ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ಮಾಡಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಯು 41.20 ಕೋಟಿ ಮತ್ತು ಅಲ್ಟ್ರಾ ಟೆಕ್ ಸಿಮೆಂಟ್ ಉತ್ಪಾದನಾ ಘಟಕವು 1.64 ಕೋಟಿಯಷ್ಟು ಭೂ ಕಂದಾಯವನ್ನು ಪಾವತಿಸಿಲ್ಲ. ಭೂ ಕಂದಾಯ ಪಾವತಿಸುವ ಸಂಬಂಧ ಕಲ್ಬುರ್ಗಿ ಜಿಲ್ಲಾಧಿಕಾರಿಳು ಹಲವು ಬಾರಿ ನೆನಪೋಲೆಗಳನ್ನು ಬರೆದಿದ್ದರೂ ಸಹ ಈ ಮೊತ್ತವನ್ನು ಪಾವತಿಸಿಲ್ಲ. ಹೀಗಾಗಿ ಕಲ್ಬುರ್ಗಿ ಜಿಲ್ಲಾಧಿಕಾರಿಯು ಅಂತಿಮ ನೆನಪೋಲೆಯನ್ನು ಬರೆದಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು, ಮ್ಯಾಂಗನೀಸ್ ಮತ್ತು ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳು ಮತ್ತು ಉದ್ಯಮಿಗಳು ರಾಜ್ಯ ಸರ್ಕಾರಕ್ಕೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ನೂರಾರು ಕೋಟಿ ರುಪಾಯಿಗಳನ್ನು ಸಕಾಲದಲ್ಲಿ ಪಾವತಿಸುತ್ತಿಲ್ಲ. ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಕಂಪನಿ ಮತ್ತು ಉದ್ಯಮಿಗಳಿಗೆ ನೆನಪೋಲೆಗಳನ್ನು ನಿರಂತರವಾಗಿ ಬರೆಯುತ್ತಿದ್ದರೂ ಸಹ ಬಾಕಿ ಇರುವ ನೂರಾರು ಕೋಟಿ ರುಪಾಯಿಯನ್ನು ಪಾವತಿಸುತ್ತಿಲ್ಲ .
ಗಣಿಗಾರಿಕೆ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಭೂ ಕಂದಾಯ ಬಾಕಿಯನ್ನು ವಸೂಲಿ ಮಾಡುವ ಮೂಲಕ ರಾಜಸ್ವ ಹೆಚ್ಚಿಸಬೇಕು ಎಂದು ಈಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಈ ಬೆಳವಣಿಗೆ ನಡುವೆಯೇ ಕಲ್ಬುರ್ಗಿಯ ಸೇಡಂನಲ್ಲಿರುವ ವಾಸವದತ್ತ ಸಿಮೆಂಟ್ ಕಾರ್ಖಾನೆಯು 41.20 ಕೋಟಿಯಷ್ಟು ಭೂ ಕಂದಾಯವನ್ನು ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಭೂ ಕಂದಾಯ ಬಾಕಿ ಉಳಿಸಿಕೊಂಡಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ 2025ರಿಂದಲೂ ಕಲ್ಬುರ್ಗಿ ಜಿಲ್ಲಾಧಿಕಾರಿ ಮತ್ತು ಸೇಡಂ ತಹಶೀಲ್ದಾರ್ ಅವರ ಕಚೇರಿಯು ಅಧಿಕೃತ ಜ್ಞಾಪನ ಪತ್ರಗಳನ್ನು ಹೊರಡಿಸುತ್ತಲೇ ಬಂದಿದ್ದಾರೆ. ಆದರೂ ವಾಸವದತ್ತಾ ಸಿಮೆಂಟ್ ಕಂಪನಿಯು ಭೂ ಕಂದಾಯ ಬಾಕಿಯನ್ನು ಪಾವತಿಸಿಲ್ಲ. ಕಳೆದ ಒಂದು ವರ್ಷದಿಂದಲೂ ಭೂ ಕಂದಾಯ ಪಾವತಿಸುವಲ್ಲಿ ವಿಫಲವಾಗಿರುವ ಈ ಕಂಪನಿ ವಿರುದ್ಧ ಸ್ಥಳೀಯ ಜಿಲ್ಲಾಡಳಿತವೂ ಕಠಿಣ ಕ್ರಮ ಕೈಗೊಂಡಿಲ್ಲ. ಬದಲಿಗೆ ನೆನಪೋಲೆಗಳನ್ನು ಕಳಿಸುವುದರಲ್ಲೇ ಕಾಲಹರಣ ಮಾಡುತ್ತಿರುವುದು ತಿಳಿದು ಬಂದಿದೆ.
ಅಲ್ಟ್ರಾ ಟೆಕ್‌ನಿಂದ 1.64 ಕೋಟಿ ಬಾಕಿ
ಸೇಡಂ ತಾಲೂಕಿನ ಊದಗಿ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‍ಗಳಲ್ಲಿ ಅಲ್ಟ್ರಾ ಟೆಕ್ ಸಿಮೆಂಟ್ ಘಟಕವು ಸುಣ್ಣ ಕಲ್ಲು ಗಣಿಗಾರಿಕೆ ನಡೆಸುವ ಉದ್ದೇಶದಿಂಧ ರೈತರಿಂದ ಜಮೀನು ಖರೀದಿ ಮಾಡಿತ್ತು. ಈ ಜಮೀನುಗಳನ್ನು ಕೈಗಾರಿಕೆ ಪ್ರದೇಶವನ್ನಾಗಿ ಏಕ ನಿವೇಶನ ವಿನ್ಯಾಶ ನಕ್ಷೆ ಪಡೆದಿತ್ತು. ಇದರಿಂದ ಸೇಡಂ ನಗರ ಯೋಜನಾ ಪ್ರಾಧಿಕಾರಕ್ಕೆ 1,64,13,710 ರು ಆರ್ಥಿಕ ನಷ್ಟವುಂಟಾಗಿತ್ತು. ಈ ಮೊತ್ತವನ್ನು ಭೂ ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು ಎಂದು ತಹಶೀಲ್ದಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ 2025ರ ನವೆಂಬರ್ 6ರಂದೇ ಸೂಚಿಸಿದ್ದರು. ಆದರೆ ಈ ಮೊತ್ತವು ಪಾವತಿಯಾಗಿಲ್ಲ ಎಂದು ಗೊತ್ತಾಗಿದೆ.

