ಬೆಂಗಳೂರು; ಗ್ರೂಪ್ ಎ ಮತ್ತು ಬಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಕೆಲವು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿಯೂ ಅತ್ಯಧಿಕ ಅಂಕ ನೀಡಲು ಮಧ್ಯವರ್ತಿಗಳು 1.50 ಕೋಟಿಯಿಂದ 3 ಕೋಟಿವರೆಗೆ ಲಂಚ ಸಂಗ್ರಹಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಹಿಂದಿನ ಹಲವು ರಹಸ್ಯಗಳನ್ನು ಇಂಚಿಂಚಾಗಿ ಹೊರತೆಗೆದಿರುವ ಜಾರಿ ನಿರ್ದೇಶಾಲಯವು ಕೆಎಎಸ್ ಪರೀಕ್ಷೆಯ ಸಂದರ್ಶನದಲ್ಲಿ ನಡೆದಿದ್ದ ಭಾರೀ ಪ್ರಮಾಣದ ಲಂಚಾವತಾರವನ್ನೂ ಬಹಿರಂಗಪಡಿಸಿದೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಪ್ರತಿ ಅಭ್ಯರ್ಥಿಯಿಂದ 1.50 ಕೋಟಿಯಿಂದ 3 ಕೋಟಿ ಸಂಗ್ರಹ
ಕೆಎಎಸ್ ಸಂದರ್ಶನದಲ್ಲಿ ಪ್ರತಿ ಅಭ್ಯರ್ಥಿಯಿಂದ ರೂ.1.50 ಕೋಟಿಯಿಂದ ರೂ.3 ಕೋಟಿವರೆಗೆ ಅಕ್ರಮ ಲಂಚದ ಹಣವನ್ನು ಸಂಗ್ರಹಿಸುತ್ತಿದ್ದರು. ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತ ಸಹವರ್ತಿಯಾಗಿದ್ದ ಎಂದು ಹೇಳಲಾಗಿರುವ ಡಿ ಎಸ್ ಮ್ಯಾಕ್ಸ್ನ ಎಸ್.ಪಿ. ದಯಾನಂದ್ ಅವರು, ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಖಚಿತವಾಗಿ ಆಯ್ಕೆಯಾಗುವಂತೆ ಮಾಡುವುದಕ್ಕಾಗಿ ಅಥವಾ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವ ಉದ್ದೇಶದಿಂದ ಕೆಲವು ಅಭ್ಯರ್ಥಿಗಳನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಪರಿಚಯಿಸುವ ಮತ್ತು ಶಿಫಾರಸು ಮಾಡುವ ಕೆಲಸವನ್ನು ಮಾಡುತ್ತಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಂತಹ ಅಭ್ಯರ್ಥಿಗಳ ವಿವರಗಳು ಹಾಗೂ ಅವರಿಂದ ಬೇಡಿಕೆ ಇಡಲಾಗಿದ್ದ ಅಕ್ರಮ ಲಂಚದ ಮೊತ್ತಗಳ ವಿವರಗಳನ್ನು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಒದಗಿಸಿದೆ.
ಕೆಎಎಸ್ (KAS) ಗ್ರೂಪ್ಗಳ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವ ಉದ್ದೇಶದಿಂದ ಸಂತೋಷ್ ಅವರು ಒಬ್ಬ ಅಭ್ಯರ್ಥಿಯನ್ನು ಶಿಫಾರಸು ಮಾಡಿದ್ದರು. ಈ ಅಭ್ಯರ್ಥಿಗೆ ಹೆಚ್ಚಿನ ಸಂದರ್ಶನ ಅಂಕಗಳನ್ನು ಕೊಡಿಸಲು ಶಿವಶಂಕರಪ್ಪ ಸಾಹುಕಾರ್ ಅವರು ರೂ.1.25 ಕೋಟಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಎಇಇ (AEE) ಪರೀಕ್ಷೆಯಲ್ಲಿ ಖಚಿತವಾಗಿ ಆಯ್ಕೆಯಾಗುವಂತೆ ಮಾಡಲು ಬಂಡೇರ್ಪನಹಳ್ಳಿ ಮುತ್ಯಾ ಅವರು ಒಬ್ಬ ಅಭ್ಯರ್ಥಿಯನ್ನು ಶಿಫಾರಸು ಮಾಡಿದ್ದರು. ಈ ಅಭ್ಯರ್ಥಿಯ ಆಯ್ಕೆಗಾಗಿ ಶಿವಶಂಕರಪ್ಪ ಸಾಹುಕಾರ್ ಅವರು ಒಟ್ಟು ರೂ.30 ಲಕ್ಷ ಅಕ್ರಮ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದಕ್ಕೆ ಪೂರಕವಾಗಿ ಡಿ ಎಸ್ ಮ್ಯಾಕ್ಸ್ನ ಎಸ್ ಪಿ ದಯಾನಂದ್ ಅವರೊಂದಿಗೆ ನಡೆಸಿದ ವಿಚಾರಣೆಯ ಮಾಹಿತಿಯನ್ನೂ ದೋಷಾರೋಪಣೆ ಪಟ್ಟಿಯಲ್ಲಿ ನೀಡಿದೆ. ಶಿವಶಂಕರಪ್ಪ ಸಾಹುಕಾರ್ ಅವರೊಂದಿಗೆ ನಿಮಗೆ ಬೇರೆ ಯಾವುದೇ ವ್ಯವಹಾರಗಳು ಅಥವಾ ಸಂಪರ್ಕಗಳಿವೆಯೇ ಎಂದು ಜಾರಿ ನಿರ್ದೇಶನಾಲಯವು ಪ್ರಶ್ನಿಸಿತ್ತು.
‘ಶಿವಶಂಕರಪ್ಪ ಸಾಹುಕಾರ್ ಅವರು ಕೆಪಿಎಸ್ಸಿಯ ಅಧ್ಯಕ್ಷರಾಗಿದ್ದಾರೆ ಮತ್ತು ಆಯೋಗದ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ, ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗಿದ್ದ ವಿವಿಧ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆಯಲ್ಲಿ ಸಹಾಯ ಮಾಡುವಂತೆ ಅವರ ಬಳಿ ನಾನು ಶಿಫಾರಸು ಮಾಡುತ್ತಿದ್ದೆ,’ ಎಂದು ಹೇಳಿಕೆಯಲ್ಲಿ ಎಸ್ ಪಿ ದಯಾನಂದ್ ಅವರು ಒಪ್ಪಿಕೊಂಡಿರುವುದು ಹೇಳಿಕೆಯಿಂದ ತಿಳಿದು ಬಂದಿದೆ.
‘ಇದಲ್ಲದೆ ಶಿವಶಂಕರಪ್ಪ ಸಾಹುಕಾರ್ ಅವರೊಂದಿಗೆ ನನಗೆ ನಿಕಟ ಸಂಪರ್ಕವಿದ್ದ ಕಾರಣ, ವಿವಿಧ ಅಭ್ಯರ್ಥಿಗಳು (ಮತ್ತು ಅವರ ಕುಟುಂಬದ ಸದಸ್ಯರು) ಕೆಪಿಎಸ್ಸಿ ನಡೆಸುತ್ತಿದ್ದ ವಿವಿಧ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸಂಪರ್ಕಿಸಲು ನನ್ನ ನೆರವು ಕೋರುತ್ತಿದ್ದರು,’ ಎಂದೂ ಹೇಳಿಕೆಯನ್ನು ವಿಸ್ತರಿಸಿರುವುದು ಗೊತ್ತಾಗಿದೆ.
ಯಾವ್ಯಾವ ಅಭ್ಯರ್ಥಿಗಳು ತಮ್ಮನ್ನು ಸಂಪರ್ಕಿಸಿದ್ದರು ಮತ್ತು ಯಾವ್ಯಾವ ಪರೀಕ್ಷೆಗೆ ಹಾಜರಾಗಿದ್ದರು ಎಂಬ ಕುರಿತು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿತ್ತು.
