Saturday | May 23, 2026 |

ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಶೂ, ಸಾಕ್ಸ್; ಅನುದಾನ ಪ್ರಮಾಣವನ್ನೇ ಇಳಿಕೆ ಮಾಡಿದ ಸರ್ಕಾರ

ಬೆಂಗಳೂರು; ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಮತ್ತು ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಕೋಟಿ ಕೋಟಿ ರುಪಾಯಿ ಖರ್ಚು ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ ಸಾಕ್ಸ್‌  ಖರೀದಿಗೆ ಬಿಡುಗಡೆ ಮಾಡುತ್ತಿರುವ ಅನುದಾನದಲ್ಲಿಯೂ ಕ್ರಮೇಣ ಇಳಿಕೆ ಮಾಡುತ್ತಿದೆ.

 

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ ಸಾಕ್ಸ್‌ ವಿತರಣೆ ಮಾಡಲು ಬಿಡುಗಡೆಯಾಗಿರುವ ಅನುದಾನದ ಕುರಿತು ಸಚಿವ ಮಧು ಬಂಗಾರಪ್ಪ ಅವರು ವಿಧಾನ ಪರಿಷತ್‌ಗೆ ಅಂಕಿ ಅಂಶ ಒದಗಿಸಿದ್ದಾರೆ.

 

ಈ ಅಂಕಿ ಅಂಶಗಳ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರವು ಒದಗಿಸಿದ್ದ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ನೀಡುತ್ತಿದೆ. ಮತ್ತು 2023-24 ಮತ್ತು 2024-25ನೇ ಸಾಲಿಗೆ ಹೋಲಿಸಿದರೆ 2025-26ರಲ್ಲಿ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿರುವುದು ಕಂಡು ಬಂದಿದೆ.

 

 

 

2022-23ರಲ್ಲಿ 132 ಕೋಟಿ, 2023-24ರಲ್ಲಿ 125 ಕೋಟಿ, 2024-25ರಲ್ಲಿ 125 ಕೋಟಿ, 2025-26ರಲ್ಲಿ 111.88 ಕೋಟಿ ರು ಅನುದಾನ ಮೀಸಲಿರಿಸಿದೆ.

 

 

2025-26ರಲ್ಲಿ ಮೀಸಲಿರಿಸಿದ್ದ 111.88 ಕೋಟಿ ರು ಅನುದಾನದ ಪೈಕಿ ಇನ್ನೂ 13.20 ಕೋಟಿ ರು ಬಿಡುಗಡೆ ಮಾಡಲು ಕ್ರಮವಹಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.

 

 

ಅದೇ ರೀತಿ  2022-23ರಲ್ಲಿ ಮೊದಲನೇ ಜತೆ ಸಮವಸ್ತ್ರ ಖರೀದಿಸಲು 89.72 ಕೋಟಿ, ಎರಡನೇ ಜೊತೆಗೆ  97.36 ಕೋಟಿ, 2023-24ರಲ್ಲಿ ಮೊದಲ ಜತೆ 75.40 ಕೋಟಿ ರು., ಎರಡನೇ ಜತೆ ಖರೀದಿಸಲು 73.66 ಕೋಟಿ ರು., 2024-25ರಲ್ಲಿ ಮೊದಲ ಜತೆ ಖರೀದಿಸಲು 84.33 ಕೋಟಿ, ಎರಡನೇ ಜತೆ ಖರೀದಿಸಲು 82.33 ಕೋಟಿ, 2025-26ರಲ್ಲಿ ಮೊದಲ ಜತೆ ಖರೀದಿಸಲು 84.50 ಕೋಟಿ, ಎರಡನೇ ಜತೆ ಖರಿದಿಸಲು 81.50 ಕೋಟಿ ರು ಖರ್ಚಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 44,525 ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದ 1,587 ಶಾಲೆಗಳಿಗೆ ಮೊದಲನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಎರಡನೇ ಹಂತದ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

 

 

ಬೆಂಗಳೂರು ನಗರ ಜಿಲ್ಲೆಯ ವಲಯ – 4ರಲ್ಲಿ 2,208 ಸರಕಾರಿ ಶಾಲೆಗಳು, 208 ಅನುದಾನಿತ ಶಾಲೆಗಳಿವೆ. ಇವುಗಳಲ್ಲಿ 7,24,862 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲೆಯಲ್ಲಿ ಶೂ, ಸಾಕ್ಸ್‌ ಕೊಡದಿರುವ ಕಾರಣ, ಹಲವು ಮಕ್ಕಳು ಹಳೆ ಚಪ್ಪಲಿಯಲ್ಲಿ ಇಲ್ಲವೇ ಬರಿಗಾಲಿನಲ್ಲೇ ಶಾಲೆಗೆ ಬರುತ್ತಿದ್ದಾರೆ.

 

ಶೂ, ಸಾಕ್ಸ್‌ ಖರೀದಿಗೆಂದು ಶಿಕ್ಷಣ ಇಲಾಖೆ ಕೆಲ ಶಾಲೆಗಳಿಗೆ ಶೇ. 40ರಷ್ಟು, ಕೆಲ ಶಾಲೆಗಳಿಗೆ ಶೇ. 20ರಷ್ಟು ಹಣವನ್ನು ಆನ್‌ಲೈನ್‌ ಮೂಲಕ ಎಸ್‌ಡಿಎಮ್‌ಸಿ ಖಾತೆಗೆ ಜಮಾ ಮಾಡಿತ್ತು. ‘ಬಂದ ಹಣದಲ್ಲಿ ಕೆಲವರಿಗಷ್ಟೇ ಶೂ, ಸಾಕ್ಸ್‌ ಕೊಡಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ.  ಪೂರ್ಣ ಪ್ರಮಾಣ ಅನುದಾನ ಸಿಕ್ಕರೆ ಮಾತ್ರ ಶೂ, ಸಾಕ್ಸ್‌ ಖರೀದಿಸಲು ಸಾಧ್ಯವಿದೆ. ಹೀಗಾಗಿ ಸರಕಾರ ಮಂಜೂರು ಮಾಡಿದ ಅನುದಾನ ಬ್ಯಾಂಕ್‌ನಲ್ಲೇ ಇರುವಂತಾಗಿದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.

 

ಅಲ್ಲದೇ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌  ಖರೀದಿಸಲು ಹೆಚ್ಚುವರಿ ಧನ ಸಹಾಯ ನೀಡಿಲ್ಲ.  ಬದಲಿಗೆ ಹೆಚ್ಚುವರಿ ಧನ ಸಹಾಯಕ್ಕಾಗಿ ಖಾಸಗಿ ಸಂಘ ಸಂಸ್ಥೆ ಮತ್ತು ದಾನಿಗಳ ಬಳಿ ಶಿಕ್ಷಕರು ಅನಿವಾರ್ಯವಾಗಿ ಕೈಯೊಡ್ಡಿಸಿದೆ.  ಕಾಂಗ್ರೆಸ್‌ ಸರ್ಕಾರವು ಹೊರಡಿಸಿದ್ದ  ಸುತ್ತೋಲೆಯು  ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಸುತ್ತೋಲೆಯನ್ನೇ  ಮರು ಜಾರಿಗೊಳಿಸಿತ್ತು.

 