ವಾಸವದತ್ತಾ ಸಿಮೆಂಟ್ ಕಂಪನಿಯಿಂದ 41.20 ಕೋಟಿ ಬಾಕಿ
ಅದೇ ರೀತಿ ಇದೇ ಸೇಡಂ ತಾಲೂಕಿನಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸಿರುವ ವಾಸವದತ್ತ ಸಿಮೆಂಟ್ ಕಂಪನಿಯೂ ಸಹ 41.20 ಕೋಟಿಯಷ್ಟು ಭೂ ಕಂದಾಯವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಭೂ ಕಂದಾಯವನ್ನು ಪಾವತಿಸಬೇಕು ಎಂದು 2025ರ ನವೆಂಬರ್ 6

ಮತ್ತು 2026ರ ಜನವರಿ 1ರಂದು ನೋಟೀಸ್ ಕೂಡ ಜಾರಿಗೊಳಿಸಿತ್ತು .

ನೋಟೀಸ್‌ನಲ್ಲೇನಿತ್ತು?
‘ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಇರುವ ಸರ್ವೆ ನಂಬರ್‍ನ ಅಥವಾ ಭೂ ಮಾಪನ ಸಂಖ್ಯೆಗಳಲ್ಲಿ ಸರ್ವೆ ನಂಬರ್‍ಗಳಲ್ಲಿ ಭೂ ಕಂದಾಯ ಬಾಕಿ ಇದೆ. ಒಟ್ಟು 41,20,41,258 ರು ಸಂದಾಯವಾಗಿಲ್ಲ. ಅದನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಉಪಬಂಧ-2 ನಿಯಮದ ಪ್ರಕಾಋ ಗ್ರಾಮ ಲೆಕ್ಕಿಗನಿಗೆ ಅಥವಾ ಜಿಲ್ಲಾ ಖಜಾನೆಗೆ ಈ ನೋಟೀಸ್ ಜಾರಿಯಾದ ದಿನಾಂಕದಿಂದ 10 ದಿನದೊಳಗೆ 41,20,41,258 ರು.ಗಳ ಸಂದಾಯ ಮಾಡಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು,’ ಎಂದು 2026ರ ಜನವರಿ 1ರಂದೇ ನೋಟೀಸ್ ಜಾರಿಗೊಳಿಸಿತ್ತು.

