ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಈ ಪ್ರಶ್ನೆಪತ್ರಿಕೆಗಳಿಲ್ಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನೂ ಸೋರಿಕೆ ಮಾಡಲಾಗಿತ್ತು. ಅಲ್ಲದೇ ಅಭ್ಯರ್ಥಿಗಳಿಗೆ ನಿರ್ದಿಷ್ಟವಾಗಿ ಸಿದ್ಧಪಡಿಸಿದ್ದ ಸರಿಯಾದ ಉತ್ತರಗಳನ್ನೂ ಸೋರಿಕೆ ಮಾಡಲಾಗಿತ್ತು. ಅಲ್ಲದೇ 1;3 ಅನುಪಾತದಡಿಯಲ್ಲಿ ಅರ್ಹತಾ ಪಟ್ಟಿಯನ್ನೂ ದುರುಪಯೋಗಪಡಿಸಿಕೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯವು ಬಹಿರಂಗಪಡಿಸಿದೆ.
ಅದೇ ರೀತಿ 10 ಅಭ್ಯರ್ಥಿಗಳಿಂದ ಆಪಾದಿತರು ಒಟ್ಟು ₹3.20 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ₹92 ಲಕ್ಷವನ್ನು ಬ್ಯಾಂಕಿಂಗ್ ಮಾರ್ಗಗಳ ಮೂಲಕ ಹಾಗೂ ₹60 ಲಕ್ಷವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು. ಉಳಿದ ಮೊತ್ತವನ್ನು ಖಾಲಿ ಸಹಿ ಮಾಡಿದ ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ಗಳ ಮೂಲಕ ಪಡೆದುಕೊಂಡಿದ್ದರು. ಒಟ್ಟಾರೆ ಈ ಅಪರಾಧದ ಮೂಲಕ ಆಪಾದಿತರು ಗಳಿಸಿದ್ದ 8.69 ಕೋಟಿಯಷ್ಟು ಹಣವನ್ನು ಕಳಂಕರಹಿತ ಆಸ್ತಿಯೆಂದು ಬಿಂಬಿಸುವ ಪ್ರಯತ್ನವೂ ನಡೆದಿತ್ತು ಎಂಬ ಸಂಗತಿಯನ್ನು ಸಹ ಜಾರಿ ನಿರ್ದೇಶನಾಲಯವು ಹೇಳಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ದೋಷಾರೋಪಣೆ ಪಟ್ಟಿಯಲ್ಲಿ ಅಂಶಗಳನ್ನು ದಿ ಫೈಲ್ ಬಹಿರಂಗಪಡಿಸುತ್ತಿದ್ದಂತೆ ಜಾರಿ ನಿರ್ದೇಶನಾಲಯವು 2026ರ ನವೆಂಬರ್ 16ರಂದು ಇನ್ನಿತರೆ ಅಂಶಗಳಿಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಬೆಂಗಳೂರು ವಲಯ ಕಚೇರಿಯ ಜಾರಿ ನಿರ್ದೇಶನಾಲಯವು (ED), ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, 2002 (PMLA) ಅಡಿಯಲ್ಲಿ ಸೆಕ್ಷನ್ 44 ಮತ್ತು 45ರ ಪ್ರಕಾರ, ಬೆಂಗಳೂರಿನ ವಿಶೇಷ PMLA ಪ್ರಕರಣಗಳ ನ್ಯಾಯಾಲಯದಲ್ಲಿ (CCH-4), ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣಾ ಅರ್ಜಿಯನ್ನು (Prosecution Complaint – PC) ಸಲ್ಲಿಸಿದೆ.
