ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು 2026ರ ಜನವರಿಯಲ್ಲಿ ನಡೆಸಿದ್ದ ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿನ ಸರಿಯಾದ ಉತ್ತರಗಳನ್ನು ಪಡೆಯಲು ಅಭ್ಯರ್ಥಿಗಳು 20 ಲಕ್ಷಕ್ಕೂ ಹೆಚ್ಚು ನಗದು ಹಣವನ್ನು ಪಾವತಿಸಿದ್ದರು. ಅಭ್ಯರ್ಥಿಗಳಿಗೆ ತಾವು ಆಯ್ಕೆಯಾಗುವ ಸಾಧ್ಯತೆ ಎಷ್ಟಿದೆ ಎಂಬುದು ತಿಳಿಯದ ಕಾರಣ ಇದನ್ನೇ ದುರುಪಯೋಗಪಡಿಸಿಕೊಂಡಿದ್ದ ಕೆಪಿಎಸ್ಸಿ ಸದಸ್ಯರು ಮತ್ತು ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಬಯಲು ಮಾಡಿದೆ.
ಅಲ್ಲದೇ ಮನೆ ಆಸ್ತಿಯಿಂದ ಒಟ್ಟು ವಾರ್ಷಿಕ ಮೌಲ್ಯ ರೂ. 6,60,000 ಬಾಡಿಗೆ ಆದಾಯವೆಂದು ಘೋಷಿಸಲಾಗಿತ್ತು. ವಿಶೇಷವೆಂದರೇ ಶಿವಶಂಕರಪ್ಪ ಸಾಹುಕಾರ್ ಅವರನ್ನು ಬಾಡಿಗೆದಾರರೆಂದು ನಮೂದಿಸಲಾಗಿತ್ತು. ಆದರೆ ಅವರು ಆ ಕಟ್ಟಡದಲ್ಲಿ ಎಂದಿಗೂ ವಾಸಿಸಿರಲಿಲ್ಲ. ಹೀಗಾಗಿ ಈ ಬಾಡಿಗೆ ಆದಾಯವೂ ಸಹ ಕಾಲ್ಪನಿಕವಾಗಿತ್ತು! ಮತ್ತೊಂದು ವಿಶೇಷವೆಂದರೇ ತಮ್ಮ ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚದಲ್ಲಿ ಸುಮಾರು ರೂ.7 ಲಕ್ಷವನ್ನು ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಭರಿಸಿದ್ದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಬಿ ವಿ ಗೀತಾ ಶಿವಮೂರ್ತಿ ಅವರ ಹೇಳಿಕೆ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಡಿರುವ ಅವಲೋಕನದಲ್ಲಿ ಈ ಸಂಗತಿಯ ಮಾಹಿತಿ ಇದೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ 480ಕ್ಕೂ ಹೆಚ್ಚು ಪುಟಗಳ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಚಟುವಟಿಕೆಗಳಲ್ಲಿ ಗೀತಾ ಶಿವಮೂರ್ತಿ ಅವರು ಸಹ ಆರೋಪಿಯಾಗಿದ್ದಾರೆ. ಇವರು ಸಹ ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ ಎಂಬ ಆಪಾದನೆಯೂ ಇದೆ. ಈ ಎಲ್ಲಾ ಆಪಾದನೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಿಎಂಎಲ್ಎ ಅಡಿಯಲ್ಲಿ ವಿಚಾರಣೆ ನಡೆಸಿತ್ತು. ಅಲ್ಲದೇ ಗೀತಾ ಶಿವಮೂರ್ತಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಶೋಧ ಕಾರ್ಯಾಚರಣೆ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ವಿವಿಧ ರೀತಿಯ ದಾಖಲೆಗಳನ್ನಾಧರಿಸಿ ಹಣಕಾಸಿನ ವಹಿವಾಟು, ಹಣ ವರ್ಗಾವಣೆ ಕುರಿತಾಗಿ ಹಲವು ಸಂಗತಿಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಬಿ ವಿ ಗೀತಾ ಶಿವಮೂರ್ತಿ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಆರು ಅಭ್ಯರ್ಥಿಗಳಿಗೆ ಸರಿಯಾದ ಉತ್ತರದ ಕೀಗಳನ್ನು ಅಂದಿನ ಅಧ್ಯಕ್ಷರ ಸೂಚನೆಯ ಮೇರೆಗೆ ತಾವೇ ಸಂಗ್ರಹಿಸಿದ್ದರು ಎಂದು ಅಂದಿನ ಪರೀಕ್ಷಾ ನಿಯಂತ್ರಕರು ತಿಳಿಸಿದ್ದಾರೆ. ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರು ಸರಿಯಾದ ಉತ್ತರದ ಆಯ್ಕೆಗಳನ್ನು ಪಡೆಯುವುದಕ್ಕಾಗಿ ಅವರಿಗೆ ರೂ.20 ಲಕ್ಷ ನಗದು ಹಣ ಪಾವತಿಸಿದ್ದಾಗಿ ತಿಳಿಸಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.
ಅವರ ಪತಿ ಔಷಧ ವ್ಯಾಪಾರಿಯಾಗಿದ್ದು, ಮೆಡಿಕಲ್ ಅಂಗಡಿಯನ್ನು ನಡೆಸುತ್ತಾರೆ ಹಾಗೂ ಶಿವಮೊಗ್ಗದ ಜ್ಞಾನ ಪ್ರಭಾ ವಿದ್ಯಾಸಂಸ್ಥೆಯ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಾರೆ. 2019ರಿಂದ ಮಾರ್ಚ್ 2022ರವರೆಗೆ ರಾಜ್ಯ ಮಾಹಿತಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ ನಂತರ ಅವರನ್ನು ಕೆಪಿಎಸ್ಸಿ ಸದಸ್ಯೆಯಾಗಿ ನೇಮಕ ಮಾಡಲಾಗಿತ್ತು.
