Wednesday | July 15, 2026 |

ಆರ್‍‌ಸಿಬಿ ವಿಜಯೋತ್ಸವದ ಕಾಲ್ತುಳಿತ; ದೋಷಾರೋಪಣೆ ಪಟ್ಟಿಯಲ್ಲಿ ಆಧರಿಸಿದ ಸಾಕ್ಷ್ಯ, ದಾಖಲಾತಿಗಳು ಇತರೆ ದಾಖಲೆಗಳೊಂದಿಗೆ ಪರಿಶೀಲಿಸಲು ಕಾನೂನು, ನಿಯಮಗಳಲ್ಲಿ ಅವಕಾಶವಿಲ್ಲವೆಂದ ಗೃಹ ಇಲಾಖೆ

ಬೆಂಗಳೂರು; ಆರ್‍‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ಬಿ ದಯಾನಂದ್ ಅವರು ನೀಡಿದ್ದ ಪ್ರತಿ ರಕ್ಷಣಾ ಹೇಳಿಕೆ, ಒಳಾಡಳಿತ ಇಲಾಖೆಯ ಅಭಿಪ್ರಾಯ ಆಧರಿಸಿ ಇಲಾಖೆ ವಿಚಾರಣೆ ಮುಕ್ತಾಯಗೊಳಿಸಬೇಕೇ ಅಥವಾ ಪ್ರತಿ ರಕ್ಷಣಾ ಹೇಳಿಕೆಯನ್ನು ಒಪ್ಪದೇ ಅಧಿಕಾರಿಯವರ ವಿರುದ್ಧ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿ ನೇಮಿಸಬೇಕೇ, ಬೇಡವೇ ಎಂಬ ಕುರಿತು ಒಳಾಡಳಿತ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಡುವೆ ಚರ್ಚೆಗಳು ಆರಂಭವಾಗಿವೆ.

ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣೆ ಪಟ್ಟಿಯಲ್ಲಿ ಆಧರಿಸಿದ ಸಾಕ್ಷ್ಯ ಮತ್ತು ದಾಖಲಾತಿಗಳನ್ನು ಇತರೆ ದಾಖಲೆಗಳೊಂದಿಗೆ ಪರಿಶೀಲಿಸಲು ಸದ್ಯದ ಕಾನೂನು ಮತ್ತು ನಿಯಮಗಳಲ್ಲ ಅವಕಾಶವಿಲ್ಲ ಎಂಬ ಕಾರಣವನ್ನು ಮುಂದೊಡ್ಡಿದೆ.

ಇದಕ್ಕೆ ಸಂಬಂಧಿಸಿದಂತೆ ಕೆಲವು ಟಿಪ್ಪಣಿ (HD/279/PEG/2025- 27-05-2026)  ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣವು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿತ್ತು. ಹೀಗಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್‍‌ ಬಿ ದಯಾನಂದ ಅವರನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಮಾನತುಗೊಳಿಸಿದ್ದರು. ಸಕಾಲಕ್ಕೆ ವಿಷಯ ತಿಳಿಸದೇ ತಡ ಮಾಡಿದ್ದೇ ಅಮಾನತಿಗೆ ಕಾರಣ ಎಂದು ಸಿದ್ದರಾಮಯ್ಯ ಅವರೂ ಸಮರ್ಥನೆ ಮಾಡಿಕೊಂಡಿದ್ದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ದುರದೃಷ್ಟಕರ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಾಗ ಉಪಮುಖ್ಯಮಂತ್ರಿಯಾಗಿದ್ದ  ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಕಂಬನಿ ಮಿಡಿದಿದ್ದರು. ಪರಿಸ್ಥಿತಿಯನ್ನು ಅಂದಾಜಿಸಲು ವಿಫಲವಾದ ಬಗ್ಗೆ ಕ್ಷಮೆಯಾಚಿಸಿದ್ದರು.  ವಿರೋಧ ಪಕ್ಷಗಳು ಈ ದುರಂತದ ಮೇಲೆ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದರು

ಈ ಮಧ್ಯೆ ಅಮಾನತು ಆದೇಶವನ್ನು ಸರ್ಕಾರವು 2025ರ ಜುಲೈನಲ್ಲೇ ಹಿಂಪಡೆದುಕೊಂಡಿತ್ತು. ನಂತರ ಬಿ ದಯಾನಂದ್ ಅವರನ್ನು ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಎಡಿಜಿಪಿಯನ್ನಾಗಿ ನೇಮಿಸಿತ್ತು. ಈ ಬೆಳವಣಿಗೆಗಳ ನಡುವೆಯೇ ಕಾಲ್ತುಳಿತ ದುರ್ಘಟನೆಗೆ ಸಂಬಂಧಿಸಿದಂತೆ ಪ್ರತಿ ರಕ್ಷಣಾ ಹೇಳಿಕೆಯನ್ನೂ ದಾಖಲಿಸಿದ್ದರು. ಈ ಪ್ರತಿ ರಕ್ಷಣಾ ಹೇಳಿಕೆಯನ್ನು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರು ಅನುಮೋದಿಸಿದ್ದರು.

ಬಿ ದಯಾನಂದ್ ಅವರ ಪ್ರತಿ ರಕ್ಷಣಾ ಹೇಳಿಕೆ ಆಧರಿಸಿ ಒಳಾಡಳಿತ ಇಲಾಖೆಯು ತನ್ನ ಅಭಿಪ್ರಾಯ ನೀಡಿತ್ತು. ಈ ಅಭಿಪ್ರಾಯ ಆಧರಿಸಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಚರ್ಚೆಗಳು ಆರಂಭವಾಗಿವೆ.

ಆರ್‍‌ಸಿಬಿ ಸಂಭ್ರಮಾಚರಣೆ ಸಮಯದಲ್ಲಿ ಉಂಟಾಗಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ದಯಾನಂದ್ ಅವರಿಗೆ 2025ರ ಜುಲೈ 31ರಂದು ಕಾರಣ ಕೇಳುವ ನೋಟೀಸ್‌ ಮತ್ತು ದೋಷಾರೋಪರಣೆ ಪಟ್ಟಿಯನ್ನು ಜಾರಿಗೊಳಿಸಿತ್ತು. ಅಲ್ಲದೇ ಪ್ರತಿ ರಕ್ಷಣಾ ಹೇಳಿಕೆಯನ್ನು ಸಲ್ಲಿಸಲು ಸೂಚಿಸಿತ್ತು. ಬಿ ದಯಾನಂದ್ ಅವರು ನೀಡಿದ್ದ ಪ್ರತಿ ರಕ್ಷಣಾ ಹೇಳಿಕೆಗೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ 2026ರ ಮೇ 27ರಂದು ತನ್ನ ಅಭಿಪ್ರಾಯವನ್ನು ನೀಡಿದೆ.

ಒಳಾಡಳಿತ ಇಲಾಖೆಯ ಅಭಿಪ್ರಾಯದಲ್ಲೇನಿದೆ?

ಹಠಾತ್ತಾಗಿ ಅಭಿಮಾನಿಗಳ ಸಂಖ್ಯೆ ಕ್ರೀಡಾಂಗಣದ ಸುತ್ತಲು ಹೆಚ್ಚಾಗಿದ್ದರಿಂದ ಈ ಅಹಿತಕರ ಘಟನೆ ಸಂಭವಿಸಿದೆ. ಆರ್‍‌ಸಿಬಿ ಸಂಸ್ಥೆಯಿಂದ ಮಾಡಿದ ಏಕ ಪಕ್ಷೀಯ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿ ಪೊಲೀಸ್‌ ಆಯುಕ್ತರು (ಪಶ್ಚಿಮ), ಕೇಂದ್ರ ವಿಭಾಗದ ಡಿಸಿಪಿ, ಸಹಾಯಕ ಪೊಲೀಸ್‌ ಆಯುಕ್ತರು (ಕಬ್ಬನ್‌ ಪಾರ್ಕ್) ಸಿದ್ದಪಡಿಸಿದ್ದ ಬಂದೋಬಸ್ತ್‌ ಗೆ ಅನುಮೋದನೆ ನೀಡಿದ್ದರು.

