ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಒಟ್ಟು 5,952 ಗ್ರಾಮ ಪಂಚಾಯ್ತಿಗಳ ಪೈಕಿ 2,916 ಗ್ರಾಮ ಪಂಚಾಯ್ತಿಗಳು 2022-23ನೇ ಸಾಲಿನಲ್ಲಿ ಆಯವ್ಯಯವನ್ನೇ ತಯಾರಿಸಿರಲಿಲ್ಲ. ಮತ್ತು ಈ ಅವಧಿಯಲ್ಲಿ ಅನುಮೋದಿತ ಆಯವ್ಯಯವಿಲ್ಲದೇ ಕೋಟ್ಯಂತರ ರುಪಾಯಿಗಳನ್ನು ನಿಯಮಬಾಹಿರವಾಗಿ ವೆಚ್ಚ ಮಾಡಿದ್ದವು ಎಂದು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ತಂಡವು ಪತ್ತೆ ಹಚ್ಚಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ರ ಕಲಂ 241, 242ರ ಪ್ರಕಾರ ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) 2006ರಲ್ಲಿ ರೂಪಿಸಿರುವ ನಿಯಮಗಳು ಮತ್ತು ಕಾಲಕಾಲಕ್ಕೆ ಆಯಾ ಯೋಜನೆಗಳಿಗೆ ಹೊರಡಿಸುವ ಮಾರ್ಗಸೂಚಿಗಳ ಅನುಸಾರ ಪ್ರತೀ ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯ ತಯಾರಿಸಬೇಕು. ಆದರೆ 2,916 ಗ್ರಾಮ ಪಂಚಾಯ್ತಿಗಳು ಆಯವ್ಯಯವನ್ನೇ ತಯಾರಿಸದೇ ವೆಚ್ಚ ಮಾಡಿದ್ದವು.
2022-23ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಗ್ರಾಮ ಪಂಚಾಯ್ತಿಗಳ ಲೆಕ್ಕಪರಿಶೋಧನೆ ನಡೆಸಿರುವ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ಗ್ರಾಮ ಪಂಚಾಯ್ತಿಗಳ ಹಣಕಾಸಿನ ಪರಿಸ್ಥಿತಿ ಮತ್ತು ಹಣಕಾಸಿನ ಅಶಿಸ್ತಿನ ವಿವಿಧ ಮಗ್ಗುಲುಗಳನ್ನು ಬಹಿರಂಗಪಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ ಎಸ್ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದರು. ಇವರು ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯೂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದರು.
2025ರ ಮಾರ್ಚ್‌ನಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಿಯಮಗಳ ಪ್ರಕಾರ ಗ್ರಾಮ ಪಂಚಾಯ್ತಿಗಳು ಆಯಾ ವರ್ಷದ ಫೆಬ್ರುವರಿ 1ನೇ ತಾರೀಖಿನಿಂದ ಮಾರ್ಚ್ 10ನೇ ತಾರೀಖಿನ ಒಳಗೆ ನಡೆಸುವ ಗ್ರಾಮ ಪಂಚಾಯ್ತಿ ಸಭೆಯ ಮುಂದೆ ಆಯವ್ಯಯ ಮಂಡಿಸಿ ಅನುಮೋದನೆ ಪಡೆಯಬೇಕು.
