ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್ಡಬ್ಲ್ಯೂ (MSW) ದ್ವಿತೀಯ ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಕಾರ್ಯಗಳಿಗೆ 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರು ಮೊತ್ತವನ್ನು ಮತ್ತೊಮ್ಮೆ ಪರಿಷ್ಕರಿಸಿರುವ ಬಿಎಸ್ಡಬ್ಲ್ಯೂಎಂಎಲ್, ಅದನ್ನೀಗ 25 ವರ್ಷಗಳ ರಿಯಾಯಿತಿ ಅವಧಿಯಲ್ಲಿ ಟಿಪ್ಪಿಂಗ್ ಶುಲ್ಕದಲ್ಲಿ ಒಟ್ಟು 23,682 ಕೋಟಿ ರು ಗಳನ್ನು ಸರ್ಕಾರವು ವೆಚ್ಚ ಮಾಡಬೇಕಾಗಿದೆ ಎಂದು ನಗರಾಭಿವೃದ್ದಿ ಇಲಾಖೆಗೆ ಕಡತ ಸಲ್ಲಿಸಿದೆ.
ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ತೆಗೆದುಹಾಕಿರುವುದರಿಂದ, ಟಿಪ್ಪಿಂಗ್ ಶುಲ್ಕದಲ್ಲಿ (Tipping Fee) ಅಂದಾಜು ₹ 300ರಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ (ಡಬ್ಲ್ಯೂಟಿಇ) ಘಟಕದಿಂದ ಬರುವ ಆದಾಯ ಕಡಿಮೆಯಾಗುವುದರಿಂದ ಟಿಪ್ಪಿಂಗ್ ಶುಲ್ಕದಲ್ಲಿ ಅಂದಾಜು ₹ 150ರಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ.
ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮರು ಟೆಂಡರ್ ಆಹ್ವಾನಿಸುವ ಕುರಿತು ವಿಸ್ತೃತ ಯೋಜನೆಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವಿಸ್ತೃತ ಯೋಜನೆ ವರದಿಯು ತಿದ್ದುಪಡಿಗಳೊಂದಿಗೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಹಾಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಮರು ಟೆಂಡರ್ ಆಹ್ವಾನಿಸಲು ಬಿಎಸ್ಡಬ್ಲ್ಯೂಎಂಎಲ್ ತನ್ನ ಪ್ರಸ್ತಾವನ್ನು ಸಲ್ಲಿಸಿದೆ.
ಟಿಪ್ಪಿಂಗ್ ಶುಲ್ಕ ನಿಗದಿಯಲ್ಲಿಯೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಮತ್ತು ಇದೊಂದು ಬಹುದೊಡ್ಡ ಹಗರಣ ಎಂದು ಹೇಳಲಾಗಿತ್ತು. ಮೊದಲು ನಿಗದಿಪಡಿಸಿದ್ದ ಟಿಪ್ಪಿಂಗ್ ಶುಲ್ಕದ ಮೊತ್ತದಲ್ಲಿ ಒಂದಷ್ಟು ಕಡಿಮೆ ಮಾಡುವ ಮೂಲಕ ಈ ಹಗರಣಕ್ಕೆ ಮತ್ತೊಂದು ತೇಪೆ ಹಚ್ಚುವ ಯತ್ನ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಪ್ರಸ್ತಾವದ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಕಡತವು ದಿ ಫೈಲ್ ಗೆ ಲಭ್ಯವಾಗಿದೆ.

ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 30 ವರ್ಷದ ಅವಧಿಗೆ ಗುತ್ತಿಗೆ ಮತ್ತು ಒಬ್ಬರೇ ವೆಂಡರ್ಗೆ ಎರಡೂ ಪ್ಯಾಕೇಜ್ಗಳನ್ನು ನೀಡಿದರೆ ಅವರೊಬ್ಬರನ್ನೇ ಅವಲಂಬಿಸುವ ಅನಿವಾರ್ಯತೆ, 30 ವರ್ಷಗಳ ಅಂತ್ಯಕ್ಕೆ ಮೂಲ ದರವು ಪ್ರಸ್ತುತ ದರಕ್ಕಿಂತ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಳ ಅಂದರೆ ಇದು 430% ಹೆಚ್ಚಳವಾಗಲಿದೆ, ವಾರ್ಷಿಕ ಏರಿಕೆಯನ್ನು ಕೂಡ ವರ್ಷಕ್ಕೆ ಶೇ. 2.5 ಕ್ಕೆ ಮಿತಿಗೊಳಿಸಬೇಕು. ಇದರಿಂದ ದೀರ್ಘಾವಧಿಯ ಒಪ್ಪಂದದಲ್ಲಿ ವರ್ಷದಿಂದ ವರ್ಷಕ್ಕೆ ಆಗುವ ಹೆಚ್ಚಳ ನಿಯಂತ್ರಿತವಾಗಿರುತ್ತದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು.
ಆದರೂ ಸಹ ಅದನ್ನು ಬದಿಗೊತ್ತಿ 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರು ಕೋಟಿ ರು ಪರಿಷ್ಕೃತ ಅಂದಾಜು ಮೊತ್ತಕ್ಕೆ ಸದ್ದಿಲ್ಲದೇ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದನ್ನು ಸಚಿವ ಸಂಪುಟವು ಸದ್ದಿಲ್ಲದೇ ಅನುಮೋದಿಸಿತ್ತು. ಈ ಅನುಮೋದನೆ ಹಿಂದೆ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿದ್ದವು.