ಇದನ್ನು ಗುಪ್ತಚರ ಮಾಹಿತಿಗೂ ಸಹ  ಸೂಚನೆಯನ್ನು ಅಧೀನ ಪೊಲೀಸ್‌ ಅಧಿಕಾರಿಗಳಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಎಲ್ಲಾ ಸ್ಥಳಗಳಲ್ಲಿಯೂ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದ್ದು ಕ್ರೀಡಾಂಗಣ ಬಳಿ ಮಾತ್ರ ಏಕಾಏಕೀ ಕ್ರೀಡಾಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಘಟನೆ ಸಂಭವಿಸಿರುತ್ತದೆ ಎಂದ ನೀಡಿರುವ ಪ್ರತಿ ರಕ್ಷಣಾ ಹೇಳಿಕೆಯನ್ನು ಅಧಿಕಾರಿಯವರು ನೀಡಿರುವ ಪ್ರತಿ ರಕ್ಷಣಾ ಹೇಳಿಕೆಯನ್ನು ಒಪ್ಪಬಹುದು ಎಂದು ಗೃಹ ಸಚಿವರ ಅನುಮೋದನೆ ನೀಡಿದ್ದಾರೆ ಎಂದು ಒಳಾಡಳಿತ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ತಿಳಿಸಿದೆ.

ಬಿ ದಯಾನಂದ್ ಅವರ ವಿರುದ್ದ ಹೊರಡಿಸಿದ್ದ ದೋಷಾರೋಪಣೆ ಪಟ್ಟಿಯ (ಅನುಬಂಧ 1ರಿಂದ 4) ಗೆ ನೀಡಿದ್ದ ಪ್ರತಿ ರಕ್ಷಣಾ ಹೇಳಿಕೆಯನ್ನು ನ್ಯಾಯಾಂಗ ಮತ್ತು ಮ್ಯಾಜಿಸ್ಟ್ರೇರಿಯಲ್ ವಿಚಾರಣೆ ವರದಿಗಳೊಂದಿಗೆ ಮರು ಪರಿಶೀಲಿಸಿ ಸಲ್ಲಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಈ ಪ್ರತಿ ರಕ್ಷಣಾ ಹೇಳಿಕೆಯನ್ನು ಜಾನ್‌ ಮೈಕಲ್ ಕುನ್ಹಾ ಅವರು ನೀಡಿದ್ದ ಏಕ ಸದಸ್ಯ ತನಿಖಾ ಆಯೋಗದ ವರದಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಮ್ಯಾಜಿಸ್ಟ್ರೇಯಲ್ ತನಿಖಾ ವರದಿಯನ್ನು ಮರು ಪರಿಶೀಲಿಸಲಾಗಿತ್ತು.

