ಬೆಂಗಳೂರು; ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಂಜೂರಾಗಿದ್ದ 50.21 ಎಕರೆ ವಿಸ್ತೀರ್ಣದ ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದೇ ಮಂಜೂರಾತಿ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ್ದ ಮಿಥಿಕ್ ಸೊಸೈಟಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸೇರಿದಂತೆ ಮತ್ತಿತರೆ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ಅಂತಿಮ ಮೇಲ್ಮನವಿ ಸಲ್ಲಿಸದೇ ಇರುವುದು ಇದೀಗ ಬಹಿರಂಗವಾಗಿದೆ.
ಹಲವು ಸಂಘ ಸಂಸ್ಥೆಗಳು ತಮಗೆ ಮಂಜೂರಾಗಿದ್ದ ಜಾಗದಲ್ಲಿ ನಿಗದಿತ ಅವಧಿಯಲ್ಲಿ ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿರಲಿಲ್ಲ. ಬದಲಿಗೆ ಕೆಲವು ಸಂಘ ಸಂಸ್ಥೆಗಳು ತಮಗೆ ಮಂಜೂರಾಗಿದ್ದ ಜಾಗವನ್ನು ಬ್ಯಾಂಕ್‌ನಲ್ಲಿ ಅಡಮಾನವಿರಿಸಿ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ಸಾಲವನ್ನು ಪಡೆದಿತ್ತು. ಆದರೆ ಇದಕ್ಕೆ ಸರ್ಕಾರದ ಪೂರ್ವಾನುಮೋದನೆಯನ್ನೇ ಪಡೆದಿರಲಿಲ್ಲ. ಆದರೂ ಸಹ ಸರ್ಕಾರವು ಮೌನ ವಹಿಸುತ್ತಲೇ ಬಂದಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಉದ್ಭವಿಸಿರುವ ಕುರಿತಾದ ವ್ಯಾಜ್ಯಗಳ ಕುರಿತು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ 2026ರ ಏಪ್ರಿಲ್ 7ರಂದೇ ವರದಿ ಸಲ್ಲಿಸಿದೆ. ಈ ವರದಿ ಕುರಿತು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈಚೆಗಷ್ಟೇ ಚರ್ಚಿಸಿದೆ. ಸಮಿತಿಗೆ ನೀಡಿರುವ ಸಮಗ್ರ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

2003ರ ಆಗಸ್ಟ್ ಮತ್ತು 2012ರ ನಡುವೆ 8 ಸೊಸೈಟಿ, ಸಂಘ ಸಂಸ್ಥೆಗಳಿಗೆ 50 ಎಕರೆ 21 ಗುಂಟೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿತ್ತು. ಈ ಭೂಮಿಯ ಮೌಲ್ಯವು 104.40 ಕೋಟಿ ರುಪಾಯಿ ಮೌಲ್ಯದ್ದಾಗಿತ್ತು. ಈ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಇದನ್ನು ಸಿಎಜಿಯು ಸಹ ತನ್ನ ಅವಲೋಕನದಲ್ಲಿ ವಿವರಿಸಿತ್ತು. ಸಿಎಜಿ ವರದಿ ಆಧರಿಸಿ 10-15 ವರ್ಷಗಳಾದರೂ ಯಾವ ಸರ್ಕಾರಗಳೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.
ಇದೀಗ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚಿಸಿದೆ. ಮಿಥಿಕ್ ಸೊಸೈಟಿ , ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳ ಪ್ರಕರಣದಲ್ಲಿ ಸರ್ಕಾರವು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಸಮಿತಿಗೆ ಸಲ್ಲಿಸಿರುವ ವಿವರಣೆಯ ಟಿಪ್ಪಣಿಯಿಂದ ತಿಳಿದು ಬಂದಿದೆ.