ಬಿ ಸಿ ಜಿ ಸಂಸ್ಥೆಯು ನೀಡಿದ್ದ ವರದಿ ಆಧರಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಎರಡು ಪ್ಯಾಕೇಜ್ಗಳನ್ನಾಗಿ ವಿಂಗಡಿಸಿದೆಯಲ್ಲದೇ ಪ್ರಾಥಮಿಕ ಹಂತದ ಸಂಗ್ರಹಣೆ ಮತ್ತು ಪ್ರಾಥಮಿಕ ಹಂತದ ಸಾಗಾಣಿಕೆಯನ್ನು ಪ್ರತ್ಯೇಕಿಸಿದೆ. ಅಲ್ಲದೇ ಪ್ರಸ್ತುತ ದ್ವಿತೀಯ ಹಂತದ ಸಾಗಾಣಿಕೆ ಹಾಗೂ ಸಂಸ್ಕರಣೆ, ವಿಲೇವಾರಿಗಾಗಿ ಗುತ್ತಿಗೆಯನ್ನು ನಾಲ್ಕು ಪ್ಯಾಕೇಜ್ಗಳ ಬದಲಾಗಿ ಎರಡು ಪ್ಯಾಕೇಜ್ಗಳಲ್ಲಿ ನೇಮಿಸುವ ಕಾಮಗಾರಿಯ ವಿಸ್ತೃತ ವರದಿ ಸಲ್ಲಿಸಿದೆ. ಇಲ್ಲಿ ಮಾಡಿರುವ ಬದಲಾವಣೆಗಳಿಗೆ ಹಣಕಾಸು ಇಲಾಖೆ, ಪಿಪಿಪಿ ಯೋಜನೆಗಳ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ ಒಪ್ಪಿಗೆ ಪಡೆಯುವ ಸಂಬಂಧ ಪ್ರಸ್ತಾವ ಸಲ್ಲಿಸಿರುವುದು ತಿಳಿದು ಬಂದಿದೆ.

ಟಿಪ್ಪಿಂಗ್ ಶುಲ್ಕ ನಿಗದಿ ಕುರಿತು ಪರಿಶೀಲಿಸಲು ಈ ಮೊದಲು ಅರಣ್ಯ ಜೀವಿ ಪರಿಸರ ಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಹಲವು ಸಲಹೆಗಳನ್ನು ನೀಡಿತ್ತು. ಈ ಎಲ್ಲಾ ಸಲಹೆಗಳನ್ನು ಆಧರಿಸಿ ಈ ಮೊದಲು ನಿಗದಿಪಡಿಸಿದ್ದ ಮೊತ್ತವನ್ನು ಬಿಎಸ್ಡಬ್ಲ್ಯೂಎಂಎಲ್ ಪರಿಷ್ಕರಿಸಿದೆ.
ಅಂದಾಜು 23,682 ಕೋಟಿ ವೆಚ್ಚ
30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರು ಕೋಟಿ ರು ಆಗಲಿದೆ ಎಂದು ಬಿಎಸ್ಡಬ್ಲ್ಯೂಎಂಎಲ್ ಅಂದಾಜಿಸಿತ್ತು. ಈಗ ಪರಿಷ್ಕೃತ ದರಗಳು ಮತ್ತು ಅಂದಾಜು ಮಾಡಲಾದ ಶೇ. 3.8ರಷ್ಟು ವಾರ್ಷಿಕ ವೆಚ್ಚ ಹೆಚ್ಚಳವನ್ನು ಆಧರಿಸಿ, 25 ವರ್ಷಗಳ ರಿಯಾಯಿತಿ ಅವಧಿ ಎಂದು ಹೇಳಿದೆ. ಮೊದಲಿನ ಪ್ರಸ್ತಾವಕ್ಕೆ ಹೋಲಿಸಿದರೇ ಈಗ 5 ವರ್ಷ ಕಡಿಮೆ ಆಗಿದೆ. ಅಲ್ಲದೇ ಟಿಪ್ಪಿಂಗ್ ಶುಲ್ಕಕ್ಕಾಗಿ ಸರ್ಕಾರವು ಒಟ್ಟು ₹23,682 ಕೋಟಿ ವೆಚ್ಚ ಮಾಡಬೇಕಾಗುವುದು ಎಂದು ಅಂದಾಜಿಸಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.

ಅಧಿಕಾರಿಗಳು ನಿಭಾಯಿಸಿದ ವಾಸ್ತವಿಕ ತ್ಯಾಜ್ಯದ ಟನ್ಗಳ ಪ್ರಮಾಣವನ್ನು ಆಧರಿಸಿ ಪಾವತಿಸುವ ಟಿಪ್ಪಿಂಗ್ ಶುಲ್ಕದ ಹೊರತಾಗಿ, ಎರಡು ಘಟಕಗಳಾದ ದ್ವಿತೀಯ ಹಂತದ ಸಾಗಣೆ (Secondary Transportation) ಮತ್ತು ಸಂಸ್ಕರಣೆ ಹಾಗೂ ವಿಲೇವಾರಿ (Processing & Disposal – P&D) ಕಾರ್ಯಗಳ ಮೂಲಕ ಅಭಿವೃದ್ಧಿಪಡಿಸುವ ಸಂಸ್ಥೆಗೆ ದೊರೆಯಬಹುದಾದ ಇತರ ನಾಲ್ಕು ಆದಾಯದ ಮೂಲಗಳನ್ನು ಪರಿಗಣಿಸಿದೆ.
ಜೈವಿಕ ಮೀಥನೇಷನ್ ಘಟಕಗಳಲ್ಲಿ ಉತ್ಪಾದನೆಯಾಗುವ ಜೈವಿಕ ಅನಿಲದ (Biogas) ಮಾರಾಟ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ (Waste-to-Energy – WTE) ಉತ್ಪಾದನೆಯಾಗುವ ವಿದ್ಯುತ್ ಮಾರಾಟ, ವಸ್ತುಗಳ ಮರುಪಡೆಯುವಿಕೆ ಘಟಕಗಳಲ್ಲಿ (Material Recovery Facilities – MRFs) ಸಂಸ್ಕರಿಸಿ ಮರುಪಡೆಯಲಾದ ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟ, ಪ್ರಾಣಿಗಳ ತ್ಯಾಜ್ಯ ಸಂಸ್ಕರಣೆಯಿಂದ ದೊರೆಯುವ ಉಪ ಉತ್ಪನ್ನಗಳನ್ನು ಹಂದಿ ಸಾಕಾಣಿಕೆ ಕೇಂದ್ರಗಳು (Piggeries) ಮತ್ತಿತರ ಸಂಸ್ಥೆಗಳಿಗೆ ಮಾರಾಟದಿಂದ ನಾಲ್ಕು ಆದಾಯ ಮೂಲಗಳನ್ನು ಗುರುತಿಸಿದೆ.
ಈ ನಾಲ್ಕು ಆದಾಯದ ಮೂಲಗಳಿಂದ ಎರಡು ಪ್ಯಾಕೇಜ್ಗಳ ಅಡಿಯಲ್ಲಿ ಅನುಷ್ಠಾನಗೊಳ್ಳುವ ಯೋಜನೆಗೆ ವಾರ್ಷಿಕವಾಗಿ ಸುಮಾರು ₹500 ಕೋಟಿ ಆದಾಯ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯ ದಕ್ಷತೆ ಮತ್ತು ಬೆಲೆ ನಿಗದಿಗೆ ಸಂಬಂಧಿಸಿದ ಪ್ರಮುಖ ಊಹೆಗಳನ್ನು ಕೈಗಾರಿಕಾ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮರುಪರಿಶೀಲಿಸಿದೆ. ಈ ಸಂದರ್ಭದಲ್ಲಿ ವಾಸ್ತವಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ.
ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಬರುವ ಆದಾಯವೆಷ್ಟು?
ಆರಂಭಿಕ ಅಂದಾಜಿನ ಪ್ರಕಾರ, ಒಣ ತ್ಯಾಜ್ಯದ ಶೇ. 15ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದ ಮೂಲಕ ಆದಾಯ ಗಳಿಸಬಹುದು ಎಂದು ಪರಿಗಣಿಸಲಾಗಿತ್ತು. ಇಂದೋರ್ನಂತಹ ನಗರಗಳಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಈ ಅಂದಾಜು ಮಾಡಲಾಗಿತ್ತು. ಅಲ್ಲಿ ಒಟ್ಟು ತ್ಯಾಜ್ಯದ ಸುಮಾರು ಶೇ. 8ರಷ್ಟು ಭಾಗವನ್ನು ಮರುಪಡೆಯಲಾಗುತ್ತದೆ. ಇದು ಒಣ ತ್ಯಾಜ್ಯದ ಶೇ. 15ಕ್ಕೆ ಸಮನಾಗಿರುತ್ತದೆ ಎಂದು ವಿವರಿಸಿದೆ.
ಆದರೆ, ತಜ್ಞರೊಂದಿಗಿನ ಚರ್ಚೆಯಲ್ಲಿ ಬೆಂಗಳೂರಿನಲ್ಲಿ ಮಾರಾಟಯೋಗ್ಯವಾದ ಮರುಪಡೆಯಬಹುದಾದ ವಸ್ತುಗಳ ಗಣನೀಯ ಪ್ರಮಾಣವನ್ನು ಈಗಾಗಲೇ ಕಸ ಸಂಗ್ರಹಿಸುವ ಅನೌಪಚಾರಿಕ ಕಾರ್ಮಿಕರು (Ragpickers) ಸಂಗ್ರಹಿಸುತ್ತಿದ್ದಾರೆ ಎಂಬ ಅಂಶ ಗಮನಕ್ಕೆ ಬಂದಿದೆ. ಈ ತ್ಯಾಜ್ಯ ಆರ್ಥಿಕತೆಯು ಮಹತ್ವದ್ದಾಗಿರುವುದರ ಜೊತೆಗೆ ಸಾಮಾಜಿಕವಾಗಿ ಸೂಕ್ಷ್ಮವಾದ ವಿಷಯವೂ ಆಗಿದೆ. ಈ ಹಿನ್ನೆಲೆಯಲ್ಲಿ, ಪರಿಷ್ಕೃತ ಮಾದರಿಯು ರಿಯಾಯಿತಿದಾರರ (Concessionaire) ಮೂಲಕ ಕೇವಲ ಶೇ. 3ರಷ್ಟು ಒಣ ತ್ಯಾಜ್ಯವನ್ನಷ್ಟೇ ಮಾರಾಟಯೋಗ್ಯವೆಂದು ಪರಿಗಣಿಸುತ್ತದೆ.
ಇದು ಅನೌಪಚಾರಿಕ ವಲಯದ ಜೀವನೋಪಾಯವನ್ನು ರಕ್ಷಿಸುವ ಮಹತ್ವವನ್ನು ಗುರುತಿಸುವುದರ ಜೊತೆಗೆ, ನೆಲಮಟ್ಟದ ವಾಸ್ತವಿಕ ಪರಿಸ್ಥಿತಿಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (Dry Waste Collection Centres – DWCCs) ಮೂಲಕ ಅನೌಪಚಾರಿಕ ವಲಯದ ಜೀವನೋಪಾಯವನ್ನು ಸಂರಕ್ಷಿಸುವ ಉದ್ದೇಶವೂ ಇದರಲ್ಲಿದೆ. ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ತೆಗೆದುಹಾಕಿರುವುದರಿಂದ, ಟಿಪ್ಪಿಂಗ್ ಶುಲ್ಕದಲ್ಲಿ (Tipping Fee) ಅಂದಾಜು ₹300ರಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕದ (Waste-to-Energy – WTE) ಕಾರ್ಯಾಚರಣೆ
WTE ಘಟಕಗಳು ಯೋಜಿತ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದಾಗಿ, ವರ್ಷದ 365 ದಿನಗಳೂ ನಿರಂತರವಾಗಿ ಕಾರ್ಯನಿರ್ವಹಿಸುವ ಬದಲು ಸಾಮಾನ್ಯವಾಗಿ ವರ್ಷಕ್ಕೆ ಸುಮಾರು 330 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬುದು ಗಮನಕ್ಕೆ ಬಂದಿದೆ. ಇದಲ್ಲದೆ, ಉತ್ಪಾದನೆಯಾಗುವ ವಿದ್ಯುತ್ನ ಒಂದು ಭಾಗವನ್ನು ಘಟಕದ ಆಂತರಿಕ ಮತ್ತು ಸಹಾಯಕ ಕಾರ್ಯಗಳಿಗಾಗಿ (Auxiliary Functions) ಬಳಸಿಕೊಳ್ಳಲಾಗುತ್ತದೆ. ಇದರಿಂದ ಮಾರಾಟಕ್ಕೆ ಲಭ್ಯವಾಗುವ ವಿದ್ಯುತ್ನ ಪ್ರಮಾಣ ಕಡಿಮೆಯಾಗುತ್ತದೆ.

