ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ ಅದಾನಿ ಸಮೂದಹ ಎಸಿಸಿ ಪ್ರೈವೈಟ್ ಲಿಮಿಟೆಡ್ ಭಾಗವಹಿಸುವುದನ್ನು ನಿರ್ಬಂಧಿಸಬೇಕು ಎಂದು ಕಾನೂನು ಸಚಿವರು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರೂ ಸಹ ಚೆಮನೂರು ಸುಣ್ಣದ ಕಲ್ಲು ಗಣಿ ಪ್ರದೇಶದಲ್ಲಿ ಲೆಟರ್ ಆಫ್ ಇಂಟೆಂಟ್ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮತ್ತೊಮ್ಮೆ ಸರ್ಕಾರದ ಕದ ತಟ್ಟಿದೆ.
ಕಲ್ಬುರ್ಗಿಯ ವಾಡಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ 850 ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಎಸಿಸಿ ಲಿಮಿಟೆಡ್ ಗೆ ಲೆಟರ್ ಆಫ್ ಇಂಟೆಂಟ್ ನೀಡುವ ಸಂಬಂಧ ರಾಜ್ಯ ಸರ್ಕಾರವನ್ನು ಕತ್ತಲಲ್ಲಿಟ್ಟು ನೇರವಾಗಿ ಕೇಂದ್ರದ ಮಾರ್ಗದರ್ಶನ ಕೋರಿರುವ ಬೆಳವಣಿಗೆಯ ನಡುವೆಯೇ ಚೆಮ್ಮನೂರು ಸುಣ್ಣದ ಕಲ್ಲು ಗಣಿ ಪ್ರದೇಶದಲ್ಲಿ ಲೆಟರ್ ಆಫ್ ಇಂಟೆಂಟ್ ನೀಡಲು ಸರ್ಕಾರದ ಕದ ತಟ್ಟಿರುವುದು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಸರ್ಕಾರವು ಏನು ನಿರ್ಧಾರ ತೆಗೆದುಕೊಂಡಿದೆ ಎಂಬ ವಿಚಾರವನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಹಿರಂಗಪಡಿಸಿಲ್ಲ.
ಸದ್ಯ ಈ ಕಡತವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಚಲನವಲನದಲ್ಲಿದೆ.


ಏನಿದು ಚೆಮನೂರ್ ಪ್ರಕರಣ?
ಸಲಗುಡ್ಡ ಚಿನ್ನದ ಬ್ಲಾಕ್ ಹರಾಜಿಗೆ ಸಂಬಂಧಿಸಿದಂತೆ 2024ರ ಅಕ್ಟೋಬರ್ 4ರಂದು ಟೆಂಡರ್ ಅಧಿಸೂಚನೆ ಹೊರಡಿಸಿತ್ತು.

ಈ ಟೆಂಡರ್‍ನಲ್ಲಿ ಅದಾನಿ ಸಮೂಹದ ಎಸಿಸಿ ಲಿಮಿಟೆಡ್, ದಾಲ್ಮಿಯಾ ಭಾರತ್ ಗ್ರೀನ್ ವಿಷನ್ ಲಿಮಿಟೆಡ್, ಜೆ ಕೆ ಸಿಮೆಂಟ್ಸ್ ಲಿಮಿಟೆಡ್, ದಿ ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್, ಅಲ್ಟ್ರಾ ಟೆಕ್ ಸಿಮೆಂಟ್ಸ್ ಲಿಮಿಟೆಡ್ ಭಾಗವಹಿಸಿದ್ದವು.