‘ಶಿವಶಂಕರಪ್ಪ ಸಾಹುಕಾರ್ ಅವರೊಂದಿಗೆ ಸಂಪರ್ಕ ಕಲ್ಪಿಸಿಕೊಡುವಂತೆ ನನ್ನನ್ನು ಭೇಟಿಯಾದ ಅಭ್ಯರ್ಥಿಗಳು ಎಇಇ (AEE) ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದವರಾಗಿದ್ದರು. ಕೆಎಎಸ್ (KAS) ಪರೀಕ್ಷೆಯ ಸಂದರ್ಶನದಲ್ಲಿ ಸಹಾಯ ಕೋರಿ ಬಂದವರೂ ಇದ್ದರು. ಅಭ್ಯರ್ಥಿಗಳ ಹೆಸರುಗಳು ನನಗೆ ನೆನಪಿಲ್ಲ. ಆದರೆ, ಅವರನ್ನು ಶಿವಶಂಕರಪ್ಪ ಸಾಹುಕಾರ್ ಅವರೊಂದಿಗೆ ಸಂಪರ್ಕ ಕಲ್ಪಿಸಿಕೊಡುವಂತೆ ನನ್ನನ್ನು ಕೇಳಿಕೊಂಡ ವ್ಯಕ್ತಿಗಳ ಹೆಸರುಗಳು ನೆನಪಿವೆ,’ ಎಂದು ಅಭ್ಯರ್ಥಿಗಳ ವಿವರಗಳನ್ನೂ ದಯಾನಂದ್ ಅವರು ಜಾರಿ ನಿರ್ದೇಶನಾಲಯಕ್ಕೆ ನೀಡಿರುವುದು ತಿಳಿದು ಬಂದಿದೆ.

ಸಂತೋಷ್ (ಮೊಬೈಲ್ ಸಂಖ್ಯೆ: 9900510913) ಅವರು ಕೆಎಎಸ್ ಪರೀಕ್ಷೆಗಾಗಿ ಒಬ್ಬ ಅಭ್ಯರ್ಥಿಯನ್ನು ಕರೆತಂದಿದ್ದರು. ಈ ವ್ಯವಹಾರವು ರೂ.1.25 ಕೋಟಿ ಮೊತ್ತಕ್ಕೆ ನಡೆದಿತ್ತು. ನಾನು ಅವರನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಪರಿಚಯಿಸಿದ್ದೆ. ಬಂಡೇಪನಹಳ್ಳಿ ಮುತ್ತ್ಯ ಅವರು ಎಇಇ ಪರೀಕ್ಷೆಯಲ್ಲಿ ಖಚಿತವಾಗಿ ಅಂತಿಮ ಆಯ್ಕೆ ಮಾಡಿಸುವ ಉದ್ದೇಶದಿಂದ ಒಬ್ಬ ಅಭ್ಯರ್ಥಿಯನ್ನು ಶಿಫಾರಸು ಮಾಡಿದ್ದರು. ಈ ವ್ಯವಹಾರವು ರೂ.30 ಲಕ್ಷಕ್ಕೆ ನಡೆದಿತ್ತು ಎಂಬುದು ನನಗೆ ನೆನಪಿದೆ. ಎಇಇ ಪರೀಕ್ಷೆಗೆ ಸಂಬಂಧಿಸಿದಂತೆ ಇನ್ನೂ ಒಬ್ಬ ವ್ಯಕ್ತಿ ಸಂಪರ್ಕ ಕಲ್ಪಿಸಿಕೊಂಡಿದ್ದರು. ಆದರೆ, ಪ್ರಸ್ತುತ ಆ ವ್ಯಕ್ತಿಯ ಹೆಸರು ನನಗೆ ನೆನಪಿಲ್ಲ. ಎಂದು ಮಾಹಿತಿ ನೀಡಿರುವುದು ಗೊತ್ತಾಗಿದೆ.
ಇದಲ್ಲದೇ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ 16 ಪ್ರಶ್ನೆಪತ್ರಿಕೆಗಳ ಕೀ ಉತ್ತರಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಶ್ನೆಪತ್ರಿಕೆಗಳ ಉತ್ತರಗಳು ಕೆಪಿಎಸ್ಸಿ ನಡೆಸಿದ್ದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ್ದವು.
ಕೆಎಎಸ್ ಪೂರ್ವಭಾವಿ ಪರೀಕ್ಷೆ (KAS Preliminary), ಸಹಾಯಕ ನಿಯಂತ್ರಕರು (Assistant Controller), ಮೋಟಾರು ವಾಹನ ನಿರೀಕ್ಷಕರು (Motor Vehicle Inspector), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (Panchayat Development Officer), ಭೂದಾಖಲೆಗಳ ಸಹಾಯಕ ನಿರ್ದೇಶಕರು (Assistant Director of Land Records), ಭೂವಿಜ್ಞಾನಿಗಳು (Geologist), ಗ್ರೂಪ್-ಸಿ ಹುದ್ದೆಗಳು (Group-C posts) ಸೇರಿದಂತೆ ವಿವಿಧ ಪರೀಕ್ಷೆಗಳು ಸೇರಿದ್ದವು.