ಅಲ್ಲದೇ ಏಕ ನಿವೇಶನದ ನಕ್ಷೆಗೆ ಅನುಮೋದನೆ ಮತ್ತು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1964ರ ಕಲಂ 109 (1)ರ ಅಡಿಯಲ್ಲಿ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೋಟೀಸ್ ನೀಡಿತ್ತು. ಆದರೂ ಸಹ ಕಂಪನಿಯು 41.20 ಕೋಟಿ ರುಪಾಯಿಗಳನ್ನು ಪಾವತಿಸಿರಲಿಲ್ಲ. ಭೂ ಕಂದಾಯವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೇಡಂನ ಸಹಾಯಕ ಆಯುಕ್ತರಿಗೆ 2026ರ ಫೆ.2ರಂದು ಅಂತಿಮ ನೆನಪೋಲೆಯನ್ನು ಕಳಿಸಿತ್ತು.

ವಾಸವದತ್ತಾ ಸಿಮೆಂಟ್ ಕಾರ್ಖಾನೆಯಿಂದ ಬಾಕಿ ಇರುವ 41.20 ಕೋಟಿ ರು ಮೊತ್ತದ ಭೂ ಕಂದಾಯ ಮೊತ್ತವನ್ನು ವಸೂಲು ಮಾಡಲು 2024ರ ಮೇ 22ರಂದು ಆದೇಶಿಸಲಾಗಿದೆ. ಬಾಕಿ ಉಳಿಸಿಕೊಂಡಿರುವ 41.20 ಕೋಟಿಯನ್ನು ನಿಯಮಾನುಸಾರ ಭೂ ಕಂದಾಯ ಬಾಕಿಯಂತೆ ವಸೂಲು ಮಾಡಿ ಸರ್ಕಾರದ ಖಜಾನೆಗೆ ಸಂದಾಯ ಮಾಡಲು ಸೂಚಿಸಲಾಗಿದೆ. ಆದರೂ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಕ್ಷಣವೇ ಬಾಕಿದಾರರಿಂದ ಬರಬೇಕಾಗಿರುವ 41.20 ಕೋಟಿಯನ್ನು ವಸೂಲು ಮಾಡಿ ಸರ್ಕಾರಕ್ಕೆ ಜಮೆ ಮಾಡಬೇಕು. ಮತ್ತು ಅನುಪಾಲನೆ ವರದಿಯನ್ನು ಸಲ್ಲಿಸಬೇಕು ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿಯುಕ ಸಹಾಯಕ ಆಯುಕ್ತರಿಗೆ ಅಂತಿಮ ನೆನಪೋಲೆ ಕಳಿಸಿದ್ದರು.

ಆದರೆ ಈ ಅಂತಿಮ ನೆನಪೋಲೆ ಆಧರಿಸಿ ಸೇಡಂನ ಸಹಾಯಕ ಆಯುಕ್ತರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಹೀಗಾಗಿ ಅಂಬೇಡ್ಕರ್ ಸೇವಾಸಮಿತಿಯ ಈಶ್ವರಾಜ ಲಕ್ಷ್ಮಣ ಎಂಬುವರು 2026ರ ಮಾರ್ಚ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು. ಭೂ ಕಂದಾಯ ವಸೂಲಾತಿ ಮಾಡದಿರುವ ಕಂದಾಯ ಇಲಾಖೆಯ ಸಕ್ಷಮ ಅಧಿಕಾರಿಗಳ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕು ಎಂದು ದೂರು ಸಲ್ಲಿಸಿದ್ದರು.