ತಾಂತ್ರಿಕ ಪರಿಶೀಲನೆ ನಂತರ ಟೆಂಡರ್ ಮೌಲ್ಯಮಾಪನ ಸಮಿತಿಯು ಈ ಕಂಪನಿಗಳು ತಾಂತ್ರಿಕವಾಗಿ ಅರ್ಹರೆಂದು ಶಿಫಾರಸ್ಸು ಮಾಡಿತ್ತು. ಅತ್ಯಧಿಕ ಆರಂಭಿಕ ಬೆಲೆ ಶೇ 35.00 ಪೈಕಿ ಅಂತಿಮವಾಗಿ ಎಸಿಸಿ ಲಿಮಿಟೆಡ್ ಶೆ. 36ರಷ್ಟು ಆರಂಭಿಕ ಬೆಲೆಯನ್ನು ನಮೂದಿಸಿತ್ತು. ಹೀಗಾಗಿ ಅದಾನಿ ಸಮೂಹದ ಎಸಿಸಿ ಲಿಮಿಟೆಡ್‌ನ್ನು , ಪ್ರಧಾನ ಬಿಡ್‌ದಾರ ಎಂದು ಘೋಷಿಸಲಾಗಿತ್ತು. ಅಲ್ಲದೇ 2026ರ ಜನವರಿ 15ರಂದೆ ಎಸಿಸಿ ಕಂಪನಿಯು 28,81,28,376 ರು ಮೊತ್ತವನ್ನು ಮೊದಲ ಕಂತಿನ ರೂಪದಲ್ಲಿ ಪಾವತಿಸಿತ್ತು. ಮತ್ತು ಕಾರ್ಯಕ್ಷಮತೆ ಭದ್ರತೆಯನ್ನೂ ಸಲ್ಲಿಸಿತ್ತು.
ನಿಯಮ 10 (2A) ಪ್ರಕಾರ ಲೆಟರ್ ಆಫ್ ಇಂಟೆಂಟ್ ನೀಡುವಲ್ಲಿ ವಿಳಂಬವಾದಲ್ಲಿ ಶೆ. 5ರಷ್ಟು ಕಡಿತವಾಗಲಿದೆ.
ಪ್ರಸ್ತುತ ಈ ಪ್ರಕರಣದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜಿಜ್ಞಾಸೆಯಲ್ಲಿದೆ. ಏಕೆಂದರೇ ಲೆಟರ್ ಅಫ್ ಇಂಟೆಂಟ್‌ನ್ನು 2026ರ ಫೆ. 16ರೊಳಗೇ ನೀಡಬೇಕು. ಇಲ್ಲವಾದಲ್ಲಿ ಶೇ. 5ರಷ್ಟು ಕಡಿತವಾಗಲಿದೆ. ಆದರೆ ಎಸಿಸಿ ಕಂಪನಿಯು ವಾಡಿ ಪ್ರಕರಣದಲ್ಲಿ ದೊಡ್ಡ ಬಾಕಿ ಮತ್ತು ದಂಡವನ್ನು ಪಾವತಿಸಿಲ್ಲ. ರೂ.367,51,43,385 ಮತ್ತು ರೂ. 482,69,65,137 ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣದಲ್ಲಿನ ವಿಷಯಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಇನ್ನೂ ಇತ್ಯರ್ಥಗೊಂಡಿಲ್ಲ.
ಎಸಿಸಿ ಪ್ರಕರಣದಲ್ಲಿ ಸರ್ಕಾರವು ಈಗಾಗಲೇ ಅಡ್ವೋಕೇಟ್ ಜನರಲ್ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದಿದೆ.ಈ ಅಭಿಪ್ರಾಯದ ಪ್ರಕಾರ ಕೇವಲ ಹಣದ ದಂಡ ಸಾಕಾಗುವುದಿಲ್ಲ. ಎಂಎಂಡಿಆರ್ ಕಾಯ್ದೆಯಡಿ ಶೇ. 100ರಷ್ಟು ವಸೂಲಿ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಹಣಕಾಸು ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಎಸಿಸಿ ಲಿಮಿಟೆಡ್‌ನ್ನು ಭವಿಷ್ಯದ ಟೆಂಡರ್‌ಗಳಲ್ಲಿ ನಿರ್ಬಂಧಿಸಬೇಕು ಎಂದು ಅಭಿಪ್ರಾಯ ನೀಡಿದೆ.
ಈ ಮಧ್ಯೆ ಚೆಮನೂರು ಸುಣ್ಣದ ಕಲ್ಲು ಗಣಿಗಾರಿಕೆ ಟೆಂಡರ್‍ನಲ್ಲಿ ಭಾಗವಹಿಸಿ ಪ್ರಧಾನ ಬಿಡ್‌ದಾರ ಎಂದು ಘೋಷಣೆಯಾಗಿರುವ ಎಸಿಸಿ ಲಿಮಿಟೆಡ್, ಲೆಟರ್ ಆಫ್ ಇಂಟೆಂಟ್ ನೀಡಲು ಹಲವು ಷರತ್ತುಗಳನ್ನು ವಿಧಿಸಿದೆ. ಮೊದಲ ಕಂತು ಪಾವತಿ, ಕಾರ್ಯಕ್ಷಮತೆ ಭದ್ರತೆ, ಎಲ್ಲಾ ಬಾಕಿ ಪಾವತಿ, ಸರ್ಕಾರದ ನಿಯಮ ಪಾಲನೆ ಮಾಡಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.
