ಅಕ್ರಮ ಅದಿರು ರಫ್ತು; ಮಾತಾ ಮಿನರಲ್ಸ್‌ ಪ್ರಕರಣದಲ್ಲಿ ದಾವೆ ಹೂಡದ ಸರ್ಕಾರ

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ಅವರ ಕುಟುಂಬ ಒಡೆತನದಲ್ಲಿರುವ ಮಾತಾ ಮಿನರಲ್ಸ್‌ ಅನಧಿಕೃತವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದ ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಡಾ ಎಂ ಬಸಪ್ಪ ರೆಡ್ಡಿ ಅವರಿಂದ 77.34 ಕೋಟಿ ರು. ವಸೂಲಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 3 ತಿಂಗಳಾದರೂ ಅದೇಶ ಹೊರಡಿಸಿಲ್ಲ.

ಎಸ್‌ ಎಂ ಕೃಷ್ಣ, ಧರ್ಮಸಿಂಗ್‌, ಎಚ್‌ ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಾ ಎಂ ಬಸಪ್ಪ ರೆಡ್ಡಿ ಅವರ ದುರ್ನಡತೆಯಿಂದ ಮಾತಾ ಮಿನರಲ್ಸ್ ಕಂಪನಿ, 68,23,95,611 ರೂಪಾಯಿ ಮೌಲ್ಯದ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರನ್ನು ರಫ್ತು ಮಾಡಿತ್ತು.

ಇವರ ದುರ್ನಡತೆಯಿಂದಾಗಿ ಸರ್ಕಾರಕ್ಕೆ 68.23 ಕೋಟಿ ರು.ನಷ್ಟವಾಗಿತ್ತು ಎಂದು ಮೊದಲು ಮಾಡಿದ್ದ ಅಂದಾಜನ್ನು ಪರಿಷ್ಕರಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 9.11 ಕೋಟಿ ರು.ಹೆಚ್ಚಳ ಮಾಡಿ ಒಟ್ಟು 77.34 ಕೋಟಿ ರು.ಗಳನ್ನು ವಸೂಲು ಮಾಡಲು ಅಸಲು ದಾವೆ ಹೂಡಲು 2020ರ ಜುಲೈ 1ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

ಇದನ್ನಾಧರಿಸಿ ಅಸಲು ದಾವೆ ಹೂಡಲು ಕೈಗಾರಿಕೆ ಮತ್ತುವಾಣಿಜ್ಯ ಇಲಾಖೆಯು 2020ರ ಅಕ್ಟೋಬರ್‌ 12ರಂದು ಅನುಮೋದನೆ ನೀಡಿತ್ತು. ಆದರೆ ಈವರೆವಿಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಸಲು ದಾವೆ ಹೂಡಿಲ್ಲ. ಇದಕ್ಕೆ ವಸತಿ ಸಚಿವ ವಿ ಸೋಮಣ್ಣ ಅವರ ಒತ್ತಡವೇ ಕಾರಣ ಎಂದು ತಿಳಿದು ಬಂದಿದೆ. ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

1998ರ ಮೇ 5ರಿಂದ 2004ರ ಅಕ್ಟೋಬರ್ 31ರವರೆಗೆ ಡಾ ಬಸಪ್ಪ ರೆಡ್ಡಿ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಮಾತಾ ಮಿನರಲ್ಸ್ ಪರವಾಗಿ ಗಣಿ ಗುತ್ತಿಗೆ ನಕ್ಷೆಯನ್ನು 2000ರ ಅಕ್ಟೋಬರ್ 23ರಂದು ಬದಲಾಯಿಸಲಾಗಿತ್ತು. ಬದಲಾವಣೆ ಮಾಡಿದ ದಿನಾಂಕದಿಂದ ಗುತ್ತಿಗೆ ಪ್ರದೇಶದಲ್ಲಿ 77.34 ಕೋಟಿ ರು. ಮೌಲ್ಯದ 641023 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮತ್ತು 1,49 ಕೋಟಿ ರು.ಮೌಲ್ಯದ 7,347 ಮೆಟ್ರಿಕ್‌ ಟನ್ ಮ್ಯಾಂಗನೀಸ್ ಅದಿರು ರವಾನೆಯಾಗಿತ್ತು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಡಾ ಎನ್‌ ಶಿವಶಂಕರ್‌ ಅವರು ಬರೆದಿದ್ದ ಪತ್ರದಲ್ಲಿ ವಿವರಿಸಲಾಗಿತ್ತು.

ಮಾತಾ ಮಿನರಲ್ಸ್ ಗಣಿ ಪ್ರದೇಶದಿಂದ ರವಾನೆಯಾಗಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗುಣಮಟ್ಟಕ್ಕೆ ಅನುಗುಣವಾಗಿ ಸಾಗಿಸಿದ ಕಬ್ಬಿಣದ ಅದಿರಿಗೆ 66,70,72,434, ಮ್ಯಾಂಗನೀಸ್ ಅದಿರಿಗೆ 1,53,23,177 ಸೇರಿ ಒಟ್ಟು 68,23,95,611 ವೌಲ್ಯದ ಖನಿಜ ರವಾನೆಯಾಗಿದೆ ಎಂದು ಡಾ.ಬಸಪ್ಪ ರೆಡ್ಡಿ ಅವರ ವಿರುದ್ಧ ದೋಷಾರೋಪ ಹೊರಿಸಿತ್ತು.

