ಬೆಂಗಳೂರು; ಹಾಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಅವರ ಕುಟುಂಬ ಸದಸ್ಯರು ಆರೋಪಿಗಳಾಗಿರುವ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳ ಕುರಿತು ಉನ್ನತ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು 2020ರಿಂದ 2026ರ ಇದುವರೆಗೂ ವಿಚಾರಣೆಗೆ ಹೈಕೋರ್ಟ್‌ನಲ್ಲಿ ದಿನಾಂಕವೇ ನಿಗದಿಯಾಗಿಲ್ಲ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ದಿನಾಂಕಗಳು ನಿಗದಿಯಾಗುತ್ತಿವೆ. ಆದರೆ ಡಿ ಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂದು ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಪ್ರಕರಣಗಳು ಹೈಕೋರ್ಟ್‌ನಲ್ಲಿ ಕಳೆದ 5 ವರ್ಷಗಳಾದರೂ ವಿಚಾರಣೆಗೆ ದಿನಾಂಕವೇ ನಿಗದಿಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಿದ ನಂತರ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ 2026ರ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಇವರು ಆರೋಪಿಯಾಗಿರುವ ಪ್ರಕರಣವು ಹೈಕೋರ್ಟ್‌ನಲ್ಲಿ 6 ವರ್ಷಗಳಾದರೂ ವಿಚಾರಣೆಗೆ ದಿನಾಂಕ ನಿಗದಿಯಾಗದಿರುವ ವಿಚಾರವು ಮುನ್ನೆಲೆಗೆ ಬಂದಿದೆ.
ಕನಕಪುರ ಮತ್ತು ಸಾತನೂರಿನಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ತೆರಿಗೆ ವಂಚನೆ, ಸುಂಕ ಮತ್ತು ಆರ್ಥಿಕ ಅಪರಾಧ ನಡೆದಿರುವ ಕಾರಣ ಸಿಐಡಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು 2013ರಲ್ಲೇ ಶಿಫಾರಸ್ಸು ಮಾಡಿದ್ದರು.
ಆದರೆ ಈ ಯಾವ ಶಿಫಾರಸ್ಸುಗಳನ್ನೂ ಸಹ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿದ್ದ ಸರ್ಕಾರಗಳು ಅನುಷ್ಠಾನಗೊಳಿಸಿರಲಿಲ್ಲ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ 3 ವರ್ಷಗಳನ್ನು ಪೂರೈಸಿದ್ದರೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಡಿದ್ದ ಶಿಫಾರಸ್ಸಿನ ಕುರಿತು ತುಟಿ ಬಿಚ್ಚಿರಲಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆಗೆ ದಿನಾಂಕ ನಿಗದಿಗೆ ಕ್ರಮ ವಹಿಸಿರಲಿಲ್ಲ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಈಚೆಗಷ್ಟೇ ಡಿ ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಕನಕಪುರದಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಬಳ್ಳಾರಿ ಅದಿರು ಸಾಗಾಣಿಕೆ ಕುರಿತು ಪ್ರಸ್ತಾವಿಸಿ, ಮುಖ್ಯಮಂತ್ರಿ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ಧ ಇಂದಿನಿಂದಲೇ ಯುದ್ಧ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಈ ಬೆಳವಣಿಗೆ ನಡುವೆಯೇ ಅಕ್ರಮ, ಕಾನೂನುಬಾಹಿರವಾಗಿ ನಡೆದಿದೆ ಎನ್ನಲಾಗಿರುವ ಕಲ್ಲು ಗಣಿಗಾರಿಕೆ ಪ್ರಕರಣಗಳ ಕುರಿತು ಹೈಕೋರ್ಟ್‌ನಲ್ಲಿ ಕಳೆದ 6 ವರ್ಷದಿಂದಲೂ ವಿಚಾರಣೆಗೆ ದಿನಾಂಕವೇ ನಿಗದಿಯಾಗದಿರುವುದು ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್’ಗೆ ಕೆಲವು ದಾಖಲೆಗಳು, ಪತ್ರಗಳು ಲಭ್ಯವಾಗಿವೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೋರಿಕೆ ಏನಿತ್ತು?
ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯೊಳಗೆ, ಅರಣ್ಯ ಪ್ರದೇಶಗಳಲ್ಲಿ ಅಥವಾ ಸರ್ಕಾರಿ ಜಮೀನಿನಲ್ಲಿ ನಡೆಸಲಾಗುತ್ತಿರುವ ಯಾವುದೇ ಗಣಿಗಾರಿಕೆ ಚಟುವಟಿಕೆಗಳು ಅಮಾನ್ಯ ಹಾಗೂ ಕಾನೂನುಬಾಹಿರವೆಂದು ಘೋಷಿಸಬೇಕು. ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿಷಯವನ್ನು ತನಿಖೆ ನಡೆಸಲು, ಸಹಾಯಕ ನಿರ್ದೇಶಕರ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿಯ ನೇತೃತ್ವದಲ್ಲಿ ರಾಜ್ಯ ತನಿಖಾ ಇಲಾಖೆಗೆ (State Investigation Department) ಉಲ್ಲೇಖಿಸಲು ಪ್ರತಿವಾದಿ-1 (R-1) ಅವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಅರಣ್ಯ ಪ್ರಕರಣಗಳ ತ್ವರಿತ ಪೂರ್ಣಗೊಳಿಸುವಿಕೆಗೆ ಕಾನೂನಿನಲ್ಲಿ ಒದಗಿಸಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕು. ಅಲ್ಲದೆ, ವಿಚಾರಣೆಯ ಪ್ರಗತಿಯ ಕುರಿತು ಕಾಲಕಾಲಕ್ಕೆ ವರದಿ ಸಲ್ಲಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಬೇಕು. ಮಧ್ಯಂತರ ಆದೇಶದ ಮೂಲಕ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಗಣಿಗಾರಿಕೆ ನಿಯಂತ್ರಣ ಕಾಯ್ದೆಗಳ ಉಲ್ಲಂಘನೆಯೊಂದಿಗೆ ಕನಕಪುರ ಮತ್ತು ರಾಮನಗರ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ಕಾನೂನಿನಡಿ ಅನುಮತಿಸಲ್ಪಟ್ಟ ಕ್ರಮಗಳನ್ನು ಕೈಗೊಳ್ಳುವಂತೆ ಪ್ರತಿವಾದಿ-1 ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದ ಕೋರಿದ್ದರು.
ಡಿ ಕೆ ಶಿವಕುಮಾರ್, ಕುಟುಂಬ ಸದಸ್ಯರ ವಿರುದ್ಧ ಆರೋಪಗಳು
ಡಿಕೆಶಿ ಕುಟುಂಬದವರು ಅರಣ್ಯ ಕಾಯ್ದೆ ಉಲ್ಲಂಘನೆ, ಗಡಿನಾಶ, ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಯು ವಿ ಸಿಂಗ್ ಅವರು 2006ರಲ್ಲಿ ನೀಡಿದ್ದ ವರದಿಯಲ್ಲಿ ಸುಮಾರು 37.61 ಕೋಟಿ ರು ಮೌಲ್ಯದ 1,44,139 ಕ್ಯೂಬಿಕ್ ಮೀಟರ್ಸ್ ಗ್ರಾನೈಟ್ ಬ್ಲಾಕ್ ಗಳನ್ನು ಅಕ್ರಮವಾಗಿ ಕನಕಪುರ, ಸಾತನೂರು ಅರಣ್ಯ ಪ್ರದೇಶದಿಂದ ಸಾಗಿಸಲಾಗಿದೆ. ಸುಮಾರು 22ಕ್ಕೂ ಅಧಿಕ ಗ್ರಾನೈಟ್ ಕಂಪನಿಗಳ ಸಹಕಾರದಿಂದ 112 ಎಕರೆ ಅರಣ್ಯ ಭೂಮಿ ಕಬಳಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 64 ಕೋಟಿ ರು ನಷ್ಟವಾಗಿದೆ ಎಂದು ದಾಖಲೆ ಸಹಿತ ವಿವರಿಸಿತ್ತು.
ಈ ಸಂಬಂಧ ಅರಣ್ಯ ಅಪರಾಧ (ಎಫ್‌ಓಸಿ)ದಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿತ್ತು. ಹಾಗೆಯೇ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಕೆಯಾಗಿದ್ದವು. ಆದರೆ ರಾಮನಗರ ಮತ್ತು ಕನಕಪುರ ಅರಣ್ಯಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೋಷಾರೋಪ ಪಟ್ಟಿ ಆಧರಿಸಿ ಕ್ರಮ ಕೈಗೊಂಡಿರಲಿಲ್ಲ.