ಸರ್ಕಾರದ ಹಂತದಲ್ಲಿ ಎಸಿಸಿ ಲಿಮಿಟೆಡ್ ಗೆ ಎಲ್‌ಒಇ ನೀಡುವ ವಿಚಾರವನ್ನು ಪರಿಗಣನೆಯು ಪರಿಶೀಲನೆಯಲ್ಲಿದೆ. ಖನಿಜ ಸಚಿವಾಲಯ ಮತ್ತು ಕಾನೂನು ಇಲಾಖೆಯ ಸೂಚನೆಗಳ ಆಧಾರದ ಮೇಲೆ ಎಸಿಸಿ ಲಿಮಿಟೆಡ್ ಗೆ ಎಲ್ಒಇ ನೀಡಬೇಕೇ ಅಥವಾ ತಡೆಯಬೇಕೇ ಎಂಬ ಬಗ್ಗೆ ಸರ್ಕಾರದ ಅನುಮೋದನೆಗಾಗಿ ಕಡತ ಸಲ್ಲಿಸಿದೆ. ಸದ್ಯ ಈ ಕಡತವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ (ಗಣಿ) ಶಾಖೆಯಲ್ಲಿದೆ.
ಈ ಮಧ್ಯೆ ಪ್ರಸ್ತುತ ಪ್ರಕರಣದಲ್ಲಿ ಪ್ರಧಾನ ಬಿಡ್‌ದಾರರಾದ ಎಸಿಸಿ ಲಿಮಿಟೆಡ್‌ಗೆ 2025ರ ಡಿಸೆಂಬರ್ 4ರಂದೇ ಪತ್ರ ನೀಡಲಾಗಿದೆ. ಬಿಡ್‌ದಾರರು 45 ದಿನಗಳ ಒಳಗಾಗಿ, ಅಂದರೆ 2026ರ ಜನವರಿ 15ರೊಳಗೇ 15.01.2026 ರಂದು ಮುಂಗಡ ಪಾವತಿ ಮತ್ತು ಕಾರ್ಯಕ್ಷತೆ ಭದ್ರತಾ ಪತ್ರವನ್ನು ಸಲ್ಲಿಸಬೇಕಿತ್ತು.
ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಚೇರಿಯು ಎಸಿಸಿ ಲಿಮಿಟೆಡ್‌ನ ದಾಖಲೆ ಪತ್ರಗಳನ್ನು 2026ರ ಜನವರಿ 17ರಂದು ಸ್ವೀಕರಿಸಿತ್ತು. ಉಳಿದ ಮೊತ್ತವನ್ನು ಎರಡನೇ ಕಂತಾಗಿ ಪಾವತಿಸಬೇಕು ಎಂದಿದೆ.
ಅಲ್ಲದೇ ಲೆಟರ್ ಆಫ್ ಇಂಟೆಂಟ್‌ನ್ನು 2026ರ ಫೆ.16ರೊಳಗೆ ನೀಡಬೇಕು. ಇಲ್ಲವಾದಲ್ಲಿ ಪ್ರಧಾನ ಬಿಡ್‌ದಾರರಿಗೆ ಎರಡನೇ ಮುಂಗಡ ಪಾವತಿಯಲ್ಲಿ ಶೇ.5ರಷ್ಟು ಕಡಿತ ಅನ್ವಯಿಸುತ್ತದೆ. ಕಡಿತವಿಲ್ಲದೆ ಎರಡನೇ ಮುಂಗಡ ಪಾವತಿ ರೂ. 28,81,28,376 ರು ಇದೆ. ಶೇ. 5ರಷ್ಟು ಕಡಿತ ಮಾಡಿದರೇ 5% ಕಡಿತ ಮಾಡಿದರೆ, 27,37,21,957/- (28,81,28,376 – 1,44,06,419) ಆಗಲಿದೆ.
