ಬೆಂಗಳೂರು; ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕ ಮೂಲಭೂತ ಸೌಕರ್ಯಗಳಿಗಾಗಿ ಮೀಸಲಿರಿಸಿರುವ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಾರುಕಟ್ಟೆ ದರದಲ್ಲಿನ ಶೇ.5ರಷ್ಟು ದರದಲ್ಲಿ ಮಂಜೂರು ಮಾಡಲಾಗಿದೆ.
ವಿಶೇಷವೆಂದರೇ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಾಗರಿಕ ಮೂಲಭೂತ ಸೌಲಭ್ಯಗಗಳಿಗಾಗಿ ಕಾಯ್ದರಿಸಿದ್ದ ನಿವೇಶನಗಳನ್ನು ಮಂಜೂರು ಮಾಡಲು ಸಚಿವ ಸಂಪುಟಕ್ಕೆ ಮಂಡಿಸಿದ್ದ ಪ್ರಸ್ತಾವದಲ್ಲಿ ಶೇ.5ರಷ್ಟು ದರ ಎಂದು ಎಲ್ಲಿಯೂ ನಮೂದಿಸಿರಲಿಲ್ಲ. ಸಚಿವ ಸಂಪುಟಕ್ಕೆ ಮಂಡಿಸಿದ್ದ ಪ್ರಸ್ತಾವದಲ್ಲಿ ದರದ ಮೊತ್ತ ನಮೂದಿಸದೇ ಇದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು ಶೇ.5ರಷ್ಟು ದರದಲ್ಲಿ ಸಿ ಎ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ನಗರಾಭಿವೃದ್ದಿ ಇಲಾಖೆಯು 2025ರ ಅಕ್ಟೋಬರ್ 14ರಂದು ಹೊರಡಿಸಿದ್ದ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ, ನವಲಗುಂದ, ಕಲ್ಬುರ್ಗಿಯ ಅಫಜಲಪೂರ ಪುರಸಭೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿನ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಾರುಕಟ್ಟೆ ದರದಲ್ಲಿನ ಶೇ.5ರ ದರದಲ್ಲಿ ಮಂಜೂರು ಮಾಡಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭೆ ಕ್ಷೇತ್ರದ ಅಣ್ಣಿಗೇರಿ ಪುರಸಭೆ ಮಾಲೀಕತ್ವದಲ್ಲಿರುವ ಒಟ್ಟು 18 ನಾಗರೀಕ ಸೌಲಭ್ಯಗಳ ಪೈಕಿ ಸ್ವತ್ತಿನ ಸಂಖ್ಯೆ 23-502-322 ಬಿ, ಪ್ಲಾಟ್ ನಂಬರ್ 2ರಲ್ಲಿನ 1,668.800 ಚ ಮೀಟರ್ ಜಾಗದ ನಿವೇಶನವನ್ನು 30 ವರ್ಷದ ಅವಧಿಗೆ ರಿಯಾಯತಿ ದರದಲ್ಲಿ ಲೀಸ್ ಆಧಾರದ ಮೇಲೆ ಮಂಜೂರಾತಿಗೆ ಪುರಸಭೆ ಆಯುಕ್ತರು ಪ್ರಸ್ತಾವ ಸಲ್ಲಿಸಿದ್ದರು.
ಈ ಸಂಬಂಧ ಪುರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ಧಾರವಾಡ ಉಪವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ 2025ರ ಏಪ್ರಿಲ್ 28ರಂದು ವಿಶೇಷ ಸಾಮಾನ್ಯ ಸಭೆ ನಡೆದಿತ್ತು. ಈ ಸಭೆಯ ವಿಷಯ ಸಂಖ್ಯೆ 13ರಲ್ಲಿ ಸಂಘ ಸಂಸ್ಥೆಗಳಿಗೆ ನಿವೇಶನ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿತ್ತು. ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸಿ ಎ ನಿವೇಶನ ನೀಡುವ ಸಂಬಂಧ (ಠರಾವು; 206) ನಿರ್ಣಯ ಕೈಗೊಳ್ಳಲಾಗಿತ್ತು.
ಈ ನಿವೇಶನವನ್ನು ಬೇರೆ ಯಾವುದೇ ರೀತಿಯ ನಾಗರಿಕ ಸೌಲಭ್ಯಗಳಿಗೆ ಅಗತ್ಯವಿರುವುದಿಲ್ಲವೆಂದು ಆಳಿತಾಧಿಕಾರಿಗಳು ದೃಢೀಕರಿಸಿದ್ದರು. ಅಲ್ಲದೇ ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯಕ್ಕೆ 2025ರ ಮೇ 16ರಂದೇ ಪತ್ರ ಬರೆದಿದ್ದರು. ಆದರೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಇದನ್ನು ಒಪ್ಪಿರಲಿಲ್ಲ.
