Wednesday | November 25, 2026 |

ಸಿದ್ದಾರ್ಥ ಮೆಡಿಕಲ್‌ ಕಾಲೇಜು, ಆಸ್ಪತ್ರೆ, ಸಿದ್ದಾರ್ಥ ವಿದ್ಯಾಸಂಸ್ಥೆಗೆ 81.26 ಎಕರೆ ವಿಸ್ತೀರ್ಣದ ಗೋಮಾಳ, ಸರ್ಕಾರಿ ಖರಾಬು ಗುಡ್ಡ ಮಂಜೂರಾತಿಗೆ ಕೋರಿಕೆ; ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದರೇ ಡಿಸಿಎಂ?

ಬೆಂಗಳೂರು; ಕಂದಾಯ ಸಚಿವ ಹಾಗೂ  ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಆಡಳಿತ ಮಂಡಳಿ ಅಧ್ಯಕ್ಷರಾಗಿರುವ  ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ತುಮಕೂರು) ನ ಘಟಕ ಸಂಸ್ಥೆಯ ಸಿದ್ದಾರ್ಥ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸಿದ್ದಾರ್ಥ ವಿದ್ಯಾಸಂಸ್ಥೆಗೆ ಒಟ್ಟಾರೆ 81.26 ಎಕರೆ ವಿಸ್ತೀರ್ಣದ ಗೋಮಾಳ ಮತ್ತು ಸರ್ಕಾರಿ ಖರಾಬು ಗುಡ್ಡ ಜಮೀನು ಮಂಜೂರು ಮಾಡಬೇಕು ಎಂದು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಖರಾಬು ಪೈಕಿ 50 ಎಕರೆ ಜಮೀನನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹೆಸರಿಗೆ ಖಾಯಂ ಆಗಿ ಮಂಜೂರು ಮಾಡುವುದು ಮತ್ತು  ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಟಿ ಬೇಗೂರು ಗ್ರಾಮದಲ್ಲಿನ ಸಿದ್ದಾರ್ಥ ಸಂಸ್ಥೆಯು ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಹೊಂದಿಕೊಂಡಿರುವ 31.26 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಸೇರಿ ಒಟ್ಟಾರೆ 81.26 ಎಕರೆ ವಿಸ್ತೀರ್ಣದ ಜಮೀನು ಮಂಜೂರು ಮಾಡಲು ಕಂದಾಯ ಇಲಾಖೆಯಲ್ಲಿರುವ ಕಡತಕ್ಕೆ ಚಿರತೆ ವೇಗ ದೊರೆತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಟಿ ಬೇಗೂರು ಗ್ರಾಮದಲ್ಲಿನ ಸಿದ್ದಾರ್ಥ ಸಂಸ್ಥೆಯು ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಹೊಂದಿಕೊಂಡಿರುವ 31.26 ಎಕರೆ ವಿಸ್ತೀರ್ಣದ ಗೋಮಾಳ  ಮಂಜೂರಾತಿ ಸಂಬಂಧ ಡಾ ಜಿ ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದ ಅವಧಿ ಅಂದರೇ 2024ರ ಡಿಸೆಂಬರ್‍‌ 17ರಂದು ಅಂದಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಟಿಪ್ಪಣಿ ಕಳಿಸಿದ್ದರು.

ಆದರೀಗ ಸ್ವತಃ ಡಾ ಜಿ ಪರಮೇಶ್ವರ್ ಅವರೇ ಕಂದಾಯ ಸಚಿವರಾಗಿದ್ದಾರೆ. ಹೀಗಾಗಿ ಈ ಪ್ರಸ್ತಾವನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಹಾಗೆಯೇ ಡಾ ಜಿ ಪರಮೇಶ್ವರ್ ಅವರು ಇದೇ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಕಾರಣ ಈ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಆರೋಪವೂ ಕೇಳಿ ಬಂದಿದೆ.

ಯಾವುದೇ ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವೂ ಇಲ್ಲ. ಗೋಮಾಳ ಜಮೀನುಗಳನ್ನು ಸರ್ಕಾರಿ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಇನ್ಯಾವುದೇ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡುವುದು ಕಾನೂನುಬಾಹಿರವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಸಹ ವಿವಿಧ ಸಂದರ್ಭಗಳಲ್ಲಿ ವಿವಿಧ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಆದರೂ ಸಹ ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಗೋಮಾಳ ಜಮೀನನ್ನು ಮಂಜೂರು ಮಾಡಿಸಲು ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಖರಾಬು ಪೈಕಿ 50 ಎಕರೆ ಜಮೀನನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹೆಸರಿಗೆ ಖಾಯಂ ಆಗಿ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ವರದಿ ಕೇಳಿತ್ತು. ಇದರ ಕಡತವೂ ಸಹ ಸದ್ಯ ಕಂದಾಯ ಇಲಾಖೆಯಲ್ಲಿ ಬಿರುಸಿನಿಂದ ಚಲಿಸುತ್ತಿದೆ. ಇದರ ಮಧ್ಯೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ 31.26 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ಗೆ ಡಾ ಜಿ ಪರಮೇಶ್ವರ್ ಅವರು ಹೊರಡಿಸಿದ್ದ ನಡವಳಿ ಮತ್ತು ಇ-ಆಫೀಸ್‌ನ ದಾಖಲೆಗಳು ಲಭ್ಯವಾಗಿವೆ.