ಅದೇ ರೀತಿ ಕೇಂದ್ರ ರೈಲ್ವೆ ಖಾತೆಯ ಈಗಿನ ರಾಜ್ಯ ಸಚಿವ ವಿ ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪನಿಯು ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ 53.12 ಕೋಟಿ ರು ದಂಡದ ಮೊತ್ತವನ್ನು ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಮಾತಾ ಮಿನರಲ್ಸ್ ಕಂಪನಿಯು ಕಳೆದ 12 ವರ್ಷಗಳಿಂದಲೂ ಭೂ ಕಂದಾಯ ರೂಪದಲ್ಲಿ ಬಾಕಿ ಇರುವ 53.12 ಕೋಟಿ ವಸೂಲು ಮಾಡಿಲ್ಲ.
6.33 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಾಣಿಕೆ; ಮಾತಾ ಮಿನರಲ್ಸ್‌ನಿಂದ ವಸೂಲಾಗದ 53.12 ಕೋಟಿ
‘ಮಾತಾ ಮಿನರಲ್ಸ್ ಪ್ರೈವೈಟ್ ಲಿಮಿಟೆಡ್‌ನಿಂದ ಬರಬೇಕಾದ ಬಾಕಿಯ ಹಣವನ್ನು ಮೈನ್ಸ್ ಅಂಡ್ ಮಿನರಲ್ಸ್ (ರೆಗ್ಯುಲೇಷನ್ ಅಂಡ್ ಡೆವಲಪ್‌ಮೆಂಟ್ ) 1957ನೇ ಕಾಯ್ದೆಯ 25ನೇ ಅಧಿನಿಯಮ ಅನ್ವಯ ಬಾಕಿ ಹಣವನ್ನು ಭೂ ಕಂದಾಯವೆಂದು ಪರಿಗಣಿಸಿ ವಸೂಲಿ ಮಾಡಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಬೇಕು,’ ಎಂದು ಜಿಲ್ಲಾಧಿಕಾರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಮಾತಾ ಮಿನರಲ್ಸ್ ಪ್ರೈ ಲಿ ನಿಂದ (ಗಣಿ ಗುತ್ತಿಗೆ ಸಂಖ್ಯೆ 2600) (1975) ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸಿರುವ ಸಂಬಂಧ 2004ರಿಂದ 2009ನೇ ಸಾಲಿಗೆ 53 ಕೋಟಿ 12 ಲಕ್ಷ 20 ಸಾವಿರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬರಬೇಕಿದೆ. ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸಿ ಅದಿರನ್ನು ಸಾಗಾಣಿಕೆ ಮಾಡಿರುವುದರಿಂದ ಎಂಎಂಡಿಆರ್ ಕಾಯಿದೆ 1957ರ ಕಲಂ 25(1) ಅನ್ವಯ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಭೂ ಕಂದಾಯ ಎಂದು ಪರಿಗಣಿಸಿ ವಸೂಲಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಈ ಮೊದಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ದಂಡ ವಸೂಲು ಮಾಡಲು ಕ್ರಮ ಕೈಗೊಂಡಿತ್ತು. ಆದರೆ ವಸೂಲಿ ಮಾಡುವಲ್ಲಿ ಇಲಾಖೆಯು ವಿಫಲವಾಗಿತ್ತು. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 190ರ ಪ್ರಕಾರ 52.12 ಕೋಟಿ ರು.ಗಳನ್ನು ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಲು ಪತ್ರ ಬರೆದಿತ್ತು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೈಗೊಂಡಿದ್ದ ಕ್ರಮಗಳೇನು?
52.12 ಕೋಟಿ ರು ವಸೂಲು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಾನೂನು ಪ್ರಕಾರ ಎಲ್ಲಾ ಕ್ರಮಗಳನ್ನೂ ಕೈಗೊಂಡಿತ್ತು. ವಸೂಲಾತಿ ಪತ್ರವನ್ನು ಕಂಪನಿಗೆ ಕಳಿಸಿತ್ತು. ಅಲ್ಲದೇ ವಸೂಲಾತಿ ಪತ್ರವನ್ನು ದೃಢೀಕರಿಸಿದ್ದ ಇಲಾಖೆಯು ಅದನ್ನು ಸಮರ್ಥಿಸಿಕೊಂಡಿತ್ತು.