ಈ ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್, ಆಯೋಗದ ಸದಸ್ಯೆಯಾಗಿದ್ದ ಬಿ.ವಿ. ಗೀತಾ ಶಿವಮೂರ್ತಿ, ಆಯೋಗದ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್ ಗಂಗ್ವಾರ್, ಬಸವರಾಜ್ ಕನ್ನಾಳೆ ಹಾಗೂ ಇತರರ ವಿರುದ್ಧ ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆ ಅಪರಾಧ ಎಸಗಿರುವ ಆರೋಪ ಹೊರಿಸಲಾಗಿದೆ. ಈ ಅಪರಾಧಕ್ಕೆ PMLA ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.
ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಹಾಗೂ ಕೆಪಿಎಸ್ಸಿ ನೇಮಕಾತಿಗೆ ಸಂಬಂಧಿಸಿದಂತೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ 2026ರ ಜನವರಿ 9 ರಂದು ದಾಖಲಾಗಿದ್ದ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ಗಳಾದ 318(3), 318(4), 336(2), 336(3) ಮತ್ತು 340(2) ಅಡಿಯಲ್ಲಿ ವಿಧಾನ್ ಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಥಮ ಮಾಹಿತಿ ವರದಿಗಳ (FIR) ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು.

ತನಿಖೆಯಲ್ಲಿ ಕೆಪಿಎಸ್ಸಿಯ ಅಂದಿನ ಅಧ್ಯಕ್ಷರು, ಒಬ್ಬ ಸದಸ್ಯರು ಹಾಗೂ ಅಂದಿನ ಪರೀಕ್ಷಾ ನಿಯಂತ್ರಕರು ಬಸವರಾಜ್ ಕನ್ನಾಳೆ ಮತ್ತು ಇತರರೊಂದಿಗೆ ಸೇರಿಕೊಂಡು, ತಮ್ಮ ಅಧಿಕೃತ ಹುದ್ದೆ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳಿಗೆ ಖಚಿತ ಆಯ್ಕೆಯ ಭರವಸೆ ನೀಡಿ ಅವರಿಂದ ಅಕ್ರಮ ಹಣ ಪಡೆಯಲು ಸಂಚು ರೂಪಿಸಿದ್ದರು ಎಂಬುದು ಬಹಿರಂಗವಾಗಿತ್ತು.
ಸರಿಯಾದ ಉತ್ತರಗಳನ್ನು ಗುರುತಿಸಿರುವ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವುದು, ಅಭ್ಯರ್ಥಿಗಳಿಗೆ ನಿರ್ದಿಷ್ಟವಾಗಿ ಸಿದ್ಧಪಡಿಸಿದ ಸರಿಯಾದ ಉತ್ತರಗಳ ಕೀಗಳನ್ನು ಸೋರಿಕೆ ಮಾಡುವುದು, 1:3 ಅರ್ಹತಾ ಪಟ್ಟಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಗೌಪ್ಯ ಪ್ರಶ್ನೆಪತ್ರಿಕೆಗಳ ಉಸ್ತುವಾರಿ ಹೊಂದಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು, ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಸರಿಯಾದ ಉತ್ತರಗಳೊಂದಿಗೆ ಅಂತಿಮ ಹಂತದಲ್ಲಿ ನಕಲು ಮಾಡಿದ್ದರು. ಅವುಗಳನ್ನು ಪೆನ್ಡ್ರೈವ್ನಲ್ಲಿ ತಮ್ಮ ಆಪ್ತ ಸಹಚರ ಬಸವರಾಜ್ ಕನ್ನಾಳೆ ಅವರಿಗೆ ಹಸ್ತಾಂತರಿಸಿದ್ದರು. ಬಳಿಕ ನಕಲು ಮಾಡಲು ಬಳಸಿದ್ದ ಸಾಧನವನ್ನು ನಾಶಪಡಿಸಿದ್ದರು ಎಂಬುದು ತಿಳಿದುಬಂದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.