ರಾಮನಗರ ಹಾಗೂ ಕನಕಪುರ ಅರಣ್ಯ ಪ್ರದೇಶದಲ್ಲಿ ಡಿಕೆಶಿ ಕುಟುಂಬದವರು ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು 2006ರಲ್ಲಿ ಲೋಕಾಯುಕ್ತ ತಂಡದ ಯು.ವಿ.ಸಿಂಗ್ ಅವರು ವರದಿ ನೀಡಿದ್ದರು. ವರದಿಯನ್ನು ಅನುಷ್ಠಾನಗೊಳಿಸುವಂತೆ ಹೀಗಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತು ಅಚಲು ಶಿವರಾಜ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಡಿಕೆಶಿ ಕುಟುಂಬದ 27 ಜನ ಸೇರಿದಂತೆ ಒಟ್ಟು 64 ಜನರಿಗೆ ತುರ್ತು ನೋಟಿಸ್ ಜಾರಿ ಮಾಡಿತ್ತು. ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಹೊತ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸೇರಿದಂತೆ 64 ಮಂದಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲವೇಕೆ ಎಂದು ಪ್ರಶ್ನಿಸಿತ್ತು.
ಈ ಅರ್ಜಿಯ ವಿಚಾರಣೆಯು 2020ರ ಮಾರ್ಚ್ 6ರಂದು ನಡೆದಿತ್ತು. ಪ್ರಕರಣವನ್ನು 2020ರ ಮಾರ್ಚ್ 27ಕ್ಕೆ ಮುಂದೂಡಿತ್ತು. ಈ ಅರ್ಜಿ ವಿಚಾರಣೆಯನ್ನು ಮುಂದೂಡಿದ 2020ರ ಮಾರ್ಚ್ 27ರ ನಂತರ 6 ವರ್ಷಗಳಾದರೂ ಈ ಪ್ರಕರಣದ ಕುರಿತು ವಿಚಾರಣೆಯು ಹೈಕೋರ್ಟ್‌ನಲ್ಲಿ ಇನ್ನೂ ನಿಗದಿಯಾಗಿಲ್ಲ. 2020ರ ಮಾರ್ಚ್ 27 ರಿಂದಲೂ ನೆನೆಗುದಿಗೆ ಬಿದ್ದಿದ್ದರೂ ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರವೂ ಸಹ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

ಪಿಸಿಸಿಎಫ್ ಪತ್ರದಲ್ಲೇನಿತ್ತು?
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರಕ್ಕೆ 2013ರ ಮಾರ್ಚ್ 19ರಂದು ಪತ್ರ ಬರೆದಿದ್ದರು. ಕನಕಪುರ ತಾಲೂಕಿನಲ್ಲಿ ನಡೆದಿರುವ ಅಕ್ರಮ ಗ್ರಾನೈಟ್ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಸಿಐಡಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.
2006-07ರಿಂದಲೂ ರಾಮನಗರ ವಿಭಾಗದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘಿಸಿ ಒಟ್ಟು 143 ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕ ಅರಣ್ಯ ಕಾಯ್ದೆ 1963ರ ಕಾಯ್ದೆ, ಖನಿಜ 1980ರ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆದಿತ್ತು. ಅರಣ್ಯ ಪ್ರದೇಶ ಮತ್ತು ಅರಣ್ಯ ಪ್ರದೇಶದಿಂದ 100 ಮೀಟರ್ ಒಳಗೇ ಅಕ್ರಮವಾಗಿ ಗಣಿಗಾರಿಕೆ ನಡೆಸಿತ್ತು ಎಂದು ಪತ್ರದಲ್ಲಿ ವಿವರಿಸಿತ್ತು.

ಕನಕಪುರ ಸುತ್ತಮುತ್ತಲು ಪ್ರದೇಶಗಳಲ್ಲಿನ ಗಣಿ ಪ್ರದೇಶಗಳಲ್ಲಿ ಅಕ್ರಮವಾಗಿ ಹೊರತೆಗೆದಿದ್ದ ಖನಿಜಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಪರವಾನಿಗೆ ಇಲ್ಲದೆಯೇ ವಿದೇಶ ಮತ್ತು ಇತರೆ ರಾಜ್ಯಗಳಿಗೂ ಸಾಗಾಣಿಕೆ ಮಾಡಲಾಗಿತ್ತು. ಇದರಲ್ಲಿ ಆರ್ಥಿಕ ಅಪರಾಧಗಳು ಮತ್ತು ತೆರಿಗೆ ವಂಚನೆ ಮತ್ತು ಸುಂಕಗಳನ್ನು ವಂಚಿಸಲಾಗಿತ್ತು. ಹೀಗಾಗಿ ಈ ಪ್ರಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ತನೀಖೆ ನಡೆಸುವ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಿದ್ದರು.