ಇದಲ್ಲದೆ ಎಸ್.ಪಿ. ದಯಾನಂದ್ ಅವರು ಖಚಿತ ಆಯ್ಕೆ ಮಾಡಿಸುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಶಿಫಾರಸು ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದ ಒಬ್ಬ ಅಭ್ಯರ್ಥಿಯ ಆಯ್ಕೆಗಾಗಿ ಸಂತೋಷ್ ಎಂಬುವವರ ಮೂಲಕ ರೂ.1.25 ಕೋಟಿ ಮೊತ್ತದ ವ್ಯವಹಾರ ನಡೆದಿರುವುದೂ ಸೇರಿದೆ.
ಅದೇ ರೀತಿ ಎಇಇ (AEE) ಪರೀಕ್ಷೆಗೆ ಸಂಬಂಧಿಸಿದಂತೆ ಬಂಡೇಪನಹಳ್ಳಿ ಮುತ್ತ್ಯ ಅವರ ಮೂಲಕ ರೂ.30 ಲಕ್ಷ ಮೊತ್ತದ ವ್ಯವಹಾರ ನಡೆದಿತ್ತು. ಅಲ್ಲದೆ, ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರು ಕೆಎಎಸ್ ಸಂದರ್ಶನದಲ್ಲಿ ಪ್ರತಿ ಅಭ್ಯರ್ಥಿಯಿಂದ ರೂ.1.50 ಕೋಟಿಯಿಂದ ರೂ.3 ಕೋಟಿವರೆಗೆ ಅಕ್ರಮ ಲಂಚದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೂ ಹೇಳಿಕೆ ನೀಡಿದ್ದಾರೆ.
ಹೀಗಾಗಿ, ಸೋರಿಕೆಯಾದ ಉತ್ತರ ಕೀಗಳಿಗೆ ಪ್ರತಿಯಾಗಿ ಅಭ್ಯರ್ಥಿಗಳಿಂದ ಶಿವಶಂಕರಪ್ಪ ಸಾಹುಕಾರ್ ಮತ್ತು ಆಯೋಗದ ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ ಅವರು ಸ್ವೀಕರಿಸಿದ ಹಣ ಹಾಗೂ ಇತರ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಅಕ್ರಮ ಲಂಚದ ಹಣವು ಪಿಎಂಎಲ್ಎ, 2002ರ ಕಲಂ 2(1)(u)ರ ಅರ್ಥದಲ್ಲಿ ಅಪರಾಧದಿಂದ ಗಳಿಸಿದ ಆದಾಯ (Proceeds of Crime) ಎಂಬ ವ್ಯಾಪ್ತಿಗೆ ಒಳಪಡುತ್ತದೆ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘
ಎಸ್ ಪಿ ದಯಾನಂದ್ ಅವರ ಬಳಿ ನಗದು ಹಣ ಇರಿಸಿದ್ದರೇ ಸಾಹುಕಾರ್!
ಎಸ್.ಪಿ. ದಯಾನಂದ್ ಅವರ ಬಳಿ ನಗದು ಹಣವನ್ನು ಇರಿಸುವ ಮೂಲಕ ಶಿವಶಂಕರಪ್ಪ ಸಾಹುಕಾರ್ ಅವರು ಅಪರಾಧದ ಆದಾಯವನ್ನು ನಗದು ರೂಪದಲ್ಲಿ ಹೊಂದಿದ್ದು ಮತ್ತು ಮರೆಮಾಚಿದ್ದರು ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದೆ.
ಪಿಎಂಎಲ್ಎ 2002ರ ಕಲಂ 17ರ ಅಡಿಯಲ್ಲಿ 2026ರ ಅಕ್ಟೋಬರ್ 16ರಂದು ಎಸ್ ಪಿ ದಯಾನಂದ್ ಅವರ ವಸತಿ ಆವರಣದಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಹಲವು ದಾಖಲೆಗಳನ್ನೂ ವಶಪಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ, ಅವರ Toyota Fortuner ಕಾರು (KA 50 MA 4888)ಯಿಂದ ‘SHIV SHANKAR SAHUKAR’ ಮತ್ತು ‘Refund Amount Detail’ ಎಂಬ ಶೀರ್ಷಿಕೆಗಳನ್ನು ಹೊಂದಿದ್ದ ಕೆಲವು ಮುದ್ರಿತ ಸಡಿಲ ಹಾಳೆಗಳನ್ನು ಪಂಚರ ಸಮ್ಮುಖದಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿತ್ತು.
ಈ ಹಾಳೆಗಳಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರಿಂದ ಸ್ವೀಕರಿಸಿದ ಮತ್ತು ಅವರಿಗೆ ಪಾವತಿಸಿದ ನಗದು ಹಣದ ವಿವರಗಳನ್ನು ದಾಖಲಿಸಲಾಗಿತ್ತು. ಈ ನಮೂದುಗಳಲ್ಲಿ ಅವರ ಮೊಬೈಲ್ ಸಂಖ್ಯೆಯೊಂದಿಗೆ ‘Mr. Shivashankarappa Sahukar (KPSCB) 9741688756’ ಎಂದು ನಮೂದಿಸಲಾಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ವಶಪಡಿಸಿಕೊಂಡ ಬಿಡಿ ಹಾಳೆಯಲ್ಲಿನ ನಗದು ಸ್ವೀಕೃತಿ ಮತ್ತು ಮರುಪಾವತಿ ವಿವರಗಳು
| ಕ್ರಮ ಸಂಖ್ಯೆ | ದಿನಾಂಕ | ವಿವರಗಳು (ವಶಪಡಿಸಿಕೊಂಡ ಹಾಳೆಯಲ್ಲಿರುವಂತೆ) | ಸ್ವೀಕರಿಸಿದ ನಗದು (₹) | ಹಿಂದಿರುಗಿಸಿದ ನಗದು (₹) |
| 1 | 23/08/2025 | ಶಿವಶಂಕರ್ ಅವರಿಂದ ದಯಾ ಮೂಲಕ ಸ್ವೀಕರಿಸಲಾಗಿದೆ | 99,77,500 | — |
| 2 | 28/11/2025 | ದಯಾ ಸರ್ ಅವರ ಸೂಚನೆಯಂತೆ ಶಿವಶಂಕರಪ್ಪ ಸಾಹುಕಾರ್ (KPSCB) 9741688756 ಅವರಿಗೆ ಮರುಪಾವತಿ | — | 50,00,000 |
| 3 | 02/12/2025 | ದಯಾ ಸರ್ ಅವರ ಸೂಚನೆಯಂತೆ ಶಿವಶಂಕರಪ್ಪ ಸಾಹುಕಾರ್ (KPSCB) 9741688756 ಅವರಿಗೆ ಮರುಪಾವತಿ | — | 49,70,000 |
| 4 | 18/12/2025 | ದಯಾ ಸರ್ ಮೂಲಕ ಶಿವಶಂಕರಪ್ಪ ಸಾಹುಕಾರ್ (KPSCB) 9741688756 ಅವರಿಂದ ಸ್ವೀಕರಿಸಲಾಗಿದೆ | 99,91,000 | — |
| 5 | 31/12/2025 | ದಯಾ ಸರ್ ಮೂಲಕ ಶಿವಶಂಕರಪ್ಪ ಸಾಹುಕಾರ್ (KPSCB) 9741688756 ಅವರಿಂದ ಸ್ವೀಕರಿಸಲಾಗಿದೆ | 1,99,96,000 | — |
| ಒಟ್ಟು | 3,99,64,500 | 99,70,000 |
ಉಳಿಕೆ ಮೊತ್ತ: ₹2,99,94,500
ವಶಪಡಿಸಿಕೊಂಡ ಬಿಡಿ ಹಾಳೆಯನ್ನು ಜಾರಿ ನಿರ್ದೇಶನಾಲಯವು ಪರಿಶೀಲಿಸಿತ್ತು. 2025ರ ಆಗಸ್ಟ್ 23ರಿಂದ 2025ರ ಡಿಸೆಂಬರ್ 2ರಿಂದ 31ರವರೆಗಿನ ಅವಧಿಯಲ್ಲಿ, ಕೇವಲ ನಾಲ್ಕು ತಿಂಗಳೊಳಗೆ ಶಿವಶಂಕರಪ್ಪ ಎಸ್. ಸಾಹುಕಾರ್ (KPSCB) ಅವರ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆ (9741688756) ನಮೂದಿಸಿ ಒಟ್ಟು ₹3,99,64,500 ಮೊತ್ತದ ಹಣ ಸ್ವೀಕೃತಿಯ ನಮೂದುಗಳನ್ನು ಮಾಡಿದ್ದನ್ನು ಪತ್ತೆ ಹಚ್ಚಿತ್ತು.