ಗುತ್ತಿಗೆ ಷರತ್ತು ಉಲ್ಲಂಘಿಸಿದ್ದ ಮಿಥಿಕ್ ಸೊಸೈಟಿ – ಅಂತಿಮ ಮೇಲ್ಮನವಿ ಸಲ್ಲಿಸಲಿಲ್ಲವೇಕೆ?
ಮಿಥಿಕ್ ಸೊಸೈಟಿಗೆ ಭಾರತೀಯ ಶಾಸ್ತ್ರ ಅಧ್ಯಯನ ಹಾಗೂ ಇತರೆ ಅಧ್ಯಯನಗಳ ಉದ್ದೇಶಕ್ಕಾಗಿ ಯಲಹಂಕ ತಾಲೂಕು ಯಲಹಂಕ ಹೋಬಳಿ ಆವಲಹಳ್ಳಿ ಗ್ರಾಮದ ಸರ್ವೆ ನಮಬರ್ 79ರಲ್ಲಿ 10 ಎಕರೆ ಜಮೀನನ್ನು ಮಾರ್ಗಸೂಚಿ ಬೆಲೆ ಶೇ. 30ರಷ್ಟು ವಿಧಿಸಿ 2011ರ ಅಕ್ಟೋಬರ್ 28ರಂದು ಮಂಜೂರು ಮಾಡಲಾಗಿತ್ತು. ಈ ಮಂಜೂರಾತಿಯಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಸೊಸೈಟಿಯು ಈ ಷರತ್ತುಗಳನ್ನು ಉಲ್ಲಂಘಿಸಿತ್ತು.

ಹೀಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 25 ರ ಅನ್ವಯ 2017ರ ಜೂನ್ 20ರಂದು ಈ ಮಂಜೂರಾತಿಯನ್ನು ರದ್ದುಪಡಿಸಿತ್ತು. ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸೊಸೈಟಿಯವರಿಂದ 1,80,00,000 ರುಗಳನ್ನು ಮರು ಪಾವತಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಸರ್ಕಾರವು ಗುತ್ತಿಗೆ ಆದೇಶ ರದ್ದುಪಡಿಸಿದ ನಂತರ ಈ ಸಂಸ್ಥೆಗೆ ಹಣ ಪಾವತಿಸಿರುವುದಿಲ್ಲ.
ಜಮೀನನ್ನು ಮಂಜೂರು ಮಾಡಿರುವುದನ್ನು ರದ್ದುಪಡಿಸಿದ್ದ ಸರ್ಕಾರದ ಆದೇಶವನ್ನು ಸೊಸೈಟಿಯು ಪ್ರಶ್ನಿಸಿತ್ತು. ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ( 33845/2017) ದಾಖಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ 2 ತಿಂಗಳ ಒಳಗಾಗಿ ಪೋಡಿ ದುರಸ್ತಿಯೊಂದಿಗೆ ಈ ಜಮೀನನ್ನು ಹಸ್ತಾಂತರಿಸಬೇಕು ಎಂದು 2019ರ ಸೆ.24ರಂದು ಆದೇಶ ಹೊರಡಿಸಿತ್ತು.
ಈ ರಿಟ್ ಅರ್ಜಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನ ಅಂಶಗಳು ಇಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು ನಿಲುವು ತಳೆದಿತ್ತು. ಅಲ್ಲದೇ ಈ ಸಂಬಂಧ 2021ರ ಮಾರ್ಚ್ 22ರಂದು ಆದೇಶವನ್ನು ಹೊರಡಿಸಿತ್ತು. ಅಲ್ಲದೇ 2023ರ ಮಾರ್ಚ್ 9ರಂದು ಪಹಣಿಯಲ್ಲಿ ದಿ ಮಿಥಿಕ್ ಸೊಸೈಟಿ ಹೆಸರಿನಲ್ಲಿ ಖಾತೆ ಮಾಡಿ ಹಸ್ತಾಂತರಿಸಿತ್ತು.

