ಬೆಂಗಳೂರು; ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 9 ಮತ್ತು 10ರಲ್ಲಿನ 27.23 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಒತ್ತುವರಿ ಪ್ರಕರಣವು ಏಳೆಂಟು ವರ್ಷಗಳಾದರೂ ಬಗೆಹರಿದಿಲ್ಲ.
ಈ ಮಧ್ಯೆ ಇದೇ ಜಮೀನಿನ ವಿಚಾರವಾಗಿ ಅರಣ್ಯ ಇಲಾಖೆಯೂ ಸಹ ತನ್ನ ಹಕ್ಕನ್ನು ಸ್ಥಾಪಿಸಿದೆ. ಆದರೆ ವಾಸ್ತವದಲ್ಲಿ ಈ ಜಮೀನು ಅರಣ್ಯ ಇಲಾಖೆಯದ್ದು ಎಂದು ಸಾಕ್ಷಿಕರಿಸುವುದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಸ್ಪಷ್ಟ ವರದಿ ನೀಡಲು ಇನ್ನೂ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಅವರು ಲೋಕಾಯುಕ್ತಕ್ಕೆ 2024ರ ನವೆಂಬರ್ 26ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಈ ವರದಿಗಳನ್ನು ಪರಿಶೀಲಿಸಲಾಗಿದ್ದು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅವರು ನೀಡಿರುವ ವರದಿಗಳು ವ್ಯತಿರಿಕ್ತವಾಗಿದೆ. ಪ್ರಸ್ತಾಪಿತ ಪ್ರದೇಶದಲ್ಲಿ ಈ ಹಿಂದೆ ಅರಣ್ಯ ಇಲಾಖೆಯಿಂದ ನೆಡುತೋಪು ಬೆಳೆಸಿರುವ ಬಗ್ಗೆ ಹಾಗೂ ಸ್ಮಶಾನ ಭೂಮಿ, ನಿರ್ಮಿಸಲಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ಸಾಗುವಳಿದಾರರ ನೈಜತೆ ಹಾಗೂ ಅರ್ಹತೆಯನ್ನು ಪರಿಶೀಲಿಸಬೇಕಿದೆ. ಹೀಗಾಗಿ 15 ದಿನಗಳ ಕಾಲಾವಕಾಶ ನೀಡಬೇಕು,’ ಎಂದು ಹಾಸನ ಜಿಲ್ಲಾಧಿಕಾರಿ ಅವರು ಲೋಕಾಯುಕ್ತ ಸಂಸ್ಥೆಯನ್ನು ಕೋರಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.
ಆರ್ ಟಿ ಸಿ ಪಹಣಿ ದಾಖಲೆಗಳ ಪ್ರಕಾರ ಸರ್ವೆ ನಂಬರ್ 9 ರಲ್ಲಿ 14.21 ಎಕರೆ ಇದೆ. ಇದು ಗೋಮಾಳ ಮತ್ತು ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನಕ್ಕೆ ಮೀಸಲಿರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಸರ್ವೆ ನಂಬರ್ 10ರಲ್ಲಿ 13.02 ಎಕರೆ ಜಮೀನು ಗೋಮಾಳ ಮತ್ತು ಸ್ಮಶಾನಕ್ಕಾಗಿ ಮೀಸಲು ಎಂದು ನಮೂದಿಸಿರುವುದು ಪಹಣಿ ದಾಖಲೆಗಳಿಂದ ಗೊತ್ತಾಗಿದೆ.
ಪ್ರಕರಣದ ಹಿನ್ನೆಲೆ
ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿದಾರರು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಕಿರಣ್ ಕುಮಾರ್ ಎಂಬುವರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಲೋಕಾಯುಕ್ತರು ಇದೇ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರನ್ನೂ ದಾಖಲಿಸಿಕೊಂಡಿದ್ದರು.
ಈ ದೂರಿನ ಕುರಿತು ಕ್ರಮಕೈಗೊಂಡು ವರದಿ ನೀಡಬೇಕು ಎಂದು ಲೋಕಾಯುಕ್ತ ಸಂಸ್ಥೆಯು 2017ರ ಡಿಸೆಂಬರ್ 6 ಮತ್ತು 2021ರಂದು ಸೂಚಿಸಿತ್ತು. ಈ ಬಗ್ಗೆ ಹೊಳೆನರಸೀಪುರ ತಾಲೂಕು ತಹಶೀಲ್ದಾರ್ 2021ರ ನವೆಂಬರ್ 16ರಂದು ವರದಿ ಸಲ್ಲಿಸಿದ್ದರು. ಇದಾದ ನಂತರ 2024ರ ನವೆಂಬರ್ 4ರಂದು ಸರ್ಕಾರವು ಮತ್ತೊಂದು ಆದೇಶ ಹೊರಡಿಸಿತ್ತು. ಅದರಂತೆ ಈ ಪ್ರಕರಣದ ಕುರಿತು ಪ್ರಸ್ತುತ ವಸ್ತು ಸ್ಥಿತಿ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚಿಸಿತ್ತು ಎಂದು ಗೊತ್ತಾಗಿದೆ.
