ಬೆಂಗಳೂರು; ‘ರಾಮಗಡ್ ಮಿನರಲ್ಸ್ ಸೇರಿದಂತೆ ಒಟ್ಟು 8 ಗಣಿ ಗುತ್ತಿಗೆಗಳ ನವೀಕರಣಕ್ಕೆ ಅನುಮೋದಿಸಿದ್ದ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿಯೇ 500 ಕೋಟಿ ರು ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಮೂಲಕ ರಾಜ್ಯ ಬೊಕ್ಕಸಕ್ಕೆ 5,000 ಕೋಟಿಗೂ ಹೆಚ್ಚು ನಷ್ಟವುನ್ನುಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು,’ ಎಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲರಿಗೆ ಕೋರಿರುವುದು ಇದೀಗ ಬಹಿರಂಗವಾಗಿದೆ.
ತಮ್ಮ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನ ಹಂಚಿಕೆಯಾಗಿದ್ದ ಪ್ರಕರಣದಲ್ಲಿಯೂ ಆರೋಪಕ್ಕೆ ಗುರಿಯಾಗಿರುವ ಬೆನ್ನಲ್ಲೇ 8 ಗಣಿ ಗುತ್ತಿಗೆಗಳ ನವೀಕರಣದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ಗುರುತರವಾದ ಆಪಾದನೆ ಕೇಳಿ ಬಂದಿದೆ.
ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರುವ ಸಂಬಂಧ ದಾಖಲೆ ಸಲ್ಲಿಸಲು ರಾಜ್ಯಪಾಲರ ಭೇಟಿಗೆ ಅವಕಾಶ ನೀಡಬೇಕು ಎಂದು 2025ರ ಮಾರ್ಚ್ ಮಾರ್ಚ್ 4ರಂದೇ ರಾಜ್ಯಪಾಲರ ಸಚಿವಾಲಯಕ್ಕೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ರಾಮಮೂರ್ತಿಗೌಡ ಅವರು ಬರೆದಿದ್ದ ಪತ್ರವನ್ನು ಪರಿಗಣಿಸಿದ್ದ ರಾಜ್ಯಪಾಲರ ಸಚಿವಾಲಯವು ರಾಜ್ಯಪಾಲರನ್ನು ಭೇಟಿ ಮಾಡಲು 2025ರ ಏಪ್ರಿಲ್ 1ರಂದು ಅವಕಾಶ ನೀಡಿತ್ತು.
ರಾಮಮೂರ್ತಿಗೌಡ ಅವರು ನೀಡಿದ್ದ ಮನವಿ ಪತ್ರ ಮತ್ತು ದಾಖಲೆಗಳನ್ನು ರಾಜ್ಯಪಾಲರು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ಮತ್ತು ದೂರುದಾರ ರಾಮಮೂರ್ತಿಗೌಡ ಅವರೊಂದಿಗೆ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಕಾನೂನು ಸಲಹೆಗಾರರು ಮತ್ತು ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಅಲ್ಲದೇ ಈ ಸಂಬಂಧ ವರದಿ ನೀಡಲು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಇದನ್ನು ದೂರುದಾರ ರಾಮಮೂರ್ತಿಗೌಡ ಅವರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಪತ್ರ, 8 ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿಯಲ್ಲಿನ ಸೆಕ್ಷನ್ 7, 9, 11, 12 ಮತ್ತು 15, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿನ ಸೆಕ್ಷನ್ 59, 61, 42, 201, 227, 228, 229, 239, 314, 316 (5) 318 (1), 319, 322, 324 (2), 324 (3), 335, 336, 