ಹೀಗಾಗಿ ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನ ಅಂಶಗಳು ಇರುವುದಿಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ್ದರು. ಅಲ್ಲದೇ ರಿಟ್ ಅರ್ಜಿಗೆ ವಿರುದ್ಧ ಮೇಲ್ಮನವಿ ಸಲ್ಇಸಲು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ತಿಳಿಸಿದ್ದರು. ಆದ್ದರಿಂದ ರಿಟ್ ಅರ್ಜಿ ಸಂಖ್ಯೆ 33845/2017ರ ಆದೇಶದ ವಿರುದ್ಧ ಅಂತಿಮ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ. ಈ ಜಾಗವು ಪ್ರಸ್ತುತ ದಿ ಮಿಥಿಕ್ ಸೊಸೈಟಿ ಸುಪರ್ದಿಯಲ್ಲಿದೆ. ಕಾಂಪೌಂಡ್ ನಿರ್ಮಿಸಿಕೊಂಡಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.
ಗೌತಮ ವೈದ್ಯಕೀಯ ವಿಜ್ಞಾನ ಮತ್ತು ಟೆಕ್ನಾಲಜಿ ಪ್ರಕರಣದಲ್ಲೇನಿದೆ?
ಗೌಗಮ ವೈದ್ಯಕೀಯ ವಿಜ್ಞಾನ ಮತ್ತು ಟೆಕ್ನಾಲಜಿ ಸಂಸ್ಥೆಗೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ದಾಸನಪುರ ಗ್ರಾಮದ ಸರ್ವೆ ನಂಬರ್ 100ರಲ್ಲಿ 6 ಎಕರೆ ಸರ್ಕಾರಿ ಗೋಮಾಳ ಜಾಗವನ್ನು 200ರರ ಫೆ.6ರಂದು ಶೈಕ್ಷಣಿಕ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಮಂಜೂರು ಮಾಡಿತ್ತು. ಎಕರೆ ಒಂದಕ್ಕೆ ವಾರ್ಷಿಕವಾಗಿ 5,000 ರು ಗಳಂತೆ ಮಂಜೂರು ಮಾಡಲಾಗಿತ್ತು.

ಈ ಸಂಸ್ಥೆಯು 2003-04ರ ಸಾಲಿಗೆ ಗುತ್ತಿಗೆ ಮೊತ್ತದ ಪೈಕಿ ಒಟ್ಟು 30,000 ರು.ಗಳನ್ನು 2004ರ ಮಾರ್ಚ್ 22ರಂದು ಹಾಗೂ 2022ರ ಆಗಸ್ಟ್ 26, 2004-05ರಿಂದ 2022-23ರವರೆಗೆ ಗುತ್ತಿಗೆ ಮೊತ್ತ ಮತ್ತು ಶೇ.12ರಷ್ಟು ಬಡ್ಡಿ ಮೊತ್ತ ಸೇರಿ ಒಟ್ಟಾರೆ 29,16,200 ರು ಪಾವತಿಸಿದ್ದಾರೆ. ಈ ಸಂಸ್ಥೆಯು ಬಡ್ಡಿಯೊಂದಿಗೆ ಇದುವರೆಗೆ ಒಟ್ಟು 29,46, 200 ರು ಪಾವತಿಸಿದೆ. ಆದರೆ ಈ ಸಂಸ್ಥೆಯು ತನಗೆ ಮಂಜೂರಾಗಿದ್ದ ಜಾಗದಲ್ಲಿ ವಾರ್ಷಿಕ ಗುತ್ತಿಗೆಯನ್ನು ಸಕಾಲದಲ್ಲಿ ಪಾವತಿಸಿರಲಿಲ್ಲ. ಅಲ್ಲದೇ 2025ರ ಮಾರ್ಚ್ 12ರ ರಲ್ಲಿ ಇದ್ದಂತೆ ಜಮೀನನ್ನು 2 ವರ್ಷದೊಳಗೆ ನಿಗದಿತ ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರಲಿಲ್ಲ.