ಈ ಪ್ರಕರಣಗಳಲ್ಲಿ ಕೇವಲ ಅರಣ್ಯ ಕಾಯ್ದೆ ಮಾತ್ರ ಉಲ್ಲಂಘಿಸಿಲ್ಲ. ಬದಲಿಗೆ ಖನಿಜ ನಿಯಮಗಗಳನ್ನೂ ಉಲ್ಲಂಘಿಸಿತ್ತು. ಐಪಿಸಿ 379, 120 ಬಿ, 420, ಫೋರ್ಜರಿ ಮತ್ತಿತರೆ ಸ್ವರೂಪದ ಅಪರಾಧಗಳಾಗಿದ್ದವು. ಹೀಗಾಗಿ ಈ ಪ್ರಕರಣಗಳಲ್ಲಿ ಆಪಾದಿತರನ್ನು ವಿಚಾರಣೆ ನಡೆಸಬೇಕಿದೆ. ಐಪಿಸಿ ಅಡಿಯಲ್ಲಿ ವಿಚಾರಣೆ ನಡೆಸಬೇಕು. ಆದರೆ ಅರಣ್ಯ ಇಲಾಖೆಗೆ ಈ ಅಧಿಕಾರವಿಲ್ಲ. ಐಪಿಸಿ, ತೆರಿಗೆ ವಂಚನೆ ಪ್ರಕರಣಗಳಲ್ಲಿ ತನೀಖೆ ನಡೆಸಲು ಅರಣ್ಯ ಇಲಾಖೆಗೆ ಅಧಿಕಾರವಿಲ್ಲ. ಈ ಪ್ರಕರಣಗಳನ್ನು ಸಿಐಡಿ ಅಥವಾ ಇತರೆ ಸ್ವತಂತ್ರ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಸಬೇಕು ಅಗತ್ಯವಿದೆ ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅಲ್ಲದೇ ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಡಿ ಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅರಣ್ಯ ಇಲಾಖೆಯು ಮೊಕದ್ದಮೆಗಳನ್ನು ಹೂಡಿತ್ತು. ಈ ಪ್ರಕಣಗಳನ್ನು ಹಿಂಪಡೆಯಬೇಕು ಎಂದು 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಡಿ ಕೆ ಶಿವಕುಮಾರ್ ಅವರು ಪತ್ರ ಬರೆದಿದ್ದರು. ಈ ಪತ್ರದ ಮೇಲೆಯೇ ಚರ್ಚಿಸಿ, ಕಡತ ಮಂಡಿಸಿ ಎಂದು ಯಡಿಯೂರಪ್ಪ ಅವರು ಒಕ್ಕಣೆ ಹಾಕಿದ್ದರು.

ಈ ಪತ್ರದಲ್ಲಿ ಯು ವಿ ಸಿಂಗ್ ತನಿಖಾ ವರದಿ ಕುರಿತೂ ಪ್ರಸ್ತಾಪಿಸಿದ್ದರು. ತಾವು ಮತ್ತು ತಮ್ಮ ಕುಟುಂಬದ ಸದಸ್ಯರು ಅಕ್ರಮ ಮತ್ತು ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸಿಲ್ಲ ಎಂದು ಪ್ರತಿಪಾದಿಸಿದ್ದರು. ಅಲ್ಲದೇ ಐದು ದಶಕಗಳಿಂದಲೂ ಈ ಪ್ರದೇಶಗಳು ಪಟ್ಟಾ ಮತ್ತು ಕಂದಾಯ ಭೂಮಿಗಳಾಗಿವೆ. ಆದರೆ ಸರ್ಕಾರವು ಯಾವುದೇ ಆಧಾರವಿಲ್ಲದೇ ಅವೈಜ್ಞಾನಿಕವಾಗಿ ದಿಢೀರ್ ಎಂದು ಕಂಆಯ ಭೂಮಿಗಳನ್ನು ಅರಣ್ಯ ಭೂಮಿ ಎಂದು ವಾದಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ತಮ್ಮ ರಾಜಕೀಯ ವಿರೋಧಿಯೂ ಆಗಿರುವ ಅರಣ್ಯ ಸಚಿವರು ತಮ್ಮ ವಿರುದ್ಧದ ತನಿಖೆಗೆ ಮುಂದಾಗಿದ್ದರು. ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಕನಕಪುರದಲ್ಲಿ ಕಾನೂನುಬಾಹಿರವಾಗಿ ಸರ್ವೆ ಮಾಡಲು ಸೂಚಿಸಿದ್ದರು. ಯಾವುದೇ ನೋಟೀಸ್ ಕೂಡ ಕೊಡದೇ ಯು ವಿ ಸಿಂಗ್ ಮೂಲಕ ಸರ್ವೆ ಮಾಡಿಸಿದ್ದರು. ಯು ವಿ ಸಿಂಗ್ ವರದಿಯನ್ನು ಸಚಿವ ಸಂಫುಟದ ಅಥವಾ ವಿಧಾನಮಂಡಲದ ಅಧಿವೇಶನದಲ್ಲಿಯೂ ಮಂಡಿಸಿಲ್ಲ. ಆದರೂ ಅರಣ್ಯ ಸಚಿವರು ವರದಿಯನ್ನು ಸ್ವೀಕರಿಸಿದ್ದರು. ಸಚಿವರು ಸ್ವೀಕರಿಸಿದ್ದನ್ನೇ ಸರ್ಕಾರವು ಸಹ ಒಪ್ಪಿಕೊಂಡಿದೆ ಎಂಬ ಎಂದು ಬಿಂಬಿಸಲಾಗಿತ್ತು ಎಂದು ಡಿ ಕೆ ಶಿವಕುಮಾರ್ ಅವರು ಪ್ರಸ್ತಾವಿಸಿದ್ದರು.