ಪರಮೇಶ್ವರ್ ಅವರ ನಡವಳಿಯಲ್ಲೇನಿದೆ?

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಟಿ ಬೇಗೂರು ಗ್ರಾಮದಲ್ಲಿನ ಸಿದ್ದಾರ್ಥ ಸಂಸ್ಥೆಯು ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ನಡೆಸುತ್ತಿದೆ. ಈ ಆಸ್ಪತ್ರೆಯನ್ನು ಸಾರ್ವಜನಿಕರು ಮತ್ತು ಬಡ ಜನರಿಗಾಗಿ ಪ್ರಾರಂಭಿಸಿದೆ. ಸುಸಜ್ಜಿತವಾದ ಆಸ್ಪತ್ರೆಯು ಸಾರ್ವಜನಿಕರಿಗೆ ಉಚಿತವಾಗಿ 24 ಗಂಟೆಯೂ ಸೇವೆ ಒದಗಿಸುತ್ತಿದೆ. ಈ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಜಮೀನಿಗೆ ಹೊಂದಿಕೊಂಡಂತೆ ಆಸ್ಪತ್ರೆ ಸಮೀಪದಲ್ಲಿರುವ ದೊಡ್ಡೇರಿ ಗ್ರಾಮೆದ ಸರ್ವೆ ನಂಬರ್ 22/ಪಿ 1ರಲ್ಲಿ 16 ಎಕರೆ ಮತ್ತು ಸರ್ವೆ ನಂಬರ್ 23ರಲ್ಲಿ 15 ಎಕರೆ  26 ಗುಂಟೆ ಸರ್ಕಾರಿ ಗೋಮಾಳ ಜಮೀನಿದೆ. ಈ ಜಮೀನನ್ನು ಆಸ್ಪತ್ರೆಗೆ ಮಂಜೂರು ಮಾಡಬೇಕು ಎಂದು ಡಾ ಜಿ ಪರಮೇಶ್ವರ್ ಅವರು ಕೋರಿರುವುದು ನಡವಳಿಯಿಂದ ತಿಳಿದು ಬಂದಿದೆ.

 

 

ಈ ಪ್ರಸ್ತಾವನೆಯ ಕಡತವು 2026ರ ಅಕ್ಟೋಬರ್‍‌ 14ರಿಂದ ಕಂದಾಯ ಇಲಾಖೆಯಲ್ಲಿ ಚಲಿಸುತ್ತಿದೆ.

 

 

ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ಪಿ ಹೆಚ್‌ ಹಳ್ಳಿಯಲ್ಲಿ ಅಂದಾಜು 20 ಕೋಟಿ ರು  ಗೂ ಅಧಿಕ  ಬೆಲೆ ಬಾಳಲಿರುವ 50 ಎಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಗುಡ್ಡ ಜಮೀನನ್ನೂ ಸಹ  ಜಮೀನನ್ನು ಖಾಯಂ ಆಗಿ ಮಂಜೂರು ಮಾಡಬೇಕು ಎಂದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ಪಿ ಹೆಚ್‌ ಹಳ್ಳಿಯಲ್ಲಿ   ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ ಖುಷ್ಕಿ ಜಮೀನು  ಎಕರೆಗೆ 4.50 ಲಕ್ಷ ರು ಇದೆ. ತರಿ ಭೂಮಿಗೆ  6.00 ಲಕ್ಷ ರು, ಬಾಗಾಯ್ತು ತಲಾ 7.50 ಲಕ್ಷ ರು ಇದೆ. ಮುಕ್ತ ಮಾರುಕಟ್ಟೆ ದರದಲ್ಲಿ ಎಕರೆಗೆ 40 ಲಕ್ಷ ರು. ಇದೆ. ಇದರ ಪ್ರಕಾರ 50 ಎಕರೆಗೆ 20 ಕೋಟಿ ಇದೆ ಎಂದು ಹೇಳಲಾಗಿದೆ.  ವಿಶೇಷವೆಂದರೇ 50 ಎಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಗುಡ್ಡ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪ್ರಸ್ತಾವ ಸಲ್ಲಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಸ್ತಾವದ ಕುರಿತು ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ.