ವಶಪಡಿಸಿಕೊಂಡ ಸಡಿಲ ಹಾಳೆಯಲ್ಲಿನ ಈ ನಮೂದುಗಳ ಬಗ್ಗೆ ಜಾರಿ ನಿರ್ದೇಶನಾಲಯವು ಎಸ್ ಪಿ ದಯಾನಂದ್ ಅವರನ್ನು ವಿಚಾರಿಸಿತ್ತು. ತಾವು ರಿಯಲ್ ಎಸ್ಟೇಟ್ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ M/s. DS Max Properties Pvt. Ltd. ಮತ್ತು DS Max ಸಮೂಹದ ಇತರ ಕಂಪನಿಗಳ ನಿರ್ದೇಶಕರಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರನ್ನು ಕಳೆದ 7ರಿಂದ 8 ವರ್ಷಗಳಿಂದ ತಿಳಿದಿದ್ದು, ಇಬ್ಬರೂ ಒಂದೇ ಸಮುದಾಯ ಮತ್ತು ಪ್ರದೇಶಕ್ಕೆ ಸೇರಿದವರಾಗಿರುವುದರಿಂದ ಪರಿಚಯವಿದೆ ಎಂದು ತಿಳಿಸಿದ್ದರು.
ವಶಪಡಿಸಿಕೊಂಡ ಸಡಿಲ ಹಾಳೆಯಲ್ಲಿರುವ ವಿವರಗಳನ್ನು ಅವರು ದೃಢಪಡಿಸಿದ್ದರು. ಮತ್ತು ಅದನ್ನು ತಮ್ಮ ಅಕೌಂಟೆಂಟ್ ವಿನೋದ್ ಸಿದ್ಧಪಡಿಸಿದ್ದರು ಎಂದು ಹೇಳಿದ್ದರು.

ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ಸಮೀಪದ ಹೊಯ್ಸಳ ಡ್ರೀಮ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರಿಂದ ₹3,99,64,500 ನಗದು ಹಣವನ್ನು ಸ್ವೀಕರಿಸಲಾಗಿತ್ತು. (23/08/2025ರಿಂದ 31/12/2025ರವರೆಗಿನ ಅವಧಿ) ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಮೊತ್ತದಲ್ಲಿ ₹99,70,000 ಹಣವನ್ನು ತಮ್ಮ ನಿವಾಸದಲ್ಲಿಯೇ ನಗದು ರೂಪದಲ್ಲಿ ಅವರಿಗೆ ಹಿಂದಿರುಗಿಸಲಾಗಿತ್ತು. ಉಳಿದ ₹2,99,94,500 ಮೊತ್ತವನ್ನು ನಂತರದ ತಿಂಗಳುಗಳಲ್ಲಿ ಹಿಂದಿರುಗಿಸಲಾಗಿದ್ದು, ಆದರೆ ಆ ವಹಿವಾಟುಗಳನ್ನು ಎಲ್ಲಿಯೂ ದಾಖಲಿಸಿಲ್ಲ ಎಂದು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗೆ ತಿಳಿಸಿದ್ದರು.
ಈ ಮೇಲಿನ ವ್ಯವಹಾರಗಳಲ್ಲದೆ ಶಿವಶಂಕರಪ್ಪ ಸಾಹುಕಾರ್ ಅವರು ಈ ಹಿಂದೆ ₹8 ಕೋಟಿಯಿಂದ ₹10 ಕೋಟಿ ಮೊತ್ತದವರೆಗೆ ನಗದು ಹಣವನ್ನು ನೀಡುವುದು ಮತ್ತು ಸ್ವೀಕರಿಸುವ ವ್ಯವಹಾರಗಳನ್ನು ನಡೆಸಿದ್ದರು ಎಂದು ಎಸ್.ಪಿ. ದಯಾನಂದ್ ಮಾಹಿತಿ ನೀಡಿದ್ದರು. ಪ್ರಸ್ತುತ ಹಣಕಾಸು ವರ್ಷದಲ್ಲಿಯೂ ಜೂನ್ 2026ರವರೆಗೆ ಶಿವಶಂಕರಪ್ಪ ಸಾಹುಕಾರ್ ಅವರ ನಗದು ಹಣದ ವ್ಯವಹಾರಗಳನ್ನು ತಾವು ನಿರ್ವಹಿಸಿದ್ದಾಗಿ ಹೇಳಿದ್ದಾರೆ. ಇದಕ್ಕಾಗಿ ತಾವು ಯಾವುದೇ ಕಮಿಷನ್ ಪಡೆಯುತ್ತಿರಲಿಲ್ಲ ಎಂದೂ ತಿಳಿಸಿದ್ದಾರೆ.