ಅಲ್ಲದೆ ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರಸ್ತಾವಿತ ಜಮೀನನ್ನು ಅಡಮಾನ ಇರಿಸಿತ್ತು. ಈ ಮೂಲಕ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿತ್ತು. ಹೀಗಾಗಿ ಈ ಸಂಸ್ಥೆಗೆ ಮಂಜೂರು ಮಾಡಿದ್ದ ಗುತ್ತಿಗೆ ಆದೇಶವನ್ನು ರದ್ದುಗೊಳಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ್ದ ಸಂಸ್ಥೆಯು ಹೈಕೋರ್ಟ್ ಕದ ತಟ್ಟಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ಅನುಸಾರ ಸಂಸ್ಥೆಯು ಜಿಲ್ಲಾಧಿಕಾರಿಗೆ ಅಥವಾ ಸರ್ಕಾರಕ್ಕೆ ಅನುಪಾಲನ ವರದಿ ಸಲ್ಲಿಸಿಲ್ಲ. ಅಲ್ಲದೇ 50 ಲಕ್ಷ ರು ಮೊತ್ತದ ಬ್ಯಾಂಕ್ ಹೊಣೆಗಾರಿಕೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಪಡೆದು ಸಲ್ಲಿಸಿಲ್ಲ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ.

ಡೆಕ್ಕನ್ ಎಜುಕೇಷನ್ ಸೊಸೈಟಿ ಪ್ರಕರಣ
ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 59ರಲ್ಲಿ 5 ಎಕರೆ 30 ಗುಂಟೆ ಸರ್ಕಾರಿ ಜಮೀನನ್ನು ಡೆಕ್ಕನ್ ಎಜುಕೇಷನ್ ಸೊಸೈಟಿಗೆ ಶೈಕ್ಷಣಿಕ ಉದ್ದೇಶಕ್ಕೆಂದು 30 ವರ್ಷಗಳ ಗುತ್ತಿಗೆ ನೀಡಿ 2004ರಲ್ಲೇ ಮಂಜೂರು ಮಾಡಿತ್ತು. ಈ ಜಮೀನು ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸರಹದ್ದು 18 ಕಿ ಮೀ ಹೊರಗಿತ್ತು. ಅಲ್ಲದೇ ಈ ಪ್ರದೇಶವು ಅಭಿವೃದ್ಧಿ ಹೊಂದಿದ ಪ್ರದೇಶ ವ್ಯಾಪ್ತಿಯಲ್ಲಿತ್ತು.
ಆದರೆ ಈ ಸೊಸೈಟಿಯು ಗುತ್ತಿಗೆ ಪಡೆದಿದ್ದ ಉದ್ದೇಶಕ್ಕೆ ಜಮೀನನ್ನು ಬಳಕೆ ಮಾಡಿರಲಿಲ್ಲ. ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿದ್ದ ಕಾರಣಕ್ಕೆ ಗುತ್ತಿಗೆ ಪಡೆದಿದ್ದ ಜಮೀನನ್ನು ಸ್ವಾಧೀನ ಪಡೆದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗೆ ಗುತ್ತಿಗೆ ಪಡೆದ ಉದ್ದೇಶಕ್ಕೆ ಜಮೀನನ್ನು ಉಪಯೋಗಿಸದೇ ಇದ್ದದ್ದರಿಂದ ಈ ಜಮೀನಿನ ಗುತ್ತಿಗೆ ರದ್ದುಪಡಿಸಿತ್ತು. ಸದ್ಯ ಈ ಜಮೀನನ್ನು ವಶಕ್ಕೆ ಪಡೆದಿರುವ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಉದ್ದೇಶಕ್ಕೆ ಹಸ್ತಾಂತರಿಸಿದೆ.
