ಕಲ್ಲು ಗಣಿಗಾರಿಕೆ; ಡಿಕೆಶಿ ವಿರುದ್ಧ ಸಿಐಡಿ ತನಿಖೆಯಿಲ್ಲ, 5 ವರ್ಷವಾದರೂ ವಿಚಾರಣೆ ದಿನಾಂಕ ನಿಗದಿಯಾಗಿಲ್ಲ

ಬೆಂಗಳೂರು; ಕನಕಪುರ, ಸಾತನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿನ  ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌, ಮಾಜಿ ಸಂಸದ ಡಿ ಕೆ ಸುರೇಶ್‌ ಸೇರಿದಂತೆ ಇನ್ನಿತರರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು,  ಹೈಕೋರ್ಟ್‌ನಲ್ಲಿ ಕಳೆದ 5 ವರ್ಷಗಳಿಂದಲೂ  ವಿಚಾರಣೆಗೆ ದಿನಾಂಕವೇ ನಿಗದಿಯಾಗಿಲ್ಲ.

 

ಅಲ್ಲದೇ ಕನಕಪುರ ಮತ್ತು ಸಾತನೂರಿನಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ತೆರಿಗೆ ವಂಚನೆ, ಸುಂಕ ಮತ್ತು ಆರ್ಥಿಕ ಅಪರಾಧ ನಡೆದಿರುವ ಕಾರಣ ಸಿಐಡಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು 2013ರಲ್ಲೇ ಶಿಫಾರಸ್ಸು ಮಾಡಿದ್ದರು.

 

ಆದರೆ ಈ ಯಾವ ಶಿಫಾರಸ್ಸುಗಳನ್ನೂ ಸಹ ಸಿದ್ದರಾಮಯ್ಯ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿದ್ದ ಸರ್ಕಾರಗಳು ಅನುಷ್ಠಾನಗೊಳಿಸಿರಲಿಲ್ಲ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ 2 ವರ್ಷಗಳನ್ನು ಪೂರೈಸಿದ್ದರೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಡಿದ್ದ ಶಿಫಾರಸ್ಸಿನ ಕುರಿತು ತುಟಿ ಬಿಚ್ಚಿಲ್ಲ.

 

ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಈಚೆಗಷ್ಟೇ ಡಿ ಕೆ ಶಿವಕುಮಾರ್‍‌ ವಿರುದ್ಧ  ಹರಿಹಾಯ್ದಿದ್ದರು. ಕನಕಪುರದಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಬಳ್ಳಾರಿ ಅದಿರು ಸಾಗಾಣಿಕೆ ಕುರಿತು ಪ್ರಸ್ತಾವಿಸಿ, ಮುಖ್ಯಮಂತ್ರಿ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ಧ ಇಂದಿನಿಂದಲೇ ಯುದ್ಧ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

 

ಈ ಬೆಳವಣಿಗೆ ನಡುವೆಯೇ ಅಕ್ರಮ, ಕಾನೂನುಬಾಹಿರವಾಗಿ ನಡೆದಿದೆ ಎನ್ನಲಾಗಿರುವ ಕಲ್ಲು ಗಣಿಗಾರಿಕೆ ಪ್ರಕರಣಗಳ ಕುರಿತು ಹೈಕೋರ್ಟ್‌ನಲ್ಲಿ ಕಳೆದ 5 ವರ್ಷದಿಂದಲೂ ವಿಚಾರಣೆಗೆ ದಿನಾಂಕವೇ ನಿಗದಿಯಾಗದಿರುವುದು ಮುನ್ನೆಲೆಗೆ ಬಂದಿದೆ.

 

ಈ ಕುರಿತು ‘ದಿ ಫೈಲ್‌’ಗೆ ಕೆಲವು ದಾಖಲೆಗಳು, ಪತ್ರಗಳು ಲಭ್ಯವಾಗಿವೆ.