ದೋಣಿಮಲೈ ರೇಂಜಿನ ಕಬ್ಬಿಣದ ಅದಿರಿನ ಮಾರಾಟ ಬೆಲೆ ಅಧಾರದ ಮೇಲೆ ಮತ್ತು ಮ್ಯಾಂಗನೀಸ್ ಅದಿರಿಗೆ 2002ರಿಂದ ಲಭ್ಯ ಇದ್ದ ಸರಾಸರಿ ಮಾರಾಟ ಬೆಲೆಗೆ ಸಂಬಂಧಿಸಿದಂತೆ ಎನ್‌ಎಂಡಿಸಿ ಒದಗಿಸಿದ್ದ ದರದ ಆಧಾರದ ಮೇಲೆ ಈ ಲೆಕ್ಕಾಚಾರವನ್ನು ಮಾಡಿತ್ತು.

ಸರ್ಕಾರಕ್ಕೆ ಸೇರಿರುವ ಸಂಪತ್ತನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಲು ಅನುವು ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲು ಬಸಪ್ಪರೆಡ್ಡಿ ಅವರು ಕಾರಣಕರ್ತರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದ್ದ ಗಣಿ ಇಲಾಖೆ ನಿರ್ದೇಶಕರಾಗಿದ್ದ ಶಂಕರನಾರಾಯಣ ಅವರು, ಬಸಪ್ಪ ರೆಡ್ಡಿ ಅವರು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1966ನ್ನು ಉಲ್ಲಂಘಿಸಿದ್ದಾರೆ ಎಂದು ವಿವರಿಸಿದ್ದರು. ಇವರ ವಿರುದ್ಧದ ಆರೋಪಗಳು, ಸಾಕ್ಷ್ಯಗಳು ಮತ್ತು ದಾಖಲೆಗಳು ನಿಖರವಾಗಿ ದೊರಕುತ್ತವೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದ್ದರು.

ಡಾ.ಬಸಪ್ಪರೆಡ್ಡಿ ಅಕ್ಟೋಬರ್ 31,2004ರಂದು ವಯೋ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಹೊಂದಿ 4 ವರ್ಷ ಮೇಲ್ಪಟ್ಟಿರುವ ಕಾರಣ ಸರ್ಕಾರಕ್ಕೆ ಆದ ನಷ್ಟವನ್ನು ವಸೂಲಿ ಮಾಡಲು ಸಕ್ಷಮ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಸರ್ಕಾರ 5 ವರ್ಷದ ಹಿಂದೆಯೇ ಅನುಮತಿ ನೀಡಿತ್ತು. ಅದೇ ರೀತಿ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ನಂತರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ಗಣಿ ಇಲಾಖೆ ಮೂಲಗಳು ತಿಳಿಸಿವೆ.

ಬಸಪ್ಪ ರೆಡ್ಡಿ ಅವರು ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಇವರು ಖಾಸಗಿ ಗಣಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿ ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದರು. ಈ ಅಕ್ರಮದಿಂದಾಗಿ ರಾಜ್ಯದ ಬೊಕ್ಕಸಕ್ಕೆ ರಾಜಸ್ವ ರೂಪದಲ್ಲಿ ಬರಬೇಕಿದ್ದ 6.14 ಲಕ್ಷ ರೂಪಾಯಿ ನಷ್ಟವಾಗಿತ್ತು.

ಅದೇ ರೀತಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಬಸಪ್ಪರೆಡ್ಡಿ ಅವರ ಕಾರ್ಯವೈಖರಿಯಿಂದ ಕಬ್ಬಿಣದ ಅದಿರು ಹೆಚ್ಚು ಲಭ್ಯ ಇರುವ ಬಳ್ಳಾರಿಯಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆದಿತ್ತು. ಈ ಅಕ್ರಮ ಅನುಮತಿಯಿಂದಾಗಿ ಹಲವು ಗಣಿ ಉದ್ದಿಮೆಗಳು ಸಾಕಷ್ಟು ಹಣ ಗಳಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಲೋಕಾಯುಕ್ತ ತನಿಖೆ ಪ್ರಕಾರ ಬಸಪ್ಪ ರೆಡ್ಡಿ ಅವರು 82 ಪ್ರಕರಣಗಳಲ್ಲಿ ಇಲಾಖೆಯ ಉಪ ನಿರ್ದೇಶಕರಿಗೆ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಸೂಚಿಸಿದ್ದರು. ಗಣಿಗಾರಿಕೆ ನಡೆಸಲು ಪರವಾನಿಗೆ ಇಲ್ಲದಿದ್ದರೂ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts