ಬೆಂಗಳೂರು; ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿಯಿಂದಾಗಿ ಸರ್ಕಾರಕ್ಕೆ ಆಗಿರುವ ಭಾರೀ ಪ್ರಮಾಣದ ನಷ್ಟದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 90 ದಿನಗಳಾದರೂ ಆಡಳಿತ ಇಲಾಖೆಯು ಉತ್ತರವನ್ನೇ ಒದಗಿಸಿಲ್ಲ.
ಅದಾನಿ, ಮೇಘ ಇನ್ಪ್ರಾಸ್ಷಕ್ಚರ್ಸ್ ಸೇರಿದಂತೆ ಬಹುದೊಡ್ಡ ಅನಿಲ ಕಂಪನಿಗಳಿಗೆ ಮೀಟರಿಗೆ ಕೇವಲ ಒಂದು ರುಪಾಯಿ ಶುಲ್ಕದಂತೆ ಪೈಪ್‌ಲೈನ್ ಹಾಕಲು ಅನುಮತಿ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು, ಬೊಕ್ಕಸಕ್ಕೆ ಅಪಾರವಾದ ಹಾನಿಯನ್ನುಂಟು ಮಾಡಿತ್ತು. ಈ ಕುರಿತು ‘ದಿ ಫೈಲ್ ‘ ಆರ್‍ಟಿಐ ದಾಖಲೆಗಳನ್ನಾಧರಿಸಿ ಸರಣಿ ರೂಪದಲ್ಲಿ ವರದಿಗಳನ್ನು ಪ್ರಕಟಿಸಿತ್ತು.
ಈ ವರದಿಗಳ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ನೀತಿಯಿಂದಾಗಿರುವ ನಷ್ಟದ ಕುರಿತು 2024ರ ಡಿಸೆಂಬರ್ 19ರಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಆದರೆ ಸರ್ಕಾರವು ಇದುವರೆಗೂ ಯಾವುದೇ ಉತ್ತರವನ್ನು ಒದಗಿಸಿಲ್ಲ. ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಅದಾನಿ ವ್ಯವಹಾರಗಳನ್ನು ಕಾಂಗ್ರೆಸ್ ವರಿಷ್ಠರು ದೇಶ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವ್ಯವಹಾರಗಳೊಂದಿಗೆ ಪ್ರಧಾನಿ ಮೋದಿಯ ಅವರಿಗೂ ತಳಕು ಹಾಕಿ ಟೀಕಿಸುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕಾಂಗ್ರೆಸ್ ವರಿಷ್ಠರ ದಾರಿಯನ್ನೇ ಹಿಡಿದಿದ್ದಾರೆ.
ಆದರೆ ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೊಳಿಸುವ ಮೂಲಕ ಅದಾನಿ ಸೇರಿದಂತೆ ಮತ್ತಿತರೆ ಅನಿಲ ಕಂಪನಿಗಳಿಗೆ ಭಾರೀ ಪ್ರಮಾಣದ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಸಿದ್ದರಾಮಯ್ಯ ಆದಿಯಾಗಿ ಯಾರೊಬ್ಬರೂ ಇದನ್ನು ತಳ್ಳಿ ಹಾಕಿಲ್ಲ. ಅಲ್ಲದೇ ಈ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಕೇಳಿದ್ದ ಪ್ರಶ್ನೆಗಳಿಗೂ ಉತ್ತರವನ್ನೂ ಒದಗಿಸಿಲ್ಲ.
ಮತ್ತೊಂದು ವಿಶೇಷವೆಂದರೇ ಈ ನೀತಿ ಕುರಿತು ಬಸನಗೌಡ ಪಾಟೀಲ ಯತ್ನಾಳ ಅವರು ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ. ಆದರೆ ಇದನ್ನು ವಿಧಾನಸಭೆ ಸಚಿವಾಲಯ ಸಿಬ್ಬಂದಿ ಈ ಪ್ರಶ್ನೆಯನ್ನು ಆಹಾರ, ನಾಗರಿಕ ಸರಬರಾಜು ಇಲಾಖೆಗೆ ವರ್ಗಾಯಿಸಿದ್ದರು.
ಯತ್ನಾಳ ಕೇಳಿದ್ದ ಪ್ರಶ್ನೆಗಳೇನು?
2023ರ ನವೆಂಬರ್ 7ರಂದು ಜಾರಿಗೆ ಬಂದಿರುವ ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿಯಂತೆ ಅಳವಡಿಕೆ ಶುಲ್ಕವನ್ನು ಪ್ರತಿ ಮೀಟರಿಗೆ 1 ರು ಇಳಿಸಲಾಗಿದೆಯೇ; ಇದರಿಂದ ನೇರ ಆರ್ಥಿಕ ಪರಿಣಾಮವಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ಹಾನಿ ಆಗಿದೆಯೇ ಅಥವಾ ಇಲ್ಲವೇ?
ಈ ನೀತಿ ಜಾರಿಗೆ ತರುವ ಪೂರ್ವದಲ್ಲಿ ಸದರಿ ನೀತಿಯ ಆರ್ಥಿಕ ಪರಿಣಾಮಗಳ ವಿಶ್ಲೇಷಣೆ ಮಾಡಲಾಗಿದೆಯೇ; ಹಾಗಾದರೇ ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿಯನ್ನು ಜಾರಿಗೆ ತರುವ ಮುನ್ನ ಆರ್ಥಿಕ ಇಲಾಖೆಯ ಸದರಿ ನೀತಿಯ ಆರ್ಥಿಕ ಪರಿಣಾಮಗಳ ಕುರಿತು ಟಿಪ್ಪಣಿ ಮಾಡಲಾಗಿದೆಯೇ?
ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿ ಜಾರಿಗೆ ಬಂದ ನಂತರ ಯಾವ ಯಾವ ಅನಿಲ ವಿತರಣೆ ಸಂಸ್ಥೆಗಳಿಗೆ ಯಾವ ಯಾವ ನಗರ ಸ್ಥಳೀಯ ಸಂಸ್ಥೆ, ಲೋಕೋಪಯೋಗಿ ಇಲಾಖೆಯಿಂದ ಎಷ್ಟು ಉದ್ದದ ಅನಿಲ ಕೊಳವೆ ಮಾರ್ಗ ಅಳವಡಿಸಲು ಅನುಮತಿ ನೀಡಲಾಗಿದೆ, ಸದರಿ ಅನುಮತಿಗಳಿಗೆ ಪಡೆದಿರುವ ಶುಲ್ಕ ಎಷ್ಟು?
ನೀತಿ ಜಾರಿಗೆ ಬರುವ ಪೂರ್ವದಲ್ಲಿ ಜಾರಿಯಲ್ಲಿದ್ದ ಶುಲ್ಕದಂತೆ ಅನುಮತಿ ನೀಡಿದ್ದರೇ ಎಷ್ಟು ಶುಲ್ಕ ವಸೂಲಿ ಆಗಿರುತ್ತಿತ್ತು, ಇದರಿಂದಾಗಿರುವ ನಷ್ಟ ಎಷ್ಟು, ಸಂಪೂರ್ಣ ಮಾಹಿತಿ ನೀಡುವುದು.
ಈ ಯಾವ ಪ್ರಶ್ನೆಗಳಿಗೂ ಸರ್ಕಾರವು ಉತ್ತರವನ್ನು ಒದಗಿಸಿಲ್ಲ.
ಈ ನೀತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿರಲಿಲ್ಲ. ಎರಡು ಬಾರಿ ಸಂಪುಟಕ್ಕೆ ಪ್ರಸ್ತಾವನೆ ಮಂಡನೆಯಾಗಿತ್ತಾದರೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಈ ಕುರಿತು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ನೀತಿಯನ್ನು ಜಾರಿಗೊಳಿಸಿತ್ತು.
3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಕಡತವನ್ನು ಕೋರಿತ್ತು. ಆದರೆ ಕಡತವನ್ನು ನೀಡಿರಲಿಲ್ಲ.
3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು
‘ದಿ ಫೈಲ್’ ಪುನಃ ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಇಲಾಖೆ ಒದಗಿಸಿದ್ದ ದಾಖಲೆ ಪ್ರಕಾರ ನಗರ ಅನಿಲ ವಿತರಣೆ ಜಾಲ ನೀತಿಯ ಕುರಿತು ಆಡಳಿತ ಇಲಾಖೆಯು ಸಚಿವ ಸಂಪುಟವನ್ನು ದಾರಿತಪ್ಪಿಸಿತ್ತು.
ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ
‘ದಿ ಫೈಲ್’ ಪ್ರಕಟಿಸಿದ್ದ ಈ ವರದಿಗೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸ್ಪಷ್ಟನೆ ನೀಡಿತ್ತು.
ಸಿಜಿಡಿ ನೀತಿ; ‘ದಿ ಫೈಲ್’ ವರದಿಗೆ ಸ್ಪಷ್ಟೀಕರಣ ನೀಡಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ
ಇದೇ ಸಿಜಿಡಿ ನೀತಿಯನ್ನು ಅನುಷ್ಠಾನಗೊಳಿಸಿದ್ದ ನೆರೆಯ ರಾಜ್ಯಗಳು ತಮ್ಮ ಸ್ಥಳೀಯ ಸಂಸ್ಥೆಗಳಿಗೆ ಆದಾಯ ತಂದುಕೊಂಡಿದ್ದವು. ಆದರೂ ಈ ರಾಜ್ಯಗಳನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿದ್ದವು.
ಸಿಜಿಡಿ ಶುಲ್ಕ 1 ರು. ಸಾಕೇ?; ತಮಿಳುನಾಡು, ಪ.ಬಂಗಾಳ, ಹಿಮಾಚಲ, ಪಂಜಾಬ್ ಮಾದರಿ ಮುಚ್ಚಿಟ್ಟಿದ್ದೇಕೆ?
ಈ ನೀತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಅನುಷ್ಠಾನಗೊಳಿಸಿದರೆ ರಾಜ್ಯ ಬೊಕ್ಕಸಕ್ಕೆ ಹಾನಿಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು. ಆದರೂ ಪಿಡಬ್ಲ್ಯೂಡಿ ಅಭಿಪ್ರಾಯವನ್ನು ಮೂಲ ಸೌಕರ್ಯ ಇಲಾಖೆಯು ಬದಿಗೊತ್ತಿತ್ತು.
ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ
ಈ ನೀತಿಯಿಂದಾಗಿ ರಾಜ್ಯ ಸಂಚಿತ ನಿಧಿಗೆ ನಷ್ಟವಾಗಿತ್ತಲ್ಲದೇ ಖಾಸಗಿ ಏಜೆನ್ಸಿಗಳಿಗೆ ಬೇಷರತ್ ಲಾಭಾಂಶವಾಗಿತ್ತು.
ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್ ಲಾಭಾಂಶ!
ಆದರೂ ಮೂಲಸೌಕರ್ಯ ಇಲಾಖೆಯು ಈ ನೀತಿ ಕುರಿತು ಅಸಮಂಜಸವಾಗಿ ಪ್ರತಿಪಾದನೆ ಮಾಡಿತ್ತು.
ಅನಿಲ ನೀತಿ; ಕಂಪನಿಗಳ ಲಾಭಾಂಶ ಮರೆಮಾಚಿದ ಸರ್ಕಾರದಿಂದ ಅಸಮಂಜಸ ಪ್ರತಿಪಾದನೆ
ಅಲ್ಲದೇ ಅನಿಲ ನೀತಿ ಶುಲ್ಕ ಇಳಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೇಗೆಲ್ಲಾ ಧಕ್ಕೆಯಾಗಲಿದೆ ಎಂದು ಪಿಡಬ್ಲ್ಯೂಡಿ ಇಲಾಖೆಯು ವಿವರಿಸಿತ್ತು.
ಅನಿಲ ನೀತಿ ಶುಲ್ಕ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ; ಪಿಡಬ್ಲ್ಯೂಡಿ ಟಿಪ್ಪಣಿ ಹಾಳೆಗಳು ಬಹಿರಂಗ
ಈ ಎಲ್ಲಾ ಬೆಳವಣಿಗೆಗಳ ಕುರಿತು ವಿಧಾನಸಭೆಯಲ್ಲಿ ಶಾಸಕರು ಕೇಳಿದ್ದ ಪ್ರಶ್ನೆಗಳಿಗೂ ಸರ್ಕಾರವು ಉತ್ತರಿಸದೇ ಇರುವುದು ಸಂಶಯಗಳನ್ನು ಬಲಪಡಿಸಿದಂತಾಗಿದೆ.