 

ಡಿಕೆಶಿ ಕುಟುಂಬದವರು ಅರಣ್ಯ ಕಾಯ್ದೆ ಉಲ್ಲಂಘನೆ, ಗಡಿನಾಶ, ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಯು ವಿ ಸಿಂಗ್‌ ಅವರು 2006ರಲ್ಲಿ ನೀಡಿದ್ದ ವರದಿಯಲ್ಲಿ ಸುಮಾರು 37.61 ಕೋಟಿ ರು ಮೌಲ್ಯದ 1,44,139 ಕ್ಯೂಬಿಕ್ ಮೀಟರ್ಸ್ ಗ್ರಾನೈಟ್ ಬ್ಲಾಕ್ ಗಳನ್ನು ಅಕ್ರಮವಾಗಿ ಕನಕಪುರ, ಸಾತನೂರು ಅರಣ್ಯ ಪ್ರದೇಶದಿಂದ ಸಾಗಿಸಲಾಗಿದೆ. ಸುಮಾರು 22ಕ್ಕೂ ಅಧಿಕ ಗ್ರಾನೈಟ್ ಕಂಪನಿಗಳ ಸಹಕಾರದಿಂದ 112 ಎಕರೆ ಅರಣ್ಯ ಭೂಮಿ ಕಬಳಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 64 ಕೋಟಿ ರು ನಷ್ಟವಾಗಿದೆ ಎಂದು ದಾಖಲೆ ಸಹಿತ ವಿವರಿಸಿತ್ತು.

 

ಈ ಸಂಬಂಧ ಅರಣ್ಯ ಅಪರಾಧ (ಎಫ್‌ಓಸಿ)ದಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿತ್ತು. ಹಾಗೆಯೇ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಕೆಯಾಗಿದ್ದವು. ಆದರೆ ರಾಮನಗರ ಮತ್ತು ಕನಕಪುರ ಅರಣ್ಯಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೋಷಾರೋಪ ಪಟ್ಟಿ ಆಧರಿಸಿ ಕ್ರಮ ಕೈಗೊಂಡಿರಲಿಲ್ಲ.

 

ರಾಮನಗರ ಹಾಗೂ ಕನಕಪುರ ಅರಣ್ಯ ಪ್ರದೇಶದಲ್ಲಿ ಡಿಕೆಶಿ ಕುಟುಂಬದವರು ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು 2006ರಲ್ಲಿ ಲೋಕಾಯುಕ್ತ ತಂಡದ ಯು.ವಿ.ಸಿಂಗ್ ಅವರು ವರದಿ ನೀಡಿದ್ದರು. ವರದಿಯನ್ನು ಅನುಷ್ಠಾನಗೊಳಿಸುವಂತೆ ಹೀಗಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತು ಅಚಲು ಶಿವರಾಜ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

 

 

ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಡಿಕೆಶಿ ಕುಟುಂಬದ 27 ಜನ ಸೇರಿದಂತೆ ಒಟ್ಟು 64 ಜನರಿಗೆ ತುರ್ತು ನೋಟಿಸ್ ಜಾರಿ ಮಾಡಿತ್ತು. ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಹೊತ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸೇರಿದಂತೆ 64 ಮಂದಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲವೇಕೆ ಎಂದು ಪ್ರಶ್ನಿಸಿತ್ತು.

 

ಆದರೆ ಈ ಅರ್ಜಿಯ ವಿಚಾರಣೆಯು 2020ರ ಮಾರ್ಚ್‌ 6ರಂದು ನಡೆದಿತ್ತು. ಪ್ರಕರಣವನ್ನು 2020ರ ಮಾರ್ಚ್‌ 27ಕ್ಕೆ ಮುಂದೂಡಿತ್ತು. ಆದರೆ ಇದುವರೆಗೂ ಅಂದರೇ 5 ವರ್ಷಗಳಾದರೂ ಈ ಪ್ರಕರಣದ ಕುರಿತು ವಿಚಾರಣೆಯು ಹೈಕೋರ್ಟ್‌ನಲ್ಲಿ ಇನ್ನೂ ನಿಗದಿಯಾಗಿಲ್ಲ. 2020ರ ಮಾರ್ಚ್‌ 27 ರಿಂದಲೂ ನೆನೆಗುದಿಗೆ ಬಿದ್ದಿದ್ದರೂ ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್‌ ಸರ್ಕಾರವೂ ಸಹ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

 

 

ಪಿಸಿಸಿಎಫ್‌ ಪತ್ರದಲ್ಲೇನಿತ್ತು?