ಕಂಪನಿಯ ಚರ ಮತ್ತು ಸ್ಥಿರ ಸ್ವತ್ತುಗಳ ಮಾಹಿತಿಯು ಇಲಾಖೆಯಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಯಿಂದ ಪಡೆಯಲು ನಿರ್ಧರಿಸಿತ್ತು ಎಂದು ನಿರ್ದೇಶಕರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿತ್ತು.

53.12 ಕೋಟಿ ರು ದಂಡದ ಮೊತ್ತವನ್ನು ವಸೂಲು ಮಾಡಬೇಕು ಎಂದು 2024ರ ಆಗಸ್ಟ್ 3ರಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಸರ್ಕಾರಕ್ಕೆ ಬರೆದಿದ್ದರು.
ಉಪ ನಿರ್ದೇಶಕರ ಪತ್ರದಲ್ಲೇನಿತ್ತು?
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮೂಡಲಪಾಳ್ಯ ಮತ್ತು ಕೊಂಡ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾತಾ ಮಿನರಲ್ಸ್ ಗೆ ಮಂಜೂರಾಗಿದ್ದ ಗಣಿ ಗುತ್ತಿಗೆ (ಸಂಖ್ಯೆ 2600 (1975)ಯ ಪ್ರದೇಶದಲ್ಲಿ ಗಣಿಗಾರಿಕೆ ಯೋಜನೆ ಇಲ್ಲದೇ 2004ರಿಂದ 2006ರ ಸಾಲಿನಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಹಾಗೂ 2006ರಿಂದ 2009ನೇ ಸಾಲಿನಲ್ಲಿ ಗಣಿಗಾರಿಕೆ ಯೋಜನೆಯಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಿದೆ ಕಬ್ಬಿಣ ಅದರಿನ್ನು ಉತ್ಪಾದಿಸಿ, ಸಾಗಾಣಿಕೆ ಮಾಡಿದೆ. ಇದು ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಎಂದು ಪರಿಗಣಿಸಿ ಖನಿಜದ ಮೌಲ್ಯವನ್ನು ವಸೂಲು ಮಾಡಬೇಕು ಎಂದು ಮಹಾಲೇಖಪಾಲರ ತಂಡವು (2013ರ ಫೆ.5) ಆಕ್ಷೇಪಣೆ ವ್ಯಕ್ತಪಡಿಸಿತ್ತು.