338, 340 ರ ಅಡಿಯಲ್ಲಿ ವಿಚಾರಣೆಗೆ ಪೂರ್ವಾನುಮತಿ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಪತ್ರಿಕಾ ವರದಿಗಳ ತುಣಕುಗಳನ್ನು ಮಾತ್ರ ನೀಡಿದ್ದರಿಂದಾಗಿ ಲೋಕಾಯುಕ್ತ ಸಂಸ್ಥೆಯು ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದೀಗ ರಾಮಮೂರ್ತಿ ಗೌಡ ಅವರು ದಾಖಲೆಗಳೊಂದಿಗೆ ರಾಜಭವನದ ಕದ ತಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
8 ಗಣಿ ಗುತ್ತಿಗೆಗಳಿಗೆ ತಾತ್ವಿಕವಾಗಿ ನವೀಕರಣಕ್ಕೆ ನೀಡಿದ್ದ ಅನುಮೋದನೆಗೂ ಸಿದ್ದರಾಮಯ್ಯ ಅವರ ಆಸ್ತಿ ಏರಿಕೆಯಾಗಿರುವುದಕ್ಕೂ ತಳಕು ಹಾಕಲಾಗಿದೆ. ಮತ್ತು 2014ಕ್ಕೂ ಮುಂಚೆ ಮತ್ತು 2015ರ ನಂತರ ಆಸ್ತಿ ಋಣ ಪಟ್ಟಿಯನ್ನೂ ತಾಳೆ ಮಾಡಿ ಲೆಕ್ಕಾಚಾರ ಮಾಡಿರುವುದು ತಿಳಿದು ಬಂದಿದೆ.
ಗಣಿ ಗುತ್ತಿಗೆ ನವೀಕರಣಕ್ಕೂ ಮುನ್ನ ಸಿದ್ದರಾಮಯ್ಯ ಅವರ ಆದಾಯದಲ್ಲಿ ಏರಿಕೆಯಾಗಿರಲಿಲ್ಲ. ಗಣಿ ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡಿದ ನಂತರದ ವರ್ಷಗಳಲ್ಲಿ ಅವರ ಆದಾಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅವರು ಮತ್ತು ಅವರ ಕುಟುಂಬ ಸದಸ್ಯರ ಸ್ಥಿರ ಮತ್ತು ಚರಾಸ್ತಿಗಳಲ್ಲೂ ಏರಿಕೆಯಾಗಿವೆ. ಇವುಗಳ ಮೊತ್ತವು ಹಲವು ಕೋಟಿಗಳಾಗಿವೆ. ಈ ರೀತಿ ಗಳಿಸಿರುವ ಆಸ್ತಿ ಮತ್ತು ಆದಾಯವು ವಾಮಮಾರ್ಗದಿಂದ ಗಳಿಸಲಾಗಿದೆ. ಅಲ್ಲದೇ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಪಡೆದಿದ್ದಾರೆ ಎಂದು ಪತ್ರದಲ್ಲಿ ದಾಖಲೆ ಸಹಿತ ವಿವರಿಸಿರುವುದು ಗೊತ್ತಾಗಿದೆ.
8 ಗಣಿ ಗುತ್ತಿಗೆಗಳ ನವೀಕರಣ ಪ್ರಕ್ರಿಯೆಯಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಪಟ್ಟಿಯನ್ನು ರಾಜ್ಯಪಾಲರಿಗೆ ರಾಮಮೂರ್ತಿಗೌಡ ಅವರು ಒದಗಿಸಿದ್ದಾರೆ. ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 10 ಎ, 10 ಎ (2) (ಬಿ), ಸೆಕ್ಷನ್ 10 ಎ (2)(ಸಿ), ಎಂಎಂಡಿಆರ್ ಕಾಯ್ದೆ 2015ರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಗಣಿ ಗುತ್ತಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸಿದ್ದರೇ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತಿದ್ದ ಆದಾಯ, ಬರುತ್ತಿದ್ದ ವಿವಿಧ ತೆರಿಗೆಗಳ ಮೊತ್ತ ಮತ್ತು ಹರಾಜು ಪ್ರಕ್ರಿಯೆ ನಡೆಸದೆಯೇ ಗಣಿ ಗುತ್ತಿಗೆಯನ್ನು ನವೀಕರಣ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟದ ಲೆಕ್ಕಾಚಾರವನ್ನೂ ಇದೇ ಪತ್ರದಲ್ಲಿ ನೀಡಿರುವುದು ಗೊತ್ತಾಗಿದೆ.