ಹಾಗೆಯೇ 2006ರ ನಿಯಮಗಳ ಪ್ರಕಾರ ಗ್ರಾಮ ಪಂಚಾಯ್ತಿ ನಿಧಿಯಿಂದ ಅನುದಾನ ಹಂಚಿಕೆ ಇಲ್ಲದೇ ಯಾವುದೇ ವೆಚ್ಚವನ್ನು ಮಾಡುವಂತಿಲ್ಲ. ಇದು ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನದಲ್ಲಿದ್ದರೂ ಸಹ 2,916 ಪಂಚಾಯ್ತಿಗಳು ಆಯವ್ಯಯವನ್ನೇ ಮಂಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
‘ಅನುಮೋದಿತ ಆಯವ್ಯಯವಿಲ್ಲದೇ ಗ್ರಾಮ ಪಂಚಾಯ್ತಿಯಿಂದ ಭರಿಸಲಾದ ವೆಚ್ಚಗಳು ನಿಯಮಬಾಹಿರವಾಗಿದ್ದು, ಇದು ಉಲ್ಲಂಘನೆಯಾಗಿದೆ,’ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಬಗ್ಗೆ ಹಿಂದಿನ ವರ್ಷಗಳ ವರದಿಗಳಲ್ಲಿ ತಿಳಿಸಿದ್ದರೂ ಸಹ 2,916 ಗ್ರಾಮ ಪಂಚಾಯ್ತಿಗಳು ಆಯವ್ಯಯವನ್ನು ತಯಾರಿಸಿ ಅನುಮೋದನೆ ಪಡೆಯಲು ಕ್ರಮವಹಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳೂ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಮತ್ತು ಇಷ್ಟೂ ಪಂಚಾಯ್ತಿಗಳ ಸಾಮಾನ್ಯ ಸಭೆಗಳಲ್ಲಿ ವಾರ್ಷಿಕ ಆಯವ್ಯಯಕ್ಕೆ ಅನುಮೋದನೆ ದೊರೆತಿತ್ತು.
ಅದೇ ರೀತಿ 5,952 ಪಂಚಾಯ್ತಿಗಳ ಪೈಕಿ 3,036 ಪಂಚಾಯ್ತಿಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 2,434 ಪಂಚಾಯ್ತಿಗಳ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ಆಯವ್ಯಯಗಳು ಅನುಮೋದಿತಗೊಂಡಿದ್ದವು.
ಆಯವ್ಯಯಕ್ಕೆ ಅನುಮೋದನೆ ಪಡೆದ ಪಂಚಾಯ್ತಿಗಳ ಪಟ್ಟಿ
ಬಾಗಲಕೋಟೆ ಜಿಲ್ಲೆಯಲ್ಲಿ 195 ಪಂಚಾಯ್ತಿಗಳ ಪೈಕಿ 52 ಪಂಚಾಯ್ತಿಗಳಲ್ಲಿ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿತ್ತು. ಆದರೆ ಈ ಪೈಕಿ ಒಂದೇ ಒಂದು ಆಯವ್ಯಯವನ್ನು ಸಾಮಾನ್ಯ ಸಭೆಗಳಲ್ಲಿ ಅನುಮೋದಿತಗೊಂಡಿರಲಿಲ್ಲ. ಬೆಂಗಳೂರು ಜಿಲ್ಲೆಯಲ್ಲಿನ 187 ಪಂಚಾಯ್ತಿಗಳ ಪೈಕಿ 185 ಪಂಚಾಯ್ತಿಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 172 ಪಂಚಾಯ್ತಿಗಳ ವಾರ್ಷಿಕ ಆಯವ್ಯಯವನ್ನು ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿತ್ತು.
ಬೆಳಗಾವಿ ಜಿಲ್ಲೆಯಲ್ಲಿ 500, ಬಳ್ಳಾರಿಯಲ್ಲಿ 100, ಬೀದರ್‍ನಲ್ಲಿ 185 ಪಂಚಾಯ್ತಿಗಳಿದ್ದರೂ ಸಹ ಈ ಜಿಲ್ಲೆಗಳಲ್ಲಿನ ಒಂದೇ ಒಂದು ಪಂಚಾಯ್ತಿಯೂ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ 130 ಪಂಚಾಯ್ತಿಗಳ ಪೈಕಿ 26 ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 19 ಪಂಚಾಯ್ತಿಗಳ ವಾರ್ಷಿಕ ಆಯವ್ಯಯಗಳಿಗೆ ಅಲ್ಲಿನ ಪಂಚಾಯ್ತಿಗಳ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದವು.