ಗಣಿಗಾರಿಕೆ ಯೋಜನೆ ಇಲ್ಲದಿದ್ದರೂ 2004ರಿಂದ 2006ರೆಗೆ ಗಣಿಗಾರಿಕೆ ನಡೆಸಿ 3,56, 466 ಮೆಟ್ರಿಕ್ ಟನ್‌ನಷ್ಟು ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 24.47 ಕೋಟಿ ರು, ಆಗಿದೆ. 2006ರಿಂದ 2009ವರೆಗೆ 2,77, 295 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 28.65 ಕೋಟಿ ರು ಆಗಿದೆ. ಒಟ್ಟಾರೆ 6,33,761 ಮೆಟ್ರಿಕ್ ಟನ್‌ನಷ್ಟು ಕಬ್ಬಿಣ ಅದಿರು ಉತ್ಪಾದಿಸಿ ಸಾಗಾಣಿಕೆ ಮಾಡಲಾಗಿದೆ. ಒಟ್ಟಾರೆ ಮೌಲ್ಯವು 53.12 ಕೋಟಿ ರು ಯಷ್ಟಿದೆ ಎಂದು ಸಿಎಜಿಯ ಆಕ್ಷೇಪಣೆಯ ಮಾಹಿತಿಯನ್ನು ಉಲ್ಲೇಖಿಸಿತ್ತು.
ಮಹಾಲೇಖಪಾಲರ ಆಕ್ಷೇಪಣೆಯಂತೆ ಒಟ್ಟು 53.12 ಕೋಟಿ ರುಗಳ ಖನಿಜ ಮೌಲ್ಯವನ್ನು ಅಂತಿಮ ನೋಟೀಸ್ ದಿನಾಂಕದಿಂದ 15 ದಿನದೊಳಗಾಗಿ ಈ ಕಚೇರಿಗೆ ಪಾವತಿಸಬೇಕು. ಈ ಮೊತ್ತವನ್ನು ಪಾವತಿಸದಿದ್ದಲ್ಲಿ ಭೂ ಕಂದಾಯ ಬಾಕಿ ಎಂದು ಪರಿಗಣಿಸಬೇಕು. ಆರ್‍ಅರ್‍ಸಿ ಜಾರಿ ಮಾಡಿ ವಸೂಲಿಗೆ ಕ್ರಮ ಕೈಗೊಳ್ಳಲು ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅಂತಿಮ ನೋಟೀಸ್ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿತ್ತು.
‘ಆದರೆ ಗುತ್ತಿಗೆದಾರರು ಇದುವರೆಗೂ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲ. ಹಾಗೂ ದಂಡ/ಬಾಕಿ ಮೊತ್ತವನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಎಂಎಂ(ಡಿಅಂಡ್‌ಆರ್) ಕಾಯ್ದೆ 1957ರ ಕಲಂ 25ರಂತೆ ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗಾಗಿ ಆರ್‍ಆರ್‍ಸಿ ಜಾರಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ 2024ರ ಆಗಸ್ಟ್ 3ರಂದು ವರದಿ ನೀಡಿದ್ದರು.

ಕೇಂದ್ರ ಸಚಿವ ವಿ ಸೋಮಣ್ಣ ಅವರ ಕುಟುಂಬ ಒಡೆತನದಲ್ಲಿದ್ದ ಮಾತಾ ಮಿನರಲ್ಸ್, ಮಾಜಿ ಶಾಸಕ ಅನಿಲ್ ಲಾಡ್ ಒಡೆತನದ ಕಂಪನಿಯೂ ಸೇರಿದಂತೆ ತೀವ್ರ ತರದ ಅಕ್ರಮ ಗಣಿಗಾರಿಕೆ ನಡೆಸಿದ್ದ ಐದು ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಾಡಿದ್ದ ಶಿಫಾರಸ್ಸನ್ನು ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸಿರಲಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೇ ಈ ಶಿಫಾರಸ್ಸು, ಸಚಿವ ಸಂಪುಟದ ಮುಂದಿತ್ತು. ಈ ಶಿಫಾರಸ್ಸಿನಂತೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರವು ಸಿಬಿಐ ತನಿಖೆಗೆ ವಹಿಸಲು ಆದೇಶಿಸಿರಲಿಲ್ಲ. ಆ ನಂತರ ಬಂದ ಸರ್ಕಾರಗಳೂ ಸಹ ಈ ಐದು ಗಣಿ ಗುತ್ತಿಗೆಗಳ ಕುರಿತು ಸಿಬಿಐ ತನಿಖೆಗೆ ವಹಿಸಲು ಕ್ರಮ ವಹಿಸಿರಲಿಲ್ಲ.
ಮಾತಾ ಸೇರಿ 5 ಗಣಿ ಗುತ್ತಿಗೆಗಳ ವಿರುದ್ಧ ಸಿಬಿಐ ತನಿಖೆ; ಶಿಫಾರಸ್ಸು ಕೈಬಿಟ್ಟು ಸೋಮಣ್ಣರನ್ನು ರಕ್ಷಿಸಿದ್ದರೇ ಸಿದ್ದು?
ಉನ್ನತ ಮಟ್ಟದ ಸಮಿತಿಯು 2011ರ ಅಕ್ಟೋಬರ್ 24ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಹಾಗೂ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕು. ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 15ರಲ್ಲಿ ನಮೂದಿಸಿರುವಂತೆ ಉನ್ನತ ಮಟ್ಟದ ಸಮಿತಿ ಮಾಡಿರುವ ಸಲಹೆಗಳನ್ನು ಒಪ್ಪಿಕೊಂಡು ಅದರಂತೆ ಕ್ರಮ ವಹಿಸಲು ಒಪ್ಪಿಗೆ ನೀಡಬೇಕು ಎಂದು ಸಚಿವ ಸಂಪುಟದ ಮುಂದೆ ಕೋರಿತ್ತು.
77.34 ಕೋಟಿ ರು. ವಸೂಲಿಯಾಯಿತೇ?
ಮಾತಾ ಮಿನರಲ್ಸ್ , ಅನಧಿಕೃತವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದ ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಡಾ ಎಂ ಬಸಪ್ಪ ರೆಡ್ಡಿ ಅವರಿಂದ 77.34 ಕೋಟಿ ರು. ವಸೂಲಿಗೆ ಸಂಬಂಧಿಸಿದಂತೆ ಬಿಗಿಯಾದ ಕ್ರಮ ವಹಿಸಿರಲಿಲ್ಲ. ನಂತರ ಬಸಪ್ಪ ರೆಡ್ಡಿ ಅವರ ವಿರುದ್ಧ ಅಸಲು ದಾವೆ ಹೂಡಲಾಯಿತು. ಈ ಪ್ರಕರಣವಿನ್ನು ವಿಚಾರಣೆಯ ಹಂತದಲ್ಲಿದೆ.