ಹಿಂದಿನ ವರ್ಷಗಳಲ್ಲಿ ಹರಾಜು ನಡೆಸಿದ್ದ ಪ್ರಕ್ರಿಯೆಗಳನ್ನೇ ಮುಂದುವರೆಸಿದ್ದರೇ ಪ್ರತೀ ಗಣಿ ಗುತ್ತಿಗೆಯಿಂದ ಅಂದಾಜು 500 ಕೋಟಿ ರು ಸರ್ಕಾರಕ್ಕೆ ಆದಾಯ ಬರುತ್ತಿತ್ತು. 8 ಗಣಿ ಗುತ್ತಿಗೆಗಳನ್ನು ಕಾನೂನುಬಾಹಿರವಾಗಿ ನವೀಕರಿಸಿ ವಿಸ್ತರಿಸಿದ್ದರಿಂದಾಗಿ 4,000 ಕೋಟಿ ರು.ನಷ್ಟು ಆದಾಯ ಕೈ ತಪ್ಪಿ ಹೋಗಿದೆ. ಅದೇ ರೀತಿ ಹರಾಜು ಪ್ರಕ್ರಿಯೆ ನಡೆದಿದ್ದರೇ ರಾಜಧನದ ರೂಪದಲ್ಲಿ 600 ಕೋಟಿ ರು ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈ ಕಂಪನಿಗಳಿಂದ ಬಂದ ರಾಜಧನ ಕೇವಲ 100 ಕೋಟಿ ರು ಮಾತ್ರ. ಇದರಿಂದಾಗಿ 500 ಕೋಟಿಗಳಷ್ಟು ರಾಜಧನ ನಷ್ಟವಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಜಿಎಸ್‌ಟಿ ಲೆಕ್ಕಾಚಾರವನ್ನೂ ರಾಮಮೂರ್ತಿಗೌಡ ಅವರು ವಿವರಿಸಿದ್ದಾರೆ. ಗಣಿ ಗುತ್ತಿಗೆಗಳನ್ನು ಹರಾಜು ಹಾಕಿದ್ದರೇ ಜಿಎಸ್‌ಟಿ ಆದಾಯ 400 ಕೋಟಿ ರು ಬರುತ್ತಿತ್ತು. ಆದರೆ ಕಾನೂನುಬಾಹಿರವಾಗಿ ಗುತ್ತಿಗೆ ನವೀಕರಿಸಿರುವುದರಿಂದಾಗಿ ಈ 8 ಗಣಿ ಗುತ್ತಿಗೆಗಳಿಂದ ಕೆವಲ 180 ಕೋಟಿ ರು. ಮಾತ್ರ ಸಂಗ್ರಹವಾಗಿದೆ. ಹೀಗಾಗಿ 220 ಕೋಟಿಯಷ್ಟು ನಿವ್ವಳ ಜಿಎಸ್‌ಟಿ ನಷ್ಟವಾಗಿದೆ. ಸರ್‍ಚಾರ್ಜ್ ರೂಪದಲ್ಲಿಯೂ 900 ಕೋಟಿ ರು ಅಂದಾಜಿಸಿತ್ತು. ಆದರೆ ಸಂಗ್ರಹವಾಗಿದ್ದು ಕೇವಲ 200 ಕೋಟಿ ಮಾತ್ರ. ಇದರಿಂದಾಗಿ ಸೆಸ್ ಚಾರ್ಜ್ ರೂಪದಲ್ಲಿ 700 ಕೋಟಿ ರು ನಷ್ಟವಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕಾನೂನುಬಾಹಿರವಾಗಿ ಗಣಿ ಗುತ್ತಿಗೆಗಳನ್ನು ನವೀಕರಿಸಿರುವುದರಿಂದಾಗಿ ರಾಜಧನವೂ ಸೇರಿದಂತೆ ಎಲ್ಲಾ ಮೂಲಗಳಿಂದ ಬರುತ್ತಿದ್ದ ಒಟ್ಟು 6,900 ಕೋಟಿ ರು ಆದಾಯ ಕೈ ತಪ್ಪಿದೆ. ಸರ್ಕಾರದ ಬೊಕ್ಕಸಕ್ಕೆ ಬಂದಿದ್ದು ಕೇವಲ 480 ಕೋಟಿ ರು ಮಾತ್ರ. ಸರ್ಕಾರದ ಬೊಕ್ಕಸಕ್ಕೆ ಒಟ್ಟಾರೆ 6,420 ಕೋಟಿಯಷ್ಟು ನಷ್ಟವಾಗಿದೆ ಎಂದು ಲೆಕ್ಕಾಚಾರದ ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.