ಕರ್ನಾಟಕ ಪ್ಲಾನಿಂಗ್ ಅಥಾರಿಟಿ ನಿಯಮ 2016ರ ನಿಯಮ (2)ರಲ್ಲಿ ತಿಳಿಸಿದ್ದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರು.
ಹಾಗೆಯೇ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ರೀ ಸರ್ವೆ ನಂಬರ್ 414/1ರಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದರಿಸಿದ್ದ ನಿವೇಶನವನ್ನು ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನವಲಗುಂದ ಶಾಸಕ ಕೋನರೆಡ್ಡಿ ಅವರು ಕೋರಿದ್ದರು. ವಿಶೇಷವೆಂದರೇ ಈ ಜಾಗವನ್ನು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗಕ್ಕೆ ಮಂಜೂರು ಮಾಡಲು ಕ್ರಮ ವಹಿಸಿತ್ತು. ಅಲ್ಲದೇ ಭಾಗಶಃ ಮೊತ್ತವನ್ನೂ ಪಾವತಿಸಿಕೊಂಡಿತ್ತು. ಆದರೆ ಈ ಉಪ ವಿಭಾಗದಲ್ಲಿ ಅನುದಾನ ಕೊರತೆ ಕಾರಣ ಭಾಗಶಃ ಮೊತ್ತವನ್ನು ಹಿಂಪಡೆಯಲು ತಿಳಿಸಿತ್ತು. ಹೀಗಾಗಿ ಈ ಮಂಜೂರಾತಿ ಆದೇಶವನ್ನು ರದ್ದುಗೊಳಿಸಿತ್ತು.
38.60 ಲಕ್ಷ ಮೌಲ್ಯದ ಜಾಗ ಕೇವಲ 5 ಲಕ್ಷಕ್ಕೆ ಮಂಜೂರು
ನವಲಗುಂದದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಗೆ ಮಂಜೂರು ಮಾಡಿರುವ ಜಾಗಕ್ಕೆ ಮಾರುಕಟ್ಟೆ ಮೌಲ್ಯವು 38.60 ಲಕ್ಷ ರು ಇದೆ. ಆದರೆ ನಗರಾಭಿವೃದ್ಧಿ ಇಲಾಖೆಯು ಈ ಜಾಗವನ್ನು ಮಾರುಕಟ್ಟೆ ಬೆಲೆಯಲ್ಲಿನ ಶೇ. 5ರ ದರದಲ್ಲಿ ಮಂಜೂರು ಮಾಡಿದೆ. 38.60 ಲಕ್ಷ ರು. ಮೌಲ್ಯದ ಜಾಗವನ್ನು ಕೇವಲ 5 ಲಕ್ಷ ರು ಗಳಿಗೆ ಮಂಜೂರು ಮಾಡಿದಂತಾಗಿದೆ.
ಈ ಸಂಬಂಧ ಚರ್ಚಿಸಲು 2025ರ ಜುಲೈ 22ರಂದು ವಿಶೇಷ ಸಾಮಾನ್ಯ ಸಭೆ ನಡೆದಿತ್ತು. ಕರ್ನಾಟಕ ಪ್ಲಾನಿಂಗ್ ಅಥಾರಿಟಿ ನಿಯಮ 2016ರ ನಿಯಮ (2)ರಲ್ಲಿ ತಿಳಿಸಿದ್ದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರು.
ಅಲ್ಲದೇ ಮಾರುಕಟ್ಟೆ ದರದ ಪ್ರಕಾರವೇ (ಸರ್ಕಾರದ ಅಧಿಸೂಚನೆ ಸಂಖ್ಯೆ; ನಾಇ 27 ಟಿಟಿಪಿ 2016, 24.05.2017) ಮಂಜೂರು ಮಾಡಲು ಅವಕಾಶವಿದೆ ಎಂದು ಅಭಿಪ್ರಾಯಿಸಿದ್ದರು. ಈ ನಿಯಮಗಳ ಪ್ರಕಾರ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಲೀಸ್ ಅಥವಾ ನಿವೇಶನವನ್ನು ಮಂಜೂರು ಮಾಡಲು ಅವಕಾಶವೇ ಕಲ್ಪಿಸಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು 2025ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ವಿವರಿಸಿದ್ದರು.
ಇನ್ನು ಸಹ ಅಫಜಲಪೂರ ಪುರಸಭೆ ವ್ಯಾಪ್ತಿಯ ಸರ್ವೆ ನಂಬರ್ 354/12ರಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿದ್ದ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಕೋರಿತ್ತು. ಈ ಸಂಬಂಧ ಶಾಸಕ ಎಂ ವೈ ಪಾಟೀಲ್ ಅವರು ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ಮಾರ್ಗದರ್ಶನ ಮಾಡಬೇಕು ಎಂದು ಕಲ್ಬುರ್ಗಿ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಮಾರುಕಟ್ಟೆ ಮೌಲ್ಯದಂತೆ ಶೇ.100ರಷ್ಟು ನಿಗದಿಪಡಿಸಿದ್ದರಲ್ಲದೇ 30 ವರ್ಷ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿಯೂ ಸಹ ಕರ್ನಾಟಕ ಪ್ಲಾನಿಂಗ್ ಅಥಾರಿಟಿ ನಿಯಮ 2016ರ ನಿಯಮ (2)ರಲ್ಲಿ ತಿಳಿಸಿದ್ದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರು.
ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಸಾರ್ವಜನಿಕ ಉದ್ದೇಶಕ್ಕಾಗಿ, ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ್ದ ನಿವೇಶನದ ಪೈಕಿ 400.63 ಚ ಮೀಟರ್ ಜಾಗವನ್ನು 2025ರ ಅಕ್ಟೋಬರ್ 14ರಂದು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಲೋಕಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡುವ ಸಂಬಂಧ 2024ರ ಅಕ್ಟೋಬರ್ 16ರಂದೇ ಸಾಮಾನ್ಯ ಸಭೆಯಲ್ಲಿ ನಿರ್ಣಯ (ಠರಾವು; 157) ಕೈಗೊಂಡಿತ್ತು. ಆದರೆ ಇದೇ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಪುನಃ ಇದೇ ವಿಷಯ ಚರ್ಚೆಗೆ ಬಂದಿತ್ತು. ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸಿ ಎ ನಿವೇಶನವನ್ನು ಮಂಜೂರು ಮಾಡುವ ಪ್ರಸ್ತಾವವನ್ನು ಮರು ಪರಿಶೀಲಿಸಬೇಕು ಎಂದು ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಸಂಬಂಧ 2025ರ ಮಾರ್ಚ್ 25ರಂದು ಪಟ್ಟಣ ಪಂಚಾಯ್ತಿ ಸಭೆ ನಡೆದಿತ್ತು ಎಂದು ನಡವಳಿಯಿಂದ ತಿಳಿದು ಬಂದಿದೆ.
ನಿವೇಶನಗಳೇ ಲಭ್ಯವಿರಲಿಲ್ಲ, ಆದರೂ ಟ್ರಸ್ಟ್‌ಗೆ ಮಂಜೂರು
ಬಾಗಲಕೋಟೆ ಜಿಲ್ಲೆಯ ಲೋಕಾಪೂರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 9 ನಾಗರಿಕ ಸೌಲಭ್ಯ ನಿವೇಶನಗಳಿದ್ದವು. ಈ ಪೈಕಿ ಶೇ. 90ರಷ್ಟು ಅಂದರೆ 8 ನಿವೇಶನಗಳನ್ನು ಸರ್ಕಾರಿ ಉಪಯೋಗಕ್ಕೆ ಮೀಸಲಿಟ್ಟಿತ್ತು. ಬಾಕಿ ಉಳಿದಿದ್ದ ಶೇ. 10ರಟ್ಟು ಅಂದರೇ ಒಂದು ನಿವೇಶನವನ್ನು ಪರಿಶಿಷ್ಟ ಜಾತಿಗೆ ಶೇ. 18ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3ರಷ್ಟು ಮತ್ತು ವಿಶೇಷ ಚೇತನರಿಗೆ ಶೇ. 2ರಷ್ಟು ಮೀಸಲಿರಿಸಬೇಕಿತ್ತು. ಹೀಗಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡಲು ಪಟ್ಟಣ ಪಂಚಾಯ್ತಿಯಲ್ಲಿ ನಿವೇಶನವೇ ಲಭ್ಯವಿರಲಿಲ್ಲ.