ಬಸವರಾಜ್ ಕನ್ನಾಳೆ ಅವರು ಪರೀಕ್ಷೆಗೆ ಒಂದು ದಿನ ಮೊದಲು ಬೆಂಗಳೂರಿನ ಹೊರವಲಯದಲ್ಲಿರುವ ಆಫ್-ರೆಕಾರ್ಡ್ ವಿಲ್ಲಾಗಳಲ್ಲಿ ಅಭ್ಯರ್ಥಿಗಳನ್ನು ಭೇಟಿಯಾಗಿ, ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಗಳನ್ನು ಪಡೆದು ಅವುಗಳನ್ನು ಅಭ್ಯರ್ಥಿಗಳ ನಡುವೆ ಹಂಚಿಕೆ ಮಾಡಿದ್ದರು. ಅವರು 10 ಅಭ್ಯರ್ಥಿಗಳಿಂದ ಒಟ್ಟು ₹3.20 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ₹92 ಲಕ್ಷವನ್ನು ಬ್ಯಾಂಕಿಂಗ್ ಮಾರ್ಗಗಳ ಮೂಲಕ ಹಾಗೂ ₹60 ಲಕ್ಷವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು. ಉಳಿದ ಮೊತ್ತವನ್ನು ಖಾಲಿ ಸಹಿ ಮಾಡಿದ ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ಗಳ ಮೂಲಕ ಪಡೆದುಕೊಂಡಿದ್ದರು ಎಂದು ಹೇಳಿಕೆಯಲ್ಲಿ ವಿವರಿಸಿದೆ.
ಹಾಗೆಯೇ ತದನಂತರ ಅವರು ಪೆನ್ಡ್ರೈವ್ ಅನ್ನು ನಾಶಪಡಿಸಿ, ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಸುಟ್ಟುಹಾಕಿದ್ದರು. ಇದಲ್ಲದೆ, ಶಿವಶಂಕರಪ್ಪ ಸಾಹುಕಾರ್ ಅವರ ಸೂಚನೆಯ ಮೇರೆಗೆ, ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ಪರೀಕ್ಷೆಗೆ ಸ್ವಲ್ಪ ಮೊದಲು ಆರು ಅಭ್ಯರ್ಥಿಗಳಿಗೆ ಸರಿಯಾದ ಉತ್ತರಗಳ ಕೀಗಳನ್ನು ಒದಗಿಸಿದ್ದರು. ಈ ಅಭ್ಯರ್ಥಿಗಳಲ್ಲಿ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರಿಗೂ ಒಬ್ಬ ಅಭ್ಯರ್ಥಿಯ ಪರವಾಗಿ ಉತ್ತರಗಳ ಕೀ ಒದಗಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೆಎಎಸ್ ಪರೀಕ್ಷೆಯಲ್ಲಿ ಆ ಅಭ್ಯರ್ಥಿಗೆ ಹೆಚ್ಚಿನ ಸಂದರ್ಶನ ಅಂಕಗಳನ್ನು ಕೊಡಿಸುವ ಭರವಸೆ ನೀಡಲಾಗಿತ್ತು.
ಶಿವಶಂಕರಪ್ಪ ಸಾಹುಕಾರ್ ಅವರು ಒಬ್ಬ ಅಭ್ಯರ್ಥಿಯಿಂದ ₹20 ಲಕ್ಷ ನಗದು ಹಣವನ್ನು ಪಡೆದಿದ್ದರು. ಇದು ನಿಗದಿಪಡಿಸಿದ್ದ ₹20 ಲಕ್ಷ ಮೊತ್ತಕ್ಕೆ ಅನುಗುಣವಾಗಿತ್ತು. ಅದೇ ರೀತಿ, ಬಿ.ವಿ. ಗೀತಾ ಅವರು 08.01.2026ರಂದು ತಮ್ಮ ಕಾರಿನಲ್ಲಿಯೇ ಮತ್ತೊಬ್ಬ ಅಭ್ಯರ್ಥಿಯಿಂದ ₹20 ಲಕ್ಷ ನಗದು ಹಣವನ್ನು ಸಂಗ್ರಹಿಸಿದ್ದರು. ಹೀಗೆ ಒಟ್ಟು ₹40 ಲಕ್ಷ ಹಣವನ್ನು ಪಡೆಯಲಾಗಿತ್ತು ಎಂದು ಹೇಳಲಾಗಿದೆ.