‘ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಿಸಿರುವ ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಲಂಚದ ರೂಪದಲ್ಲಿ 1,000 ಕೋಟಿ ಪಡೆಯಲಾಗಿದೆ,’ ಎಂದು ರಾಮಮೂರ್ತಿಗೌಡ ಅವರು ಆಪಾದಿಸಿರುವುದು ಗೊತ್ತಾಗಿದೆ.
ತುಮಕೂರು ಮಿನರಲ್ಸ್ (ಸೊಂದನೇಹಳ್ಳಿ) 161.86 ಎಕರೆ, ವೆಸ್ಕೋ 46.55 ಎಕರೆ , ರಾಮ್‌ಗಡ (ಡಾಲ್ಮಿಯ) 828.6 ಎಕರೆ, ಕರ್ನಾಟಕ ಲಿಂಪ್ಕೋ 40.47 ಎಕರೆ, ಕೆಂಎಂಎಂಐ (ಕಾರಿಗನೂರು ಮಿನರಲ್ಸ್ ) 498.57 ಎಕರೆ, ಎಂಇಎಲ್ (ಬಿಬಿಎಚ್) 259.52 ಎಕರೆ, ಎಂ ಉಪೇಂದ್ರನ್ ಮೈನ್ಸ್ 112.3 ಎಕರೆ, ಜಯರಾಮ್ ಮಿನರಲ್ಸ್‌ಗೆ 29.35 ಎಕರೆ ಗಣಿ ಗುತ್ತಿಗೆ ನವೀಕರಿಸಲಾಗಿತ್ತು.
ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು, ಅವಧಿ ಮೀರಿದ ಒಂದು ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಗೆ ಪೂರ್ಣ ನವೀಕರಣ ಅನುಮತಿ ನೀಡಿತ್ತು. ಮತ್ತು ಅವಧಿ ಮೀರಿದ ಏಳು ಪರವಾನಗಿಗಳಿಗೆ ತಾತ್ವಿಕ ನವೀಕರಣವನ್ನು ನೀಡಿತ್ತು.
ಎಂಟು ಗುತ್ತಿಗೆಗಳಲ್ಲಿ, ಐದು ಗುತ್ತಿಗೆಗಳು ಎಂಎಂಡಿಆರ್‍ಎ ಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಜಾರಿಗೆ ಬಂದ ಅದೇ ದಿನ (ಜನವರಿ 12, 2015) ತಾತ್ವಿಕ ನವೀಕರಣ ಮಾಡಲಾಗಿತ್ತು. ಇದರಲ್ಲಿಯೂ ಹೇಗೆ ಲೋಪಗಳು ನಡೆದಿವೆ ಎಂದು ದಾಖಲೆ ಸಹಿತವಾಗಿ ರಾಮಮೂರ್ತಿಗೌಡ ಅವರು ರಾಜ್ಯಪಾಲರಿಗೆ ವಿವರಿಸಿರುವುದು ತಿಳಿದು ಬಂದಿದೆ.