ಇದನ್ನು ಪರಿಗಣಿಸಿ, ಘಟಕದ ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದಾಗಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ. 10ರಷ್ಟು ಕಡಿತ ಮತ್ತು ಸಹಾಯಕ ವಿದ್ಯುತ್ ಬಳಕೆಯನ್ನು ಪರಿಗಣಿಸಿ ಆದಾಯದಲ್ಲಿ ಹೆಚ್ಚುವರಿಯಾಗಿ ಶೇ. 15ರಷ್ಟು ಕಡಿತವನ್ನು ಮಾದರಿಯಲ್ಲಿ ಅಳವಡಿಸಲಾಗಿದೆ. WTE (waste to energy) ಘಟಕದಿಂದ ಬರುವ ಆದಾಯ ಕಡಿಮೆಯಾಗುವುದರಿಂದ, ಟಿಪ್ಪಿಂಗ್ ಶುಲ್ಕದಲ್ಲಿ ಅಂದಾಜು ₹150ರಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಣಕಾಸು ಅಂದಾಜು- ವೆಚ್ಚ ಹೆಚ್ಚಳದ ಲೆಕ್ಕಾಚಾರ ವಿಧಾನದ ಪರಿಷ್ಕರಣೆ
ಹಿಂದೆ ಪ್ರತಿವರ್ಷ ಶೇ. 5ರಷ್ಟು ಸ್ಥಿರವಾಗಿ ವೆಚ್ಚ ಹೆಚ್ಚಳವನ್ನು (Annual Escalation) ಅನ್ವಯಿಸುವ ವಿಧಾನವನ್ನು ಕೈಬಿಡಲಾಗಿದೆ. ಅದರ ಬದಲಾಗಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮಾದರಿ ಬಿಡ್ ದಾಖಲೆಗೆ ಅನುಗುಣವಾಗಿ ಸೂಚ್ಯಂಕ ಆಧಾರಿತ ವೆಚ್ಚ ಹೆಚ್ಚಳದ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಪರಿಷ್ಕೃತ ಸೂತ್ರದಲ್ಲಿ ಹಲವು ಅಂಶಗಳನ್ನು ಪರಿಗಣಿಸಿದೆ.
ಡೀಸೆಲ್ ಬೆಲೆ – ಶೇ. 15, ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (Consumer Price Index – Industrial Workers) – ಶೇ. 40, ಸಗಟು ಬೆಲೆ ಸೂಚ್ಯಂಕ (Wholesale Price Index) – ಶೇ. 25, ಸ್ಥಿರ ಅಂಶ (Fixed Component) – ಶೇ. 20 ಆದಾಗ್ಯೂ, ವಾರ್ಷಿಕ ವೆಚ್ಚ ಹೆಚ್ಚಳದ ಗರಿಷ್ಠ ಮಿತಿಯನ್ನು ಶೇ. 5ಕ್ಕೆ ನಿಗದಿಪಡಿಸಲಾಗಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿದೆ.
ಸಂಬಂಧಿತ ಬೆಲೆ ಸೂಚ್ಯಂಕಗಳ ಹಿಂದಿನ ಏರಿಳಿತಗಳ ಆಧಾರದ ಮೇಲೆ, ಹಣಕಾಸಿನ ಹೊರಹರಿವಿನ (Financial Outflow) ಅಂದಾಜಿಗಾಗಿ ಸರಾಸರಿ ಶೇ. 3.8ರಷ್ಟು ಪರಿಣಾಮಕಾರಿ ವೆಚ್ಚ ಹೆಚ್ಚಳವನ್ನು ಪರಿಗಣಿಸಿದೆ. ವಾಸ್ತವಿಕ ವೆಚ್ಚ ಹೆಚ್ಚಳವನ್ನು ಪ್ರತಿ ವರ್ಷ ಅನ್ವಯವಾಗುವ ಸೂಚ್ಯಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಸ್ವತಂತ್ರ ಎಂಜಿನಿಯರ್ (Independent Engineer) ಅದನ್ನು ಪರಿಶೀಲಿಸಿ ದೃಢೀಕರಿಸುತ್ತಾರೆ ಎಂದು ಬಿಎಸ್ಡಬ್ಲ್ಯೂಎಂಎಲ್ ಹೇಳಿದೆ.
ಯೋಜನಾ ವೆಚ್ಚ- ಟಿಪ್ಪಿಂಗ್ ಶುಲ್ಕದ ಮರುಮೌಲ್ಯಮಾಪನ
ನವೀಕರಿಸಿದ ತ್ಯಾಜ್ಯ ಉತ್ಪಾದನೆಯ ಅಂದಾಜುಗಳು, ಈಗಾಗಲೇ ಅಸ್ತಿತ್ವದಲ್ಲಿರುವ ತ್ಯಾಜ್ಯ ಸಂಸ್ಕರಣಾ ಮೂಲಸೌಕರ್ಯ, ಹೆಚ್ಚುವರಿ ಮೂಲಸೌಕರ್ಯದ ಅಗತ್ಯತೆಗಳು, ವಾಸ್ತವಿಕ ಬಂಡವಾಳ ವೆಚ್ಚ, ಕಾರ್ಯಾಚರಣಾ ವೆಚ್ಚ ಹಾಗೂ ಉಪ ಉತ್ಪನ್ನಗಳಿಂದ ದೊರೆಯುವ ಆದಾಯವನ್ನು ಪರಿಗಣಿಸಿ ಯೋಜನೆಯ ವೆಚ್ಚದ ಅಂದಾಜುಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗಿದೆ. ಈ ಹಿಂದೆ ಮಾತುಕತೆಯ ಮೂಲಕ ನಿಗದಿಪಡಿಸಲಾಗಿದ್ದ ಬಿಡ್ದಾರರ ದರಗಳು ಮತ್ತು ಅಂದಾಜು ದರಗಳಿಗಿಂತ ಸುಮಾರು ಶೇ. 19ರಷ್ಟು ಹೆಚ್ಚುವರಿ ದರವನ್ನು (Premium) ಹೊಸ ಪ್ರಸ್ತಾವನೆಯಲ್ಲಿ ಮುಂದುವರಿಸಲಾಗಿಲ್ಲ. ಪರಿಷ್ಕೃತ ಕಾರ್ಯವ್ಯಾಪ್ತಿ ಮತ್ತು ಅಂದಾಜುಗಳ ಆಧಾರದ ಮೇಲೆ ಹೊಸದಾಗಿ ಹಣಕಾಸು ಅಂದಾಜನ್ನು ಸಿದ್ಧಪಡಿಸಲಾಗಿದೆ ಎಂದು ವಿವರಿಸಿದೆ.
