1,400 ಕೋಟಿ ಟಿಡಿಆರ್; ರಾಜ್ಯದ ಹಿತಾಸಕ್ತಿಯಿಲ್ಲ, ಸಮರ್ಥನೀಯವಲ್ಲವೆಂಬ ಅಭಿಪ್ರಾಯ ಬದಿಗೊತ್ತಲಿದೆಯೇ?

ಬೆಂಗಳೂರು; ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಅವರ ಕಾನೂನು ವಾರಸುದಾರರಿಗೆ ಉತ್ತರಾಧಿಕಾರತ್ವ ಹಕ್ಕುಗಳನ್ನು ಹೊಂದಿರುವವರಿಗೆ ಟಿಡಿಆರ್‍‌ ರೂಪದಲ್ಲಿ ಅಗಾಧ ಮೊತ್ತದ ಪರಿಹಾರ ಪಾವತಿಸುವುದು  ರಾಜ್ಯದ ಹಿತಾಸಕ್ತಿಯಾಗುವುದಿಲ್ಲ  ಎಂದು ಮುಖ್ಯಮಂತ್ರಿಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ನೀಡಿದ್ದ ಅಭಿಪ್ರಾಯವನ್ನೇ ಬದಿಗೊತ್ತಲು ಮುಂದಾಗಿದೆ.

 

ಬೆಂಗಳೂರು ಅರಮನೆ ರಸ್ತೆ ಅಗಲೀಕರಣಕ್ಕಾಗಿ 15.39 ಎಕರೆ ವಿಸ್ತೀರ್ಣದ ಜಮೀನಿಗೆ ಸುಮಾರು 1,400 ಕೋಟಿ ವೆಚ್ಚದಲ್ಲಿ ಟಿಡಿಆರ್‍‌ ನೀಡುವುದು ಸಮರ್ಥನೀಯವೂ ಅಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರು. ಆದರೀಗ  ಈ  ಅಭಿಪ್ರಾಯವನ್ನು  ಸರ್ಕಾರವು ಕಾಲ ಕಸವನ್ನಾಗಿಸಿಕೊಂಡಿದೆ.  ವಿಶೇಷವೆಂದರೇ ಈ ಮೊತ್ತವನ್ನು ಪರಿಷ್ಕರಿಸಿರುವ ಬಿಬಿಎಂಪಿಯು, ಇದೀಗ  3,011.66 ಕೋಟಿ ರು ಗೇರಿಸಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಬೆಂಗಳೂರು ಅರಮನೆ ರಸ್ತೆ ಅಗಲೀಕರಣ, ವಿಸ್ತರಣೆ ಪ್ರಕರಣದಲ್ಲಿ ಟಿಡಿಆರ್‍‌ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಮಾನವನ್ನು ನೀಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್ ಅವರು ನೀಡಿರುವ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ.

 

ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8ರಲ್ಲಿ ಪ್ರಮಾಣನುಪಾತದ ಅನ್ವಯ ಮೂಲ ಬೆಲೆಯನ್ನು ( ರು 11 ಕೋಟಿಗಳು 472 ಎಕರೆ 16 ಗುಂಟೆ ಜಾಗಕ್ಕೆ ) ಹಾಗೂ ಸರ್ವೋಚ್ಛ ನ್ಯಾಯಾಲಯವು (ಐ ಎ ಸಂಖ್ಯೆ; 2 ಮತ್ತು 11ರಲ್ಲಿ) ಆದೇಶಿಸಿತ್ತು. ಇದರ ಪ್ರಕಾರ ಪ್ರಸ್ತುತ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 39 ಗುಂಟೆ ಅಥವಾ ಯಾವುದೇ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಮೂಲ ಬೆಲೆಯ (ರು 11 ಕೋಟಿಗಳು ಮಾತ್ರ 472 ಎಕರೆ 16 ಗುಂಟೆಗಳ ಜಾಗಕ್ಕೆ ) ಪ್ರಮಾಣಾನುಪಾತದಲ್ಲಿಯೇ ಮೌಲ್ಯಮಾಪನ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಭಿಪ್ರಾಯಿಸಿತ್ತು.

 

ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್‌ ಅವರು ಸರ್ಕಾರಕ್ಕೆ ಅಭಿಪ್ರಾಯ ನೀಡಿದ್ದರು.