8 ಗಣಿ ಗುತ್ತಿಗೆಗಳಿಗೆ ನವೀಕರಣಕ್ಕೆ ತಾತ್ವಿಕ ಅನುಮೋದನೆ ಅಗತ್ಯವೇ ಇರಲಿಲ್ಲ. ಗಣಿ ಗುತ್ತಿಗೆ ನವೀಕರಣ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಂಪನಿಗಳು ಸಕ್ಷಮ ಪ್ರಾಧಿಕಾರಗಳಾದ ಅರಣ್ಯ ಇಲಾಖೆ ಮತ್ತು ಐಬಿಎಂಗೆ ಮನವಿ ನೀಡಬೇಕಿತ್ತು. ವಿಶೇಷವೆಂದರೇ ಈ 8 ಗಣಿ ಕಂಪನಿಗಳ ಗಣಿ ಗುತ್ತಿಗೆ ನವೀಕರಣದ ಅರ್ಜಿಗಳು 10 ವರ್ಷದಿಂದಲೂ ಸಕ್ಷಮ ಪ್ರಾಧಿಕಾರದಲ್ಲೇ ಬಾಕಿ ಇದ್ದವು.
ಅಕ್ರಮ ಗಣಿಗಾರಿಕೆ ನಡೆಸಿದ್ದ ಕಾರಣಕ್ಕೆ ಗಣಿ ಗುತ್ತಿಗೆ ನವೀಕರಣದ ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರಗಳು ಇತ್ಯರ್ಥ ಮಾಡದೆಯೇ ಬಾಕಿ ಇರಿಸಿಕೊಂಡಿದ್ದವು. ಹೀಗಾಗಿ ಈ 8 ಗಣಿ ಗುತ್ತಿಗೆ ಕಂಪನಿಗಳಿಗೆ ಶಾಸನಬದ್ಧವಾದ ಅನುಮತಿಯೇ ಇರಲಿಲ್ಲ ಎಂದು ರಾಮಮೂರ್ತಿಗೌಡ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಪ್ರತಿಪಾದಿಸಿರುವುದು ಗೊತ್ತಾಗಿದೆ.
ಕಬ್ಬಿಣದ ಅದಿರಿನ ಗಣಿಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಹೇಳಿತ್ತು. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಜನವರಿ 12ರಂದು ತಿದ್ದುಪಡಿ ತಂದಿತ್ತು. ಗಣಿ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿಯ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದನ್ನು ಉಲ್ಲಂಘಿಸಿ 2,386 ಎಕರೆ ಭೂಮಿಯನ್ನು ಈ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ ಎಂಬ ಗುರುತರವಾದ ಆರೋಪವನ್ನು ಸಿದ್ದರಾಮಯ್ಯ ಅವರ ಮೇಲೆ ಹೊರಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಹಾಗೆಯೇ ಎಂಎಂಡಿಆರ್ ಕಾಯ್ದೆ 2015ರ ಸೆಕ್ಷನ್ 10 (ಎ) ಉಲ್ಲಂಘಿಸಿ 8 ಗಣಿ ಗುತ್ತಿಗೆಗಳನ್ನು ನವೀಕರಿಸಲು ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು. ಈ ಪ್ರಕ್ರಿಯೆಯಲ್ಲಿ 500 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಮೂಲಕ ರಾಜ್ಯ ಬೊಕ್ಕಸಕ್ಕೆ 5,000 ಕೋಟಿಗೂ ಹೆಚ್ಚು ನಷ್ಟವನ್ನುಂಟು ಮಾಡಿದ್ದಾರೆ ಎಂದು ಆಪಾದಿಸಿರುವುದು ಗೊತ್ತಾಗಿದೆ.