ಕಾರ್ಯಸಾಧ್ಯತಾ ಅಂತರದ ಅನುದಾನ (VGF (Viability Gap Funding ) ಇಲ್ಲದೆ 25 ವರ್ಷಗಳ ರಿಯಾಯಿತಿ ಅವಧಿಯನ್ನು ಪರಿಗಣಿಸಿದಾಗ, ಕಾರ್ಯಾಚರಣೆಯ ಮೊದಲ ಪೂರ್ಣ ವರ್ಷದ (2030) ಪರಿಷ್ಕೃತ ಟಿಪ್ಪಿಂಗ್ ಶುಲ್ಕವನ್ನು ಅಂದಾಜಿಸಿದೆ. ಉತ್ತರ ಪ್ಯಾಕೇಜ್ಗೆ ಪ್ರತಿ ಟನ್ಗೆ ₹2,745, ದಕ್ಷಿಣ ಪ್ಯಾಕೇಜ್ಗೆ ಪ್ರತಿ ಟನ್ಗೆ ₹2,329 ರು ಎಂದು ಹೇಳಿದೆ. ಪರಿಷ್ಕೃತ ದರಗಳು ಮತ್ತು ಅಂದಾಜು ಮಾಡಲಾದ ಶೇ. 3.8ರಷ್ಟು ವಾರ್ಷಿಕ ವೆಚ್ಚ ಹೆಚ್ಚಳವನ್ನು ಆಧರಿಸಿದೆ. 25 ವರ್ಷಗಳ ರಿಯಾಯಿತಿ ಅವಧಿಯಲ್ಲಿ ಟಿಪ್ಪಿಂಗ್ ಶುಲ್ಕಕ್ಕಾಗಿ ಸರ್ಕಾರ ಮಾಡಬೇಕಾದ ಒಟ್ಟು ಅಂದಾಜು ವೆಚ್ಚ ಸುಮಾರು ₹23,682 ಕೋಟಿ ಆಗಲಿದೆ. ಮೊದಲು ಮಾಡಿದ್ದ ಅಂದಾಜನ್ನು ಈಗ ಮಾಡಿರುವ ಅಂದಾಜಿಗೆ ಹೋಲಿಸಿದರೆ 15,755.37 ಕೋಟಿ ರು ಇಳಿಕೆಯಾಗಿರುವುದು ಕಂಡು ಬಂದಿದೆ.

ಹಣಕಾಸು ಬಹಿರಂಗ
ಬಿಎಸ್ಡಬ್ಲ್ಯುಎಂಎಲ್ ಈ ಯೋಜನೆಯ ಹಣಕಾಸನ್ನು ಬಹಿರಂಗಪಡಿಸಿದೆ. ಪರಿಷ್ಕೃತ ಹಣಕಾಸು ಮಾದರಿಯಲ್ಲಿ ಎರಡೂ ಪ್ಯಾಕೇಜ್ಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಒದಗಿಸಿದೆ. ವಿವರವಾದ ಬಂಡವಾಳ ವೆಚ್ಚ (Capital Expenditure – CAPEX)., ಕಾರ್ಯಾಚರಣಾ ವೆಚ್ಚ (Operating Expenditure – OPEX), ಆದಾಯದ ಮುನ್ಸೂಚನೆಗಳು (Revenue Projections)., ಯೋಜನೆಯ ಆಂತರಿಕ ಲಾಭದ ದರ (Project IRR)., ಈಕ್ವಿಟಿ ಮೇಲಿನ ಆಂತರಿಕ ಲಾಭದ ದರ (Equity IRR)., ಸಾಲ ಮತ್ತು ಈಕ್ವಿಟಿ ಅನುಪಾತ (Debt-Equity Ratio)., ಸಾಲ ಸೇವಾ ವ್ಯಾಪ್ತಿ ಅನುಪಾತ (Debt Service Coverage Ratio – DSCR)., ವರ್ಷವಾರು ನಗದು ಹರಿವಿನ ವಿವರಗಳು (Year-wise Cash Flow Statements)ನ್ನು ನೀಡಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.
ಇದಲ್ಲದೆ, ವಿವಿಧ ರಿಯಾಯಿತಿ ಅವಧಿಗಳಾದ 20, 25 ಮತ್ತು 30 ವರ್ಷಗಳು ಹಾಗೂ ವಿವಿಧ VGF ಸನ್ನಿವೇಶಗಳಾದ ಶೇ. 0, ಶೇ. 20, ಶೇ. 30 ಮತ್ತು ಶೇ. 40ರ ಆಧಾರದ ಮೇಲೂ ಹಣಕಾಸು ಮಾದರಿಯನ್ನು ಮೌಲ್ಯಮಾಪನ ಮಾಡಿದೆ. ಇದರಿಂದ ಯೋಜನೆಯ ಹಣಕಾಸು ರಚನೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
ರಿಯಾಯಿತಿ ಅವಧಿ ಮತ್ತು ಗುತ್ತಿಗೆದಾರರ ಕೇಂದ್ರೀಕರಣ ತಡೆಗಟ್ಟಲಿದೆಯೇ?
ದೀರ್ಘಾವಧಿಯವರೆಗೆ ಒಂದೇ ಗುತ್ತಿಗೆದಾರರ ಮೇಲೆ ಅವಲಂಬನೆಯಾಗುವ (Vendor Lock-in) ಮತ್ತು ಯೋಜನೆಯ ಸಂಪೂರ್ಣ ಗುತ್ತಿಗೆ ಒಂದೇ ಸಂಸ್ಥೆಯ ಕೈಯಲ್ಲಿ ಕೇಂದ್ರೀಕೃತವಾಗುವ ಅಪಾಯಗಳಿಗೆ ಸಂಬಂಧಿಸಿದ ಕಳವಳಗಳನ್ನು ಪರಿಗಣಿಸಿದೆ. ರಿಯಾಯಿತಿ ಒಪ್ಪಂದದ ವ್ಯವಸ್ಥೆಯನ್ನು ಮರುಪರಿಶೀಲಿಸಲಾಗಿದೆ. ಹೆಚ್ಚುವರಿಯಾಗಿ 30 ವರ್ಷಗಳವರೆಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸುವ ಅವಕಾಶವನ್ನು ತೆಗೆದುಹಾಕಲು ಪ್ರಸ್ತಾಪಿಸಿದೆ.
ಪರಿಷ್ಕೃತ ಟೆಂಡರ್ ಚೌಕಟ್ಟಿನ ಪ್ರಕಾರ, ಬಿಡ್ದಾರರು ಎರಡೂ ಪ್ಯಾಕೇಜ್ಗಳಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ, ನಿಗದಿಪಡಿಸಿರುವ ಸಂಯೋಜಿತ ಅರ್ಹತೆ ಮತ್ತು ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸಿದಲ್ಲಿ ಮಾತ್ರ ಎರಡೂ ಪ್ಯಾಕೇಜ್ಗಳನ್ನು ಒಂದೇ ಬಿಡ್ದಾರರಿಗೆ ನೀಡಲು ಅವಕಾಶವಿರುತ್ತದೆ. ಇದರಿಂದ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸುವುದರ ಜೊತೆಗೆ ಪ್ರಾಧಿಕಾರದ ಹಿತಾಸಕ್ತಿಗಳನ್ನೂ ರಕ್ಷಿಸಬಹುದಾಗಿದೆ ಎಂದು ವಿವರಿಸಿದೆ.