ಆದಾಯ ತೆರಿಗೆ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಇಂತಹ ನಗದು ವಹಿವಾಟುಗಳ ವಿವರಗಳನ್ನು ಯಾವುದೇ ಕಂಪ್ಯೂಟರ್ ವ್ಯವಸ್ಥೆಯಲ್ಲಿ ದಾಖಲಿಸುತ್ತಿರಲಿಲ್ಲ ಮತ್ತು ಕಾಲಕಾಲಕ್ಕೆ ಅವುಗಳನ್ನು ನಾಶಪಡಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರ ನಿಕಟ ಸಂಬಂಧಿಯಾದ ಮಲ್ಲಿನಾಥ್ ಸಾಹುಕಾರ್ ಅವರು, ಶಿವಶಂಕರಪ್ಪ ಸಾಹುಕಾರ್ ಅವರು ನಗರದಲ್ಲಿ ಇಲ್ಲದಿದ್ದಾಗ ಅವರ ಪರವಾಗಿ ನಗದು ಹಣವನ್ನು ನೀಡುವುದು ಮತ್ತು ಸ್ವೀಕರಿಸುವ ಕೆಲಸ ಮಾಡುತ್ತಿದ್ದರು ಎಂದೂ ತಿಳಿಸಿದ್ದಾರೆ.

‘Refund Amount Detail’ ಎಂಬ ಹಾಳೆಯಲ್ಲಿ 2025ರ ಮಾರ್ಚ್ 29ರಂದು ಶಿವಶಂಕರಪ್ಪ ಸಾಹುಕಾರ್ ಅವರಿಗೆ ₹30 ಲಕ್ಷ ನಗದು ಪಾವತಿಸಿರುವುದು ಮತ್ತು 2025ರ ಏಪ್ರಿಲ್ 26ರಂದು ಅದನ್ನು ಹಿಂದಿರುಗಿಸಿರುವುದೂ ದಾಖಲಾಗಿದೆ. ಹಾಗೆಯೇ 2026ರ ಆಗಸ್ಟ್ 18ರಂದು ದಾಖಲಿಸಿದ್ದ ಹೇಳಿಕೆ ಪ್ರಕಾರ ಕೆಪಿಎಸ್ಸಿಯಿಂದ ಪಡೆಯುವ ವೇತನ ಮತ್ತು ತಮ್ಮ ಕುಟುಂಬದ ಒಡೆತನದ ಜಮೀನಿನಿಂದ ಬರುವ ಕೃಷಿ ಆದಾಯ ಮಾತ್ರವೇ ತಮ್ಮ ಆದಾಯದ ಮೂಲಗಳಾಗಿವೆ ಎಂದು ಶಿವಶಂಕರಪ್ಪ ಸಾಹುಕಾರ್ ತಿಳಿಸಿದ್ದಾರೆ.
‘ಹೀಗಿರುವಾಗ ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬರು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ₹3.99 ಕೋಟಿ ನಗದು ಹಣವನ್ನು ಹೊಂದಿರುವುದು (ಹಿಂದಿನ ಅವಧಿಯಲ್ಲಿ ₹8 ಕೋಟಿಯಿಂದ ₹10 ಕೋಟಿ ಹಣದ ವ್ಯವಹಾರಗಳೂ ನಡೆದಿರುವುದು), ಅವರ ತಿಳಿದಿರುವ ಆದಾಯದ ಮೂಲಗಳಿಗೆ ಸಂಪೂರ್ಣವಾಗಿ ಅನುಪಾತ ಮೀರಿದ್ದಾಗಿದೆ. ಇದಲ್ಲದೆ, ಈ ಹಣವನ್ನು ಇರಿಸಿಕೊಂಡಿದ್ದ ವ್ಯಕ್ತಿಯೇ ಕೆಪಿಎಸ್ಸಿ ನೇಮಕಾತಿಗಳಲ್ಲಿ ಅಕ್ರಮ ಪ್ರತಿಫಲದ ವ್ಯವಹಾರಗಳನ್ನು ಮಧ್ಯಸ್ಥಿಕೆ ವಹಿಸಿ ನಡೆಸಿದ್ದಾಗಿ ಒಪ್ಪಿಕೊಂಡಿರುವುದು, ಈ ನಗದು ಹಣವು ಕೆಪಿಎಸ್ಸಿ ನಡೆಸಿದ್ದ ನೇಮಕಾತಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಅಪರಾಧಗಳಿಂದ ಬಂದ ಅಪರಾಧದ ಆದಾಯವಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ವಿವರಿಸಿದೆ.

ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಎಸ್.ಪಿ. ದಯಾನಂದ್ ಮತ್ತು ಮಲ್ಲಿನಾಥ್ ಸಾಹುಕಾರ್ ಅವರ ಸಕ್ರಿಯ ಸಹಾಯದಿಂದ, ಅಪರಾಧದ ಆದಾಯವನ್ನು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಇರಿಸುವ ಮೂಲಕ ಹೊಂದಿ ಮರೆಮಾಚಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಆ ಹಣವನ್ನು ಎಸ್.ಪಿ. ದಯಾನಂದ್ ಅವರ ವ್ಯವಹಾರದಲ್ಲಿ ಬಳಸಲು ಅವಕಾಶ ನೀಡಲಾಗಿತ್ತು. ಅಪರಾಧದ ಆದಾಯದ ಸ್ವರೂಪ, ಮೂಲ, ಮಾಲೀಕತ್ವ ಮತ್ತು ನಿಯಂತ್ರಣವನ್ನು ಮರೆಮಾಚುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿರುವುದು ಜಾರಿ ನಿರ್ದೇಶನಾಲಯದ ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ಇಂತಹ ದುಷ್ಕೃತ್ಯಗಳು ನೇಮಕಾತಿ ಪ್ರಕ್ರಿಯೆಯ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಹಾಳುಮಾಡಿರುವುದಷ್ಟೇ ಅಲ್ಲದೆ, ಕಠಿಣ ಪರಿಶ್ರಮ ಮತ್ತು ಸಿದ್ಧತೆಯ ಮೂಲಕ ಉತ್ತಮ ಅಂಕಗಳನ್ನು ಗಳಿಸಿ ಅರ್ಹತೆ ಪಡೆದಿದ್ದ ನೈಜ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅಂತಿಮ ಆಯ್ಕೆಯಲ್ಲಿ ದೊರೆಯಬೇಕಾಗಿದ್ದ ನ್ಯಾಯಸಮ್ಮತ ಅವಕಾಶವನ್ನು ಕಸಿದುಕೊಂಡಿವೆ ಎಂದು ಜಾರಿ ನಿರ್ದೇಶನಾಲಯವು ಅಭಿಪ್ರಾಯಿಸಿದೆ.

‘ಮೇಲಿನ ವಿವರಗಳು ಮತ್ತು ಇಲ್ಲಿಯವರೆಗೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳಿಂದ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಸೇರಿದಂತೆ ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿಕೊಂಡಿದೆ. ಇದಲ್ಲದೆ, ಈ ಭ್ರಷ್ಟಾಚಾರವು ಆಳವಾಗಿ ಬೇರೂರಿದೆ. ನೇಮಕಾತಿ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿಯೂ ಕೆಪಿಎಸ್ಸಿ ಅಧಿಕಾರಿಗಳು ಮತ್ತು ಸದಸ್ಯರು ಅಭ್ಯರ್ಥಿಗಳಿಂದ ಅಕ್ರಮ ಲಂಚದ ಹಣವನ್ನು ಸಂಗ್ರಹಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಇದಲ್ಲದೆ ಈ ಭ್ರಷ್ಟಾಚಾರದ ಪರಿಣಾಮಗಳು ವೈಯಕ್ತಿಕ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಇದರಿಂದ ಸಾರ್ವಜನಿಕ ಹಿತಾಸಕ್ತಿಗೆ ಗಣನೀಯ ಹಾನಿಯಾಗುವುದರ ಜೊತೆಗೆ, ಒಟ್ಟಾರೆ ಸಮಾಜಕ್ಕೂ ನಷ್ಟ ಉಂಟಾಗುತ್ತದೆ ಎಂದು ಹೇಳಿರುವುದು ಗೊತ್ತಾಗಿದೆ.