ಸರ್ಕಾರವು ಗಣಿ (ಹರಾಜು) ನಿಯಮಗಳು 2015 ಅಡಿಯಲ್ಲಿ ತನ್ನ ಅಧಿಕಾರಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದೆ. ಮತ್ತು ಗಣಿ, ಭೂ ವಿಜ್ಞಾನ ಇಲಾಖೆಯು ತನ್ನ ಸಾಮಾನ್ಯ ಕ್ರಮದಂತೆ ಲೆಟ್ ಆಫ್ ಇಂಟೆಂಟ್‌ನ್ನು ನೀಡುತ್ತಿದೆ. ಆದರೆ , ಪ್ರಸ್ತುತ ಚೆಮನೂರು ಬ್ಲಾಕ್ ಪ್ರಕರಣದಲ್ಲಿ ಪ್ರಧಾನ ಬಿಡ್‌ದಾರರಾಗಿರುವ ಎಸಿಸಿ ಕಂಪನಿಯು ಮತ್ತೊಂದು ಪ್ರಕರಣದಲ್ಲಿ ದೊಡ್ಡ ಬಾಕಿ ಮತ್ತು ದಂಡಗಳನ್ನು ಉಳಿಸಿಕೊಂಡಿದೆ. ಅಂದರೆ (M L No 2641) ಸಂಬಂಧಿಸಿದಂತೆ ರೂ. 367,51,43,385/- ಮತ್ತು ರೂ. 482,69,65,137/- ಕ್ರಮವಾಗಿ ಬಾಕಿಯಿದೆ. ಈ ವಿಷಯಗಳು ಪ್ರಸ್ತುತ ಕರ್ನಾಟಕದ ಹೈಕೋರ್ಟ್ ಮುಂದೆ ವಿಚಾರಣೆಯಲ್ಲಿದೆ. ಇನ್ನೂ ಇತ್ಯರ್ಥಗೊಂಡಿಲ್ಲ. ಸರ್ಕಾರವು (ಪತ್ರ ಸಂಖ್ಯೆ: CI14CMC2024) 2026ರ ಫೆಬ್ರವರಿ 12ರಂದು ಅಡ್ವೋಕೇಟ್ ಜನರಲ್ ಮತ್ತು ಕಾನೂನು ಅಭಿಪ್ರಾಯವನ್ನು ಕೋರಿತ್ತು.
ಕಾನೂನು ಇಲಾಖೆಯ ಅಭಿಪ್ರಾಯವೇನು?
ಪ್ರಸ್ತುತ ಇಲಾಖೆಯ ಕ್ರಮವು ಕೇವಲ ಹಣದ ದಂಡಕ್ಕೆ ಮಾತ್ರ ಸೀಮಿತವಾಗಿರುವುದು ಕಾನೂನುಬದ್ಧವಾಗಿ ಅಪೂರ್ಣವಾಗಿದೆ. ಆದ್ದರಿಂದ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21(1) ಮತ್ತು 21(2) ಅಡಿಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಕಾನೂನು ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದರಂತೆ, ಆಡಳಿತ ಇಲಾಖೆ ತಕ್ಷಣವೇ ಅಕ್ರಮವಾಗಿ ತೆಗೆದ ಖನಿಜದ ಶೇ. 100 ಮೌಲ್ಯ, ರಾಯಲ್ಟಿ, ಬಡ್ಡಿ ಮತ್ತು ದಂಡವನ್ನು ಕಾನೂನು ಪ್ರಕಾರ ವಸೂಲಿಸಬೇಕು ಮತ್ತು ಸಂಬಂಧಿಸಿದ ಕ್ರಿಮಿನಲ್ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸ್ಪಷ್ಟವಾಗಿ ನೀಡಿದೆ.
‘ಹಣಕಾಸು ಪರಿಣಾಮಗಳು ಮತ್ತು ಹರಾಜು/ಟೆಂಡರ್ ಪ್ರಕ್ರಿಯೆಗಳ ಹಿನ್ನೆಲೆ ಗಮನಿಸಿ, ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು. ಎಸಿಸಿ ಲಿಮಿಟೆಡ್‌ನ್ನು ಭವಿಷ್ಯದ ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಹಾಗೂ ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರಿಂದ, ಕಾನೂನುಬದ್ಧ ಬಾಧ್ಯತೆಗಳನ್ನು ಸಂಪೂರ್ಣವಾಗಿ ಪಾಲಿಸುವ ತನಕ, ನಿರ್ಬಂಧಿಸಬಹುದು ಎಂದೂ ಹೇಳಿದೆ.