ತ್ಯಾಜ್ಯ ಉತ್ಪಾದನೆ, ಸಂಸ್ಕರಣಾ ಸಾಮರ್ಥ್ಯ, ಅದಾಯದ ಅಂದಾಜು ಪರಿಷ್ಕರಣೆ
ರೈಟ್ಸ್ (RITES) ಸಿದ್ಧಪಡಿಸಿರುವ ವಿವರವಾದ ಯೋಜನಾ ವರದಿ (DPR), ಜನಸಂಖ್ಯೆಯ ಬೆಳವಣಿಗೆ ಮತ್ತು ಪ್ರಸ್ತುತ ಲಭ್ಯವಿರುವ ನವೀಕೃತ ಮಾಹಿತಿಯ ಆಧಾರದ ಮೇಲೆ ತ್ಯಾಜ್ಯ ಉತ್ಪಾದನೆಯ ಅಂದಾಜುಗಳನ್ನು ಮರುಪರಿಶೀಲಿಸಿದೆ. 2030ರ ವೇಳೆಗೆ ನಿರ್ವಹಿಸಬೇಕಾದ ಒಟ್ಟು ತ್ಯಾಜ್ಯದ ಪ್ರಮಾಣವನ್ನು ಅಂದಾಜು 7,590 ಟನ್ಗಳು ಪ್ರತಿ ದಿನ (TPD) ಎಂದು ನಿರ್ಧರಿಸಲಾಗಿದೆ. ಇದರಲ್ಲಿ 7,290 ಟನ್ಗಳು ನಗರ ಘನತ್ಯಾಜ್ಯವಾಗಿದ್ದು, ಉಳಿದ 300 ಟನ್ಗಳು ರಸ್ತೆ ಗುಡಿಸುವುದರಿಂದ ಸಂಗ್ರಹವಾಗುವ ತ್ಯಾಜ್ಯವಾಗಿದೆ.

ರಿಯಾಯಿತಿ ಒಪ್ಪಂದದ ಅಡಿಯಲ್ಲಿ ಹೆಚ್ಚುವರಿಯಾಗಿ ಎಷ್ಟು ಸಂಸ್ಕರಣಾ ಸಾಮರ್ಥ್ಯದ ಅಗತ್ಯವಿದೆ ಎಂಬುದನ್ನು ನಿರ್ಧರಿಸುವಾಗ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಬಳಿ ಈಗಾಗಲೇ ಲಭ್ಯವಿರುವ ಸಂಸ್ಕರಣಾ ಸಾಮರ್ಥ್ಯವನ್ನೂ ಪರಿಗಣಿಸಿದೆ. ಇದಲ್ಲದೆ, ಮರುಬಳಕೆ ಮಾಡಬಹುದಾದ ವಸ್ತುಗಳು, ಬಯೋ-ಸಿಎನ್ಜಿ (Bio-CNG), ಕಾಂಪೋಸ್ಟ್ ಮತ್ತು ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಿಂದ ದೊರೆಯುವ ಆದಾಯದ ಅಂದಾಜುಗಳನ್ನು ವಾಸ್ತವಿಕ ಮರುಪಡೆಯುವಿಕೆ ದರಗಳು, ಮಾರುಕಟ್ಟೆ ಬೆಲೆಗಳು ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಮರುಪರಿಶೀಲಿಸಲಾಗಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಮೂಲಸೌಕರ್ಯ, ಅದಕ್ಕೆ ಸಂಬಂಧಿಸಿದ ಸಂಸ್ಕರಣಾ ಸಾಮರ್ಥ್ಯ, ಬಂಡವಾಳ ವೆಚ್ಚ, ಕಾರ್ಯಾಚರಣಾ ವೆಚ್ಚ ಮತ್ತು ಆದಾಯದ ವಿವರಗಳನ್ನೂ ಪರಿಷ್ಕೃತ ಯೋಜನಾ ಚೌಕಟ್ಟಿನಲ್ಲಿ ಅಳವಡಿಸಿದೆ.
ಒಪ್ಪಂದದ ಷರತ್ತುಗಳು- ಅಪಾಯ-ಅಪಾಯ ತಗ್ಗಿಸುವ ಕ್ರಮಗಳಲ್ಲಿ ಪರಿಷ್ಕರಣೆ ಆಗಿದೆಯೇ?
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮಾದರಿ ರಿಯಾಯಿತಿ ಒಪ್ಪಂದ (Model Concession Agreement) ಮತ್ತು ಮಾದರಿ RFP (Request for Proposal) ದಾಖಲೆಗಳನ್ನು ಆಧರಿಸಿ ಒಪ್ಪಂದದ ಷರತ್ತುಗಳನ್ನು ಮರುಪರಿಶೀಲಿಸಿದೆ. ಖಾತರಿಪಡಿಸಿದ ತ್ಯಾಜ್ಯದ ಪ್ರಮಾಣ, ಸಂಸ್ಕರಣಾ ಸಾಮರ್ಥ್ಯದಲ್ಲಿನ ನಮ್ಯತೆ, ನಿರ್ಮಾಣ ಕಾಮಗಾರಿಯ ವಿವಿಧ ಹಂತಗಳ ಗಡುವು, ಕಾರ್ಯಕ್ಷಮತೆಯ ಭದ್ರತಾ ಠೇವಣಿ, ಸೇವಾ ಮಟ್ಟಕ್ಕೆ ಸಂಬಂಧಿಸಿದ ದಂಡಗಳು, ನಷ್ಟ ಪರಿಹಾರ, ಒಪ್ಪಂದ ಉಲ್ಲಂಘನೆಯ ಸಂದರ್ಭಗಳು, ಒಪ್ಪಂದ ಮುಕ್ತಾಯ ಮತ್ತು ವಿವಾದ ಪರಿಹಾರಕ್ಕೆ ಸಂಬಂಧಿಸಿದ ಅಗತ್ಯ ನಿಬಂಧನೆಗಳನ್ನು ಸೇರಿಸಲಾಗಿದೆ ಅಥವಾ ಪರಿಷ್ಕರಿಸಲಾಗಿದೆ ಎಂದು ಹೇಳಿದೆ.