ಲಯನ್ಸ್ ಸರ್ವೀಸ್ ಫೌಂಡೇಷನ್ ಸಂಸ್ಥೆಗೆ ಮಂಜೂರಾಗಿದ್ದ ಜಮೀನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಒತ್ತುವರಿ
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಕೆಂಗೇರಿ ಗ್ರಾಮದ ಸರ್ವೆ ನಂಬರ್ 69ರಲ್ಲಿ 3 ಎಕರೆ ವಿಸ್ತೀರ್ಣದ ಜಮೀನನ್ನು ಲಯನ್ಸ್ ಸರ್ವೀಸ್ ಫೌಂಡೇಷನ್‌ಗೆ 2004ರ ಫೆ.27ರಲ್ಲಿ ಗುತ್ತಿಗೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಈ ಸಂಸ್ಥೆಯು 2017018ನೇ ಸಾಲಿನವರೆಗೆ ಒಟ್ಟು 12,000 ರು ಗಳ ಗುತ್ತಿಗೆಯ ವಾರ್ಷಿಕ ಮೊತ್ತವನ್ನು ಪಾವತಿಸಿರಲಿಲ್ಲ. ಈ ಬಗ್ಗೆ ಸಿಎಜಿಯೂ ಸಹ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯು ಈ ಸಂಸ್ಥೆಯು 2007-08ನೇ ಸಾಲಿನಿಂದ 2013-14ನೇ ಸಾಲಿನವರೆಗೆ ಒಟ್ಟಾರೆ 21,000 ರು.ಗಳ ಗುತ್ತಿಗೆ ಮೊತ್ತ ಪಾವತಿಸಿತ್ತು. ಆದರೆ 2013-14ನೇ ಸಾಲಿನಿಂದ ಗುತ್ತಿಗೆ ಮೊತ್ತ ಪಾವತಿಸಿರಲಿಲ್ಲ. ಆದರೆ ಗುತ್ತಿಗೆ ಉದ್ದೇಶಕ್ಕೆ ಬಳಸಿಕೊಂಡಿರಲಿಲ್ಲ ಎಂದು ಕಂದಾಯ ಇಲಾಖೆಯು ಹೇಳಿತ್ತು.

ಗುತ್ತಿಗೆ ಉದ್ದೇಶಕ್ಕೆ ಬಳಸಿಕೊಳ್ಳದ ಈ ಸಂಸ್ಥೆಗೆ ಸರ್ಕಾರವು 2016ರಲ್ಲೇ ನೋಟೀಸ್ ಜಾರಿಗೊಳಿಸಿತ್ತು. ಈ ಮಧ್ಯೆ ಈ ಸಂಸ್ಥೆಯು ಜಮೀನಿನ ಗಡಿ ಗುರುತಿಸಿ ಕೊಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, 3 ಎಕರೆ ಪ್ರದೇಶ ಗುರುತಿಸಿ ತಕ್ಷಣವೇ ಕ್ರಮ ವಹಿಸಬೇಕು ಮತ್ತು ಇದಕ್ಕೆ 4 ತಿಂಗಳ ಗಡುವು ನೀಡಿತ್ತು. ಆದರೆ ಸರ್ಕಾರವು ಹೈಕೋರ್ಟ್ ಆದೇಶವನ್ನು ಪಾಲಿಸಿರಲಿಲ್ಲ. ಹೀಗಾಗಿ ಸಂಸ್ಥೆಯು ಸರ್ಕಾರದ ವಿರುದ್ಧವೇ 2021ರಲ್ಲಿ ನ್ಯಾಯಾಂಗ ನಿಂದನೆ ದಾಖಲಿಸಿತ್ತು.