ಕೆಪಿಎಸ್ಸಿ ಸದಸ್ಯೆಯಾಗಿ ಪರೀಕ್ಷೆಗಳನ್ನು ನಡೆಸುವಲ್ಲಿ ತಮಗೆ ಯಾವುದೇ ಕಾರ್ಯನಿರ್ವಹಣಾ ಅಥವಾ ಮೇಲ್ವಿಚಾರಣಾ ಜವಾಬ್ದಾರಿ ಇಲ್ಲ ಎಂದು ತನಿಖಾಧಿಕಾರಿಗೆ ತಿಳಿಸಿದ್ದಾರೆ. ಗ್ರೂಪ್-A ಮತ್ತು ಗೆಜೆಟೆಡ್ ಹುದ್ದೆಗಳ ಸಂದರ್ಶನಗಳನ್ನು ನಡೆಸುವಂತಹ ವಿಷಯಗಳಿಗೆ ಮಾತ್ರ ತಮ್ಮ ಪಾತ್ರ ಸೀಮಿತವಾಗಿದೆ ಎಂದು ತನಿಖಾಧಿಕಾರಿ ಮುಂದೆ ಹೇಳಿದ್ದಾರೆ. ಶಿವಶಂಕರಪ್ಪ ಸಹುಕಾರ್ ಅವರೊಂದಿಗಿನ ಸಂಬಂಧದ ಬಗ್ಗೆ ತನಿಖಾಧಿಕಾರಿಯು ಪ್ರಶ್ನಿಸಿದಾಗ 2020ರ ಜನವರಿ 26ರಂದು ರಾಜ್ಯಪಾಲರ ಕಚೇರಿಯಲ್ಲಿ ಅವರನ್ನು ಭೇಟಿಯಾದಾಗಿನಿಂದ ಅವರ ಪರಿಚಯವಿದೆ ಎಂದು ತಿಳಿಸಿದ್ದಾರೆ. ಆಗ ಅವರು ಕೆಪಿಎಸ್ಸಿ ಸದಸ್ಯರಾಗಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅವರ ಮೊದಲ ಪುತ್ರಿಯ ಕುಟುಂಬವು ತಮ್ಮ ಕುಟುಂಬಕ್ಕೆ ಸಂಬಂಧಿಕರಾಗಿದ್ದಾರೆ ಎಂದು ಹೇಳಿದ್ದಾರೆ. ನಂತರ ಅವರು ಕೆಪಿಎಸ್ಸಿ ಅಧ್ಯಕ್ಷರಾಗಿದ್ದಾಗ ತಾವು ಕೆಪಿಎಸ್ಸಿ ಸದಸ್ಯೆಯಾಗಿ ಸೇರಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಂದಿನ ಕೆಪಿಎಸ್ಸಿ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಕೊಠಡಿಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆಯಾದ ಬ್ಯಾಂಕ್ ಠೇವಣಿ ಚೀಟಿಗಳನ್ನು ಅವರಿಗೆ ತನಿಖಾಧಿಕಾರಿ ತೋರಿಸಿದ್ದರು.
ತನಿಖಾಧಿಕಾರಿ ತೋರಿಸಿದ್ದ ಠೇವಣಿಗಳ ವಿವರಗಳಲ್ಲೇನಿದ್ದವು?
2022ರ ಸೆ.6ರಿಂದ 2023ರ ಫೆ.23ರ ಅವಧಿಯಲ್ಲಿ ಚಂದ್ರಹಾಸ್ ಕೆ. ಅವರ ಖಾತೆಗೆ ಒಟ್ಟು ರೂ.2,02,500 ಮೊತ್ತದ ಐದು ಠೇವಣಿಗಳು, 2022ರ ಫೆಬ್ರುವರಿ 1 ಮತ್ತು ಅಕ್ಟೋಬರ್ 1ರಂದು ಅವರು ಹೊಂದಿದ್ದ ಎಸ್ಬಿಐ ಖಾತೆ (ಸಂಖ್ಯೆ 39229944362) ಕ್ರಮವಾಗಿ ರೂ.3,00,000 ಮತ್ತು ರೂ.5,00,000 ಮೊತ್ತದ ಎರಡು ಠೇವಣಿಗಳಿದ್ದವು. 2023ರ ಮೇ 29 ಮತ್ತು ಜೂನ್ 28ರ ಹೊತ್ತಿಗೆ ಅವರ ಪುತ್ರಿ ಕುಮಾರಿ ಶೀತಲ್ ಪಾಟೀಲ್ ಅವರು ಹೊಂದಿದ್ದ ಎಸ್ಬಿಐ ಖಾತೆಯಲ್ಲಿ ರೂ.44,000 ಮತ್ತು ರೂ.40,000 ಮೊತ್ತದ ಎರಡು ಠೇವಣಿಗಳಿದ್ದವು. ಈ ಎಲ್ಲಾ ಠೇವಣಿ ಚೀಟಿಗಳಿಗೆ ಸಹಿ ಹಾಕಿದ್ದ ಗೀತಾ ಶಿವಮೂರ್ತಿ ಅವರು ಅದಕ್ಕೆ ವಿವರಣೆ ನೀಡಿದ್ದರು.
ಚಂದ್ರಹಾಸ್ ಕೆ. ಅವರ ಖಾತೆಯಲ್ಲಿನ ಠೇವಣಿಗಳು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಫ್ಲ್ಯಾಟ್ನ ಬಾಡಿಗೆಗೆ ಸಂಬಂಧಿಸಿದ್ದವು. ತಮ್ಮ ಪುತ್ರಿಯ ಖಾತೆಯಲ್ಲಿನ ಠೇವಣಿಗಳು ಆಕೆಯ ವೈಯಕ್ತಿಕ ಬಳಕೆಗಾಗಿ ಮಾಡಲಾಗಿದ್ದವು. ತಮ್ಮ ಸ್ವಂತ ಖಾತೆಯಲ್ಲಿನ ಠೇವಣಿಗಳು ತಮ್ಮ ವೈಯಕ್ತಿಕ ಬಳಕೆಗಾಗಿ ಮಾಡಲಾಗಿದ್ದವು. ಶಿವಶಂಕರಪ್ಪ ಅವರ ಪರಿಚಯ ತಮಗೆ ಬಹಳ ವರ್ಷಗಳಿಂದ ಇದೆ ಎಂದು ತಿಳಿಸಿದ್ದರು.