ಆದರೂ ಸಹ ಕಾಂಗ್ರೆಸ್ ಭವನ ಟ್ರಸ್ಟ್ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಸರ್ಕಾರವು ತೀರ್ಮಾನಿಸಿತ್ತು. ಈ ತೀರ್ಮಾನವನ್ನು ಪೌರಾಡಳಿತ ನಿರ್ದೆಶನಾಲಯದ ನಿರ್ದೇಶಕರು ಒಪ್ಪಿರಲಿಲ್ಲ. ಕರ್ನಾಟಕ ಪ್ಲಾನಿಂಗ್ ಅಥಾರಿಟಿ ನಿಯಮ 2016ರ ನಿಯಮ (2)ರಲ್ಲಿ ತಿಳಿಸಿದ್ದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಅಂದರೇ ರಾಜಕೀಯ ಪಕ್ಷದ ಭವನ ಕಟ್ಟಡ ನಿರ್ಮಿಸುವ ಸಲುವಾಗಿ ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಆದರೂ ಈ ಅಭಿಪ್ರಾಯವನ್ನು ತಳ್ಳಿ ಹಾಕಿದ್ದ ನಗರಾಭಿವೃದ್ದಿ ಇಲಾಖೆಯು 2025ರ ಸೆ.25ರಂದು ನಡೆದಿದ್ದ ಸಚಿವ ಸಂಪುಟ ಸಭೆಗೆ ಈ ವಿಷಯವನ್ನು ಮಂಡಿಸಿತ್ತು. ಪ್ರಸ್ತಾಪಿತ ನಿವೇಶನದ ಮಾರುಕಟ್ಟೆ ಮೌಲ್ಯದ ಶೇ. 5ರಷ್ಟು ವಿಧಿಸಿ ಖಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದನೆ ನೀಡಿತ್ತು.
ವಿಶೇಷವೆಂದರೇ ನಗರ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ (ಸರ್ಕಾರದ ಅಧಿಸೂಚನೆ ದಿನಾಂಕ; 24/05/2017) ಅಧಿಸೂಚನೆ ಹೊರಡಿಸಿತ್ತು. ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ 2017ರ ಅಧಿಸೂಚನೆಯನ್ನೇ ಉಲ್ಲಂಘಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ತನ್ನದೇ ಅಧಿಸೂಚನೆ ಉಲ್ಲಂಘಿಸಿದ ಕಾಂಗ್ರೆಸ್ ಸರ್ಕಾರ
ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿನ ಪುರಸಭೆಗಳ ವ್ಯಾಪ್ತಿಯಲ್ಲಿ 25 ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ರಹೀಂ ಖಾನ್ ಅವರಿಗೆ ನಿರ್ದೇಶನ ನೀಡಿದ್ದರು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ 25 ನಿವೇಶನ; ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತ ಡಿ ಕೆ ಶಿವಕುಮಾರ್
ಕೊಪ್ಪಳ ನಗರದಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ 1.31 ಕೋಟಿ ರು ಬೆಲೆಬಾಳುವ ಸಿ ಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 13.19 ಲಕ್ಷ ರುಪಾಯಿಗೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೊಪ್ಪಳದಲ್ಲೂ ನಿವೇಶನ; 1.18 ಕೋಟಿ ನಷ್ಟ, ನಿಯಮ ಉಲ್ಲಂಘಿಸಿದ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗಿತ್ತು.
ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ
ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ ತೀರ್ಮಾನವು (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ಆರ್‍ಡಿಪಿಆರ್‍ನಿಂದ ಪ್ರಸ್ತಾವ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ?
ಬೆಳಗಾವಿಯಲ್ಲಿನ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು. ಹೀಗಾಗಿ ಎಲ್ಲಾ ಸಚಿವರೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ; ಪಂಚಾಯ್ತಿಗಳ ಜಾಗದ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್ ಭವನ ಟ್ರಸ್ಟ್
ಕಾಂಗ್ರೆಸ್ ಭವನ ಟ್ರಸ್ಟ್ ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬುದರ ಕುರಿತು ಇಲಾಖೆಯು ಪ್ರಶ್ನಿಸಿತ್ತು.
ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿಯಾಗಿದೆ?
ಹಿಂದುಳಿದ ಮತ್ತು ನಾಯಕ ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.
ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್ ಭವನ ಟ್ರಸ್ಟ್‌ನ ಕಣ್ಣು
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು ಸ್ಥಳವನ್ನು ಬದಲಾಯಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾಂಗ್ರೆಸ್ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್, ಕಡಿಮೆ ಬೆಲೆ ನಿಗದಿಯೇಕೆ?
ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.
ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ
ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಇದೀಗ ಕಾಂಗ್ರೆಸ್ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.