ಈ ಆದೇಶದ ವಿರುದ್ಧ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಅರ್ಜಿದಾರರ ಸಂಸ್ಥೆಯು 2019ರಂದು ದಾಖಲಿಸಿದ್ದ ಅರ್ಜಿಗಳ ಬಗ್ಗೆ 4 ತಿಂಗಳ ಒಳಗಾಗಿ ಗುಣಾವಗುಣಗಳನ್ನು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಸರ್ಕಾರವು ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ಸಂಬಂಧ 2022ರ ಜನವರಿ 21ರಂದು ಹಿಂಬರಹವನ್ನು ನೀಡಿತ್ತು. ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳೂ ಸಹ ವಸ್ತು ಸ್ಥಿತಿ ಕುರಿತು ವರದಿ ಸಲ್ಲಿಸಿದ್ದರು. ಈ ವರದಿ ಪ್ರಕಾರ ಸಂಸ್ಥೆಯು ಗುತ್ತಿಗೆ ಪಡೆದಿದ್ದ ಜಮೀನಿನಲ್ಲಿ ಅನುಭವದಲ್ಲೇ ಇರಲಿಲ್ಲ. ಹೀಗಾಗಿ 2023ರ ಅಕ್ಟೋಬರ್ 31ರಂದು ಈ ಸಂಸ್ಥೆಗೆ ಕಾರಣ ಕೇಳುವ ನೋಟೀಸ್ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿತ್ತು.

ಆ ನಂತರವೂ ಅಂದರೇ 2026ರ ಫೆ.17ರಂದೂ ಸಹ ಸ್ಥಳ ಪರಿಶೀಲನೆ ನಡೆಸಿತ್ತು. ವಿಶೇಷವೆಂದರೇ ಲಯನ್ಸ್ ಸರ್ವಿಸ್ ಫೌಂಡೇಷನ್ ಸಂಸ್ಥೆಗೆ ಮಂಜೂರು ಮಾಡಿದ್ದ ಜಮೀನಿನಲ್ಲಿ ಆದಿಚುಂಚನಗಿರಿ ಟ್ರಸ್ಟ್‌ನ ಕ್ರೀಡಾಂಗಣವಿತ್ತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಈ ಜಾಗವನ್ನು ಒತ್ತುವರಿ ಮಾಡಿಕೊಂಡಿತ್ತು. ಈ ಕುರಿತು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯವು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು. ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದೆ.

ಮಾಚಿದೇವ ಗುರುಪೀಠ ವಿಶ್ವಸ್ಥ ಸಮಿತಿ ಟ್ರಸ್ಟ್ ಜಮೀನು ಒತ್ತುವರಿಯಾಗಿದೆಯೇ?
ಕೆಂಗೇರಿ ಹೋಬಳಿಯ ಚೂಡೇನಪುರದಲ್ಲಿ ಮಾಚಿದೇವ ಗುರು ಪೀಠ ವಿಶ್ವಸ್ತ ಸಮಿತಿ ಟ್ರಸ್ಟ್‌ಗೆ ಮಂಜೂರು ಮಾಡಿದ್ದ 6 ಎಕರೆ ಜಮೀನಿನ ಪೈಕಿ 3 ಎಕರೆ ಜಮೀನು, ಹಸ್ತಾಂತರ ವೇಳೆಯಲ್ಲೇ ಒತ್ತುವರಿಯಾಗಿತ್ತು. ಹೀಗಾಗಿ ಈ ಜಾಗದ ಗಡಿ ಗುರುತಿಸಿ ಪೋಡಿ ಮಾಡಿಕೊಟ್ಟಿರಲಿಲ್ಲ. ಆದರೂ ಸಹ ಈ ಟ್ರಸ್ಟ್, 6 ಎಕರೆ ಜಮೀನಿಗೇ ಗುತ್ತಿಗೆ ಮೊತ್ತವನ್ನು ಪಾವತಿಸಿತ್ತು. ಹೀಗಾಗಿ ಒತ್ತುವರಿ ತೆರವು ಮಾಡಿಸಿಕೊಡಬೇಕು ಎಂದು ಸರ್ಕಾರವನ್ನು ಕೋರಿತ್ತು. ಆದರೆ ಕಂದಾಯ ಇಲಾಖೆಯು ಇದನ್ನು ಒಪ್ಪಿರಲಿಲ್ಲ.

