ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಇದೀಗ ಬೀದರ್ ನಗರಾಭಿವೃದ್ದಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಬಾಬುವಾಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರದ ಮಟ್ಟದಲ್ಲಿ ಬಿರುಸಿನಿಂದ ಪತ್ರ ವ್ಯವಹಾರಗಳು ಆರಂಭವಾಗಿವೆ.
10 ಲಕ್ಷ ರುಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೇ ಬುಡಾದ ಹಿಂದಿನ ಅಕ್ರಮಗಳ ಕುರಿತಾದ ತನಿಖೆಗೆ ಆರಂಭವಾಗಿರುವ ಪತ್ರ ವ್ಯವಹಾರಗಳು ಮುನ್ನೆಲೆಗೆ ಬಂದಿವೆ.
ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ನೀಡಿರುವ ಬಡಾವಣೆಗಳ ವಿವರ, ಸಾರ್ವಜನಿಕರಿಗೆ ಹಂಚಿಕೆ ಮಾಡಿರುವ ಬಿಡಿ, ಮೂಲೆ, ವಾಣಿಜ್ಯ ಮತ್ತು ಸಿಎ ನಿವೇಶನಗಳ ವಿವರ, ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ವಿವರ ಬಗ್ಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿತ್ತು. ಆದರೆ ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇದುವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ!
ಬಾಬುವಾಲಿ ಅವರು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ಆಗಿದೆ ಎನ್ನಲಾಗಿರುವ ಆರ್ಥಿಕ ನಷ್ಟದ ಕುರಿತು ನ್ಯಾಯಾಲಯದಲ್ಲಿ ಸಿವಿಲ್ ದಾವೆಯನ್ನೂ ಹೂಡಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದೆ ಎಂಬ ಆರೋಪದಲ್ಲಿ ಇವರ ವಿರುದ್ಧ ಐಪಿಸಿ ಕಲಂಗಳ ಅನ್ವಯ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು ಎಂದು 2024ರ ಜೂನ್ 13ರಂದೇ ಸೂಚಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಹಿಂದಿನ ಆಯುಕ್ತರು, ಅಧ್ಯಕ್ಷರುಗಳ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತು ಕಾನೂನು ಇಲಾಖೆ ಅಭಿಪ್ರಾಯವನ್ನು ನಗರಾಭಿವೃದ್ಧಿ ಇಲಾಖೆಯು ಪಡೆದಿತ್ತು.
ಅದರಲ್ಲೂ ಬುಡಾದ ಹಿಂದಿನ ಅಧ್ಯಕ್ಷ ಬಾಬುವಾಲಿ ಅವರ ಅವಧಿಯಲ್ಲಿ ಪ್ರಾಧಿಕಾರಕ್ಕೆ, ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದ್ದಲ್ಲಿ ಇವರ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ವಸೂಲಾತಿ ಮಾಡಬೇಕು. ಮತ್ತು ಕರ್ತವ್ಯ ಲೋಪ ಎಸಗಿರುವುದರಿಂದ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 409 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು 2024ರ ಜೂನ್ 13ರಂದು ಸರ್ಕಾರವು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಕುರಿತು 2024ರ ಜುಲೈ 8ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದೆ. ಬಾಬುವಾಲಿ ಅವರ ವಿರುದ್ಧ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 58 ರಂತೆ ಐಪಿಸಿ ಕಲಂ 409 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಬಹುಮತದಿಂದ ನಿರ್ಣಯ ಕೈಗೊಂಡಿದೆ. ಈ ನಿರ್ಣಯದ ಪ್ರಕಾರ ಬಾಬುವಾಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೀದರ್ ಜಿಲ್ಲಾ ಎಸ್‌ಪಿಗೆ ಮನವಿಯನ್ನೂ ಸಲ್ಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿತ ಅಧಿಕಾರಿ ಅಂದಿನ ಆಯುಕ್ತ ಅಭಯ್‌ಕುಮಾರ್ ಇವರ ವಿರುದ್ಧದ ಆರೋಪಗಳಿಗೆ ದೋಷಾರೋಪಣೆ ಪಟ್ಟಿಗೆ ಲಿಖಿತ ಸಮಜಾಯಿಷಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದನ್ನಾಧರಿಸಿ ನಗರ ಯೋಜನೆಯ ತಾಂತ್ರಿಕ ಕೋಶದ ಜಂಟಿ ನಿರ್ದೇಶಕರು 2024ರ ಆಗಸ್ಟ್ 17ರಂದು ಅಭಿಪ್ರಾಯ ಸಲ್ಲಿಸಿ ಕಡತ ಹಿಂದಿರುಗಿಸಿರುವುದು ತಿಳಿದು ಬಂದಿದೆ.