ಗಣಿ ಗುತ್ತಿಗೆ ನವೀಕರಣಕ್ಕೆ 108 ಅರ್ಜಿಗಳು ಸಲ್ಲಿಕೆಯಾಗಿದ್ದರೂ ಸಹ ನಿರ್ದಿಷ್ಟವಾಗಿ 8 ಗಣಿ ಗುತ್ತಿಗೆಗಳನ್ನು ಮಾತ್ರ ನವೀಕರಿಸಲಾಗಿದೆ. ಗುತ್ತಿಗೆ ಷರತ್ತು ನಿಯಮಗಳನ್ನೂ ಉಲ್ಲಂಘಿಸಲಾಗಿದೆ. ಅರಣ್ಯ ತೀರುವಳಿ ಇಲ್ಲದಿದ್ದರೂ ಸಹ ಗಣಿ ಗುತ್ತಿಗೆ ನವೀಕರಿಸಲಾಗಿದೆ. ಎಂಎಂಡಿಆರ್ ಕಾಯ್ದೆ ಸೆಕ್ಷನ್ 10 ಎ (2) (ಬಿ) ಉಲ್ಲಂಘಿಸಲಾಗಿದೆ. ಐಬಿಎಂಗೂ ಅರಣ್ಯ ತೀರುವಳಿ ಪ್ರಮಾಣ ಪತ್ರವನ್ನು ನೀಡಿರಲಿಲ್ಲ. ಆದರೂ ಗಣಿ ಗುತ್ತಿಗೆಗಳನ್ನು ನವೀಕರಿಸಿರುವುದರ ಹಿಂದೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ರಾಮಮೂರ್ತಿಗೌಡ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಈ 8 ಗಣಿ ಗುತ್ತಿಗೆ ಕಂಪನಿಗಳ ವಿರುದ್ಧ ಲೋಕಾಯುಕ್ತವೂ ತನಿಖಾ ವರದಿ ನೀಡಿತ್ತು. ಈ ಕಂಪನಿಗಳು ರಾಜಧನವೂ ಸೇರಿದಂತೆ ಇನ್ನಿತರೆ ಬಾಕಿ ಸೇರಿ ಒಟ್ಟಾರೆ 182 ಕೋಟಿ ರು ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದವು ಎಂದು ರಾಮಮೂರ್ತಿಗೌಡ ಅವರು ರಾಜ್ಯಪಾಲರ ಗಮನಸೆಳೆದಿದ್ದಾರೆ.
ಮತ್ತೊಂದು ವಿಶೇಷವೆಂದರೇ ಗುತ್ತಿಗೆ ನವೀಕರಣಗೊಂಡ ಕಂಪನಿಗಳ ಪೈಕಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕಂಪನಿಗಳೂ ಸೇರಿದ್ದವು. ಸರ್ಕಾರಕ್ಕೆ ರಾಜಧನ ಪಾವತಿಸದ ಕಂಪನಿಯೂ ಇದೆ. ಈ ಗಣಿಗಳನ್ನು ಹರಾಜು ಹಾಕಿದ್ದರೆ ಸರ್ಕಾರಕ್ಕೆ ಸಾವಿರಾರುಕೋಟಿ ಸಂಗ್ರಹವಾಗುತ್ತಿತ್ತು. ಆದರೂ ಹರಾಜು ಪ್ರಕ್ರಿಯೆ ನಡೆಸದೆಯೇ ನೇರವಾಗಿ 8 ಗಣಿ ಗುತ್ತಿಗೆಗಳನ್ನು ನವೀಕರಿಸಲಾಗಿದೆ ಎಂದು ಆರೋಪಿಸಿರುವುದು ಗೊತ್ತಾಗಿದೆ.
ರಾಮಗಡ್ ಮಿನರಲ್ಸ್ 2002ರಿಂದಲೂ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿತ್ತು.