2004ರಲ್ಲೇ ಗುತ್ತಿಗೆ ಜಮೀನನ್ನು ನಕ್ಷೆಯೊಂದಿಗೇ ಟ್ರಸ್ಟ್ ಗೆ ಹಸ್ತಾಂತರಿಸಿದ್ದರೂ ಸಹ ಅದನ್ನು ಟ್ರಸ್ಟ್ ಸಂರಕ್ಷಿಸಲಿಲ್ಲ. ಹೀಗಾಗಿ ಒತ್ತುವರಿ ಆಗಿರಬಹುದು ಎಂದು ತಿಳಿಸಿತ್ತು. ಹೀಗಾಗಿ ಟ್ರಸ್ಟ್ ಗೆ ಗುತ್ತಿಗೆಗೆ ಮಂಜೂರು ಮಾಡಿದ್ದ ಪೂರ್ಣ ಜಮೀನನ್ನು ಯಾಕೆ ಸರ್ಕಾರದ ವಶಕ್ಕೆ ಪಡೆಯಬಾರದು ಎಂದು 2022ರಲ್ಲೇ ಸರ್ಕಾರವು ನೋಟೀಸ್ ಜಾರಿಗೊಳಿಸಿತ್ತು. ಆ ನಂತರ ಈ ಸ್ಥಳದ ತನಿಖೆಯನ್ನೂ ನಡೆಸಿತ್ತು.

ಸ್ಥಳ ತನಿಖೆ ಪ್ರಕಾರ ಈ ಸಂಸ್ಥೆಗೆ ಗುತ್ತಿಗೆ ಮಂಜೂರು ಮಾಡಿದ್ದ 6 ಎಕರೆ ಜಮೀನಿನ ಪೈಕಿ 1 ಎಕರೆ 8 ಗುಂಟೆ ವಿಸ್ತೀರ್ಣದಲ್ಲಿ ಕಟ್ಟಡಗಳು, ಶೆಡ್‌ಗಳು ಇತರೆ ಬಿಲ್ಟ್‌ಪ್ ಏರಿಯಾ ಕೂಡ ಇತ್ತು. ಇನ್ನುಳಿದ 4 ಎಕರೆ 32 ಗುಂಟೆ ಪ್ರದೇಶವು ಖುಲ್ಲಾ ಇತ್ತು. ನಿರ್ಮಾಣ ಹಂತದಲ್ಲಿದ್ದ ಶೆಡ್‌ನಲ್ಲಿ ಜಯಂತ್ ಟೆಂಟ್ ಹೌಸ್ ಹೆಸರಿನ ಸಂಸ್ಥೆಯು ಬಳಕೆ ಮಾಡಿಕೊಂಡಿತ್ತು. ಇದನ್ನು ಬಾಡಿಗೆ ಅಥವಾ ಆಂತರಿಕವಾಗಿ ಬಾಡಿಗೆ ನೀಡಿರುವುದು ಕಂಡು ಬಂದಿದೆ. ಉಳಿದಂತೆ 4 ಎಕರೆ 32 ಗುಂಟೆ ಜಮೀನನ್ನು ಉಪಯೋಗಿಸಿಲ್ಲ ಎಂದು ಸ್ಥಳ ತನಿಖಾ ವರದಿಯಲ್ಲಿ ವಿವರಿಸಿತ್ತು.
ಆದರೆ ಇದಕ್ಕೆ ಟ್ರಸ್ಟ್ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ 2023ರ ಜೂನ್ 12ರಂದು ಸಮಜಾಯಿಷಿ ನೀಡಿತ್ತು. ಪಾರ್ಕಿಂಗ್ ಪ್ರದೇಶ, ಹಾಸ್ಟೆಲ್ ಮುಂದುವರೆದ ಭಾಗದ ನಿರ್ಮಾಣ ಮತ್ತು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಉದ್ದೇಶವಿದೆ. ಸಂಸ್ಥೆಯವರಿಗೆ ಮಂಜೂರಾಗಿರುವ ಜಾಗದಲ್ಲಿ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಸಮಜಾಯಿಷಿಯಲ್ಲಿ ಕೋರಿತ್ತು. ಅಲ್ಲದೇ ಯಾವುದೇ ಷರತ್ತನ್ನು ಉಲ್ಲಂಘಿಸಿಲ್ಲ. ಸ್ಥಳದ ಅಳತೆಯನ್ನು ಮತ್ತೊಮ್ಮೆ ಗುರುತಿಸಬೇಕು ಎಂದು ಕೋರಿತ್ತು.