ಸಿದ್ದರಾಮಯ್ಯ ಅವರ ನೇತೃತ್ವದ  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ 50 ಎಕರೆ ಜಮೀನು ಮಂಜೂರಾತಿಯ ಪ್ರಸ್ತಾವಕ್ಕೆ ಮರು ಚಾಲನೆ ಸಿಕ್ಕಿತ್ತು.

ಸದ್ಯ ಈ ಕಡತವೂ 2026ರ ಅಕ್ಟೋಬರ್‍‌ 31ರಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರಿಂದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾದ ಎಸ್‌ ಎಸ್ ನಕುಲ್ ಅವರಿಗೆ ರವಾನೆಯಾಗಿದೆ.

 

 

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‍‌ 23ರಲ್ಲಿ ಒಟ್ಟು  376 ಎಕರೆ ವಿಸ್ತೀರ್ಣದ  ಸರ್ಕಾರಿ ಜಮೀನು ಇದೆ. ಇದರಲ್ಲಿ ಬಿ  ಖರಾಬು   153 ಎಕರೆ ವಿಸ್ತೀರ್ಣದ  ಜಮೀನಿದೆ.

 

 

ಈ ಪೈಕಿ  50 ಎಕರೆ ಜಮೀನನ್ನು ತುಮಕೂರಿನ ಸಿದ್ದಾರ್ಥ ವಿದ್ಯಾ ಸಂಸ್ಥೆಗೆ ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದ ನಂತರ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಇದುವರೆಗೂ ಯಾವುದೇ ಕಟ್ಟಡವನ್ನೂ ನಿರ್ಮಿಸಿಲ್ಲ. ಆದರೂ ಇದೇ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

 

 

ಗುತ್ತಿಗೆ ರೂಪದಲ್ಲಿ ಪಡೆದಿದ್ದ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಬೇಕು ಎಂದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಕುರಿತು 2021ರ ಜುಲೈ 30 ಮತ್ತು 2023ರ ಜುಲೈ 18ರಂದು ಮಾಹಿತಿ ಮತ್ತು ಸ್ಪಷ್ಟೀಕರಣ ನೀಡಬೇಕು ಎಂದು ತುಮಕೂರು ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪತ್ರ ಬರೆದಿದ್ದರು.

 

 

ಈ ಪತ್ರಕ್ಕೆ ಸಂಬಂಧಿಸಿದಂತೆ ತುಮಕೂರಿನ ಹಿಂದಿನ ಜಿಲ್ಲಾಧಿಕಾರಿಯವರು ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು 2025ರ ಫೆ.18ರಂದು ಮೂರನೇ ನೆನಪೋಲೆಯನ್ನು ಬರೆದಿದ್ದರು. ಆದರೂ ತುಮಕೂರು ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ವರದಿ, ಮಾಹಿತಿ ಮತ್ತು ಸ್ಪಷ್ಟೀಕರಣವನ್ನು ನೀಡಿರಲಿಲ್ಲ.

ಕಂದಾಯ ಇಲಾಖೆಯು ಕೋರಿದ್ದ ಮಾಹಿತಿ ಮತ್ತು ಸ್ಪಷ್ಟೀಕರಣವನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರಾಜೇಂದರ್ ಕುಮಾರ್ ಕಟಾರಿಯಾ ಅವರು ನಿರ್ದೇಶಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಕೋರಿತ್ತು. ಇದಾದ ನಂತರ ವರದಿ ಮತ್ತು ಸ್ಪಷ್ಟೀಕರಣ ಕೋರಿ ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಸದ್ಯ ಈ ಕಡತವು 2025ರ ಮಾರ್ಚ್‌ 29ರಿಂದ ಇದುವರೆಗೂ ಕಂದಾಯ ಇಲಾಖೆಯ ಶಾಖಾಧಿಕಾರಿ ಲಾಗಿನ್‌ನಲ್ಲಿದೆ.