ವಸ್ತು ಸ್ಥಿತಿ ವರದಿಯಲ್ಲೇನಿದೆ?
ಹೊಳೆನರಸೀಪುರ ತಾಲೂಕಿನ ಕಸಬಾ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 9ರಲ್ಲಿ 16 ಜನ ಮತ್ತು ಸರ್ವೆ ನಂಬರ್ 10ರಲ್ಲಿ 16 ಜನ ಅನಧಿಕೃತವಾಗಿ ಸುಮಾರು 35 ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ಈ ಜಮೀನನ್ನು ಸಕ್ರಮಗೊಳಿಸಬೇಕು ಎಂದು ಕೋರಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಪ್ರದೇಶವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಕಾರಣ ನೀಡಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ 2002ರ ಮಾರ್ಚ್ 16ರಂದು ನಮೂನೆ 53ರ ಅರ್ಜಿಗಳನ್ನು ವಜಾಗೊಳಿಸಿರುವುದು ವಸ್ತು ಸ್ಥಿತಿ ವರದಿಯಿಂದ ತಿಳಿದು ಬಂದಿದೆ.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತೀರ್ಮಾನ ಹಿನ್ನೆಲೆಯಲ್ಲಿ ಈ ಹಿಂದೆ ಅಂದರೆ 2015-16ನೇ ಸಾಲಿನಲ್ಲಿ ಈ ಜಮೀನಿನ ಒತ್ತುವರ ತೆರವುಗೊಳಿಸಬೇಕು ಎಂದು ಸಂಬಂಧಪಟ್ಟ ಒತ್ತುವರಿದಾರರಿಗೆ ತಹಶೀಲ್ದಾರ್ ಅವರು ನೋಟೀಸ್‌ಗಳನ್ನು ನೀಡಿದ್ದರು. ಆದರೆ ಇದುವರೆಗೂ ಈ ಜಮೀನುಗಳ ಒತ್ತುವರಿ ತೆರವುಗೊಂಡಿಲ್ಲ.
ಅಲ್ಲದೇ ಅದೇ ಒತ್ತುವರಿದಾರರು ಸರ್ಕಾರದಿಂದ ನಮೂನೆ 57ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಮಯದಲ್ಲಿ ಬಿಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 9 ಮತ್ತು 10ರಲ್ಲಿನ ಅನಧಿಕೃತ ಸಾಗುವಳಿ ಜಮೀನನ್ನು ಸಕ್ರಮೀಕರಣಗೊಳಿಸಿಕೊಡಬೇಕು ಎಂದು ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
2024ರ ನವೆಂಬರ್ 4ರಂದು ತಹಶೀಲ್ದಾರ್ , ಸ್ಥಳೀಯ ಕಂದಾಯ ಪರಿವೀಕ್ಷಕರು ಹಾಗೂ ಮೋಜಣಿದಾರರೊಂದಿಗೆ ಪ್ರಶ್ನಿತ ಸ್ಥಳಕ್ಕೆ ಭೇಟಿ ನೀಡಿದ್ದರು.