ಅಧಿಕಾರಿಗಳ ಪ್ರತಿರಕ್ಷಣಾ ಹೇಳಿಕೆಗಳು ದೋಷಾರೋಪಣೆ ಪಟ್ಟಿ 1ರಿಂದ 4ಕ್ಕೆ ಸೀಮಿತವಾಗಿತ್ತು. ಅಲ್ಲದೇ ಅವುಗಳನ್ನು ದೋಷಾರೋಪಣೆ ಪಟ್ಟಿಯೊಂದಿಗೆ ಪರಿಗಣಿಸಿ ಕ್ರಮ ಕೈಗೊಳ್ಳಬಹುದು. ಈಗಾಗಲೇ ದೋಷಾರೋಪಣೆ ಪಟ್ಟಿಯಲ್ಲಿ ಆಧರಿಸಿದ ಸಾಕ್ಷ್ಯ ಮತ್ತು ದಾಖಲಾತಿಗಳನ್ನು ಮೀರಿ ಇತರೆ ದಾಖಲೆಗಳೊಂದಿಗೆ ಪರಿಶೀಲಿಸಲು ಸದ್ಯದ ಕಾನೂನು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಒಳಾಡಳಿತ ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಇದನ್ನಾಧರಿಸಿ ‘ಅಧಿಕಾರಿಯವರ ಪ್ರತಿ ರಕ್ಷಣಾ ಹೇಳಿಕೆ ಮತ್ತು ಒಳಾಡಳಿತ ಇಲಾಖೆಯು 2026ರ ಜನವರಿ 28ರಂದು ನೀಡಿದ್ದ ಅಭಿಪ್ರಾಯವನ್ನು ಒಪ್ಪಿ ದೋಷಮುಕ್ತಗೊಳಿಸಲು,’ ಅಭಿಪ್ರಾಯ ನೀಡಿತ್ತು.

ಈ ಅಭಿಪ್ರಾಯ ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದಕ್ಕಾಗಿ 2 ಆಯ್ಕೆಗಳನ್ನು ಮುಂದಿರಿಸಿಕೊಂಡಿದೆ.

ಆಯ್ಕೆ 1

ಅಧಿಕಾರಿಯವರ ಪ್ರತಿ ರಕ್ಷಣಾ ಹೇಳಿಕೆ ಮತ್ತು ಒಳಾಡಳಿತ ಇಲಾಖೆಯು 2026ರ ಜನವರಿ 28ರಂದು ನೀಡಿರುವ ಅಭಿಪ್ರಾಯವನ್ನು ಒಪ್ಪಿ ದಯಾನಂದ್‌ ಇವರ ವಿರುದ್ಧದ ಇಲಾಖೆ ವಿಚಾರಣೆಯನ್ನು ಮುಕ್ತಾಯಗೊಳಿಸುವುದು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಆಯ್ಕೆ 2

ಅದೇ ರೀತಿ ಅಧಿಕಾರಿಯವರ ಪ್ರತಿ ರಕ್ಷಣಾ ಹೇಳಿಕೆ ಮತ್ತು ಒಳಾಡಳಿತ ಇಲಾಖೆಯ ಅಭಿಪ್ರಾಯವನ್ನು ಒಪ್ಪದೇ ಅಧಿಕಾರಿಯವರ ವಿರುದ್ಧ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿ ನೇಮಿಸಬೇಕೇ ಎಂಬ ಕುರಿತು ಕಡತವನ್ನು ಮುಂದಿನ ಆದೇಶಕ್ಕಾಗಿ ಮಂಡಿಸಿರುವುದು ಗೊತ್ತಾಗಿದೆ.

ಆರ್‍‌ಸಿಬಿ ಸಂಭ್ರಮಾಚರಣೆಯ ವಿಜಯೋತ್ಸವ ಕಾರ್ಯಕ್ರಮಕ್ಕೆ ಡಿ ಪಿ ಎ ಆರ್‌ನಿಂದ ಷರತ್ತುಗಳ ಮೇರೆಗೆ ಅನುಮತಿ ನೀಡಲಾಗಿತ್ತು. ಆ ಷರತ್ತುಗಳನ್ನು ಪಾಲಿಸಿ , ಕಾರ್ಯಕ್ರಮವನ್ನು ಆಯೋಜಿಸುವುದು ಬೆಂಗಳೂರು ಪೊಲೀಸರ ಕರ್ತವ್ಯ ಆಗಿತ್ತು. ವಿಧಾನಸೌಧದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದಲ್ಲಿ ಕಾಲ್ತುಳಿತವಾಗಿದೆ. ಸಮರ್ಪಕವಾಗಿ ಅಲ್ಲಿ ಭದ್ರತೆ ಒದಗಿಸುವುದು ಪೊಲೀಸ್‌ ಕೆಲಸವಾಗಿತ್ತು. ಸೂಕ್ತವಾಗಿ ನಿರ್ವಹಣೆ ಮಾಡದ ಹಿನ್ನೆಲೆ ಪೊಲೀಸರ ವಿರುದ್ಧ ಕ್ರಮ ಎಂದು ಸಿದ್ದರಾಮಯ್ಯ ಅವರು ಹೇಳಿದ್ದನ್ನು ಸ್ಮರಿಸಬಹುದು.