ಅಕ್ರಮವಾಗಿ ಪಡೆದ ಹಣದ ಸಂಗ್ರಹ ಮತ್ತು ವರ್ಗಾವಣೆ
ಈ ರೀತಿ ಅಕ್ರಮವಾಗಿ ಪಡೆದ ಹಣವನ್ನು ನಗದು ರೂಪದಲ್ಲಿಯೂ ಹಾಗೂ ಭಾಲ್ಕಿ (ಬೀದರ್)ಯಲ್ಲಿರುವ ಮೆಸರ್ಸ್ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಬ್ಯಾಂಕ್ ಖಾತೆಗಳ ಮೂಲಕವೂ ಸಂಗ್ರಹಿಸಲಾಗಿದೆ. ಅಲ್ಲದೆ, ಇತರ ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕವೂ ಹಣವನ್ನು ವರ್ಗಾಯಿಸಲಾಗಿದೆ. ಈ ಹಣವನ್ನು ನಕಲಿ ಉಳಿತಾಯ ಖಾತೆಗಳಲ್ಲಿ ಇರಿಸಲಾಗಿತ್ತು. ಬಸವರಾಜ್ ಕನ್ನಾಳೆ ಅವರ ಲೆಕ್ಕಪರಿಶೋಧಕರ ಖಾತೆಗಳು, ಅವರ ಮಾಲೀಕತ್ವದ ಸಂಸ್ಥೆಯಾದ ಮೆಸರ್ಸ್ ಭಗವತಿ ಎಂಟರ್ಪ್ರೈಸಸ್ ಹಾಗೂ ಅವರ ಸ್ನೇಹಿತರ ಖಾತೆಗಳ ಮೂಲಕವೂ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.
ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ಬಸವರಾಜ್ ಕನ್ನಾಳೆ ಅವರಿಂದ ಅಪರಾಧದ ಆದಾಯದ ರೂಪದಲ್ಲಿ ಸುಮಾರು ₹1.52 ಕೋಟಿ ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದರು. ಈ ಮೊತ್ತದಲ್ಲಿ ₹52.30 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ತಮ್ಮ ಭಾವಿ ಪತ್ನಿಯ ಹೆಸರಿನಲ್ಲಿ ಖರೀದಿಸಲಾಗಿತ್ತು. ಅಲ್ಲದೆ, ₹13.31 ಲಕ್ಷದ ವಿಮಾನ ಪ್ರಯಾಣ ವೆಚ್ಚವನ್ನು ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕ ಪಾವತಿಸಲಾಗಿತ್ತು.
ಬಸವರಾಜ್ ಕನ್ನಾಳೆ ಅವರು, ವ್ಯಾಪಾರದಿಂದ ಬಂದ ಆದಾಯವೆಂದು ಬಿಂಬಿಸುವ ಉದ್ದೇಶದಿಂದ ಅನೇಕ ಸಣ್ಣ ಮೊತ್ತಗಳ ನಗದು ಠೇವಣಿಗಳ ಮೂಲಕ ವಿವರಿಸಲಾಗದ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿದ್ದರು. ಅಲ್ಲದೆ, ಸಾಲದ ರೂಪದಲ್ಲಿ ಹಣವನ್ನು ವಿವಿಧ ಹಂತಗಳಲ್ಲಿ ವರ್ಗಾಯಿಸಿ, ತಮ್ಮ ಹೆಸರಿನಲ್ಲಿ ಹಾಗೂ ಸಂಬಂಧಿಕರ ಹೆಸರಿನಲ್ಲಿ ನೋಂದಾಯಿಸಲಾದ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿ ಹಣದ ಮೂಲವನ್ನು ಮರೆಮಾಚಿದ್ದರು ಎಂದು ಹೇಳಿದೆ.