ವೀರಭದ್ರಪ್ಪ ಸಂಗಪ್ಪ (ವೆಸ್ಕೋ) ಹೆಸರಿನಲ್ಲಿರುವ ಗಣಿ ಗುತ್ತಿಗೆಯು ಸಹ ಎಂಎಂಡಿಆರ್ ಕಾಯ್ದೆ 2015ನ್ನು ಉಲ್ಲಂಘಿಸಿದೆ. ಅರಣ್ಯ ಕಾಯ್ದೆಯನ್ನು ಗಾಳಿಗೆ ತೂರಲಾಗಿದೆ. ಪರವಾನಿಗೆ ಇಲ್ಲದಿದ್ದರೂ ಅಕ್ರಮವಾಗಿ ಖನಿಜವನ್ನು ಹೊರತೆಗೆಯಲಾಗಿದೆ. ಅರಣ್ಯ ತೀರುವಳಿ ಇಲ್ಲದಿದ್ದರೂ ಸಹ ಗಣಿಗಾರಿಕೆ ನಡೆಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ತುಮಕೂರು ಮಿನರಲ್ಸ್ ಕೂಡ ಗಣಿ ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿದೆ. ಗಣಿಗಾರಿಕೆ ನಡೆಸುವ ಮುನ್ನ ಅರಣ್ಯ ತೀರುವಳಿ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರಣ್ಯ ತೀರುವಳಿ ಪತ್ರವನ್ನು ನೀಡಿಲ್ಲ. ಮಾರ್ಗಸೂಚಿಗಳನ್ನು ಪಾಲಿಸದೇ ಮತ್ತು ಪರವಾನಿಗಿ ಇಲ್ಲದೆಯೇ ಅನಧಿಕೃತವಾಗಿ ಗಣಿಗಾರಿಕೆ ನಡೆಸಿದೆ. ಮತ್ತು ಸಿಇಸಿಯೂ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು ಎಂದೂ ವಿವರಿಸಿದೆ.
ಉಪೇಂದ್ರನ್ ಮೈನ್ಸ್ ಎಸಗಿರುವ ಉಲ್ಲಂಘನೆಗಳ ಪಟ್ಟಿಯನ್ನೂ ರಾಜ್ಯಪಾಲರಿಗೆ ರಾಮಮೂರ್ತಿಗೌಡ ಅವರು ಸಲ್ಲಿಸಿದ್ದಾರೆ. ಈ ಕಂಪನಿಯು ಐಬಿಎಂಗೆ ಗಣಿಗಾರಿಕೆಯ ಚಟುವಟಿಕೆಗಳ ಕಾರ್ಯಯೋಜನೆಯನ್ನು ಸಲ್ಲಿಸಿರಲಿಲ್ಲ. ಅರಣ್ಯ ತೀರುವಳಿ ಪತ್ರವನ್ನು ಪಡೆದಿರಲಿಲ್ಲ. ಸಕ್ಷಮ ಪ್ರಾಧಿಕಾರಗಳಿಂದ ಸೂಕ್ತ ಅನುಮತಿ ಪತ್ರಗಳನ್ನು ಪಡೆದಿರಲಿಲ್ಲ. ಮತ್ತು ಪರವಾನಿಗೆ ಪಡೆದಿದ್ದ ಪ್ರದೇಶದಿಂದ ಹೊರತುಪಡಿಸಿದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಬಳ್ಳಾರಿಯ ಐತಿಹಾಸಿಕ ದೇಗುಲವಾಗಿರುವ ಜಂಬುನಾಥೇಶ್ವರ ದೇಗುಲದ ಬಳಿ ಗಣಿ ಗುತ್ತಿಗೆ ಪಡೆದಿದ್ದ ಕಾರಿಗನೂರು ಮಿನರಲ್ಸ್ ಮೈನಿಂಗ್ ಇಂಡಸ್ಟ್ರಿಸ್ ಕೂಡ ಎಂಎಂಡಿಆರ್ ಕಾಯ್ದೆ 1957ರ ಸೆಕ್ಷನ್ 4 ಎ (1)ನ್ನು ಉಲ್ಲಂಘಿಸಿತ್ತು. ಮತ್ತು ಸರ್ಕಾರಕ್ಕೆ 10,71,81,583 ರು.