ಚಿಕ್ಕಮಗಳೂರು ಜಿಲ್ಲೆಯ 226 ಪಂಚಾಯ್ತಿಗಳ ಪೈಕಿ 224 ಪಂಚಾಯ್ತಿಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಇದರಲ್ಲಿ 223 ಪಂಚಾಯ್ತಿಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿನ 189 ಪಂಚಾಯ್ತಿಗಳ ಪೈಕಿ ಒಂದೇ ಒಂದು ಪಂಚಾಯ್ತಿ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿತ್ತು. ಇದಕ್ಕೂ ಸಹ ಸಾಮಾನ್ಯ ಸಭೆಯಿಂದ ಅನುಮೋದನೆ ದೊರೆತಿರಲಿಲ್ಲ.
ವಿಶೇಷವೆಂದರೇ ದಕ್ಷಿಣ ಕನ್ನಡ ಜಿಲ್ಲೆಯ 223 ಪಂಚಾಯ್ತಿಗಳ ಪೈಕಿ 223 ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿತ್ತು ಮತ್ತು ಇಷ್ಟಕ್ಕೂ ಸಾಮಾನ್ಯ ಸಭೆಯಲ್ಲಿ ಅನುಮೋದನೆಯೂ ದೊರೆತಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆಯ 194 ಪಂಚಾಯ್ತಿಗಳ ಪೈಕಿ 132 ಪಂಚಾಯ್ತಿ ಮಾತ್ರ ಆಯವ್ಯಯ ನಿರ್ವಹಿಸಿದ್ದವು. ಇದರಲ್ಲಿ 115 ಪಂಚಾಯ್ತಿಗಳ ವಾರ್ಷಿಕ ಆಯವ್ಯಯಗಳಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಧಾರವಾಡ ಜಿಲ್ಲೆಯ 145, ಗದಗ್ ಜಿಲ್ಲೆಯ 122 ಪಂಚಾಯ್ತಿಗಳ ಪೈಕಿ ಒಂದೇ ಒಂದು ಪಂಚಾಯ್ತಿಯೂ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ.
ಹಾಸನ ಜಿಲ್ಲೆಯ 264 ಪಂಚಾಯ್ತಿಗಳಲ್ಲಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಲಾಗಿತ್ತು. ಈ ಪೈಕಿ 249 ಪಂಚಾಯ್ತಿಗಳ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿತ್ತು.
ಹಾವೇರಿ ಜಲ್ಲೆಯ 223 ಪಂಚಾಯ್ತಿಗಳಲ್ಲಿ 98 ಪಂಚಾಯ್ತಿಗಳಲ್ಲಿ ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದು ಈ ಪೈಕಿ 45 ಪಂಚಾಯ್ತಿಗಳು ಮಾತ್ರ ಸಾಮಾನ್ಯ ಸಭೆಯಲ್ಲಿ ಆಯವ್ಯಯಕ್ಕೆ ಅನುಮೋದನೆ ಪಡೆದುಕೊಂಡಿದ್ದವು. ಕಲ್ಬುರ್ಗಿಯ 261 ಪಂಚಾಯ್ತಿಗಳಲ್ಲಿ ಒಂದೇ ಒಂದು ಪಂಚಾಯ್ತಿಯೂ ಸಹ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ಅಚ್ಚರಿಯೆಂದರೇ 43 ಪಂಚಾಯ್ತಿಗಳು ಸಾಮಾನ್ಯ ಸಭೆಯಲ್ಲಿ ಆಯವ್ಯಯಕ್ಕೆ ಅನುಮೋದನೆ ಪಡೆದುಕೊಂಡಿದ್ದವು ಎಂದು ವರದಿಯಲ್ಲಿ ದಾಖಲಿಸಿದೆ.
ಕೊಡಗಿನ 103 ಪಂಚಾಯ್ತಿಗಳ ಪೈಕಿ 102 ಪಂಚಾಯ್ತಿಗಳು ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಆದರೆ 35 ಪಂಚಾಯ್ತಿಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರೆತಿತ್ತು. ಕೋಲಾರದ 154 ಪಂಚಾಯ್ತಿಗಳ ಪೈಕಿ 153 ಪಂಚಾಯ್ತಿಗಳು ಆಯವ್ಯಯವನ್ನು ನಿರ್ವಹಿಸಿದ್ದು ಈ ಪೈಕಿ 105 ಪಂಚಾಯ್ತಿಗಳ ಆಯವ್ಯಯಕ್ಕೆ ಮಾತ್ರ ಸಾಮಾನ್ಯ ಸಭೆಗಳು ಅನುಮೋದನೆ ನೀಡಿದ್ದವು.