‘ಪ್ರಸ್ತುತ ಬೀದರ್ ನಗರಾಭಿವೃದ್ದಿ ಪ್ರಾಧಿಕಾರದಿಂದ ಕೋರಿರುವಂತೆ ಹಿಂದಿನ ಅಧ್ಯಕ್ಷರಿಂದ ಪ್ರಾಧಿಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಪ್ರಕರಣದ ಕುರಿತು ಇಲಾಖೆ ವಿಚಾರಣೆಗೆ ವಹಿಸಿ ವಿಚಾರಣೆ ಪೂರ್ಣಗೊಂಡ ನಂತರ ಪ್ರಾಧಿಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟದ ಬಗ್ಗೆ ತಿಳಿಯಬಹುದಾಗಿದೆ,’ ಎಂದು ನಗರಾಭಿವೃದ್ಧಿ ಇಲಾಖೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಪ್ರಕರಣದ ಹಿನ್ನೆಲೆ
ಬೀದರ್ ನಗರದ ಸಿದ್ರಾಮಯ್ಯ ಬಡಾವಣೆಯಲ್ಲಿ 33 ಎಕರೆ 12 ಗುಂಟೆ ವಿಸ್ತೀರ್ಣದ ಜಮೀನಿನ ಪರಿಷ್ಕೃತ ವಿನ್ಯಾಸಕ್ಕೆ ಸರ್ಕಾರದಿಂದ ಅನುಮೋದನ ಪಡೆದಿರಲಿಲ್ಲ. ನಬಾದ್ ಸರ್ವೇ ನಂಬರ್ 8ರ ಅನುಮೋದಿತ ವಿನ್ಯಾಸದ ನಕ್ಷೆಯೂ ಇಲ್ಲ. ಚಿದ್ರಿ ಗ್ರಾಮದ ಸರ್ವೆ ನಂಬರ್ 125ರಲ್ಲಿ ಅಭಿವೃದ್ಧಿಯಾಗಿರುವ ವಸತಿ ಯೋಜನೆ ಪ್ರದೇಶವನ್ನು ಇಟಿಎಸ್ ಸರ್ವೆ ನ ಕೈಗೊಂಡಿತ್ತು. ಈ ಸರ್ವೆಯಲ್ಲಿ ಉದ್ಯಾನ, ಬಯಲು ಜಾಗ ಮತ್ತು ಸಿ ಎ ಪ್ರದೇಶಗಳ ವಿಸ್ತೀರ್ಣವು ನಿಯಮಾನುಸಾರ ಇರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಬಗ್ಗೆ ಪರಿಶೀಲಿಸಿರಲಿಲ್ಲ ಮತ್ತು ಸರ್ಕಾರದಿಂದ ಅನುಮೋದನೆ ಪಡೆದಿರಲಿಲ್ಲ. ವಸತಿ ಉದ್ದೇಶಕ್ಕೆ ಕಾಯ್ದಿರಿಸಿದ ವಿಸ್ತೀರ್ಣದಲ್ಲಿ ಹೆಚ್ಚುವರಿಯಾಗಿ ದೊರೆತ ಪ್ರದೇಶದಲ್ಲಿ ಮಧ್ಯಂತರ ನಿವೇಶನಗಳನ್ನು ನಿಯಮಬಾಹಿರವಾಗಿ ಗುರುತಿಸಲಾಗಿತ್ತು ಎಂಬ ಆಪಾದನೆಯೂ ಕೇಳಿ ಬಂದಿತ್ತು.
ಚಿದ್ರಿ ಗ್ರಾಮದ ಸರ್ವೇ ನಂಬರ್ 125ರ ಪರಿಷ್ಕೃತ ವಿನ್ಯಾಸದ ಕುರಿತು ಸ್ಥಳ ಪರಿಶೀಲನೆ ನಡೆದಿತ್ತು. ನಕ್ಷೆಯಲ್ಲಿನ ರಸ್ತೆಗಳು ಹಾಗೂ ನಿವೇಶನಗಳ ಅಳತೆಗಳಿಗೂ ವ್ಯತ್ಯಾಸ ಇತ್ತು. ಬಿಡಿ ನಿವೇಶನಗಳನ್ನು ಹರಾಜು ಹಾಕುಕವಾಗ ಸರ್ಕಾರದ ಸುತ್ತೋಲೆ ಪ್ರಕಾರ ವರ್ಗವಾರು ಮೀಸಲಾತಿ ಪರಿಗಣಿಸಿರಲಿಲ್ಲ. ಮೂಲೆ ನಿವೇಶನಗಳ ದರಗಳನ್ನು ನಿಗದಿಪಡಿಸುವಾಗ ಆಯಾ ಪ್ರದೇಶದ ನಿವೇಶನಗಳ ದರಗಳ ಶೇ. 10ರಷ್ಟು ಹೆಚ್ಚಿಗೆ ರ ನಿಗದಿಪಡಿಸಿಲ್ಲ. 11 ನಿವೇಶನಗಳಿಗೆ ಸಿಂಗಲ್ ಬಿಡ್ ಆಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.