ಶಿವಶಂಕರಪ್ಪ ಸಾಹುಕಾರ್- ಬಿ.ವಿ. ಗೀತಾ ಅವರ ಹಣಕಾಸು ವ್ಯವಹಾರಗಳು
ತನಿಖೆಯಲ್ಲಿ ಮತ್ತೊಂದು ಮಹತ್ವದ ಸಂಗತಿಯನ್ನು ಜಾರಿ ನಿರ್ದೇಶನಾಲಯವು ಬಹಿರಂಗಪಡಿಸಿದೆ. ಶಿವಶಂಕರಪ್ಪ ಸಾಹುಕಾರ್ ಅವರು ಆಗಸ್ಟ್ 2025ರಿಂದ ಡಿಸೆಂಬರ್ 2025ರವರೆಗೆ ₹3.99 ಕೋಟಿ ನಗದು ಹಣವನ್ನು ಹೊಂದಿದ್ದು, ಅದನ್ನು ಮರೆಮಾಚಿದ್ದರು. ಇದಕ್ಕೂ ಮೊದಲು ₹8 ಕೋಟಿಯಿಂದ ₹10 ಕೋಟಿ ರೂಪಾಯಿ ಹಣವನ್ನೂ ಇದೇ ರೀತಿ ಮರೆಮಾಚಲಾಗಿತ್ತು. ಈ ಹಣವನ್ನು ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರ ಮೂಲಕ ಅಧಿಕೃತ ಲೆಕ್ಕಪತ್ರಗಳ ಹೊರಗೆ ಇರಿಸಲಾಗಿತ್ತು. ಇದು ಅವರ ತಿಳಿದಿರುವ ಆದಾಯದ ಮೂಲಗಳಿಗೆ ಹೋಲಿಸಿದರೆ ಅಸಮತೋಲನದ ಆಸ್ತಿಯಾಗಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.
ಶಿವಶಂಕರಪ್ಪ ಸಾಹುಕಾರ್ ಅವರು ಬಿ.ವಿ. ಗೀತಾ ಮತ್ತು ಅವರ ಪುತ್ರಿಗೂ ಹಣವನ್ನು ವರ್ಗಾಯಿಸಿದ್ದರು. ಅಲ್ಲದೆ, ಅಪರಾಧದ ಆದಾಯದ ಹಣವನ್ನು ಬಳಸಿಕೊಂಡು ಶಹಾಪುರದ ಮದ್ರಕಿ ಪ್ರದೇಶದಲ್ಲಿರುವ ತಮ್ಮ ಜಮೀನಿನಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಮತ್ತು ರೆಸ್ಟೋರೆಂಟ್ ನಿರ್ಮಿಸಲು ಯೋಜಿಸಿದ್ದರು. ಇದಕ್ಕಾಗಿ ಬೇರೊಬ್ಬರನ್ನು ಮುಂಚೂಣಿಯಲ್ಲಿ ಇರಿಸಿ ವ್ಯವಹಾರ ನಡೆಸುವ ಯೋಜನೆ ರೂಪಿಸಿದ್ದರು. ಬಿ.ವಿ. ಗೀತಾ ಅವರು, ಯಾವುದೇ ಒಪ್ಪಂದ, ಭದ್ರತೆ ಅಥವಾ ಮರುಪಾವತಿಯ ವ್ಯವಸ್ಥೆಯಿಲ್ಲದೆ, ‘ಭದ್ರತೆಯಿಲ್ಲದ ಸಾಲ’ (Unsecured Loans) ಎಂಬ ನೆಪದಲ್ಲಿ ₹1 ಕೋಟಿ ಹಣವನ್ನು ಪಡೆದುಕೊಂಡಿದ್ದರು. ಈ ಹಣವನ್ನು ತಮ್ಮ ಹೆಸರಿನಲ್ಲಿ ಹಾಗೂ ತಮ್ಮ ಪುತ್ರಿಯ ಹೆಸರಿನಲ್ಲಿ ಸಂಗ್ರಹಿಸಲಾಗಿತ್ತು. ಇದಕ್ಕಾಗಿ ವ್ಯವಸ್ಥಿತವಾಗಿ ರೂಪಿಸಲಾದ ನಗದು ಠೇವಣಿಗಳು ಮತ್ತು KPSCಯ ಮತ್ತೊಬ್ಬ ಸದಸ್ಯರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.