ವಿಶೇಷವೆಂದರೇ 2017-18ನೇ ಸಾಲಿನಲ್ಲಿಯೂ ಅಧಿಕಾರದಲ್ಲಿದ್ದ ಇದೇ ಕಾಂಗ್ರೆಸ್‌ ಸರ್ಕಾರವು ಆಗ ನಮೂದಿಸಿದ್ದ ದರವನ್ನೇ 2023-24ನೇ ಸಾಲಿನಲ್ಲಿಯೂ ನಮೂದಿಸಿದೆ.  ಪ್ರಸಕ್ತ ಸಾಲಿನಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನೂ ಪರಿಗಣಿಸದೇ ಆದೇಶ ಹೊರಡಿಸಿರುವುದು ನಗೆಪಾಟಲಿಗೀಡಾಗಿತ್ತು.   ಹಾಗೆಯೇ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಕಾಂಗ್ರೆಸ್‌  ಸರ್ಕಾರವು ಇದಕ್ಕಾಗಿ ಹೆಚ್ಚುವರಿ ಧನ ಸಹಾಯ ನೀಡದೇ ಖಾಸಗಿ ಸಂಘ, ಸಂಸ್ಥೆ, ದಾನಿಗಳ ಬಳಿ ಕೈಯೊಡ್ಡಲು ನಿಲ್ಲಿಸಿರುವುದು ಶಿಕ್ಷಕರನ್ನು  ಪೇಚಿಗೆ ಸಿಲುಕಿಸಿತ್ತು.

 

ವಿದ್ಯಾವಿಕಾಸ ಯೋಜನೆಯಡಿ 2023-24ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್‌ ವಿತರಣೆಗೆ (ಲೆಕ್ಕ ಶೀರ್ಷಿಕೆ; 2202-01-109-0-03-221 ಮತ್ತು 2202-01-109-03-422) 125.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಆದೇಶಿಸಿತ್ತು. 01ರಿಂದ 8ನೇ ತರಗತಿ  ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮೂಲಕ ಒಟ್ಟರು 99.70 ಕೋಟಿ ರು.ಗಳನ್ನು ಅನುದಾನವನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಿತ್ತು.

 

ಹಾಗೆಯೇ 09 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ  ಶೂ ಮತ್ತು ಸಾಕ್ಸ್‌ ಖರೀದಿಗೆ 2023ರ ಜೂನ್‌ 19ರ ಅಂತ್ಯದವರೆಗೂ  ಅನುದಾನ ಬಿಡುಗಡೆ ಮಾಡಿರಲಿಲ್ಲ.  ಆದರೂ  ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕರುಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಅಧಿಕೃತ ಜ್ಞಾಪನ ಪತ್ರ ಹೊರಡಿಸಿತ್ತು.

 

‘2023-24ನೇ ಸಾಲಿನ ಈ ಯೋಜನೆ ಅನುಷ್ಠಾನಕ್ಕೆ ಆಯಾ ಶಾಲೆಗಳಲ್ಲಿನ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆ-2 ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ  ಅನುದಾನ ಬಿಡುಗಡೆ ಮಾಡಿತ್ತು.  ಶಾಲೆಗಳು ಪ್ರಾರಂಭವಾಗಿದ್ದರ  ಹಿನ್ನೆಲೆಯಲ್ಲಿ ಕೂಡಲೇ ಮಕ್ಕಳ ಪಾದರಕ್ಷೆ  ಅಳತೆ ತೆಗೆದುಕೊಂಡು ಅಳತೆಗನುಗುಣವಾಗಿ ಜುಲೈ 30ರೊಳಗಾಗಿ ಖರೀದಿ  ಪ್ರಕ್ರಿಯೆ ಪೂರ್ಣಗೊಳಿಸಬೇಕು,’ ಎಂದು 2023ರ ಜೂನ್‌ 22ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.

 

 

ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಏರಿಕೆಯಾಗಿರುವ ಕಾರಣ ಎಲ್ಲಾ ರೀತಿಯ ಸರಕು, ಸಾಮಗ್ರಿ, ಉತ್ಪನ್ನಗಳ ದರವೂ ಸಹಜವಾಗಿ ಸ್ಥಳೀಯ ಮಟ್ಟದಲ್ಲಿಯೂ ಏರಿಕೆ ಕಂಡಿದೆ. ಹೀಗಿರುವಾಗ ಕಳೆದ 6 ವರ್ಷದ ಹಿಂದಿನ ದರವನ್ನೇ ಈಗಲೂ ನಮೂದಿಸಿ ಬಿಡುಗಡೆ ಮಾಡಿರುವುದಕ್ಕೆ ಶಿಕ್ಷಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

 

2023ರ ಜೂನ್‌ 22ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ  ವಿದ್ಯಾರ್ಥಿಗಳಿಗೆ ತಲಾ 295 ರು., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳೀಗೆ ತಲಾ 325 ರು. ಎಂದು ದರ ನಿಗದಿಪಡಿಸಿತ್ತು.