ಕಾಲ್ತುಳಿತ ಏನಿದು ಘಟನೆ?

18 ನೇ ಆವೃತ್ತಿಯ ಐಪಿಎಲ್‌ ಕಪ್ ಗೆದ್ದ ಆರ್‌ಸಿಬಿ ತಂಡವು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭ, ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ವಿಜಯೋತ್ಸವ ನಡೆದಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಕಾಲ್ತುಳಿತವಾಗಿ 11 ಅಭಿಮಾನಿಗಳು ಮೃತಪಟ್ಟಿದ್ದರು. 67 ಮಂದಿ ಗಾಯಾಳುಗಳಾಗಿದ್ದವು. ಈ ಘಟನೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತ ದುರಂತ ಸಂಬಂಧ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಬಿ. ದಯಾನಂದ್‌ ಅವರು ಮ್ಯಾಜಿಸ್ಟೀರಿಯಲ್‌ ವಿಚಾರಣೆ ಎದುರಿಸಿದ್ದರು. ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ಹೊಣೆ ಹೊತ್ತಿದ್ದ ದಯಾನಂದ್‌ ಅವರ ವಿಚಾರಣಾ ಹೇಳಿಕೆ ಇಡೀ ಪ್ರಕರಣದಲ್ಲಿ ಕುತೂಹಲ ಮೂಡಿಸಿತ್ತು.

ಕಾಲ್ತುಳಿತ; ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಉಲ್ಲಂಘನೆ, ಹೈಕೋರ್ಟ್‌ಗೆ ಅರ್ಜಿ

ಕಾಲ್ತುಳಿತ ದುರ್ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಉಲ್ಲಂಘನೆ ಆಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಅವರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

ಆರ್‍‌ಸಿಬಿ ಸಂಭ್ರಮಾಚರಣೆ ಅನುಮತಿಗೆ ನಿರಾಕರಿಸಿ ದೂರು ನೀಡಿದ್ದ ಇನ್ಸ್‌ಪೆಕ್ಟರ್‍‌ ಅಮಾನತು; ಕರ್ತವ್ಯ ಪಾಲನೆಗೆ ಶಿಕ್ಷೆ?

 

ಆರ್‍‌ಸಿಬಿ ಸಂಭ್ರಮಾಚರಣೆಗೆ ಅನುಮತಿ ನಿರಾಕರಿಸಿದ್ದ ದೂರು ನೀಡಿದ್ದ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.

ಆರ್‍‌ಸಿಬಿ ವಿಜಯೋತ್ಸವ; ಜನಸಂದಣಿ ನಿಯಂತ್ರಣಕ್ಕೆ ಇದ್ದಿದ್ದು ಕೇವಲ 79 ಅಧಿಕಾರಿಗಳು, ಎಚ್ಚರಿಸದ ಕಂಟ್ರೋಲ್‌ ರೂಂ

 

ಅಲ್ಲದೇ ಆರ್‍‌ಸಿಬಿ ವಿಜಯೋತ್ಸವ ವೇಳೆ ಜನಸಂದಣಿ ನಿಯಂತ್ರಣಕ್ಕೆ  ಕೇವಲ 79 ಅಧಿಕಾರಿಗಳು ಇದ್ದರು ಎಂಬ ಕುರಿತು ಕುನ್ಹಾ ವರದಿ ಆಧರಿಸಿ  ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!