 

ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರಕ್ಕೆ 2013ರ ಮಾರ್ಚ್‌ 19ರಂದು ಪತ್ರ ಬರೆದಿದ್ದರು. ಕನಕಪುರ ತಾಲೂಕಿನಲ್ಲಿ ನಡೆದಿರುವ ಅಕ್ರಮ ಗ್ರಾನೈಟ್‌ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಸಿಐಡಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.

 

2006-07ರಿಂದಲೂ ರಾಮನಗರ ವಿಭಾಗದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘಿಸಿ ಒಟ್ಟು 143 ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕ ಅರಣ್ಯ ಕಾಯ್ದೆ 1963ರ ಕಾಯ್ದೆ, ಖನಿಜ 1980ರ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆದಿತ್ತು. ಅರಣ್ಯ ಪ್ರದೇಶ ಮತ್ತು ಅರಣ್ಯ ಪ್ರದೇಶದಿಂದ 100 ಮೀಟರ್‍‌ ಒಳಗೇ ಅಕ್ರಮವಾಗಿ ಗಣಿಗಾರಿಕೆ ನಡೆಸಿತ್ತು ಎಂದು ಪತ್ರದಲ್ಲಿ ವಿವರಿಸಿತ್ತು.

 

 

ಕನಕಪುರ ಸುತ್ತಮುತ್ತಲು ಪ್ರದೇಶಗಳಲ್ಲಿನ ಗಣಿ ಪ್ರದೇಶಗಳಲ್ಲಿ ಅಕ್ರಮವಾಗಿ ಹೊರತೆಗೆದಿದ್ದ ಖನಿಜಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಪರವಾನಿಗೆ ಇಲ್ಲದೆಯೇ ವಿದೇಶ ಮತ್ತು ಇತರೆ ರಾಜ್ಯಗಳಿಗೂ ಸಾಗಾಣಿಕೆ ಮಾಡಲಾಗಿತ್ತು. ಇದರಲ್ಲಿ ಆರ್ಥಿಕ ಅಪರಾಧಗಳು ಮತ್ತು ತೆರಿಗೆ ವಂಚನೆ ಮತ್ತು ಸುಂಕಗಳನ್ನು ವಂಚಿಸಲಾಗಿತ್ತು. ಹೀಗಾಗಿ ಈ ಪ್ರಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ತನೀಖೆ ನಡೆಸುವ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಿದ್ದರು.

 

ಈ ಪ್ರಕರಣಗಳಲ್ಲಿ ಕೇವಲ ಅರಣ್ಯ ಕಾಯ್ದೆ ಮಾತ್ರ ಉಲ್ಲಂಘಿಸಿಲ್ಲ. ಬದಲಿಗೆ ಖನಿಜ ನಿಯಮಗಗಳನ್ನೂ ಉಲ್ಲಂಘಿಸಿತ್ತು. ಐಪಿಸಿ 379, 120 ಬಿ, 420, ಫೋರ್ಜರಿ ಮತ್ತಿತರೆ ಸ್ವರೂಪದ ಅಪರಾಧಗಳಾಗಿದ್ದವು. ಹೀಗಾಗಿ ಈ ಪ್ರಕರಣಗಳಲ್ಲಿ ಆಪಾದಿತರನ್ನು ವಿಚಾರಣೆ ನಡೆಸಬೇಕಿದೆ. ಐಪಿಸಿ ಅಡಿಯಲ್ಲಿ ವಿಚಾರಣೆ ನಡೆಸಬೇಕು. ಆದರೆ ಅರಣ್ಯ ಇಲಾಖೆಗೆ ಈ ಅಧಿಕಾರವಿಲ್ಲ. ಐಪಿಸಿ, ತೆರಿಗೆ ವಂಚನೆ ಪ್ರಕರಣಗಳಲ್ಲಿ ತನೀಖೆ ನಡೆಸಲು ಅರಣ್ಯ ಇಲಾಖೆಗೆ ಅಧಿಕಾರವಿಲ್ಲ. ಈ ಪ್ರಕರಣಗಳನ್ನು ಸಿಐಡಿ ಅಥವಾ ಇತರೆ ಸ್ವತಂತ್ರ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಸಬೇಕು ಅಗತ್ಯವಿದೆ ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಅಲ್ಲದೇ ಎಚ್‌ ಡಿ ಕುಮಾರಸ್ವಾಮಿ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಡಿ ಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅರಣ್ಯ ಇಲಾಖೆಯು ಮೊಕದ್ದಮೆಗಳನ್ನು ಹೂಡಿತ್ತು. ಈ ಪ್ರಕಣಗಳನ್ನು ಹಿಂಪಡೆಯಬೇಕು ಎಂದು 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಡಿ ಕೆ ಶಿವಕುಮಾರ್ ಅವರು ಪತ್ರ ಬರೆದಿದ್ದರು. ಈ ಪತ್ರದ ಮೇಲೆಯೇ ಚರ್ಚಿಸಿ, ಕಡತ ಮಂಡಿಸಿ ಎಂದು ಯಡಿಯೂರಪ್ಪ ಅವರು ಒಕ್ಕಣೆ ಹಾಕಿದ್ದರು.