ಗಳ ರಾಜಧನವನ್ನು ಪಾವತಿಸಿರಲಿಲ್ಲ. ಪರಿಸರಕ್ಕೆ ಸಂಬಂಧಿಸಿದ ತೀರುವಳಿ ಪತ್ರವನ್ನೂ ಪಡೆದಿರಲಿಲ್ಲ ಎಂದು ಪತ್ರದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಮಿನರಲ್ಸ್ ಎಂಟರ್ ಪ್ರೈಸೆಸ್ ಲಿಮಿಟೆಡ್ ಕೂಡ ಹಲವು ಉಲ್ಲಂಘನೆಗಳನ್ನು ಮಾಡಿದೆ ಎಂದು ವಿವರಿಸಿರುವ ರಾಮಮೂರ್ತಿಗೌಡ ಅವರು ಬೇಲಿಕೇರಿ ಬಂದರಿನಿಂದ 92,254 ಮೆಟ್ರಿಕ್ ಟನ್ ಪ್ರಮಾಣದ ಅದಿರನ್ನು ಗೋವಾಕ್ಕೆ ಕಾನೂನುಬಾಹಿರವಾಗಿ ಸಾಗಾಣಿಕೆ ಮಾಡಿತ್ತು ಎಂದು ರಾಜ್ಯಪಾಲರಿಗೆ ದಾಖಲೆ ಒದಗಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತೀರುವಳಿ ಪತ್ರ ಪಡೆದಿರಲಿಲ್ಲ. ಮತ್ತು ಬೋಗಸ್ ಪ್ರಮಾಣ ಪತ್ರಗಳನ್ನು ಮತ್ತು ಹಲವರ ಸಹಿಯನ್ನೂ ಸಹ ತಿದ್ದಲಾಗಿತ್ತು ಎಂದು ವಿವರಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪನಿಗಳ ಪಟ್ಟಿಯಲ್ಲಿರುವ ಸೀಸಾಸ್ಟೈರ್ಲೆಟ್ ಗೆ ಜನವರಿ 7ರಂದು 504 ಎಕರೆ ಜಮೀನನ್ನು ನಾಲ್ಕನೇ ಬಾರಿ ಮಂಜೂರು ಮಾಡಲಾಗಿತ್ತು. ಹೊಸ ಕಾಯ್ದೆ ಜಾರಿಗೆ ಬಂದಿದ್ದರೂ ಜನವರಿ 12 ಮತ್ತು 19ರಂದು ಎಂಟು ಕಂಪನಿಗಳ ಗಣಿ ಗುತ್ತಿಗೆ ನವೀಕರಣಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಅದರೆ ಈ ಕಂಪನಿಗಳು ಪಡೆದಿದ್ದ ಗುತ್ತಿಗೆ ಅವಧಿ 2-3 ವರ್ಷಗಳ ಹಿಂದೆಯೇ ಮುಗಿದಿತ್ತು.
ಗುತ್ತಿಗೆ ನವೀಕರಣ ಪಡೆದಿರುವ ರಾಮ್‌ಗಡ ಮಿನರಲ್ಸ್ ಮತ್ತು ಮಿನರಲ್ಸ್ ಎಂಟರ್‍ಪ್ರೈಸೆಸ್ ವಿರುದ್ಧ ಸಿಬಿಐನಲ್ಲಿ ಪ್ರಕರಣಗಳು ದಾಖಲಾಗಿದ್ದನ್ನು ಸ್ಮರಿಸಬಹುದು.