‘ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಆದೇಶಗಳಿಗಾಗಿ ಕಡತವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಲೆಟರ್ ಅಫ್ ಇಂಟೆಂಟ್‌ನ್ನು LOI (Letter of Intent) ಅನ್ನು ತಡೆಹಿಡಿಯಬೇಕೇ ಅಥವಾ ಮುಂದುವರಿಸಬೇಕೇ ಎಂಬುದರ ಬಗ್ಗೆ ನಿರ್ದೇಶನಗಳನ್ನು ಕೋರುತ್ತೇವೆ, ಏಕೆಂದರೆ ಕಂಪನಿಗೆ ಹೆಚ್ಚಿನ ಬಾಕಿಗಳಿವೆ,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸರ್ಕಾರವನ್ನು ಕೋರಿರುವುದು ತಿಳಿದು ಬಂದಿದೆ.
ಟೆಂಡರ್ ದಸ್ತಾವೇಜಿನ ಕ್ಲಾಸ್ 10.1 (b) ಪ್ರಕಾರ ಎಲ್‌ಒಇ ನೀಡಲು ಅತ್ಯಧಿಕ ಅಂತಿಮ ಬೆಲೆ ಸಲ್ಲಿಸಿದ ಅರ್ಹ ಬಿಡ್ದಾರರನ್ನು ಹರಾಜು ಪೂರ್ಣಗೊಂಡ ತಕ್ಷಣ “ಪ್ರಧಾನ ಬಿಡ್‌ದಾರ’ ಎಂದು ಘೋಷಿಸಲಾಗುತ್ತದೆ (Auction Rules Rule 9(9)(iii) ಪ್ರಕಾರ). ರಾಜ್ಯ ಸರ್ಕಾರವು ಎಲ್‌ಒಇ ನ್ನು ಕೇವಲ ಮೊದಲ ಮುಂಗಡ ಪಾವತಿ (ರೂ. 28,81,28,376/-) ಸ್ವೀಕರಿಸಿದ ನಂತರ ಮಾತ್ರ ನೀಡಬೇಕು. ಈ ಮೊತ್ತವನ್ನು ಪ್ರಾಧಾನ್ಯ ಬಿಡ್ದಾರನಾಗಿ ಘೋಷಿಸಿದ ದಿನಾಂಕದಿಂದ 15 ದಿನಗಳೊಳಗೆ ಪಾವತಿಸಬೇಕು. ಸರ್ಕಾರವು ಸೂಕ್ತ ಕಾರಣಗಳನ್ನು ದಾಖಲಿಸಿ, ಈ 15 ದಿನಗಳ ಅವಧಿಯನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಬಹುದು.
ಇತ್ತೀಚೆಗೆ ಗಣಿ (ಹರಾಜು) ನಿಯಮಗಳನ್ನು 2025ರ ಅಕ್ಟೋಬರ್ 17ರಂದು ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ನಿಯಮಗಳ ಪ್ರಕಾರ, ಪ್ರಧಾನ ಬಿಡ್‌ದಾರನು ಮೊದಲ ಮುಂಗಡ ಪಾವತಿ ಮತ್ತು ಕಾರ್ಯಕ್ಷಮತಾ ಭದ್ರತೆಯನ್ನು 45 ದಿನಗಳೊಳಗೆ ಸಲ್ಲಿಸಬೇಕು. ಮೊದಲ ಕಂತು ಪಾವತಿ ಮತ್ತು ಕಾರ್ಯಕ್ಷಮತಾ ಭದ್ರತೆ ಸ್ವೀಕರಿಸಿದ ನಂತರ, ರಾಜ್ಯ ಸರ್ಕಾರವು 30 ದಿನಗಳೊಳಗೆ ಎಲ್‌ಒಇ ಅನ್ನು ನೀಡಬೇಕು.
ಗಣಿ ಹರಾಜು ನಿಯಮಗಳ 10 (2ಎ)ನಲ್ಲೇನಿದೆ?