 

 

ಈ ಪತ್ರದಲ್ಲಿ ಯು ವಿ ಸಿಂಗ್‌ ತನಿಖಾ ವರದಿ ಕುರಿತೂ ಪ್ರಸ್ತಾಪಿಸಿದ್ದರು. ತಾವು ಮತ್ತು ತಮ್ಮ ಕುಟುಂಬದ ಸದಸ್ಯರು ಅಕ್ರಮ ಮತ್ತು ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸಿಲ್ಲ ಎಂದು ಪ್ರತಿಪಾದಿಸಿದ್ದರು. ಅಲ್ಲದೇ ಐದು ದಶಕಗಳಿಂದಲೂ ಈ ಪ್ರದೇಶಗಳು ಪಟ್ಟಾ ಮತ್ತು ಕಂದಾಯ ಭೂಮಿಗಳಾಗಿವೆ. ಆದರೆ ಸರ್ಕಾರವು ಯಾವುದೇ ಆಧಾರವಿಲ್ಲದೇ ಅವೈಜ್ಞಾನಿಕವಾಗಿ ದಿಢೀರ್‍‌ ಎಂದು ಕಂಆಯ ಭೂಮಿಗಳನ್ನು ಅರಣ್ಯ ಭೂಮಿ ಎಂದು ವಾದಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

 

 

ತಮ್ಮ ರಾಜಕೀಯ ವಿರೋಧಿಯೂ ಆಗಿರುವ ಅರಣ್ಯ ಸಚಿವರು ತಮ್ಮ ವಿರುದ್ಧದ ತನಿಖೆಗೆ ಮುಂದಾಗಿದ್ದರು. ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಕನಕಪುರದಲ್ಲಿ ಕಾನೂನುಬಾಹಿರವಾಗಿ ಸರ್ವೆ ಮಾಡಲು ಸೂಚಿಸಿದ್ದರು. ಯಾವುದೇ ನೋಟೀಸ್‌ ಕೂಡ ಕೊಡದೇ ಯು ವಿ ಸಿಂಗ್ ಮೂಲಕ ಸರ್ವೆ ಮಾಡಿಸಿದ್ದರು. ಯು ವಿ ಸಿಂಗ್‌ ವರದಿಯನ್ನು ಸಚಿವ ಸಂಫುಟದ ಅಥವಾ ವಿಧಾನಮಂಡಲದ ಅಧಿವೇಶನದಲ್ಲಿಯೂ ಮಂಡಿಸಿಲ್ಲ. ಆದರೂ ಅರಣ್ಯ ಸಚಿವರು ವರದಿಯನ್ನು ಸ್ವೀಕರಿಸಿದ್ದರು. ಸಚಿವರು ಸ್ವೀಕರಿಸಿದ್ದನ್ನೇ ಸರ್ಕಾರವು ಸಹ ಒಪ್ಪಿಕೊಂಡಿದೆ ಎಂಬ ಎಂದು ಬಿಂಬಿಸಲಾಗಿತ್ತು ಎಂದು ಡಿ ಕೆ ಶಿವಕುಮಾರ್ ಅವರು ಪ್ರಸ್ತಾವಿಸಿದ್ದರು.