ಪರಿಷ್ಕೃತ ಚೌಕಟ್ಟಿನ ಪ್ರಕಾರ, ತ್ಯಾಜ್ಯದ ಪ್ರಮಾಣ ಗರಿಷ್ಠವಾಗಿರುವ ದಿನಗಳಲ್ಲಿ ಯೋಜಿತ ತ್ಯಾಜ್ಯದ ಪ್ರಮಾಣದ ಶೇ. 120ರವರೆಗೆ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಘಟಕದ ಸಂಸ್ಕರಣಾ ಸಾಮರ್ಥ್ಯವನ್ನು ಅನಗತ್ಯವಾಗಿ ಹೆಚ್ಚಿಸಲು ಹೆಚ್ಚುವರಿ ಹೂಡಿಕೆ ಮಾಡುವುದನ್ನು ತಪ್ಪಿಸಬಹುದಾಗಿದೆ. ಕಾರ್ಬನ್ ಕ್ರೆಡಿಟ್ಗಳು, ವಿಸ್ತೃತ ಉತ್ಪಾದಕರ ಹೊಣೆಗಾರಿಕೆ (EPR) ಅಡಿಯಲ್ಲಿ ದೊರೆಯುವ ಪ್ರಯೋಜನಗಳು ಮತ್ತು ಆದಾಯ ಹಂಚಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನೂ ಪರಿಷ್ಕೃತ ಹಣಕಾಸು ಮತ್ತು ಒಪ್ಪಂದದ ಚೌಕಟ್ಟಿನಲ್ಲಿ ಪರಿಗಣಿಸಿರುವುದು ಗೊತ್ತಾಗಿದೆ.
ನಿಯಮಗಳ ಪಾಲನೆ ಆಗಲಿದೆಯೇ?
ಹಣಕಾಸು ಇಲಾಖೆ ಮತ್ತು ಐಎಸ್ಡಬ್ಲ್ಯೂಎಂ ಸಮಿತಿಯು ಈ ಹಿಂದೆ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ. ಹಾಗೆಯೇ ಅದಕ್ಕೆ ಸಂಬಂಧಿಸಿದ ತಾಂತ್ರಿಕ, ಹಣಕಾಸು ಮತ್ತು ಒಪ್ಪಂದದ ನಿಬಂಧನೆಗಳನ್ನು ಮರುಮೌಲ್ಯಮಾಪನ ಮಾಡಲಾಗಿದೆ ಎಂದು ಪ್ರಸ್ತಾವದಲ್ಲಿ ಹೇಳಿದೆ.
2026ರ ನವೆಂಬರ್ 20ರಂದು ಬಿಸಿಜಿ ಸಂಸ್ಥೆಯು ಪರಿಷ್ಕೃತ ಟಿಪ್ಪಿಂಗ್ ಶುಲ್ಕದ ಅಂದಾಜು ವರದಿಯನ್ನು ಪರಿಶೀಲಿಸಿದೆ. ಈ ಅಂದಾಜು ವರದಿಯಲ್ಲಿ, ಪರಿಷ್ಕೃತ ಅಂದಾಜುಗಳ ಕುರಿತು ವಿವರವಾದ ವಿವರಣೆಗಳನ್ನು ನೀಡಲಾಗಿದೆ. ಅಲ್ಲದೆ, ಹಣಕಾಸು ಇಲಾಖೆಯ ಆಕ್ಷೇಪಣೆಗಳಿಗೆ ಅನುಗುಣವಾಗಿ ಕೈಗೊಂಡಿರುವ ಹಣಕಾಸು ಲೆಕ್ಕಾಚಾರಗಳು ಮತ್ತು ನಿಯಮಗಳ ಪಾಲನೆಯ ವಿವರಗಳನ್ನೂ ಒದಗಿಸಿದೆ. ಈ ಸಂಬಂಧ 2026ರ ನವೆಂಬರ್ 6 ಮತ್ತು 16ರಂದು ನಡೆದ ಬಿಎಸ್ಡಬ್ಲ್ಯೂಎಂಎಲ್ನ ತಾಂತ್ರಿಕ ಸಮಿತಿಯ ಸಭೆಗಳಲ್ಲಿ ಚರ್ಚಿಸಿದೆ.
ಯೋಜನೆಯ ಅಂದಾಜು, ಹಣಕಾಸು ಮಾದರಿ ಮತ್ತು ಟೆಂಡರ್ ಷರತ್ತುಗಳನ್ನು ಪರಿಷ್ಕರಿಸುವ ಮೂಲಕ ಈ ಹಿಂದಿನ ಲೋಪದೋಷಗಳು ಮತ್ತು ಅಸಮಂಜಸತೆಗಳನ್ನು ಸರಿಪಡಿಸಲಾಗಿದೆ. ಮಾರ್ಪಡಿಸಲಾದ ಯೋಜನಾ ಕಾರ್ಯವ್ಯಾಪ್ತಿ, ಹಣಕಾಸು ಅಂದಾಜುಗಳು ಮತ್ತು ಒಪ್ಪಂದದ ಸುರಕ್ಷತಾ ಕ್ರಮಗಳನ್ನು ಪ್ರತಿಬಿಂಬಿಸುವಂತೆ ಪರಿಷ್ಕೃತ ಪ್ರಸ್ತಾವನೆ (RFP), ಕರಡು ರಿಯಾಯಿತಿ ಒಪ್ಪಂದ (Draft Concessionaire Agreement – DCA), ಅನುಸೂಚಿಗಳು (Schedules) ಮತ್ತು ಯೋಜನಾ ಮಾಹಿತಿ ಕೈಪಿಡಿ (Project Information Manual – PIM) ಸಿದ್ಧಪಡಿಸಲಾಗಿದೆ ಅಥವಾ ಪರಿಷ್ಕರಿಸಲಾಗಿದೆ ಎಂದು ವಿವರಿಸಿದೆ.
ಪ್ರಸ್ತಾವಕ್ಕೆ ಸಿಗಲಿದೆಯೆ ಅನುಮೋದನೆ?