ಆದರೆ ಹಾಲಿ ಸ್ಥಳ ಪರಿಶೀಲನೆಯಂತೆ ತಾಲೂಕು ಭೂಮಾಪಕರು ತಯಾರಿಸಿದ್ದ ನಕ್ಷೆ ಪ್ರಕಾರ 4 ಎಕರೆ 32 ಗುಂಟೆ ವಿಸ್ತೀರ್ಣವು ಖುಲ್ಲಾ ಇತ್ತು. ಒತ್ತುವರಿಯಾಗಿರಲಿಲ್ಲ. ಹೀಗಾಗಿ ಗುತ್ತಿಗೆ/ಮಂಜೂರು ಮಾಡಿರುವ ಪ್ರಕರಣಗಳಲ್ಲಿ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 25ರಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಹಾಗೂ ಸರ್ಕಾರದ ಹಂತದಲ್ಲಿ ಗುತ್ತಿಗೆ, ಮಂಜೂರು ಮಾಡಿದ್ದಲ್ಲಿ ರದ್ದುಪಡಿಸಲು ಪ್ರಸ್ತಾವ ಸಲ್ಲಿಸಬೇಕು ಎಂದು 2026ರ ಫೆ.28ರಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತಿಳಿಸಿರುವುದು ಗೊತ್ತಾಗಿದೆ.
ಷರತ್ತು ಉಲ್ಲಂಘಿಸಿದೆಯೇ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ?
ಶೈಕ್ಷಣಿಕ ಉದ್ದೇಶಕ್ಕಾಗಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ 2004ರಲ್ಲೇ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ರಾಮೋಹಳ್ಳಿ ಗ್ರಾಮದ ಸರ್ವೆ ನಂಬರ್ 43ರಲ್ಲಿ 16 ಎಕರೆ ಜಮೀನನ್ನು ಮಂಜೂರು ಮಾಡಿತ್ತು. 30 ವರ್ಷಗಳ ಅವಧಿಗೆ ವಾರ್ಷಿಕ ಒಂದು ಸಾವಿರ ರುಪಾಯಿ ಗುತ್ತಿಗೆ ಮೊತ್ತ ವಿಧಿಸಿತ್ತು.

2004ರ ಜುಲೈ 14ರಂದೇ ಈ ಜಮೀನನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಗೆ ಹಸ್ತಾಂತರಿಸಿತ್ತು. ಆದರೆ ಈ ಟ್ರಸ್ಟ್ ಗುತ್ತಿಗೆ ಪಡೆದಿದ್ದ ಜಾಗವನ್ನು 2- ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಗುತ್ತಿಗೆ ಉದ್ದೇಶಕ್ಕೆ ಬಳಸಿಕೊಂಡಿರಲಿಲ್ಲ.

ಈ ಟ್ರಸ್ಟ್ ಗುತ್ತಿಗೆ ಷರತ್ತುಗಳನ್ನೇ ಉಲ್ಲಂಘಿಸಿದೆ. ಹೀಗಾಗಿ ಈ ಜಮೀನಿನ ಗುತ್ತಿಗೆ ಆದೇಶವನ್ನು ರದ್ದುಗೊಳಿಸಬಹುದು ಎಂದು ಶಿಫಾರಸ್ಸು ಮಾಡಿದೆ. ಸದ್ಯ ಈ ಶಿಫಾರಸ್ಸು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿ ನೀಡಿರುವುದು ತಿಳಿದು ಬಂದಿದೆ.




