಪಡಿಸಿದಂತಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಆಯೋಜಿಸಿರುವ ವಿಚಾರವಾಗಿ ಶಿಷ್ಟಾಚಾರ ಪಾಲನೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಕೂಡಲೇ ಸರ್ಕಾರಕ್ಕೆ ಸಮಜಾಯಿಷಿ ನೀಡದಿದ್ದಲ್ಲಿ ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಶಿಫಾರಸು ಮಾಡಲಾಗುವುದು ಎಂದು ಕೆಎಸ್‌ಒಯು ಕುಲಪತಿಗಳಿಗೆ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಉಪ ಕಾರ್ಯದರ್ಶಿ ಎನ್. ಕುಮಾರ್ ಆದೇಶ ಹೊರಡಿಸಿದ್ದರು.

ಕೆಎಸ್‌ಒಯು ಮೇ 25ರಿಂದ 27ರವರೆಗೆ ‘ಪ್ರಜ್ಞಾ ಪ್ರವಾಹ ಮತ್ತು ಡಾ. ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನ’ದ ಸಹಯೋಗದಲ್ಲಿ ‘ಏಕಾತ್ಮ ಮಾನವ್ ದರ್ಶನ್’ ಎಂಬ ಭಾರತ್ ವರ್ಲ್ಡ್ ವ್ಯೆ (ಭಾರತದ ವಿಶ್ವ ದೃಷ್ಟಿಕೋನ) ಕುರಿತು ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಿದ್ದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು.

ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಸಚಿವರು ಸಹ ಕುಲಾಧಿಪತಿಗಳಾಗಿರುತ್ತಾರೆ. ರಾಜ್ಯಪಾಲರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲಾಖಾ ಸಚಿವರನ್ನು ಸಬೆಗೆ ಆಹ್ವಾನಿಸುವುದು ಶಿಷ್ಟಾಚಾರವಾಗಿರುತ್ತದೆ. ವಿಶ್ವವಿದ್ಯಾಲಯದ ಕುಲಪತಿಗಳಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವ ಪೂರ್ವದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿತ್ತು.

ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ರಮೇಶ್ ಬಾಬು ಅವರು ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಬಾರದು ಎಂಬುದಕ್ಕೆ ಲಿಖಿತ ಸಮಜಾಯಿಷಿಯನ್ನು ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದನ್ನು ಸ್ಮರಿಸಬಹುದು.

Hot this week

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಡಿಸಿಎಂ ಕಚೇರಿಯಲ್ಲಿಯೇ ಧೂಳಿಡಿದಿದ್ದ ಕಡತಗಳು; ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ 80 ಕಡತಗಳು ಇಲಾಖೆಗೆ ವಾಪಸ್‌

ಬೆಂಗಳೂರು; ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದ ಮಾಹಿತಿಯ ಕಡತ,...
Please Scan to make Your Contribution

Topics

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!