 

 

‘ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿಂತೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ಹೆಚ್ಚುವರಿ ಧನ ಸಹಾಯ ಮಾಡಿದಲ್ಲಿ ಅದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ‍ಷೂ ಮತ್ತು ಸಾಕ್ಸ್‌ಗಳನ್ನು ಖರೀದಿಸಬಹುದು. ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು,’ ಎಂದು ಆದೇಶದಲ್ಲಿ ಹೇಳಿತ್ತು.

 

ಆದರೆ 2023ರ ಜೂನ್‌ 22ರಂದು ಹೊರಡಿಸಿರುವ ಅದೇಶದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳ ಮೊದಲ ಗುಣಮಟ್ಟದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನು ಖರೀದಿ ಮಾಡಬೇಕು ಎಂದು ಹೇಳಿರುವುದು ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದಂತಾಗಿತ್ತು.

 

2019ರ ಮೇ 6ರಲ್ಲಿಯೂ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌,ಕರೋನ, ಆಕ್ಷನ್‌, ಲಕಾನಿ ಕಂಪನಿಗಳ ಅಧಿಕೃತ ಮಾರಾಟಗಾರರಿಂದ ಶೂ- ಸಾಕ್ಸ್‌ಗಳನ್ನು ಖರೀದಿಸಬೇಕು ಎಂದು ಸೂಚಿಸಿತ್ತು.

 

2019ರಲ್ಲಿ ಹೊರಡಿಸಿದ್ದ ಆದೇಶದ ಪ್ರತಿ

 

 

2022ರ ಜುಲೈ 8ರಂದು ಹೊರಡಿಸಿದ್ದ  ಆದೇಶದಲ್ಲಿಯೂ  ಬ್ರ್ಯಾಂಡೆಡ್‌ ಉತ್ಪನ್ನಗಳ ಕುರಿತು ಉಲ್ಲೇಖಿಸಿರಲಿಲ್ಲ. ಅಲ್ಲದೆ ಹಿಂದಿನ  ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಹಲವು ಶಿಕ್ಷಕರು ಹೇಳಿದ್ದರು.

 

ಶಾಲಾ ಮಕ್ಕಳಿಗೆ ಶೂ ಖರೀದಿ; 5 ವರ್ಷದ ಹಿಂದಿನ ದರ ನಮೂದು, ದಾನಿಗಳ ಬಳಿ ಕೈಯೊಡ್ಡಬೇಕಿರುವ ಶಿಕ್ಷಕರು

 

ಮುಕ್ತ ಮಾರುಕಟ್ಟೆಯಲ್ಲಿಯೇ ತಲಾ ಒಂದು ಜತೆ ಶೂಗೆ ಕನಿಷ್ಠ 425 ರು.ಗಳಿವೆ. ಹೀಗಾಗಿ ಸರ್ಕಾರ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿರುವ ಮೊತ್ತಕ್ಕೆ ಹೋಲಿಸಿದರೆ 160 ರು. ಕಡಿಮೆ ಇತ್ತು.

 

 

 

 

2017-18ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿ ಸಂಬಂಧ ಶಾಲಾ ಎಸ್.ಡಿ.ಎಂ.ಸಿ ಖಾತೆಗಳಿಗೆ ರೂ.129.84 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಹೊರಡಿಸಿದ್ದ ಆದೇಶದಲ್ಲಿದ್ದ ದರವನ್ನೇ 2022-23ನೇ ಸಾಲಿನಲ್ಲಿಯೂ ನಮೂದಿಸಿ ಪ್ರಸಕ್ತ ಸ್ಥಳೀಯ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ  ಪರಿಗಣಿಸಿರಲಿಲ್ಲ.