ಸದಸ್ಯೆಯಾದಾಗ ಆರ್ಥಿಕ ಸಂಕಷ್ಟ
‘2021–22ರಲ್ಲಿ ಹೊಸದಾಗಿ ನೇಮಕಗೊಂಡ ಸದಸ್ಯೆಯಾಗಿ ಬೆಂಗಳೂರಿಗೆ ಬಂದಾಗ ತಾವು ಆರ್ಥಿಕ ಸಂಕಷ್ಟದಲ್ಲಿದ್ದೆವು. ತಮ್ಮ ಕೋರಿಕೆಯ ಮೇರೆಗೆ ಈ ಮೊತ್ತಗಳನ್ನು ತಮ್ಮ ಖಾತೆಗೆ ಜಮೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆ ಹಣವನ್ನು ತಾವು ಮರುಪಾವತಿಸಿದ್ದೇವೆಯೇ ಎಂಬುದು ಖಚಿತವಾಗಿ ನೆನಪಿಲ್ಲ ,’ ಎಂದು ಹೇಳಿದ್ದಾರೆ.
ಠೇವಣಿ ಚೀಟಿಗಳಲ್ಲಿ ನಗದು ಹಣವನ್ನು ಜಮೆ ಮಾಡಿರುವುದಾಗಿ ನಮೂದಿಸಲಾಗಿದೆ ಎಂದು ಗಮನಕ್ಕೆ ತಂದಾಗ, ತಾವು ಹಣದ ಅಗತ್ಯವಿದೆ ಎಂದು ಕೇಳಿದ್ದರಿಂದ ಹಣವನ್ನು ಜಮೆ ಮಾಡಲಾಗಿತ್ತು; ಆದರೆ ಅದು ನಗದು ಠೇವಣಿ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ. ಇದಲ್ಲದೆ, ಅವರು ಒಪ್ಪಿಕೊಂಡಿರುವ ಅಂಶಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕೆಪಿಎಸ್ಸಿ ಅಧ್ಯಕ್ಷರಿಂದ ಹಣ ಜಮೆ
ಅಂದಿನ ಕೆಪಿಎಸ್ಸಿ ಅಧ್ಯಕ್ಷರ ಮೊದಲ ಪುತ್ರಿಯ ಕುಟುಂಬವು ತಮ್ಮ ಕುಟುಂಬಕ್ಕೆ ಸಂಬಂಧಿಕರಾಗಿದ್ದಾರೆ. ಅಧ್ಯಕ್ಷರ ಕೊಠಡಿಯಲ್ಲಿ ಪತ್ತೆಯಾದ ಠೇವಣಿ ಚೀಟಿಗಳು ತಮ್ಮ ಖಾತೆಗೆ ಜಮೆಯಾದ ರೂ.8,00,000, ತಮ್ಮ ಪುತ್ರಿಯ ಖಾತೆಗೆ ಜಮೆಯಾದ ರೂ.84,000 ಮತ್ತು ತಮ್ಮ ಬಾಡಿಗೆಗೆ ಸಂಬಂಧಿಸಿದಂತೆ ಮನೆ ಮಾಲೀಕರ ಖಾತೆಗೆ ಜಮೆಯಾದ ರೂ.2,02,500ಕ್ಕೆ ಸಂಬಂಧಿಸಿವೆ. ತಮ್ಮ ಕೋರಿಕೆಯ ಮೇರೆಗೆ ಈ ಹಣವನ್ನು ಜಮೆ ಮಾಡಲಾಗಿತ್ತು. ಆದರೆ, ಅದನ್ನು ಮರುಪಾವತಿಸಿದ್ದೇವೆಯೇ ಎಂಬುದು ಖಚಿತವಿಲ್ಲ ಎಂದು ಗೀತಾ ಶಿವಮೂರ್ತಿ ಅವರು ಹೇಳಿಕೆಯಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಪಿಎಂಎಲ್ಎ 2002ರ ಸೆಕ್ಷನ್ 17ರ ಅಡಿಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ದಾಖಲಿಸಲಾದ ಬಿ.ವಿ. ಗೀತಾ ಅವರ ಮೇಲಿನ ಹೇಳಿಕೆಯಿಂದ, ಅವರ ಸ್ವಂತ ಬ್ಯಾಂಕ್ ಖಾತೆ, ಅವರ ಪುತ್ರಿಯ ಖಾತೆ ಮತ್ತು ಅವರ ಮನೆ ಮಾಲೀಕರ ಖಾತೆಗಳಿಗೆ ಒಟ್ಟು ರೂ.10,86,500 ನಗದು ಹಣ ಜಮೆ ಮಾಡಲಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಠೇವಣಿಗಳಿಗೆ ಸಂಬಂಧಿಸಿದ ಚೀಟಿಗಳನ್ನು ಅಂದಿನ ಕೆಪಿಎಸ್ಸಿ ಅಧ್ಯಕ್ಷರ ಕೊಠಡಿಯಲ್ಲಿ ಇರಿಸಲಾಗಿತ್ತು. ಇದಲ್ಲದೆ, ತಾವು ಹಣವನ್ನು ಸ್ವೀಕರಿಸಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಮತ್ತು ಆರ್ಥಿಕ ಸಂಕಷ್ಟದಲ್ಲಿದ್ದುದಾಗಿ ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಮೊತ್ತವನ್ನು ಮರುಪಾವತಿಸಿರುವುದಕ್ಕೆ ಸಾಕ್ಷ್ಯ ತೋರಿಸಲು ಸಾಧ್ಯವಾಗಿಲ್ಲ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

ಹೇಳಿಕೆಗಳ ಸಾರಾಂಶ
2026ರ ಅಕ್ಟೋಬರ್ 12, 13 ಮತ್ತು 14ರಂದು ಗೀತಾ ಶಿವಮೂರ್ತಿ ಅವರಿಂದ ಜಾರಿ ನಿರ್ದೇಶನಾಲಯವು ಹೇಳಿಕೆ ದಾಖಲಿಸಿತ್ತು. ಗೀತಾ ಶಿವಮೂರ್ತಿ ಅವರು ತಮ್ಮ ವೃತ್ತಿಜೀವನದ ಕುರಿತು ವಿವರಗಳನ್ನು ಹಂಚಿಕೊಂಡಿದ್ದರು.
ಅವರು 2000ರಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರವರೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗಳಿಗೆ ಪ್ಯಾನೆಲ್ ವಕೀಲರಾಗಿದ್ದರು. 1997ರಿಂದ 2019ರವರೆಗೆ ಸಂಜೆ ವೇಳೆ ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು. 2010ರಿಂದ 2017ರವರೆಗೆ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಹಾಗೂ ನಂತರ ಅಧ್ಯಕ್ಷೆಯಾಗಿದ್ದರು. ಅರೆಕಾಲಿಕ ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
2016ರಿಂದ 2019ರವರೆಗೆ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ACB) ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದರು. 2019ರ ಡಿಸೆಂಬರ್ 16ರಿಂದ ಮಾರ್ಚ್ 2022ರವರೆಗೆ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾಗಿದ್ದರು. 2022ರ ಏಪ್ರಿಲ್ 11ರಂದು ಕೆಪಿಎಸ್ಸಿ ಸದಸ್ಯೆಯಾಗಿ ನೇಮಕಗೊಂಡಿದ್ದರು.

ಆಸ್ತಿ ವಿವರಗಳಲ್ಲೇನಿದೆ?
ವೇತನ, ಕೃಷಿ ಮತ್ತು ಬಾಡಿಗೆ ಆದಾಯದಿಂದ ತಮ್ಮ ವಾರ್ಷಿಕ ಆದಾಯವು ಸುಮಾರು ರೂ.50 ಲಕ್ಷದಿಂದ ರೂ.55 ಲಕ್ಷದವರೆಗೆ ಇದೆ ಎಂದು ಗೀತಾ ಶಿವಮೂರ್ತಿ ಅವರು ತನಿಖಾಧಿಕಾರಿಗೆ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಡ್ಯುಪ್ಲೆಕ್ಸ್ ಮನೆ. 2021ರಲ್ಲಿ ರೂ.14 ಲಕ್ಷಕ್ಕೆ ಖರೀದಿಸಿದ ನಿವೇಶನದಲ್ಲಿ ಈ ಮನೆ ನಿರ್ಮಿಸಲಾಗಿದೆ. ಇದಕ್ಕಾಗಿ ಬೆಳಗಾವಿಯಲ್ಲಿರುವ ಎಸ್ಬಿಐ ಶಾಖೆಯಿಂದ ರೂ.99 ಲಕ್ಷ ಗೃಹ ಸಾಲ ಪಡೆದಿದ್ದಾರೆ. 2022–23ರಲ್ಲಿ ಖರೀದಿಸಿದ್ದ ಎರಡು ಎಕರೆ ಕೃಷಿ ಭೂಮಿ. ಶಿವಮೊಗ್ಗದಲ್ಲಿರುವ ಕೆಐಎಡಿಬಿ ಗೋದಾಮು ಇದೆ. ಈ ಗೋದಾಮನ್ನು ಅವರ ಮಾವ ತಮ್ಮ ಪತಿಗೆ ಉಡುಗೊರೆಯಾಗಿ ನೀಡಿದ್ದರು. ನಂತರ ಅವರ ಪತಿ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ಗೀತಾ ಅವರ ಪತಿಯು ಶಿವಮೊಗ್ಗದಲ್ಲಿ 13 ಫ್ಲ್ಯಾಟ್ಗಳನ್ನು ಹೊಂದಿರುವ ಪಿತ್ರಾರ್ಜಿತ ಅಪಾರ್ಟ್ಮೆಂಟ್ ಕಟ್ಟಡದ ಮಾಲೀಕರಾಗಿದ್ದಾರೆ. ಅವರ ಪುತ್ರಿ ಕುಮಾರಿ ಶೀತಲ್ ಎಸ್. ಪಾಟೀಲ್ ಅವರು ಡಾಲರ್ಸ್ ಕಂಫರ್ಟ್ ಅಪಾರ್ಟ್ಮೆಂಟ್ನಲ್ಲಿರುವ 2BHK ಫ್ಲ್ಯಾಟ್ ಸಂಖ್ಯೆ 001ರ ಮಾಲೀಕರಾಗಿದ್ದಾರೆ. ಈ ಫ್ಲ್ಯಾಟ್ ಅನ್ನು ಫೆಬ್ರವರಿ 2023ರಲ್ಲಿ ಬೆಳಗಾವಿಯ ಎಸ್ಬಿಐ ಶಾಖೆಯಿಂದ ಪಡೆದ ಸಾಲದ ಮೂಲಕ ಖರೀದಿಸಲಾಗಿದೆ. ಅದೇ ರೀತಿ 2018ರಿಂದ ತಮ್ಮ ಆದಾಯವು ವೇತನ, ಕೃಷಿ ಆದಾಯ ಮತ್ತು ಬಾಡಿಗೆಯಿಂದ ಬಂದಿದೆ. 2021–22ರಲ್ಲಿ ದಾವಣಗೆರೆಯ ಹೊನ್ನೇಮರ್ತಹಳ್ಳಿಯಲ್ಲಿ ಎರಡು ಎಕರೆ ಕೃಷಿ ಭೂಮಿಯನ್ನು ಪ್ರತಿ ಎಕರೆಗೆ ಸುಮಾರು ರೂ.9 ಲಕ್ಷದಂತೆ ತಮ್ಮ ಹಿಂದಿನ ಉಳಿತಾಯದ ಹಣದಿಂದ ಖರೀದಿಸಿದ್ದಾರೆ.

ಅಡಿಕೆ ಕೃಷಿಯಿಂದ ಪ್ರತಿ ಎಕರೆಗೆ ಸುಮಾರು ರೂ.4 ಲಕ್ಷ ಆದಾಯ ಗಳಿಸುತ್ತಾರೆ. ಉಡುಗೊರೆಯಾಗಿ ಪಡೆ ಕೆಐಎಡಿಬಿಯ ನಿವೇಶನವನ್ನು M/s ಕಾರ್ತಿಕೇಯ ಎಂಟರ್ಪ್ರೈಸಸ್ ಸಂಸ್ಥೆಗೆ ತಿಂಗಳಿಗೆ ರೂ.40,000 ಬಾಡಿಗೆಗೆ ನೀಡಿದ್ದಾರೆ. ಅವರ ಪತಿ ಶಿವಮೊಗ್ಗದಲ್ಲಿ M/s ಎಸ್.ಪಿ. ಮೆಡಿಕಲ್ಸ್ ನಡೆಸುತ್ತಿದ್ದಾರೆ. 12 ಫ್ಲ್ಯಾಟ್ಗಳಿಂದ ಸುಮಾರು ರೂ.4 ಲಕ್ಷದಿಂದ ರೂ.5 ಲಕ್ಷದವರೆಗೆ ಬಾಡಿಗೆ ಆದಾಯ ಗಳಿಸುತ್ತಾರೆ. ರಾಜ್ಯ ಮಾಹಿತಿ ಆಯುಕ್ತರಾಗಿದ್ದಾಗ ಅವರ ಒಟ್ಟು ಮಾಸಿಕ ವೇತನ ರೂ.3.17 ಲಕ್ಷವಾಗಿತ್ತು. ಕೆಪಿಎಸ್ಸಿ ಸದಸ್ಯೆಯಾಗಿ ಪ್ರಸ್ತುತ ಸುಮಾರು ರೂ.3.20 ಲಕ್ಷ ಮಾಸಿಕ ವೇತನ ಪಡೆಯುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಚರಾಸ್ತಿಯನ್ನು ಖರೀದಿಸಿಲ್ಲ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ಅವರ ಪುತ್ರಿಯು ಡಾಲರ್ಸ್ ಕಂಫರ್ಟ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ ಅನ್ನು ಸುಮಾರು ರೂ.1.05 ಕೋಟಿಗೆ ಖರೀದಿಸಿದ್ದಾರೆ. ಇದಕ್ಕಾಗಿ ಬೆಳಗಾವಿಯಲ್ಲಿನ ಎಸ್ಬಿಐ ಶಾಖೆಯಿಂದ ರೂ.97 ಲಕ್ಷ ಗೃಹ ಸಾಲ ಪಡೆದಿದ್ದಾರೆ. ಪುತ್ರಿಗೆ ಸುಮಾರು ರೂ.22 ಲಕ್ಷವನ್ನು ಉಡುಗೊರೆಯಾಗಿ ನೀಡಿ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ಕೀಲಿಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗದ ವಿನೋಭನಗರ ಶಾಖೆಯ ಲಾಕರ್ಗೆ ಸೇರಿದ್ದಾಗಿದೆ. ಆ ಲಾಕರ್ನಲ್ಲಿ ತಮ್ಮ ಮತ್ತು ತಮ್ಮ ಪುತ್ರಿಗೆ ಸೇರಿದ ಚಿನ್ನದ ಆಭರಣಗಳು ಮಾತ್ರ ಇವೆ ಎಂದು 2026ರ ಅಕ್ಟೋಬರ್ 1ರಂದು ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ದಾಖಲಿಸಲಾಗಿದೆ.
ತಮ್ಮ ಪುತ್ರಿಯ ಶಿಕ್ಷಣದ ಕುರಿತು, 2018ರಲ್ಲಿ ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ MBBS ಕೋರ್ಸ್ಗೆ ಪ್ರವೇಶ ಪಡೆದಿದ್ದಳು. ನಂತರ ಆಕೆ ಕೋರ್ಸ್ನ್ನು ಅರ್ಧದಲ್ಲೇ ನಿಲ್ಲಿಸಿದ್ದಾಳೆ ಎಂದು ತಿಳಿಸಿದ್ದಾರೆ. ಯಾವುದೇ ಶಿಕ್ಷಣ ಸಾಲ ಅಥವಾ ದೇಣಿಗೆಯನ್ನು ಪಡೆದಿಲ್ಲ ಅಥವಾ ಪಾವತಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ತಮ್ಮ ಪುತ್ರಿಯ ಶಿಕ್ಷಣದ ವೆಚ್ಚದಲ್ಲಿ ಸುಮಾರು ರೂ.7 ಲಕ್ಷವನ್ನು ಶಿವಶಂಕರಪ್ಪ ಎಸ್. ಸಹುಕಾರ್ ಅವರು ಭರಿಸಿದ್ದರು. ಆ ಮೊತ್ತವನ್ನು ಇನ್ನೂ ಮರುಪಾವತಿಸಿಲ್ಲ ಎಂದು ಗೀತಾ ಶಿವಮೂರ್ತಿ ಅವರು ತನಿಖಾಧಿಕಾರಿಗೆ ತಿಳಿಸಿದ್ದಾರೆ.

