Tuesday | August 25, 2026 |

ಆಂಗ್ಲ ಮಾಧ್ಯಮ; ಆದೇಶ ಹಿಂಪಡೆಯಲು ಒಪ್ಪದ ಇಲಾಖೆ, ಮಕ್ಕಳ ಹಕ್ಕು 2015ರ ಮಸೂದೆ ತಿದ್ದುಪಡಿ ಕೈಬಿಡಲಿದೆಯೇ?

ಬೆಂಗಳೂರು; ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲು ಹೊರಡಿಸಿರುವ ಆದೇಶವನ್ನು ಹಿಂಪಡೆಯದಿರಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್‌ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರವು ತನ್ನ ನಿಲುವುನ್ನು ಸಮರ್ಥಿಸಿಕೊಂಡಿದೆ.

 

ಅದೇ ರೀತಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ 2015ನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ ಎಂದು ಪ್ರತಿಪಾದಿಸಿದೆ. ಹಾಗೂ ಈ ತಿದ್ದುಪಡಿ ಮಸೂದೆಯನ್ನು ಕೈಬಿಡಲು ಸಚಿವ ಮಧು ಬಂಗಾರಪ್ಪ ಅವರಿಗೆ ಕಡತ ಮಂಡಿಸಿದೆ.

 

ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಿತ್ತು. ಆದರೀಗ ಸರ್ಕಾರವು ತನ್ನ ನಿಲುವಿಗೆ ಬದ್ಧವಾಗಿರುವುದರಿಂದ ಪ್ರಾಧಿಕಾರಕ್ಕೆ ಮುಖಭಂಗವುಂಟಾದಂತಿದೆ.

 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2025ರ ಜುಲೈ 4ರಂದು ಬರೆದಿದ್ದ ಪತ್ರದಲ್ಲಿನ ಅಂಶಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 8 ಪುಟಗಳ ಅನುಪಾಲನ ಉತ್ತರವನ್ನು ಸಿದ್ಧಪಡಿಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸಿದ್ಧಪಡಿಸಿರುವ ಅನುಪಾಲನ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಲಾಖೆಯ ಉತ್ತರದಲ್ಲೇನಿದೆ?

 

ಸರ್ಕಾರವು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸುವುದಕ್ಕಾಗಿ ಮಾತೃಭಾಷೆಯನ್ನು ಹೇರುವಂತಿಲ್ಲ ಎಂದು ಸುಪ್ರೀ ಕೋರ್ಟ್‌ (ಸಿವಿಲ್‌ ಅಪೀಲು ಸಂಖ್ಯೆ; 5166, 5190/2013 ದಿನಾಂಕ 06/05/2014) ತೀರ್ಪು ನೀಡಿದೆ.
ರಾಜ್ಯದಲ್ಲಿ ಹಂತ ಹಂತವಾಗಿ ಈವರೆಗೆ ಒಟ್ಟು 7,137 ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಇರುವ ಕನ್ನಡ, ಇತರೆ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಆರಂಭಿಸಲು ಈಗಾಗಲೇ ಅಗತ್ಯ ಕ್ರಮ ವಹಿಸಿರುತ್ತದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರಿಂದ, ಸಾರ್ವಜನಿಕರಿಂದ ಮತ್ತು ಜನಪ್ರತಿನಿಧಿಗಳಿಂದ ಉತ್ತಮ ಪ್ರತಿಕ್ರಿಯೆ ಸ್ಪಂದನೆ ವ್ಯಕ್ತವಾಗಿದೆ ಎಂದು ಸಮರ್ಥಿಸಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.

 

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಜತೆಗೆ ಆಂಗ್ಲ ಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ (ಕಂಡಿಕೆ 113) ಘೋಷಿಸಿದ್ದಾರೆ.

 

ಅದರಂತೆ ಸರ್ಕಾರವು (ಆದೇಶ ಸಂಖ್ಯೆ ಇಪಿ 231 ಪಿಜಿಸಿ 2025, 02.07.2025) ಮತ್ತು ರಾಜ್ಯದ ಒಟ್ಟು 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಯಿಂದ ಪ್ರಸ್ತುತ ನಡೆಯುತ್ತಿರುವ ಕನ್ನಡ, ಇತರೆ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಷರತ್ತುಬದ್ಧವಾಗಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

 

ಈ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕನ್ನಡ, ಇತರೆ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮದಲ್ಲಿ ಸಹ ವ್ಯಾಸಂಗ ಮಾಡುತ್ತಾರೆ. ಇದರಿಂದಾಗಿ ಕನ್ನಡ ಭಾಷೆ ಮತ್ತು ಮಾಧ್ಯಮದ ಕಲಿಕೆಗೆ ಹಾಗೂ ಅಸ್ಮಿತೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದು ಪ್ರತಿಪಾದಿಸಿರುವುದು ಗೊತ್ತಾಗಿದೆ.

 

ಮುಂದುವರೆದು ಪ್ರಸ್ತುತ ಇರುವ ಸ್ಥಳೀಯ, ಜಾಗತಿಕ ಸನ್ನಿವೇಶಗಳು, ಸ್ಪರ್ಧಾತ್ಮಕತೆ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಮಾತೃ ಭಾಷೆಯ ಶಿಕ್ಷಣದೊಂದಿಗೆ ಆಂಗ್ಲ ಭಾಷೆಯ ಕಲಿಕೆಯ ಅಗತ್ಯವಿರುವುರಿಂದ ರಾಜ್ಯದ ಮಕ್ಕಳನ್ನು ಸನ್ನದ್ಧುಗೊಳಿಸಲು ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸಿ ಅನುಷ್ಠಾನಗೊಳಿಸಿದೆ.

 

‘ಇದನ್ನೀಗ ಹಿಂಪಡೆದಲ್ಲಿ ಹಿನ್ನಡೆಯುಂಟಾಗುತ್ತದೆ. ಆದ್ದರಿಂದ ಈಗಾಗಲೇ ಪ್ರಾರಂಭಿಸಿರುವ ದ್ವಿಭಾಷಾ ಮಾಧ್ಯಮದ ತರಗತಿಗಳನ್ನು ಮುಂದುವರೆಸುವುದು ಸೂಕ್ತವಾಗಿರುತ್ತದೆ,’ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾಗಿದ್ದ ಎಸ್‌ ಜಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯು ಮಾಡಿದ್ದ 21 ಶಿಫಾರಸ್ಸುಗಳ ಪೈಕಿ 18 ಶಿಫಾರಸ್ಸುಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದೆ. ಉಳಿದ 3 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ, ಸಾಕ್ಷರತೆ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಗಳ ಹಂತದಲ್ಲಿ ಕ್ರಮವಹಿಸಲಾಗುವುದು ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ರಾಜ್ಯ ಸರ್ಕಾರವು 1994ರ ಏಪ್ರಿಲ್‌ 29ರಂದೇ ಭಾಷಾ ನೀತಿಯನ್ನು ರೂಪಿಸಿ ಆದೇಶ ಹೊರಡಿಸಿದೆ. ಇದರ ಪ್ರಕಾರ 1994-95ನೇ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರದಿಂದ ಅಂಗೀಕೃತವಾದ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಶಿಕ್ಷಣ ಮಾಧ್ಯಮವು ಮಗುವಿನ ಮಾತೃಭಾಷೆ ಅಥವಾ ಕನ್ನಡ ಭಾಷೆಯೇ ಆಗಿರಬೇಕು ಎಂದು ಆದೇಶಿಸಿತ್ತು. ಇದನ್ನು ಕರ್ನಾಟಕ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಕುರಿತು 2008ರಂದು ನ್ಯಾಯಾಲಯವು ಭಾಷಾ ನೀತಿಗೆ ಹೊರಡಿಸಿದ್ದ 1994ರ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ತಿಳಿಸಿದೆ.

 

2008ರಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪು, ರಾಜ್ಯದ ಭಾಷಾ ನೀತಿಗೆ ಬಾಧಕವಾಗಿದೆ. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿಯೂ (ಎಸ್‌ಎಲ್‌ಪಿ 290/2009) ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಸರ್ವೋಚ್ಛ ನ್ಯಾಯಾಲಯವು 2009ರ ಜುಲೈ 21ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಯಥಾ ಸ್ಥಿತಿ ಕಾಯ್ದುಕೊಳ್ಳಳು ಸೂಚಿಸಿದೆ. ನಂತರ 2012ರ ಜನವರಿ 6ರಂದು ಹೊರಡಿಸಿದ್ದ ಅಂತಿಮ ಆದೇಶದಲ್ಲಿ ಎಸ್‌ಎಲ್‌ಪಿಯನ್ನು ವಜಾಗೊಳಿಸಿದೆ.

 

ಈ ಆದೇಶವನ್ನೂ ಸರ್ಕಾರವು ಪ್ರಶ್ನಿಸಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಸರ್ಕಾರವು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸುವುದಕ್ಕಾಗಿ ಮಾತೃಭಾಷೆಯನ್ನು ಹೇರುವಂತಿಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ 2015ನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ. ಹೀಗಾಗಿ ಈ ತಿದ್ದುಪಡಿ ಮಸೂದೆಯನ್ನು ಕೈಬಿಡುವ ಸಂಬಂಧ ಸಚಿವರಿಗೆ ಕಡತವನ್ನು ಮಂಡಿಸಿದೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ರಾಜ್ಯದಲ್ಲಿ ಪ್ರಸ್ತುತ 41,735 ಸರ್ಕಾರಿ ಶಾಲೆಗಳು, ಒಟ್ಟು 5,674 ಅನುದಾನಿತ ಶಾಲೆಗಳು, 4,777 ಅನುದಾನ ರಹಿತ ಸಾಲೆ ಮತ್ತು ಒಟ್ಟು 262 ಇತರೆ ಶಾಲೆಗಳು ಸೇರಿದಂತೆ ಒಟ್ಟು 52,448 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿವೆ.

 

ರಾಜ್ಯ ಸರ್ಕಾರದ ನಿರ್ಧಾರ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಕನ್ನಡವನ್ನು ಬದಿಗಿಡಲಾಗುತ್ತಿರುವ ಈ ಉಪಕ್ರಮವನ್ನು ಕೆಡಿಎ ಒಪ್ಪುವುದಿಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.

Hot this week

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...
Please Scan to make Your Contribution

Topics

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

Related Articles

Popular Categories

error: Content is protected !!