ಕೊಪ್ಪಳ ಜಿಲ್ಲೆಯ 153 ಪಂಚಾಯ್ತಿಗಳ ಪೈಕಿ ಒಂದೇ ಒಂದು ಗ್ರಾಮ ಪಂಚಾಯ್ತಿಯಲ್ಲಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಿರಲಿಲ್ಲ. ಮಂಡ್ಯದ 233 ಪಂಚಾಯ್ತಿಗಳಲ್ಲಿ 233 ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿವೆಯಾದರೂ 230 ಪಂಚಾಯ್ತಿಗಳಿಗೆ ಮಾತ್ರ ಸಾಮಾನ್ಯ ಸಭೆಗಳು ಅನುಮೋದನೆ ದೊರಕಿತ್ತು. ಮೈಸೂರಿನ 256 ಪಂಚಾಯ್ತಿಗಳ ಪೈಕಿ 254 ಪಂಚಾಯ್ತಿಗಳ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಇದರಲ್ಲಿ 252 ಪಂಚಾಯ್ತಿಗಳ ಆಯವ್ಯಯಕ್ಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದವು.
ರಾಯಚೂರು ಜಿಲ್ಲೆಯ 179 ಪಂಚಾಯ್ತಿಗಳ ಪೈಕಿ ಒಂದೇ ಒಂದು ಪಂಚಾಯ್ತಿಯೂ ವಾರ್ಷಿಕ ಆಯವ್ಯಯವನ್ನು ನಿರ್ವಹಿಸಿರಲಿಲ್ಲ. ರಾಮನಗರದ 126 ಪಂಚಾಯ್ತಿಗಳಲ್ಲಿ 112 ಪಂಚಾಯ್ತಿಗಳು ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು. ಈ ಪೈಕಿ ಒಂದೇ ಒಂದು ಪಂಚಾಯ್ತಿಯು ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರಲಿಲ್ಲ. ಶಿವಮೊಗ್ಗ ಜಿಲ್ಲೆಯ 263 ಪಂಚಾಯ್ತಿಗಳ ಪೈಕಿ 139 ಮಾತ್ರ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದರೇ ಇದರಲ್ಲಿ 134ಕ್ಕೆ ಮಾತ್ರ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದವು.
ತುಮಕೂರಿನ 330 ಪಂಚಾಯ್ತಿಗಳಲ್ಲಿ 183 ಪಂಚಾಯ್ತಿಗಳಲ್ಲಿ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದು ಇದರಲ್ಲಿ 180 ಪಂಚಾಯ್ತಿಗಳಿಗೆ ಅಲ್ಲಿನ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರಕಿತ್ತು. ಉಡುಪಿಯ 155 ಪಂಚಾಯ್ತಿಗಳಲ್ಲಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಿದ್ದವು ಮತ್ತು ಇಷ್ಟೂ ಪಂಚಾಯ್ತಿಗಳ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಉತ್ತರ ಕನ್ನಡದ 229 ಪಂಚಾಯ್ತಿಗಳ ಪೈಕಿ 221 ಪಂಚಾಯ್ತಿಗಳ ವಾರ್ಷಿಕ ಆಯವ್ಯಯಗಳಿಗೆ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ದೊರೆತಿದ್ದವು.
ವಿಜಯನಗರ ಜಿಲ್ಲೆಯ 137, ವಿಜಯಪುರದ 211, ಯಾದಗಿರಿಯ 122 ಪಂಚಾಯ್ತಿಗಳ ಪೈಕಿ ಒಂದೇ ಒಂದು ಪಂಚಾಯ್ತಿಯೂ ವಾರ್ಷಿಕ ಆಯವ್ಯಯ ನಿರ್ವಹಿಸಿರಲಿಲ್ಲ.