‘ನಾವುಗಳು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ಜಮೀನುಗಳು ಅರಣ್ಯ ಇಲಾಖೆಗೆ ಒಳಪಡದಿದ್ದರೂ ಸಹ ಒತ್ತುವರಿದಾರರ ಅನುಪಸ್ಥಿತಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಅರ್ಜಿಗಳನ್ನು ವಜಾಗೊಳಿಸಿ ತೀರ್ಮಾನಿಸಲಾಗಿದೆ. ಅಲ್ಲದೇ ಯಾವುದೇ ನೆಡುತೋಪುಗಳಾಗಲೀ ಅರಣ್ಯ ಇಲಾಖೆಯಿಂದ ಬೆಳೆಸಿರುವ ಮರಗಿಡಗಳಾಗಲೀ ಇರುವುದಿಲ್ಲ. ನಮಗೆ ಉಳುಮೆ ಮಾಡುತ್ತಿರುವ ಜಮೀನುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಜಮೀನು ಇಲ್ಲದಿರುವ ಕಾರಣ ಹಾಗೂ ತುಂಡು ಭೂಮಿ ಒತ್ತುವರಿಯಲ್ಲಿರುವ ಕಾರಣ ಒತ್ತುವರಿ ತೆರವುಗೊಳಿಸಬಾರದು,’ ಎಂದು ಒತ್ತುವರಿದಾರರು ಕೋರಿದ್ದ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅಲ್ಲದೇ ನಮೂನೆ 57ರಲ್ಲಿ ಸಹ ಅರ್ಜಿಗಳನ್ನು ಸಲ್ಲಿಸಿದ್ದರು ಒತ್ತುವರಿಯನ್ನು ಮುಂದುವರೆಸಿರುತ್ತೇವೆ ಎಂದು ತಿಳಿಸಿದ್ದರು. ಹಾಗೂ ಈ ಹಿಂದೆ ನಮೂನೆ 53ರ ಅರ್ಜಿಗಳನ್ನು ವಜಾಗೊಳಿಸಿರುವುದು ಕ್ರಮಬದ್ಧವಾಗಿರುವುದಿಲ್ಲ. ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿರುವ ಕಾರಣ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ. ಹಾಲಿ ದಾಖಲೆಗಳನ್ನು ಪಡೆದು ಸಕ್ಷಮ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹಾಗೂ ಒತ್ತುವರಿ ತೆರವುಗೊಳಿಸಲು ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಒತ್ತುವರಿ ತೆರವುಗೊಳಿಸಬಾರದು ಎಂದು ಕೋರಿದ್ದಾರೆ ಎಂದು ಗ್ರಾಮಸ್ಥರ ಮಹಜರಿನೊಂದಿಗೆ ವರದಿ ಸಲ್ಲಿಸಿದ್ದರು ಎಂದು ವಿವರಿಸಲಾಗಿದೆ.
ಒತ್ತುವರಿದಾರರ ಹೇಳಿಕೆ ಹಾಗೂ ಸ್ಥಳ ತನಿಖೆ ಆಧಾರದಲ್ಲಿ ಪ್ರಶ್ನಿತಿ ಸ್ವತ್ತುಗಳು ಅರಣ್ಯ ಇಲಾಖೆಗೆ ಒಳಪಡುತ್ತವೆಯೇ, ಅರಣ್ಯ ಇಲಾಖೆಗೆ ಅಧಿಸೂಚನೆಯಾಗಿದೆಯೇ, ಹಾಗೂ ಡೀಮ್ಡ್ ಅರಣ್ಯವಾಗಿದೆಯೇ ಎಂಬ ಬಗ್ಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಿಗೆ ವಿವರಣೆ ಕೇಳಿರುವುದು ವರದಿಯಿಂದ ಗೊತ್ತಾಗಿದೆ.
‘ಹೊಳನರಸೀಪುರ ತಾಲೂಕು ಬಿಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 9 ಹಾಘೂ 10ರ ಪ್ರದೇಶಗಳಿಗೆ ಸಂಬಂಧಿಸಿದಂತೆ ಡೀಮ್ಡ್ ಅರಣ್ಯ ಪಟ್ಟಿಯಲ್ಲಾಗಲೀ ಹಾಗೂ ಅಧಿಸೂಚಿತ ಅರಣ್ಯ ಪಟ್ಟಿಯಲ್ಲಾಗಲೀ ಇರುವುದಿಲ್ಲ . ಹಾಗೂ ಸದರಿ ಸರ್ವೆ ನಂಬರ್‍ಗಳ ಪ್ರದೇಶದಲ್ಲಿ ಯಾವುದೇ ನೆಡುತೋಪಗಳುನ್ನು ಬೆಳೆಸಿರುವುದಿಲ್ಲ.’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿರುವುದು ತಿಳಿದು ಬಂದಿದೆ.
ಈ ಬಗ್ಗೆ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳಿಂದಲೂ ವರದಿ ಪಡೆದಿತ್ತು. ಬಿಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 9 ಮತ್ತು 10ರ ಗೋಮಾಳ ಪ್ರದೇಶವು ಒತ್ತುವರಿಯಾಗಿ ಕೃಷಿ ಸಾಗುವಳಿ ಮಾಡುತ್ತಿರುವುದು ಕಂಡು ಬಂದಿದ್ದು ಕಟ್ಟಡಗಳು ಮತ್ತು ನೀರಿನ ಸರಬರಾಜು ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು ಕೃಷಿ ಸಾಗುವಳಿ ಜಮೀನುಗಳ ಬದುಗಳಲ್ಲಿ ಅಲ್ಲಲ್ಲಿ ಸೀಮೆತಂಗಡಿ ಮತ್ತು ನೀಲಗಿರಿ ಮರಗಳು ಇರುವುದು ಕಂಡು ಬಂದಿರುತ್ತದೆ ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.