1998ರ ಮೇ 5ರಿಂದ 2004ರ ಅಕ್ಟೋಬರ್ 31ರವರೆಗೆ ಡಾ ಬಸಪ್ಪ ರೆಡ್ಡಿ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಮಾತಾ ಮಿನರಲ್ಸ್ ಪರವಾಗಿ ಗಣಿ ಗುತ್ತಿಗೆ ನಕ್ಷೆಯನ್ನು 2000ರ ಅಕ್ಟೋಬರ್ 23ರಂದು ಬದಲಾಯಿಸಲಾಗಿತ್ತು.
ಅಕ್ರಮ ಅದಿರು ರಫ್ತು; ಮಾತಾ ಮಿನರಲ್ಸ್ ಪ್ರಕರಣದಲ್ಲಿ ದಾವೆ ಹೂಡದ ಸರ್ಕಾರ
ಮಾತಾ ಮಿನರಲ್ಸ್ ಗಣಿ ಪ್ರದೇಶದಿಂದ ರವಾನೆಯಾಗಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗುಣಮಟ್ಟಕ್ಕೆ ಅನುಗುಣವಾಗಿ ಸಾಗಿಸಿದ ಕಬ್ಬಿಣದ ಅದಿರಿಗೆ 66,70,72,434, ಮ್ಯಾಂಗನೀಸ್ ಅದಿರಿಗೆ 1,53,23,177 ಸೇರಿ ಒಟ್ಟು 68,23,95,611 ವೌಲ್ಯದ ಖನಿಜ ರವಾನೆಯಾಗಿದೆ ಎಂದು ಡಾ.ಬಸಪ್ಪ ರೆಡ್ಡಿ ಅವರ ವಿರುದ್ಧ ದೋಷಾರೋಪ ಹೊರಿಸಿತ್ತು.

ದೋಣಿಮಲೈ ರೇಂಜಿನ ಕಬ್ಬಿಣದ ಅದಿರಿನ ಮಾರಾಟ ಬೆಲೆ ಅಧಾರದ ಮೇಲೆ ಮತ್ತು ಮ್ಯಾಂಗನೀಸ್ ಅದಿರಿಗೆ 2002ರಿಂದ ಲಭ್ಯ ಇದ್ದ ಸರಾಸರಿ ಮಾರಾಟ ಬೆಲೆಗೆ ಸಂಬಂಧಿಸಿದಂತೆ ಎನ್‌ಎಂಡಿಸಿ ಒದಗಿಸಿದ್ದ ದರದ ಆಧಾರದ ಮೇಲೆ ಈ ಲೆಕ್ಕಾಚಾರವನ್ನು ಮಾಡಿದ್ದನ್ನು ಸ್ಮರಿಸಬಹುದು.