ಕೇವಲ ಕನಕಪುರ ತಾಲೂಕಿಗೆ ಮಾತ್ರ ಸರ್ವೆ ಮಾಡಿಸಲಾಗಿತ್ತು. ಇದರಲ್ಲಿ ಜಗದ್ಗುರು ಬಾಲಗಂಗಾಧನಾಥ ಸ್ವಾಮೀಜಿ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿತ್ತು. ಮತ್ತು ಕನಕಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣೆಗೆ ಪಟ್ಟಿ ಸಲ್ಲಿಸುವುದು ಬಾಕಿ ಇದ್ದರೂ ಸಹ ಅರಣ್ಯ ಅಪರಾಧ ಮೊಕದ್ದಮೆ ದಾಖಲಿಸಿದ್ದರು.
ಕನಕಪುರದಲ್ಲಿ ಡಿ ಕೆ ಸುರೇಶ್, ಸಾತನೂರಿನ ಇಂಡಿಯನ್ ರಾಕ್, ಸಕ್ಂ, ಸಿವಿಎಸ್ ಗ್ರಾಯಣಟ್ಸ್, ಎಸ್ ಲೇಪಾಕ್ಷ, ಜೆಮಿನಿ ಎಕ್ಸ್‌ಪೋರ್ಟ್ಸ್, ಯುನೈಟೆಡ್ ಎಕ್ಸ್‌ಪೋರ್ಟ್ಸ್ ಕೂಡ ಸೇರಿತ್ತು.

ಹಾಗೆಯೇ ಕನಕಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಲು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮಾ ನೇತೃತ್ವದಲ್ಲಿ ಹಿಂದಿನ ಬಿಜೆಪಿ ಸರ್ಕಾರವು 2012ರಲ್ಲೇ ಸಮಿತಿ ರಚಿಸಿತ್ತು. ಅಗ ಸಿ ಪಿ ಯೋಗೇಶ್ವರ್ ಅವರು ಅರಣ್ಯ ಸಚಿವರಾಗಿದ್ದರು.
ಉಪ ಅರಣ್ಯ ಸಂರಕ್ಷಣಾದಿಕಾರಿ ತಕತ್‌ಸಿಂಗ್ ರಾಣಾವತ್ ಅವರೂ ಈ ಸಮಿತಿಯ ಸಸ್ಯರಾಗಿದ್ದರು. ಈ ಸಮಿತಿಯೂ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿಗಳ ನೇತೃತ್ವದ ಸಮಿತಿಯೂ ರಚನೆಯಾಗಿತ್ತು. ಈ ಸಮಿತಿಯು ಕನಕಪುರ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಉಂಟಾಗಿರಬಹುದಾದ ತೆರಿಗೆ, ವರಮಾನ ನಷ್ಟದ ಉರಿತು ಪರಿಶೀಲನೆ ನಡೆಸಿತ್ತು.
ಕನಕಪುರ ತಾಲೂಕಿನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಮಹಮದ್ ಸನಾವುಲ್ಲಾ ನೇತೃತ್ವದ ಸಮಿತಿಯು ಸರ್ಕಾರಕ್ಕೆ 2012ರಲ್ಲೇ ವರದಿ ನೀಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವರು ವಿಧಾನಸಭೆಗೆ ಈ ಮಾಹಿತಿಯನ್ನೂ ನೀಡಿದ್ದರು. ವರದಿ ಪರಿಶೀಲಿಸಿದ ನಂತರ ಅದರಲ್ಲಿನ ಅಂಶಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದರು.