 

ಅಭಿಪ್ರಾಯದಲ್ಲೇನಿದೆ?

 

ಈ ವಿಷಯವು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇದೆ. ಬೆಂಗಳೂರು ಅರಮನೆ ಜಮೀನಿನ ಮಾಲೀಕತ್ವದ ವಿಚಾರ ವಿವಾದದಲ್ಲಿದೆ. ಈ ಸಮಯದಲ್ಲಿ, ಸುಮಾರು 1,400 ಕೋಟಿ ವೆಚ್ಚದಲ್ಲಿ 15 ಎಕರೆಗೆ ಟಿಡಿಆರ್ ನೀಡುವುದು ಸಮರ್ಥನೀಯವೆಂದು ತೋರುತ್ತಿಲ್ಲ. ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್‌ನ ನಡುವಿನ ರಸ್ತೆಯ ಭಾಗವನ್ನು ಅಗಲಗೊಳಿಸುವುದು, ಟ್ರಾಫಿಕ್ ದಟ್ಟಣೆಯನ್ನು ಬಿಡಿಎ ಜಂಕ್ಷನ್‌ಗೆ ಬದಲಾಯಿಸಿದಂತಾಗುತ್ತದೆ.

 

 

ಬಿಬಿಎಂಪಿ ಆ ಪ್ರದೇಶದಲ್ಲಿ ಸಂಚಾರ ನಿರ್ವಹಣೆಯ ಪರ್ಯಾಯ ವಿಧಾನಗಳನ್ನು ಸಂಪೂರ್ಣ ವೈಜ್ಞಾನಿಕ ಅಧ್ಯಯನದ ಮೂಲಕ  ಖಚಿತಪಡಿಸಿಕೊಳ್ಳಬೇಕು. ಸರ್ಕಾರದಿಂದ ಸ್ವಾಧೀನಪಡಿಸಿಕೊಂಡಿರುವ (ಭೂ ಮಾಲೀಕರಿಂದ ವಿವಾದಕ್ಕೊಳಗಾದ) ಭೂಮಿಗೆ ಇಷ್ಟು ದೊಡ್ಡ ವೆಚ್ಚದಲ್ಲಿ ಟಿಡಿಆರ್ ರೂಪದಲ್ಲಿ ಪರಿಹಾರವನ್ನು ಪಾವತಿಸುವುದು ರಾಜ್ಯದ ಹಿತಾಸಕ್ತಿಗೆ ಅನುಗುಣವಾಗುವುದಿಲ್ಲ.

 

‘ಆದ್ದರಿಂದ ನಗರಾಭಿವೃದ್ಧಿ ಇಲಾಖೆಯು ಅಗಾಧ ವೆಚ್ಚದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದುವರಿಯುವ ಬದಲು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ನಿಭಾಯಿಸುವ ಪರಿಣಾಮಕಾರಿ ಮಾರ್ಗಗಳನ್ನು ಅನ್ವೇಷಿಸಬಹುದು,’ ಎಂದು ಎಲ್‌ ಕೆ ಅತೀಕ್ ಅವರು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರು.

 

 

ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಅವರ ಕಾನೂನು ವಾರಸುದಾರರಿಗೆ ಕರ್ನಾಟಕ ಸ್ಟಾಂಪ್ ಕಾಯ್ದೆಯ ಪ್ರಕಾರ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಒಟ್ಟು ಮೊತ್ತವು ಬರೋಬ್ಬರಿ 3,011.66 ಕೋಟಿ ರು ಆಗಲಿದೆ.

 

ಮೈಸೂರು ರಾಜ ಮನೆತನಕ್ಕೆ 3,011.66 ಕೋಟಿ ರು ಮೊತ್ತದ ಟಿಡಿಆರ್; ಬೊಕ್ಕಸಕ್ಕೆ ಹೊರೆಯಾಗಲಿದೆಯೇ?

 

ಜಯಮಹಲ್‌ ಹಾಗೂ ಬಳ್ಳಾರಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‍‌) ನೀಡಬೇಕು ಎಂದು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವ ಬೆನ್ನಲ್ಲೇ ಬಿಬಿಎಂಪಿಯು ಈ ಲೆಕ್ಕಾಚಾರ ಮಾಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts