ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು (ಮತಾಂತರ ನಿಷೇಧ ಕಾಯ್ದೆ ) ರದ್ದುಗೊಳಿಸುವ ಭಾಗವಾಗಿ ಈ ವಿಧೇಯಕವನ್ನು ಹಿಂಪಡೆಯುವ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರವು ಸಿದ್ಧಪಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2023 (ನಿರಸನ) ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2023 (ನಿರಸನ)ವನ್ನು ಮಂಡಿಸಬೇಕು ಎಂದು ಗೃಹ ಸಚಿವರು ಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರಾದರೂ 2026ರ ಆಗಸ್ಟ್ನಲ್ಲಿ ನಡೆದಿದ್ದ ವಿಧಾನಮಂಡಲದಲ್ಲಿ ಮಂಡನೆಯಾಗಿರಲಿಲ್ಲ. ಹೀಗಾಗಿ ಈ ವಿಧೇಯಕವನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಅದೇ ರೀತಿ ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವ ಸಂಬಂಧ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಯು ಪರಿಶೀಲಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಸಂಬಂಧಿಸಿದ ಕಡತವನ್ನು ಹಿಂದಿನ ಗೃಹ ಸಚಿವರ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲಿಸಲಾಗಿತ್ತು. ಆದರೆ ನೂತನ ಮಂತ್ರಿಮಂಡಲ ರಚನೆಯಾಗಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಕಡತವನ್ನು ಪರಿಶೀಲಿಸಿದ್ದರಲ್ಲದೇ ಇದನ್ನು ಅವಶ್ಯವಿದ್ದಲ್ಲಿ ಮರು ಮಂಡಿಸಲು ಕೋರಿ ಕಡತವನ್ನು 2026ರ ಜೂನ್ 3ರಂದು ಹಿಂದಿರುಗಿಸಿದ್ದರು.
ನೂತನ ಮಂತ್ರಿಮಂಡಲ ರಚನೆಯಾದ ನಂತರ ಭೌತಿಕ ಕಡತವನ್ನು ಇ-ಆಫೀಸ್ ಗೆ ಪರಿವರ್ತಿಸಿ ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೂಲಕ ಮುಖ್ಯಮಂತ್ರಿಗೆ ಕಡತ ಸಲ್ಲಿಸಲಾಗಿದೆ. ಇದಾದ ನಂತರ ಮುಖ್ಯಮಂತ್ರಿಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಸಿ ಅವರು ಇತರೆ ರಾಜ್ಯಗಳ ಶಾಸಕಾಂಗದದಲ್ಲಿ ಇದೇ ರೀತಿಯ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಮಾಹಿತಿ ಪಡೆದಿದ್ದರು. ಅವುಗಳನ್ನು ಪರಿಶೀಲಿಸಿ ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಮೇಲೆ ಕೈಗೊಳ್ಳಬೇಕಾದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು 2026ರ ಜುಲೈ 15ರಂದು ಸೂಚಿಸಿದ್ದರು. ಅದೇ ರೀತಿ ಈ ಬಗ್ಗೆ ಡಿಜಿ ಮತ್ತು ಐಜಿಪಿ ಅವರಿಗೂ ಸಹ 2026ರ ಸೆ.7ರಂದು ಪತ್ರ ಬರೆಯಲಾಗಿತ್ತು. ಆದರೆ ಇದುವರೆಗೂ ಯಾವುದೇ ಮಾಹಿತಿಯು ಸರ್ಕಾರದಲ್ಲಿ ಸ್ವೀಕೃತವಾಗಿಲ್ಲ.
ಈ ವಿಧೇಯಕವಲ್ಲದೇ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020, ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳು-ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ 2022, ಮುಸ್ಲೀಮ್ ವರ್ಗಕ್ಕೆ ನಿಗದಿಪಡಿಸಿದ್ದ ಶೇ. 4ರಷ್ಟು ಮೀಸಲಾತಿಯನ್ನು ಪುನರ್ ವರ್ಗೀಕರಿಸುವ ಭಾಗವಾಗಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯ ಮರು ವರ್ಗೀಕರಣ ಕುರಿತು ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಯು ಚರ್ಚಿಸಲು ಮುಂದಾಗಿದೆ.
ಈ ಉಪ ಸಮಿತಿಯು ಇದೇ ನವೆಂಬರ್ 30ರಂದು ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಮಿತಿ ಸಭಾಂಗಣದಲ್ಲಿ ಚರ್ಚಿಸಲಿದೆ. ಈ ಸಂಬಂಧ ಒಳಾಡಳಿತ ಇಲಾಖೆ, ಪಶು ಸಂಗೋಪನೆ, ಮೀನಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಯು ಈ ಎಲ್ಲಾ ವಿಧೇಯಕಗಳ ಬಗ್ಗೆ ಪೂರಕ ಟಿಪ್ಪಣಿಗಳನ್ನು 2026ರ ನವೆಂಬರ್ 23 ಮತ್ತು 24ರಂದು ಒದಗಿಸಿದೆ.
ಕೆಲವೊಂದು ಮಹತ್ವದ ರಾಜಕೀಯ, ದೂರಗಾಮಿ ಪರಿಣಾಮ ಇರುವ ವಿಷಯಗಳು, ಅಂತರರಾಜ್ಯ ಹಾಗೂ ಕೇಂದ್ರ-ರಾಜ್ಯ ಸಂಬಂಧಿತ ಸೂಕ್ಷ್ಮಿ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ 10 ಮಂದಿ ಸಚಿವರು ಸದಸ್ಯರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ.
ಮತಾಂತರ ನಿಷೇಧ ಕಾಯ್ದೆಯ ಪ್ರಸ್ತುತ ಸ್ಥಿತಿ, ಪೂರಕ ಟಿಪ್ಪಣಿ, ಕಾಲಾನುಕ್ರಮದ ಘಟನಾವಳಿಗಳ ಮಾಹಿತಿ ಮತ್ತು ಹಲವು ದಾಖಲೆಗಳನ್ನು (ಹೆಚ್ಡಿ 460 ಎಸ್ಎಸ್ಟಿ 2021) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ರಾಜಕೀಯ ಶಾಖೆಗೆ 2026ರ ನವೆಂಬರ್ 23 ರಂದು ಸಲ್ಲಿಸಿದೆ.

ಒಳಾಡಳಿತ ಇಲಾಖೆಯ ಪೂರಕ ಟಿಪ್ಪಣಿಯಲ್ಲೇನಿದೆ?
ರಾಜ್ಯದ ವಿವಿಧ ಭಾಗಗಳಲ್ಲಿ ಬಲವಂತವಾಗಿ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಿ, ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗುವುದಲ್ಲದೇ ಸಾರ್ವಜನಿಕರ ರಕ್ಷಣೆ ಹೊಣೆ ಹೊತ್ತಿರುವ ಸಿಬ್ಬಂದಿಗಳಿಗೆ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿವೆ.
ನಮ್ಮ ರಾಜ್ಯದಲ್ಲೂ ಕೂಡ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳಲ್ಲಿ ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಯ್ದೆಯ ಕರಡನ್ನು ತಯಾರಿಸಿ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ಕಳಿಸಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ನಡವಳಿಯನ್ನು ರಾಜಕೀಯ ವ್ಯವಹಾರಗಳ ಸಂಪುಟ ಉಪ ಸಮಿತಿಗೆ ಸಲ್ಲಿಸಿರುವುದು ಗೊತ್ತಾಗಿದೆ.
ಅದೇ ರೀತಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022ನ್ನು ನಿರಸನಗೊಳಿಸುವ ಬಗ್ಗೆ ಕಡತ ಮಂಡಿಸಲು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅವರು ಸೂಚಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಮೂಲಕ ಕಡತವನ್ನು ಪರಿಶೀಲನಾ ಸಮಿತಿ ಮುಂದೆ ಮಂಡಿಸಿತ್ತು. ಈ ವಿಧೇಯಕದ ಕುರಿತು 2023ರ ಜೂನ್ 14ರಂದು ಪರಿಶೀಲನಾ ಸಮಿತಿಯಲ್ಲಿಯೂ ಚರ್ಚಿಸಲಾಗಿದೆ. ಸಚಿವರು ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರು ಅನುಮೋದಿಸಿದ್ದ ವಿಧೇಯಕದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಒಳಾಡಳಿತ ಇಲಾಖೆಗೆ ಕಡತ ರವಾನಿಸಿರುವುದು ಪೂರಕ ಟಿಪ್ಪಣಿಯಿಂದ ತಿಳಿದು ಬಂದಿದೆ.

ಅದರಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ (ನಿರಸನ) ವಿಧೇಯಕ-2023ನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು 2023ರ ಜೂನ್ 15ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ಈ ವಿಧೇಯಕವನ್ನು ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಗೃಹಸಚಿವರು ಪತ್ರದ ಮೂಲಕ ಸಭಾಧ್ಯಕ್ಷರಿಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಈ ವಿಧೇಯಕವು ವಿಧಾನಸಭೆಯಲ್ಲಿ ಮಂಡನೆಯಾಗಿಲ್ಲ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ತಿಳಿಸಿರುವುದನ್ನು ರಾಜಕೀಯ ವ್ಯವಹಾರಗಳ ಸಂಪುಟ ಉಪ ಸಮಿತಿಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.
ಈ ವಿಧೇಯಕದಲ್ಲಿ ಕೆಲವು ತಿದ್ದುಪಡಿ, ಮಾರ್ಪಾಡುಗಳು ಅವಶ್ಯಕವೆಂದು ಕಂಡು ಬಂದಿದೆ. ಈ ವಿಧೇಯಕವನ್ನು ಹಿಂಪಡೆಯಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೌಖಿಕ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022 (2022ರ ಕರ್ನಾಟಕ ಅಧಿನಿಯಮ ಸಂಖ್ಯೆ 25) 2022ರ ಮೇ 17ರಿಂದ ಜಾರಿಯಲ್ಲಿದೆ.

ಆಡಳಿತ ಇಲಾಖೆಯು ಈ ಅಧಿನಿಯಮದ ಉಪ ಬಂಧಗಳ ಅನ್ವಯ ನಿಯಮಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳಬಹುದು.

ಅಧಿನಿಯಮದ ಪ್ರಕರಣ 15ರಂತೆ ನಿಯಮಗಳನ್ನು ರಚಿಸಲು ಅಧಿಕಾರವಿದೆ.

ಈ ಬಗ್ಗೆ ಸೂಕ್ತ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಬೇಕಿದೆ ಎಂದು ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಜಾನುವಾರು ಹತ್ಯೆ ಪ್ರತಿಬಂಧಕ-ಸಂರಕ್ಷಣಾ ಅಧಿನಿಯಮದ ಪ್ರಸ್ತುತ ಸ್ಥಿತಿಯೇನು?
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ಕ್ಕೆ ಸಂಬಂಧಿಸಿದಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಪ್ರಸ್ತುತ ಸ್ಥಿತಿ ಮತ್ತು ಪೂರಕ ದಾಖಲೆಗಳನ್ನು 2026ರ ನವೆಂಬರ್ 21ರಂದು ಒದಗಿಸಿದೆ.


ಇಲಾಖೆಯು ಈ ವಿಧೇಯಕಕ್ಕೆ ಸಂಬಂಧಿಸಿದಂತೆ ನೀಡಿರುವ ಕಾಲಾನುಕ್ರಮ ಘಟನಾವಳಿಗಳ ಮಾಹಿತಿ ಪ್ರಕಾರ ಈ ಕಾಯ್ದೆ ಜಾರಿಯಿಂದ ಸಂರಕ್ಷಿಸಲ್ಪಡುವ ಜಾನುವಾರುಗಳನ್ನು ನಿರ್ವಹಣೆ ಮಾಡಲು ರಾಜ್ಯದಲ್ಲಿ ಒಟ್ಟು 100 ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಇದುವರೆಗೆ ರಾಜ್ಯದ 30 ಜಿಲ್ಲೆಗಳಲ್ಲಿ 36 ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲಾಗಿದೆ. 12 ಗೋ ಶಾಲೆಗಳು ನಿರ್ಮಾಣ ಹಂತದಲ್ಲಿರುವುದು ಗೊತ್ತಾಗಿದೆ.

ಪುಣ್ಯಕೋಟಿ ದತ್ತು ಯೋಜನೆಯಿಂದ 29.63 ಕೋಟಿ ದೇಣಿಗೆ ಸಂಗ್ರಹ
ಅದೇ ರೀತಿ ರ್ಸಾರಿ ಹಾಗೂ ಖಾಸಗಿ ಗೋ ಶಾಲೆಗಳಲ್ಲಿರುವ ಜಾನುವಾರುಗಳ ನಿರ್ವಹಣೆಗೆ ರಾಜ್ಯ ಸರ್ಕಾರವು ಪ್ರತಿ ವರ್ಷ 5 ಕೋಟಿ ಅನುದಾನ ನಿಗದಿಪಡಿಸಿದೆ. ಈ ಅನುದಾನದಲ್ಲಿ ಹೆಚ್ಚಿನ ಪ್ರಮಾಣದ ಅನುದಾನವು ಸರ್ಕಾರಿ ಗೋ ಶಾಲೆಳಿಗೆ ವೆಚ್ಚವಾಗುತ್ತಿದೆ. ಖಾಸಗಿ ಗೋ ಶಾಲೆಗಳಲ್ಲಿನ ಜಾನುವಾರುಗಳ ನಿರ್ವಹಣೆಗೆ ಅನುದಾನದ ಲಭ್ಯತೆಗೆ ಅನುಗುಣವಾಗಿ ಅನುದಾನ ನೀಡಲಾಗುತ್ತಿದೆ. ಪುಣ್ಯಕೋಟಿ ದತ್ತು ಯೋಜನೆಯ ಮೂಲಕ ಸಾರ್ವಜನಿಕರು ಮತ್ತು ಸರ್ಕಾರಿ ನೌಕರರು ಹಾಗೂ ಖಾಸಗಿ ಸಂಸ್ಥೆಗಳಿಂದ ಒಟ್ಟು 29,63,58,535 ರು ದೇಣಿಗೆ ಸಂಗ್ರಹಿಸಿದೆ. ಈ ಹಣದ ಮೂಲಕ 26,942 ಜಾನುವಾರುಗಳನ್ನು ದತ್ತು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಸಮಿತಿಗೆ ಒದಗಿಸಿರುವುದು ತಿಳಿದು ಬಂದಿದೆ.
14,535 ಜಾನುವಾರು, 2042 ವಾಹನ ವಶ
ಪ್ರಸ್ತುತ ರಾಜ್ಯದ 23 ಜಿಲ್ಲೆಗಳಲ್ಲಿರುವ 24 ಗೋ ಶಾಲೆಗಳಲ್ಲಿ ಒಟ್ಟು 1,600 ಜಾನುವಾರುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಈ ಕಾಯ್ದೆ ಜಾರಿಗೆ ಬಂದಾಗಿನಿಂದ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 2026ರ ಆಗಸ್ಟ್ವರೆಗೆ 14,535 ಜಾನುವಾರುಗಳನ್ನು ಹಾಗೂ 2,042 ವಾಹನಗಳನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.ಈ ಕಾಯ್ದೆ ಜಾರಿಯಾದ ನಂತರ ಈ ಕಾಯ್ದೆಯನ್ನು ರದ್ದುಗೊಳಿಸಲು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ ಎಂದು ಇಲಾಖೆಯು ವಿವರಿಸಿದೆ.

ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯವ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026ರ ನವೆಂಬರ್ 23ರಂದು ಮಾಹಿತಿ ಒದಗಿಸಿದೆ.


ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2022ರ ಡಿಸೆಂಬರ್ 21ರಂದು ನೀಡಿದ್ದ ಮಧ್ಯಂತರ ವರದಿ ಆಧರಿಸಿ ಮುಸ್ಲೀಮ್ ವರ್ಗಕ್ಕೆ ನಿಗದಿಪಡಿಸಿದ್ದ ಶೇ. 4ರಷ್ಟು ಮೀಸಲಾತಿಯನ್ನು ಪುನರ್ ವರ್ಗೀಕರಿಸಿತ್ತು. ಅಲ್ಲದೇ ಪ್ರವರ್ಗ 2 (ಸಿ) ಮತ್ತು 2(ಡಿ) ಎಂದು ಹೊಸದಾಗಿ ಸೃಜಿಸಿತ್ತು. ಪ್ರವರ್ಗ 2(ಸಿ) ಒಕ್ಕಲಿಗ ಸಮುದಾಯಕ್ಕೆ ಶೇ. 2ರಷ್ಟು ಮತ್ತು ಪ್ರವರ್ಗ 2 (ಡಿ) ವೀರಶೈವ ಲಿಂಗಾಯತ ಸಮುದಾಯಕ್ಕೆ ಶೇ. 2ರಂತೆ ಪುನರ್ ವರ್ಗೀಕರಿಸಿ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿದ್ದ ಗುಲಾಮ್ರ ಸುಲ್ ಮತ್ತು ಇತರರು ಸರ್ವೋಚ್ಛ ನ್ಯಾಯಾಲಯದಲ್ಲಿ (ಪ್ರಕರಣ ಸಂಖ್ಯೆ; ಡಬ್ಲ್ಯೂಪಿ (ಸಿವಿಲ್) 435/2023) ಹಾಗೂ ರಹಮತ್ ಉಲ್ಲಾ ಕೊತ್ವಾಲ್ ಮತ್ತು ಇತರರು (ಡಬ್ಲ್ಯೂ ಪಿ ಸಿವಿಲ್ ನಂ 468/2023) ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 2023ರ ಏಪ್ರಿಲ್ 25ರಂದು ವಿಚಾರಣೆ ನಡೆದಿತ್ತು. ಈ ವಿಚಾರಣೆಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಅವರು ಪರಿಷ್ಕೃತ ಪುನರ್ ವರ್ಗೀಕರಣದ ಆದೇಶ (ಸಂಖ್ಯೆ; ಹಿಂವಕ 135 ಬಿಸಿಎ 2023 ದಿನಾಂಕ 27-03-2023) ರ ಆದೇಶವನ್ನು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಳವಡಿಸಿಕೊಳ್ಳಲಾಗುವುದಿಲ್ಲವೆಂದು ಹೇಳಿಕೆ ನೀಡಿದ್ದರು.

ಅಲ್ಲದೇ ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಆದೇಶ (ಸಂಖ್ಯೆ ಸಕಿ 225 ಬಿಸಿಎ 2000 ದಿನಾಂಕ 30-03-2002) ನ್ನು ಮುಂದುವರೆಸಲಾಗುವುದು ಎಂದು ಹೇಳಿಕೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯು 2026ರ ಡಿಸೆಂಬರ್ 1ರಂದು ನಿಗದಿಪಡಿಸಿದೆ ಎಂಬ ಮಾಹಿತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಹಾಗೆಯೇ 2023ರ ಮಾರ್ಚ್ 27ರಂದು ಸರ್ಕಾರದ ಆದೇಶವನ್ನು ರಾಜ್ಯ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳು ( 7586/2023, 8976/2023) ಪ್ರಕರಣಗಳು ದಾಖಲಾಗಿವೆ.
ಡಿ ಜೆ ರಾಘವೇಂದ್ರ/ಕರ್ನಾಟಕ ಸರ್ಕಾರದ ವಿರುದ್ಧ ಪ್ರಕರಣದಲ್ಲಿ (ರಿಟ್ ಅರ್ಜಿ 26045/2025) ರಾಜ್ಯ ಸರ್ಕಾರವು 2023ರ ಮಾರ್ಚ್ 23ರಂದು 2002ರ ಮಾರ್ಚ್ 30ರಂದು ಆದೇಶದ ಪ್ರವರ್ಗ 2 ಎ ಗೆ ಮೀಸಲಾತಿ ಪ್ರಮಾಣದ ಬದಲಾವಣೆ ಮತ್ತು ಯಾವುದೇ ಸಮುದಾಯಗಳನ್ನು ಪ್ರರ್ಗ 2ಎ ಗೆ ಸೇರಿಸುವುದು ಅಥವಾ ಕೈ ಬಿಡುವುದನ್ನು ಉಚ್ಛ ನ್ಯಾಯಾಲಯದ ಮುಂದಿನ ಅನುಮತಿಯಿಲ್ಲದೇ ಜಾರಿಗೊಳಿಸುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದೆ. ಹೀಗಾಗಿ ಪ್ರಕರಣಗಳು ಸರ್ವೋಚ್ಛ ಮತ್ತು ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ ಎಂಬ ಮಾಹಿತಿಯನ್ನು ಒದಗಿಸಿರುವುದು ಗೊತ್ತಾಗಿದೆ.
ಅದೇ ರೀತಿ ಒಳ ಮೀಸಲಾತಿ ಕಲ್ಪಿಸಿರುವ ಆದೇಶಕ್ಕೆ ಸಂಬಂಧಿಸಿದಂತೆಯೂ ಸಮಾಜ ಕಲ್ಯಾಣ ಇಲಾಖೆಯು ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಗೆ ಮಾಹಿತಿ ನೀಡಿದೆ.


ಒಳ ಮೀಸಲಾತಿ ಆದೇಶಗಳಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ (ಸಂಖ್ಯೆ; 28612/2025) ಯೊಂದಿಗೆ ಸೇರಿರುವ ಪ್ರಕರಣಗಳ ವಿವರಗಳನ್ನೂ ಇಲಾಖೆಯು ಸಚಿವ ಸಂಪುಟ ಉಪ ಸಮಿತಿಗೆ ನೀಡಿರುವುದು ತಿಳಿದು ಬಂದಿದೆ.