 

 

ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರ್ಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆಗೆ ಖಾಯಂ ಆಗಿ ಮಂಜೂರು ಮಾಡಲು ಹಿಂದಿನ ಬಿಜೆಪಿ ಸರ್ಕಾರವು ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಕೋರಿದೆ. ಇದಾದ ನಂತರ ವರದಿ ಮತ್ತು ಸ್ಪಷ್ಟೀಕರಣ ಕೋರಿ ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ಸದ್ಯ ಈ ಕಡತವು 2025ರ ಮಾರ್ಚ್‌ 29ರಲ್ಲಿ  ಕಂದಾಯ ಇಲಾಖೆಯ ಶಾಖಾಧಿಕಾರಿ ಲಾಗಿನ್‌ನಲ್ಲಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19ರಡಿಯಲ್ಲಿ ಸರ್ಕಾರಿ ಜಮೀನುಗಳನ್ನು ವಿವಿಧ ಉದ್ದೇಶಗಳಿಗೆ ಗರಿಷ್ಠ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಅವಕಾಶ ಕಲ್ಪಿಸಲಾಗಿತ್ತು. ಇದರ ಪ್ರಕಾರ ಈ ಅವಧಿ ಮುಕ್ತಾಯವಾದ ತರುವಾಯ ಗುತ್ತಿಗೆ ಅವಧಿಯನ್ನು ಸಂಸ್ಥೆ ಪರಿಸ್ಥಿತಿಗೆ ಅನುಗುಣವಾಗಿ ಕೋರಿಕೆಯ ಮೇರೆಗೆ ಇನ್ನೂ 5 ವರ್ಷಗಳ ಕಾಲ ನವೀಕರಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ.

ಹಿಂದಿನಿಂದಲೂ ಕಂದಾಯ ಇಲಾಖೆ ಒಡೆತನದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ಜಾರಿಯಲ್ಲಿರುವ ಲಾಕ್​​​​​​​​ಡೌನ್​‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಗೆ ವಿವಿಧೋದ್ದೇಶಗಳಿಗೆ ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಮಾಡಲು ಆದೇಶ ಹೊರಡಿಸಿತ್ತು.

ಗುತ್ತಿಗೆ ಪಡೆದಿರುವ ಜಮೀನುಗಳನ್ನು ಖಾಯಂ ಆಗಿ ಮಂಜೂರು ಮಾಡಲು ಶಿಕ್ಷಣ ಸಂಸ್ಥೆಗಳು ಕೋರಿದ್ದಲ್ಲಿ ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಬಹುದು. ಅನ್ಯ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತ ವಿಧಿಸಿ ಒಂದು ಬಾರಿ ಮಾತ್ರ ಅನ್ವಯಿಸುವಂತೆ ಖಾಯಂ ಮಂಜೂರು ಮಾಡುವ ಮುಖಾಂತರ ಸಂಪನ್ಮೂಲ ಕ್ರೋಢೀಕರಿಸಲು ಹಿಂದಿನ ಬಿಜೆಪಿ ಸರ್ಕಾರ ಉದ್ದೇಶಿಸಿತ್ತು.

ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಖಾಯಂ ಮಂಜೂರಾತಿ ಪಡೆಯಲು ಇಚ್ಚಿಸಿದಲ್ಲಿ, ಅಂತಹ ಗುತ್ತಿಗೆ ಜಮೀನುಗಳನ್ನು ಸ್ಥಳ ಪರಿವೀಕ್ಷಣೆ ನಡೆಸಿ, ಉಪಯೋಗಿಸದೇ ಖುಲ್ಲಾ ಉಳಿಸಲಾಗಿರುವ ವಿಸ್ತೀರ್ಣದ ಜಮೀನುಗಳನ್ನು ಪುನಃ ಸರ್ಕಾರ ವಶಕ್ಕೆ ಪಡೆಯಲು ಸಹ ನಿರ್ಣಯಿಸಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19ರಿಂದ 22ರ ಪ್ರಕಾರ ಸರ್ಕಾರಿ ಭೂಮಿಯನ್ನ ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ರ ಮೇರೆಗೆ ಮಂಜೂರು ಮಾಡುವಾಗ ಅಥವಾ ಗುತ್ತಿಗೆಗೆ ನೀಡುವಾಗ ಏಕರೂಪದ ಮಾರುಕಟ್ಟೆ ಮೌಲ್ಯ / ಮಾರ್ಗಸೂಚಿ ಮೌಲ್ಯವನ್ನು ನಿಗದಿ ಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಗುತ್ತಿಗೆ ಪಡೆದ ಸಂಸ್ಥೆಯು ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಲು ಅಥವಾ ಅನ್ಯ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಬೇಕು. ಇದನ್ನಾಧರಿಸಿ ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತವನ್ನು ವಿಧಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಖಾಯಂ ಆಗಿ, ಸರ್ಕಾರದ ವತಿಯಿಂದ ಮಂಜೂರು ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪ್ರಸ್ತಾವ ಸಲ್ಲಿಸಬಹುದು.

Hot this week

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...
Please Scan to make Your Contribution

Topics

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

Related Articles

Popular Categories

error: Content is protected !!