“(2A) ರಾಜ್ಯ ಸರ್ಕಾರವು ಉಪನಿಯಮ (2) ನಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಪ್ರಧಾನ ಬಿಡ್‌ದಾರರಿಗೆ ಲೆಟರ್ ಆಫ್ ಇಂಟೆಂಟ್ ನೀಡದಿದ್ದಲ್ಲಿ, ಉಪನಿಯಮ (3) ರ ಕ್ಲಾಸ್ (b) ಅಡಿಯಲ್ಲಿ ಪಾವತಿಸಬೇಕಾದ ಎರಡನೇ ಮುಂಗಡ ಕಂತಿನ ಮೊತ್ತವು ಪ್ರತಿ ತಿಂಗಳು ಅಥವಾ ಅದರ ಭಾಗದ ವಿಳಂಬಕ್ಕೆ 5% ರಷ್ಟು ಕಡಿತಗೊಳ್ಳುತ್ತದೆ. ಮತ್ತು ಪ್ರಧಾನ ಬಿಡ್‌ದಾರರು ಉಳಿದ ಮೊತ್ತವನ್ನು ಮಾತ್ರ ಎರಡನೇ ಕಂತಾಗಿ ಪಾವತಿಸಬೇಕು.” ಎಂದಿದೆ.
ಎಸಿಸಿ ಲಿಮಿಟೆಡ್ 2026ರ ಜನವರಿ 15ರಂದೇ ಪತ್ರದ ಮೂಲಕ ರೂ. 28,81,28,376/- ಮೊತ್ತದ ಮೊದಲ ಮುಂಗಡ ಕಂತು ಪಾವತಿಸಿದೆ (Reference No: MG0126004311753011). ಜೊತೆಗೆ ರೂ. 28,81,28,376/- ಕಾರ್ಯಕ್ಷಮತಾ ಭದ್ರತೆ ಸಲ್ಲಿಸಿದೆ. ( BG No: 560GT02260130001 )ಮೂಲಕ ರೂ. 1,44,06,41,880/- ಮೌಲ್ಯದ ಭದ್ರತೆ ನೀಡಿದೆ.
ಹೀಗಾಗಿ 2026ರ ಫೆ.16ರೊಳಗೇ ಲೆಟರ್ ಅಫ್ ಇಂಟೆಂಟ್‌ನ್ನು ನೀಡಬೇಕು. ಇಲ್ಲವಾದರೆ ಪ್ರಧಾನ ಬಿಡ್‌ದಾರರಿಗೆ ಎರಡನೇ ಮುಂಗಡ ಪಾವತಿಯಲ್ಲಿ ಶೇ. 5 ಕಡಿತ ಅನ್ವಯಿಸುತ್ತದೆ. ಕಡಿತವಿಲ್ಲದೆ ಎರಡನೇ ಮುಂಗಡ ಪಾವತಿ ರೂ. 28,81,28,376/- ಆಗಿರುತ್ತದೆ. 5% ಕಡಿತ ಮಾಡಿದರೆ, ಅದು ರೂ. 27,37,21,957/- (28,81,28,376 – 1,44,06,419) ಆಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ಲೆಕ್ಕವನ್ನು ಮುಂದಿಟ್ಟಿದೆ.
ಟೆಂಡರ್ ದಸ್ತಾವೇಜಿನ ಕ್ಲಾಸ್ 10.2 ಪ್ರಕಾರ, ಪ್ರಧಾನ ಬಿಡ್‌ದಾರರನ್ನು “ಯಶಸ್ವಿ ಬಿಡ್‌ದಾರ’ ಎಂದು ಪರಿಗಣಿಸಲಾಗುತ್ತದೆ. ಹಲವು ಷರತ್ತುಗಳನ್ನು ವಿಧಿಸಿದೆ.
ಅರ್ಹತಾ ನಿಯಮಗಳು ಮತ್ತು ಷರತ್ತುಗಳನ್ನು ನಿರಂತರವಾಗಿ ಪಾಲಿಸುವುದು, ಮುಂಗಡ ಪಾವತಿಯ ಎರಡನೇ ಕಂತಿನ ಪಾವತಿ ರೂ. 28,81,28,376/- (ಭಾರತೀಯ ರೂಪಾಯಿ ಇಪ್ಪತ್ತೆಂಟು ಕೋಟಿ ಎಂಭತ್ತೊಂದು ಲಕ್ಷ ಇಪ್ಪತ್ತೆಂಟು ಸಾವಿರ ಮೂರು ನೂರು ಎಪ್ಪತ್ತಾರು ಮಾತ್ರ), ಹರಾಜು ನಿಯಮಗಳ ಪ್ರಕಾರ ರದ್ದುಪಡಿಸಲಾಗದ (irrevocable) ಮತ್ತು ಷರತ್ತು ರಹಿತ ಕಾರ್ಯಕ್ಷಮತಾ ಭದ್ರತೆಯನ್ನು (Performance Security) ಒದಗಿಸಬೇಕು.