 

ಕೇವಲ ಕನಕಪುರ ತಾಲೂಕಿಗೆ ಮಾತ್ರ ಸರ್ವೆ ಮಾಡಿಸಲಾಗಿತ್ತು. ಇದರಲ್ಲಿ ಜಗದ್ಗುರು ಬಾಲಗಂಗಾಧನಾಥ ಸ್ವಾಮೀಜಿ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿತ್ತು. ಮತ್ತು ಕನಕಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣೆಗೆ ಪಟ್ಟಿ ಸಲ್ಲಿಸುವುದು ಬಾಕಿ ಇದ್ದರೂ ಸಹ ಅರಣ್ಯ ಅಪರಾಧ ಮೊಕದ್ದಮೆ ದಾಖಲಿಸಿದ್ದರು.

 

ಕನಕಪುರದಲ್ಲಿ ಡಿ ಕೆ ಸುರೇಶ್‌, ಸಾತನೂರಿನ ಇಂಡಿಯನ್‌ ರಾಕ್‌, ಸಕ್ಂ, ಸಿವಿಎಸ್‌ ಗ್ರಾಯಣಟ್ಸ್, ಎಸ್‌ ಲೇಪಾಕ್ಷ, ಜೆಮಿನಿ ಎಕ್ಸ್‌ಪೋರ್ಟ್ಸ್‌, ಯುನೈಟೆಡ್‌ ಎಕ್ಸ್‌ಪೋರ್ಟ್ಸ್‌ ಕೂಡ ಸೇರಿತ್ತು.

 

 

ಹಾಗೆಯೇ ಕನಕಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಲು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್‌ ಶರ್ಮಾ ನೇತೃತ್ವದಲ್ಲಿ ಹಿಂದಿನ ಬಿಜೆಪಿ ಸರ್ಕಾರವು 2012ರಲ್ಲೇ ಸಮಿತಿ ರಚಿಸಿತ್ತು. ಅಗ ಸಿ ಪಿ ಯೋಗೇಶ್ವರ್ ಅವರು ಅರಣ್ಯ ಸಚಿವರಾಗಿದ್ದರು.

 

ಉಪ ಅರಣ್ಯ ಸಂರಕ್ಷಣಾದಿಕಾರಿ ತಕತ್‌ಸಿಂಗ್‌ ರಾಣಾವತ್‌ ಅವರೂ ಈ ಸಮಿತಿಯ ಸಸ್ಯರಾಗಿದ್ದರು. ಈ ಸಮಿತಿಯೂ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿಗಳ ನೇತೃತ್ವದ ಸಮಿತಿಯೂ ರಚನೆಯಾಗಿತ್ತು. ಈ ಸಮಿತಿಯು ಕನಕಪುರ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಉಂಟಾಗಿರಬಹುದಾದ ತೆರಿಗೆ, ವರಮಾನ ನಷ್ಟದ ಉರಿತು ಪರಿಶೀಲನೆ ನಡೆಸಿತ್ತು.

 

ಕನಕಪುರ ತಾಲೂಕಿನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಮಹಮದ್‌ ಸನಾವುಲ್ಲಾ ನೇತೃತ್ವದ ಸಮಿತಿಯು ಸರ್ಕಾರಕ್ಕೆ 2012ರಲ್ಲೇ ವರದಿ ನೀಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‍‌ ಅವರು ವಿಧಾನಸಭೆಗೆ ಈ ಮಾಹಿತಿಯನ್ನೂ ನೀಡಿದ್ದರು. ವರದಿ ಪರಿಶೀಲಿಸಿದ ನಂತರ ಅದರಲ್ಲಿನ ಅಂಶಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದರು.

SUPPORT THE FILE

Latest News

Related Posts