ಉತ್ತರ ಮತ್ತು ದಕ್ಷಿಣ ಎಂಬ ಎರಡು ಪ್ಯಾಕೇಜ್ಗಳ ಮೂಲಕ ಸಮಗ್ರ ಸಮಗ್ರಿತ ಘನತ್ಯಾಜ್ಯ ನಿರ್ವಹಣಾ ಯೋಜನೆಯನ್ನು (Comprehensive Integrated Solid Waste Management Project) ಅನುಷ್ಠಾನಗೊಳಿಸಲು ಬಿಎಸ್ಡಬ್ಲ್ಯೂಎಂಎಲ್ ಸಿದ್ಧಪಡಿಸಿರುವ ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಗಾಗಿ ಸಲ್ಲಿಸಿದೆ. ಇದರೊಂದಿಗೆ ಪರಿಷ್ಕೃತ ಟಿಪ್ಪಿಂಗ್ ಶುಲ್ಕದ ಅಂದಾಜು ಮತ್ತು ಹಣಕಾಸು ಮಾದರಿಯನ್ನೂ ಸಲ್ಲಿಸಿದೆ. ಇವುಗಳಲ್ಲಿ ಹಣಕಾಸು ಇಲಾಖೆ ಮತ್ತು ರಾಜ್ಯಮಟ್ಟದ ತಾಂತ್ರಿಕ ಸಮಿತಿಯ ಆಕ್ಷೇಪಣೆಗಳನ್ನು ಪರಿಗಣಿಸಿ ಮಾಡಲಾದ ಬದಲಾವಣೆಗಳನ್ನು ಅಳವಡಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಯೋಜನೆಗಳ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ (State-Level Single Window Clearance Committee) ಒಪ್ಪಿಗೆ ಪಡೆಯಲು ಹಾಗೂ ತದನಂತರ ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಸರ್ಕಾರದ ಅನುಮೋದನೆ ಕೋರಿದೆ.
ಉತ್ತರ ಮತ್ತು ದಕ್ಷಿಣ ISWM ಪ್ಯಾಕೇಜ್ಗಳಿಗಾಗಿ ಸಿದ್ಧಪಡಿಸಿರುವ ಪರಿಷ್ಕೃತ ಯೋಜನಾ ಪ್ರಸ್ತಾವನೆ ಮತ್ತು ಪರಿಷ್ಕೃತ ಹಣಕಾಸು ಅಂದಾಜುಗಳಿಗೆ ಅನುಮೋದನೆ ನೀಡಬೇಕು ಎಂದು ಕೋರಿದೆ. ಅಲ್ಲದೇ ಪರಿಷ್ಕೃತ ಟೆಂಡರ್ ಚೌಕಟ್ಟು ಹಾಗೂ RFP, ಕರಡು ರಿಯಾಯಿತಿ ಒಪ್ಪಂದ (Draft Concessionaire Agreement), ಅನುಸೂಚಿಗಳು ಮತ್ತು ಯೋಜನಾ ಮಾಹಿತಿ ಕೈಪಿಡಿಯಲ್ಲಿ (Project Information Manual) ಅಳವಡಿಸಬೇಕಾದ ಸಂಬಂಧಿತ ಮಾರ್ಪಾಡು, ಸಲ್ಲಿಸಲಾಗಿರುವ ವಿವಿಧ ಹಣಕಾಸು ಸನ್ನಿವೇಶಗಳ ಆಧಾರದ ಮೇಲೆ ಪ್ರಸ್ತಾಪಿತ ರಿಯಾಯಿತಿ ಅವಧಿ ಮತ್ತು ಸೂಕ್ತ VGF (Viability Gap Funding – ಕಾರ್ಯಸಾಧ್ಯತಾ ಅಂತರದ ಅನುದಾನ) ರಚನೆ ಕುರಿತು ನಿರ್ಧಾರ, ಪರಿಷ್ಕೃತ ಪ್ರಸ್ತಾವನೆ ಮತ್ತು ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ಉತ್ತರ ಮತ್ತು ದಕ್ಷಿಣ ಪ್ಯಾಕೇಜ್ಗಳಿಗೆ ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಬಿಎಸ್ಡಬ್ಲ್ಯೂಎಂಎಲ್ಗೆ ಅನುಮೋದನೆ ನೀಡಬೇಕು ಎಂದು ಕೋರಿದೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ (IDD) ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಮತ್ತು ತಾಂತ್ರಿಕ ತಜ್ಞರಿಂದ ಸ್ವೀಕರಿಸಿದ ಅಭಿಪ್ರಾಯಗಳನ್ನು ಪರಿಗಣಿಸಿ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ, ಇನ್ನಷ್ಟು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಬೇಕಾದ ಹಲವು ಪ್ರಮುಖ ಅಂಶಗಳು ಗಮನಕ್ಕೆ ಬಂದಿದ್ದವು. ಇವುಗಳಲ್ಲಿ ತ್ಯಾಜ್ಯ ನಿರ್ವಹಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ವಾಸ್ತವಿಕ ಊಹೆಗಳು ಹಾಗೂ ಸಂಸ್ಕರಿಸಿದ ತ್ಯಾಜ್ಯದಿಂದ ಲಭಿಸುವ ಆದಾಯಕ್ಕೆ ಸಂಬಂಧಿಸಿದ ಅಂದಾಜುಗಳು ಸೇರಿದ್ದವು.
‘ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಹೆಚ್ಚು ವಾಸ್ತವಿಕ ಮತ್ತು ಅನುಷ್ಠಾನಕ್ಕೆ ಸಾಧ್ಯವಾಗುವ ವೆಚ್ಚದ ಚೌಕಟ್ಟನ್ನು ರೂಪಿಸಲು ಅತ್ಯಗತ್ಯವಾಗಿತ್ತು. ಇದರ ಪರಿಣಾಮವಾಗಿ, ಪ್ರಸ್ತಾಪಿತ ಟಿಪ್ಪಿಂಗ್ ಶುಲ್ಕವು (Tipping Fee) ನೆಲಮಟ್ಟದ ವಾಸ್ತವಿಕ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವಂತೆ ಅಂದಾಜು ಪ್ರಕ್ರಿಯೆಯನ್ನು ಪರಿಷ್ಕರಿಸಲಾಯಿತು,’ ಎಂದು ಪ್ರಸ್ತಾವದಲ್ಲಿ ತಿಳಿಸಿದೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು 2026ರ ನವೆಂಬರ್ 21ರಂದು ಪರಿಶೀಲಿಸಿರುವುದು ಗೊತ್ತಾಗಿದೆ.