ಈ ಭದ್ರತೆ ಎಂಡಿಪಿಎ ನಲ್ಲಿ ನಿರ್ದಿಷ್ಟಪಡಿಸಿದ ಅವಧಿಗೆ ಮಾನ್ಯವಾಗಿದೆ. ರೂ. 1,44,06,41,880/- (ಭಾರತೀಯ ರೂಪಾಯಿ ನೂರು ನಾಲ್ವತ್ತ್ನಾಲ್ಕು ಕೋಟಿ ಆರು ಲಕ್ಷ ನಲವತ್ತೊಂದು ಸಾವಿರ ಎಂಟು ನೂರು ಎಂಭತ್ತು ಮಾತ್ರ) ಮೊತ್ತಕ್ಕೆ ಸಮನಾಗಿರಬೇಕು. ಹರಾಜಿನ ನಿಯಮಗಳ 12 ರ ಉಪನಿಯಮ (1) ಪ್ರಕಾರ, ಕಾರ್ಯಕ್ಷಮತಾ ಭದ್ರತೆಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು, ಇದರಿಂದ ಅದು ಮರುಮೌಲ್ಯಮಾಪನಗೊಂಡ ಸಂಪನ್ಮೂಲಗಳ ಮೌಲ್ಯದ 0.50% ಗೆ ಹೊಂದಿಕೊಳ್ಳುತ್ತದೆ. ಹೊಸದಾಗಿ ಪತ್ತೆಯಾದ ಖನಿಜಗಳ ಮೌಲ್ಯವನ್ನೂ ಸೇರಿಸಬಹುದು ಎಂದು ಹೇಳಿದೆ.
ಆದರೆ, ಕಾರ್ಯಕ್ಷಮತಾ ಭದ್ರತೆಯ ಮೊತ್ತ ರೂ. 500,00,00,000/- (ಐದು ನೂರು ಕೋಟಿ) ಮೀರಬಾರದು. ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ನೀಡಿದರೆ, ಅದೇ ಮೌಲ್ಯದ ಮತ್ತೊಂದು ಬ್ಯಾಂಕ್ ಗ್ಯಾರಂಟಿಯಿಂದ ಬದಲಾಯಿಸಬೇಕು. ಭದ್ರತೆ ಠೇವಣಿಯಾಗಿ ನೀಡಿದಲ್ಲಿ, ಅಗತ್ಯವಿದ್ದರೆ ಹೆಚ್ಚುವರಿ ಮೊತ್ತವನ್ನು ಠೇವಣಿಯಾಗಿ ಸಲ್ಲಿಸಬೇಕು ಎಂದಿದೆ.
ಗಣಿಗಾರಿಕಾ ಯೋಜನೆಗೆ ಸಂಬಂಧಿಸಿದಂತೆ ಕಾಯ್ದೆಯ ಸೆಕ್ಷನ್ 5(2)(b) ಪ್ರಕಾರ ನಿಬಂಧನೆಗಳನ್ನು ಪೂರೈಸಬೇಕು. ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಸೂಚಿಸುವ ಇತರೆ ಷರತ್ತುಗಳನ್ನು ಪೂರೈಸಬೇಕು. ಕರ್ನಾಟಕ ಸರ್ಕಾರಕ್ಕೆ ಗಣಿಗಾರಿಕಾ ಚಟುವಟಿಕೆಗಳಿಂದ ಉಂಟಾದ ಎಲ್ಲಾ ಬಾಕಿಗಳನ್ನು ಪಾವತಿಸಿರಬೇಕು. ಹಿಂದಿನ ಅವಧಿಯಲ್ಲಿ ಬಾಕಿಗಳು ಇದ್ದರೆ, MMDR ಕಾಯ್ದೆ 1957 ಮತ್ತು ಸಂಬಂಧಿತ ನಿಯಮಗಳ ಪ್ರಕಾರ ಅವುಗಳನ್ನು ಪಾವತಿಸಬೇಕು. ಜೊತೆಗೆ, ಭವಿಷ್ಯದಲ್ಲಿ ಸರ್ಕಾರ ನಿರ್ಧರಿಸುವ ಬಾಕಿಗಳನ್ನೂ ಪಾವತಿಸುವುದಾಗಿ ಭರವಸೆ ನೀಡಬೇಕು ಎಂದು ಹೇಳಿದೆ.