 

ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌; ಹಳೆಯ ಸುತ್ತೋಲೆ ಜಾರಿ, ಹೆಚ್ಚುವರಿ ಹಣವಿಲ್ಲ, ದಾನಿಗಳ ಬಳಿ ಕೈಯೊಡ್ಡಿಸಿದ ಸರ್ಕಾರ

 

ಕಳೆದ 5  ವರ್ಷದ ಹಿಂದೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ಹೋಲಿಸಿದರೆ 2022-23ನೇ   ಶೈಕ್ಷಣಿಕ ಸಾಲಿನಲ್ಲಿ ಬಿಡುಗಡೆ ಮಾಡಿದ್ದ   ಅನುದಾನದಲ್ಲಿ 2.16 ಕೋಟಿ ರು. ಮಾತ್ರ ಹೆಚ್ಚಳವಾಗಿತ್ತು.   ಅಲ್ಲದೆ 2017-18ನೇ ಸಾಲಿನಲ್ಲಿ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರು., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರು.ಗಳಂತೆ ಬಿಡುಗಡೆ ಮಾಡಿತ್ತು. ಇದೇ ದರವು 2019-20ರಲ್ಲಿಯೂ ಮುಂದುವರೆದಿತ್ತು. ಇದೀಗ 2022-23ನೇ ಶೈಕ್ಷಣಿಕ ಸಾಲಿನಲ್ಲಿಯೂ ಅದೇ ಮೊತ್ತವನ್ನು ಎಸ್‌ಡಿಎಂಸಿಗಳಿಗೆ ಬಿಡುಗಡೆ ಮಾಡಲು ಸೂಚಿಸಿತ್ತು.

 

ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌, ಕರೋನ, ಆಕ್ಷನ್‌, ಲಕಾನಿ ಸೇರಿದಂತೆ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳ ದರವು ಕಳೆದ 6  ವರ್ಷಕ್ಕೆ ಹೋಲಿಸಿದರೆ ಸ್ಥಳೀಯ ಮಟ್ಟದಲ್ಲಿಯೂ ಈ ಬಾರಿ ಹೆಚ್ಚಳವಾಗಿತ್ತು. ಆದರೆ ಸರ್ಕಾರವು ಚಾಲ್ತಿ ದರಗಳನ್ನು ನಮೂದಿಸದಿರುವುದು ಹೆಚ್ಚುವರಿ ಹಣಕ್ಕಾಗಿ ಶಿಕ್ಷಕರು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಿದ್ದರು.

 

ಡೆಸ್ಕ್‌, ವಿದ್ಯುತ್‌ ಬಿಲ್‌ ಖರ್ಚುಗಳಿಗೆ ಪೋಷಕರಿಂದಲೇ 100 ರು ವಸೂಲಿ; ಸರ್ಕಾರ ದಿವಾಳಿಯಾಗಿದೆಯೇ?

 

 

‘6 ವರ್ಷದ ಹಿಂದಿನ ದರವನ್ನೇ ಆದೇಶದಲ್ಲಿ ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಈಗಲೂ ಅದೇ ದರ ಇರುವುದಿಲ್ಲ. ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಸುಮಾರು 35  ರಿಂದ 40 ರು. ಹೆಚ್ಚಳವಾಗಿದೆ. ಎಲ್ಲಾ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿರುತ್ತದೆ. ಹೀಗಿರುವಾಗ 6 ವರ್ಷದ ಹಿಂದಿನ ದರವನ್ನು ಪರಿಷ್ಕರಿಸಿ ಚಾಲ್ತಿ ದರವನ್ನು ನಮೂದಿಸಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈಗಿನ ಸರ್ಕಾರವು 6  ವರ್ಷದ ಹಿಂದಿನ ದರವನ್ನೇ ನಮೂದಿಸಿ ಶಿಕ್ಷಕರನ್ನು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಂದೊಮ್ಮೆ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡದಿದ್ದರೇ ಕೆಳದರ್ಜೆಯ ಶೂ ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.

Hot this week

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...
Please Scan to make Your Contribution

Topics

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!