ಗೃಹ ಸಾಲಗಳ ಕುರಿತು ತನಿಖಾಧಿಕಾರಿಯು ಹಲವು ಪ್ರಶ್ನೆಗಳನ್ನು ವಿಚಾರಣೆ ಸಂದರ್ಭದಲ್ಲಿ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅವರು ‘ತಾವು ಮತ್ತು ತಮ್ಮ ಪುತ್ರಿ ತಲಾ ಸುಮಾರು ರೂ.1 ಕೋಟಿ ಗೃಹ ಸಾಲವನ್ನು ಬೆಳಗಾವಿಯ ಎಸ್ಬಿಐ ಶಾಖೆಯಿಂದ ಪಡೆದಿದ್ದಾಗಿ ತಿಳಿಸಿದ್ದಾರೆ. ತಮ್ಮ ಸಾಲದಲ್ಲಿ ಸುಮಾರು ರೂ.3 ಲಕ್ಷ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ. 2025ರಲ್ಲಿ ತಮ್ಮ ಪುತ್ರಿಗೆ ವಿವಾಹವಾಗಬೇಕಿದ್ದ ಕಾರಣ, ಆಕೆಯ ಹೆಸರಿನಲ್ಲಿದ್ದ ಸಾಲಗಳನ್ನು ತೀರಿಸಲು ಯೋಜಿಸಿದ್ದರು. ಇದಕ್ಕಾಗಿ ಕೆಪಿಎಸ್ಸಿ ಸದಸ್ಯರಾದ ಡಾ. ಎಚ್.ಎಸ್. ನರೇಂದ್ರ ಅವರ ಸಹೋದರ ಹಾಗೂ M/s ಸಿಡ್ಮಾ ಇನ್ಫ್ರಾಟೆಕ್ನ ವ್ಯವಸ್ಥಾಪಕ ನಿರ್ದೇಶಕರಾದ ಮಹಾದೇವಸ್ವಾಮಿ ಅವರಿಂದ ಸುಮಾರು ರೂ.76 ಲಕ್ಷ ಸಾಲ ಪಡೆಯಲಾಗಿದೆ,’ ಎಂದು ವಿವರಣೆ ಒದಗಿಸಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ಅದರಲ್ಲಿ ಸುಮಾರು ರೂ.50 ಲಕ್ಷವನ್ನು ಎಸ್ಬಿಐ ಖಾತೆಗೆ, ಮತ್ತು ಸುಮಾರು ರೂ.25 ಲಕ್ಷವನ್ನು ತಮ್ಮ ಪುತ್ರಿಯ ಖಾತೆಗೆ ವರ್ಗಾಯಿಸಲಾಗಿತ್ತು. ತಮ್ಮ ಪುತ್ರಿಯು ಈ ಹಣವನ್ನು ಬಳಸಿ ತನ್ನ ಸಂಪೂರ್ಣ ಗೃಹ ಸಾಲವನ್ನು ಮರುಪಾವತಿಸಿದ್ದಾಳೆ. ಮಹಾದೇವಸ್ವಾಮಿ ಅವರಿಂದ ಪಡೆದ ಸಾಲದ ಮೊತ್ತವನ್ನು ಇನ್ನೂ ಮರುಪಾವತಿಸಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಪುತ್ರಿಗೆ 2025ರ ಮೇ 7ರಂದು ವಿವಾಹವಾಗಿದೆ. ಮದುವೆಗೆ ಸುಮಾರು ರೂ.5 ಲಕ್ಷ ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ. ಮದುವೆಯ ಬಹುತೇಕ ವೆಚ್ಚವನ್ನು ವರನ ಕುಟುಂಬದವರು ಭರಿಸಿದ್ದರು. ತಮ್ಮ ಪುತ್ರಿಗೆ ಸುಮಾರು 200 ಗ್ರಾಂ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಿದ್ದಾರೆ. ಕುಮಾರಿ ಶೀತಲ್ ಎಸ್. ಪಾಟೀಲ್ ಅವರ ತೆರಿಗೆದಾರರ ಮಾಹಿತಿ ಸಾರಾಂಶವನ್ನು (Taxpayer Information Summary) ಒಳಗೊಂಡ, ವಶಪಡಿಸಿಕೊಳ್ಳಲಾದ ಸಡಿಲ ಹಾಳೆ ಸಂಖ್ಯೆ 6 ಅನ್ನು ತನಿಖಾಧಿಕಾರಿಯು ತೋರಿಸಿದ್ದರು.
ಶಿವಶಂಕರಪ್ಪ ಸಾಹುಕಾರ್ ಬಾಡಿಗೆದಾರ
ಅದರಲ್ಲಿ ರೂ.68,18,812 GST ವಹಿವಾಟು (Turnover) ಎಂದು ನಮೂದಿಸಲಾಗಿತ್ತು. 2024–25ನೇ ಹಣಕಾಸು ವರ್ಷದಲ್ಲಿ ತಮ್ಮ ಪುತ್ರಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು. ಮದುವೆಗೆ ಮುನ್ನವೇ ಆ ವ್ಯಾಪಾರವನ್ನು ನಿಲ್ಲಿಸಿ ಜಿಎಸ್ಟಿ ನೋಂದಣಿಯನ್ನು ರದ್ದುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಕುಮಾರಿ ಶೀತಲ್ ಎಸ್. ಪಾಟೀಲ್ ಅವರ 2025–26ನೇ ಹಣಕಾಸು ವರ್ಷದ ಆದಾಯದ ವಿವರಗಳನ್ನು ಒಳಗೊಂಡ, ವಶಪಡಿಸಿಕೊಳ್ಳಲಾದ ಹಾಳೆಯನ್ನು ಗೀತಾ ಶಿವಮೂರ್ತಿ ಅವರಿಗೆ ತೋರಿಸಿದ್ದರು. ಅದರಲ್ಲಿ ಮನೆ ಆಸ್ತಿಯಿಂದ ಒಟ್ಟು ವಾರ್ಷಿಕ ಮೌಲ್ಯ ರೂ.6,60,000 ಬಾಡಿಗೆ ಆದಾಯವೆಂದು ಘೋಷಿಸಲಾಗಿತ್ತು ಮತ್ತು ಶಿವಶಂಕರಪ್ಪ ಸಾಹುಕಾರ್ ಅವರನ್ನು ಬಾಡಿಗೆದಾರರೆಂದು ನಮೂದಿಸಲಾಗಿತ್ತು. ಅವರು ಆ ಕಟ್ಟಡದಲ್ಲಿ ಎಂದಿಗೂ ವಾಸಿಸಿರಲಿಲ್ಲ ಎಂಬುದನ್ನು ಅವರು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

ತಮ್ಮ ಪುತ್ರಿಗೆ ರೂ.97 ಲಕ್ಷದ ಗೃಹ ಸಾಲದ ಇಎಂಐ ಪಾವತಿಸಲು ಸಾಕಷ್ಟು ಆದಾಯವಿರಲಿಲ್ಲ. ಆದ್ದರಿಂದ, ಮೊದಲ ಇಎಂಐಯಿಂದ ಹಿಡಿದು ಪುತ್ರಿಯ ಮದುವೆಯಾಗುವವರೆಗೆ ಶಿವಶಂಕರಪ್ಪ ಸಹುಕಾರ್ ಅವರು ಪ್ರತಿ ತಿಂಗಳು ರೂ.75,000 ವರ್ಗಾಯಿಸುತ್ತಿದ್ದರು. ಈ ಹಣ ವರ್ಗಾವಣೆಗಳನ್ನು ಲೆಕ್ಕದಲ್ಲಿ ತೋರಿಸುವ ಸಲುವಾಗಿ ತಮ್ಮ ಪುತ್ರಿ ಅವುಗಳನ್ನು ಬಾಡಿಗೆ ಸ್ವೀಕೃತಿಗಳೆಂದು ಘೋಷಿಸಿದ್ದಳು ಎಂದು ತಿಳಿಸಿದ್ದಾರೆ.
ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಕೆ. ಅವರು ನೀಡಿದ್ದ ಕಾರಣ ಕೇಳುವ ನೋಟಿಸ್ (Show Cause Notice) ಮತ್ತು ದುರ್ನಡತೆ ನೋಟಿಸ್ಗಳನ್ನು ಗೀತಾ ಶಿವಮೂರ್ತಿ ಅವರಿಗೆ ತನಿಖಾಧಿಕಾರಿ ತೋರಿಸಿದ್ದರು. ಇವು ವಶಪಡಿಸಿಕೊಳ್ಳಲಾದ ಸಡಿಲ ಹಾಳೆ ಸಂಖ್ಯೆ 58ರಿಂದ 61ರವರೆಗೆ ಸೇರಿದ್ದವು. ಈ ನೋಟಿಸ್ಗಳು ಅಭ್ಯರ್ಥಿ ಕುಮಾರಿ ಶೃತಿ ಆರ್.ಎಂ. (ನೋಂದಣಿ ಸಂಖ್ಯೆ 241319150) ಅವರಿಗೆ ಸಂಬಂಧಿಸಿದ್ದವು. ಆಕೆ ಗೈರುಹಾಜರಾಗಿದ್ದರೂ ದಾಖಲೆ ಪರಿಶೀಲನೆಯಲ್ಲಿ ಅರ್ಹಳಾಗಿ ಪರಿಗಣಿಸಲಾಗಿತ್ತು. ಇದಕ್ಕೆ ತಪ್ಪಾಗಿ ನಡೆದಿರುವುದೇ ಕಾರಣವಾಗಿದ್ದು, ನಂತರ ಅದನ್ನು ಸರಿಪಡಿಸಲಾಗಿದೆ ಎಂಬ ವಿವರಣೆ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
2026ರ ಅಕ್ಟೋಬರ್ 1ರಂದು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೀಡಿದ ಹೇಳಿಕೆಯನ್ನೂ ತನಿಖಾಧಿಕಾರಿ ತೋರಿಸಿದ್ದರು. ಅದರಲ್ಲಿ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಮೊದಲ 80 ಪ್ರಶ್ನೆಗಳ ಸರಿಯಾದ ಉತ್ತರದ ಕೀಗಳನ್ನು ತಮಗೆ ಹಸ್ತಾಂತರಿಸಿದ್ದಾಗಿ ಹೇಳಲಾಗಿತ್ತು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಆರು ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯ ಮೊದಲ 80 ಪ್ರಶ್ನೆಗಳ ಉತ್ತರದ ಕೀಗಳನ್ನು ತಮಗೆ ನೀಡಲಾಗಿತ್ತು ಮತ್ತು ಪ್ರಕಟಣೆಗೆ ಮುನ್ನ 1:3 ಮೆರಿಟ್ ಪಟ್ಟಿಯನ್ನು ಪಡೆಯುವುದಕ್ಕಾಗಿ ತಾವು ಅವರನ್ನು ಸಂಪರ್ಕಿಸಿದ್ದಾಗಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿರುವ ಕುರಿತು ತನಿಖಾಧಿಕಾರಿಯು ಪ್ರಶ್ನಿಸಿದ್ದರು.

ಜ್ಞಾನೇಂದ್ರರ ಹೇಳಿಕೆಗೆ ಗೀತಾ ಶಿವಮೂರ್ತಿ ಅವರ ಉತ್ತರವೇನು?
‘ತಾವು ಉತ್ತರದ ಕೀಗಳನ್ನು ಸ್ವೀಕರಿಸಿಲ್ಲ ಮತ್ತು ತಾವು ಸ್ವೀಕರಿಸಿದ್ದಾಗಿ ಅವರು ಏಕೆ ಹೇಳಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಯಾವುದೇ ವಿವರಣೆ ಇಲ್ಲ ಎಂದು ತಿಳಿಸಿದ್ದಾರೆ. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ 1:3 ಮೆರಿಟ್ ಪಟ್ಟಿಯನ್ನು ಅವರಿಂದ ತಾವು ಪಡೆದಿಲ್ಲ ಎಂದು ಹೇಳಿದ್ದಾರೆ. ಆ ಹಂತದಲ್ಲಿ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ ಮತ್ತು ಅಭ್ಯರ್ಥಿಗಳಿಗೆ ತಾವು ಆಯ್ಕೆಯಾಗುವ ಸಾಧ್ಯತೆ ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡು ಕೆಪಿಎಸ್ಸಿ ಸದಸ್ಯರು ಮತ್ತು ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸಂದರ್ಶನವಿಲ್ಲದ ಹುದ್ದೆಗಳಿಗೆ 1:3 ಪಟ್ಟಿಯ ಅಗತ್ಯವಿಲ್ಲ ಎಂಬ ವಿಷಯವನ್ನು ತಾವು ಆಯೋಗದ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾಗಿ ಹೇಳಿದ್ದಾರೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಇದಲ್ಲದೆ ಅವರು ಹಲವು ಅಂಶಗಳನ್ನು ಒಪ್ಪಿಕೊಂಡಿದ್ದಾರೆ.
ಪುತ್ರಿಯ ವೈದ್ಯಕೀಯ ಶಿಕ್ಷಣ ವೆಚ್ಚ ಭರಿಸಿದ್ದ ಸಾಹುಕಾರ್
ತಮ್ಮ ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚದಲ್ಲಿ ಸುಮಾರು ರೂ.7 ಲಕ್ಷವನ್ನು ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಭರಿಸಿದ್ದರು. ಆ ಹಣವನ್ನು ಇನ್ನೂ ಮರುಪಾವತಿಸಿಲ್ಲ. ತಮ್ಮ ಪುತ್ರಿಯ ಮೊದಲ ಇಎಂಐಯಿಂದ ಆಕೆಯ ಮದುವೆಯಾಗುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರು ಪ್ರತಿ ತಿಂಗಳು ರೂ.75,000 ಹಣವನ್ನು ಪುತ್ರಿಯ ಗೃಹ ಸಾಲದ ಇಎಂಐ ಪಾವತಿಸುತ್ತಿದ್ದರು. ಈ ಹಣವನ್ನು ತಮ್ಮ ಪುತ್ರಿಯ ಆದಾಯ ತೆರಿಗೆ ರಿಟರ್ನ್ನಲ್ಲಿ ಕಾಲ್ಪನಿಕ ಬಾಡಿಗೆದಾರರಾದ ಅವರಿಂದ ಬಂದ ಬಾಡಿಗೆ ಆದಾಯವೆಂದು ತೋರಿಸಲಾಗಿತ್ತು.

ಕೆಪಿಎಸ್ಸಿ ಸದಸ್ಯರಾದ ಡಾ. ಎಚ್.ಎಸ್. ನರೇಂದ್ರ ಅವರ ಕುಟುಂಬದಿಂದ ತಾವು ಮತ್ತು ತಮ್ಮ ಪುತ್ರಿ ಸುಮಾರು ರೂ.76 ಲಕ್ಷ ಪಡೆದಿದ್ದೇವೆ. ತಮ್ಮ ಪುತ್ರಿಯ ಗೃಹ ಸಾಲವನ್ನು ತೀರಿಸಲು ಈ ಹಣವನ್ನು ಬಳಸಲಾಗಿದ್ದು, ಅದನ್ನು ಇನ್ನೂ ಮರುಪಾವತಿಸಿಲ್ಲ. ಫ್ಲ್ಯಾಟ್ ಖರೀದಿಗೆ ನೆರವಾಗಲು ತಮ್ಮ ಪುತ್ರಿಗೆ ಸುಮಾರು ರೂ.22 ಲಕ್ಷವನ್ನು ಉಡುಗೊರೆಯಾಗಿ ನೀಡಿದ್ದೇನೆ. ಕೆಪಿಎಸ್ಸಿ ಸದಸ್ಯರು ಮತ್ತು ಅಧಿಕಾರಿಗಳು ಗೌಪ್ಯ 1:3 ಮೆರಿಟ್ ಪಟ್ಟಿಯನ್ನು ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ಪಿಎಂಎಲ್ಎ 2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಬಿ.ವಿ. ಗೀತಾ ಅವರ ಹೇಳಿಕೆಗಳಿಂದ, ಅವರು ಕೆಪಿಎಸ್ಸಿ ಸದಸ್ಯೆಯಾಗಿದ್ದ ಅವಧಿಯಲ್ಲಿ ಅಂದಿನ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರಿಂದ ತಮ್ಮ ಪುತ್ರಿಯ ಶಿಕ್ಷಣ ಮತ್ತು ಗೃಹ ಸಾಲದ ಇಎಂಐ ಪಾವತಿಗಾಗಿ ನಿಯಮಿತವಾಗಿ ಹಣವನ್ನು ಸ್ವೀಕರಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ಹಣವನ್ನು ಆದಾಯ ತೆರಿಗೆ ರಿಟರ್ನ್ಗಳಲ್ಲಿ ಕಾಲ್ಪನಿಕ ಬಾಡಿಗೆದಾರರಿಂದ ಬಂದ ಬಾಡಿಗೆ ಆದಾಯವೆಂದು ಬಿಂಬಿಸಲಾಗಿತ್ತು ಎಂದು ತನಿಖಾಧಿಕಾರಿಯು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದ್ದಾರೆ.
ಅಲ್ಲದೆ, ಕೆಪಿಎಸ್ಸಿ ಸಹ ಸದಸ್ಯರಾದ ಡಾ. ಎಚ್.ಎಸ್. ನರೇಂದ್ರ ಅವರ ಕುಟುಂಬದಿಂದ ಸುಮಾರು ರೂ.76 ಲಕ್ಷವನ್ನು ಭದ್ರತೆಯಿಲ್ಲದ ಸಾಲದ ರೂಪದಲ್ಲಿ ಪಡೆದಿದ್ದರು. ಆ ಮೊತ್ತವನ್ನು ತಮ್ಮ ಪುತ್ರಿಯ ಗೃಹ ಸಾಲ ತೀರಿಸಲು ಬಳಸಲಾಗಿದ್ದು, ಅದನ್ನು ಮರುಪಾವತಿಸಿಲ್ಲ. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಉತ್ತರದ ಕೀಗಳನ್ನು ಸ್ವೀಕರಿಸಿದ್ದನ್ನು ಅವರು ಯಾವುದೇ ವಿವರಣೆಯಿಲ್ಲದೆ ನಿರಾಕರಿಸಿದ್ದಾರೆ. ಆದರೆ, ಈ ನಿರಾಕರಣೆಯು ಅಂದಿನ ಪರೀಕ್ಷಾ ನಿಯಂತ್ರಕರು ಮತ್ತು ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರ ಹೇಳಿಕೆಗಳಿಗೆ ವಿರುದ್ಧವಾಗಿದೆ.
‘ಹೀಗಾಗಿ ಈ ಸಂಗತಿಗಳು ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಬಂದ ಅಪರಾಧದ ಆದಾಯವನ್ನು ಗಳಿಸುವುದು, ಸ್ವಾಧೀನದಲ್ಲಿಟ್ಟುಕೊಳ್ಳುವುದು, ಬಳಸುವುದು ಮತ್ತು ಮರೆಮಾಚುವುದನ್ನು ಸೂಚಿಸುತ್ತವೆ. ಸಾಲ, ಉಡುಗೊರೆ ಮತ್ತು ಬಾಡಿಗೆ ಆದಾಯದ ರೂಪದಲ್ಲಿ ಅದನ್ನು ಕಳಂಕರಹಿತ ಆಸ್ತಿಯೆಂದು ಬಿಂಬಿಸುವ ಪ್ರಯತ್ನವೂ ನಡೆದಿರುವುದನ್ನು ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.