ನಿರೀಕ್ಷಿತ ಆದಾಯ-ವೆಚ್ಚವೆಷ್ಟು?
2022-23ನೇ ಸಾಲಿನಲ್ಲಿ 12, 289 ಕೋಟಿ 79 ಲಕ್ಷ 80 ಸಾವಿರ ರು ನಿರೀಕ್ಷಿತ ಆದಾಯ ನಿರೀಕ್ಷಿಸಿತ್ತು. ಆದರೆ ವಾಸ್ತವಿಕವಾಗಿ 11, 427 ಕೋಟಿ ರು ಆದಾಯವಿತ್ತು. ಅದೇ ರೀತಿ 11,613 ಕೋಟಿ 68 ಲಕ್ಷ 85 ಸಾವಿರ ರು. ನಿರೀಕ್ಷಿತ ವೆಚ್ಚ ಎಂದು ಹೇಳಲಾಗಿತ್ತಾದರೂ ವಾಸ್ತವಿಕದಲ್ಲಿ 10,544 ಕೋಟಿ 59 ಲಕ್ಷ 74 ಸಾವಿರ ರು ವೆಚ್ಚವಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
‘ವರ್ಷದ ಸ್ವೀಕೃತಿ, ವೆಚ್ಚದ ವಿವರಗಳನ್ನು ಮತ್ತು ವರ್ಷದ ಸ್ವೀಕೃತಿ ಜೊತೆಗೆ ಆರಂಭಿಕ ಶಿಲ್ಕು ಸೇರಿಸಿ ಪರಿಶೀಲಿಸಿದಾಗ ಶೇ.73ರಷ್ಟು ಅನುದಾನವನ್ನು ಬಳಸಿಕೊಂಡಿವೆ. ಶೆ. 27ರಷ್ಟು ಅನುದಾನವನ್ನು ಬಳಕೆ ಮಾಡದೇ ಬಾಕಿ ಉಳಿಸಿಕೊಂಡಿವೆ,’ ಎಂದ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2020-21ನೇ ಸಾಲಿಗೆ ಹೋಲಿಸಿದಾಗ 2022-23ನೇ ಸಾಲಿನಲ್ಲಿ ಗ್ರಾಮ ಪಂಚಾಯ್ತಿಗಳ ರಾಜ್ಯ ಮತ್ತು ಕೇಂದ್ರದ ಅನುದಾನ ಮತ್ತು ಸ್ವಂತ ಜಮೆಗಳ ಸ್ವೀಕೃತಿಗಳು ಶೇ. 15ರಷ್ಟು ಹೆಚ್ಚಿವೆ. ರಾಜ್ಯ ಮತ್ತು ಕೇಂದ್ರದ ಅನುದಾನ, ನಿಯೋಜಿತ ರಾಜಸ್ವದ ವೆಚ್ಚಗಳು ಶೇ. 30ರಷ್ಟು ಹೆಚ್ಚಳಗೊಂಡಿವೆ.
ಒಟ್ಟು ವೆಚ್ಚಗಳಲ್ಲಿ ಶೇ. 70ರಷ್ಟು ಮೊತ್ತವನ್ನು ಯೋಜನಾ ವೆಚ್ಚಗಳಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭರಿಸಿದೆ. ಹೀಗಾಗಿ ಗ್ರಾಮ ಪಂಚಾಯ್ತಿಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿರುವುದು ವರದಿಯಿಂದ ಕಂಡು ಬಂದಿದೆ.
2021-22ರಲ್ಲಿಯೂ 147 ಪಂಚಾಯ್ತಿಗಳು ದಾಖಲೆ ನಿರ್ವಹಣೆಯಲ್ಲಿ ಮತ್ತು ಲೆಕ್ಕ ಪರಿಶೋಧನೆಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದವು. ಅದೇ ರೀತಿ ಲೆಕ್ಕಪರಿಶೋಧನೆಗೆ 251.99 ಕೋಟಿ ರು.ಗಳ ಜಮೆ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರಲಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿತ್ತು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್‍ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.