ಅಪರಾಧದ ಆದಾಯದ ಪ್ರಮಾಣವೆಷ್ಟು?
ಈ ಅಪರಾಧ ನಡೆಸುವ ಮೂಲಕ ಆಪಾದಿತರು ಗಳಿಸಿದ್ದ ಆದಾಯದ ಪ್ರಮಾಣವನ್ನೂ ಜಾರಿ ನಿರ್ದೇಶನಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶಿವಶಂಕರಪ್ಪ ಸಾಹುಕಾರ್: ₹4.17 ಕೋಟಿ, ಬಿ.ವಿ. ಗೀತಾ ಶಿವಮೂರ್ತಿ ₹1.48 ಕೋಟಿ., ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಸುಮಾರು ₹1.52 ಕೋಟಿ, ಬಸವರಾಜ್ ಕನ್ನಾಳೆ ಸುಮಾರು ₹1.52 ಕೋಟಿ ರು ಆದಾಯ ಗಳಿಸಿದ್ದರು. ಅಲ್ಲದೆ, ಈ ಹಣವನ್ನು ಕಳಂಕರಹಿತ ಆಸ್ತಿಯೆಂದು ಬಿಂಬಿಸುವ ಪ್ರಯತ್ನವೂ ನಡೆದಿರುವುದನ್ನು ದೋಷಾರೋಪಣಾ ಅರ್ಜಿಯಲ್ಲಿ ದಾಖಲಿಸಲಾಗಿದೆ.

ಜಾರಿ ನಿರ್ದೇಶನಾಲಯದ ದಾಳಿ, ಬಂಧನ ಮತ್ತು ಆಸ್ತಿ ಜಪ್ತಿ
ಈ ಹಿಂದೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, 2002ರ ಸೆಕ್ಷನ್ 17ರ ಅಡಿಯಲ್ಲಿ KPSC ಕಚೇರಿ ಸೇರಿದಂತೆ ಒಟ್ಟು 37 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಪ್ರಕರಣದಲ್ಲಿ ಬಸವರಾಜ್ ಕನ್ನಾಳೆ ಅವರನ್ನು 2026ರ ಸೆ.17 ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸೆ.18, ಹಾಗೂ ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ. ಗೀತಾ ಶಿವಮೂರ್ತಿ ಅವರನ್ನು 2026ರ ಅಕ್ಟೋಬರ್ 6ರಂದು ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಲಾಗಿತ್ತು.
ಪ್ರಸ್ತುತ ಶಿವಶಂಕರಪ್ಪ ಸಾಹುಕಾರ್, ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಬಸವರಾಜ್ ಕನ್ನಾಳೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದಲ್ಲದೆ, ಆರೋಪಿಗಳಿಗೆ ಸೇರಿದ ₹1.22 ಕೋಟಿ ಮೌಲ್ಯದ ಆಸ್ತಿಗಳನ್ನು 13.11.2026ರ ದಿನಾಂಕದ ತಾತ್ಕಾಲಿಕ ಜಪ್ತಿ ಆದೇಶ ಸಂಖ್ಯೆ 43/2026ರ ಮೂಲಕ ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. 1:3 ಅನುಪಾತದಡಿ ಅರ್ಹತಾ ಪಟ್ಟಿಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಕೆಪಿಎಸ್ಸಿ ಇತರ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.