ಎಂಎಂಡಿಆರ್ ಕಾಯ್ದೆ, 1957 ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ ಪಾವತಿಸಬೇಕಾದ ಬಾಕಿಗಳನ್ನು ಪಾವತಿಸಬೇಕು. ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಉಂಟಾದ ಬಾಕಿಗಳು ಹಿಂದಿನ ಅವಧಿಗೆ ಸಂಬಂಧಿಸಿದಂತೆಯಾದರೆ, ಅವುಗಳನ್ನು ಕೂಡ ಪಾವತಿಸಬೇಕು, ಭವಿಷ್ಯದಲ್ಲಿ ನಿರ್ಧರಿಸಲ್ಪಡುವ ಬಾಕಿಗಳನ್ನೂ ಪಾವತಿಸುವ ಹೊಣೆಗಾರಿಕೆ ಹೊಂದಿರಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
ಲೆಟರ್ ಅಫ್ ಇಂಟೆಂಟ್ ನೀಡಿದ ನಂತರ 60 ದಿನಗಳೊಳಗೆ ಸರ್ಕಾರವು ಕೈಗೊಂಡ ತಯಾರಿಕಾ ಕಾರ್ಯಗಳಿಗೆ ಸಂಬಂಧಿಸಿದಂತೆ ಖರ್ಚಾದ ರೂ. 22,06,600/- (ಭಾರತೀಯ ರೂಪಾಯಿ ಇಪ್ಪತ್ತೆರಡು ಲಕ್ಷ ಆರು ಸಾವಿರ ಆರು ನೂರು ಮಾತ್ರ) ಮೊತ್ತವನ್ನು ಕರ್ನಾಟಕ ಸರ್ಕಾರಕ್ಕೆ ಪಾವತಿಸಿರಬೇಕು.
‘ಆದ್ದರಿಂದ, ಆದೇಶಗಳಿಗಾಗಿ ಕಡತವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ – LOI ಅನ್ನು ನೀಡಬೇಕೇ ಅಥವಾ ತಡೆಹಿಡಿಯಬೇಕೇ ಎಂಬುದಾಗಿ ನಿರ್ದೇಶನ ನೀಡಬೇಕು. ಕಂಡಿಕೆ 55ರಲ್ಲಿ ವಿವರಿಸಿದಂತೆ ಎಸಿಸಿ ಲಿಮಿಟೆಡ್ ಗೆ ಸಂಬಂಧಿಸಿದಂತೆ ಹರಾಜು ಮಾಡಿದ ಚಮ್ಮನೂರು ಸುಣ್ಣದ ಕಲ್ಲು ಗಣಿ ಬ್ಲಾಕ್ ಗೆ ಲೆಟರ್ ಆಫ್ ಇಂಟೆಂಟ್ ನೀಡುವ ವಿಷಯವಾಗಿ ಸರ್ಕಾರದ ನಿರ್ಧಾರಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ,’ ಎಂದು ಕಡತದ ಟಿಪ್ಪಣಿ ಹಾಳೆಯಲ್ಲಿ ಕೋರಿರುವುದು ತಿಳಿದು ಬಂದಿದೆ.
ಭಾರತ ಸರ್ಕಾರದ ಗಣಿಗಾರಿಕೆ ಸಚಿವಾಲಯದಿಂದ ಹೊರಡಿಸಲಾದ ಇತ್ತೀಚಿನ ನಿರ್ದೇಶನಗಳು ಹಾಗೂ ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ, ಎಸಿಸಿ ಲಿಮಿಟೆಡ್‌ಗೆ ಎಲ್‌ಒಇ ನೀಡಬೇಕೇ ಅಥವಾ LOI ಅನ್ನು ತಡೆಹಿಡಿಯಬೇಕೇ ಎಂಬುದಾಗಿ ಸರ್ಕಾರದ ಅನುಮೋದನೆ ಕೋರುತ್ತೇವೆ,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಅವರು 2026ರ ಫೆ.13ರಂದೇ ಕೋರಿದ್ದರು.








